ಕಾವ್ಯ ಸಂಗಾತಿ
ಜಯಂತಿ ಸುನಿಲ್
ಗಜಲ್


ಮರೆಯಲಾಗುತ್ತಿಲ್ಲಾ ನಿನ್ನೂರಿನ ವಿಳಾಸವನು ದೊರೆಯೆ
ಎಣಿಸಲಾಗುತ್ತಿಲ್ಲಾ ನೀ ಮಾಡಿದ ಗಾಯಗಳನು ದೊರೆಯೆ!!
ಯಾರಿಗೇಳಿದರೆ ತಾನೇ ಕಳೆದೀತು,ಇಳಿದೀತು ಈ ದು:ಖ?
ಹುಡುಕಲಾಗುತ್ತಿಲ್ಲಾ ಅಂತಹವನೊಬ್ಬ ಚಿಕಿತ್ಸಕನನು ದೊರೆಯೆ!!
ಯಾರಿಗೆ ಗೊತ್ತಿತ್ತು,ಪ್ರೇಮದ ನಶೆಯೆಂದುಕೊಂಡೆ
ತಿಳಿಯಲಾಗುತ್ತಿಲ್ಲಾ ನೀ ವಿಷವುಣಿಸಿ ಕೊಲ್ಲುವ ಕಲೆಯನು ದೊರೆಯೆ!!
ನಗುವ ಅಭ್ಯಾಸವಿದ್ದವಳಿಗೆ ಅಳುವಿನ ಅಭ್ಯಂಜನ ಮಾಡಿಸಿದೆ
ಒರೆಸಲಾಗುತ್ತಿಲ್ಲಾ ಕಡಲಂತೆ ಉಕ್ಕುವ ಕಂಬನಿಯನು ದೊರೆಯೆ!!
ಪ್ರೀತಿಗೆ ಇಷ್ಟೊಂದು ಶಕ್ತಿಯೇ? ತಲಾಷೇ ಬೇಕಿಲ್ಲಾ
ನಂಬಲಾಗುತ್ತಿಲ್ಲಾ ಹೀಗೂ ಸಾಯಬಹುದೆಂಬ ಸತ್ಯವನು ದೊರೆಯೆ!!
ಮನಸ್ಸನ್ನು ಮುಟ್ಟಿ ನೋಡಿದರೆ ತಿಳಿಯ ಬಹುದಿತ್ತು
ಉಳಿಸಿಕೊಳ್ಳಲಾಗುತ್ತಿಲ್ಲಾ ನಿನಗೆ ಶಾಶ್ವತ ಪ್ರೀತಿಯನು ದೊರೆಯೆ!!
ಬದುಕು ತೆರೆದಿಡುವ ಪಠ್ಯದೊಳಗೆ ಪ್ರೇಮ ಒಂದು ಭಾಗವೆಂಬುದ ಮರೆತೆ
ಕಲಿಯಲಾಗುತ್ತಿಲ್ಲಾ ಇಷ್ಟಾದರೂ ಜಯಾ, ದ್ರೋಹ ಮಾಡುವುದನು ದೊರೆಯೆ!!
ಜಯಂತಿ ಸುನಿಲ್



