ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮೂರನೇ ಆಯಾಮ

ಮೂರನೇ ಆಯಾಮ

ಅಂಕಣ ಬರಹ ಹಾಡುವ ತೊರೆಗೆ ಹಾದಿ ತೋರುವ ಕವಿತೆಗಳು ಸಂಕಲನ-ತೊರೆ ಹರಿವ ಹಾದಿಕವಿ- ವಿನಯಚಂದ್ರಬೆಲೆ-೧೨೦ಪ್ರಕಾಶನ- ವಿಶಿಷ್ಟ ಪ್ರಕಾಶನ, ಹಾಸನ   ಕವಿತೆಗಳ ಜಾಡು ಎಂತಹದ್ದು? ಅದು ಯಾವ ಹಾದಿ ಹಿಡಿದು ಹೊರಟಿರುತ್ತದೆ? ಕವಿತೆ ಅಂತರ್ಮುಖಿಯಾಗಿರಬೇಕೆ ಅಥವಾ ಬಹಿರ್ಮುಖಿಯಾಗಿರಬೇಕೆ ಎನ್ನುವ ಪ್ರಶ್ನೆ ಸದಾಕಾಲ ವಿಮರ್ಶೆಯನ್ನು ಕಾಡುತ್ತಿರುತ್ತದೆ. ಒಂದು ಕವಿತೆ ಅತ್ಯುತ್ತಮ ಅಥವಾ ಇನ್ನೊಂದು ಕವಿತೆ ಸಾಧಾರಣ ಇಲ್ಲವೆ ಈ ಕವಿತೆ ಕಳಪೆ ಎಂದು ಹೇಳುವ ಮಾನದಂಡವಾದರೂ ಯಾವುದು? ಕವಿತೆಯನ್ನು ಓದಿ ಆಸ್ವಾದಿಸಬೇಕೋ ಅಥವಾ ವಿಮಶೆಯ ನಿಕಶಕ್ಕೆ ಒಡ್ಡಿ ಒಳ್ಳೆಯ ಕವಿತೆಯೋ ಕೆಟ್ಟ ಕವಿತೆಯೋ ಎಂದು ತೀರ್ಪುಕೊಡುವಲ್ಲಿ ನಿರತರಾಗಬೇಕೋ? ಇದಾವುದರ ಹಂಗಿಲ್ಲದೇ ಓದಿ ಆಸ್ವಾದಿಸುವ ಕವನಗಳು ನಮ್ಮ ಮುಂದಿವೆ. ಕವಿ ವಿನಯಚಂದ್ರ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಪುಸ್ತಕ ಬಿಡುಗಡೆಗೆಂದು ಕರೆದಾಗ ನನಗೆ ಹುಟ್ಟಿದ ಪ್ರಶ್ನೆಗಳು ಇವೆಲ್ಲ. ಒಂದಿಷ್ಟು ಸ್ನೇಹಿತರು ಸೇರಿ ಪುಸ್ತಕವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಸಂಭ್ರಮಿಸಿದ್ದೆವು.    ಹಾಗೆ ನೊಡಿದರೆ ವಿನಯಚಂದ್ರ ಕಾವ್ಯಲೋಕಕ್ಕೆ ಹೊಸಬರೇನಲ್ಲ. ಈಗಾಗಲೇ ಒಂದು ಕವನಸಂಕಲನ ಬಿಡುಗಡೆಯಾಗಿದೆ. ಈಗಾಗಲೇ ಅವರ ಮೌನಗೀತ ಎನ್ನುವ ಕವನ ಸಂಕಲನ ಪ್ರಕಟಗೊಂಡಿದೆ. ಸಾಹಿತ್ಯಾಸಕ್ತರಿಗೆ ಹಾಗೂ ಸಹೃದಯರಿಗೆ ಫೇಸ್‌ಬುಕ್ ಮುಂತಾದ ಕಡೆಗಳಲ್ಲಿ ತಮ್ಮ ಕವನವನ್ನು ಉಣಬಡಿಸಿದ್ದಾರೆ.  ಇವರ ಎರಡನೆ ಸಂಕಲನ ತೊರೆ ಹರಿವ ಹಾದಿ ಈಗ ನಿಮ್ಮ ಮುಂದಿದೆ. ಇಲ್ಲಿ ಉಳಿಸಿದರಲ್ಲವೇಅಲ್ಲಿ ಸಮನಾಗುವುದು? ಎನ್ನುತ್ತ ಉಳಿಕೆ ಗಳಿಕೆ ಹಾಗು ಲಯದ ಕುರಿತು ನಮ್ಮ ಗಮನ ಸೆಳೆಯುವ ಕವನದ ಇವೆರಡೇ ಸಾಲುಗಳನ್ನಿಟ್ಟು ಓದಿನೋಡಿ. ಅದೆಷ್ಟೆಲ್ಲ ಅರ್ಥ ಹೊಮ್ಮಿಸುತ್ತದೆ. ಎಲ್ಲಿ ಉಳಿಸಬೇಕು ಮತ್ತು ಎಲ್ಲಿ ಸಮನಾಗಿಸಬೇಕು ಎನ್ನುವುದನ್ನು ಜೀವನದಲ್ಲಿ ಕಲಿಯಬೇಕಾದುದು ಬಹು ಮುಖ್ಯ. ಉಳಿಸಬೇಕಾದಲ್ಲಿ ಉಳಿಸಿ, ಖರ್ಚು ಮಾಡುವಲ್ಲಿ ಮಾಡಿದರೆ ಮಾತ್ರ ಜೀವನಕ್ಕೆ ಬೆಲೆ. ಜೀವನದಲ್ಲಿ ಕೊಡಬೇಕಾದ ಪರೀತಿಯನ್ನು ಧಾರಾಳವಾಗಿ ಕೊಟ್ಟುಬಿಡಬೇಕು. ಪ್ರೀತಿಯನ್ನು ಉಳಿಸಿಕೊಂಡರೆ ಅದು ಎಲ್ಲಿಯೂ ಸಮನಾಗುವುದಿಲ್ಲ. ತಂದೆ ತಾಯಿಗೆ ಕೊಡಬೇಕಾದ ಪ್ರೀತಿ, ಸಹೋದರ ಸಹೋದರಿಯರಿಗೆ ನೀಡಬೇಕಾದ ವಾತ್ಸಲ್ಯ, ಸ್ನೇಹಿತರಿಗೆ ಕೊಡುವ ಆತ್ಮೀಯತೆ ಹಾಗೂ ಪ್ರೇಮಿಗೆ ಮತ್ತು ಜೀವನ ಸಂಗಾತಿಗೆ ನೀಡಬೇಕಾದ ಪ್ರೇಮ, ಮಕ್ಕಳಿಗೆ ನೀಡುವ ಮಮತೆ ಎಲ್ಲವೂ ಬೇರೆ ಬೇರೆಯದ್ದೇ. ಆದರೆ ನಾವು ಅದನ್ನೆಲ್ಲ ಒಂದಾಗಿಸಿ ನಮ್ಮೊಳಗೇ ಒಂದು ಗೊಂದಲವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಯಾರಿಗೆ ಯಾವುದನ್ನು ಕೊಡಬೇಕು ಎಂಬ ವಿಭ್ರಾಂತಿಯಲ್ಲಿ ಯಾರಿಗೂ ಸರಿಯಾಗಿ ನೀಡದೇ ಉಳಿಸುವ ಪ್ರಯತ್ನ ಮಾಡುತ್ತಲೇ ಎಲ್ಲ ಕಡೆಯೂ ಸೋಲುತ್ತೇವೆ. ಹಾಗಾದರೆ ಕೊಡುವುದೆಲ್ಲಿ ಸಮನಾಗುವುದೆಲ್ಲಿ? ಕೊಡುವ ಮತ್ತು ಸಮನಾಗುವ ನಮ್ಮ ಪ್ರಯತ್ನ ಹಣಕಾಸಿನ ವ್ಯವಹಾರದಲ್ಲಿ ತುಂಬ ಚೆನ್ನಾಗಿ ನಿರೂಪಿತವಾಗುತ್ತದೆ. ಎಲ್ಲೆಲ್ಲೋ ಬೇಕಾಬಿಟ್ಟಿ ಖರ್ಚು ಮಾಡುವ ಬದಲು ಅನಾವಶ್ಯಕ ಎನ್ನಿಸಿದಲ್ಲಿ ಉಳಿಸಿಕೊಂಡು ಖರ್ಚು ಮಾಡಲೇ ಬೇಕಾದಲ್ಲಿ ಧಾರಾಳವಾಗಬೇಕು. ಆದರೆ ಕವಿ ಸಂತೆಯ ದಿನ ಮುಂಜಾನೆಗೆದ್ದುಮುಂಡಾಸು ಬಿಗಿದ ರೈತನಿಗೆ ರೇಗುತ್ತೇನೆದರ ಹೆಚ್ಚಿತೆಂದು ಮುನಿಯುತ್ತೇನೆಚೌಕಾಸಿಗಿಳಿದು ಚಿಲ್ಲರೆಯ ಜೇಬಿಗಿಳಿಸುತ್ತೇನೆ ಎಂಬ ಸಾಲಿನ ಮುಂದೆ ಈ ಮೊದಲೆ ಹೇಳಿದ ಎರಡು ಸಾಲುಗಳನ್ನು ಸೇರಿಸುತ್ತಾರೆ. ಅಂದರೆ ಅದಕ್ಕೂ ಹಿಂದೆ ಅದೆಲ್ಲೋ ಸೌತೆಕಾಯಿಗೆ ಉಪ್ಪು ಹಾಕಿಕೊಟ್ಟಿದ್ದಕ್ಕೆ ಕೇಳಿದ್ದಷ್ಟು ಬೆಲೆ ತೆರುವ, ಸುಮ್ಮನೆ ಡೊಗ್ಗು ಸಲಾಮು ಹೊಡೆಯುವವನಿಗೆ ಗರಿಗರಿ ನೋಟುಗಳನ್ನು ನೀಡಿ ಹೀಗೆ ಬಡ ರೈತನ ಎದುರು ಚಿಲ್ಲರೆಗಾಗಿ ಚೌಕಾಶಿ ಮಾಡಿ ನಮ್ಮ ಸಾಮರ್ಥ್ಯವನ್ನು ತೋರಿಸಿ, ಹಣ ಉಳಿಸಿಕೊಂಡ ಆತ್ಮತೃಪ್ತಿಯಲ್ಲಿ ಮೆರೆಯುತ್ತೇವೆ. ಯಾಕೆಂದರೆ ನಮ್ಮ ರೋಷಾವೇಶಗಳನ್ನು ತೋರಿಸಬಹುದಾದದ್ದು ಕೇವಲ ಬಡ ರೈತನ ಎದುರಿಗೆ ಮಾತ್ರ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಬಾಗಿಲು ಕಾಯುವವನೂ ನಮ್ಮ ಕೋಪಕ್ಕೆ ಹೆದರಲಾರ. ಆದರೆ ನಾವು ಅವನಿಗೆ ಟಿಪ್ಸ್ ಕೊಟ್ಟು ಅವನನ್ನು ಸಂತೃಪ್ತಿಗೊಳಿಸುತ್ತೇವೆಯೇ ಹೊರತೂ ಅವನ ಬಳಿ ಚೌಕಾಶಿ ಮಾಡುವುದಿಲ್ಲ ಎಂಬ ನೋವು ಕವಿಗಿದೆ. ಅದು ಈ ಕವಿತೆಯಲ್ಲಿ ತುಂಬ ಸುಂದರವಾಗಿ ಬಿಂಬಿತವಾಗಿದೆ. ಬಿಟ್ಟರೆ  ಗೊಮ್ಮಟನನ್ನೂ ಕುಟ್ಟಿಜಲ್ಲಿ ಮಾಡಿ ಲೋಡು ಮಾಡಲುಕಾದಿದ್ದಾರೆ ಜನಮರಳು ಮರಳಾಗಳೂ ಕಾಯದೆಮಣ್ಣ ಸೋಸಿಯೇ ಒಡೆಯುತ್ತಿದ್ದಾರೆಗಾಂಧಾರಿ ಪಿಂಡ ಎಂತಹ ಮಾರ್ಮಿಕ ಸಾಲುಗಳು ಇವು. ನಮ್ಮ ಜನ ನಿಸರ್ಗದ ಯಾವುದನ್ನು ಇದ್ದಂತೆಯೇ ಇರಲು ಬಿಟ್ಟಿದ್ದೇವೆ ಹೇಳಿ? ಅದಂದೆಂದೋ ಬೆಟ್ಟವಾಗಿದ್ದ ಕಲ್ಲನ್ನು ಒಡೆದು ಕೆತ್ತಿ ಗೊಮ್ಮಟನನ್ನಾಗಿ ಮಾಡಿದರು. ಈಗ ನಮಗೆ ಅವಕಾಶ ಸಿಕ್ಕರೆ ಆ ಗೊಮ್ಮಟನನ್ನೂ ಒಡೆದು ಜಲ್ಲಿ ಮಾಡಿ ಮನೆ ಕಟ್ಟಲೋ, ರಸ್ತೆಗೋ ಹಾಕಿ ದಮಾಸು ಹಾಕಿ ನುಣುಪು ಮಾಡಿಬಿಡುತ್ತೇವೆ. ಯಾಕೆಂದರೆ ಮರಳಿನ ಹೆಸರಲ್ಲಿ ನದಿಯ ಒಡಲನ್ನು ಬಗೆದು ಬರಿದಾಗಿಸಿ ನದಿಯ ಪಾತ್ರವೇ ಬದಲಾಗುವಂತೆ ಮಾಡುವುದರಲ್ಲಿ ನಾವು ನಿಸ್ಸಿಮರು. ಇನ್ನು ಕಡಲ ತೀರದಲ್ಲಂತೂ ಸಮುದ್ರ ದಮಡೆಯ ಮರಳನ್ನೂ ಬಗೆದು ಹೊತ್ತೊಯ್ಯುತ್ತಿದ್ದೇವೆ. ಕೆಲವೊಮ್ಮೆ ಮರಳು ಎನ್ನುವ ಹೆಸರಿನಲ್ಲಿ ಮಣ್ಣನ್ನೂ ಹೊತ್ತೊಯ್ದು ಮಾರಾಟ ಮಾಡಿ ಹಣಗಳಿಸುತ್ತಿದ್ದೇವೆ. ಚಿನ್ನದ ಮೊಟ್ಟೆಯಿಡುವ ಕೋಳಿಯ ಗರ್ಭವನ್ನು ಉದರದಿಮದ ಹೊರತೆಗೆದು ಹೊರಗೇ ಕಟ್ಟಿ, ಹುಂಜದ ವೀರ್‍ಯ ತಾಗಿ ಮೊಟ್ಟೆಯಾದ ತಕ್ಷಣ ಕಿತ್ತುಕೊಳ್ಳುವ ಮನುಷ್ಯ ಸಮಾಜದ ನೀಚ ಹುನ್ನಾರಗಳ ಕುರಿತಾಗಿ ಕವಿಯಲ್ಲಿ ಬೇಸರವಿದೆ. ಅದಕ್ಕೂ ಹೆಚ್ಚಾಗಿ ಇಲ್ಲಿ ಕವಿ ತನ್ನನ್ನು ತಾನು ವ್ಯಂಗ್ಯವಾಡಿಕೊಳ್ಳುವುದನ್ನು ಇಲ್ಲಿ ಕಾನುತ್ತೇವೆ. ತನಗೂ ಎರಡು ಮಕ್ಕಳಿವೆ, ನಾನೂ ಇಷ್ಟೆಲ್ಲ ಮಂತ್ರ ಹೇಳಿ ಕಾರಿನಲ್ಲೇ ಓಡಾಡುತ್ತೇನೆ ಎಂಬ ಅಪರಾಧಿಭಾವವನ್ನು ತೋರಿಸುತ್ತಾರೆ.    ವಿನಯಚಂದ್ರರ ಕವಿತೆಗಳು ಇಷ್ಟವಾಗುವುದೇ ಅಲ್ಲಿರುವ ಸಾಮಾಜಿಕ ಪ್ರಜ್ಞೆಯಿಂದಾಗಿ. ಭವಿಷ್ಯ ಎನ್ನುವ ಕವಿತೆಯಲ್ಲಿ ಅವರು ಅಂತಹ ಸಾಮಾಜಿಕ ಕಳಕಳಿಯಿಂದಲೇ ನಮ್ಮನ್ನು ಅಲ್ಲಾಡಿಸಿಬಿಡುತ್ತಾರೆ. ಇರಾಕಿನಲ್ಲಿ ಗೋಲಿಯಾಡಬೇಕಾಗಿದ್ದ, ಚಿನ್ನಿ ದಾಂಡು ಆಡಬೇಕಾಗಿದ್ದ ಮಕ್ಕಳ ಕೈಯ್ಯಲ್ಲಿ ಬಂದೂಕುಗಳನ್ನು ನೀಡಿ, ಚಿಕ್ಕವರಿರುವಾಗ ನಮ್ಮ ಕುತ್ತಿಗೆಯಲ್ಲಿ ರಕ್ಷಾ ಕವಚದಂತೆ ಇರುತ್ತಿದ್ದ ತಾಯಿತದ ಜಾಗದಲ್ಲಿ ಸೈನೈಡ್ ಕಟ್ಟಿ ಆಟದ ಮೈದಾನದಲ್ಲಿ ಬಾಂಬುಗಳೊಂದಿಗೆ ಆಟವಾಡುವುದನ್ನು ಕಂಡಾಗ ಮಕ್ಕಳ ಬಾಲ್ಯವನ್ನು ಕಿತ್ತುಕೊಂಡವರ ಕುರಿತು ಆಕ್ರೋಶ ಉಕ್ಕುತ್ತದೆ. ಸೋಮಾಲಿಯಾದಲ್ಲಿ ಮೂಳೆ ಚಕ್ಕಳವಾಗಿದ್ದ ಮಕ್ಕಳ ಅಸ್ತಿಪಂಜರದಂತಹ ದೇಹ, ಹಾಲು ಕೊಡಬೇಕಾಗಿದ್ದ ಅಮ್ಮನ ಮೊಲೆಯಲ್ಲಿ ಜಿನುಗುವ ರಕ್ತ ನಮ್ಮನ್ನು ಅಧೀರಗೊಳಿಸುತ್ತದೆ. ಚೀನಾದಲ್ಲಂತೂ ಬ್ರೂಣ ಹತ್ಯೆ ಸಾಮಾನ್ಯ. ಹುಟ್ಟಲಾರದ ಮಕ್ಕಳು ಶೌಚಾಲಯದ ಗುಂಡಿಗಳಲ್ಲಿ ನರಳಿದರೆ, ಹುಟ್ಟಿದ ಮಕ್ಕಳು ಸಾಧಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿ, ಸರಕಾರದ ಅಣತಿಯಂತೆ ಬಾಲ್ಯ ಕಳೆದುಕೊಳ್ಳುವುದನ್ನು ಕಂಡರೆ ಆಧುನಿಕ ಸಮಾಜದ ಕುರಿತಾಗಿಯೇ ಅಸಹ್ಯ ಹುಟ್ಟುತ್ತದೆ. ಚಂದ್ರ ಲೋಕಕ್ಕೆ, ಮಂಗಳ ಗ್ರಹಕ್ಕೆ ಹೋಗುವ ಆತುರದಲ್ಲಿ ನಾವು ನಮ್ಮ ಭೂಮಿಯನ್ನು ಹಾಳುಗೆಡವುದನ್ನು ಕಂಡು ಕವಿ ಮಮ್ಮಲ ಮರಗುವುದು ಈ ಕವಿತೆಯಲ್ಲಿ ಕಾಣುತ್ತದೆ.            ಅಸಹಾಯಕ ಕವಿತೆಯಲ್ಲಿ ದೇಶದ ತುಂಬ ನಡೆಯುತ್ತಿರುವ ಜಲಪ್ರವಾಹವನ್ನು ಉಲ್ಲೇಖಿಸುತ್ತಾರೆ. ಕೇರಳದಲ್ಲಿ, ಕೊಡಗಿನಲ್ಲಿ, ಶಿರಾಡಿಯಲ್ಲಿ, ಎಡಕುಮರಿಯಲ್ಲಿ ಹೀಗೆ ಸುತ್ತಮುತ್ತ ಎತ್ತ ನೋಡಿದರೂ ಜಲಪ್ರವಾಹ. ಗುಡ್ಡಗುಡ್ಡಗಳೇ ಕುಸಿದು, ನೀರು ಎಲ್ಲೆಡೆಯಿಂದ ಜನವಸತಿ ಪ್ರದೇಶದ ಮೇಲೆ ಜಾರಿ, ಮನೆಗಳೆಲ್ಲ ಕೊಚ್ಚಿಕೊಂಡು ಹೋಗುವಾಗ ಎಲ್ಲರ ಮನದಲ್ಲೂ ಅದೆಷ್ಟು ನೋವು, ಅದೆಷ್ಟು ವಿಷಾದ. ಆಗೆಲ್ಲ ಉಣ್ಣಲು, ತಿನ್ನಲು ಇಲ್ಲದವರಿಗೆ ಸಹಾಯ ಮಾಡುತ್ತೇನೆಂದು ಹೊರಟವರು ಅದೆಷ್ಟೋ ಮಂದಿ. ಕೆಲವರಂದು ಸಹಾಯ ಮಾಡುವ ನೆಪದಲ್ಲಿ ಆಹಾರ, ವಸ್ತ್ರ, ಹಣವನ್ನು ನೆಪ ಮಾತ್ರಕ್ಕೆ ನಿರಾಶ್ರಿತರಿಗೆ ನೀಡಿ, ಉಳಿದ್ದ್ದ್ನ್ನು ತಾವೇ ಹಂಚಿಕೊಂಡವರೂ ಇದ್ದರು. ಆದರೂ ಹೀಗೆ ಜನಜಾನುವಾರುಗಳ ಅಸಹಾಯಕತೆಗೆ ಹೆಚ್ಚಿನವರು ಮಾಡಿದ್ದೇನು? ಒಂದು ವಿಷಾದದ ಇಮೋಜಿ ಒತ್ತಿ, ಬೇಸರವಾಯಿತೆಂಬಂತೆ ಮೆಸೇಜು ಕುಟ್ಟಿ, ಹಣ ಕೊಡಲೇ, ಸಹಾಯಕ್ಕೆ ಹೊರಟು ಬಿಡಲೇ ಎಂದು ಯೋಚಿಸುತ್ತ ಕೊನೆಗೆ ಏನೂ ಮಾಡಲಾಗದೇ ಸುಮ್ಮನಿದ್ದವರೇ ಹೆಚ್ಚು, ಇದನ್ನು ಕವಿ ಅಜ್ಜಿಯ ಸಾವಿನೊಂದಿಗೆ ಹೋಲಿಸಿಕೊಳ್ಳುತ್ತಾರೆ. ಅಜ್ಜಿ ಸತ್ತ ಸುದ್ದಿ ಕೇಳಿ ಬೋರಾಡಿ ಅತ್ತು, ಏನೂ ಮಾಡಲಾಗದ ಅಸಹಾಯಕತೆಗೆ ಚೀರಿ, ಕಣ್ಣೀರಾಗಿ ಅಳುವಿಗೆ ನೆರೆಹೊರೆಯವರ ಸಾಂತ್ವಾನ ಕೇಳಿ, ನಂತರ ಕೆಲವೇ ದಿನಗಳಲ್ಲಿ ಅಜ್ಜಿ ಇದ್ದಳೆಂಬುದನ್ನೇ  ಮರೆತಿದ್ದೆ ಎನ್ನುತ್ತಾರೆ. ನಮ್ಮೆಲ್ಲರ ಬದುಕೂ ಇಷ್ಟೇ. ಘಟನೆ ನಡೆದಾಗ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ದೊಡ್ಡ ದೊಡ್ಡ ಮಾತುಗಳನ್ನಾಡುತ್ತೇವೆ. ಆದರೆ ಏನೂ ಮಾಡಲಾಗದೆ ಆ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವುದನ್ನು ರೂಢಿಸಿಕೊಳ್ಳುತ್ತೇವೆ. ಹಿಂದಿನ ಎಲ್ಲ ನೋವುಗಳನ್ನು ಮರೆತು ಮತ್ತೆ ಸಲೀಸಾದ ಬದುಕಿನಲ್ಲಿ ಕರಗಿ ಹೋಗುತ್ತೇವೆ. ಜೀವವಿದಕೊಳ್ಳಿ ಎನ್ನುವ ಕವಿತೆಯು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುತ್ತದೆ.  ಖಂಡವಿದಕೋ, ಮಾಂಸವಿದಕೋ, ಗುಂಡಿಗೆಯ ಬಿಸಿ ರಕ್ತವಿದಕೋ ಎನ್ನುವ ಪುಣ್ಯಕೋಟಿಯ ಕಥೆಯನ್ನು ನೆನಪಿಸುವ ಶೀರ್ಷಿಕೆಯ ಈ ಕವನ ಸಾವನ್ನು ಕೊಟ್ಟು ಜೀವವನ್ನು ತೆಗೆದು ಕೊಳ್ಳಿ ಎನ್ನುವ ಮಾತನ್ನು ಮಾರ್ಮಿಕವಾಗಿ ಹೇಳುತ್ತದೆ. ಗಿಡಕ್ಕೆ ಹೂವು ಮೊಗ್ಗು ಭಾರವಾದರೆ ಆ ಜೀವ ಇದ್ದೇನು ಪ್ರಯೋಜನ? ಮಾನವೀಯತೆಯನು ಮರೆತು ಅಧಿಕಾರ ದಾಹಿಯಾಗುವ ಬದಲು ಪ್ರಾಣ ಹೋದರೆ ತಪ್ಪೇನಲ್ಲ ಎನ್ನುತ್ತಾರೆ ಕವಿ. ಕವಿತೆಯು ಪ್ರಸ್ತುತ ಪಡಿಸುವ ರೀತಿಯಿಂದಲೂ, ಅದರ ಆಶಯದಿಂದಲೂ ಗೆಲ್ಲುತ್ತದೆ. ನಮ್ಮೆಲ್ಲರ ಬದುಕು ಅದೆಷ್ಟು ಅರ್ಥಹೀನ. ನಾವೇನು ಮಾಡಬೇಕೆಂದುಕೊಂಡಿದ್ದವೋ ಅದನ್ನು ಮಾಡಲಾಗುವುದಿಲ್ಲ. ಏನನ್ನು ಸಾಧಿಸಬೇಕು ಎಂದುಕೊಂಡಿದ್ದೆವೋ ಅದನ್ನು ಸಾಧಿಸಲು ನಮ್ಮ ಸುತ್ತಲಿನ ಸಮಾಜ ಬಿಡುವುದಿಲ್ಲ. ಪ್ರಖ್ಯಾತ ಹಾಡುಗಾರನಾಗಬೇಕು, ಅದ್ಭುತ ನೃತ್ಯಪಟುವಾಗಬೇಕು, ಸೋಲಿರದ ಆಟಗಾರನಾಗಬೇಕು ಎಂದೆಲ್ಲ ಆಸೆ ಇಟ್ಟುಕೊಂಡ ಮಕ್ಕಳಿಗೆ ಅದನ್ನು ಮಾಡಲು ಪ್ರೋತ್ಸಾಹಿಸದೇ, ‘ಹೊಟ್ಟೇಗೇನು ಮಾಡ್ತಿ’ ಎಂದು ಕೇಳುತ್ತೇವೆ. ಹೊಟ್ಟೆಗೆ ಸಂಪಾದಿಸಿಕೊಳ್ಳಬೇಕಾದ ಆತುರದಲ್ಲಿ ಮಗು ತನ್ನ ಇಷ್ಟದ ಎಲ್ಲವನ್ನೂ ಮರೆಯುತ್ತದೆ. ಬದುಕು ಎಂದರೆ ಹೊಟ್ಟೆ ಬಟ್ಟೆ ಹಾಗೂ ಹಣ ಮಾತ್ರ ಎಂದು ಅರ್ಥ ಮಾಡಿಕೊಳ್ಳುತ್ತದೆ. ಆದರೆ ಹೊಟ್ಟೆ ತುಂಬಾ ಉಂಡು, ಕೈ ತುಂಬ ಹಣ ಸಂಪಾದಿಸಿ, ಐಶಾರಾಮಿ ಮನೆಯಲ್ಲಿ, ನಮ್ಮದೇ ಅದ್ಭುತವಾದ ವಾಹನದಲ್ಲಿ ಓಡಾಡುತ್ತೇವೆ. ಆದರೆ ಇವೆಲ್ಲವೂ ಬದುಕಿಗೆ ಸಂತಸ ಕೊಡಬಲ್ಲದೇ? ಅಪ್ಪನ ಮಾತಿನಂತೇ ನಡೆದೆಹೊಟ್ಟೆಗೇನೋ ಒಂದು ಮಾಡಿಕೊಂಡಿದ್ದೇನೆಬದುಕು ಮಾತ್ರ ನಿಸ್ಸಾರ, ಶೂನ್ಯಪ್ರಶ್ನೆ ಎತ್ತೋಣವೆಂದರೆಉತ್ತರಿಸಲು ಈಗ ಅಪ್ಪನಿಲ್ಲ ಎಲ್ಲವೂ ಇದ್ದು ನಿಸ್ಸಾರ ಬದುಕನ್ನು ಸಾಗಿಸುವಾಗ ನಮ್ಮನ್ನು ನಾವು ಸಾಧಿಸುವ ಖುಷಿಯಿಂದ ಹಿಮ್ಮೆಟಿಸಿದವರನ್ನು  ಕೇಳೋಣವೆಂದರೆ ಅವರು ನಮ್ಮೆದುರಿಗೆ ಇರುವುದಿಲ್ಲ. ಇಲ್ಲಿ ಹೊಟ್ಟೆಗೇನು ಮಾಡುತ್ತಿ ಎಂದು ಕೇಳುವ ಕವಿಯ ಅಪ್ಪ ಒಂದು ಹೆಸರು ಮಾತ್ರ. ನಾವೆಲ್ಲರೂ ಮಾಡುತ್ತಿರುವುದು ಅದೇ ಕೆಲಸ. ನಮ್ಮ ಬಾಲ್ಯದಲ್ಲಿ ನಮ್ಮ ಇಷ್ಟವನ್ನು ಕಿತ್ತುಕೊಂಡ ಅಪ್ಪ- ಅಮ್ಮ, ಹಿತೈಷಿಗಳು ಎನ್ನಿಸಿಕೊಂಡ ಸಂಬಂಧಿಕರು ಮಾಡಿದ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆ. ಆಟ ಇಷ್ಟ ಎನ್ನುವ, ಚಿತ್ರ ಬಿಡಿಸುವುದರಲ್ಲಿ ಪ್ರಪಂಚವನ್ನೇ ಮರೆಯುವ, ಹಾಡುತ್ತ ಹಾಡುತ್ತ ಅದ್ಭುತ ಗಂಧರ್ವ ಲೋಕವನ್ನೇ ಸೃಷ್ಟಿಸುವ ಹತ್ತಾರು ಪ್ರತಿಭೆಗಳನ್ನು ಒಡಲಲ್ಲಿ ಇಟ್ಟುಕೊಂಡ ನಮ್ಮ ಮಕ್ಕಳಿಗೆ ಅವರಿಷ್ಟದ್ದನ್ನು ಮಾಡಲು ಬಿಡುತ್ತಿದ್ದೇವೆಯೇ? ‘ಮೊದಲು ಓದು, ಒಂದು ನೌಕರಿ ಹಿಡಿ. ನಂತರ ಬೇಕಾದ್ದು ಮಾಡಿಕೊ’ ಎಂದು ಉಪದೇಶ ಕೊಡುತ್ತಿದ್ದೇವೆ. ಇದು ಜನರೇಶನ್ ಗ್ಯಾಪ್ ಅಲ್ಲ. ಬದುಕು ಎಂದರೇನು ಎನ್ನುವುದು ಅರ್ಥವಾದ ಕಾರಣಕ್ಕೆ ಹೀಗೆ ಮಾಡುತ್ತೇವೆಯೇ? ಅಥವಾ ಬೆಳೆದಂತೆಲ್ಲ ನಮಗೆ ಹಣ ಹಾಗೂ ಒಂದು ಕಂಫರ್ಟ ಲೈಫ್ ಮಾತ್ರ ಸರಿಯಾದದ್ದು ಎನ್ನಿಸಲು ಪ್ರಾರಂಭವಾಗುತ್ತದೆಯೇ? ಅಥವಾ ಹಾಗೆ ಜೀವನವನ್ನು ಒಂದು ಹಂತಕ್ಕೆ ತಂದುಕೊಳ್ಳದೇ ಕೊನೆಗೆ ಅಸಹಾಯಕರಾಗಿ, ತಮ್ಮೆಲ್ಲ ಸಂಬಂಧಿಗಳಿಗೆ, ಆಪ್ತರಿಗೆ, ಮಿತ್ರರಿಗೆ ಹೊರೆಯಾಗಿ ನಿಂತವರನ್ನು ಕಂಡು ಇಂತಹ ಭಾವ ಮೂಡುತ್ತದೆಯೇ? ಯಾವುದು ಸರಿ? ಮಕ್ಕಳ ಇಷ್ಟದಂತೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಬಿಡುವುದೇ ಅಥವಾ ಅವರ ಓದು ಬರೆಹಕ್ಕೆ ಆದ್ಯತೆ ನೀಡಿ, ಅವರಿಗೊಂದು ಉದ್ಯೋಗ ದೊರೆತು, ಅವರ ಬದುಕು ಒಂದು ಹಂತಕ್ಕೆ ತಲುಪುವುದೇ? ಕವಿ ಕೊನೆಯಲ್ಲಿ ಇಂತಹುದ್ದೊಂದು ಪ್ರಶ್ನೆಯನ್ನು ಹಾಗೇ ಓದುಗರಿಗೆ ಬಿಟ್ಟುಬಿಟ್ಟಿದ್ದಾರೆ.             ವಿನಯಚಂದ್ರರಿಗೆ ಆಂಗ್ಲ ಸಾಹಿತ್ಯದ ಅಪಾರವಾದ ಓದು ಬೆನ್ನಿಗಿದೆ. ಶ್ರೇಷ್ಠ ಆಂಗ್ಲ ಸಾಹಿತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಆಂಗ್ಲ ಸಾಹಿತ್ಯದ ವಿದ್ಯಾರ್ಥಿಗಳಿಗೆ

ಮೂರನೇ ಆಯಾಮ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಅಂಕಣ ಬರಹ ಹಲವು ಬಣ್ಣಗಳನ್ನು ಹೊತ್ತ ಭಾವನೆಗಳ ಕೋಲಾಜ್ ಆಕಾಶಕ್ಕೆ ಹಲವು ಬಣ್ಣಗಳು (ಗಜಲ್ ಸಂಕಲನ)ಕವಿ- ಸಿದ್ಧರಾಮ ಹೊನ್ಕಲ್ಬೆಲೆ-೧೩೦/-ಪ್ರಕಾಶನ- ಸಿದ್ಧಾರ್ಥ ಎಂಟರ್‍ಪ್ರೈಸಸ್              ಇಲ್ಲಿ ಕತ್ತಲೆ ಕಳೆದು ಬೆಳಕು ಮೂಡಿಸಿದವರೆ ಸಂತ ಸೂಫಿಗಳು ಬಸವಾದಿ ಶರಣರು ಸಾಕಿ ಎನ್ನುತ್ತ ತಮ್ಮ ನೆಲದ ಗಟ್ಟಿ ದನಿಗಳನ್ನು ಉಲ್ಲೇಖಿಸಿ ಗಜಲ್‌ಲೋಕಕ್ಕೆ ಬಂದಿರುವ ಕವಿ ಸಿದ್ಧರಾಮ ಹೊನ್ಕಲ್ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಾ ಹಳಬರು. ಕಥೆ, ಕವನ, ಪ್ರವಾಸ ಕಥನ, ಪ್ರಬಂಧಗಳು ಹೀಗೆ ಹತ್ತಾರು ಪ್ರಕಾರಗಳಲ್ಲಿ ಕೈಯಾಡಿಸಿರುವ ಸಿದ್ಧರಾಮ ಹೊನ್ಕಲ್ ತಮ್ಮದೇ ನೆಲದ ಗಜಲ್‌ನ್ನು ಆತುಕೊಳ್ಳಲು ಇಷ್ಟು ತಡಮಾಡಿದ್ದೇಕೆ ಎಂದು ನಾನು ಬಹಳ ಸಲ ಯೋಚಿಸಿದ್ದೇನೆ. ಉತ್ತರ ಕರ್ನಾಟಕದ ಮಣ್ಣಿನಲ್ಲೇ ಹಾಸಿಕೊಂಡಿರುವ ಗಜಲ್‌ಗೆ  ಒಲಿಯದವರೇ ಇಲ್ಲ. ಗಜಲ್‌ನ ಶಕ್ತಿಯೇ ಅಂತಹುದ್ದು. ಗಜಲ್‌ನ ಜೀವನ ಪ್ರೀತಿಯೇ ಹಾಗೆ. ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವ ಸಮಷ್ಠಿ ಅದು. ಜಿಂಕೆಯ ಆರ್ತನಾದದ, ಮನದ ಮಾತುಗಳನ್ನು ನವಿರಾಗಿ ಹೇಳುವ, ಗೇಯತೆಯೊಂದಿಗೆ ಸಕಲರನ್ನು ಸೆಳೆದಿಟ್ಟುಕೊಳ್ಳುವ ಗಜಲ್ ಎನ್ನುವ ಮೋಹಪಾಶ ಹಾಗೆ ಯಾರನ್ನೂ ಬಿಡುವುದಿಲ್ಲ. ಇಲ್ಲಿ ಸಿದ್ಧರಾಮ ಹೊನ್ಕಲ್ ಆಕಾಶದ ಹಲವು ಬಣ್ಣಗಳನ್ನು ತಮ್ಮ ಪುಸ್ತಕದಲ್ಲಿ ಹಿಡಿದಿಟ್ಟುಕೊಂಡು ನಮ್ಮೆದುರಿಗೆ ನಿಂತಿದ್ದಾರೆ. ಒಂದು ಹಂತಕೆ ಬರುವವರೆಗೆ ಯಾರೂ ಗುರ್ತಿಸುವುದಿಲ್ಲಹಾಗಾಗಿ ಯಾರ ಮೆಚ್ಚುಗೆಗಾಗಿ ಕಾಯಬೇಡಎಂದು ತಮಗೆ ತಾವೇ ಹೇಳಿಕೊಂಡಂತೆ ಗಜಲ್ ಲೋಕದಲ್ಲಿ ಗುರುತಿಸಿಕೊಳ್ಳುವುದು ಅಷ್ಟೇನು ಸುಲಭದ್ದಾಗಿರಲಿಲ್ಲ ಎನ್ನುವ ವೈಯಕ್ತಿಕ ಮಾತಿನ ಜೊತೆಗೇ ಸಾಮಾಜಿಕ ಸತ್ಯವೊಂದನ್ನು ನಾಜೂಕಾಗಿ ಹೇಳಿಬಿಡುತ್ತಾರೆ. ಯಾವುದೇ ಒಂದು ಕ್ಷೇತ್ರವಿರಲಿ ಆರಂಭದಲ್ಲಿ ಯಾರು ಗುರುತಿಸುತ್ತಾರೆ ಹೇಳಿ? ಅದು ಸಾಹಿತ್ಯ ಕ್ಷೇತ್ರವಿರಬಹುದು, ಕ್ರೀಡೆಯಾಗಿರಬಹುದು ಅಥವಾ ಇನ್ಯಾವುದೇ ವಲಯದಲ್ಲಾಗಿರಬಹುದು. ಒಂದು ವ್ಯಕ್ತಿಯನ್ನು ಗುರುತಿಸಲು ಹಲವಾರು ವರ್ಷಗಳ ಕಾಲ ಕಾಯಬೇಕು. ಒಂದು ಹಂತಕ್ಕೆ ಬಂದಮೇಲೆ ತಾನೇ ತಾನಾಗಿ ಎಲ್ಲರಿಂದ ಗುರುತಿಸಲ್ಪಟ್ಟರೂ ಆರಂಭದಲ್ಲಿ ಮೂಲೆಗುಂಪಾಗುವುದು ಸಹಜ. ಹೀಗಾಗಿ ಯಾರ ಮೆಚ್ಚುಗೆಗಾಗಿ ಕಾಯುವ ಅಗತ್ಯವಿಲ್ಲ. ನಮ್ಮ ಆತ್ಮಬಲವೇ ನಮ್ಮನ್ನು ಕಾಪಾಡಬೇಕು ಎಂಬ ಮಾತು ಎಲ್ಲರಿಗೂ ಅನ್ವಯಿಸುವ ಮಾತು.                   ಗಜಲ್ ಹಾಗೆ ಎಲ್ಲ ಭಾವಗಳನ್ನು ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಅದಕ್ಕೆ ಅದರದ್ದೇ ಆದ ಹತ್ತಾರು ನಿಯಮಗಳಿವೆ. ತನ್ನದೇ ಆದ ಸಿದ್ಧ ಮಾದರಿಯ ಭಾವಗಳಿವೆ. ಪ್ರೀತಿ ಪ್ರೇಮ ಕ್ಕೆ ಒಗ್ಗಿಕೊಳ್ಳುವ ಗಜಲ್ ಅದಕ್ಕಿಂತ ವಿರಹಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಹಾಗೆಂದು ತರ್ಕಕ್ಕೆ, ಆಧ್ಯಾತ್ಮಿಕಕ್ಕೆ ಗಜಲ್ ಒಗ್ಗುವುದಿಲ್ಲ ಎಂದಲ್ಲ. ಗಜಲ್‌ನ ಮೂಲವೇ ಅಲ್ಲಿದೆ. ಪ್ರೇಮದೊಳಗಿನ ತಾರ್ಕಿಕತೆಗೆ ಹಾಗೂ ಪ್ರೇಮದೊಳಗಿನ ಆಧ್ಯಾತ್ಮಿಕತೆಗೆ ಗಜಲ್‌ನ ಪೂರ್ವಸೂರಿಗಳು ಹೆಚ್ಚು ಒತ್ತು ನೀಡಿದ್ದನ್ನು ಗಮನಿಸಬೇಕು. ಪ್ರೇಮದ ಕೊನೆಯ ಗುರಿಯೇ ಆಧ್ಯಾತ್ಮ ಎಂಬುದನ್ನು ಮರೆಯುವಂತಿಲ್ಲ. ಹಾಗೆಂದು ಗಜಲ್ ಸಾಮಾಜಿಕ ಕಳಕಳಿಯನ್ನು ಬೇಡ ಎನ್ನುವುದೇ? ಖಂಡಿತಾ ಇಲ್ಲ. ಹಿತವಾದ ಮಾತಿನ ಎಲ್ಲವನ್ನೂ ಗಜಲ್ ಅಪ್ಪಿಕೊಳ್ಳುತ್ತದೆ. ಅದು ಸಾಮಾಜಿಕ ಅಸಮಾನತೆ ಇರಲಿ, ಪರಿಸರ ರಕ್ಷಣೆ ಇರಲಿ ಎಲ್ಲವೂ ಗಜಲ್‌ಗೆ ಸಮ್ಮತವೇ.ಸಸಿಯೊಂದು ಹಚ್ಚಿದರೆ ತಾನೆ ಬೆಳೆದು ಹೆಮ್ಮರವಾಗಿ ಹೂ ಹಣ್ಣು ಕೊಡುವುದುಹಚ್ಚುವ ಮುಂಚೆ ಭೂಮಿಯ ಹಸನಾಗಿಸುವುದು ನೀ ಕಲಿ ಗೆಳೆಯಾಎನ್ನುತ್ತಾರೆ ಕವಿ. ಸಸಿಯನ್ನು ನೆಟ್ಟರೆ ಮಾತ್ರ ಭೂಮಿ ಹಸನಾಗುವ ಮಾತು ಎಷ್ಟು ಮಾರ್ಮಿಕವಾಗಿ ಇಲ್ಲಿ ಮೂಡಿದೆ. ಸಸಿಯನ್ನೇ ನೆಡದೇ ಹಣ್ಣು ಬೇಕು ಹೂವು ಬೇಕು ಎಂದರೆ ಎಲ್ಲಿಂದ ತರಲಾದೀತು? ಕೃಷಿಯನ್ನು ಕೀಳಾಗಿ ಕಾಣುವ ಎಲ್ಲರ ಕುರಿತಾಗಿ ಈ ಮಾತು ಅನ್ವಯಿಸುತ್ತದೆ.  ಕವಿಗೆ ಸಮಾಜದ ರೀತಿ ನೀತಿಗಳು ಗೊತ್ತಿದೆ. ಇಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಯಾರೋ ಬಂದು ನಮ್ಮ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟುತ್ತಾರೆ ಎಂಬ ಭ್ರಮೆಯಲ್ಲಿ ಇರಬೇಕಿಲ್ಲ. ಯಾರೂ ನಮ್ಮನ್ನು ಪ್ರೋತ್ಸಾಹಿಸುವುದಿಲ್ಲ. ಯಾರಾದರೂ ಸ್ವಲ್ಪ ಬೆಳವಣಿಗೆ ಕಂಡರೆ ಅವರ ಕಾಲು ಹಿಡಿದು ಎಳೆಯುವ ಮನೋಭಾವವೇ ಈ ಸಮಾಜದಲ್ಲಿ ತುಂಬಿಕೊಂಡಿದೆ. ಹೀಗಾಗಿಯೇ ಕವಿ,ಸಹಜ ಬೆನ್ನು ತಟ್ಟಿ ನಗು ಅರಳಿಸುವವರು ಜಗದಲ್ಲಿಲ್ಲಎಲ್ಲರೂ ಮಾನವೀಯರಿದ್ದಾರೆಂಬ ಭ್ರಮೆ ನಿನಗೆ ಬೇಡ ಗೆಳೆಯಎನ್ನುತ್ತಾರೆ. ನಮ್ಮ ಬೆನ್ನು ತಟ್ಟಿ ನಗು ಅರಳಿಸುವವರು ಸಿಗುವುದಿಲ್ಲ. ಕೇವಲ ನೋವು ನೀಡಿ ಸಂಭ್ರಮಿಸುವವರು ಮಾತ್ರ ನಮ್ಮ ಸುತ್ತಮುತ್ತ ತುಂಬಿಕೊಂಡಿದ್ದಾರೆ. ನಮ್ಮ ಸಮಾಜ ಜಾತಿ, ಧರ್ಮ ಮುಂತಾದ ಬೇಡದ ವ್ಯಾಧಿಯನ್ನು ತಲೆಯಲ್ಲಿ ತುಂಬಿಕೊಂಡು ನರಳುತ್ತಿದೆ.ಈ ಭೂಮಿಯಲ್ಲಿ ಗೀತೆ ಕುರಾನ್ ಬೈಬಲ್ ಗುರುವಾಣಿ ಹೀಗೆ ಏನೆಲ್ಲ ಒಳ್ಳೆಯದು ಬಿತ್ತಿಹರುಈ ಸಮಾನತೆಯ ಸಾಮರಸ್ಯ ಹೊಸ ಹೂವು ಏಕೆ ಮತ್ತೆ ಮತ್ತೆ ಅರಳುತ್ತಿಲ್ಲ ಸಾಕಿ ಪ್ರತಿ ಧರ್ಮದಲ್ಲೂ ಮನುಷ್ಯತ್ವವನ್ನೇ ಬೋಧಿಸಿದ್ದಾರೆ. ಮಾನವನ ಏಳ್ಗೆ ಇರುವುದೇ ಪ್ರೀತಿ ಮ,ತ್ತು ಸಹಬಾಳ್ವೆಯಲ್ಲಿ ಎಂದಿದ್ದರೂ ನಾವು ಮಾತ್ರ ಜಾತಿ ಧರ್ಮದ ಹೆಸರು ಹೇಳಿಕೊಂಡು ಕಚ್ಚಾಡುತ್ತಿದ್ದೇವೆ. ಗೀತೆ ಇರಲಿ, ಕುರಾನ್ ಇರಲಿ, ಬೈಬಲ್ ಇರಲಿ ಅಥವಾ ಗುರುವಾಣಿಯೇ ಇರಲಿ. ಎಲ್ಲರೂ ಪ್ರೀತಿಯೇ ಜಗದಲ್ಲಿ ಸರ್ವೋತ್ತಮ ಎಂದರೂ ಅದನ್ನು ಯಾರೂ ಆಚರಣೆಗೆ ತರುತ್ತಿಲ್ಲ. ನಾವು ಗೀತೆಯನ್ನು ನಂಬುತ್ತೇವೆ. ಅಂತೆಯೇ ಕುರಾನ್ ಹಾಗು ಬೈಬಲ್‌ನ್ನೂ ಕೂಡ. ಗೀತೆ, ಕುರಾನ್ ಬೈಬಲ್‌ನಲ್ಲಿರುವುದೇ ಪರಮಸತ್ಯ ಎಂದು  ಭಾವಿಸುತ್ತ ಅದನ್ನು ಆಚರಣೆಗೆ ತರುತ್ತಿರುವುದಾಗಿ ಭ್ರಮೆಗೊಳಗಾಗಿದ್ದೇವೆ. ಆದರೆ ವಾಸ್ತವದಲ್ಲಿ ನಾವ್ಯಾರೂ ನಮ್ಮ ಧರ್ಮಗ್ರಂಥಗಳನ್ನು ತಿಳಿದೇ ಇಲ್ಲ.  ಅದು ಬೋಧಿಸಿದ ಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡೇ ಇಲ್ಲ ಎಂಬ ವಿಷಾದ ಕವಿಗಿದೆ. ಸತ್ಯವಾಡಿದ ಹರಿಶ್ಚಂದ್ರ ಚಂದ್ರಮತಿಯನ್ನ ಮಾರಿಕೊಂಡದ್ದು, ಧರ್ಮರಾಯ ಧರ್ಮವನ್ನು ಉಳಿಸಲು ಹೋಗಿ ದ್ರೌಪದಿಯನ್ನೇ ಪಣಕ್ಕಿಟ್ಟು ಕಳೆದುಕೊಂಡಿದ್ದನ್ನು ಹೇಳುತ್ತ ಸಮಾಜದಲ್ಲಿ ಯಾರಂತೆ ಇರಬೇಕು ಎಂದು ಕೇಳುತ್ತಾರೆ. ಧರ್ಮ ಎಂದರೆ ಎಲ್ಲವನ್ನೂ ಒಳಗೊಂಡದ್ದು ಎನ್ನುವ ವಿಶ್ವ ಕುಟುಂಬದ ಮಾತು ಇಲ್ಲಿ ಕೇಳಿಸುತ್ತದೆ. ಹೀಗಾಗಿಯೇ ಜಾತಿ ಧರ್ಮದ ಹೆಸರಿನಲ್ಲಿ ‘ಮಾತು ಮಾತಲ್ಲಿ ಕೊಳ್ಳಿ ಇಟ್ಟು ಮನಸ್ಸು ಮುರಿಯುವುದು ಬೇಕಿರಲಿಲ್ಲ ಈಗ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.ಕೆಲವರಿಗೆ ಜಾತಿಯದು ಹಲವರಿಗೆ ಧರ್ಮದ್ದು ಹೀಗೆ ಹೆಣ್ಣು ಮಣ್ಣಿನ ಹುಚ್ಚುಹೀಗೆ ಬಹುತೇಕರಿಗೆ ಹಣ ಅಧಿಕಾರ ಅಂತಸ್ತಿನ ಹುಚ್ಚು ತಲೆ ಕೆಡಿಸಿಕೊಬೇಡ ಸಖಿಎನ್ನುವ ಮಾತುಗಳಲ್ಲಿ ಸಮಾಜದ ಸತ್ಯ ಅಡಗಿದೆ. ಕೆಲವರು ಧರ್ಮ ಜಾತಿಯ ಉನ್ಮಾದದಲ್ಲಿ ತೇಲುತ್ತಿದ್ದರೆ ಕೆಲವರು ಹಣ, ಅಧಿಕರ ಹಾಗೂ ಅಂತಸ್ತಿನ ಗುಲಾಮರಾಗಿದ್ದಾರೆ. ಇನ್ನು ಕೆಲವರಿಗೆ ಹೆಣ್ಣಿನ ಹುಚ್ಚು. ಭಾರತ ಹೆಣ್ಣಿನ ಯೋನಿಯಿಂದ ಹರಿಯುವ ರಕ್ತದಲ್ಲಿ ಶುಭ್ರಸ್ನಾನ ಮಾಡುತ್ತಿದೆ. ಅತ್ಯಾಚಾರಗಳು ಹೆಚ್ಚಾಗಿರುವ ಈ ಕಾಲದಲ್ಲಿ ಇಂತಹ ಸಾಲುಗಳು ನಮ್ಮನ್ನು ಪದೇಪದೇ ಎಚ್ಚರಿಸುತ್ತವೆ. ‘ತನ್ನ ಹೆತ್ತವಳು ಒಡಹುಟ್ಟಿದವಳು ಒಂದು ಹೆಣ್ಣಂದರಿಯದ ಅವಿವೇಕಿ ಮೃಗಗಳಿವು’ ಎಂದು ವಿಷಾದಿಸುತ್ತಲೇ ಹೆಣ್ಣು ಪ್ರತಿ ಜೀವಕ್ಕೂ ನೀಡುವ ಸುಖವನ್ನು ನವಿರಾಗಿ ಹೇಳುತ್ತಾರೆ. ಕತ್ತಲೆಯಲಿ ಕಳೆದವನ ಬದುಕಿಗೆ ಬೆಳಕಾಗಿ ಬಂದವಳು ನೀ ಸಖಿಕಮರಿದ ಈ ಬದುಕಿಗೆ ಜೀವರಸ ತುಂಬಿದವಳು ನೀ ಸಖಿಹೆಣ್ಣು ಬದುಕಿನ ಕತ್ತಲೆಯನ್ನು ಹೋಗಲಾಡಿಸಿದವಳು. ಬದುಕಿಗೆ ಬೆಳಕಾಗಿ, ಬೆಳದಿಂಗಳಾಗಿ ಬಂದವಳು. ಬೇಸರದ ಬದುಕಿಗೆ ಆ ಪ್ರಿಯತಮೆ ಜೀವರಸವನ್ನು ತುಂಬುತ್ತಾಳೆ. ಜೀವಕ್ಕೆ ಜೀವವಾದ ಪ್ರಿಯತಮೆ ನಮ್ಮ ಬಾಳಿಗೆ ಬೆಳಕನ್ನು ತರುವ ಕಂದಿಲು ಎನ್ನುವುದು ತಪ್ತಗೊಂಡ ಎದೆಯೊಳಗೆ ಒಂದಿಷ್ಟು ತಂಪು ಸೂಸುತ್ತಾರೆ.ಕನಸಿನಲ್ಲಿ ಕಾಡುವಳು ಖುಷಿಯಲ್ಲೂ ಕುದಿಯುವಳುಬಿಸಿಲನ್ನೇ ಉಂಡು ಎಲ್ಲೆ ನೆರಳಾದಳು ಸಾಕಿ ಎನ್ನುವ ಮಾತಿನಲ್ಲಿಯೂ ಆ ಗೆಳತಿ ಉರಿಬಿಸಿಲಿನಲ್ಲೂ ತಮ್ಮನ್ನು ಸಲಹುವ ಕುರಿತು ಮನಸ್ಸು ಬಿಚ್ಚಿ ಹೇಳುತ್ತಲೇ ಕನಸಿನಲ್ಲಿ ಕಾಡುವ ಈ ಸುಂದರಿ ವಿರಹವನ್ನೂ ಕೊಡಬಲ್ಲಳು ಎನ್ನುತ್ತಾರೆ. ಹಾಗೆ ನೋಡಿದರೆ ವಿರಹವಿಲ್ಲದ ಪ್ರೇಮಕ್ಕೆ ಸವಿ ಎಲ್ಲಿದೆ? ವಿರಹವೇ ಪ್ರೇಮದ ಮಧುರತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಈ ಜಗತ್ತಿನ ಎಲ್ಲ ಪ್ರೇಮಿಗಳೂ ಒಪ್ಪಿಕೊಂಡಿದ್ದಾರೆ. ಹಾಗಿದ್ದ ಮೇಲೆ ಈಗಾಗಲೇ ಹೇಳಿದಂತೆ ವಿರಹಕ್ಕೆಂದೇ ರಚಿತವಾಗಿರುವ ಗಜಲ್‌ನಲ್ಲಿ ವಿರಹವಿರದಿದ್ದರೆ ಏನು ಚೆನ್ನ ಹೇಳಿ?ಹತ್ತಿರವಿದ್ದೂ ಅಪರಿಚಿತರಂತೆ ದೂರವಾದವರ ಬಗ್ಗೆ ಕೇಳಿದ್ದೆದೂರವಿದ್ದೂ ಹತ್ತಿರವಾಗಿ ನಿನ್ನ ಸೇರುವಷ್ಟರಲಿ ನೀ ಕನಸಾದೆಈ ಹುಡುಗಿಯರೇನೂ ಕಡಿಮೆಯವರಲ್ಲ. ಹುಡುಗರನ್ನು ಕಾಡುವುದೇ ತಮ್ಮ ಜೀವನದ ಮಹದೋದ್ದೇಶ ಎಂದುಕೊಂಡವರು. ಹೀಗಾಗಿ ಇನ್ನೇನು ತನ್ನವಳಾದಳು ಎಂದುಕೊಳ್ಳುವಾಗಲೇ ದೂರ ಸರಿದು ತಮಾಷೆ ನೋಡುತ್ತಾರೆ. ಅಪರಿಚಿತಳು ಎಂದು ಸುಮ್ಮನಾದರೆ ತಾವಾಗಿಯೇ ಹತ್ತಿರ ಬಂದು ಆತ್ಮೀಯರಾಗುತ್ತಾರೆ. ದೂರವನ್ನು ಕ್ಷಣ ಮಾತ್ರದಲ್ಲೇ ಕರಗಿಸಿದರೂ ಕೈಗೆಟುಕದಂತೆ ಕನಸಾಗಿಬಿಡುವ ಕಲೆ ಹುಡುಗಿಯರಿಗಷ್ಟೇ ಗೊತ್ತಿದೆ. ಕವಿಗೆ ಹೀಗೆ ಪುಳಕ್ಕನೆ ಮಿಂಚಂತೆ ಮಿಂಚಿ ಮಾಯವಾಗುವ ಈ ಹುಡುಗಿಯರ ಕುರಿತು ವಿಚಿತ್ರ ತಲ್ಲಣವಿದೆ.ಈ ಪ್ರೀತಿ ಪ್ರೇಮ ವಿರಹ ಕಾಮದ ಬಗ್ಗೆ ಅನೇಕ ಕಥೆಗಳು ಗೊತ್ತುಹೊನ್ನಸಿರಿಯ ಈ ಅಲೌಕಿಕ ಪ್ರೀತಿ ಅರಿವಾಗುವಷ್ಟರಲಿ ನೀ ನಕ್ಷತ್ರವಾದೆಸದಾ ಜೊತೆಗಿರುತ್ತೇನೆ ಎಂದು ಆಣೆ ಕೊಟ್ಟು ಭಾಷೆಯಿತ್ತವರು ಹೀಗೆ ಒಮ್ಮೆಲೆ ದೂರ ಸರಿದು ನಕ್ಷತ್ರಗಳಾಗಿಬಿಡುವುದನ್ನು ಸಲೀಸಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಆದರೂ ಕವಿ ‘ಕಂದಿಲು ಬೇಡ ಕಣ್ಣ ಕಾಂತಿಯಲ್ಲಿ ಬಾ’ ಎನ್ನುತ್ತಾರೆ. ಇದು ಪ್ರೇಮದ ಪರಾಕಾಷ್ಟೆ. ತನ್ನ ಪ್ರೇಯಸಿಯ ಕಣ್ಣಿನ ಕಾಂತಿ ಎಲ್ಲ ಕಂದಿಲುಗಳ ಬೆಳಕನ್ನೂ ಮೀರಿಸುವಂತಹುದ್ದು ಎನ್ನುವುದು ಸಹಜ.ಕಾಯುವಲ್ಲಿ ಇರುವ ಕಾತರ ಸನಿಹದಲ್ಲಿ ಇರುವುದಿಲ್ಲಸಾಂಗತ್ಯಕ್ಕಾಗಿ ಸದಾ ಬಯಸಿ ಕಾಯುತ್ತಾನೆಹೀಗೆ ಕಾಯುವಿಕೆಯನ್ನು ನಿರಂತರವಾಗಿಸುತ್ತ, ಕಾಯುವುದೇ ತಪಸ್ಸು ಎಂದು ತಿಳಿದುಕೊಳ್ಳುವ ಕವಿಗೆ ಪ್ರೇಮ ಕೂಡ ಜೀವನದಲ್ಲಿ ಬೇಕಾಗಿರುವ ಭಾವಗಳಲ್ಲಿ ಒಂದು ಎಂಬ ಅರಿವಿದೆ. ಹೀಗಾಗಿಪ್ರೇಮಿಸಲಾಗದು ವಂಚಿಸಲಾಗದು ನಿನಗೆ ಮರೆತುಬಿಡುಹಂಬಲಿಸಿರಬಹುದು ಅಂಗಲಾಚಲಾಗದು ನಿನಗೆ ಮರೆತುಬಿಡು.ಎಂದು ಕೈಗೆ ಸಿಗದ್ದನ್ನು ಮರೆತು ಮುಂದೆ ಸಾಗಬೇಕಾದ ಜೀವನದ ಕುರಿತು ಎಚ್ಚರವಹಿಸುತ್ತಾರೆ. ಕೈಕೊಟ್ಟ ಪ್ರೇಮಿಯ ಬಗ್ಗೆ ಬೇಸರವಾಗುತ್ತದೆ ಎಂಬುದೇನೋ ನಿಜ. ಹಾಗೆಂದು ಅದೆಷ್ಟು ಸಮಯ ಕೊರಗಲಾದೀತು ಹೇಳಿ? ಹೀಗಾಗಿ ಆದದ್ದನ್ನೆಲ್ಲ ಮರೆತು ಮುಂದೆ ಸಾಗಬೇಕಾದ ಅನಿವಾರ್‍ಯತೆಯನ್ನು ಹೇಳುತ್ತಲೇ ಒಪ್ಪತ್ತಿನ ಗಂಜಿಗೂ, ತುಂಡು ರೊಟ್ಟಿಗೂ ಹೋರಾಟವಿದುಹಸಿವೆಯೇ ಖೋಡಿ ಏನೆಲ್ಲ ಮಾಡಿ ಹೆಣಗುತಿಹಳು ತಾಯಿಎಂದು ನಮ್ಮ ನಡುವೆ ತುತ್ತು ಕೂಳಿಗೂ ಕಷ್ಟ ಅನುಭವಿಸುತ್ತಿರುವವರ ವೇದನೆಯನ್ನು ಕಟ್ಟಿಕೊಡುತ್ತಾರೆ. ಮನೆ ನಡೆಸಲು ತಾಯಿ ಎಂಬ ಹೆಣ್ಣು ಅನುಭವಿಸುವ ಕಷ್ಟವನ್ನು ಗಂಡು ಅನುಭವಿಸಲಾರ. ಎಷ್ಟೋ ಮನೆಗಳಲ್ಲಿ ಹೆತ್ತಿಕೊಂಡ ತಪ್ಪಿಗಾಗಿ ಮಕ್ಕಳನ್ನು ಸಾಕುವ ಕರ್ಮ ತಾಯಿಯದ್ದೇ ಆಗಿರುತ್ತದೆ. ತನ್ನ ಕಾಮಕ್ಕಾಗಿ ಅವಳನ್ನು ಬಳಸಿಕೊಂಡು ತಾಯಿಯನ್ನಾಗಿ ಮಾಡಿದ ಮನೆಯ ಯಜಮಾನ ಎನ್ನಿಸಿಕೊಂಡ ಗಂಡಸು ಆ ಎಲ್ಲ ಜವಾಬ್ಧಾರಿಯನ್ನು ತಾಯಿಯ ತಲೆಗೆ ಕಟ್ಟಿ ನಿರುಮ್ಮಳವಾಗಿ ಬಿಡುವುದು ಈ ಸಮಾಜದ ಚೋದ್ಯಗಳಲ್ಲಿ ಒಂದು      ಈ ಎಲ್ಲದರ ನಡುವೆ ನಮ್ಮ ಗೋಮುಖ ವ್ಯಾಘ್ರತನವೊಂದು ಇದೆಯಲ್ಲ ಅದು ಈ ಸಮಾಜಕ್ಕೆ ಕಂಟಕ. ಬದುಕಿನಲ್ಲಿ ಯಾವ್ಯಾವುದೋ ಕಾರಣಕ್ಕಾಗಿ ಮುಖವಾಡ ಹಾಕುವವರ ಸಂಖ್ಯೆ ಬಹುದೊಡ್ಡದಿದೆ. ಆದರೆ ಸತ್ತ ಮೇಲೂ ‘ಸೇರಿದರೆ ಸೇರಲಿ ತಮ್ಮ ದೇಹದ ಬೂದಿಯು ಗಂಗೆಯಲಿ ಅನ್ನುವವರ ಬಹುದೊಡ್ಡ ಸಾಲುಂಟು’ ಎಂದು ಕವಿ ಬೇಸರಿಸುತ್ತಾರೆ. ಗಂಗೆಯನ್ನು ಸ್ವಚ್ಛಗೊಳಿಸಬೇಕಿದೆ ಎನ್ನುತ್ತಲೇ ತಮ್ಮ ದೇಹದ ಬೂದಿಯೂ ಗಂಗೆಯಲ್ಲಿ ಸೇರಿ ಜೀವಿತಾವಧಿಯಲ್ಲಿ ಮಾಡಿದ ಪಾಪಗಳೆಲ್ಲ ಕಳೆದುಹೋಗಲಿ ಎನ್ನುತ್ತ ಸ್ವರ್ಗ ಬಯಸುವವರ ಕುರಿತಾಗಿ ಹೇವರಿಕೆಯಿದೆ.ಸುತ್ತ ಪರಸ್ಪರರು ಬೆನ್ನು ನೀವಿಕೊಳ್ಳುವುದು ಇವನಿಗೇಕೆ ಅರ್ಥವಾಗುವುದಿಲ್ಲನೀ ನನಗಿದ್ದರೆ ನಾ ನಿನಗೆ ಎಂಬ ಸೋಗಲಾಡಿಗಳ ಮಧ್ಯೆ ಭ್ರಮ ನಿರಸನವಾಗುತ್ತಿದೆ ಸಾಕಿಎಂಬ ಸಾಲು ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿ ಕಾಣುತ್ತದೆ. ಎಲ್ಲೆಡೆಯೂ ಗುಂಪುಗಳದ್ದೇ ಸಾಮ್ರಾಜ್ಯ. ನೀವು ನಮ್ಮ ಪರವಾಗಿದ್ದರೆ ಮಾತ್ರ ನಾವು ನಿಮ್ಮ ಪರವಾಗಿರುತ್ತೇವೆ ಎನ್ನುವ ದೊಡ್ಡವರು ಎನ್ನಿಸಿಕೊಂಡಿರುವವರ ಮಾತು ತೀರಾ ಅಸಹ್ಯ ಹುಟ್ಟಿಸುವಂತಹುದ್ದು. ತಮ್ಮ ಗುಂಪಿಗೆ ಸೇರಿದವರಿಗೆ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತ, ಪ್ರಶಸ್ತಿಗಳ ಸರಮಾಲೆಯನ್ನೇ ಕಟ್ಟಿ ಕೊರಳಿಗೆ ಹಾಕುವ ಬಲಾಢ್ಯರಿಗೆ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಾಗಬೇಕಿದೆ. ಇದಕ್ಕೆ ಇಂದಿನ ಸಾಹಿತ್ಯ ಲೋಕ ಕೂಡ ಹೊರತಾಗಿಲ್ಲ. ಕವಿ ತಮ್ಮ ಸಾಲುಗಳಲ್ಲಿಯೇ ಇಂತಹ ಸೋಕಾಲ್ಡ್ ಪ್ರಮುಖರನ್ನು ವ್ಯಂಗ್ಯವಾಡುತ್ತಾರೆ. ಸಿದ್ಧರಾಮ ಹೊನ್ಕಲ್

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಅಂಕಣಬರಹ ಅದುಮಿಟ್ಟ ಮನದ ಮಾತುಗಳು ಕವಿತೆಗಳಾದಾಗ ಪುಸ್ತಕ- ಸಂತೆ ಸರಕುಕವಿ- ಬಿ ಎ ಮಮತಾ ಅರಸೀಕೆರೆಪ್ರಕಾಶನ- ನಾಕುತಂತಿ  ಬೆಲೆ- ೮೦/-           ಸಿದ್ಧ ಸೂತ್ರ ಬದಲಾಗಬೇಕುಅಜ್ಜಿ ಕಥೆಯಲ್ಲಿಅರಿವು ಜೊತೆಯಾಗಬೇಕುಹೊಸ ಕಥೆಗಳ ಬರೆಯಬೇಕುಅಕ್ಷರ ಲೋಕದಲಿಅಕ್ಷರ ಲೋಕದಲ್ಲಿ ಬದಲಾವಣೆ ಬಯಸುವ ಮಮತಾ ಆಡಲೇ ಬೇಕಾದ ಮಾತುಗಳೊಂದಿಗೆ ನಮ್ಮೆದುರಿಗಿದ್ದಾಳೆ.  ಮಮತಾ ಅಂದರೇ ಹಾಗೆ. ಹೇಳಬೇಕಾದುದನ್ನು ಮನದೊಳಗೇ ಇಟ್ಟುಕೊಂಡಿರುವವಳಲ್ಲ. ಹೇಳಬೇಕಾದುದ್ದನ್ನು ಥಟ್ಟನೆ ಹೇಳಿಬಿಡುವವಳು. ಆ ಮಾತಿನಿಂದ ಏನಾದರೂ ವ್ಯತಿರಿಕ್ತವಾದರೆ ನಂತರದ ಪರಿಣಾಮಗಳ ಬಗ್ಗೆ ಕೊನೆಯಲ್ಲಿ ಯೋಚಿಸಿದರಾಯಿತು ಎಂದುಕೊಂಡಿರುವವಳು. ಹೊಸದಾಗಿ ನೋಡುವವರಿಗೆ ಇದ್ಯಾಕೆ ಹೀಗೆ ಎಂದು ಅಚ್ಚರಿಯಾದರೂ ಜೊತೆಗೇ ಇರುವ ನಮಗೆ ಇದು ಅತ್ಯಂತ ಸಹಜ. ಏನಾದರೂ ಒಂದು ಘಟನೆ ನಡೆದಾಗ ಅದಕ್ಕೆ ಮಮತಾ ತಕ್ಷಣ ಪ್ರತಿಕ್ರಿಯಿಸದೇ ಇದ್ದರೆ ಮಮತಾ ಎಲ್ಲಿ? ಆರಾಂ ಇದ್ದಾಳೆ ತಾನೆ? ಎಂದು ಸ್ನೇಹಿತ ಬಳಗದಲ್ಲಿ ಕೇಳಿಕೊಳ್ಳುವಷ್ಟು ಅವಳು ಶೀಘ್ರ ಉತ್ತರ ನೀಡುವವಳು. ಹೀಗಾಗಿ ಮಮತಾ ತಮ್ಮ ಈ ಸಂಕಲನದಲ್ಲಿ ಹೀಗೆ ನೇರಾನೇರ, ಎದೆಗೆ ಢಿಕ್ಕಿ ಹೊಡೆಯುವ  ಅನೇಕ ಸಾಲುಗಳೊಂದಿಗೆ ನಮಗೆ ಎದುರಾಗುತ್ತಾರೆ. ನಿನಗೆ ನೀನೆ ಕತೆಯಾಗುವುದನಿಲ್ಲಿಸಿ ಬಿಡಲಾಗದೇನೆ ಸಖಿಸಾಕು ಮಾಡಲಾಗದೇನೆಅವನ ಹಂಬಲಿಕೆಬರೀ ನಿನ್ನದೇ ಬಿಕ್ಕಳಿಕೆ ಎಂದು ಪ್ರಾರಂಭವಾಗುವ ‘ಅವತಾರಗಳು’ ಎಂಬ ಕವಿತೆ ಆದಿಯಿಂದ ಹಿಡಿದು ಇಡೀ ಪುರಾಣಗಳನ್ನು ಜಾಲಾಡಿ ಹೆಣ್ಣಿನ ಕಣ್ಣೀರನ್ನು ಹುಡುಕುವ ಪ್ರಯತ್ನ ಮಾಡುತ್ತದೆ. ಇಡೀ ಪುರಾಣ, ಭಾರತದ ಇತಿಹಾಸದ ತುಂಬೆಲ್ಲ ಹೆಣ್ಣಿನ ಬಿಕ್ಕಳಿಕೆಯ ನೋವುಗಳೇ ತುಂಬಿದೆ. ಕಣ್ಣಿಗೆ ಕಾಣದ ಸಂಪ್ರದಾಯಗಳ ಹೊರೆ ಇರುವ ಲಕ್ಷ್ಮಣರೇಖೆ ಎಲ್ಲಾ ಹೆಣ್ಣುಗಳ ಸುತ್ತಲೂ ಆವರಿಸಿಕೊಂಡಿದೆ. ಅದನ್ನು ಮೀರಿದರೆ ಅನರ್ಥ ಎಂದು ಆ ಕಾಲದಿಂದಲೂ ಹೆಣ್ಣನ್ನು ಬಲವಂತವಾಗಿ ನಂಬಿಸುತ್ತ ಬರಲಾಗಿದೆ. ಮತ್ತು ಆಗುವ ಎಲ್ಲಾ ಅನಾಹುತಗಳಿಗೂ ಹೆಣ್ಣೇ ಕಾರಣ ಎಂದು ಪ್ರಪಂಚವನ್ನು ಒಪ್ಪಿಸುತ್ತಲೇ ಬಂದಿದೆ ಈ ಪುರುಷಪ್ರಧಾನ ಸಮಾಜ. ಹೆಣ್ಣು ಮಾತನಾಡಿದರೆ ತಪ್ಪು, ಹೆಣ್ಣು ನಕ್ಕರೆ ತಪ್ಪು, ಹೆಣ್ಣು ಏನಾದರೂ ಆಸೆಪಟ್ಟರೆ ತಪ್ಪು, ಕೊನೆಗೆ ಹೆಣ್ಣು ಅತ್ತರೂ ತಪ್ಪು. ಆಕೆ ಗಂಡು ಆಡಿಸಿದಂತೆ ಆಡುವ ಗೊಂಬೆ ಅಷ್ಟೇ. ಆತ ಏನು ಹೇಳಿದರೂ ಮರು ಮಾತನಾಡದೇ ಒಪ್ಪಿಕೊಳ್ಳಬೇಕಾದ ಜೀವವಿರುವ ವಸ್ತು. ಆತನ ಮನೆ, ಹೊಲಗದ್ದೆ, ಬೈಕು, ಕಾರು ಮತ್ತು ಉಳಿದೆಲ್ಲ ಐಶಾರಾಮಿ ವಸ್ತುಗಳಂತೆಯೇ. ನಿರ್ಧಾರ ತೆಗೆದುಕೊಳ್ಳಬೇಕಾದವನು ಅವನು ಮತ್ತು ಅದರ ಬಗ್ಗೆ ಏನೂ ಕೇಳದೆ ಜಾರಿಗೆ ತರಬೇಕಾದವಳು ಮಾತ್ರ ಅವಳು. ಬದುಕಿನಲ್ಲಿ ತನ್ನಷ್ಟೇ ಅವಳೂ ಮುಖ್ಯವಾದವಳು ಎಂಬುದನ್ನು ಕನಸಿನಲ್ಲೂ ಯೋಚಿಸದ ಆತ ತನ್ನಷ್ಟಕ್ಕೆ ತಾನು ತೆಗೆದುಕೊಳ್ಳುವ ಏಕಮುಖಿ ನಿರ್ಧಾರಗಳಿಗೆ, ಜೀವನದ ಮಹತ್ವದ ತೀರ್ಮಾನಗಳಿಗೆ ಆಕೆ ಬದಲು ಮಾತನಾಡದೇ ಒಪ್ಪಿಕೊಳ್ಳಬೇಕು. ‘ಪ್ರೀತಿಸುತ್ತೇನೆ ಬಾ’ ಎಂದರೆ ಹರಕೆಯ ಕುರಿಯಂತೆ ಹತ್ತಿರ ಬರಬೇಕು, ‘ನೀನು ನನಗೆ ಬೇಡ’ ಎಂದರೆ ಬದಲು ಹೇಳದೇ ದೂರ ಸರಿಯಬೇಕು. ಅದರಲ್ಲಿಯೇ ಆಕೆಯ ಶ್ರೇಯಸ್ಸಿದೆ ಎಂದು ಶತಶತಮಾನಗಳಿಂದ ಹೆಣ್ಣನ್ನು ಭ್ರಮೆಯಲ್ಲಿ ಇಡುತ್ತ ಬರಲಾಗಿದೆ. ಆಕೆ ಸಮಾನತೆಯ ಬಗ್ಗೆ ಮಾತನಾಡುವುದೇ ಅಪರಾಧ. ಹೀಗಾಗಿಯೇ ಸಮಾನತೆಯ ಪ್ರತಿಭಟನೆನಿನ್ನದಲ್ಲ ಜೋಕೆಎಂದು ಅವಳನ್ನು ಎಚ್ಚರಿಸುತ್ತ ಆಕೆ ಏನಾದರೂ ಮಾತನಾಡಿದರೆಚಾರಿತ್ರವಧೆ, ಆಸಿಡ್ ದಾಳಿಕಲ್ಕಿಯ ಲೋಕದ ಕಾಣಿಕೆ ಎಂಬಂತೆ ಅವಳನ್ನು ಜೀವಂತವಿರುವಾಗಲೇ ಸಾಯಿಸಿ ಬಿಡುತ್ತದೆ. ಆದರೆ ಈ ಗಂಡುಲೋಕದ ಲೆಕ್ಕಚಾರಗಳೇ ವಿಚಿತ್ರ. ಕುಸಿದು ಬಿದ್ದರೆ ಎತ್ತಲು ಹತ್ತಾರು ಕೈಗಳು ಸಹಾಯ ಬೇಡದೆಯೂ ಮುಂದೆ ಬರುತ್ತವೆ. ‘ಮೈದಡವಿ’ ಸಾಂತ್ವಾನ ಹೇಳುತ್ತವೆ. ಕೇಳದೆಯೂ ‘ಎದೆಗೊರಗಿಸಿಕೊಂಡು’ ಸಮಾಧಾನ ಹೇಳುತ್ತವೆ. ಇಂತಹ ಪುರಾಣ ಸೃಷ್ಟಿಕೃತ ಪುರುಶೋತ್ತಮರನ್ನು ನಾವು ಪ್ರತಿದಿನವೂ ಕಾಣುತ್ತಿದ್ದೇವೆ ಎಂದು ಕವಯತ್ರಿ ಅಭಿಪ್ರಾಯ ಪಡುತ್ತಾರೆ. ಪುರುಷ ಪ್ರಪಂಚದ ಈ ದ್ರಾಷ್ಟ್ಯಕ್ಕೆ ಹೆಣ್ಣಿನ ನವಿರು ಲೋಕ ನಲುಗಿಹೋಗಿದೆ. ಕಣ್ಣಲ್ಲೇ ಅಳೆದು ಬಿಡುತ್ತೀರಿಕರಾರುವಕ್ಕಾದ ಅಳತೆಗಳುಬೇಡವೇ ಬೇಡ ನಿಮಗೆಯಾವುದೇ ಸಿದ್ಧ ಮಾಪಕಗಳುಬಾಯಿತುಂಬಾ ಚಪ್ಪರಿಸುತ್ತೀರಿಮತ್ತೆ ಮತ್ತೆ ಸವಿಯುತ್ತೀರಿಅದೆಷ್ಟು ತೆವಲೋಅದೇ ಧ್ಯಾನ ಅದೇ ಉಸಿರುರಸಗವಳವೇ ಅಂಗಾಂಗಗಳ ಹೆಸರು ನಯವಾದ ರೇಷ್ಮೆ ಬಟ್ಟೆಯಲ್ಲಿ ಸುತ್ತಿಕೊಂಡು ಮತ್ತಗೆ ಭಾರಿಸಿದಂತಹ ಈ ಸಾಲುಗಳು ನೀಡುವ ಮೂಕೇಟು ಅತ್ತಯಂತ ಕಠೋರವಾದವುಗಳು. ರಕ್ತ ಹೊರಬರಲಾರದು. ಆದರೆ ಒಳ ಏಟಿಗೆ ಚರ್ಮ ನೀಲಿಗಟ್ಟುವುದನ್ನು ತಡೆಯಲಾಗದು. ಆದರೆ ಈ ಏಟು ತಮಗೇ ನೀಡಿದ್ದು ಎಂದು ಈ ಸಮಾಜ ಅರ್ಥ ಮಾಡಿಕೊಳ್ಳಬೇಕು ಅಷ್ಟೇ. ಪುರುಷರ ತವಲಿಗೆ ಇನ್ನೊಂದು ಪದ ಬೇಡ. ದೀಪ ಮತ್ತು ಕಲಣಿವೆ ಎನ್ನುವ ಕವಿತೆಯನ್ನೋದಿದರೆ ಈ ಪುರುಷ ವಿಕೃತಿಯ ಭೂತೋಚ್ಛಟನೆ ಆಗುವುದಂತೂ ಸತ್ಯ. ಆದರೆ ಕವನ ಓದಿ ಸಮಾಜ ಬದಲಾಗುತ್ತದೆಯೇ? ಬದಲಾಯಿಸುವ ಅವಕಾಶ ಸಿಕ್ಕರೆ ಎಲ್ಲವನ್ನು ಬದಲಿಸಿಬಿಡಬಹುದಿತ್ತು ಎನ್ನುವ ಕವಯತ್ರಿಯ ಮನದಾಳದ ಮಾತು ಇಲ್ಲಿ ಕವಿತೆಯಾಗಿದೆ ಸದ್ಯಮೂರನೇ ಕಣ್ಣುಕೊಡಲಿಲ್ಲ ಪ್ರಭುವೆಶಾಪಗಳೂ ಕೂಡ ಫಲಿಸಲಾರವು ಹಾಳಾಗಿ ಹೋಗಲಿ ಎಂದು ನಾವು ನೀಡುವ ಶಾಪ, ಬೆನ್ನ ಹಿಂದಿನ ಬೈಗುಳಗಳು ಈ ಮಾನಗೆಟ್ಟವರನ್ನು ಏನೂ ಮಾಡದು ಎನ್ನುವ ಪರಿಜ್ಞಾನ ಅವರಿಗಿದೆ. ಹೀಗಾಗಿಯೇ ಮಮತಾ ಮತ್ತೆ ಮತ್ತೆ ಅಕ್ಕನನ್ನು ಆತುಕೊಳ್ಳುತ್ತಾರೆ ಹಾದಿಯಲಿ ಹೆಜ್ಜೆ ಗುರುತು ಬೇಡಗೆಜ್ಜೆ ಸದ್ದು ಕೇಳದಾದೀತುನಾ ನಿನ್ನ ಹಿಂಬಲಿಸುವಹಂಬಲ ಬೇಡಅಕ್ಕನ ಕಾಂಬ ಗುರಿಮಾಸಿ ಹೋದೀತು ಎನ್ನುತ್ತಾರೆ. ತನ್ನ ಹಾದಿಯಲ್ಲಿ ತಾನು ದೃಢವಾಗಿ ಹೆಜ್ಜೆ ಇಡುತ್ತಿರುವಾಗ ತನ್ನ ಹಾದಿಯಲ್ಲಿ ಬಂದರೆ ಗೆಜ್ಜೆ ಸದ್ದು ಕೇಳದಾಗುತ್ತದೆ ಎನ್ನುವುದಲ್ಲದೇ ಯಾವುದೇ ಕಾರಣಕ್ಕೂ ತಾನು ಅವನನ್ನು ಹಿಂಬಾಲಿಸುವ ಗುರಿ ಹೊಂದಿಲ್ಲ ಎನ್ನುತ್ತಾರೆ. ಯಾಕೆಂದರೆ ಅವರ ಗುರಿ ಒಂದೆ. ಅಕ್ಕನ ಹಾದಿಯಲ್ಲಿ  ನಡೆದು ತಮ್ಮ ಜೀವನಕ್ಕೆ ತಾನು ಜವಾಬ್ಧಾರರೆನ್ನುವವರನ್ನು ಒಲೆಗಿಕ್ಕುವುದು. ಇದು ಮಾಮೂಲಿಯಾಗಿ ಬರುವಂಥಹುದ್ದಲ್ಲ. ಅದಕ್ಕೊಂದು ದಿಟ್ಟತನಬೇಕು.  ಅಂತಹ ದೃಢತೆಗಾಗಿ ಮತ್ತೆ ಅಕ್ಕನನ್ನೇ ಮೊರೆ ಹೋಗಬೇಕು. ಕಾಯುತಿವೆ ಜೀವಗಳುಜಿಗಿದು ಪರದೆಯಿಂದಾಚೆಸೀಳಿ ಬಲೆಗಳನ್ನುಅಕ್ಕ ಹೇಳೆನೀನ್ಹೇಗೆ ದಾಟಿದೆಬಂಧನದ ಸುಳಿಗಳನ್ನು ಎನ್ನುತ್ತ ಈ ಸಂಬಂಧಧ ಸುಳಿಗಳು ಮೇಲೇಳಲು ಪ್ರಯತ್ನಿಸಿದಷ್ಟೂ ಒಳಗೆಳೆದುಕೊಂಡು ಮುಳುಗಿಸುವ ಚೋದ್ಯಕ್ಕೆ ಬೆರಗಾಗುತ್ತಾರೆ.ಮನುಷ್ಯ ಸಂಬಂಧ ಯಾವತ್ತೂ ಕುತೂಹಲಕರವಾದದ್ದು. ಅದು ತಂದೆ ತಾಯಿಗಳೊಟ್ಟಿಗೆ ಇರುವ ಮಕ್ಕಳ ಸಂಬಂಧವಾಗಿರಬಹುದು, ಸಹೋದರ, ಸಹೋದರಿಯರ ನಡುವಣ ಬಂಧವಾಗಿರಬಹುದು ಗಂಡ ಹೆಂಡತಿಯ ನಡುವಣ ಸಂಬಂಧವಾಗಿರಬಹುದು. ಅಥವಾ ಸ್ನೇಹವಾಗಿರಬಹುದು ಇಲ್ಲವೇ ವ್ಯಾಖ್ಯಾನವೇ ಕೊಡಲು ಅಸಾಧ್ಯವಾದ ಪ್ರೇಮ ಸಂಬಂಧವಿರಬಹುದು. ಅವುಗಳಿಗೆ ಅರ್ಥ ಹಚ್ಚುವುದು ಅಸಾಧ್ಯವೇ ಸರಿ. ಮಮತಾ ಕೂಡ ‘ಮೇಲಾಟ’ ಕವನದ ಮೂಲಕ ಇಡೀ ಮನುಷ್ಯ ಸಂಬಂಧಗಳಿಗೆ ಕನ್ನಡಿ ಹಿಡಿದಿದ್ದಾರೆ. ಈ ಸಂಬಂಧಗಳ ಎಳೆ ಅದೆಷ್ಟು ಸೂಕ್ಷ್ಮ. ಕೆಲವೊಮ್ಮೆ ಎಂತಹ ಆಘಾತಗಳಿಗೂ ಕಿತ್ತು ಹೋಗದ ಸಂಬಂಧಗಳು ಒಮ್ಮೊಮ್ಮೆ ಸಣ್ಣ ಎಳೆದಾಟಕ್ಕೂ ತುಂಡಾಗಿ ಹೋಗುವ ನವಿರು ಎಳೆಗಳಂತೆ ಕಾಣುತ್ತದೆ. ಹಾಗಾದರೆ ಸಂಬಂಧಗಳು ಹದಗೊಳ್ಳುವುದು ಯಾವಾಗ? ಕವಯತ್ರಿಗೂ ಈ ಪ್ರಶ್ನೆ ಬೃಹದಾಕಾರವಾಗಿ ಕಾಡಿದೆ. ಹೀಗಾಗಿಯೇ ಸಂಬಂಧಗಳನ್ನು ಹದಗೊಳಿಸಲು ಬೇಯಲಿಡುತ್ತಾರೆ. ಕಾವು ಕೊಟ್ಟರೆ ಮಾತ್ರ ಮೊಟ್ಟೆಯೊಡೆಯುವ ಕ್ರೀಯೆಯಂತೆ ಹದವಾಗಿ ಕಾವು ಹೆಚ್ಚಿಸಿ ಒಂದು ಕುದಿತ ಬರಲಿ ಎಂದು ಕಾಯುತ್ತಾರೆ. ಇಲ್ಲಿ ಕವಿಯತ್ರಿ ಸಂಬಂಧವನ್ನು ಹದಗೊಳಿಸುವ ಪ್ರಕ್ರಿಯೆ ಅಕ್ಕಿಯನ್ನು ನೀರು ಹಾಕಿ ಕೊತಕೊತನೆ ಕುದಿಸುವ ಅನ್ನ ಮಾಡುವ ರೂಪಕದಂತೆ ಕಾಣುತ್ತದೆ. ಅನ್ನದ ಎಸರು ಕುದಿಯುವಾಗ ತಕತಕನೆ ಕುಣಿಯುತ್ತ ಮುಚ್ಚಿದ ತಟ್ಟೆಯನ್ನೇ ಬೀಳಿಸುತ್ತದೆ. ಸಂಬಂಧ ಗಟ್ಟಿಯಾಗುವಾಗಲೂ ಅಷ್ಟೇ. ಅದೆಷ್ಟು ಶಬ್ಧ, ಅದೆಷ್ಟು ರಾಣಾರಂಪ. ಕೆಲವೊಮ್ಮೆ ಈ ಸಂಬಂಧ ಮುರಿದೇ ಹೋಯಿತು ಎಂಬಷ್ಟು ಶಬ್ಧ ಮಾಡುತ್ತದೆ. ಆದರೆ ನಿಜವಾದ ಸಂಬಂಧಗಳು ಹಾಗೆ ಮುಗಿಯುವುದೂ ಇಲ್ಲ. ಚಿಕ್ಕಪುಟ್ಟ ಜಗಳಗಳಿಗೆ ಹೆದರುವುದೂ ಇಲ್ಲ. ಆದರೆ ಹಾಗೆಂದುಕೊಳ್ಳುವುದೂ ಕೆಲವೊಮ್ಮೆ ತಪ್ಪಾಗುತ್ತದೆ. ಏನೇನೂ ಮುಖ್ಯವಲ್ಲದ ವಿಷಯಗಳು ಸಂಬಂಧವನ್ನು ಮುರಿದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣೆದುರಿಗೇ ಇವೆ. ಆದರೆ ಕೊನೆಗೂ ಒಂದು ಪ್ರಶ್ನೆ ಹಾಗೆಯೇ ಉಳಿದು ಹೋಗುತ್ತದೆ. ಅದನ್ನೇ ಮಮತಾ ಮುಖ್ಯವಾಗಿ ಎತ್ತಿ ತೋರಿಸುತ್ತಾರೆ. ಸಂಬಂಧಗಳಲ್ಲಿರುವ ಮೇಲಾಟ. ತಾನು ಹೆಚ್ಚು, ನಾನು ಹೆಚ್ಚು ಎನ್ನುವ ಅಹಂ ನಮ್ಮ ಸಂಬಂಧವನ್ನು ನುಂಗಿ ನೊಣೆಯುತ್ತದೆ. ಎಲ್ಲಿ ಅಹಂ ಹಾಗೂ ಸ್ವಾರ್ಥ ಇರುತ್ತದೋ ಅಲ್ಲಿ ಸಂಬಂಧಗಳು ಬಹುಕಾಲ ಬಾಳಲಾರವು. ಮತ್ಸರ ಹಾಗೂ ಅಸೂಯೆಗಳು ಸಂಬಂಧಗಳ ನಡುವೆ ಬೆಂಕಿ ಹಚ್ಚುತ್ತವೆ. ಎಲ್ಲಿ ತಾವೇ ಹೆಚ್ಚು ಎನ್ನುವ ಹೆಚ್ಚುಗಾರಿಕೆ ಇಬ್ಬರ ನಡುವೆ ಉಂಟಾಗುತ್ತದೋ ಅಲ್ಲಿ ಸಂಬಂಧ ಹಳಸಲಾಗುತ್ತದೆ. ಎಲ್ಲಿ ಒಬ್ಬರ ಉನ್ನತಿಯನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನ ಕಿಡಿ ಹೊಗೆಯಾಡುತ್ತದೋ ಅಲ್ಲಿ ಆ ಸಂಬಂಧ ಮುಕ್ತಾಯಗೊಳ್ಳುತ್ತದೆ ಎನ್ನುತ್ತಾರೆ. ತಕ್ಕಡಿಯಲ್ಲಿ ಒಂದು ತೂಕದ ಬಟ್ಟಲು ಒಮ್ಮೆ ಕೆಳಕ್ಕೆಳೆದರೆ ಮತ್ತೊಮ್ಮೆ ಇನ್ನೊಂದು ತೂಕದ ಬಟ್ಟಲು ಸೆಣೆಸಾಟಕ್ಕೆ ನಿಲ್ಲುತ್ತದೆ. ಕೆಳಗೆ ಜಗ್ಗುವ ಈ ಪ್ರಕ್ರಿಯೆ ನಿರಂತರ. ಇಷ್ಟಾಗಿಯೂ ಕವಯತ್ರಿ ಸಂಬಂಧಗಳನ್ನು ಸುಲಭವಾಗಿ ಬಿಟ್ಟುಕೊಡಲು ಒಪ್ಪುವುದಿಲ್ಲ. ಹೀಗಾಗಿ ಕಾದು ನೋಡುತ್ತೇನೆ ಎನ್ನುತ್ತಾರೆ. ಹಠಕ್ಕೆ ಬೀಳುವ ಸಂಬಂಧಗಳಿಗೆ ಹೊಸ ಸೂತ್ರ ಬರೆಯುತ್ತ ಏಣಿಯಾಗುವ ಮನಸ್ಸಿದೆ ಕವಯತ್ರಿಗೆ. ಸಂಬಂಧಗಳ ನಡುವೆ ಸೇತುವಾಗುವ ಹಂಬಲವಿದೆ. ರೂಪಕಗಳಲ್ಲಿ ಮಾತನಾಡುವ ಸಂಕಲನದ ಅತ್ಯುತ್ತಮ ಕವಿತೆಗಳಲ್ಲಿ ಇದೂ ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು.                 ಹಾಗೆಂದು  ಯಾವ ಸಂಬಂಧಗಳೂ ಅನಿವಾರ್‍ಯವಲ್ಲ. ಅವು ಆಯಾ ಕಾಲದ ಆಯ್ಕೆಗಳಷ್ಟೇ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದವನು ಒಂದು ಮಾತನ್ನೂ ಹೇಳದೇ ಇಬ್ಬರಿಗೂ ಸೇರಿದ್ದ ಬದುಕಿನ ನಿರ್ಧಾರವನ್ನು ಒಬ್ಬನೇ ತೆಗೆದುಕೊಂಡು ಹೊರಟುಬಿಡುವಾಗ ನೋವಾಗುತ್ತದೆ ನಿಜ. ಆದರೆ ಕಾಲ ಆ ನೋವನ್ನು ಮರೆಸುವ ಶಕ್ತಿ ಹೊಂದಿದೆ. ವಿರಹವನ್ನೂ ಕಾಲದ ತೆಕ್ಕೆಗೆ ಒಪ್ಪಿಸಿಬಿಡಬಹುದು ಎನ್ನುವ ಭಾವದ ಕವಿತೆ ನನ್ನದೀ ಸಮಯ. ನಿಜ. ಅವನಿಗಾಗಿ ಕಾದು, ಕಾತರಿಸಿ, ಪರಿಪರಿಯಾಗಿ ಬೇಡಿಕೊಂಡರೂ ತನ್ನೊಬ್ಬನ ನಿರ್ಧಾರಕ್ಕೆ ಅಂಡಿಕೊಂಡವನಿಗಾಗಿ ಯಾವ ಸಮಯ ಕಾಯುತ್ತದೆ ಹೇಳಿ? ಹೀಗಾಗಿಅನಿವಾರ್ಯವಲ್ಲ ಈಗ ನೀ ನನಗೆ ಗೆಳೆಯಜೀವಭಾವಕೆ ಹೊಸ ಚೈತನ್ಯ ನನ್ನದೀ ಸಮಯಎನ್ನುತ್ತ ತನಗಿಂತಲೂ ಮುಖ್ಯವಾದ ಗುರಿಯೊಂದನ್ನು ಹುಡುಕುವೆ ಎಂದು ಹೊರಟವನಿಗೆ ಪ್ರಸ್ತುತ ಅವನ ಸ್ಥಾನದ ಅರಿವು ಮಾಡಿಕೊಡುತ್ತಾರೆ. ಬದುಕಿನ ಗತಿ ಬದಲಾಗುತ್ತಿರುತ್ತದೆ. ಅಜ್ಜಿಯ ಕಥೆಯಲ್ಲಿ ಬರುವ ಒಕ್ಕಣ್ಣಿನ ರಾಕ್ಷಸ ಏಳುಮಲ್ಲಿಗೆ ತೂಕದ ರಾಜಕುಮಾರಿಯನ್ನು ಹೊತ್ತೊಯ್ದಾಗ ಏಳು ಸಮುದ್ರ ದಾಟಿ, ಏಳು ಸುತ್ತಿನ ಕೋಟೆಯೊಳಗಿಂದ ರಾಜಕುಮಾರಿಯನ್ನು ರಕ್ಷಿಸುವ ರಾಜಕುಮಾರ ಈಗ ಎಲ್ಲಿದ್ದಾನೆ? ಹಾಗೆ ಬೇರೆ ಯಾರಿಂದಲೋ ರಕ್ಷಿಸಿಕೊಳ್ಳಬೇಕಾದ ನಿರೀಕ್ಷೆಯಲ್ಲೂ ರಾಜಕುಮಾರಿ ಇರುವುದಿಲ್ಲ. ಯಾಕೆಂದರೆ ತನ್ನ ರಕ್ಷಣೆಯ ಹೊಣೆಯೂ ಅವಳದ್ದೇ. ತನ್ನನ್ನು ತಾನು ಸಂತೈಸಿಕೊಂಡು ನಿಭಾಯಿಸಿಕೊಳ್ಳಬೇಕಾದ ಹೊರೆಯೂ ಆಕೆಯದ್ದೇ. ಒಕ್ಕಣ್ಣಿನ ರಾಕ್ಷಸನೂ ಈಗ ಅದೆಲ್ಲೋ ಹಸಿರು ಗಿಣಿರಾಮನಲ್ಲಿ ಪ್ರಾಣವನ್ನಿಡುವುದಿಲ್ಲ. ಎನ್ನುತ್ತ ಎಲ್ಲವೂ ಬದಲಾದ ಕಥೆಯೊಂದನ್ನು ಎದುರಿಗಿಡುತ್ತಾರೆ. ಜಲಜಲನೆ ಧಾರೆಯಾಗುವ ಇಳೆ ಮೋಡವಾಗಿ ಮತ್ತೆ ಸೂರ್‍ಯನ ಕಾವಿಗೆ ಧರೆಗಿಳಿಯುವಾಗ ಎಲ್ಲ ಆಕೃತಿಗಳು ಬದಲಾಗುವಂತೆ ನಮ್ಮೆಲ್ಲರ ಬದುಕಿನ ಗತಿಗಳೂ ಆಗಾಗ ಬದಲಾಗುತ್ತವೆ ಎನ್ನುತ್ತಾರೆ. ತೆರೆದ ಹಾಗೂ ಮುಚ್ಚಿದ ಬಾಗಿಲಿನ ನಡುವೆ ಆಯ್ಕೆ ಮಾಡಿಕೊಳ್ಳಲು ಹತ್ತಾರು ಗೊಂದಲಗಳಿರುವುದು ಸಹಜ. ತರೆದ ಬಾಗಿಲು ಮುಚ್ಚದೇ, ಮುಚ್ಚಿದ ಬಾಗಿಲ ಹಿಂದೆ ಏನಿದೆ ಎಂಬ ಅರಿವಾಗದೇ ಗೊಂದಲದ ಗೂಡಾಗುವುದು ಎಲ್ಲರ ಬಾಲಿನಲ್ಲೂ ಸಹಜ. ಹಾಗೆ ನೋಡಿದರೆ ಈ ತೆರೆದ ಮತ್ತು ಮುಚ್ಚಿದ ಬಾಗಿಲುಗಳ ರಹಸ್ಯ ಬಿಡಿಸುವುದರಲ್ಲಿಯೇ ನಮ್ಮೆಲ್ಲರ ಜೀವಮಾನದ ಬಹುಕಾಲ ಸಮದುಹೋಗುತ್ತದೆ ಎಂಬುದು ಮಾತ್ರ ಸತ್ಯ. ಆದರೂನಾ ಹಾಡುವಭಾವಗೀತೆಗೆ ನೀನೇ ಸಾಹಿತ್ಯಹಾಡುವೆ ಪ್ರತಿನಿತ್ಯಎನ್ನುವ ಪ್ರಣಯದ ಸಾಲುಗಳಿಗೆ ಇಲ್ಲೇನೂ ಬರ ಇಲ್ಲ. ಆದರೂ ಒಂಟಿತನದ ಸೆಳವನ್ನು ಮೀರುವುದಾದರೂ ಹೇಗೆ? ಒಂಟಿತನವೆಂಬುದು ಏನಿರಬಹುದು. ಹಾಗೆನೋಡಿದರೆ ಒಂಟಿತನವೆಂದರೆಕೈ ಚಾಚಿತಪ್ಪಿ ಹೋದ ಪ್ರೀತಿಇಲ್ಲೆಲ್ಲೋ ನಮ್ಮ ಪ್ರೀತಿಯಿದೆ ಎಂದು ಕೈ ಚಾಚಿಯೂ ಆ ಪ್ರೀತಿ ತಪ್ಪಿ ಹೋದರೆ? ಅಥವಾ ಅದು ಅರ್ಹ ಎಂದು ಅನ್ನಿಸದೇ ಹೋದರೆ?ಒಂಟಿತನವೆಂದರೆಆಪ್ತವಿಲ್ಲದ ಸಾಮಿಪ್ಯಮಾತಿಲ್ಲದ ನಿಶ್ಯಬ್ಧಒಂಟಿತನಕ್ಕೆ ಎಲ್ಲಿ ಆಪ್ತತೆ ಇರುತ್ತದೆ ಹೇಳಿ? ಅದು

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಹಲವು ಭಾವಗಳನ್ನು ಒಟ್ಟಿಗೆ ಸೆರೆಹಿಡಿಯುವ ರೂಪಕಗಳು ಸೂಜಿ ಕಣ್ಣಿಂದ ತೂರಿದದಾರಕ್ಕೆ ಒಳಗಿಲ್ಲ ಹೊರಗಿಲ್ಲ ಈ ಒಂದು ಸಾಲಲ್ಲಿಯೇ ತನ್ನ ಇಡೀ ಕಾವ್ಯದ ಸತ್ವವನ್ನು ನಮ್ಮೆದುರಿಗೆ ತೆರೆದಿಟ್ಟ ಕೃಷ್ಣ ಗಿಳಿಯಾರ ಎಂಬ ವೈದ್ಯರ ಪರಿಚಯ ಯಾರಿಗಿಲ್ಲ ಹೇಳಿ. ವೃತ್ತಿಯಲ್ಲಿ ವೈದ್ಯರಾದರೂ ನವಿರು ಗೆರೆಗಳು ಅವರ ಭಾವಾಭಿವ್ಯಕ್ತಿಯ ಪ್ರತಿರೂಪ. ಭಟ್ಕಳದಲ್ಲಿ ವೈದ್ಯರಾಗಿ ಕಾರ್‍ಯ ನಿರ್ವಹಿಸುತ್ತಿರುವ ಕೃಷ್ಣ ಗಿಳಿಯಾರರ ಕ್ಯಾಮರಾಕ್ಕೆ ಫೋಸ್ ನೀಡಲೆಂದೇ ಬಹಳಷ್ಟು ಹೂವುಗಳು ಅರಳುತ್ತವೆ. ಹೆಚ್ಚಿನ ಪಕ್ಷಿಗಳು ಅವರೆದುರು ಹೊಸ ಮದುವಣಗಿತ್ತಿಯಂತೆ ನುಲಿಯುತ್ತ ನಡೆಯುತ್ತವೆ. ಸೂರ್‍ಯ ಬಳಕುತ್ತ ತನ್ನದೊಂದು ಫೋಟೊ ತೆಗೆಯಲು ಹೇಳಿದರೆ, ಕಡಲಗುಂಟ ಹಾಸಿದಂತೆ ಕವುಚಿ ಮಲಗಿರುವ ಸಹ್ಯಾದ್ರಿ ಪರ್ವತ ಶ್ರೇಣಿಗೂ ಅದೇನೋ ವಯ್ಯಾರ. ಇದೆಲ್ಲದ್ದಕ್ಕೂ ಹೆಚ್ಚಾಗಿ ಈ ಪ್ರಾಣಿ ಪಕ್ಷಿಗಳು, ಕಡಲು, ಪಶ್ಚಿಮ ಘಟ್ಟದ ಮಂಜು, ಆಗಸದ ಸೂರ್‍ಯ, ಚಂದ್ರ, ನಕ್ಷತ್ರಗಳಿಗೆ ಇವರ ಬಳಕುವ ರೇಖೆಗಳಲ್ಲಿ ಅಡಗಿಕೊಳ್ಳುವ ಹುಮ್ಮಸ್ಸು.  ಇಂತಹ ಕೃಷ್ಣ ಎಂಬ ಬಹುಮುಖಿ ಪ್ರತಿಭೆಯ ವೈದ್ಯ ಕವಿತೆ ಬರೆಯುತ್ತೇನೆಂದರೆ ಸಾಲುಗಳಿಗೂ ಹೊಸ ಉತ್ಸಾಹ ಬರದೇ ಉಳಿದೀತೆ? ಅದಕ್ಕೆಂದೇ ಕವಿತೆಗೂ ಇಲ್ಲಿ ನವಿರು ಗೆರೆಗಳಂತೆ ಒಂದೊಂದೇ ರೇಖೆಯ ಸಾಲಿನಲ್ಲಿ ಅದೆಷ್ಟು ಅರ್ಥವನ್ನು ಹೊಮ್ಮಿಸುತ್ತಿವೆ. ಆದರೆ ಈ ಸಾಲುಗಳೂ ಕೂಡ ಕೃಷ್ಣರಂತೆ ಅವರದ್ದೇ ಭಾವ ಲಹರಿಯಲ್ಲಿ ಇರುತ್ತವೆ ಎಂಬುದನ್ನು ಈ ಸಾಲು ಓದಿ ತಿಳಿದುಕೊಳ್ಳಿ ಗೆಲ್ಲಬೇಕೆಂಬ ಆಸೆಸೋಲೆಂದರೇನೆಂದು ತಿಳಿಯದಪ್ರತಿಸ್ಪರ್ಧಿಗಳ ಜೊತೆ ಎನ್ನುತ್ತಾರೆ ಕವಿ. ಈ ಸಾಲು ಅರ್ಥವಾಗಬೇಕೆಂದರೆ ಒಮ್ಮೆ ಕೃಷ್ಣರನ್ನು ಮುಖಾಮುಖಿಯಾಗಬೇಕು. ಯಾವ ಉದ್ವೇಗಕ್ಕೂ ಎಡೆಯಿಲ್ಲದ, ಮುಖದಲ್ಲಿನ ನಗು ಎಂದಿಗೂ ಬಾಡದ, ಎದುರಿಗಿದ್ದವರನ್ನೂ ನಿರಾಳವಾಗಿಸುವ ವ್ಯಕ್ತಿತ್ವ ಇವರದ್ದು. ಹೀಗಾಗಿಯೇ ಪ್ರಕೃತಿಯಲ್ಲಿ ಅರಳುವ ಹೂವು, ನದಿ, ಬಿಸಿಲು ಮುಂತಾದ ಸೋಲೆಂದರೇನೂ ಎಂದು ತಿಳಿಯದ ಪ್ರತಿಸ್ಪರ್ಧಿಗಳ ಜೊತೆ ಗೆಲ್ಲುವ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ. ಅವುಗಳನ್ನು ಗೆಲ್ಲುವುದೆಂದರೆ ನಮ್ಮನ್ನು ನಾವೇ ಗೆದ್ದಂತೆ. ಹೀಗಾಗಿಯೇ ಕೃಷ್ಣ ಯೋಚಿಸಿ ಪ್ರತಿಸ್ಪರ್ಧಿಗಳನ್ನು ಆಯ್ದುಕೊಳ್ಳುವ ಪರಿ ಕುತೂಹಲಕರವಾದ್ದದ್ದು. ಹೀಗಾಗಿ ತಮ್ಮ ಅಂದು..ಇಂದು.. ಎನ್ನುವ ಕವನದಲ್ಲಿ ರಾತ್ರಿ ಮನೆಯ ಚಾವಡಿಯಂಚಿನಲ್ಲಿ ದೇವರ ಹೆಸರನ್ನು ಸ್ಮರಣೆ ಮಾಡುತ್ತಿರುವ ಅಜ್ಜಯ್ಯ, ಉಸಿರಾಟದ ದನಿಯಿಂದ ಮಾತ್ರ ಜೀವವಿದೆ ಎಂದು ಗುರುತಿಸಬಹುದಾದ ಅಜ್ಜಿ, ಮಲಗಿದ್ದಾಳೋ ಅಥವಾ ಕುಳಿತಿದ್ದಾಳೆಯೋ ಎಂದೇ ಗೊತ್ತಾಗದ ಅಮ್ಮ, ಹೊಗೆ ಸೂಸುವ ಚಿಮಣಿ ಬೆಳಕು, ಕೊಟ್ಟಿಗೆಯಲ್ಲಿನ ಚಟಪಟ ಸದ್ದು, ಯಾವ ಕ್ಷಣದಲ್ಲಾದರೂ ಒಂದೆರಗಬಹುದಾದ ಕೆಟ್ಟಸುದ್ದಿಯ ನಿರೀಕ್ಷೆಯಲ್ಲೂ ಸೊಳ್ಳೆ ಕಚ್ಚಿದ್ದೂ ಗೊತ್ತಾಗದಂತೆ ನಿದ್ದೆ ಮಾಡುತ್ತಿದ್ದ ಕವಿ ಆಗ ಮಾತ್ರ ತಾನು ಸುಖವಾಗಿದ್ದೆ ಎನ್ನುತ್ತಾರೆ.   ಎಳವೆಯಲ್ಲೇ ಅಗಲಿದ ಅಪ್ಪಗೋಡೆ ಮೇಲೆ ರಾರಾಜಿಸುವಚಿತ್ರವೂ ಆಗಲಿಲ್ಲಅಸ್ಪಷ್ಟವಾಗಿಯೂಕಣ್ಣಭಿತ್ತಿಗೆ ಅಂಟಿ ಕೂರಲಿಲ್ಲಇಷ್ಟಾದರೂ ಮೊದಲ ಕವಿತೆಯಲ್ಲೇ ವಿಷಾದದ ಎಳೆಯೊಂದು ಇಣುಕುತ್ತದೆ. ಎಲ್ಲ ಮಕ್ಕಳಂತೆ ಪ್ರೀತಿಸುತ್ತ, ಗೆದ್ದಾಗ ಹೆಗಲಿಗೇರಿಸಿಕೊಂಡು, ನೌಕರಿ ಮಾಡುವಾಗ ದನಿ ಏರಿಸಿ ಖುಷಿ ತೋರಿಸುವ ಅಪ್ಪ ಇಲ್ಲವೆಂಬ ಭಾವವೇ ನೋವು ಕೊಡುವಾಗ, ಹಾಗೆ ಇಲ್ಲದ ಅಪ್ಪನ ಅಸ್ಪಷ್ಟ ಚಿತ್ರಣವೂ ಕೂಡ ಉಳಿಯದಷ್ಟು ಚಿಕ್ಕವರಿದ್ದಾಗಲೇ ತಂದೆ ತೀರಿ ಕೊಂಡಿದ್ದು ಎಂಬುದು ಇನ್ನೂ ಹೆಚ್ಚು ನೋವು ನೀಡುತ್ತದೆ. ಇದಕ್ಕೂ ಮೀರಿ ಅಪ್ಪ ಗೋಡೆಯ ಮೇಲಿನ ಫೋಟೋವಾಗಿ ಕೂಡ ಉಳಿಯದ ವೇದನೆಯೂ ಇಲ್ಲಿ ಸೇರಿದೆ. ನಾನು ಹುಟ್ಟುವುದಕ್ಕೆ ಐದು ದಿನ ಮೊದಲು ತೀರಿಕೊಂಡ ಅಜ್ಜಿ ಹಾಗೂ ನನಗೆ ವರ್ಷ ತುಂಬುವ ಮೊದಲೇ ಅಜ್ಜಿಯ ಜೊತೆಗೂಡುತ್ತೇನೆ ಎಂದು ಹೋದ ಅಜ್ಜನ ಫೋಟೋಕ್ಕಾಗಿ ನಾನು ದೊಡ್ಡವಳಾದ ಮೇಲೆ ನನ್ನ ಅಪ್ಪ ಹುಡುಕಾಡಿದ್ದು ನನಗೆ ನೆನಪಿದೆ. ಕೊನೆಗೂ ಅತ್ತೆಯ ಬಳಿ ಸಿಕ್ಕ ಚಿಕ್ಕ ಫೋಟೊವೊಂದರಲ್ಲಿ ಅಜ್ಜನಿದ್ದ. ಆದರೆ ಇಂದಿಗೂ ಅಜ್ಜಿಯ ಒಂದು ಫೋಟೋ ಕೂಡ ಇಲ್ಲ. ಆಗಲೆಲ್ಲ ಅಪ್ಪ ಒಂದು ಫೋಟೋ ತೆಗೆಸಿಕೊಳ್ಳಲೂ ಆಗದಷ್ಟು ಬಡತನವಿತ್ತು ಎಂದು ಆಗಾಗ ಹನಿಗಣ್ಣಾಗುತ್ತಾರೆ. ಇಲ್ಲಿಯೂ ಕೂಡ ಅಪ್ಪ ಗೋಡೆಯ ಫೋಟೋ ಆಗಾದರೂ ಇದ್ದಿದ್ದರೆ, ನೋಡಿದ ನೆನಪಿಲ್ಲವಾದರೂ ಮನದಲ್ಲೊಂದು ಆಕೃತಿಯಾದರೂ ಇದ್ದಿರುತ್ತಿತ್ತು ಎಂಬ ನೋವು ಇಲ್ಲಿ ಮಡುವುಗಟ್ಟಿದೆ. ಈ ಅಪ್ಪಂತ ಅಪ್ಪತನಕಾಲಿಗೆ ತಿಕ್ಕುತ್ತಸಂಕೋಚದಿಂದ ನಿಧಾನ-ವಾಗಿಜಾಗ ಮಾಡಿಕೊಂಡುಬೆಚ್ಚಗಾಗುವ ಬೆಕ್ಕು ಹಾಗಾದರೆ ಅಪ್ಪತನ, ಅಂದರೆ ತಾಯ್ತನ ಎನ್ನುವ ಹಾಗೆ ತಂದೆತನವೂ ಒಮದು ಅನುಭೂತಿಯೇ ಅಲ್ಲವೇ ಎಂದು ಕವಿ ಕೇಳುತ್ತಲೇ ಈ ಅಪ್ಪತನ ಎಂಬುದು ನಿಧಾನವಾಗಿ ಬೆಕ್ಕು ಬೆಚ್ಚಗಿನ ಜಾಗ ಹುಡುಕಿ ಹೋಗಿ ದಕ್ಕಿಸಿಕೊಳ್ಳುವಂತೆ ದಕ್ಕಿಸಿಕೊಳ್ಳಬೇಕಿದೆ ಎನ್ನುತ್ತಾರೆ. ತಾಯಿ ಎನ್ನುವುದು ಸತ್ಯ, ತಂದೆ ಎಂಬುದು ನಂಬಿಕೆ ಎನ್ನುವ ಮಾತು ಇಲ್ಲಿ ನೆನಪಾಗುತ್ತದೆ. ಆದರೆ ತಾಯ್ತನ ಹಾಗಲ್ಲ. ಅದಕ್ಕೊಂದು ನಿರ್ದಿಷ್ಟತೆ ಇದೆ. ಲೋಕ ಗರ್ಭದೊಳಗೆ ಬೀಜ ಮೊಳೆತ ದಿನದಿಂದಲೇ ತಾಯ್ತನವನ್ನು ಗುರುತಿಸುತ್ತದೆ.  ಆದರೂ ತಾಯ್ತನವನ್ನು ಗುರುತಿಸುವ ಹಾದಿ ಕೂಡ ನಾವು ಗುರುತಿಸಿ ಇದೇ ಎಂದು ಬೆರಳು ಮಾಡಿ ತೋರುವಷ್ಟು ಸುಲಭದಲ್ಲ. ಲೋಕೋತ್ತರ ಕವಿತೆ ಇಂತಹ ಎಲ್ಲ ಸಾಧ್ಯತೆಗಳನ್ನೂ ಹೇಳುತ್ತಲೇ ನಮ್ಮನ್ನು ನಯವಾದ ಮಾತಿನೊಳಗೇ ಬೆಚ್ಚಿ ಬೀಳುವಂತೆ ಮಾಡುತ್ತದೆ. ನೀನು ಹುಟ್ಟಿ ಬೆಳೆದಿದ್ದು ಆಳಿದ್ದುಇಲ್ಲೇ ಇರಬಹುದುಆದರೆ ನೀನು ಪ್ರವೇಶಿಸಿ ವಶಪಡಿಸಿಕೊಳ್ಳಬೇಕಾದ  ಲೋಕ ನಾನಲ್ಲ ಎನ್ನುತ್ತಾರೆ. ಈ ಸಾಲುಗಲಲ್ಲಿನ ಪ್ರಖರತೆ ಇಡೀ ಲೋಕವನ್ನು ಗಡಗಡನೆ ನಡುಗಿಸುವಮತಿದೆ. ಗಮಡಸುಕುಲ ಹುಡುಕುವ ಸುಖದ ಮೂಲವನ್ನು ಇಲ್ಲಿ ಕೆಲವೇ ಸಾಲುಗಳಲ್ಲಿ ಹಿಡಿದಿಟ್ಟು, ಭೂ ತಾಯಿ ಸಹನೆಯುಲ್ಳ ಹೆಣ್ಣು ತೋರುವ ದಾರಿಯನ್ನು ಅರಹುತ್ತದೆ. ಸಾವಿರ ಸೂರ್‍ಯರು ಕಣ್ಣಾಗಿರುವಸಾವಿರ ಕಡಲುಗಳು ಮೈಯಾಗಿರುವಲೋಕವಿದೆ ನೋಡುಅದರ ಕಿಂಡಿಯಷ್ಟೇ ನನ್ನ ಮೈಮೇಲಿದೆಸಾವಿರ ಸೂರ್‍ಯರು ಕೋರೈಸುವ ಅನುಭೂತಿ, ಸಾವಿರ ಕಡಲು ಆರ್ಭಟಿಸುವ ಸುಖದ ಮೊರೆತವನ್ನು ತಾಯಿ ತನ್ನ ಮೈಯ್ಯಿನ ಒಂದು ಕಿಂಡಿ ಎನ್ನುವ ಮಾತು ಇಡೀ ಗಂಡಸು ಕುಲವನ್ನೇ ನಡುಗಿಸುವಂತೆ ಮಾಡಬಲ್ಲದು.ಇಷ್ಟೆಲ್ಲ ಹೇಳುತ್ತಲೇ ಬಂಧ ಮುಕ್ತ ಎನ್ನುವ ಕವನದಲ್ಲಿ ಮನುಜನ ಜನ್ಮದ ಕುರಿತು ಹೇಳುತ್ತಾರೆ. ಒಂಬತ್ತು ತಿಂಗಳು ಕತ್ತಲ ಕೋಣೆಯಲ್ಲಿ ಕೂಡಿಹಾಕಿ, ಅಲ್ಲಿಯೇ ಮಲಮೂತ್ರ ಮಾಡಿಸಿ, ಸರಿಯಾದ ಜಾಗವೂ ಇರದೇ ಕವುಚಿಕೊಂಡ ಸ್ಥಿತಿಯಲ್ಲಿರುವ ಮನುಷ್ಯ ಹೊರಬಂದ ಕೂಡಲೇ ತನ್ನ ಒಂಬತ್ತು ತಿಂಗಳ ವಾಸಕ್ಕೆ ಬಾಯಿ ಬಾಯಿ ಬಡಿದುಕೊಳ್ಳದೇ ಇರುತ್ತಾನೆಯೇ ಎನ್ನುತ್ತಾರೆ. ಮಗು ಹುಟ್ಟಿದ ಕೂಡಲೇ ಅಳುವುದಕ್ಕೆ ಕವಿ ಕೊಡುವ ಕಾರಣ ಅವರ ವೈದ್ಯ ವೃತ್ತಿಗೆ ಅನುಗುಣವಾಗಿಯೇ ಇದೆ.   ಆದರೆ ಬದುಕು ನಾವು ಅಂದುಕೊಮಡಷ್ಟು ನಿರಾಳವಲ್ಲ. ಅದರ ಲೆಕ್ಕಾಚಾರವೇ ಬೇರೆ ಇರುತ್ತದೆ. ಯಾವುದೋ ಲೆಕ್ಕದಲ್ಲಿ ನಾವೊಂದು ಬಗೆದರೆ ಪ್ರಕೃತಿ ಇನ್ನೊಂದನ್ನೇ ಕಲಿಸುತ್ತದೆ.ತಾನು ಕೂರಿಸಿದ ಹನಿ ಮಂಜುಯಾವ ಗಳಿಗೆಯಲಿ  ಆವಿಯಾಯಿತು ಎಂದು ಕಣ್ಣು ಕಣ್ಣು ಬಿಡುವಂತಾಗುತ್ತದೆ. ಬದುಕೆಂಬ ಯಕ್ಷಗಾನದ ಬಯಲಿನಲ್ಲಿ ಅಥವಾ ಜೀವನವೆಂಬ ನಾಟಕಶಾಲೆಯಲ್ಲಿ ಅದೆಷ್ಟೋ ಮಂದಿ ನಾಟಕ ನೋಡಿ ಶೇಂಗಾ ತಿಂದು, ಸಿಳ್ಳೆ ಹೊಡೆದು ಮಜಾ ಮಾಡಲೆಂದೇ ಬಂದಿರುತ್ತಾರೆ. ಆದರೆ ಬೆಳಗೆದ್ದು ನೋಡಿದರೆ ಬಾಯಿಗೆ ಹೊಡೆಯುವಾಗ ಕೈ ತಪ್ಪಿ ಕೆಳಗೆ ಬಿದ್ದು ಹೋದ ಶೇಂಗಾ ಕಾಳನ್ನು ಆರಿಸಲೆಂದು ಬಂದಿರುವವರನ್ನು ನಾವಿಲ್ಲಿ ಕಾಣುತ್ತೇವೆ. ಬೆಳಿಗ್ಗೆಶಾಲೆಗೆ ಹೋಗುವಾಗಹರಿದಂಗಿ ರವಿಕೆತೊಟ್ಟ ಮಂದಿಆಟದ ಅಂಗಳಸಂದುಗೊಂದಿಯಲ್ಲಿಬಿದ್ದ ಕಾಳುಗಳಿಗಾಗಿಹುಡುಕಾಟ ನಡೆಸಿದ್ದವುಹೀಗಾಗಿ ಬದುಕು ನಾವೆಂದುಕೊಂಡಷ್ಟು ಸರಳವೂ ಅಲ್ಲ. ಸುಲಲಿತವೂ ಅಲ್ಲ. ಅದಕ್ಕೆ ಅದರದ್ದೇ ಆದ ಗತಿಯಿದೆ. ಅದರದ್ದೇ ಆದ ಚಾರಣವಿದೆ. ಇಲ್ಲಿ ಎಲ್ಲರೂ ಸಭ್ಯರೇ ಅವರೊಳಗಿನ ಹುಳುಕು ಹೊರಬೀಳುವವರೆಗೆ. ಹೀಗಾಗಿ ತನ್ನ ನೋವನ್ನು ತೋಡಿಕೊಳ್ಳುವುದಾದರೂ ಯಾರಲ್ಲಿ ಎಂಬ ಆತಂಕ ಎಲ್ಲರಿಗಿರುವಂತೆ ಕವಿಗೂ ಇದೆ.ಯಾರ್‍ಯಾರಹುಡುಕುತ್ತ ಹೋಗಲಿ?ಒಬ್ಬರನೇ ಆತುಕೊಂಡರೆನನ್ನ ಅನಂತ ದುಃಖಕ್ಕೆಅವರು ದಣಿದಾರುನಮ್ಮ ನೋವನ್ನು ಇನ್ನೊಬ್ಬರ ಹೆಗಲಿಗೆ ಹೊರೆಸುತ್ತ ಹೋದರೆ ಅವರ ಭುಜವೂ ದಣಿದೀತು ಎಂಬ ಭಯವೂ ಕವಿಗಿದೆ. ಆದರೆ ದಣಿದರೂ ಪರಸ್ಪರ ಸಹಾಯ ಮಾಡುವುದನ್ನು ನೆಚ್ಚಿಕೊಂಡವರು ನಿಲ್ಲಿಸಲಾರರು ತಾವೂ ಅಂತಹುದ್ದೇ ಸ್ಥಿತಿ ಹೀಗಾಗಿ ಕವಿ ‘ನಾ ಬಂದ ದಾರಿಯಲೆ ಬಂದವರು’ ಎಂಬ ಕವಿತೆಯಲ್ಲಿ ಬಹು ದೂರದಿಂದ ನಡೆದು ಅಂಗಾಲನ್ನು ಸುಟ್ಟುಕೊಂಡು, ನಿರ್ಜಲಿಕರಣಗೊಂಡು ಮೈಚಾಚಿ ಮಲಗಿದಾಗ ಆರೈಕೆ ಮಾಡಿದವರು ತಮ್ಮ ಪಾದಗಳನ್ನು ತೋರಿಸಲಿಲ್ಲ ಎನ್ನುತ್ತಾರೆ.  ಬದುಕಿನಲ್ಲಿ ಅಂತಹುದ್ದೇ ನೋವು ಅನುಭವಿಸಿ ಜೊತೆಗೆ ಹೆಚ್ಚೆ ಇಟ್ಟವರಷ್ಟೇ ಅಂತಹ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲರು. ಹೀಗಾಗಿಯೇ ಬಳ್ಳಿ ಮತ್ತು ಮರದ ಉದಾಹರಣೆಯನ್ನು ನಮ್ಮ ಎದುರಿಗೆ ಇಡುತ್ತಾರೆ ಕವಿ. ಬಳ್ಳಿಯ ಮೃದುತ್ವ ಹಾಗು ಮರದ ತೊಗಟೆಯ ಒರಟುತನವನ್ನು ವಿವರಿಸುತ್ತಾರೆ. ಬಳ್ಳಿಯಲ್ಲಾದ ಹೂವಿನ ಗಂಧವನ್ನು ಅನುಭವಿಸಿ ಮತ್ತೆ ಚಿಗುರುವ ಹುಮ್ಮಸ್ಸು ತೋರುತ್ತದೆ ಮರ. ಬದುಕೇ ಹೀಗೆ. ಮುಗಿದೇ ಹೋಯಿತು ಎನ್ನುವಾಗಲೇ ಅರಿವಾಗದ ಯಾವುದೋ ಒಂದು ಅನುಭವ ಮತ್ತಿಷ್ಟು ಬದುಕನ್ನು ಬದುಕಲಿ ಪ್ರೇರೇಪಿಸುತ್ತದೆ. ಮತ್ತು ಹಾಗೆ ಪರಸ್ಪರರ ಬದುಕನ್ನು ಪ್ರೋತ್ಸಾಹಿಸಲೇಬೇಕು. ಬದುಕೆಂದರೆ ನಮ್ಮ ಹೆಗಲ ಮೇಲೆ ನಾವೆ ತಲೆಯಿಟ್ಟುಕೊಂಡು ಅಳುವ ಏಕಪಾತ್ರಾಭಿನಯ ಅಲ್ಲವಲ್ಲ? ಸ್ವಾತಂತ್ರದಲ್ಲಿ ‘ಪಾಲು’ ಕೇಳುವ ರಾಜನ ಕಥೆಯೂ ಇಲ್ಲಿದೆ. ಕೈದಿ ತಾನೇಕೆ ಬಂಧಿ ಎಂದರೆ ಮಹಾರಾಜ ಅವನ ಸ್ವಾತಂತ್ರ್ಯದಲ್ಲಿ ಪಾಲು ಕೇಳುತ್ತಾನೆ. ಕೊನೆಗೆ ಕೈದಿ ಹೊರನಡೆದರೆ ರಾಜ ಒಳಗೆ ಬಂಧಿಯಾಗುತ್ತಾನೆ. ಇನ್ನೂ ಅಂಗಡಿಗೆ ಜಾಗವನ್ನೇ ನೋಡದೇ ಅಂಗಡಿಯಲ್ಲಿ ಬೆಳಗೆದ್ದು ಏನೇನು ಮಾಡಬೇಕು ಎಂಬುದನ್ನು ಕನಸುವ ಈ ಕಥೆ ತಾನು ಮಹಾರಾಜನಾದರೆ ಎನ್ನುವ ತಿರುಕನ ಕನಸನ್ನು ನೆನಪಿಸುವಂತಿದೆ.ಮಂತ್ರ ಎಂಬ ಕವನವನ್ನು ಕವನಾಸಕ್ತರೆಲ್ಲರೂ ಓದಿ ನೋಡಬೇಕು. ಇಲ್ಲಿ ಕಾಡುವುದು ಮನದ ಬಯಕೆಯೋ, ಕವನದ ಹಂಬಲವೋ?  ಒಟ್ಟಿನಲ್ಲಿ ಕವನವೂ ಮೈ ಬಿಸಿ ಏರಿಸುವ ಒಂದು ಅದ್ಭುತ. ಬಿಳಿ ಹಾಳೆಗಳ ಮೇಲೆ ಉದುರಿದ ಅಕ್ಷರ ಹನಿಗಳು ಒಂದಕ್ಕೊಂದು ಸೇರಿ ಚಕ್ರವ್ಯೂಹವಾಗುವ ಹೊತ್ತಿನಲ್ಲಿ ಏನೂ ಬರೆಯದೇ ಕೈ ಸ್ಥಬ್ಧವಾಗಬಹುದು, ಆದರೆ ಕೊನೆಗೆ ಅಕ್ಷರಗಳೆಲ್ಲ ಮಂಗಮಾಯವಾಗಿ ತುಟಿ ಉಸಿರಿದ ಮಂತ್ರ ಇಬ್ಬರಿಗಷ್ಟೇ ಕೇಳುವ ಚೋದ್ಯವಿದೆಯಲ್ಲ ಅದು ನಿಜಕ್ಕೂ ಅನುಭವಿಸಿಯೇ ತಿಳಿಯಬೇಕಾದ್ದು.       ಇದರ ನಡುವೆ ಕವಿ ಹೇಳುವ ಒಂದು ಕವನ ನನಗೆ ನಾನೇ ಹೇಳಿಕೊಂಡಂತಿದೆ. ನನಗೆ ಇಷ್ಟವಾದ ಕವನ ಕೂಡ ಇದು. ಕವನ ಬರೆಯುವ ಪ್ರೊಸೆಸ್‌ನ್ನು ಕವಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ಸಲ ಕವನ ಬರೆದು ಬಿಟ್ಟರೆ ಸಾಲದು, ಅದನ್ನು ಕುಳಿತು ತಿದ್ದಬೇಕು ಎನ್ನುತ್ತಾರೆ ತಿಳಿದವರು, ಅತವಾ ಹಿರಿಯ ಕವಿಗಳು. ಒಮ್ಮೆ ಬರೆದದ್ದನ್ನು ಮತ್ತೆರಡು ದಿನಬಿಟ್ಟು ನೋಡಿ ಪುನಃ ತೀಡಬೇಕು. ಥೇಟ್ ಮಗು ಹುಟ್ಟಿದನಂತರ ಹೊಕ್ಕಳ ಬಳ್ಳಿ ಕತ್ತರಿಸಿ, ಸ್ನಾನ ಮಾಡಿಸಿ, ಪೌಡರ್ ಲೇಪಿಸಿ ಮಗುವನ್ನು ಅಂದಗಾಣಿಸುವ ಅಮ್ಮಂದಿರ ಹಾಗೆ ಕವಿತೆಯನ್ನೂ ಆಗಾಗ ತಿದ್ದಿ ಬೇಡದ್ದನ್ನು ತೆಗೆದು ಹಾಕಿ, ಬಲಸಿದ ಪದಗಳಿಗೆ ಇನ್ನಷ್ಟು ಮೆರಗು ಬರುವಂತೆ ಮಾಡಿ ಚಂದಗಾನಿಸಬೇಕು. ಇದೆಲ್ಲ ನಿಜ. ಆದರೆ ನನ್ನಂಥಹ ಆಲಸಿಗಲಿಗೆ ಅದೆಲ್ಲ ಹೇಗೆ ಸಾಧ್ಯ? ಒಮ್ಮೆ ಕವನ ಬರೆಯುವುದೆಂದರೆ ಒಂಬತ್ತು ತಿಂಗಳು ಹೊತ್ತುಕೊಂಡ ಹೊರೆಯನ್ನು ಒಮ್ಮೆ ಇಳಿಸಿ ನಿರಾಳವಾದಂತೆ ಎಂದುಕೊಳ್ಳುವ ನನಗೆ ಕವನಗಳೂ ಅಷ್ಟೇ. ನನ್ನ ಎರಡನೇ ಮಗ ಹುಟ್ಟಿದಾಗ ಹೆಣ್ಣು ಮಗುವಲ್ಲ, ಇದೂ ಗಂಡೇ ಎಂದು ನನಗೆ ಬೇಡ ಎಂದು ಮುಖ ತಿರುವಿದ್ದೆ, ಸುಮಾರು ಒಂದಿಡೀ ದಿನ ಆ ಮಗು ಅದರ ಅಪ್ಪನ ಕೈಯ್ಯಲ್ಲೇ ಇತ್ತು. ನಂತರ ಅಳತೊಡಗಿದಾಗಷ್ಟೇ ಮಗುವನ್ನು ಹತ್ತಿರ ತಂದುಕೊಂಡಿದ್ದೆ. ನನ್ನ ಕವಿತೆಗಳೂ ಅಷ್ಟೇ. ಒಮ್ಮೆ ಬರೆದು ಎತ್ತಿಟ್ಟುಬಿಟ್ಟರೆ ಮತ್ತೆ ಅದನ್ನು ನೋಡುವುದು ಸಂಕಲನಕ್ಕೆ ಕವನಗಳಿವೆಯೇ ಎಂದು ಹುಡುಕುವಾಗಲೇ. ಇಲ್ಲಿ ಕವಿ ಕೂಡ ಇದೇ ಮಾತನ್ನು ಹೇಳುತ್ತಾರೆ. ಕವಿತೆ ಹಾಗೆಯೇ ಬೆತ್ತಲಾಗಿಯೇ ಇರಬೇಕು ಎಂದು ಸಮರ್ಥಿಸಿಕೊಳ್ಳುತ್ತಾರೆ. ತಿದ್ದಾಟದ ಒದ್ದಾಟದ ಮುಖವಾಡವನ್ನು ಧರಿಸಲು ಸಿದ್ಧರಿಲ್ಲದ ಈ ನಿಲುವು ನನ್ನದೇ ನಿಲುವೆನಿಸಿ ಆಪ್ತವಾಗಿದ್ದಂತು ಹೌದು.   ಮೂರು ಆಯಾಮಗಳು ಎನ್ನುವ ಕವಿತೆ ಕ್ಷೌರದ ಬಗ್ಗೆ ಹೇಳುತ್ತ ಹೋಗುತ್ತದೆಯಾದರೂ ಮನುಷ್ಯ ಜೀವನದ ಮೂರು ಅವಸ್ಥೆಗಳನ್ನು ಚಿತ್ರಿಸುತ್ತದೆ. ಬಾಲ್ಯದಲ್ಲಿ ಎಲ್ಲಾ ಮಕ್ಕಳೂ ಕ್ಷೌರಿಕನಿಗೆ ಹೆದರುವವರೇ. ಆತ ಕತ್ತರಿ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ         ಯಾರಾದರೂ ವ್ಯಾಟ್ಸ್‌ಆಪ್ ಅಥವಾ ಫೇಸ್‌ಬುಕ್‌ನ ಇನ್ ಬಾಕ್ಸ್‌ಗೆ ಬಂದು ಅಡ್ರೆಸ್ ಕೊಡಲು ಕೇಳಿದರೆ ನಾನು ಮಾತನಾಡದೇ ಕೊಟ್ಟುಬಿಡುವುದು ನನಗೆ ರೂಢಿಯಾಗಿಬಿಟ್ಟಿದೆ. ಯಾಕೆಂದರೆ ಬಹುತೇಕ ಹಾಗೆ ಕೇಳುವವರು ಸಾಹಿತಿ ಮಿತ್ರರೇ. ಅದೂ ಆಗಷ್ಟೇ ಅವರ ಪುಸ್ತಕ ಪ್ರಕಟವಾದವರು. ಹೀಗಾಗಿ ಪ್ರಕಾಶ ನಾಯಕರು ವಿಳಾಸ ತಿಳಿಸು ಎಂದು ವ್ಯಾಟ್ಸ್ ಆಪ್‌ನಲ್ಲಿ ಕೇಳಿದಾಗ ಅವರ ಅಂತೂ ಫೇಸ್‌ಬುಕ್‌ನಲ್ಲಿ ಸದ್ದು ಮಾಡ್ತಿರೋದನ್ನು ಗಮನಿಸಿದ್ದರಿಂದ ಅಷ್ಟೇನು ಗಮನವಹಿಸದೇ ಕೊಟ್ಟುಬಿಟ್ಟೆ. ಅದಾದ ನಂತರ ನನಗೆ ಒಂದೇ ಸಮನೆ ಯೋಚನೆ ಪ್ರಾರಂಭವಾಯಿತು. ಈ ಪ್ರಕಾಶಣ್ಣ ಎಲ್ಲಿಂದ ಪುಸ್ತಕ ಕಳಿಸ್ತಾರೆ? ಕ್ಯಾಲಿಪೋರ್ನಿಯಾದಿಂದ ಕಳಿಸಿದರೆ ನನಗೆ ಎಷ್ಟು ದಿನಕ್ಕೆ ಬಂದು ತಲುಪಬಹುದು? ಒಂದು ಕ್ಷಣ ಯೋಚನೆಯಾಯಿತಾದರೂ ನಂತರ ನಾನು ಯಾವಾಗಲೂ ಹೇಳಿಕೊಳ್ಳುವಂತೆ ‘ಮುಂದಿನ ಜನ್ಮದಲ್ಲಿ ಸಿಗಬಹುದು ಬಿಡು,’ ನನಗೆ ನಾನೇ ಹೇಳಿಕೊಂಡು ಸಮಾಧಾನ ಮಾಡಿಕೊಂಡೆ. ಆದರೆ ಈ ಮಾತುಕತೆ ನಡೆದು ನಾಲ್ಕನೇ ದಿನಕ್ಕೆ ನಾನು ಮನೆ ತಲುಪುವ ಹೊತ್ತಿಗೆ ಮನೆಯ ಮುಂದಿನ ಟಿಪಾಯಿಯ ಮೇಲೆ  ನನ್ನ ಖುಷಿ ಹೆಚ್ಚಿಸುವಂತೆ ಈ ಪುಸ್ತಕ ಕುಳಿತಿತ್ತು. ನನಗೆ ಅಚ್ಚಿರಿಯಾಗುವಂತೆ ನಾನು ಹೇಳಿದಂತೆ ಮುಂದಿನ ಜನ್ಮಕ್ಕೂ ಈ ಕಥೆಗೂ ತೀರಾ ಸಾಮ್ಯವಿದೆ.     ಇಡೀ ಕಥೆಯು ಅನಿವಾಸಿ ಭಾರತೀಯರ ಸುತ್ತ ಸುತ್ತುತ್ತ ಹೋಗುತ್ತದೆ. ಇಲ್ಲಿ ಕಥೆ ಹೇಳುವ ಪ್ರಥಮ ಪುರುಷ ಕಥೆಯನ್ನು ಕಥೆಯಾಗಿಸಲು ಒಂದು ವೇದಿಕೆ ಅಷ್ಟೆ. ಆದರೆ ಇಡೀ ಕಥೆ ನಮ್ಮನ್ನು ನಮ್ಮದೇ ಕಾಲಚಕ್ರದ ನಡುವಲ್ಲಿ ಕುಳ್ಳಿರಿಸಿ ಸುತ್ತುವಂತೆ ಮಾಡುತ್ತದೆ. ಯಾಕೆಂದರೆ ಘಟನೆ ನಡೆಯುವುದು ಅಮೇರಿಕಾದಲ್ಲೇ ಆದರೂ  ಕಾದಂಬರಿಕಾರರೇ ಒಂದು ಕಡೆ ಬಳಸಿರುವಂತೆ  ನಮ್ಮನ್ನು ಅರ್ಧ ಭೂಗೋಳ ಸುತ್ತಿಸಿ ಅಮೇರಿಕಾಕ್ಕೆ ಕರೆದೊಯ್ಯುವುದು ನಮ್ಮದೇ ಸುತ್ತಮುತ್ತಲಿನ ಪಾತ್ರಗಳು. ಕೇವಲ ಏಳೆಂಟು ಕಿ.ಮಿ ದೂರವಿರುವ ನಮ್ಮ ಪಾಲಿಗೆ ಪರಿಚಿತವೆಂದರೆ ಪರಿಚಿತವಲ್ಲದ, ಏನೂ ತಿಳಿಯದು ಎಂದು ಕೈ ಚೆಲ್ಲಿದರೂ ಯಾರೂ ನಂಬದ ಗೋಕರ್ಣದ ಪಿರ್ಕಿಬಾಬಾ ಎನ್ನುವವ ಹೇಳಿದ್ದ ಎನ್ನುವ ವಾಕ್ಯದಿಂದಲೇ ಪ್ರಾರಂಭವಾಗುತ್ತದೆ. ‘ಬದುಕಿದವರು ಸಾಯಲಾರರು, ಸಾಯುವವರು ಬದುಕಲಾರರು.’ ಎನ್ನುವ ಕಾದಂಬರಿಯ ಮೊದಲ ವಾಕ್ಯವೇ ಇಡೀ ಕಾದಂಬರಿಯನ್ನು ತನ್ನೊಳಗೆ ನಿಗೂಢವಾಗಿ ಬಚ್ಚಿಟ್ಟುಕೊಂಡಿದೆಯೇನೋ ಎಂಬಂತೆ ತೋರುತ್ತದೆ. ಅಂಕೋಲಾದ ಬಸ್ ಸ್ಟಾಂಡಿನಲ್ಲಿ ಯಾವಾಗಲೂ ಒಬ್ಬ ಹುಚ್ಚ ಇರುತ್ತಿದ್ದ. ನಾಕಾಣಿ ಕೊಡಾ… ಎನ್ನುತ್ತ ಬೇಡಲು ಬರುವ ಅವನಿಗೆ ನೀವು ನೂರು ರೂಪಾಯಿ ನೀಡಿದರೂ ತಿರಸ್ಕರಿಸಿ ಬಿಡುತ್ತಿದ್ದ. ಆತ ಕೇಳುವುದು ಕೇವಲ ನಾಲ್ಕಾಣೆ. ಅದಕ್ಕಿಂತ ಹೆಚ್ಚಿಗೆ ಕೊಟ್ಟರೆ ಅದು ಅವನಿಗೆ ಅಪಥ್ಯ. ಅದನ್ನು ನೋಡಿದಾಗಲೆಲ್ಲ ನಮಗೆ ತಮಾಷೆ. ನಾನು ಮತ್ತು ಗೆಳತಿ ರಾಜಶ್ರೀ ಹತ್ತು ರೂಪಾಯಿಯ ನೋಟು ಹಿಡಿದು, ‘ಹಿಡಿ ತಕ್ಕಾ. ಮಜಾ ಮಾಡ್…’ ಎನ್ನುತ್ತಿದ್ದರೆ ಆತ ಅದೇನೋ ವಿಷಸರ್ಪ ಎಂಬಂತೆ ಹತ್ತು ರೂಪಾಯಿಯ ನೋಟನ್ನು ಕಂಡು ಬೆಚ್ಚಿ ಬೀಳುತ್ತಿದ್ದ. ನಮಗೋ ಹತ್ತು ರೂಪಾಯಿಯನ್ನು ತಿರಸ್ಕರಿಸಿ ‘ನಾಕಾಣಿ ಕುಡಾ..’ ಎನ್ನುವ ಅವನು ಕೇವಲ ಹುಚ್ಚನಾಗಿ ಅಲ್ಲ, ಮಹಾ ಪಿರ್ಕಿಯಾಗಿ ಕಾಣುತ್ತಿದ್ದ. ನಂತರದ ದಿನಗಳಲ್ಲಿ ಅದೆಷ್ಟೋ ಸಲ ಯೋಚಿಸಿದ್ದೇನೆ. ಬದುಕಿಗೆ ಸಾಕಾಗುವ ನಾಲ್ಕಾಣೆಯನ್ನು ಬಿಟ್ಟು ನಾವು ನಮಗೆ ಬೇಕಿಲ್ಲದ ಹತ್ತು ರೂಪಾಯಿಯ ಹಿಂದೆ ಓಡುತ್ತಿದ್ದೇವೇನೋ ಎಂದು. ಇಲ್ಲಿನ ಕಥೆಯೂ ಇದಕ್ಕೆ ಅನುಗುಣವಾಗಿಯೇ ಇದೆ.     ಬದುಕಿನಲ್ಲಿ ಖುಷಿಯಾಗಿರುವುದಕ್ಕೆ ನಮಗೇನು ಬೇಕು? ಎಷ್ಟು ಹಣ ಬೇಕು? ಎಂತಹ ಅಧಿಕಾರ ಬೇಕು?  ಅಥವಾ ಎಂತಹ ಉದ್ಯೋಗ ಬೇಕು? ಇದು ಸಹಜವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. ಕೆಲವು ದಿನಗಳ ಹಿಂದೆ ಈ ವರ್ಷದ ಎಸ್.ಎಸ್.ಎಲ್.ಸಿ ಮುಗಿಸಿ ಮುಂದಿನ ಓದಿಗೆ ಹತ್ತನೇ ತರಗತಿಯ ವರ್ಗಾವಣೆ ಪತ್ರ ಪಡೆಯಲು ಬಂದಿದ್ದ ಹುಡುಗನೊಬ್ಬನನ್ನು ‘ಮುಂದೆ ಏನು ಮಾಡ್ತೀಯಪ್ಪಾ’ ಎಂದು ಸಹಜವಾಗಿ ಎಲ್ಲರನ್ನೂ ಕೇಳುವಂತೆಯೇ ಪ್ರಶ್ನಿಸಿದೆವು. ಆತ ಕೂಡ ಅದೊಂದು ಸಹಜ ವಿಷಯ ಎಂಬಂತೆ ‘ಪಿಯುಸಿ ಮುಗಿದ ಕೂಡಲೇ ಗಲ್ಫ್‌ಗೆ ಹೋಗಿ ಬಿಡ್ತೇನೆ ಟೀಚರ್, ಅಲ್ಲಿ ಹೋದರೆ ಜಾಸ್ತಿ ದುಡಿದು, ಹಣ ಸಂಪಾದನೆ ಮಾಡಬಹುದು.’ ಎಂದ. ಯಾಕೆಂದರೆ ಅವನ ಮನೆಯಲ್ಲಿ ಈಗಾಗಲೆ ಬಹಳಷ್ಟು ಜನ ಉದ್ಯೋಗದ ನಿಮಿತ್ತ ಹೊರದೇಶಗಳಿಗೆ ಹೋಗಿದ್ದಾರೆ. ಪಿಯುಸಿ ಮುಗಿಸಿದ ತಕ್ಷಣವೇ ಒಂದು ಪಾಸ್‌ಪೋರ್ಟ್ ಮಾಡಿಸಿ, ವೀಸಾ ಮಾಡಿಕೊಂಡು ಹೊರಟು ಬಿಡುವ ಅದೆಷ್ಟೋ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಹಾಗಾದರೆ ಭಾರತಕ್ಕಿಂತ ಅಲ್ಲಿ ಅವರ ಜೀವನಮಟ್ಟ ಒಳ್ಳೆಯದಾಗಿರುತ್ತದೆಯೇ? ಅಥವಾ ಭಾರತಕ್ಕಿಂತ ಸುಖೀ ಜೀವನ ನಡೆಸಲು ಸಾಧ್ಯವೇ? ಹಾಗೆಂದು ನಿಖರವಾಗಿ ಹೇಳಲು ಬರುವುದೇ ಇಲ್ಲ. ಇಲ್ಲಿ ಯಾವ್ಯಾವುದೋ ಕನಸನ್ನು ಇಟ್ಟುಕೊಂಡು ಹೋದವರು ಅಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿಯೋ, ಕಸ ಬಳಿಯಲೋ ಅಥವಾ ಅದಕ್ಕಿಂತ ಕನಿಷ್ಟ ಕೆಲಸಗಳಿಗೆ ನೇಮಕವಾದ ವಿಷಯ ಊರಿನ ಬಾಯಿಂದ ನುಣುಚಿಕೊಳ್ಳುವುದಿಲ್ಲ. ಆದರೆ ಮೂರು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿದಾಗ ಮಾತ್ರ ಅವರಿಗೆ ರಾಜ ಮರ್ಯಾದೆ ದೊರಕುತ್ತದೆ. ಅಂತೂ ಓದಿದಾಗ ಈ ಎಲ್ಲಾ ವಿಷಯಗಳೂ ಕಣ್ಣಿಗೆ ಕಟ್ಟುತ್ತವೆ. ಅಮೇರಿಕಾದಂತಹ ದೇಶಗಳಲ್ಲಿ ನಮ್ಮ ವಿದ್ಯೆಯನ್ನು ಅಡವಿಟ್ಟುಕೊಳ್ಳುವ ಪ್ರಕ್ರಿಯೆಯ ಚಂದದ ಚಿತ್ರಣವಿದೆ.                    ಇಲ್ಲಿ ಪ್ರಥಮ ಪುರುಷದಲ್ಲಿ ಬರುವ ನಿರೂಪಣೆಗಾರ ಕಾದಂಬರಿಗೆ ಒಂದು ಕುತೂಹಲದ ಪ್ರವೇಶಿಕೆಯನ್ನು ಹಾಕಿಕೊಡುತ್ತಾನೆ. ಅಲ್ಲೇ ಸನಿಹದಲ್ಲಿರುವ ಭಾರತೀಯ ಮೂಲದ ಕೌಶಿಕ್ ಕೃಷ್ಣ ಎನ್ನುವ ಜೀವ-ಭೌತ ವಿಜ್ಞಾನಿಯ ಹೆಂಡತಿ ಆಡ್ರಿಯಾನಾಳ ಆತ್ಮಹತ್ಯೆಯ ಕುರಿತಾಗಿ ಪೇಪರ್‌ನಲ್ಲಿ ಬಂದ ವಿಷಯವನ್ನು ಆಧರಿಸಿ ಲೇಖನ ಬರೆದು, ಅದಕ್ಕೆ ಒಬ್ಬ ಭಾರತೀಯ ಮೂಲದವನೇ ಆದ ಇನ್ನೊಬ್ಬನ ತೀಕ್ಷ್ಣ ಪ್ರತಿಕ್ರಿಯೆ ಬಂದಾಗಲೇ ಅರಿವಾಗುವುದು ಇದು ಸುಲಭದಲ್ಲಿ ಅರಿವಾಗದ ಚಕ್ರವ್ಯೂಹ ಎಂಬುದು. ಇಲ್ಲಿ ಪ್ರಕಾಶ ನಾಯಕರು ಬಳಸಿರುವ ಮಾತು ಮತ್ತು ಭಾಷೆಯನ್ನು ಗಮನಿಸಬೇಕು. ಒಬ್ಬ ನುರಿತ ತತ್ವಶಾಸ್ತ್ರ ಪ್ರಾಧ್ಯಾಪಕನು ತರಗತಿ ತೆಗೆದುಕೊಂಡಂತಿದೆ. ತನ್ನ ಸಹೋದ್ಯೋಗಿ ವಿವಿಯನ್‌ನ ಬಾಯಿಂದ ಆಡಿಸುವ ಈ ಮಾತುಗಳನ್ನೇ ಕೇಳಿ. ಹಾಗೆ ನೋಡಿದರೆ ಎಲ್ಲಾ ಕೊಲೆಗಳೂ ಆತ್ಮಹತ್ಯೆಗಳೇ. ತನ್ನ ಅಸ್ತಿತ್ವದಿಂದ ಬೇರೆಯವರಿಗೆ ಸಹಿಸಲಾಗದ ನಷ್ಟವೋ ಅಥವಾ ತನ್ನ ಸಾವಿನಿಂದ ಕಡೆಗಣಿಸಲಾಗದ ಲಾಭವೋ ಆಗುವಂತೆ ಮಾಡುವಲ್ಲಿ ಕೊಲೆಗೀಡಾಗುವವನ ಜವಾಬ್ಧಾರಿಯೇನು ಕಡಿಮೆಯೇ? ತನ್ನ ಸಾವಿನ ನಂತರ ಜೀವಂತ ಮನುಷ್ಯನನ್ನು ಅಪಮಾನದ ಬೇಗೆ ಅಥವಾ ಪಶ್ಚಾತ್ತಾಪದ ಉರಿಯಲ್ಲಿ ಬೇಯುವಂತೆ ಮಾಡುವುದು ಕೊಲೆಗಿಂತ ಹೇಯ. ಒಂದು ಕೊಲೆಯನ್ನು ಅಥವಾ ಆತ್ಮಹತ್ಯೆಯನ್ನು ಹೀಗೂ ನೋಡಬಹುದು ಎನ್ನುತ್ತದೆ. ಕಾದಂಬರಿಯ ತುಂಬ ಇಂತಹ ತರ್ಕ ವಿತರ್ಕಗಳು ತನ್ನ ಇರುವನ್ನು ಸಾಧಿಸುತ್ತಲೇ ಹೋಗುತ್ತದೆ.    ಕೌಶಿಕ್ ಕೃಷ್ಣ ತಾನಾಗಿಯೇ ಸಾವನ್ನು ತಂದುಕೊಳ್ಳುವ ಆ ಮೂಲಕ ಆತ್ಮವನ್ನು ಹಿಡಿದಿಟ್ಟುಕೊಂಡು  ಅದನ್ನು ಇನ್ನೊಂದು ಶರೀರಕ್ಕೆ ರವಾನಿಸುವ ಹೊಸ ಪ್ರಯೋಗವನ್ನು ಮಾಡುವ ನಿಟ್ಟಿನಲ್ಲಿ ಪೆಗಾಸಿಸ್ ಎನ್ನುವ ಯಂತ್ರವನ್ನು ಕಂಡು ಹಿಡಿಯುವುದು, ಅದಕ್ಕೆ ಎಲ್ಲವನ್ನೂ ವ್ಯವಹಾರದ ದೃಷ್ಟಿಯಿಂದಲೇ ನೋಡುತ್ತ, ಈ ತರಹದ ಆಧ್ಯಾತ್ಮಿಕ ವಿಷಯಗಳನ್ನು ಒಪ್ಪದ ಅಭಿಜಿತ್ ಕಿಮಾನಿ ಹಣ ಹೂಡುವುದು ಎಲ್ಲವೂ ವಿಚಿತ್ರವೇ. ಅವನ ಆಫೀಸಿನಲ್ಲಿ ಎಲ್ಲಿಯೂ ಸರಿಯಾಗಿ ಕೆಲಸ ಮಾಡದ, ಅಲೆಮಾರಿಯಾಗಿಯೇ ಬದುಕಬೇಕೆನ್ನುತ್ತ ಕೇವಲ ವಾರ, ತಿಂಗಳುಗಳ ಲೆಕ್ಕದಲ್ಲಿ ಕೆಲಸ ಮಾಡುವ ದಿಗಂಬರ ಸೇರಿಕೊಳ್ಳುವುದೂ ಕೂಡ. ಇಲ್ಲಿಯೇ ಅಮೇರಿಕಾದಲ್ಲಿರುವ ಭಾರತೀಯರ ಜೀವನದ ಅನಾವರಣವಾಗುತ್ತದೆ. ‘ಅಮೇರಿಕಾದಲ್ಲಿದ್ದಾನೆ. ಇಂಜಿನಿಯರ್.’ ಎಂದುಕೊಳ್ಳುತ್ತ ಇಲ್ಲಿಯವರು ಮೆರೆಸುವಾಗ ಅಲ್ಲಿ ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವುದೂ ಇದೆ. ಮಕ್ಕಳನ್ನು ಓದಿಸಿ ಪರದೇಶಿಗಳನ್ನಾಗಿ ಮಾಡುವ ತಂದೆ ತಾಯಿಯರು ಇದನ್ನು ಒಮ್ಮೆಯಾದರೂ ಓದಬೇಕು ಎಂದೆನ್ನಿಸುತ್ತದೆ.    ಕೌಶಿಕ್ ಕೃಷ್ಣನ ಪ್ರಯೋಗಕ್ಕಾಗಿ ಹಣ ಹಾಗೂ ಪ್ರಾಜೆಕ್ಟ್ ಮಾಡಲು ಸಮಯ ಹಾಗೂ ಸ್ಥಳವನ್ನು ಮೀಸಲಿಟ್ಟ ಅಭಿಜಿತ್ ಕಿಮಾನಿ ನಂತರ ಇಡೀ ಪ್ರಾಜೆಕ್ಟ್‌ನ್ನೇ ಮಾರಿ ಬಿಡುತ್ತಾನೆ. ಆದರೆ ಕೌಶಿಕ್ ಕೃಷ್ಣನಿಗೆ ಅದೇನೂ ಒಪ್ಪಿಗೆಯಾದ ಕೆಲಸವಲ್ಲ. ಹೀಗಾಗಿ ಆತ ಪ್ರಯೋಗವನ್ನು ತನ್ನ ಮನೆಗೆ  ಸ್ಥಳಾಂತರಿಸಿಕೊಳ್ಳುತ್ತಾನೆ. ಅಲ್ಲಿ ಆತನೊಡನೆ ಕೆಲಸ ಮಾಡುವ ಉತ್ಸಾಹಿ ಯುವಕ ಅನ್ಸೆಲ್ಮೋ ಈ ಕೆಲಸಕ್ಕೆ ಸಹಕಾರ ನೀಡುತ್ತಾನೆ. ಆತನಿಗೆ ಕೌಶಿಕ್ ಕೃಷ್ಣನ ಕೆಲಸದ ಬಗ್ಗೆ ಯಾವ ಮಾಹಿತಿಯೂ ಇಲ್ಲದಿದ್ದರೂ ಆತ ಮತ್ತು ಆತನ ಜೊತೆಗೇ ವಾಸಿಸುತ್ತಿದ್ದ ಪ್ರೇಯಸಿ ಎಂಜಲಿತೋ ಇಡೀ ಪ್ರಯೋಗದ ಯಶಸ್ಸಿಗೆ ಕಂಕಣ ಬದ್ಧರಾಗುತ್ತಾರೆ. ಕೌಶಿಕ್ ಕೃಷ್ಣನ ಹೆಂಡತಿ ಎಡ್ರಿಯಾನ ಒಬ್ಬ ಅತ್ಯುತ್ತಮ ಚಿತ್ರಕಾರಳು. ಹಾಗೆ ನೋಡಿದರೆ ಕೌಶಿಕ್ ಕೃಷ್ಣ ಅಭಿಜಿತ್ ಕಿಮಾನಿಗೆ ಪರಿಚಯವಾದ್ದೇ ಇಂತಹ ಚಿತ್ರಕಲಾ ಪ್ರದರ್ಶನದಲ್ಲಿ. ಕೌಶಿಕ್ ಕೃಷ್ಣ ಹಾಗೂ ಆತನ ಹೆಂಡತಿ ಎಡ್ರಿಯಾನಾ ಇಬ್ಬರೂ ಸೇರಿ ಚಿತ್ರಿಸಿದ್ದ ಪೇಂಟಿಂಗ್‌ಗಳು ಹೊಸದೊಂದು ಸಂಚಲನವನ್ನೇ ಅಭಿಜಿತ ಕಿಮಾನಿಯಲ್ಲಿ ಮೂಡಿಸಿದ್ದವು. ಪ್ರತ್ಯೇಕ ಆಲೋಚನೆ, ಪ್ರತ್ಯೇಕ ನಂಬಿಕೆಗಳನ್ನು ಹೊಂದಿರುಹಿಬ್ಬರು ಜೊತೆಯಾಗಿ ಒಂದು ಕೆಲಸ ಮಾಡುವುದೆಂದರೆ ಅದು ಅದ್ಭುತವೇ ಸರಿ. ಅದರಲ್ಲೂ ಚಿತ್ರಕಲೆಯಂತಹ ಸೂಕ್ಷ್ಮ ಸಂವೇದನೆ ಬೇಡುವ ವಿಭಾಗದಲ್ಲಿ. ಆದರೆ ಕೌಶಿಕ್ ಕೃಷ್ಣ ಹಾಗೂ ಎಡ್ರಿಯಾನಾ ಚಿತ್ರಗಳು ಅದ್ವಿತೀಯವಾಗಿದ್ದವು ಮತ್ತು ಅಲ್ಲಿಯೂ ಕೌಶಿಕ್ ಕೃಷ್ಣ ಆತ್ಮ ಹಾಗೂ ದೇಹದ ಸಂಗಾತವನ್ನು, ಆತ್ಮವನ್ನು ಸಂರಕ್ಷಿಸಿ ಬೇರೆಡೆಗೆ ಅದನ್ನು ಜೀವಂತ ಗೊಳಸುವ ಕುರಿತಾಗಿಯೇ ತನ್ನ ಬಣ್ಣವನ್ನು ಬಳಸುತ್ತಿದ್ದುದು ವಿಚಿತ್ರ.   ಕೊನೆಗೆ ಅಭಿಜಿತ್ ಕಿಮಾನಿಯ ಇಂಡಸ್ ಕಂಪನಿಯಿಂದ ಫಿನಿಕ್ಸ್ ಎನ್ನುವ ಆತ್ಮವನ್ನು ಕಾಪಿಟ್ಟು ಬೇರೆ ದೇಹಕ್ಕೆ ಸ್ಥಳಾಂತರಿಸುವ ಯೋಜನೆಯಿಂದಾಗಿ ಅಭಿಜಿತ್ ವಿಚಾರಣೆಗೆ ಒಳಗಾಗಬೇಕಾಗುತ್ತದೆ, ಆತನ ತಂದೆ ಇನ್ನೆಂದೂ ಅಮೇರಿಕಾಕ್ಕೆ ಬರದಿರುವ ತೀರ್ಮಾನ ಕೈಗೊಂಡು ಭಾರತಕ್ಕೆ ಹಿಂದಿರುಗುತ್ತಾರೆ. ಆದರೆ ಕೊನೆಯಲ್ಲಿ ಅನ್ಸೆಲ್ಲೋ ಹೇಳುವ ಸತ್ಯ ಬೆಚ್ಚಿ ಬೀಳಿಸುತ್ತದೆ. ಅದನ್ನು ಬೆಂಬಲಿಸುವಂತೆ ಸ್ವತಃ ಕೌಶಿಕ್ ಕೃಷ್ಣನೇ ತನ್ನ ಪತ್ನಿ ಎಡ್ರಿಯಾನಾಳ ಆತ್ಮಹತ್ಯೆ ಯೋಜಿತವಾದ್ದು ಹಾಗೂ ಪೆಗಾಸಿಸ್ ಯಂತ್ರ ಅವಳ ಆತ್ಮವನ್ನು ಅನೆಲ್ಲೋನ ಪ್ರೇಯಸಿ ಎಂಜಲಿತೋಳ ದೇಹಕ್ಕೆ ಯಶಸ್ವಿಯಾಗಿ ಸೇರಿಸಿದೆಯೆಂದು ಹೇಳುತ್ತಾನೆ. ಇದಕ್ಕೂ ಮೊದಲೇ ಬರುವ ಇಂಡಸ್ ಕಂಪನಿಯ ಸ್ವಾಗತಕಾರಿಣಿಯಾಗಿರುವ ಸೋಫಿಯಾಳ ನಾಯಿ ಅಲೆಕ್ ಒಂದು ದಿನ ಹಠಾತ್ ಆಗಿ ಯಾವುದೇ ಸೂಚನೆ ನೀಡದೆ ಸಾವಿಗೀಡಾಗಿದ್ದು ಮತ್ತು ಪೆಗಾಸಿಸ್ ಯಂತ್ರದ ಕಾರ್‍ಯ ವೈಖರಿ ತಿಳಿಯಲು ಹೋಗಿದ್ದ ಗಿಲ್ಟನ್ ಸಡನ್ನಾಗಿ ಹಾರ್ಟ್ ಅಟ್ಯಾಕ್‌ಗೆ ಒಳಗಾಗಿದ್ದು ಈ ಯಂತ್ರದ ನಿಜಾಯತಿಯನ್ನು ಸಾಬೀತುಪಡಿಸುತ್ತವೆಯೋ ಎನ್ನುವಂತಿದ್ದರೂ ಅದೇ ಫಿನಿಕ್ಸ್ ಪ್ರಾಜೆಕ್ಟಿಗೆ ಡಾಟಾ ಸಂಗ್ರಹಿಸಿ ತರ್ಕಕ್ಕೆ ಹಚ್ಚುವ ದಿಗಂಬರ ಕೊನೆಯವರೆಗೂ ನಂಬುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ.      ಕಾದಂಬರಿಯ ಒಟ್ಟೂ ಓಟ ಓದುಗನನ್ನು ಖುರ್ಚಿಯ ತುದಿಯಲ್ಲಿ ಕುಳಿತು ಓದುವಂತೆ ಮಾಡುತ್ತದೆ. ಒಮ್ಮೆ ಓದಲು ಪ್ರಾರಂಭಿಸಿದ ನಂತರ ಮುಂದೇನಾಗುತ್ತದೆ ಎನ್ನುವ ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗಿ ಕೊನೆಯವರೆಗೂ ಪುಸ್ತಕವನ್ನು ಕೆಳಗಿಡಲಾಗದಂಥಹ ಒತ್ತಡವನ್ನು ಸೃಷ್ಟಿಸಲು ಯಶಸ್ವಿಯಾಗುತ್ತದೆ. ಇಲ್ಲಿನ ಪ್ರತಿ ಮಾತು, ಪ್ರತಿ ನಡತೆಯೂ ನಮ್ಮೊಳಗೇ ಹಾಸು ಹೊಕ್ಕಾಗಿರುವ ಮಾತುಗಳೇನೋ ಎಂದುಕೊಳ್ಳುವಂತೆ ಅಥವಾ ನಮ್ಮೊಡನೆ ವ್ಯವಹರಿಸಿದ್ದ ಯಾರದ್ದಾದರೂ ಮಾತನ್ನು ನೆನಪಿಗೆ ತರುತ್ತದೆ. ಇಲ್ಲಿ ಪೊಕ್ಕೆ ಪಾಂಡು ಹೇಳುವಂತೆ ‘ಅರ್ಧ ಭೂಗೋಲ ದಾಟಿದರೂ ಕಾಸೀಮನ ದೋಸ್ತಿ ತಪ್ಪಲಿಲ್ಲ’ ಎನ್ನುವ ಮಾತು, ‘ಅಣ್ಣ ಹೇಳ್ತೆ ಕೇಳ್’ ಎಂದು ಪದೇ ಪದೇ ಹೇಳುವ ಇದೇ ಪೊಕ್ಕೆಪಾಂಡು ಇಲ್ಲೆಲ್ಲೋ ನಮ್ಮ ಪಕ್ಕದಲ್ಲೇ ಇದ್ದವರು ಎನ್ನುವ ಭಾವ ಹುಟ್ಟಿಸುತ್ತದೆ. ಯಾಕೆಂದರೆ ತನ್ನನ್ನೇ ತಾನು ಅಣ್ಣ ಎಂದು ಕರೆದುಕೊಳ್ಳುವವರನ್ನು ನಮ್ಮೂರ ಕಡೆ ಪೊಕ್ಕೆ ಎನ್ನುವುದು ಸಹಜವಾದ ಮಾತು. ಕಿಮಾನಿ ಎನ್ನುವ ಸನಿಹದ ಊರಿನ ಹೆಸರೂ ಕೂಡ ಒಂದು ರೀತಿಯ ತಾದ್ಯಾತ್ಮವನ್ನು ಕಾದಂಬರಿಗೆ ನೀಡಿಬಿಡುತ್ತದೆ.     ಇಷ್ಟೆಲ್ಲ ಆದನಂತರ ಮತ್ತೊಂದು ಹೇಳಲೇಬೇಕಾದ ಮಾತಿದೆ. ಇಲ್ಲಿ ಬರುವ ವಿವರಣೆಗಳು ನಮಗೆ ಇಂಚಿಂಚಾಗಿ ಆ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಅಂಕಪಟ್ಟಿ ಬಾಲ್ಯ ಪುಸ್ತಕ-ಅಂಕಪಟ್ಟಿ ಬಾಲ್ಯಕವಿ- ರವಿರಾಜ ಸಾಗರಪ್ರಕಾಶನ- ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಟಾನ, ಕಮಲಾಪುರಬೆಲೆ-೧೩೦/- ಸ್ಪರ್ಧಾಲೋಕದಿ ಬೇಕೇ ಬೇಕಂತೆತರತರ ಪ್ರಮಾಣ ಪತ್ರಗಳುಕಷ್ಟವಾದರೂ ಮಾಡಲೇ ಬೇಕಂತೆನಾವು ಬಯಸದ ಪಾತ್ರಗಳು    ಇದು ಇಂದಿನ ದಿನಮಾನದ ಎಲ್ಲಾ ಮಕ್ಕಳ ಸಮಸ್ಯೆ. ಮಕ್ಕಳ ಮನಸ್ಸನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ ಹೇಳಿ? ನಮಗೆ ಹೆಚ್ಚು ಅಂಕಕೊಡುವ ರೋಬೋಟ್ ಬೇಕಿದೆಯೇ ಹೊರತು, ನಮ್ಮಿಂದ ಮುದ್ದಿಸಲ್ಪಟ್ಟು, ನಮ್ಮನ್ನೂ ಪ್ರೀತಿಸುವ ಮಗು ಬೇಕಾಗಿಲ್ಲ. ಎಲ್ಲ ಅಪ್ಪ ಅಮ್ಮಂದಿರಿಂದ ಹಿಡಿದು, ಶಿಕ್ಷಣ ಇಲಾಖೆಯಿಂದ ಹಿಡಿದು ಸಮಾಜದ ಎಲ್ಲರಿಗೂ ಮಗುವಿನ ಅಂಕವೇ ಆ ಮಗುವನ್ನು ಅಳೆಯುವ ಮಾನದಂಡವಾಗಿದೆಯೇ ಹೊರತೂ ಮಗುವಿನ ಮನಃಸ್ಥಿತಿ ಹೇಗಿದೆ? ಅದಕ್ಕೆ ಏನು ಪ್ರೀಯ? ಅದರ ಇಷ್ಟ ಕಷ್ಟಗಳೇನು ಎಂದು ತಿಳಿಯುವ ಒಂದಿಷ್ಟು ಪ್ರಯತ್ನವನ್ನಾದರೂ ನಾವು ಮಾಡಿದ್ದೇವೆಯೇ? ಖಂಡಿತಾ ಇಲ್ಲ. ಇಂದಿನ ಮಕ್ಕಳ ಬಾಲ್ಯ ಅಂಕಪಟ್ಟಿಯ ಮಾರ್ಕುಗಳಲ್ಲಿ ಕಳೆದು ಹೋಗಿದೆ. ಚಿಕ್ಕವನಿನ್ನೂ ಆಟವ ಆಡುಎಂದು ಯಾರೂ ಹೇಳರುಶಾಲೆಗೆ ಫಷ್ಟು ಬರಲೇಬೇಕುಎನ್ನುತ ಒತ್ತಡ ಹೇರುವರು     ಕಾಡು ಬೆಟ್ಟ ಅಲೆದು, ಕಾಡಿನಲ್ಲಿ ಆಯಾ ಸಿಜನ್ನಿನಲ್ಲಿ ಆಗುವ ಹಣ್ಣನ್ನು ಕೊಯ್ದುಕೊಂಡು ತಿನ್ನುವ ನಮ್ಮ ಬಾಲ್ಯ ಈ ಮಕ್ಕಳಿಗೆ ದೊರಕೀತೇ? ಕಾಡಿನ ಹಣ್ಣುಗಳನ್ನೇ ನೋಡಿರದ ಅವು ಏನಾದರೂ ಹಣ್ಣಿಗೆ ಕೈ ಹಚ್ಚಿದರೆ ಸಾಕು, ಹೈಜಿನ್ನಿನ ಪಾಠ ಹೇಳುವ ಮಮ್ಮಿ ಡ್ಯಾಡಿಗಳು ಹೌಹಾರಿ ಬಿಟ್ಟಾರು. ಆದರೆ ನಮ್ಮ ಅಪ್ಪ ಅಮ್ಮಂದಿರಿಗೆ ಮಕ್ಕಳು ಕಾಡಿನ ಯಾವ ಹಣ್ಣು ತಿಂದರೂ ಯಾವ ಅಭ್ಯಂತರವೂ ಇರಲಿಲ್ಲ. ನಾನು ಹಯಸ್ಕೂಲಿಗೆ ಹೋಗುವವರೆಗೂ ನನ್ನ ಶಾಲೆಯ ಬ್ಯಾಗ್ ತುಂಬಾ ಮಳೆಗಾಲದಲ್ಲಿ ಬಿಕ್ಕೆ ಹಣ್ಣು, ಅದರ ಒಡೆದ ಸಿಪ್ಪೆಗಳಿಮದಲೇ ತುಂಬಿರುತ್ತಿತ್ತು. ಅದೇ ಶಾಲೆಯ ಶಿಕ್ಷಕಿಯಾದ ಅಮ್ಮ ಏನಾದರೂ ನನ್ನ ಬ್ಯಾಗ್ ತೆರೆದರೆ ಈ ಟೀಚರ್ರು ಮಗಳಿಗೆ ಹೊಟ್ಟೆಗೇ ಹಾಕೂದಿಲ್ಲ ಅನ್ನೂರು, ಅದೇನ್ ಆ ಚೊಗರು ಕಾಯಿ, ಗಟ್ಟಿ ಹಣ್ಣು ತಿಂತೀಯೇ? ಎಂದು ಬೈಯ್ಯುತ್ತ ಇಡೀ ಚೀಲ ಸ್ವಚ್ಛ ಮಾಡುತ್ತಿದ್ದರು. ಪಿಳ್ಳೆ ಹಣ್ಣು ತಿಂದು ನೀಲಿಗಟ್ಟಿದ ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳಲು ಪಿಳ್ಳೆ ಹಣ್ಣು ಸುಲಭವಾಗಿ ಸಿಗುತ್ತಿತ್ತು. ಮಳೆಗಾಲ ಮುಗಿದ ತಕ್ಷಣ ಚಳಿಗಾಲದಲ್ಲಿ ಸಂಪಿಗೆ ಹಣ್ಣು, ಮಜ್ಜಿಗೆ ಹಣ್ಣು, ಕೊನೆಗೆ ರಂಜಲು ಹಣ್ಣು ಹೀಗೆ ಎಲ್ಲ ಹಣ್ಣುಗಳು ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಬ್ಯಾಗ್‌ನಲ್ಲಿ ಜಾಗ ಪಡೆದಿರುತ್ತಿದ್ದವು. ಪರೀಕ್ಷೆ ಮುಗಿಯುತ್ತಿದ್ದಂತೆ ಮಾವಿನ ಮಿಡಿಗಳು ನಮ್ಮಿಂದ ಉಪ್ಪು ಖಾರಾ ಹಾಕಿ ನಾಲಿಗೆಗೆ ಚುರುಕು ಮುಟ್ಟಿಸಲು ಕಾಯುತ್ತಿದ್ದವು. ಹಸಿ ಗೇರು ಬೀಜ ಸುಲಿದು ಕೈಯ್ಯ ಚರ್ಮವೆಲ್ಲ ಸುಲಿದು ಹೋಗುವುದು ಮಾಮೂಲಾಗಿತ್ತು. ಹಾಗೆ ಹಣ್ಣು ಕೊಯ್ಯಲು ಮರ ಹತ್ತಿ, ಕೆಳಗಿರುವ ಗಾಜಿನ ಚೂರಿನ ಮೇಲೆ ಬಿದ್ದು ಆದ ಗಾಯ ಇಂದಿಗೂ ನನ್ನ ಕಾಲಿನ ಮೇಲೆ ಸವಿನೆನಪನ್ನು ಉಳಿಸಿಕೊಂಡಿದೆ. ಆದರೆ ನಮ್ಮ ಮಕ್ಕಳನ್ನು ಹಾಗೆ ಕಾಡು ಸುತ್ತಲು ಬಿಟ್ಟೇವೆಯೇ? ಅವರ ಕಾಲಿಗೊಂದು ಸೊಳ್ಳೆ ಕಚ್ಚಿದರೂ ಜಗತ್ತೇ ತಲೆಕೆಳಗಾದಂತೆ ವರ್ತಿಸುವ ನಮಗೆ ಮಕ್ಕಳ ಬಾಲ್ಯವನ್ನು ಜೈಲಿನಲ್ಲಿಡುತ್ತಿರುವ ಅರಿವೂ ಆಗದಿರುವುದು ವಿಷಾದನೀಯ. ಆದರೆ ರವಿರಾಜ್ ಸಾಗರ ಮಕ್ಕಳ ಮಾತಿಗೆ ಜೀವ ತುಂಬಿದ್ದಾರೆ.  ಹೀಗಾಗಿಯೇ ಈ ಸಂಕಲನದಲ್ಲಿಯಾರು ಕೇಳೋರು ನಮ್ಮ ತಲೆಬಿಸಿಯಾಲೈಪಲ್ಲಿ ಗೆಲ್ಲೋಕೆ ರ್‍ಯಾಂಕೇ ಯಾಕ್ರಯ್ಯಾ?ಎಂದು ಮಕ್ಕಳು ಕೇಳುತ್ತಿದ್ದಾರೆ. ಹೇಳಿ, ಬದುಕನ್ನು ಗೆಲ್ಲಲು ರ್‍ಯಾಂಕ ಒಂದೇ ಆಧಾರವೇ? ವಿಚಿತ್ರ ಎಂದರೆ ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಐಎಎಸ್, ಕೆಎಎಸ್ ಪಾಸು ಮಾಡಿದ ಹಲವರು ಚಿಕ್ಕಂದಿನಲ್ಲಿ ರ್‍ಯಾಂಕ್ ಬಂದವರಲ್ಲ. ನಂತರ ಓದಿನ ಮಹತ್ವವನ್ನು ಅರಿತು ತಮ್ಮ ಮಾರ್ಗವನ್ನು ತಾವೇ ನಿರ್ಮಿಸಿಕೊಂಡವರು ಎಂಬುದನ್ನು ಗಮನಿಸಬೇಕಿದೆ.ನಮ್ಮ  ಶಾಲೆಯ ಪುಸ್ತಕದಲ್ಲಿಮಕ್ಕಳ ಹಕ್ಕು ಪಾಠವಿದೆಆ ಪಾಠದ ಪ್ರಶ್ನೆಗೆ ಉತ್ತರಿಸದೆ ಇದ್ದರೆಹೊಡೆಯಲು ಕೋಲು ಕಾಯುತಿದೆಮಕ್ಕಳ ಹಕ್ಕುಗಳು ಕೇವಲ ಓದಿ ಅಂಕಗಳಿಸಲಷ್ಟೇ ಇರುವ ಪಾಠಗಳೇ ಹೊರತೂ ಅದರಿಂದೇನೂ ಆಗುವುದಿಲ್ಲ ಎಂಬುದನ್ನು ಈ ಸಾಲುಗಳು ಚಂದವಾಗಿ ನಿರೂಪಿಸುತ್ತವೆ. ಮೊದಲೆಲ್ಲ ಮಕ್ಕಳಿಗಾಗಿ ಗ್ರಾಮ ಸಭೆ ನಡೆಸುತ್ತಿದ್ದೆವು. ಆಗಲೆಲ್ಲ ಮಕ್ಕಳು ಗಲಾಟೆ ಮಾಡದೇ ಮಾತೆ ಆಡದಂತೆ ಕುಳಿತಿರಬೇಕೆಂದು ಶಾಲೆಯಿಂದ ಗ್ರಾಮ ಪಂಚಾಯತ್‌ಗೆ ಹೊರಡುವ ಮೊದಲೇ ಮಕ್ಕಳಿಗೆ ಎಚ್ಚರಿಕೆ ನೀಡಿ ಕರೆದುಕೊಂಡು ಹೋಗುತ್ತಿದ್ದೆವು. ಎಂಟನೇ ತರಗತಿಯ ಮೊದಲ ಪಾಠವೇ ಎ ಡೇ ಇನ್ ಆಶ್ರಮ’ ರವೀಂದ್ರನಾಥ ಟಾಗೋರರ ಶಾಂತಿನಿಕೇತನದ ಕುರಿತಾಗಿ ಇರುವ ಪಾಠ. ಫಾರ್ಮಲ್ ಹಾಗೂ ಇನ್‌ಫಾರ್ಮಲ್ ಶಿಕ್ಷಣದ ಬಗ್ಗೆ ಚರ್ಚಿಸಿ ಮಕ್ಕಳೆಲ್ಲ ಇನ್‌ಫಾರ್ಮಲ್ ಶಿಕ್ಷಣವೇ ಹೆಚ್ಚು ಅನುಕೂಲ ಎಂದು ತಮ್ಮ ಅಭಿಪ್ರಾಯ ದಾಖಲಿಸಿದ ನಂತರ ‘ಎಲ್ಲರೂ ನಾಳೆ ಕಂಪಲ್ಸರಿ ಪ್ರಶ್ನೋತ್ತರ ಬರೆದು ತನ್ನಿ’ ಎಂದು ದೊಡ್ಡ ಕಣ್ಣು ಬಿಟ್ಟು ಹೇಳಿ, ‘ಗೊತ್ತಲ್ಲ, ನಾಳೆ ನಿಮ್ಮ ಪ್ರಶ್ನೋತ್ತರ ಪಟ್ಟಿ ಕಂಪ್ಲೀಟ್ ಆಗಲಿಲ್ಲ ಎಂದರೆ….’ ಎನ್ನುತ್ತ ಕೈಯ್ಯಲ್ಲಿರುವ ಕೋಲನ್ನು ಅರ್ಥಗರ್ಭಿತವಾಗಿ ನೋಡುತ್ತ ಪಾಠ ಮುಗಿಸುತ್ತೇವೆ. ಅಲ್ಲಿಗೆ ಆ ಪಾಠದ ಉದ್ದೇಶ ಸಫಲವಾದಂತೆ. ಹಾಗಾದರೆ ಪಾಠದ ಪ್ರಶ್ನೋತ್ತರಗಳನ್ನು ನೀಟಾಗಿ ಬರೆದು ಮುಗಿಸಿ ಹೆಚ್ಚು ಅಂಕ ಗಳಿಸೋದು ಮಾತ್ರವೇ ನದುಕಿನ ಸಾರ್ಥಕ್ಯವೇ?ಪರೀಕ್ಷೆಲಿ ಸೋತರೂ ಬದುಕಲ್ಲಿ ಗೆದ್ದೋರುಂಟುಗೆಲ್ಲಬೇಕೆನ್ನುವ ಕನಸು ಎಲ್ಲರಂತೆ ನಮಗುಂಟುನಿಜ. ಮಕ್ಕಳಲ್ಲಿ ತಾವೂ ಗೆಲ್ಲಬೇಕು ಎನ್ನುವ ಹಠ ಇರುತ್ತದೆ. ಕೆಲವರು ಅದಕ್ಕಾಗಿ ಹೆಚ್ಚು ಶ್ರಮ ಹಾಕುತ್ತಾರೆ. ಕೆಲವರು ಶ್ರಮ ಹಾಕದಿದ್ದರೂ ಅವರ ಬುದ್ಧಿಮತ್ತೆಗೆ ಅನುಸಾರವಾಗಿ ಗೆಲ್ಲುತ್ತಾರೆ. ಓದಿದವರು ಮಾತ್ರ ಗೆಲ್ಲುತ್ತಾರೆ ಎನ್ನುವುದು  ಎನ್ನುವುದು ನಿಜವಲ್ಲ. ಓದಿ ಓದಿ ಹೆಚ್ಚು ಅಂಕ ಗಳಿಸಿಯೂ ಜೀವನದಲ್ಲಿ ಗೆಲ್ಲಲಾಗದ ಅನೇಕರನ್ನು ನಾವು ಈಗಾಗಲೇ ಕಂಡಿದ್ದೇವೆ. ಹೆಚ್ಚು ಅಂಕ ಗಳಿಸು ಎಂದು ನಮ್ಮ ಮುಂದಿನ ತಲೆಮಾರನ್ನು ಪೀಡಿಸುವ ನಾವು ನಮ್ಮ ಮುಂದಿನ ಜನಾಂಗಕ್ಕಾಗಿ ಏನು ಬಿಟ್ಟಿದ್ದೇವೆ?ಧರೆಯನ್ನೆಲ್ಲ ಅಗೆದು ಬಗೆದುಸಂಪತ್ತನ್ನೆಲ್ಲ ತಿಂದು ತೇಗಿನಮ್ಮಯ ನಾಳೆಗೆ ಉಳಿಸುವಿರೇನನು?ಹೇಳಿ ಇಲ್ಲಿನ ಮಗು ಕೇಳುತ್ತಿದೆ. ನಮ್ಮ ಮುಂದಿನ ಜನಾಂಗಕ್ಕೆ ನಾವು ಏನನ್ನು ಉಳಿಸಿದ್ದೇವೆ? ಭೂಮಿಯ ಮೇಲಿರುವ ಎಲ್ಲವನ್ನೂ ಕಲುಷಿತಗೊಳಿಸಿದ್ದೇವೆ. ಮರಕಡಿದು, ಕಾಡನ್ನು ನಾಡಾಗಿಸಿದ್ದೇವೆ. ಎಲ್ಲೆಂದರಲ್ಲಿ ವಿಷಯುಕ್ತ ತ್ಯಾಜ್ಯವನ್ನು ಕಾರ್ಖಾನೆಗಳಿಂದಲೂ ಹೊರಬಿಟ್ಟು ಭೂಮಿಯನ್ನು ವಿಷಯುಕ್ತವಾಗಿಸಿದ್ದೇವೆ. ಇಷ್ಟಾದ ನಂತರವೂ ಮಗುವಿನ ಕುರಿತಾದ ಜವಾಬ್ಧಾರಿಯೂ ಇಲ್ಲದೇ ನಮ್ಮದೇ ಲೋಕದಲ್ಲಿ ಮುಳುಗಿ ಹೋಗಿರುವ ತಾಯಿ ತಂದೆಯರಿಗೆ ಮಗು ಕೇಳುವ ಪ್ರಶ್ನೆ ಇದುಅಪ್ಪ ಮೊಬೈಲ್‌ನಲ್ಲಿ, ಅಮ್ಮ ಧಾರಾವಾಹಿಯಲ್ಲಿ ಮುಳುಗಿರುವ ಕುರಿತು ಮಗುವಿಗೆ ಬೇಸರವಿದೆ. ಅಜ್ಜ ಅಜ್ಜಿ ವೃದ್ಧಾಶ್ರಮದಲ್ಲಿರುವಾಗ ತನ್ನ ಜೊತೆ ಆಡಲು ಯಾರಿಲ್ಲವೆಂದು ಮಗು ಕೊರಗುತ್ತದೆ. ಇಷ್ಟಾದರೂ ತಂದೆ ತಾಯಿಗಳು ಹೇಳುವ ಒಳ್ಳೆಯ ವಿಷಯಕ್ಕೆ ಮಕ್ಕಳ ಒಪ್ಪಿಗೆ ಇದ್ದೇಇರುತ್ತದೆ.ಉಳ್ಳವರ ಸೊಕ್ಕನು ಮುರಿದುಬಡವರಿಗೆ ಜೊತೆಯಾಗಿಬಸವಣ್ಣನ ಹಾದ್ಯಾಗೆ ನಡಿಯೋ ಮಗನೆಎನ್ನುವ ಮಾತಿಗೆ ಯಾವ ಮಗುವೂ ಇಲ್ಲ ಎನ್ನುವುದಿಲ್ಲ ಎನ್ನುವ ನಂಬಿಕೆ ಕವಿಗೆ ಇದೆ. ಹೀಗಾಗಿ ಮಕ್ಕಳ ಮೇಲೆ ನಂಬಿಕೆ ಇಟ್ಟು ನಡೆಯುವುದೇ ತಂದೆತಾಯಿಗಳಿಗೆ ಹಿತವಾದದ್ದು. ಮಕ್ಕಳನ್ನು ಅವರದ್ದೆ ಕಲ್ಪನೆಯ ಹಾದಿಯಲ್ಲಿ ಬಿಟ್ಟರೆ ಅವರು ಸೂರ್‍ಯ ಚಂದ್ರರನ್ನೂ ಭೂಮಿಗೆ ತಂದು ಕಟ್ಟಿಡಬಲ್ಲರು. ಮೋಡವನ್ನೂ ನಿಯಂತ್ರಿಸಿ ಕಲ್ಲು ಹೊಡೆದು ಮಳೆ ಸುರಿಸಲೂ ಹಿಂದೆ ಮುಂದೆ ನೋಡರು ಇಂದಿನ ಜನಾಂಗ. ಮೋಡದ ರಾಸಿಗೆಕಲ್ಲು ಹೊಡೆದುಆಲಿಕಲ್ಲನು ರಪರಪ ಕೆಡಗೋಣಬೇಕೆಂದಾಗ ಮಳೆಯನು ಪಡೆದುಧಗೆಯನು ಅಟ್ಟೋಣಎಂದು ಹುಮ್ಮಸ್ಸಿನಿಂದ ಹೇಳುವ ಇಂದಿನ ತಲೆಮಾರಿನ ಹುಮ್ಮಸ್ಸಿಗೆ ಕೊನೆ ಎಲ್ಲಿದೆ.  ಸೂರ್‍ಯನನ್ನೂ ಓಡಿಸಿ ಶಾಸ್ವತವಾಗಿ ಚಂದ್ರನೇ ಬೆಳಕು ನೀಡಲಿ, ಈ ಧಗೆ ಸಹಿಸಲಾಗದು ಎನ್ನುವ ಮಕ್ಕಳಿಗೆ ಚಂದ ತಾರೆಯರ ಚಾಡಿ ಮಾತು ಕೇಳುವ ಅಸಮಧಾನವೂ ಇದೆ. ಮನೆಯಲ್ಲಿ ಅಪ್ಪನ ಕೋಪಕ್ಕೆ ಅಮ್ಮ ಚಾಡಿ ಹೇಳುತ್ತಾಲೆ ಎನ್ನುವ ಮಕ್ಕಳ ಮನಸಿನ ಮಾತು ಇದು ಎಂದೇ ನನಗೆ ಓದಿದಾಗಲೆಲ್ಲ ಅನ್ನಿಸಿದೆ. ಚಾಡಿಯ ಹೇಳಲು  ತಾರೆಗಳೆಲ್ಲನಿನ್ನಯ ಹಿಂದೆಯೇ ಕಾದಿವೆ ನೋಡುಎನ್ನುವ ಮಗು ಪೆನ್ಸಿಲ್ ತಪ್ಪು ಬರೆಯಲು ನೀನೇ ಕಾರಣ ಎಂದು ರಬ್ಬರ್ ಗುರಾಯಿಸುವ ಕನಸನ್ನು ತರಗತಿಯಲ್ಲೂ ಕಾಣುವ ಸಾಮರ್ಥ್ಯ ಹೊಂದಿದೆ. ಮಗುವಿನ ಕಲ್ಪನಾ ಶಕ್ತಿಗೆ ಎಲ್ಲಿದೆ ಮಿತಿ? ಪರಿಸರ ಕಾಳಜಿಯ ಕವನಗಳೂ ಇಲ್ಲಿವೆ. ಗುಬ್ಬಿಯ ಮರಿಗಳು ಕಾಂಕ್ರಿಟ್ ಕಾಡಿನಲ್ಲಿ ದಂಗಾಗಿ ಕುಳಿತಿರುವಾಗ ಗುಬ್ಬಿಯು ತನ್ನ ಸಂಸಾರವನ್ನು ಹಳ್ಳಿಗೆ  ಸಾಗಿಸುತ್ತದೆ. ಅಲ್ಲಿಯೂ ಗಿಡಮರಗಳಿಲ್ಲದ್ದನ್ನು ಕಂಡು ಕಾಡೇ ಉತ್ತಮ ಎನ್ನುತ್ತ ಕಾಡಿನ ಕಡೆ ಮುಖ ಮಾಡುತ್ತದೆ. ಇನ್ನೊಂದೆಡೆ  ಮಳೆಯ ಸುರಿಸಲು ಬಳಿ ಬಾ ಎಂದು ಮೋಡವನ್ನು ಕರೆದರೆ ಕಾಡು ಕಡಿದು, ಭೂಮಿಯನ್ನೆಲ್ಲ ಹೊಲಸು ಮಾಡಿದ್ದನ್ನು ವಿರೋಧಿಸುವ ಮೋಡ, ಹಸಿರು ಬೆಳೆಸಿದರೆ ಖಂಡಿತಾ ಬರುತ್ತೇನೆ ಎನ್ನುತ್ತದೆ. ಹಾಗೆ ಬರುವಾಗಲೇ ಮಿಂಚು, ಗುಡುಗು, ಮಳೆಗೆ ಪೈಪೋಟಿಯೂ ಆಗುತ್ತದೆ. ಮಿಂಚಿನ ಬೆಳಕು ಮೊದಲು ಭೂಮಿಗೆ ತಲುಪುತ್ತದೆ, ಗುಡುಗಿನ ಶಬ್ಧ ನಂತರ ಕೇಳಿದರೆ ಮಳೆ ಮೂರನೆ ಸ್ಥಾನವನ್ನು ಪಡೆಯುತ್ತದೆ. ಇಲ್ಲಿ ಬೆಳಕಿನ ವೇಗ ಶಬ್ಧದ ವೇಗಕ್ಕಿಂತ ಹೆಚ್ಚು ಎನ್ನುವ ಸೂಕ್ಷ್ಮ ಪಾಠವೂ ಅಡಗಿಕೊಂಡಿದೆ. ಮತ್ತೊಂದು ಕವನದಲ್ಲೂ ನದಿಯನ್ನು ಕಂಡು ಪ್ರಾಣಿ ಪಕ್ಷಿಗಳೆಲ್ಲ ಖುಷಿಪಡುತ್ತವೆ. ಆದರೆ ಮನುಷ್ಯ ಮಾತ್ರ ಸುತ್ತಲಿನ ಕಾಡು ಕಡಿದು ಗದ್ದೆ ಮಾಡುತ್ತಾನೆ. ಮಳೆ ಕಡಿಮೆಯಾಗಿ ನದಿ ಒಣಗಿ ಹೋಗುತ್ತದೆ ಎನ್ನುವುದನ್ನು ತಿಳಿಸುತ್ತ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಾಗಬಾರದು ಎನ್ನುತ್ತಾರೆ. ಹೀಗಾಗಿಯೇ ಪುಟ್ಟನು ದೀಪಾವಳಿ ಹಬ್ಬಕ್ಕೂ ಪಟಾಕಿ ಹೊಡೆಯದೇ ಪರಿಸರದ ಬಗ್ಗೆ ಕಾಳಜಿ ತೋರಿಸುವುದನ್ನು ಚಂದದ ಕವಿತೆಯನ್ನಾಗಿಸಿ ಮಕ್ಕಳ ಮನಸ್ಸಿನಲ್ಲಿ ಪರಿಸರದ ಕುರಿತು ಜಾಗ್ರತಿ ಮೂಡಿಸುತ್ತಾರೆ.  ಅಮ್ಮ  ಇಲಿಯ ಕಾಟ ತಾಳದೆ ವಿಷವಿಕ್ಕಿದ್ದನ್ನೂ ಮಗು ಚಿಕ್ಕಿಲಿಗೆ ಹೇಳುತ್ತ, ಬಡವರ ಗೂಡಿಗೆ ಹೋಗಲೇ ಬೇಡ ಎನ್ನುತ್ತದೆ. ತಮ್ಮನಿಗೂ ತಿಂಡಿ ಕೊಡದೆ ತಿಂದ ಗುಂಡನ ಕೈಯ್ಯಿಂದ ತಿಂಡಿ ಎಗರಿಸಿದ ಕಾಗೆ ತನ್ನೆಲ್ಲ ಬಂದು ಬಳಗವನ್ನು ಕರೆದು ಹಂಚಿಕೊಂಡು ತಿನ್ನುತ್ತದೆ. ಇರುವೆ ಒಗ್ಗಟ್ಟಿನ  ಪಾಠ ಹೇಳುತ್ತದೆ. ಕಾಡಿನಲ್ಲಿ ಸಿಗುವ ರುಚಿರುಚಿಯಾದ ಹಣ್ಣು ಬಿಟ್ಟು ಪೇಟೆಗೆ ಬಂದು ಅಂಗಡಿಯಲ್ಲಿ ಕದಿಯುವ ಮಂಗಗಳ ಕುರಿತು ಮಗು ಪ್ರಶ್ನೆ ಕೇಳುತ್ತ ಕಾಡಿನಲ್ಲಿರುವ ಹಣ್ನಿನ ಮರಗಳನ್ನೆಲ್ಲ ಕಡಿದುದ್ದರ ಕುರಿತು ವಿಷಾದ ವ್ಯಕ್ತ ಪಡಿಸುತ್ತದೆ. ಹೀಗೆ ಪರಿಸರದ ಪಾಠ ಹೇಳುತ್ತಲೆ ಅಡುಗೆ ಮನೆಯ ಆಟಗಾರ ಎಂದು ಮಗುವನ್ನು ಕುರಿತೂ ಹೇಳುವ ಕವಿತೆ ಇಲ್ಲಿದೆ. ಅಪ್ಪನ ಹೊಲದಲ್ಲಿ ದುಡಿಯಬೇಕೆನ್ನುವ, ಮನೆಯಲ್ಲಿ ರೋಬೋಟ್ ಜೊತೆ ಆಡುತ್ತಲೇ ಊರಿನ ತೋಟದಲ್ಲಿ ಏನೇನಿದೆ ಎಂದು ತೋರಿಸಲು ತಂದೆಯನ್ನು ಕರೆಯುವ ಮಗುವಿಗೆ ಅಪ್ಪನಂತೆ ಗಡ್ಡ ಮೀಸೆ ಯಾವಾಗ ಬರುವುದು ಎಂದು ಅಮ್ಮನನ್ನು ಕೇಳುತ್ತ ಎದುರು ನೋಡುತ್ತಿದೆ. ತನ್ನ ಶಾಲೆಯಷ್ಟು ಸುಂದವಾದದ್ದು ಬೇರಿಲ್ಲ ಎನ್ನುತ್ತದೆ. ಕಾಡಿಗೆ ಹೋಗಬಯಸುವ, ಸಂತೆಯಲ್ಲಿ ನಲಿದಾಡಲು ಇಷ್ಟಪಡುವ ಮಗುವಿನ ಮನವಿಗೆ ಹಿರಿಯರೆನ್ನಿಸಿಕೊಂಡ ನಾವು ಸ್ಪಂದಿಸಿದ್ದೇವೆಯೇ?      ಭೀಮಲೀಲೆ ಎನ್ನುವ ಅಂಬೇಡ್ಕರರ ಕುರಿತಾದ ಕವನ ಮಕ್ಕಳನ್ನು ಮುಟ್ಟುವಂತಿದೆ. ಓದು ಬರೆಹ ಕಲಿಯದ ಗೋಣಿ ಬಸವನ ಪಾಡನ್ನು ಕಂಡರೆ ಮಗು ಒಂದಿಷ್ಟಾದರೂ ಓದಬೇಕೆಂದು ಬಯಸುವುದು.ಆಕಾಶವನ್ನೇ ಮುಟ್ಟಬಲ್ಲೆವುಏಣಿಯ ನೀಡಿ ಸಹಕರಿಸಿಎಂದು ತಮ್ಮ ಮೇಲೆ ತಾವೇ ಭರವಸೆಯಿಟ್ಟು ಮಗು ಕೇಳುತ್ತಿದೆ.  ಆಕಾಶಕ್ಕೆ ಏರುವ ಮಗುವಿಗೆ ಏಣಿ ಕೊಟ್ಟು ಬೆನ್ನು ತಟ್ಟಬೇಕಾದದ್ದು ಪಾಲಕರು ಮಾಡಲೇ ಬೇಕಾದ ಕರ್ತವ್ಯ.ಬೆನ್ನು ತಟ್ಟಿ ಬೆಂಬಲಿಸಿಬದುಕ ದಾರಿ ತೋರಿಸಿಸೋತರೂ ಗೆಲ್ಲೋ ಕಲೆಯಕಲೀತೀವಿ ಸಹಕರಿಸಿ  ನಮ್ಮ ಮಕ್ಕಳ ಬೆನ್ನು ತಟ್ಟಿ ಯಾವುದು ಒಲ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಸಿಕೊಳ್ಳಲೇ ಬೇಕಲ್ಲವೇ? ಇಲ್ಲದೇ ಹೋದರೆ ತಪ್ಪು ಸರಿ ಎನ್ನುವುದರ ಅರಿವಾಗುವುದಾದರೂ ಹೇಗೆ? ಅಂತಹ ತಿಳುವಳಿಕೆ ನೀಡಿಲ್ಲದ್ದರಿಂದಲೇ ಸಮಾಜದಲ್ಲಿ ಇಷ್ಟು ಅನ್ಯಾಯ, ಅತ್ಯಾಚಾರಗಳು ಹೆಚ್ಚುತ್ತಿವೆ. ನಾವು ನೀಡುವ ಪಾಠ ಮಕ್ಕಳಲ್ಲಿ ನೈತಿಕತೆಯನ್ನು ತುಂಬಿದರೆ  ಸಮಾಜ ಖಂಡಿತಾ  ಅಧೋಗತಿಗಿಳಿಯಲಾರದು. ಲಿಂಗತ್ವದ ಕಲ್ಪನೆ ಮಾಡಿಕೊಡುವುದು ಹಾಗೂ ಲಿಂಗಬೇಧ ಮಾಡದಂತೆ ನೋಡಿಕೊಳ್ಳುವುದು ನಮ್ಮದೇ ಕರ್ತವ್ಯ.

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಕಾಡು ಸುತ್ತಿಸಿ ನಿಸರ್ಗದ ಪಾಠ ಹೇಳುವ ಕಾನ್ಮನೆಯ ಕಥೆಗಳು                        ನಾನು ಎರಡನೇ ತರಗತಿ ಇದ್ದಿರಬಹುದು. ಅಜ್ಜಿ ಮನೆಯ ಊರಲ್ಲಿ ಬಂಡಿ ಹಬ್ಬ. ಅಂಕೋಲಾ ಹಾಗೂ ಕುಮಟಾದವರು ಏನನ್ನಾದರೂ ಬಿಟ್ಟಾರು. ಆದರೆ ಬಂಡಿ ಹಬ್ಬ ಬಿಡುವುದುಂಟೆ? ಆದರೆ ಬಂಡಿ ಹಬ್ಬದಲ್ಲಿ ದೇವರು ಒಮ್ಮೆ ಕಳಸದ ಮನೆಯಲ್ಲಿ ಕುಳಿತ ನಂತರ ಮತ್ತೆ ಎದ್ದು ಬರೋದು ರಾತ್ರಿಯೇ. ಅದರಲ್ಲೂ ಬಂಡಿ ಆಟ ಮುಗಿಸಿ ತಡವಾಗಿದ್ದ ರಾತ್ರಿಯದು. ನಾವೆಲ್ಲ ನಿಂತ ಅನತಿ ದೂರದಲ್ಲಿ ಒಂದೆಡೆ ಜಾತ್ರೆಯ ತೇರಿನಂತೆ ಮರಕ್ಕೆ ಬಣ್ಣಬಣ್ಣದ ದೀಪ ವಿದ್ಯತ್ ಅಲಂಕಾರ ಮಾಡಿದಂತೆ ಕಾಣಿಸುತ್ತಿತ್ತು. ನನಗೋ ಅದು ಎಂದೂ ನೋಡಿರದ ದೃಶ್ಯ. ಮಾವನ ಮಗಳು ಮಾಲಕ್ಕನ ಬಳಿ ಅಕ್ಕಾ ಏನದು? ಎಂದೆ. ಮಾತನಾಡಿದರೆ ಈ ಧರೆಗಿಳಿದ ಸೌಂದರ್‍ಯ ಕರಗಿ ಹೋಗಬಹುದು ಎನ್ನುವ ಭಯ. ಆದರೆ ಆಕೆಗೆ ಅದು ಮಾಮೂಲು. ‘ಅದಾ ಮಿಂಚು ಹುಳ. ಮಳೆಗಾಲ ಹತ್ತಿರ ಬಂತಲ್ಲ? ಅದಕ್ಕೆ ಮಿಂಚು ಹುಳಗಳು ಮಳೆಗೆ ದಾರಿ ತೋರಸ್ತಾವೆ. ಎಂದಳು. ನನಗೆ ಅಷ್ಟು ದೂರದಿಂದ ಸೂಡಿಯ ಬೆಳಕಲ್ಲಿ ಮೈ ಮೇಲೆ ಬಂದ ದೇವರ ಆರ್ಭಟ ನೋಡುವ ಕುತೂಹಲ ಮುಗಿದು ಹೋಯ್ತು. ಕಣ್ಣೆದುರಿಗೇ ಧರೆಗಿಳಿದ ಅಮರಾವತಿಯನ್ನಿಟ್ಟುಕೊಂಡು, ಮಾತನಾಡಿದರೇ ಥಕಧಿಮಿಗುಡುವ ದೇವರನ್ನೇಕೆ ನೋಡಲು ಹೋಗಲಿ? ಅಂತೂ ದೇವರ ಕಳಸ ನಮ್ಮ ಮುಂದಿನಿಂದ ಧಪಧಪ ಹೆಜ್ಜೆ ಇಡುತ್ತ ಹೋಗುವಾಗ ಕೈ ಹಿಡಿದುಕೊಂಡಿದ್ದ ಮಾಲಕ್ಕ ನನ್ನನ್ನು ಎಳೆದುಕೊಂಡೇ ಹೊರಟಳು ಆದರೆ ನನಗೋ ಆ ಚಿತ್ತಾರ ಬಿಟ್ಟು ಬರುವ ಮನಸ್ಸಿರಲಿಲ್ಲ. ಇಂದಿನಂತೆ ಆಗೇನಾದರೂ ಕೈಯ್ಯಲ್ಲೊಂದು ಮೊಬೈಲ್ ಇದ್ದಿದ್ದರೆ ಅದೆಷ್ಟು ಫೋಟೊ ಹೊಡೆದು ಫೇಸ್‌ಬುಕ್‌ಗೆ ಹಾಕಿ ಏನೇನು ತಲೆಬರೆಹ ಕೊಡುತ್ತ ಎಷ್ಟೊಂದು ಲೈಕ್ ಗಿಟ್ಟಿಸಬಹುದಿತ್ತು ಎಂದು ಈಗಲೂ ಆ ದೃಶ್ಯವನ್ನು ನೆನಪಿಸಿಕೊಳ್ಳುವಾಗಲೆಲ್ಲ   ಅಂದುಕೊಳ್ಳುತ್ತೇನೆ. ಮತ್ತೆ ಆ ದೃಶ್ಯ ಈಗ ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ಪುಸ್ತಕ ಓದುವಾಗ ನೆನಪಿಗೆ ಬಂತು.         ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ನಮಗೆ ಹಲವಾರು ವಿಷಯಗಳನ್ನು ವಿವರಿಸುತ್ತ ಹೋಗುತ್ತವೆ. ಕಾಡು ಮತ್ತು ಮಾನವನ ಸಂಬಂಧದ ಕುರಿತಾದ ಅದ್ಭುತ ನುಡಿಚಿತ್ರವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು. ‘ಅರೆ ಹೌದಲ್ಲ? ಇದನ್ನು ನೋಡಿದ್ದರೂ ನಾವಿದನ್ನು ಗಮನಿಸಿಯೇ ಇರಲಿಲ್ಲವಲ್ಲ’ ಎಂಬ ಅದೆಷ್ಟೋ ಘಟನೆಗಳು ನಮ್ಮನ್ನು ಅಚ್ಚರಿಯ ಸುಳಿಗಾಳಿಗೆ ಸಿಲುಕಿಸುತ್ತವೆ. ಕಾಗೆಯ ಗೂಡಿಗೆ ಕಲ್ಲು ಹೊಡೆದು ತಿಂಗಳುಗಳಿಂದ ಮನೆಯಿಂದ ಹೊರಗೇ ಬರಲಾರದಂತೆ ಮಾಡಿಕೊಂಡ ಎಡವಷ್ಟು ನಮ್ಮ ಬಾಲ್ಯದಲ್ಲಿ ಅದೆಷ್ಟಿಲ್ಲ?  ಅದೆಷ್ಟೋ ಬೀಜಗಳ ಪೋಷನೆಯನ್ನು ಹೀಗೆ ಮಾಡಿದರೆ ಮಾತ್ರ ಮೊಳಕೆಯೊಡೆಯುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಹೇಳಿಕೊಟ್ಟಿಲ್ಲ ಹೇಳಿ. ಆದರೂ ನಾವು ಪರಿಸರವನ್ನು ಕೇವಲ ಸಸ್ಯಶಾಸ್ತ್ರೀಯ ಅಧ್ಯಯನಗಳಿಂದಲೇ ತಿಳಿದುಕೊಳ್ಳುವುದಕ್ಕೆ ಹೊರಡುತ್ತೇವೆಯೇ ಹೊರತೂ  ನಮ್ಮ ಜನಪದ ಜ್ಞಾನವನ್ನು ಇದಕ್ಕೆ ಬಳಸಿಕೊಳ್ಳುವುದಿಲ್ಲ ಎಂಬುದಕ್ಕೆ ಅದೆಷ್ಟು ಉದಾಹರಣೆಗಳು ಈ ಪುಸ್ತಕದಲ್ಲಿ ದೊರಕುತ್ತವೆಯೆಂದರೆ ಓದುತ್ತಿದ್ದರೆ ಒಮ್ಮೆ ನಗು, ಇನ್ನೊಮ್ಮೆ ವಿಷಾz, ಮತ್ತೊಮ್ಮೆ ಕೋಪ ಕೆಲವೊಮ್ಮೆ ಎಲ್ಲವೂ ಒತ್ತಟ್ಟಿಗೇ ಒಕ್ಕರಿಸಿಕೊಂಡು ಬರುತ್ತದೆ.                   ನಾವೆಲ್ಲ ಕಹಿ ಎಂದುಕೊಳ್ಳುವ, ವಿಷಕಾರಿ ಎಂದು ದೂರ ಇಡುವ ಕಾಸ್ನ (ಕಾಸರಕ) ಮರದ ವಿಶೇಷಣಗಳ ಬಗ್ಗೆ ಶಿವಾನಂದ ಕಳವೆಯವರು ಹೇಳುವಾಗ ಈ ಮರಕ್ಕೆ ಇಷ್ಟೆಲ್ಲ ಗುಣಗಳಿವೆಯೇ ಎಂದು ಅಚ್ಚರಿಯಾಗದೇ ಇರಲು ಸಾಧ್ಯವೇ ಇಲ್ಲ. ಹೆಂಡ ಇಳಿಸಲು ಬಳಸುವ ಬಗಿನೆ ಮರದ ಬೇರನ್ನು ಅಡಿಕೆಯ ಬದಲಾಗಿ ತಾಂಬೂಲ ಹಾಕಲು ಬಳಸಬಹುದಂತೆ ಎಂಬ ಮಾತಂತೂ ನನಗೆ ಹೊಸದು. ಆಗಾಗ ಹಬ್ಬ ಹಾಗೂ ಮನೆಯ ವಿಶೇಷ ಕಾರ್‍ಯಕ್ರಮಗಳಲ್ಲಿ ಮನೆಯ ಅಡಿಕೆ ಹಾಗೂ ಅದೇ ಮರಕ್ಕೆ ಹಬ್ಬಿದ್ದ ವೀಳ್ಯದೆಲೆಗೆ ಸುಣ್ಣ ಹಚ್ಚಿ ಬಾಯಿ ಕೆಂಪು ಮಾಡಿಕೊಳ್ಳುವ ನೀವು ದುರಾಭ್ಯಾಸವೆಂದರೆ ದುರಭ್ಯಾಸ, ಆರೋಗ್ಯಕರ ಎಂದರೆ ಆರೋಗ್ಯಕರವಾದ ನನ್ನ ಕವಳ ಹಾಕುವ ಚಟ ನೆನಪಿಗೆ ಬಂದು, ಈ ಬಾಡಿಗೆ ಮನೆಯಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕವಳ ಹಾಕಲಾಗದು ಎಂದು ಪರಿತಪಿಸುವಂತಾಗಿದ್ದು ಸುಳ್ಳಲ್ಲ.    ಅಂದಹಾಗೆ ಕಾಳಿನದಿ ಕಣಿವೆಯ ಶಿವಪುರ ಎಂಬ ಹಳ್ಳಿಯ ಬಾಗಿನಗದ್ದೆಯ ಅಡಕೆ ತೋಟದ ಪಕ್ಕದಲ್ಲಿರುವ ಹಾಲೆ ಮರದಡಿಯಲ್ಲಿ ಇಟ್ಟ ವೀಳ್ಯದ ಎಲೆ ವರ್ಷವಾದರೂ ಬಾಡುವುದಿಲ್ಲವಂತೆ. ಈ ಹಾಲೆ ಮರವನ್ನು ದೇವರ ಮರ ಎಂದು ಪೂಜಿಸುತ್ತಾರೆ ಆ ಭಾಗದವರು. ಆ ಮರದ ಬುಡದಲ್ಲಿ ಎಡೆಯಿಟ್ಟ ವೀಳ್ಯದ ಎಲೆಗಳು ಬೇರು ಬಿಟ್ಟು ಬಳ್ಳಿಗಳಾಗಿ ಆ ಮರಕ್ಕೇ ಹಬ್ಬಿಕೊಂಡಿದೆಯಂತೆ. ದೇವ-ದಾನವರು ಸಮುದ್ರ ಕಡೆದು ಸಿಕ್ಕ ಅಮೃತ ಕುಡಿದ ನಂತರ ಹೆಚ್ಚಾದ ಅಮೃತವನ್ನು ಗಜರಾಜನ ಕಂಬದ ಕೆಳಗಿಟ್ಟಿದ್ದರಂತೆ. ಆದರೆ ಗಜರಾಜ ಮದವೇರಿ ಆ ಅಮೃತದ ಕಲಶವನ್ನು ಒಡೆದನಂತೆ. ಹೀಗಾಗಿ ಆ ಒಡೆದ ಕಲಶ ಒಡೆದಲ್ಲಿ ಅಮೃತ ಚೆಲ್ಲಿ ಬೆಳೆದ ಬಳ್ಳಿಯೇ ನಾಗವಲ್ಲಿ ಅಂದರೆ ವೀಳ್ಯದ ಎಲೆ ಬಳ್ಳಿಗಳಂತೆ. ಅಂತೂ ಕವಳ ತಿನ್ನುವ ನನ್ನ ರೂಢಿ ಕೆಟ್ಟದ್ದಲ್ಲ ಎಂದು ಸಿಕ್ಕಾಗಲೆಲ್ಲ ಕವಳ ಹಾಕಿಯೇ ಮಾತಿಗೆ ತೊಡಗುವ ಶಿವಾನಂದ ಹೆಗಡೆಯವರು ಹೇಳಿ ನನ್ನ ದುಗುಡ ಕಡಿಮೆ ಮಾಡಿದ್ದಾರಾದರೂ ಹಾಲೆಮರ ಎಂದು ಕರೆಯಿಸಿಕೊಳ್ಳುವ ಸಪ್ತಪರ್ಣಿಯನ್ನು ಕಡಿದು ಆ ಮನೆತನವೇ ಊರು ಬಿಟ್ಟಿದ್ದು, ಅಲ್ಲಿನ ವೀಳ್ಯದ ಬಳ್ಳಿಗಳೂ ಒಣಗಿ ಹೋಗಿದ್ದನ್ನು ಹೇಳಿ ಒಂದಿಷ್ಟು ಚಿಂತೆಯನ್ನೂ ಜೊತೆಗೆ ಅದ್ಯಾವ ಕಾರಣಕ್ಕೆ ಹಾಗೆ ಆಗಿರಬಹುದು ಎನ್ನುವ ಕುತೂಹಲ ಮೂಡಿಸಿದ್ದಾರೆ. ನನ್ನ ಮುಂದಿನ ಕಾಡಿನ ವಾಸ ಕಂಡಿತಾ ಶಿಪುರದ ಸಮೀಪಕ್ಕೆ ನನ್ನನ್ನು ಕೊಂಡೊಯ್ಯಬಹುದು. ಯಾಕೆಂದರೆ ಈ ಹಾಲೆ ಮರದ ತೊಗಟೆಯನ್ನು ತಂದು ಕುದಿಸಿ ದೀಪಾವಳಿಯ ದಿನ ಬೆಳ್ಳಂಬೆಳಿಗ್ಗೆ ಮೈ ತುಂಬ ಅರಶಿಣ ಎಣ್ಣೆ ಲೇಪಿಸಿಕೊಂಡು ಹಾಲೆ ಕಷಾಯ ಕುಡಿಯುವ ಸಂಪ್ರದಾಯ ನಮ್ಮ ಜನಾಂಗದಲ್ಲಿದೆ. ಹೀಗಾಗಿ ಹಾಲೆ ಮರದ ತೊಗಟೆ ತೆಗೆಯುವ ಈ ಶತಮಾನಗಳ ಆಚರಣೆಯ ಬಗ್ಗೆ ಒಂದಿಷ್ಟು ಭಯವೂ ಹುಟ್ಟಿಕೊಂಡಿದೆ.    ನಾನು ಹಿಂದೆ ಬಾಡಿಗೆಗೆ ಇದ್ದ ಮನೆಯ ಎರಡು ಮನೆಗಳ ಆಚೆ ಒಂದು ವೃದ್ಧ ಜೋಡಿಯಿತ್ತು. ಆತ ಸೈನ್ಯದಲ್ಲಿದ್ದು ನಿವೃತ್ತಿ ಹೊಂದಿದವರು. ಹೀಗಾಗಿ ತೀರಾ ಕಟ್ಟುನಿಟ್ಟು. ಯಾರೊಡನೆಯೂ ಹೆಚ್ಚಿನ ಮಾತಿಲ್ಲ. ಅಷ್ಟು ದೊಡ್ಡ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುತ್ತಿದ್ದುದು. ಬೆಳಿಗ್ಗೆ ನಾನು ಶಾಲೆಗೆ ಹೋಗುವಾಗ ಇಬ್ಬರೂ ಮನೆಯ ಅಂಗಳದಲ್ಲಿ ಖುರ್ಚಿ ಹಾಕಿಕೊಂಡು ಎದುರಿಗೆ ಬಿದ್ದ ದೊಡ್ಡ ಬಯಲನ್ನು ನೋಡುತ್ತ ಕುಳಿತಿರುತ್ತಿದ್ದರು. ಸಂಜೆ ಬಂದಾಗಲೂ ಬಹುತೇಕ ಅಲ್ಲಿಯೇ ಇರುತ್ತಿದ್ದರು. ಅಥವಾ ಆತ ಅಲ್ಲೇ ಅಂಗಳದಲ್ಲಿ ವಾಕ್ ಮಾಡುತ್ತಿದ್ದರೆ ಹೆಂಡತಿ ಅದೇ ಭಂಗಿಯಲ್ಲಿ ಕುಳಿತಿರುತ್ತಿದ್ದರು. ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆಂದು ನಾನು ಮನೆಗೆ ಬಂದಾಗಲೂ ಅವರು ಅಲ್ಲಿಯೇ. ಇವರಿಬ್ಬರು ಅಡುಗೆ, ಊಟ ಏನಾದರೂ ಮಾಡ್ತಾರೋ ಇಲ್ಲವೋ ಎಂಬ ಅನುಮಾನ ಆಗುತ್ತಿತ್ತು ಆಗಾಗ. ಆದರೆ ಅಕ್ಟೋಬರ್ ರಜೆ ಮುಗಿಸಿ ನಾನು ಶಾಲೆಗೆ ಹೋಗುವ ಹೊತ್ತಿನಲ್ಲಿ ಅವರಿಬ್ಬರಲ್ಲೂ ಅದೆಂಥಹ ಬದಲಾವಣೆಯಾಗುತ್ತಿತ್ತು ಎಂದರೆ ಅವರ ಮನೆಯ ಮುಂದಿನ ಜಾಗ ರಸ್ತೆಯೋ ಪಕ್ಷಿ ಸಾಕಾಣಿಕಾ ಕೇಂದ್ರವೋ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತಿತ್ತು. ಮನೆಯ ಮುಂದೆ ದೊಡ್ಡ, ಅಗಲವಾದ ನೀರಿನ ಮಡಕೆಯೊಂದನ್ನು ಇಡುತ್ತಿದ್ದರು. ನೀರು ಕುಡಿಯಲು ಹಕ್ಕಿಗಳ ದಂಡೇ ಆಗಮಿಸುತ್ತಿತ್ತು. ನವೆಂಬರ ತಿಂಗಳ ಮುಸುಗುಡುವ ಚಳಿಯಲ್ಲಿ ನಾನು ಏಳಲಾಗದೇ ಎದ್ದು ವಾಕಿಂಗ್ ಹೋಗುವಾಗ ಆ ನೀರಿನ ಮಡಿಕೆಯ ಎದುರು ನಾಲ್ಕಾರು ನವಿಲುಗಳೂ ಇರುತ್ತಿದ್ದವು. ಶಿವಾನಂದ ಕಳೆಯವರ ಪುಸ್ತಕದಲ್ಲಿ ಹೀಗೆ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ನೀರನ್ನಿಡುವ ಪ್ರಸ್ತಾಪ ಹಲವಾರು ಸಾರಿ ಓದಿದಾಗ ನನಗೆ ನೆನಪಾಗಿದ್ದು ಅದೇ ವೃದ್ಧ ದಂಪತಿಗಳು.ಆ ಹಕ್ಕಿಗಳನ್ನು ನೋಡುತ್ತ ಅವರು ಪರವಶರಾಗುತ್ತಿದ್ದುದು ನನಗೀಗಲೂ ನೆನಪಿದೆ. ಕಾಲು ನೋವಿನಿಂದ ಒದ್ದಾಡುತ್ತ ಕುಳಿತಲ್ಲಿಂದ ಎದ್ದು ಓಡಾಡಲು ಹರಸಾಹಸ ಪಡುತ್ತಿದ್ದ ಆಕೆಯಂತೂ ಮಡಿಕೆಯಲ್ಲಿ ನೀರು ಒಂದಿಷ್ಟು ಖಾಲಿಯಾದರೂ ಸಾಕು ಬೇಗ ಬೇಗ ನೀರು ತಂದು ಹಾಕುತ್ತಿದ್ದರು. ಮೊಮ್ಮಕ್ಕಳು ಬಂದಾಗಲೂ ಆಕೆ ಹೀಗೆ ಓಡಾಡಿದ್ದನ್ನು ನಾನು ನೋಡಿರಲಿಲ್ಲ.  ಬಾವಿಗೆ ಬಿದ್ದ ಚಿರತೆಯನ್ನು ಎತ್ತಿದ ಪ್ರಸಂಗ, ಹಾಗೂ ಅದೇ ಸಮಯದಲ್ಲಿ ಮೂರನೇ ತರಗತಿಯನ್ನೂ ಕಲಿಯದ ಹಿರಿಯೊಬ್ಬರು ಹೇಳಿದ ಪರಿಸರ ಪಾಠವನ್ನು ನಿಜಕ್ಕೂ ಎಲ್ಲರೂ ಅರ್ಥ ಮಾಡಿಕೊಳ್ಳುವಂತಿದ್ದರೆ ಬಹುಶಃ ನಾವಿಂದು ಪ್ರಾಣಿಗಳನ್ನು ರಕ್ಷಿಸಿ ಎಂಬ ಸ್ಲೋಗನ್‌ಗಳನ್ನು ಹಿಡಿದು ನಮ್ಮ ಶಾಲಾ ಮಕ್ಕಳನ್ನು ಮೆರವಣಿಗೆ ಹೊರಡಿಸುವ ಅಗತ್ಯವಿರಲಿಲ್ಲ.    ನನ್ನ ಆತ್ಮೀಯ ಗೆಳೆಯನೊಬ್ಬನಿಗೆ ಬದನೆ ಕಾಯಿ, ಬಟಾಟೆ ಬೆಂಡೆಕಾಯಿಗಳನ್ನು ತಿಂದರೆ ಮೈಯ್ಯೆಲ್ಲ ಚಿಕ್ಕ ಚಿಕ್ಕ ಗುಳ್ಳೆ ಎದ್ದು ತುರಿಕೆ ಪ್ರಾರಂಭವಾಗುತ್ತದೆ. ನಾವು ಬೆಂಡೆಗೆ, ಬದನೆಗೆ ಹಾಗೂ ಅತೀವ ತುರಿಕೆ ಹುಟ್ಟಿಸುವ ಕೆಸುವಿನ ಎಲೆ, ಗಡ್ಡೆಯ ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳಿಗೆ, ಸುವರ್ಣ ಗಡ್ಡೆ ಎನ್ನುವ ಅತ್ಯಪೂರ್ವ ಗಡ್ಡೆಗೆ ನಮ್ಮದೇ ಆದ ವಾಟೆಹುಳಿ ಬೆರೆಸುತ್ತೇವೆ, ಮೊನ್ನೆ ‘ಬೆಂಡೆಗೆ ಮುರುಗಲು ಹುಳಿಯನ್ನೇ ಹಾಕು ಅದರ ಲೋಳೆ ಕಡಿಮೆಯಾಗಿ ತುರಿಕೆ ಇರುವುದಿಲ್ಲ’ ಎಂದು ಅಮ್ಮ ಹೇಳುತ್ತಿದ್ದರು. ಇದನ್ನೇ ನಾನು ನನ್ನ ಸ್ನೇಹಿತನಿಗೂ ಹೇಳುತ್ತಿದ್ದೆ. ಕೋಕಂ ಸಿಪ್ಪೆ ಇಟ್ಕೋಬೇಕು. ತುರಿಕೆ ಆದಾಗಲೆಲ್ಲ ನೀರಲ್ಲಿ ಹಿಚುಕಿ ಆ ನೀರು ಕುಡಿದು ಅದರ ಸಿಪ್ಪೆಯನ್ನು ತುರಿಕೆ ಎದ್ದ ಚರ್ಮಕ್ಕೆ ತಿಕ್ಕಿದರೆ ನಾವು ಪೈಥಿ ಎನ್ನುವ ಗುಳ್ಳೆ ಏಳುವ ಈ ತರಹದ ಅಲರ್ಜಿ ಕಡಿಮೆಯಾಗುತ್ತದೆಯೆಂದು. ಬಯಲು ಸೀಮೆಯ ಆತನಿಗೆ ನಾವು ಮುರುಗಲು ಅಥವಾ ಪುನಿರ್‌ಪುಳಿ ಎಂದು ಕರೆಯುವ ಕೋಕಂನ ಪರಿಚಯವಿಲ್ಲ. ಹೀಗಾಗಿ ಅದರ ಬಳಕೆಗೂ ಹಿಂದೇಟು ಹಾಕುವುದು ಸಹಜವೇ.  ಕಾಡು ಕಲಿಕೆಗೆ ನೂರಾರು ದಾರಿಗಳು ಲೇಖನ ನನ್ನ ಈ ಔಷಧಿಯ ಹುಳಿಯ ನಿಜಾಯತಿಯನ್ನು ಸಿದ್ಧಪಡಿಸಿದ್ದಕ್ಕಾಗಿ ಖುಷಿಯಾಯಿತು. ಕೆಸುವಿನ ಎಲೆ ತಿಂದು ತುರಿಕೆಯ  ಕಾರಣದಿಂದಾಗಿ ಅರ್ಧ ನಾಲಿಗೆ ಹೊರಚಾಚಿ ಉಸಿರಾಟಕ್ಕೆ ಸಂಕಷ್ಟ ಪಡುತ್ತಿದ್ದ ಆಕಳ ಕರುವಿಗೂ ಹೂಳಿ ತಿನ್ನಿಸಿ ಬದುಕಿಸಿದ ಕಥೆಯಿದೆ. ಸನೈಡ್‌ನಷ್ಟು ತೀಕ್ಷ್ಣವಾದ ವಿಷದ ನೀರು ಬಿಡುವ ಕಳಲೆಯನ್ನೂ ಆಹಾರ ಯೋಗ್ಯವನ್ನಾಗಿ ಮಾಡಿಕೊಂಡಿರುವ ಹಳ್ಳಿಗರ ವೈಶಿಷ್ಟ್ಯತೆಯನ್ನು ಕಳವೆಯವರು ವಿವರಿಸುತ್ತ ಯಾವ ಪಾಕತಜ್ಞರಾಗಲಿ, ವಿಜ್ಞಾನಿಗಳಾಗಲಿ ವಿವರಿಸಿದ ಪಾಠ ಇದಲ್ಲ ಎನ್ನುತ್ತಾರೆ. ಇಂತಹುದ್ದೇ ಉಪ್ಪಾಗೆ ಹುಳಿಗೆ ಒಂದು ಕಾಲದಲ್ಲಿ ಕೆಜಿಗೆ ಐನೂರು, ಆರು ನೂರು ರೂಪಾಯಿಗಳಾಗಿ, ಒಂದು ಹಂತದಲ್ಲಿ ಸಾವಿರ ರೂಪಾಯಿಯವರೆಗೂ ಹೋಗಿದ್ದನ್ನು ಚಿಕ್ಕಂದಿನಲ್ಲಿ ಗಮನಿಸಿದ್ದೇನೆ. ಉಪ್ಪಾಗೆ ಕಾಯನ್ನಷ್ಟೇ ಕೊಯ್ಯುವ ಬದಲು, ರೆಂಬೆಕೊಂಬೆಗಳನ್ನೆಲ್ಲ ಕಡಿದು, ಉಪ್ಪಾಗೆ ಸಸ್ಯದ ಅವನತಿಗೆ ಕಾರಣವಾಗಿದ್ದೂ ಗೊತ್ತಿದೆ. ಇಂದಿಗೂ ದೇಹದ ಉಷ್ಣತೆಗೆ, ಕೈಕಾಲು ಬಿರುಕಿಗೆ ಬಳಸುವ ಮುರುಗಲು ತುಪ್ಪ ಹಾಗೂ ದೇಹದ ತೂಕ ಇಳಿಸುತ್ತದೆಯೆಂದು ನಾನು ಹುಡುಕುತ್ತಿರುವ ಉಪ್ಪಾಗೆ ತುಪ್ಪ ಈಗ ಅಪರೂಪದ ವಸ್ತುವಾಗಿದೆ ನಮ್ಮ ಆಧುನಿಕತೆಯಿಂದಾಗಿ.         ಶಿವಾನಂದ ಕಳವೆಯವರ ಜಲಜಾಗ್ರತಿ ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಕೆರೆಗಳ ಸಂರಕ್ಷಣೆಗಾಗಿ ಇಡೀ ಕರ್ನಾಟಕದಾದ್ಯಂತ ಓಡಾಡಿ ಅನೇಕ ಕೆರೆಗಳ ಪುನರುತ್ಥಾನ ಮಾಡಿದ್ದು ಗೊತ್ತಿದೆ. ಇಲ್ಲಿ ಜಲಜಾಗ್ರತಿಯ ಬಗ್ಗೆ ಹೇಳಿದ್ದಾರೆ, ಪರಿಸರದ ಕುರಿತಾಗಿ ಭಾಷಣ ಮಾಡಿ, ಕ್ವಿಜ್ ಏರ್ಪಡಿಸಿ, ಸೆಮಿನಾರ್‌ಗಳನ್ನು ಮಾಡುವ ಬದಲು ಒಂದಿಷ್ಟು ಗಿಡನೆಟ್ಟು ಬೆಳೆಸಬೇಕಾದ ಅನಿವಾರ್‍ಯತೆಯನ್ನು ಒತ್ತಿ ಹೇಳಿದ್ದಾರೆ. ಓಡುವ ಮಳೆ ನೀರನ್ನು ನಿಲ್ಲಿಸಿದರೆ ಅದು ಕಾಡಿನ ಬಣ್ಣವನ್ನು ಹಚ್ಚಹಸಿರಾಗಿಸುವ, ಬಣ್ಣ ಬಣ್ಣದ ಹೂಗಳಿಂದ ಶೃಂಗರಿಸುವ ಪರಿಯನ್ನು ವಿವರಿಸಿದ್ದಾರೆ. ಮುಂಡುಗೋಡದ ಪಾಳಾ ಎಂಬ ಬಯಲಿನಲ್ಲಿ ಮಾವಿನ ತೋಟ ಮಾಡಿಸಿದ ಅಪ್ಪಾರಾಯರ ಬಗ್ಗೆ ಹೇಳಿ ಗಿಡ ಬೆಳೆಸುವುದು ನಮ್ಮೆಲ್ಲರ ಕಾಯಕವಾಗಬೇಕು

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಬೆಳಕಿನ ರೋಚಕತೆ ನೀಡುವ ಬೆಳದಿಂಗಳು. ಪುಸ್ತಕ- ಬೆಳದಿಂಗಳು ಕವಿ- ಗುರು ಹಿರೇಮಠ ವಿಶ್ವೃಷಿ ಪ್ರಕಾಶನ ಬೆಲೆ-೧೨೦/- ಗುರು ಹಿರೇಮಠ ತುಮಕೂರು ಟು ಹೊಸ್ಪೇಟ್ ಎಂದೇ ನನಗೆ ಪರಿಚಯವಾದವರು. ಮೃದು ಮಾತಿನ ಅಷ್ಟೇ ನಾಚಿಕೆ ಸ್ವಭಾವದ ಹುಡುಗ. ಯಾವಾಗ ಎದುರಿಗೆ ಸಿಕ್ಕರೂ ಒಂದು ನಗೆಯ ಹೊರತಾಗಿ ಬೇರೆ ಮಾತು ಆಡಲು ಬರುವುದೇ ಇಲ್ಲವೇನೋ ಎಂಬಷ್ಟು ಮೌನಿ. ಅವರ ಚುಟುಕುಗಳ ಸಂಕಲನ ಬೆಳದಿಂಗಳು ಓದಿದಾಗ ಅವರ ಮೌನಕ್ಕೊಂದು ಅರ್ಥ ದೊರಕಿತು ನನಗೆ. ಹೇಳಬೇಕಾದುದ್ದನ್ನೆಲ್ಲ ಚುಟುಕಾಗಿ ಮೂರು ನಾಲ್ಕು ಸಾಲುಗಳಲ್ಲಿ ಹೇಳಿ ನಿರುಮ್ಮಳವಾಗಿ ಬಿಡುವ ಗುರುವಿಗೆ ಬಹುಶಃ ಮಾತು ಮಣಭಾರ ಎನ್ನಿಸಿರಬಹುದು.. ಹೀಗಾಗಿಯೇ ಮೌನ ಸಾಮ್ರಾಜ್ಯದ ಚಕ್ರವರ್ತಿ ಅವರು. ಇಷ್ಟಾಗಿಯೂ ನಾನು ಕಂಡAತೆ ಸ್ನೇಹಿತರನ್ನು ತುಂಬಾ ನಂಬುವ ಸ್ವಭಾದ ಗುರು  ಪ್ರೀತಿಸುವವರನ್ನು ನಂಬುತ್ತೇನೆ. ದ್ವೇಷಿಸುವವರನ್ನು  ಪ್ರೀತಿಸುತ್ತೇನೆ ಹೋಗುವ ದಾರಿಯಲ್ಲಿ ನನ್ನೆದೆಯ ಹೂವುಗಳು ನೀವು ಎಂದು ಬರೆದರೆ ಅದರಲ್ಲಿ ಅಚ್ಚರಿಯೇನಿದೆ?  ಪ್ರೀತಿಸುವವರನ್ನು ನಂಬುವುದು ಸಹಜ. ಎಲ್ಲರೂ ತಮ್ಮನ್ನು ಪ್ರೀತಿಸುವವರನ್ನು ನಂಬಿಯೇ ನಂಬುತ್ತಾರೆ. ಅದೇನೂ ವಿಶೇಷವಲ್ಲ.  ಆದರೆ ದ್ವೇಷಿಸುವವರನ್ನು ಪ್ರೀತಿಸುವುದು ಮಾತ್ರ ಬಹುದೊಡ್ಡ ವಿಷಯ. ಹಾಗೆ ದ್ವೇಷಿಸುವವರನ್ನೂ ಪ್ರೀತಿಸುವುದು ಸಾಧಾರಣ ಜನರಿಗೆ ದಕ್ಕುವ ಮಾತಲ್ಲ. ಹೀಗಾಗಿಯೇ ಈ ಪ್ರೀತಿಸುವವರನ್ನು ಹಾಗೂ ದ್ವೇಷಿಸುವವರನ್ನು ತಾನು ಹೋಗುವ ದಾರಿಯಲ್ಲಿ  ಸಿಗುವ ತನ್ನೆದೆಯ ಹೂವುಗಳು ಎನ್ನುತ್ತಾರೆ. ಬದುಕು ತೀರಾ ಚಿಕ್ಕದು. ದ್ವೇಷಿಸುವವರನ್ನು ತಿರುಗಿ ನಾವೂ ದ್ವೇಷಿಸುತ್ತಲೇ ಹೋದರೆ ಇಡೀ ಜೀವನಪೂರ್ತಿ ದ್ವೇಷಿಸುತ್ತಲೇ ಇರಬೇಕಾಗುತ್ತದೆ. ಪ್ರತಿ ಮಾತಿಗೂ ಒಂದು ಎದುರುತ್ತರ ಕೊಡುತ್ತಲೇ ಹೋದರೆ ಮಾತು ಮುಗಿಯುವುದಾದರೂ ಯಾವಾಗ? ಹೀಗಾಗಿಯೇ ದ್ವೇಷಿಸುವವರನ್ನು ಪ್ರೀತಿಸಿಬಿಟ್ಟರೆ ನಾವು ನಿರುಮ್ಮಳವಾಗಿರಬಹುದು. ಕಿuಚಿಟiಣಥಿ oಜಿ meಡಿಛಿಥಿ is ಣತಿiಛಿe bಟesseಜ  ಎಂದು ಶೇಕ್ಸ್ಫೀಯರ್ ಹೇಳುತ್ತಾನೆ. ದ್ವೇಷಕ್ಕೆ ಪ್ರತಿಯಾಗಿ ದ್ವೇಷಿಸಿದರೆ ನಮ್ಮ ನಿರಾಳ ಮನಸ್ಥಿತಿಯನ್ನು ನಾವೇ ನಾಶಮಾಡಿಕೊಂಡAತೆ. ಹೀಗಾಗಿಯೇ ಜಗದ ಎಲ್ಲ ನೋವಿಗೂ ಪ್ರೀತಿಯೊಂದೇ ಔಷಧ. ಜಗದ ಎಲ್ಲ ದ್ವೇಷಕ್ಕೂ ಪ್ರೀತಿಯೇ ಮುಲಾಮು. ಕವಿಯ ಮಾನವೀಯತೆಯ ಪರಿಚಯವಾಗಲು ಈ ಎರಡು ಸಾಲು ಸಾಕು.            ನಾನು ಕಡಲೂರಿನವಳು. ಜಗದ ಸೃಷ್ಟಿ ಕಡಲಲ್ಲಿಯೇ ಆದದ್ದು ಎಂದು ಬಲವಾಗಿ ನಂಬಿದವು. ಜಗದ ಅಂತ್ಯವೂ ಕಡಲಿಂದಲೇ ಆಗುತ್ತದೆ ಎಂದೂ ಮತ್ತೆ ಮತ್ತೆ ಹೇಳುತ್ತಿರುವವಳು. ಕಡಲ ಉಪ್ಪು ನೀರು ನಮಗೆ ಅಮೃತಕ್ಕೆ ಸಮಾನ. ನಾನು ಚಿಕ್ಕವಳಿರುವಾಗಲೆಲ್ಲ ಹೊಟ್ಟೆ ಕೆಟ್ಟರೆ, ತಲೆ ನೋವು ಬಂದರೆ ಉಪ್ಪು ನೀರು ಕುಡಿಸುತ್ತಿದ್ದರು. ಒಂದೋ ವಾಂತಿಯಾಗಿ ಎಲ್ಲವೂ ಹೊಟ್ಟೆಯಿಂದ ಹೊರಹೋಗಬೇಕು, ಅಥವಾ ಉಪ್ಪುನೀರು ಎಲ್ಲವನ್ನೂ ಜೀರ್ಣಿಸಬೇಕು. ಹೀಗಾಗಿ ಎಷ್ಟೋ ಸಲ ನನ್ನ ಮಕ್ಕಳು ಚಿಕ್ಕವರಿರುವಾಗಲೂ ಉಪ್ಪುನೀರಿನ ಔಷಧವೇ ನನ್ನನ್ನು ಸಂಕಟದಿAದ ಪಾರು ಮಾಡಿದ್ದು.    ನಾಲ್ಕು ತಿಂಗಳಿನ ಪುಟ್ಟ ಮಗುವನ್ನು ಕೈಲಿಟ್ಟುಕೊಂಡು ಊರಲ್ಲೇ ಗಂಜಿ ಉಂಡುಕೊAಡು ಸುಖವಾಗಿ ಶಾಲೆಗೆ ಹೋಗಿ ಬರಬಹುದಾದ ಅವಕಾಶವನ್ನು ಬಿಟ್ಟುಕೊಟ್ಟು, ಅನುದಾನಿತ ಶಾಲೆ ಬೇಡ ನನಗೆ ಎನ್ನುತ್ತ ಮನೆಯವರೆಲ್ಲ ಅಸಮಧಾನಕ್ಕೆ ಕಾರಣವಾಗಿ ಬೆಳ್ತಂಗಡಿಯ ಗೊಂಡಾರಣ್ಯವಾದ ಕೊಯ್ಯೂರಿಗೆ ಸರಕಾರಿ ನೌಕರಿ ಮಾಡುತ್ತೇನೆ ಎಂದು ಹೊರಟಿದ್ದೆ. ಏನೂ ಅರಿಯದ ಬೊಮ್ಮಟೆಯಂತಹ ಮಗು ಮಧ್ಯರಾತ್ರಿ ಎದ್ದು ಅತ್ತಾಗಲೆಲ್ಲ ನನಗೆ ತಳಮಳ. ನಾನೇ ಮದುವೆ ಆಗುವವರೆಗೂ ಅಮ್ಮನ ಹೊಟ್ಟೆಗೆ ಕೈಯ್ಯಿಟ್ಟು ಮಲುಗುತ್ತಿದ್ದವಳು. ಈಗ ಈ ಮಗುವನ್ನು ಸಂಭಾಳಿಸುವ ಅಮ್ಮನಾಗಿದ್ದೆ. ಆಗೆಲ್ಲ ನನಗೆ ನೆನಪಾಗುತ್ತಿದ್ದುದು ಒಂದೇ. ನೀರು ಬೆಚ್ಚಗೆ ಮಾಡಿ ಒಂದು ಚಿಟಿಕೆ ಉಪ್ಪು ಹಾಕಿ ಕದಡಿ ಚಮಚದಲ್ಲಿ ನಾಲ್ಕಾರು ಹನಿ ಕುಡಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಮಗು ಅಳುವುದನ್ನು ನಿಲ್ಲಿಸಿ ಮಲಗಿದರೆ ನನಗೆ ಏನೋ ದೊಡ್ಡ ಮಹತ್ಸಾಧನೆ ಮಾಡಿದ ಸಮಾಧಾನ. ರುಚಿ ನೀಡುವ ಉಪ್ಪಿನಲ್ಲಿ ಸಕಲ ಜೀವರಾಶಿಗಳ ಕಣ್ಣೀರಿದೆ ಆದರೆ ಇಲ್ಲಿ ಗುರು ಉಪ್ಪಿಗೆ ಬೇರೆಯದ್ದೇ ಅರ್ಥ ನೀಡಿದ್ದಾರೆ. ಉಪ್ಪುಪ್ಪಿನ ಕಣ್ಣೀರಿಗೆ ಹೋಲಿಸಿದ್ದಾರೆ. ಬದುಕಿನ ವಿವಿಧ ಅರ್ಥಗಳನ್ನು ಹಿಡಿದಿಡುವುದೇ ನಿಜವಾದ ಕವಿಯ ಸಾಧನೆ. ನಮಗೆಲ್ಲ ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದೆನಿಸಿದರೆ ಗುರು ಉಪ್ಪನ್ನು ಕಣ್ಣೀರಿಗೆ ಸಮೀಕರಿಸಿ ಹೊಸತೇ ಆದ ಆಯಾಮವನ್ನು ನೀಡಿದ್ದಾರೆ.    ಯಶಸ್ಸು ಸುಲಭವಾಗಿ ದಕ್ಕುವಂತಹುದ್ದಲ್ಲ. ಒಂದು ಗುರಿಯನ್ನು ತಲುಪಲು ವಹಿಸಬೇಕಾದ ಶ್ರಮಕ್ಕೆ ಯಾವ ಬೆಲೆಯೂ ಇಲ್ಲ. ಯಶಸ್ಸಿಗೆ ಹತ್ತಾರು ದಾರಿಗಳಿರುವುದಿಲ್ಲ. ಬೇಗ ಹೋಗಿ ಯಶಸ್ಸನ್ನು ಪಡೆಯಲು ಯಾವ ಒಳದಾರಿಯೂ ಇರುವುದಿಲ್ಲ. ಇರುವುದು ಒಂದೇ ದಾರಿ. ಅದು ಸತತ ಪರಿಶ್ರಮ. ಏರುವ ಎತ್ತರಕ್ಕೆ ಒಂದೇ ದಾರಿ ಬೀಳಲು ನೂರು ದಾರಿ ಆದರೆ ಯಶಸ್ಸಿನ ಶಿಖರವನ್ನು ಹತ್ತಿದರೂ ಅದರಿಂದ ಕೆಳಗೆ ಬೀಳಲು ಬೇಕಷ್ಟು ದಾರಿಗಳಿರುತ್ತವೆ. ನಮ್ಮದೇ ವ್ಯಸನಗಳು ನಮ್ಮನ್ನು ದಾರಿ ತಪ್ಪಿಸಿ ಯಶಸ್ಸಿನ ಶಿಖರದಿಂದ ಒಮ್ಮೆಲೆ ಕೆಳಗೆ ಬೀಳಿಸಬಲ್ಲದು. ನಮ್ಮ ಒಂದು ತಪ್ಪು ಹೆಜ್ಜೆಯೂ ನಮ್ಮನ್ನು ಪ್ರಪಾತದ ಕಡೆ ತಳ್ಳುವ ಚಕ್ರವಾಗಿರಬಹುದು.  ಆದರೂ ಈ ಜಗತ್ತು ಪ್ರೇಮಮಯ. ಪ್ರೇಮವೊಂದಿದ್ದರೆ ಸಾಕು, ಜಗತ್ತಿನ ನೂರಾರು ಸಂಕಷ್ಟಗಳನ್ನು ಸುಲಭವಾಗಿ ಜಯಿಸಬಹುದು. ಪ್ರೇಯಸಿಯ ಒಂದು ನಗು ಇಡೀ ಜಗತ್ತನ್ನೇ ಗೆಲ್ಲುವ ಪ್ರೇರಕ ಶಕ್ತಿಯಾಗಬಲ್ಲದು. ನಿನ್ನ ನಗು ಕಂಡ ಕ್ಷಣ ಕಡಲಿನ ಮುತ್ತುಗಳೆಲ್ಲ ಹೂವಾಗಿ ಅರಳಿದವು ಎನ್ನುವ ಕವಿಯಲ್ಲಿನ ತಾಜಾ ಭಾವನೆಗಳು ನಮ್ಮನ್ನು ಜೀವನ್ಮುಖಿಯಾಗಿಸುವುದರಲ್ಲಿ ಸಂಶಯವೇ ಇಲ್ಲ.  ಈ ಪ್ರೇಮದ ಪರಿಯನ್ನೊಮ್ಮೆ ಗಮನಿಸಿ. ಯಾರೋ ನಡೆದ ದಾರಿಯಲ್ಲಿ ನಾ ನಡೆಯುತ್ತಿದ್ದೆ ಸುಮ್ಮನೆ ಒಮ್ಮೆ ದಾರಿ ಬದಲಿಸಿದೆ! ನೀ ಸಿಕ್ಕೆ ಬದುಕು ದಕ್ಕಿತು ಒಂದು ಪ್ರೇಮ ಬದುಕನ್ನು ನಮ್ಮ ತೆಕ್ಕೆಗೆ ನೀಡಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗಿರುವ ಈ ಸಾಲುಗಳನ್ನು ನೋಡಿ. ಸರಳವಾದ ಕೆಲವೇ ಶಬ್ಧಗಳಲ್ಲಿ ಈ ಭಾವ ನಮ್ಮನ್ನು ಇಡೀ ಜಗತ್ತಿನ ಪ್ರೇಮದ ರಹದಾರಿಯಲ್ಲಿ ನಿಲ್ಲಿಸುತ್ತದೆ. ಪಡೆದದ್ದು ಇಷ್ಟೇ ಅತ್ತ ನೀನು, ಇತ್ತ ನಾನು ದಡವಾಗಿ ಪ್ರೀತಿಯ ನದಿ ಎಂದೂ ಬತ್ತುವುದಿಲ್ಲ ಹೀಗಾಗಿ ಪ್ರೀತಿಯಲ್ಲಿ ಏನು ಪಡೆದೆ ಎಂದರೆ ಎಂದೂ ಬತ್ತದ ಪ್ರೀತಿಯನ್ನು ಪಡೆಯುವುದು ಮಾತ್ರ ಪ್ರೇಮದ ಕೊನೆಯ ಗುರಿಯಾಗಿರುತ್ತದೆ. ಪ್ರೇಮನದಿಯ ಎರಡು ದಡಗಳಲ್ಲಿ ಪ್ರೇಮಿಗಳಿಬ್ಬರೂ ನಿಂತುಕೊAಡರೆ ಆ ನದಿ ಎಂದಿಗೂ ಬತ್ತಬಾರದು. ಅಂತಹ ಪ್ರೇಮವನ್ನು ಪಡೆದರೆ ಜೀವನ ಸಾರ್ಥಕ ಎನ್ನುವ ಭಾವ ಕವಿಯಲ್ಲಿದೆ. ಅದಕ್ಕೆಂದೇ ಕವಿ ಬೆಳದಿಂಗಳು ಸೋತಿದೆ ಅವಳ ಹೆಸರಿಗೆ ಆ ಹೆಸರಲ್ಲಿ ನನ್ನ ಬದುಕಿನ ಉಸಿರಿದೆ ಎನ್ನುತ್ತಾರೆ. ಪ್ರೇಮದ ಸಾಫಲ್ಯವೇ ಹಾಗೆ. ಪ್ರೇಮಿಯ ಹೆಸರನ್ನು ಜಪಿಸುತ್ತ ಅದನ್ನೇ ಉಸಿರಾಡುವುದರಲ್ಲಿಯೇ ಬದುಕಿನ ಔನತ್ಯವನ್ನು ಕಾಣುವುದು ಪ್ರತಿ ಪ್ರೇಮಿಯ ಆಶಯವಾಗಿರುತ್ತದೆ. ಹೀಗೆಂದೇ ಪ್ರೇಮದಲ್ಲಿ ಬಿದ್ದ ಕಾಲೇಜು ವಿದ್ಯಾರ್ಥಿಗಳ ನೋಟ್‌ಬುಕ್‌ನ ಕೊನೆಯ ಹಾಳೆಯನ್ನು ಗಮನಿಸಿ. ಅಲ್ಲಿ ಕೇವಲ ಪ್ರೇಮಿಯ ಹೆಸರನ್ನೇ ಸಾವಿರ ಸಲ ಬರೆದಿರುತ್ತಾರೆ. ಕವಿ ಕೂಡ ತನ್ನವಳ ಹೆಸರಿಗೆ ಬೆಳದಿಂಗಳೂ ಸೋಲುತ್ತದೆ ಎನ್ನುತ್ತಾರೆ. ಕವಿಗೂ ವಿರಹ ಕಾಡುತ್ತದೆ. ವಿರಹವಿಲ್ಲದ ಪ್ರೇಮ ಈ ಜಗದಲ್ಲಿ ಇದ್ದೀತೆ? ಪ್ರತಿ ಪ್ರೇಮಕ್ಕೂ ವಿರಹ ಕಾಡಿದರೆ ಮಾತ್ರ ಆ ಪ್ರೇಮಕ್ಕೊಂದು ಅಧಿಕೃತತೆ ದಕ್ಕಿದ ಹಾಗೆ. ಪ್ರತಿ ಪ್ರೇಮದಲ್ಲಿಯೂ ಒಂದು ಮುನಿಸಿರುತ್ತದೆ, ಜಗಳವಿರುತ್ತದೆ. ಕೊನೆಗೆ ಪ್ರೇಮಿ ಕೈಕೊಟ್ಟು ಹೋದಳೆಂದು ಪರಿತಪಿಸುವ ಉಪಖ್ಯಾನವಿರುತ್ತದೆ. ಪ್ರೀತಿಯೊಂದಿಗೆ ಸ್ನೇಹ ಮಾಡಿಕೊಂಡವಳು ಮೊದಲೇ ಮೋಸದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ತಿಳಿಯಲಿಲ್ಲ ಎನ್ನುತ್ತ ವಿರಹದ ಮಾತನಾಡುತ್ತಾರೆ. ಬದುಕಿನ ಬಣ್ಣಗಳನ್ನು ಹಂಚಿಕೊAಡವಳು. ಬದುಕಿನಲ್ಲಿರುವ ಕಾಮನಬಿಲ್ಲನ್ನು ಬಣ್ಣಗಳನ್ನು ತನಗಾಗಿ ತಂದವಳು ಬಣ್ಣಗಳ ಜೊತೆಗೆ ಬಣ್ಣ ಬದಲಿಸಿದಳು ಎಂದು ವಿಷಾದ ಪಡುತ್ತಾರೆ. ಬಣ್ಣಗಳ ಜೊತೆಗೆ ಆಟವಾಡುವುದನ್ನು ಕಲಿಸಿದವಳು ಬಣ್ಣ ಬದಲಿಸಿ ಹೋದಳು ಆದರೂ ಮೋಸ ಮಾಡಿ ಹೋದವಳ ಬಗ್ಗೆ ಬೇಸರವಿಲ್ಲ. ಅವಳ ಮೇಲಿನ ಪ್ರೇಮ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಪ್ರೇಮವೆಂದರೆ ನಂಬಿಕೆ ಎಂದು ಮೊದಲೇ ಹೇಳಿದವರು ಈಗ ನಂಬಿಕೆಯನ್ನು ಕೊಂದವಳ ಬಗೆಗೂ ಮತ್ತದೇ ನಂಬಿಕೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ನಂಬಿಕೆಯನ್ನು ಕೊಂದವಳ ಜೊತೆಗೆ ನAಬಿಕೆಯಿAದ ಬದುಕಿರುವ ಹೆಮ್ಮೆ ನನ್ನದಾಗಲಿ ಎನ್ನುತ್ತ ನಂಬಿಕೆಯನ್ನು ತಾನು ಕಳೆದುಕೊಳ್ಳದ ನಿಶ್ಚಯ ಮಾಡುತ್ತಾರೆ. ಪ್ರೀತಿಗಿಂತ ಮೊದಲೇ ಮೋಸವನ್ನೂ ತನ್ನೊಂದಿಗೆ ತಂದಿದ್ದಾಳೆAದು ಆರೋಪಿಸುವ ಕವಿಗೆ ಆಕೆ ತನ್ನನ್ನು ಬಿಟ್ಟು ಹೋದರೆ ಏನು ಮಾಡುವುದೆಂಬ ಭಯವಿದೆ. ಆಕೆಯನ್ನು ಕಳೆದುಕೊಳ್ಳಲಂತೂ ಸಾಧ್ಯವಿಲ್ಲ. ಹೊರಟು ಹೋದಳು ನನ್ನಲ್ಲಿರುವ ಬೆಳಕನ್ನು ಕೊಂದು ಅವಳ ನೆರಳೇ ದಾರಿ ತೋರಿಸುತ್ತಿದೆ ಕತ್ತಲೆಯಲ್ಲಿ ಎನ್ನುತ್ತ ಅವಳ ನೆನಪು, ನೆರಳು ಜೀವನದ ಕತ್ತಲಿನಲ್ಲೂ ದಾರಿ ತೋರುವ ಬೆಳಕಾಗುವ ಕುರಿತು ತುಂಬು ನಂಬಿಕೆಯ ಮಾತನಾಡುತ್ತಾರೆ. ಒಟ್ಟಿನಲ್ಲಿ ಬದುಕು ಅವಳ ಅವಳೊಂದ ಸಾಗಬೇಕೆನ್ನುವುದು ಕವಿ ಆಶಯ.                    ಎಲ್ಲವನ್ನೂ ಅಥೆಂಟಿಕ್ ಆಗಿ ಹೇಳುವ ಕವಿ ಸಾವಿನ ಬಗ್ಗೆ ಮಾತನಾಡದಿದ್ದರೆ ನಡೆದೀತು ಹೇಗೆ? ಹೀಗಾಗಿ ಬದುಕಿನ ನಶ್ವರತೆಯನ್ನು ಕತ್ತಲೆಗೆ ಹೋಲಿಸುತ್ತಾರೆ. ಕತ್ತಲೆಯ ಬದುಕು, ಬೆಳಕಿನ ಸಾವಿನ ರೂಪಕ ಇಲ್ಲ ಆಧ್ಯಾತ್ಮದ ಕೊನೆಯ ಹಂತವನ್ನು ನೆನಪಿಸುತ್ತದೆ. ನಾನು ಕತ್ತಲೆಯಲ್ಲಿ ಬದುಕಿದರೂ ಸಾವು ಬೆಳಕಿನಲ್ಲಿ ಬರಲಿ ವ್ಯಾವಹಾರಿಕ ಜಗತ್ತನ್ನು ತೊರೆದು ಅಲೌಕಿಕ ಜಗತ್ತನ್ನು ಸಾಮಕೇತಿಕವಾಗಿ ಪ್ರತಿನಿಧಿಸುವ ಕತ್ತಲಿನ ಬದುಕು ಮತ್ತು ಬೆಳಕಿನ ಸಾವು ಸಾವಿರಾರು ವರ್ಷಗಳ ಜ್ಞಾನವನ್ನು ಕೇವಲ ನಾಲ್ಕೇ ಸಾಲಿನಲ್ಲಿ ಕಣ್ಣೆದುರು ತೆರೆದಿಡುವ ಅದ್ಭುತ ಇದು. ಅಷ್ಟಾದರೂ ನಾವು ಎಷ್ಟೊಂದು ಸಾವನ್ನು ನೋಡುತ್ತೇವೆ. ಕಣ್ಣೆದುರಿಗೇ ಅದೆಷ್ಟೋ ಜನ ಪತಪತನೆ ಉದುರಿ ಬೀಳುತ್ತಿರುವ ಕಾಲಘಟ್ಟ ಇದು. ಸಾವಿನ ಲೆಕ್ಕಾಚಾರವನ್ನು ಬೆರಳೆಣಿಕೆಯಲ್ಲಿ ಮುಗಿಸಿ, ಸಾವಿರಗಟ್ಟಲೆ ಲೆಕ್ಕದಲ್ಲಿ ಎಣಿಸುತ್ತಿರುವ ಈ ಕೊರೋನಾ ಕಾಲದಲ್ಲಿ ಯಮ ಕೂಡ ಸಾವಿಗೆ ಕಣ್ಣೀರು ಹಾಕುತ್ತಿದ್ದಾನೆಯೇ? ಗೊತ್ತಿಲ್ಲ. ಆದರೆ ಪ್ರತಿ ಸಾವಿನ ಎದುರು ಯಮ ಅತ್ತಿದ್ದು ಯಾರ ಕಣ್ಣಿಗೂ ಕಾಣಿಸಲಿಲ್ಲ ಎನ್ನುವ ಕವಿಯ ಕಲ್ಪನೆ ಅದ್ಭುತವಾಗಿದೆ. ಇದ್ದರೂ ಇರಬಹುದು ಬಿಡಿ. ದಿನವೊಂದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ, ಕೆಲವೊಂದು ದಿನ ಲಕ್ಷದ ಎಣಿಕೆಯಲ್ಲಿ ಸಾವಿನ ಲೆಕ್ಕಾಚಾರ ಕಂಡಿದೆ ಈ ಜಗತ್ತು. ಜನರ ಮರಣದ ಪ್ರಮಾಣ ಆ ಯಮನಿಗೂ ದಿಗಿಲು ಹುಟ್ಟಿಸಿರಬಹುದು. ಆದರೆ ಸಾವಿಗೊಂದು ಗೌರವ ಕೊಡುತ್ತಿದ್ದೇವೆಯೇ? ಅದೂ ಇಲ್ಲ. ಕೊರೋನಾದಿಂದಾಗಿ ಸಾವುಗಳೆಲ್ಲ ಕೇವಲ ಬೀದಿ ಬದಿಯ ಹೆಣಗಳಷ್ಟೇ ಆಗಿಹೋಗುತ್ತಿರುವ ಈ ದುರಂತದ ಸಮಯದಲ್ಲಿ ಸಾವನ್ನು ಕುರಿತು ಮಾತನಾಡುವುದೇ ಅಪರಾಧ ಎನ್ನಿಸಿಬಿಡುತ್ತದೆ. ಸಾವಿನ ಮಾತು ಬಿಡಿ. ಬದುಕಿರುವವರನ್ನೇ ಮುಟ್ಟಿಸಿಕೊಳ್ಳಲು ನಾವು ಹಿಂದೇಟು ಹಾಕುತ್ತಿದ್ದೇವೆ. ಪರಸ್ಪರರನ್ನು ಭೇಟಿಯಾಗಲು ಅದೆಷ್ಟು ಮುಜುಗರ ಈಗ. ಅನಾವಶ್ಯಕವಾಗಿ ನಾವೀಗ ಯಾರೊಂದಿಗೂ ಮಾತನಾಡಲಾರೆವು. ಪಕ್ಕದ ಮನೆಯವರೊಂದಿಗೆ ಹರಟೆ ಹೊಡೆಯಲಾರೆವು. ಯಾಕೆಂದರೆ ಯಾರಿಗೆ ಗೊತ್ತು, ಅವರ ಮನೆಯ ಯಾವ ಸದಸ್ಯ ಹೊರಹೋಗಿ ಕೊರೋನಾ ಅಂಟಿಸಿಕೊAಡು ಬಂದಿದ್ದಾನೆಯೋ ಎಂಬ ಭಯ. ಇದರ ನಡುವೆ ಸಾವಿರಗಟ್ಟಲೆ ಹೆಣ ಸಂಪಾದಿಸುವ ಸಾವು ಮಾತ್ರ ಥೇಟ್ ರ‍್ಯಾದಿ ಕಳೆದುಕೊಂಡ ಭಿಕಾರಿ. ಅದೆಷ್ಟೋ ಕೋಟಿಗಳ ಒಡೆಯನಾದ ಮುಂಬೈನ ಒಬ್ಬ ಕೊರೋನಾದಿಂದ ಸತ್ತ ನಂತರ ಅವನ ಹೆಣವನ್ನು ಮನೆಯ ಗೇಟಿನ ಎದುರು ಬಿಸಾಡಿ ಹೋಗಿದ್ದಂತಹ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಾಗ ಈ ಸಾವು ಅದೆಷ್ಟು ಭೀಕರ ಎನ್ನಿಸಿಬಿಟ್ಟಿದ್ದಂತೂ ಸುಳ್ಳಲ್ಲ. ಹೀಗಾಗಿ ಈ ಸಂದರ್ಭದಲ್ಲಿ ನಾನು ಹೋದಮೇಲೆ ಇನ್ನೂ ಇರಬೇಕಿತ್ತು ಎನ್ನುವ ನಿಮ್ಮ ನಂಬಿಕೆಯೇ ಸಾರ್ಥಕ ಬದುಕಿನ ಕವಿತೆ ನಾವು ಸತ್ತ ನಂತರ ನಮ್ಮನ್ನು ಕ್ಷಣಮಾತ್ರವಾದರೂ ನೆನಪಿಸಿಕೊಂಡು ಇನ್ನೂ ಇರಬೇಕಿತ್ತು ಎಂದು ಯಾರಾದರೂ ಮನಃಪೂರ್ವಕವಾಗಿ ಅಂದುಕೊAಡರೆ ಅದೇ ದೊಡ್ಡ ಶೃದ್ಧಾಂಜಲಿ. ಇದರ ಹೊರತಾಗಿ ಮಾಡುವ ಯಾವ ಧಾರ್ಮಿಕ ಶ್ರಾದ್ಧ, ತಿಥಿಗಳೂ ನನ್ನನ್ನು ಈ ಇಹಲೋಕದಿಂದ ಮುಕ್ತಗೊಳಿಸಲಾರದು.    ಕವಿತೆ ಬರೆಯುವುದು ಎಂದರೆ ಮರ‍್ನಾಲ್ಕು ಪುಟದ ಗದ್ಯ ಕವನ ಬರೆಯುವ ನನ್ನಂಥವರಿಗೆ ನಾಲ್ಕೇ ಸಾಲಿನಲ್ಲಿ ಹೇಳಬೇಕಾದುದ್ದನ್ನೆಲ್ಲ ಓದುಗರೆದೆಗೆ ದಾಟಿಸುವುದು ಒಂದು ಅಚ್ಚರಿಯ ವಿಷಯವೇ ಸರಿ.

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಹೆಣ್ಣೊಡಲಾಳದ ನೋವಿನ ದನಿಗಳು ಅಂಕಣ ಬರಹ ಊರ ಒಳಗಣ ಬಯಲುಲೇಖಕಿ-ವಿನಯಾಪ್ರಕಾಶಕರು- ಛಂದ ಪುಸ್ತಕಬೆಲೆ-೪೦/-              ನಮ್ಮ ಮನೆಯಿಂದ ಒಂದುವರೆ ಕಿ.ಮಿ ಹೋದರೆ ಗಂಗಾವಳಿ ನದಿ ಸಮುದ್ರಕ್ಕೆ ಸೇರುವ ಸ್ಥಳ ಬರುತ್ತದೆ. ಅಲ್ಲಿಯೇ ಸ್ವಲ್ಪ ಹಿಂದೆ ಗಂಗಾವಳಿ ನದಿಯನ್ನು ದಾಟಿಸುವ ಸ್ಥಳವಿದೆ. ಮೊದಲೆಲ್ಲ ದೋಣಿಯಲ್ಲಿ ದಾಟಿಸುತ್ತಿದ್ದರು. ಈಗ ದೊಡ್ಡದೊಂದು ಬಾರ್ಜು ಬಂದಿದೆ. ಮಕ್ಕಳಿಗೆ ಒಂದು ಚಂದದ ಅನುಭವವಾಗಲೆಂದು ಕೆಲವೊಮ್ಮೆ ಅಲ್ಲಿಂದ ಬಾರ್ಜಿನಲ್ಲಿ ದಾಟಿ ಸಮೀಪದ ಮಾಸ್ಕೇರಿ ಎಂಬ ಊರಿಗೆ ಹೋಗಿ ಬರುವುದೂ ಇದೆ. ಕೆಲವೊಮ್ಮೆ ಅಲ್ಲಿಂದ ಒಂದೆರಡು ಕಿ.ಮಿ ದೂರ ಇರುವ ಗೋಕರ್ಣಕ್ಕೂ ಹೋಗಿ ಬರುವುದಿದೆ. ಮೊದಲ ಕಥೆಯನ್ನು ಓದುತ್ತಲೇ ಮತ್ತೆ ಇದೆಲ್ಲವನ್ನೂ ನೆನಪಿಸಿ, ಒಮ್ಮೆ ಮಾಸ್ಕೇರಿಗೆ ಹೋಗಬೇಕು ಎನ್ನುವ ಭಾವ ಹುಟ್ಟಿಸಿದ ಪುಸ್ತಕ ವಿನಯಾ ಒಕ್ಕುಂದರವರ ಊರೊಳಗಣ ಬಯಲು ಎನ್ನುವ ಕಥಾ ಸಂಕಲನ. ಮೊದಲ ಕಥೆ ಒಬ್ಬ ಹುಡುಗಿ ತನ್ನದೇನೂ ತಪ್ಪಿಲ್ಲದೇ ಹುಡುಗನ ಬರೀ ಬಾಯಿ ಮಾತಿನ ತೆವಲಿಗೆ ಬಲಿಯಾಗಿ ಇಡೀ ಹದಿಹರೆಯ ಹಾಗು ಯೌವ್ವನದ ದಿನಗಳನ್ನು ಅಂಜುತ್ತ, ಉಳಿದವರ ಅನುಮಾನದ ದೃಷ್ಟಿಗೆ ಪಕ್ಕಾಗಿ ನೋಯುತ್ತ ನವೆದ ಕಥೆಯಿದೆ. ಹದಿಮೂರು ವರ್ಷದ ಹುಡುಗಿಯನ್ನು ಅದಾವ ಕಾರಣಕ್ಕಾಗಿ ತನ್ನ ಪ್ರಿಯತಮೆ ಎಂದು ಸುದ್ದಿ ಹಬ್ಬಿಸಿದ ಎಂಬುದು ಕೊನೆಗೂ ಅರ್ಥವಾಗುವುದಿಲ್ಲ. ಅದೆಷ್ಟೋ ವರ್ಷಗಳ ನಂತರ ಪುನಃ ದೋಣಿ ದಾಟಲು ಬಂದವಳು ಅಕಸ್ಮಾತಾಗಿ ಅವನನ್ನು ಕಂಡು ಹಳೆಯದ್ದನ್ನೆಲ್ಲ ನೆನಪಿಸಿಕೊಂಡು ಬರೆಯುವ ಪತ್ರ ಈ ಕಥೆ. ಇಲ್ಲಿ ಬರುವ ಹಲವಾರು ಮನೆಗಳ ಹೆಸರುಗಳು ಅದೆಷ್ಟು ಆಪ್ತವೆಂದರೆ ನಾನೇ ಆ ಜಾಗದಲ್ಲಿ ಇದ್ದೆನೇನೋ ಎಂಬ ಭಾವ. ಗಾಂವಕರ ಮನೆಯ ಯಾರು ಹೀಗೆ ಮಾಡಿದ್ದು ಎಂಬ ಊಹೆ, ಒಟ್ಟಿನಲ್ಲಿ ಕಥೆ ಎಂಬುದು ಕಥೆಯಾಗಷ್ಟೇ ಉಳಿಯದೇ ಇದು ನನ್ನದೇ ಬದುಕಿನ ಒಂದುಚಭಾಗ ಎನ್ನಿಸುವಂತಾಗಿದ್ದಕ್ಕೆ ಕಾರಣವೂ ಇದೆ. ಮಾಸ್ಕೇರಿಯ ಗಾಂವಕರ ಮನೆತನ ಒಂದು ಪ್ರತಿಷ್ಟೆಯ ಮನೆತನವಷ್ಟೇ ಅಲ್ಲ ಅದು ನನ್ನ ಅಪ್ಪನ ಅಜ್ಜಿ ಮನೆಯೂ ಹೌದು. ನನ್ನ ಅಜ್ಜಿಯನ್ನು ಮದುವೆಯ ಸಮಯದಲ್ಲಿ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಕರೆತಂದಿದ್ದರಂತೆ ಎಂದು ಅಪ್ಪ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಹೀಗಾಗಿ ಇಲ್ಲಿ ಬರುವ ಪಾತ್ರಗಳೆಲ್ಲ ನನಗೆ ಹತ್ತಿರದ್ದು ಎಂದು ಅನ್ನಿಸಲು ಪ್ರಾರಂಭವಾಗಿದ್ದು. ಅಷ್ಟೇ ಅಲ್ಲ, ನನ್ನ ಚಿಕ್ಕಪ್ಪನ ಮಗಳು ಭಾರತಿಗೂ ಇದು ಅಜ್ಜಿ ಮನೆಯಾದ್ದರಿಂದ ನಮ್ಮಿಬ್ಬರ ಅಡೆತಡೆಯಿಲ್ಲದ ಅದೆಷ್ಟೋ ಮಾತುಗಳಲ್ಲಿ ಮಾಸ್ಕೇರಿಯ ವಿಷಯ ಆಗಾಗ ಬಂದು ಹೋಗುತ್ತಿರುತ್ತದೆ. ಆ ಕಾಲದಲ್ಲೇ ಕಾಶಿ ವಿದ್ಯಾಪೀಠದಲ್ಲಿ ಓದಿ ಶಾಸ್ತ್ರಿ ಪದವಿ ಪಡೆದ ಅಪರೂಪದ ಮಹಾನುಭಾವರಲ್ಲಿ ಆಕೆಯ ಅಜ್ಜ ಕೂಡ ಒಬ್ಬರು. ಇದೆಲ್ಲವೂ ಈ ಕಥೆಯನ್ನು ಓದಿದ ನಂತರ ನೆನಪು ಮರುಕಳಿಸಿ ಕಥೆ ಓದುತ್ತಿದ್ದೇನೆಯೋ ಅಥವಾ ಸಿನೇಮಾ ನೋಡುತ್ತಿದ್ದೇನೆಯೋ ಎಂಬ ಭಾವ ಹುಟ್ಟಿಸಿದ್ದು ಸುಳ್ಳಲ್ಲ.     ಅಮ್ಮನ ಕವನ ಸಂಕಲನ ಬಿಡುಗಡೆಗೆ ಬಾ ಎಂದ ವಿನಯರವರು ನನಗೆ ಈಗಲೂ ನೆನಪಾಗುತ್ತಾರೆ. ನಮ್ಮೂರ ಕಡೆಗಳಲ್ಲಿ ಗೌರಮ್ಮ ಅಕ್ಕೋರೆಂದರೆ ಕರಕುಶಲವಸ್ತುಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು ಎಂದೇ ಪರಿಚಿತ. ಅವರ ಮನೆಗೆ ಹೋದವಳು ಹುಲ್ಲಿನಲ್ಲಿ ಮಾಡಿದ ಬೀಸಣಿಗೆಯನ್ನು ನನಗೆ ಬೇಕು ಎನ್ನುತ್ತ ತೆಗೆದುಕೊಂಡು ಬಂದಿದ್ದೆ. ಈಗಲೂ ಮನೆಯ ಬಾಗಿಲಿನಲ್ಲಿರುವ ಆ ಬೀಸಣಿಕೆ ನೋಡಿದಾಗಲೆಲ್ಲ ಗೌರಮ್ಮಕ್ಕನ ನೆನಪು ಮತ್ತು ಅದರ ಜೊತೆಜೊತೆಯಾಗಿಯೇ ಬರುವ ವಿನಯಾ ನೆನಪು.          ಹದಿಮೂರು ವರ್ಷದ ಹುಡುಗಿಯನ್ನು ತನ್ನ ಪ್ರಿಯತಮೆ ಎಂದು ಬಿಂಬಿಸಲು ಹೊರಟವನು ತನ್ನ ಅದೇ ವಯಸ್ಸಿನ ತಮ್ಮನನ್ನು ಪುಟ್ಟ ಮಗುವಂತೆ ನೋಡಿಕೊಳ್ಳುತ್ತ, ಬಸ್ ಹತ್ತಿಸಿ ಶಾಲೆಗೆ ಬಿಡುತ್ತಾನೆ. ಹೆಣ್ಣಾದರೆ ಆಕೆ ಹದಿಮೂರಕ್ಕೇ ದೊಡ್ಡವಳಾದ ಲೆಕ್ಕವೇ ಎಂದು ಕೇಳುವ ಪ್ರಶ್ನೆ ಇಂದಿನ ಜಗತ್ತಿಗೆ ಹಿಡಿದ ಕೈಗನ್ನಡಿಯಂತಿದೆ. ಹತ್ತು ಹನ್ನೆರಡು ವಯಸ್ಸಿಗೆ ಮೈನೆರೆದು ಬಿಡುವ ಇಂದಿನ ಹುಡುಗಿಯರು ಸಹಜವಾಗಿಯೇ ತಮ್ಮ ಬಾಲ್ಯವನ್ನು ಕಳೆದುಕೊಂಡು ಬಿಡುವ ಕ್ರೂರ ನೆನಪುಗಳ ಮಾಲೆಯೂ ಇಲ್ಲಿದೆ. ಯಾಕೆಂದರೆ ತನಗೆ ಗೊತ್ತಿಲ್ಲದ ಪ್ರೇಮಿಯೊಬ್ಬ ತನ್ನ ಮನೆಯೆದುರು ಸುಳಿದಾಡುವಾಗ ಚಿಕ್ಕಪ್ಪ ಎನ್ನಿಸಿಕೊಂಡವನೂ ಕೂಡ ಏನಿರಬಹುದು ಎಂಬುದನ್ನು ಇವಳ ಬಳಿಯೂ ಕೇಳದೆ, ಯೋಚಿಸುವ ವ್ಯವಧಾನವೂ ಇಲ್ಲದಂತೆ ಸಾರಾಸಗಟಾಗಿ ‘ತೀಟೆಯಿದ್ದರೆ ನನ್ನ ಸಂಗಡ ಬಾರೆ’ ಎಂದು ಬಿಡುವುದು ಅದೆಷ್ಟು ಅಸಹ್ಯದ ಪರಮಾವಧಿ, ಆಡಾಡುತ್ತಲೇ ಹೇಳಿದ ಮಾತಿರಬಹುದು ಎಂದು ಸಮಾಧಾನ ಹೇಳಿಕೊಳ್ಳಬಹುದಾಗಿದ್ದರೂ ವರಸೆಯಲ್ಲಿ ಮಗಳೇ ಆಗಬೇಕಿದ್ದವಳಿಗೆ ಆಡುವ ಮಾತೇ ಇದು ಎಂದು ನಿಬ್ಬೆರಗಾಗುವಂತೆ ಮಾಡುತ್ತದೆ. ಗಂಡಸರ ಕಾಮವಾಂಛೆಗೆ ಯಾರಾದರೇನು ಎಂಬ ಮಾತಿಗೆ ಪುರಾವೆ ನೀಡುವಂತಿದೆ.   ಎರಡನೆಯ ಕಥೆ ಊರ ಒಳಗಣ ಬಯಲು ಕೂಡ ಮಾಸ್ಕೇರಿಯ ಆವರಣದ್ದೇ. ಊರು ಬಿಟ್ಟು ಹೋಗಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾದ ಕಥಾನಾಯಕ ತನ್ನ ತಂದೆ ಪಾಂಡುರಂಗ ಗಾಂವಕರರ ಹೆದರಿಕೆಯಿಂದಾಗಿ ಊರಿಗೆ ಬಂದರೂ ಮನೆಗೆ ಹೋಗಲಾಗದೇ ಹಿಂದಿರುಗುವ ಕಥೆಯಿದ್ದರೂ ಅದು ಒಂದು ಊರು ನಿಧಾನವಾಗಿ ತನ್ನ ಹಳೆಯ ಬಾಂಧವ್ಯವನ್ನು ಮರೆಯುವ ಕಥೆಯನ್ನು ಹೇಳುತ್ತಲೇ, ಅಂದು ಜಾತಿ ಕಾರಣಕ್ಕಾಗಿ ಮಾಪಿಳ್ಳೆಯರ ಹುಡುಗಿಯನ್ನು ಬೆನ್ನಟ್ಟಿ ಹೋಗಿದ್ದನ್ನು ವಿರೋಧಿಸಿ ಜಗಳವಾಡಿದ್ದ ಊರಿನ ಹಿಂದಿನ ಗುನಗನ ಮಗನಾಗಿದ್ದವ, ಪ್ರಸ್ತುತ ಶಾಂತಿಕಾ ಪರಮೇಶ್ವರಿಯ ಗುನಗ ‘ಹಿರೀ ಸೊಸೆಯನ್ನು ಮನೆ ತುಂಬಿಸಿಕೊಳ್ಳದೇ ಕಿರಿ ಸೊಸೆಯನ್ನು ತುಂಬಿಸಲಾಗದು ಎಂದು ದೇವಿಯ ಅಪ್ಪಣೆ’ ಕೊಡಿಸುವುದಾಗಿ ಹೇಳುವುದು, ದೋಣಿ ದಾಟಿಸುವವನೂ ಕೂಡ ಪಾಂಡೊಡೆದಿರು ಮಗನನ್ನು ಒಪ್ಪಿ ಕೊಂಡರೇನೋ, ಹಂಗಾದ್ರೆ ಸಾಕು ಎಂದು ಹಾರೈಸುವುದು ಇನ್ನೂ ಉಳಿದಿರುವ ಮಾನವೀಯತೆಯ ಪ್ರೀತಿಯನ್ನು ನೆನಪಿಸುತ್ತದೆ. ಮನೆ ಎಂದರೆ ಅದು ಕೇವಲ ತನ್ನೊಬ್ಬನ ಮನೆಯಲ್ಲ, ಇಡೀ ಊರನ್ನೂ ಒಳಗೊಂಡಿದ್ದು ಎನ್ನುವ ಮಾತು ಒಮ್ಮೆ ಎದೆಯನ್ನು ಹಸಿಯಾಗಿಸುತ್ತದೆ.    ಮೂರನೆಯ ಕಥೆ ಕಡಿತನಕ ಕಾಯುವ ಅಭಿಮಾನದಲ್ಲಿ ಹೆಣ್ಣು ಅನುಭವಿಸುವ ಅಸ್ಥಿರತೆಯನ್ನು ತೀರಾ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಅತ್ತೆ, ಸೊಸೆ ಗಂಗಮ್ಮ, ಹಾಗೂ ಅವಳ ಮಗಳು ಕರಿಶ್ಮಾ ಆದ ಕರಿಯಮ್ಮ ಹೀಗೆ ಮೂರು ತಲೆಮಾರಿನ ಹೆಣ್ಣುಗಳು ಅನುಭವಿಸುವ ಯಾತನೆಯನ್ನು ಕಾಣಬಹುದು. ಮಾವ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ತನ್ನೆಲ್ಲ ಗದ್ದೆಯನ್ನೂ ಮಾರಿ, ಅತ್ತೆಯ  ಬಂಗಾರವನ್ನೂ ಊರಿನ ವೇಶ್ಯೆಗೆ ಸುರಿದವನು. ಅವನೆಲ್ಲ ಆಟಾಟೋಪವನ್ನು ಸೋದರ ಸೊಸೆಯಾಗಿ ಕಣ್ಣಾರೆ ಕಂಡವಳು, ನಂತರ ಅವನ ಮಗನನ್ನು ಮದುವೆಯಾಗಿ ತಾನೂ ಜವಾಬ್ಧಾರಿ ಇಲ್ಲದ ಗಂಡನನ್ನು ನಿಭಾಯಿಸಿದವಳು. ಬೆಳದಿಂಗಳಿಂದ ಕಡ ತಂದಂತಹ ದಂತದ ಗೊಂಬೆ ಮಗಳನ್ನು ಓದಿಸಿ ಮದುವೆ ಮಾಡಿ ನಿಶ್ಚಿಂತಳಾಗಿರುವ ಗಂಗಕ್ಕ, ಮಗಳು ಅಲ್ಲಿಯೂ ಮನೆಯೊಳಗಿನ ಕೈದಿ. ಹುಟ್ಟಿದ ಮಗನನ್ನು ಓದಿಸಿ, ಈಗಿನ ಟ್ರೆಂಡ್‌ಗೆ ತಯಾರು ಮಾಡಲೆಂದು ದೂರದ ಡೆಹರಾಡೂನ್ ಸ್ಕೂಲ್‌ಗೆ ಹಾಕಿ ಅಮ್ಮ ಮಗನ ಬಾಂಧವ್ಯವನ್ನೇ ಕಸಿದು ಬಿಡುವ ಅಪ್ಪ, ನಂತರ ಟ್ಯೂಷನ್‌ಗೆಂದು ಬರುವು ಹುಡುಗರ ಮೇಲೂ ಅನುಮಾನ ಪಟ್ಟು, ಆಕೆ ಪ್ರಾಣ ಕಳೆದುಕೊಳ್ಳುವಂತೆ ಮಾಡುತ್ತಾನೆ.    ನಾಲ್ಕನೆಯ ಕಥೆಯಂತೂ ತೀರಾ ತಿಳಿಯದ ಆಳಕ್ಕೆ ನನ್ನನ್ನು ನೂಕಿದ ಕಥೆ ಎಲ್ಲ ಆರಾಮ. ಹೇಳಲಾಗದ ಅದೆಂತಹುದ್ದೋ ಬಾಲ್ಯದ ನೆನಪುಗಳನ್ನೆಲ್ಲ ಗಬರಾಡಿ ಎದುರಿಗಿಟ್ಟ ಕಥೆಯಿದು. ಸಾವಿತ್ರಿ ಟೀಚರ್ ಯಾಕೆ ತಮ್ಮ ಸಹೋದ್ಯೋಗಿ ಪ ನಾ ಮಾಗೋಡರಿಗೆ ಎಲ್ ಐ ಸಿ ನಾಮಿನೇಟ್ ಮಾಡಿದರು? ಆಯಿ ಎಂದು ಕರೆಯುತ್ತಿದ್ದ ಹುಡುಗ ಯಾರು? ಮೇದಾರ ಸರ್ ಯಾರು ಎಂಬೆಲ್ಲ ಪ್ರಶ್ನೆಗಳು ಬಗೆಹರಿಯುವುದೇ ಇಲ್ಲ. ನಮ್ಮ ಬಾಲ್ಯದಲ್ಲೂ ಇಂತಹ ಹತ್ತಾರು ಪ್ರಶ್ನೆಗಳು ಹುಟ್ಟಿ ಈಗಲೂ ಕಾಡುತ್ತಿರುವ ವಿಷಯಗಳು ಹಾಗೆಯೇ ಇದ್ದಿರಬಹುದು, ಅದು ಶಿಕ್ಷಕರಾಗಿರಬಹುದು, ಸುತ್ತ ಮುತ್ತಲಿನ ಯಾರೋ ಸಂಬಂಧಿಗಳಾಗಿರಬಹುದು, ನೆರೆಹೊರೆಯವರಾಗಿರಬಹುದು, ದೂರದಲ್ಲಿ ಕೇಳಿದ ಯಾರದ್ದೋ ಕತೆಯೇ ಆಗಿರಬಹುದು,  ಇಂತಹ ಹಲವಾರು ಪ್ರಶ್ನೆಗಳು ನಮ್ಮೆದೆಯ ಒಂದು ಮೂಲೆಯಲ್ಲಿ ಹಾಗಿಯೇ ಬೆಚ್ಚಗೆ ಮಲಗಿರುತ್ತದೆ. ಅಂತಹ ಪ್ರಶ್ನೆಗಳೆಲ್ಲ ನನ್ನೆದುರಿಗೂ ಧುತ್ತನೆ ಎದುರು ನಿಂತಂತಾಗಿ ತಲ್ಲಣಿಸುವಂತಾಗಿದ್ದು ಸುಳ್ಳಲ್ಲ. ನೋಯದವರೆತ್ತ ಬಲ್ಲರೋ ಎನ್ನುವ ಕಥೆಯ ತವರು ಮನೆಯನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ ಅಂಜನಿ ಆಸ್ತಿಯನ್ನೆಲ್ಲ ಕೊಡುತ್ತೇನೆಂದರೆ ನಿರಾಕರಿಸಿ ಸಾವನ್ನಪ್ಪುವ ಬಗೆ ಒಂದು ಕ್ಷಣ ಕೊರಳು ಹಿಡಿದಂತಾಗುತ್ತದೆ. ಅಂಜನಿಯನ್ನು ಮದುವೆಯಾಗಬೇಕಾಗಿದ್ದ ಅನಿಲ, ‘ಮೋಸ ಮಾಡುಕೆ ನಾ ಏನ ಅದರ ಮೈ ಮುಟ್ಟಿನೆ’ ಎಂದು ಒಂದಿಷ್ಟೂ ಅಳುಕಿಲ್ಲದೇ ಹೇಳಿ, ಮೈ ಮುಟ್ಟಿದರೆ ಮಾತ್ರ ತಪ್ಪು ಎಂಬಂತೆ ನಡೆದುಕೊಳ್ಳುವ ಭಾವ ಮತ್ತೊಮ್ಮೆ ಈ ಸಮಾಜz, ಇಲ್ಲಿನ ಗಂಡಸರ ರೀತಿನೀತಿಯ ಬಗ್ಗೆ, ಅವರು ಯೋಚಿಸುವ ಬಗೆಯ ಕುರಿತು ತಿರಸ್ಕಾರ ಹುಟ್ಟುವಂತೆ ಮಾಡಿ ಬಿಡುತ್ತದೆ. ದಣಿವು ಕಾಡುವ ಹೊತ್ತು ಕಥೆಯಲ್ಲಿ ಒಂದಿಷ್ಟು ಗೊಂದಲ ಕಾಣಿಸುತ್ತದೆ. ಕಥೆಯ ಮೊದಮೊದಲು ಯಾರಿಗೆ ಏನಾಗಿದ್ದು ಎಂಬುದು ತಿಳಿಯದೇ ಕೊನೆಗೆ ಹೆಡ್ಮಾಸ್ತರರ ಹೆಂಡತಿ ತೀರಿ ಹೋಗಿದ್ದು, ಇತ್ತ ಗಂಡ ಯಾರು ಸತ್ತರೇನು ಉಳಿದವು ಆತನನ್ನು ಬದುಕಿಸುತ್ತವೆ ಎಂಬಂತೆ ಮಾತನಾಡಿದ್ದು ಎಲ್ಲವೂ ಬದುಕು ಇಷ್ಟೇನೇ ಎಂಬಂತೆ ಮಾಡಿಬಿಡುತ್ತದೆ. ಸ್ವಯ ಕಥೆಯಲ್ಲಿ ಯಾವುದೋ ಗರ್ಜಿಗೆ ದೂರಾದ ಗಂಡ ಹೆಂಡಿರ ಮನದ ಮಾತುಗಳಿವೆ. ಊರೆಲ್ಲ ಸುತ್ತುವ ಗಂಡಸಿಗೆ ಮನೆಯ ಹೆಂಡತಿ ನೆನಪಾಗುವುದು ತಾನು ಹಾಸಿಗೆ ಹಿಡಿದಾUಲೇ. ಆದೇ ಹೆಣ್ಣು ತಿರಸ್ಕಾರವ ನುಂಗಿ, ಗಂಡ ಹಾರಿದ ಬೇಲಿ ಎದುರಿಗೇ ಇದ್ದರೂ ಮಾತನಾಡದವಳು. ಎಲ್ಲಿಯೂ ಉಳಿದ ಹೆಂಗಸರಂತೆ ನಮ್ಮವರು ಎನ್ನದೇ, ನಿಮ್ಮನ್ನೋರು ಎನ್ನುತ್ತ ಕೊನೆಗೆ ತನ್ನ ಗಂಡ ಹೋಗುತ್ತಿದ್ದ ಮನೆಯವಳಿಗೂ ನಿಮ್ಮಣ್ಣೋರು ಎಂದು ಹೇಳಿ ನಕ್ಕುಬಿಡುವ ಪರಿ  ಸಾಧಾರಣಕ್ಕೆ ದಕ್ಕುವಂತಹುದ್ದಲ್ಲ. ಇಬ್ಬರ ಮನದ ಮಾತು ನಮ್ಮೊಳಗಿನ ಆಳವನ್ನು ಕೆದರಿ ಗಾಯವಾಗಿಸುತ್ತದೆ. ಕ್ಷಮೆಯಿರಲಿ ಕಂದಾ ಕಥೆಯಲ್ಲಿ ಶಿಕ್ಷಕಿಯೊಬ್ಬಳು ಎದುರಿಸಿದ ಸಾಮಾಜಿಕ ಬಂಧದ ಕಥೆಯಿದೆ. ಮಕ್ಕಳಂತೆ ಕಾಣುವ ವಿದ್ಯಾರ್ಥಿಗಳಲ್ಲಿ ಈ ಸಮಾಜ ಜಾತಿ ವಿಷಬೀಜವನ್ನು ಬಿತ್ತುವಾಗ,  ಆ ಮಕ್ಕಳ ಕುರಿತು ಶಿಕ್ಷಕಿಯ ಮೇಲೇ ಇಲ್ಲ ಸಲ್ಲದ ಸಂಬಂಧದ ಆರೋಪ ಹೊರಿಸುವಾಗ ಶಿಕ್ಷಕಿ ಅಸಹಾಯಕಳಾದ ಕಥೆ ಇಲ್ಲಿದೆ. ಜಾಣೆಯಾಗಿರು ಮಲ್ಲಿಗೆ ಕಥೆಯಲ್ಲಿ ದೊಡ್ಡವಳಾಗುವ ಮಗಳ ವೇದನೆಯಿದೆ. ಅಲ್ಲಿ ಬರುವ ಕಥೆ ಕೂಡ ತೀರಾ ರೂಪಕದಲ್ಲಿದ್ದು ಕಪ್ಪು ಬಣ್ಣದ ಕಾಲುವೆ ಹರಿದು ಬಾವಿಯಾಗುವಂತೆ ಹೇಳುತ್ತದೆ. ಕೊನೆಯ ಕಥೆ ಹತ್ತು ವರ್ಷದ ಹಿಂದೆ ಮತ್ತೂರ ತೇರಿನಲಿ ಕಥೆಯಲ್ಲಿ ‘ನೋಡಿದರೆ ತನ್ನಂತೆ ಕಾಣುವ ಮೊಬೈಲ್ ಸೆಟ್ ಎಂದು ತಂದೆ’ ಎಂದಿದ್ದು ನಂತರ ಅದು ಬೇಸರವಾಗಿದೆ ಬದಲಾಯಿಸುವೆ ಎಂದಾಗ ತನ್ನನ್ನೇ ಬದಲಾಯಿಸುವೆ ಎಂದಂತಾಗಿ ಅವಳು ನಡುಗುವುದು, ಮತ್ತು ಆತ ಹೇಳಿದ ಮಾತಿಗೆ ಅರ್ಥ ಹಚ್ಚುತ್ತ ಸಮಾಧಾನ ಮಾಡಿಕೊಳ್ಳುವ ಕೆಲಸದಲ್ಲಿ ಅವಳು ತಲ್ಲೀನಳಾಗುವುದು ಎಲ್ಲರ ಮನೆಯ ಕಥೆಯನ್ನೇ ನೆನಪಿಸುತ್ತದೆ.    ಇಲ್ಲಿರುವ ಹೆಚ್ಚಿನ ಕಥೆಗಳು ನನಗೆ ತೀರಾ ಆಪ್ತವಾಗುವುದಕ್ಕೆ ಕಾರಣ ಅದು ನಮ್ಮೂರಿನ ಸುತ್ತ ಮುತ್ತಲ ಹಳ್ಳಿಗಳ ಹೆಸರನ್ನು ಒಳಗೊಂಡಿದ್ದು. ಮಾಸ್ಕೇರಿ, ಹೊನ್ನೆಬೈಲು, ಅಗಸೂರು, ದೇವರಭಾವಿ, ಸಗಡಗೇರಿ, ತೊರ್ಕೆಗಳು ನನ್ನದೇ ಅವಿಭಾಜ್ಯ ಅಂಗಗಳಾಗಿರುವ ಊರುಗಳು. ಇನ್ನು ಹೆಚ್ಚಿನ ಕಥೆಗಳ ಭಾಷೆಗಳಂತೂ ನನ್ನದೇ ಆಡುಭಾಷೆ. ಹೀಗಾಗಿ ಈ ಕಥೆಗಳಲ್ಲೆಲ್ಲ ನಾನೇ ಭಾಗವಾಗಿದ್ದೇನೆ ಎಂದುಕೊಳ್ಳುತ್ತಲೇ ಓದಿದ್ದೇನೆ.    ಅಂದಹಾಗೆ ಇಡೀ ಕಥೆ ಹೆಣ್ಣಿನ ಸುತ್ತ ಸುತ್ತುತ್ತದೆ. ಹೆಣ್ಣಿನ ಜೀವನದ ಆಗುಹೋಗುಗಳು ಇಲ್ಲಿನ ಪ್ರಧಾನ ವಿಷಯಗಳು. ಹೆಣ್ಣಿನ ಕಷ್ಟಗಳ ಅರಿವು ಅವಳಿಗಷ್ಟೇ ಇರಲು ಸಾಧ್ಯ. ಇಡೀ ಸಂಕಲನ ಹೆಣ್ತನದ ಮೂಸೆಯಲ್ಲಿ ಅದ್ದಿ ತೆಗೆದಂತಿದೆ. ಜೀವನದ ಹತ್ತಾರು ಅನುಭವಗಳು, ನೋವು ನಲಿವುಗಳನ್ನು ಹೆಣ್ಣಿನ ದೃಷ್ಟಿಯಲ್ಲಿ ನೋಡುವುದನ್ನು ಇಲ್ಲಿನ ಕಥೆಗಳು ನಮಗೆ ಕಲಿಸಿಕೊಡುತ್ತವೆ. ಹತ್ತಿರದವರು ಎಂದುಕೊಂಡವರೇ ಹೆಣ್ಣನ್ನು ಬಳಸಿಕೊಳ್ಳುವ ಪರಿ ಮೈ ನಡುಗಿಸುತ್ತದೆ. ಮೊದಲ ಕಥೆಯ ಸುಧಾಕರನಂತೆ ಇದೇ ಎಂದು ನಿಖರವಾಗಿ ತೋರಿಸಲಾಗದ ಆದರೆ ಜೀವಮಾನವಿಡೀ ನೋವನುಭವಿಸುವ ಹಾನಿಯನ್ನು ಮಾಡಿ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಶಬ್ಧಭಾರವಿಲ್ಲದ ಮನದ ಮಾತುಗಳು

ಅಂಕಣ ಬರಹ ಶಾಂತಿ ಬೀಜಗಳ ಜತನಲೇಖಕರು- ಪ್ರಕಾಶ ಖಾಡೆಯಾಜಿ ಪ್ರಕಾಶನಬೆಲೆ-೧೨೦ ಶಾಂತಿ ಬೀಜಗಳ ಜತನಲೇಖಕರು- ಪ್ರಕಾಶ ಖಾಡೆಯಾಜಿ ಪ್ರಕಾಶನಬೆಲೆ-೧೨೦ ಜಗತ್ತು ವಿಚಿತ್ರ ಸಂದಿಗ್ಧತೆಯಲ್ಲಿದೆ. ಯಾರನ್ನು ನಂಬುವುದೋ, ಯಾರನ್ನು ಮಿತ್ರರೆನ್ನುವುದೋ ಎನ್ನುವ ದ್ವಂದ್ವ ಎಲ್ಲರನ್ನೂ ಕಾಡುತ್ತಿರುವ ಈ ಹೊತ್ತಿನಲ್ಲಿ ಆತ್ಮೀಯ ಮಿತ್ರರೂ ಶತ್ರುಗಳಾಗಿಬಿಡುವ ವಿಕಲ್ಪತೆಯ ದಿನಗಳಿವು. ನಾವು ಮನುಷ್ಯರೋ ಅಥವಾ ಮನುಷ್ಯ ರೂಪದಲ್ಲಿರುವ ಆತ್ಮ ಸತ್ತ ದೇಹಗಳೋ ಎಂಬ ಅನುಮಾನ ನಮ್ಮನ್ನೇ ಕಾಡುತ್ತಿರುವ ಈ ವಿಚಿತ್ರ ಸನ್ನಿವೇಶದಲ್ಲಿ ಹಿರಿಯ ಕವಿ ಪ್ರಕಾಶ ಖಾಡೆಯವರು ಮಾನವಿಯತೆಯನ್ನು ಹುಡುಕುತ್ತ ಹೊರಡುತ್ತಾರೆ.ಏನೂ ಬೇಡವೆಂದುಮನುಷ್ಯ ನಾಗಬೇಕೆಂದಿದ್ದೇನೆ ಮನುಷ್ಯತ್ವ ಹುಡುಕಿ ನಿಮ್ಮೊಂದಿಗೆಮುಖಾಮುಖಿಯಾಗಿದ್ದೇನೆ ಎನ್ನುವ ಮೊದಲ ಕವಿತೆಯ ಸಾಲುಗಳನ್ನು ಓದುತ್ತಲೆ ಮನಸ್ಸು ಅಲ್ಲಿಯೇ ನಿಂತುಬಿಡುತ್ತದೆ.ಪ್ರಕಾಶ ಖಾಡೆಯವರ ಈ ಸಾಲುಗಳು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ಕೊರೋನಾ ಕಾಲಘಟ್ಟದಲ್ಲಿ  ಮಾನವೀಯತೆಯನ್ನು ಎಲ್ಲಿ ಹುಡುಕುತ್ತೀರಿ? ಒಂದು ಸಾವಿಗೆ ನ್ಯಾಯ ಕೊಡಿಸಲೂ ಕೂಡ ಈ ಕಾಲಘಟ್ಟ ಸಹಕರಿಸುತ್ತಿಲ್ಲ. ಯಾರೋ ಸತ್ತ ಸುದ್ದಿಗೆ ಸ್ಪಂದಿಸುವ ಮೊದಲು ಸತ್ತವನು ಹೇಗೆ ಸತ್ತ? ಕೊರೋನಾ ಬಂದಿತ್ತಾ? ಹಾಗೇನಾದರೂ ಇದ್ದರೆ ಅಂತ್ಯ ಸಂಸ್ಕಾರಕ್ಕೆ ಹೋಗುವುದೇ ಎನ್ನುವ ಪ್ರಶ್ನೆಯೇ ಮೊದಲು ಉತ್ಪನ್ನವಾಗುವುದು. ಕಾಲ ಹೀಗಿರುವಾಗ ಮಾನವೀಯತೆಯನ್ನು ಹುಡುಕಿ ಹೊರಡುವುದಾದರೂ ಎಲ್ಲಿಗೆ. ಇಂತಹ ದುರಿತ ಕಾಲದಲ್ಲೂ ಮಾನವೀಯತೆಯನ್ನು ಹುಡುಕುವ ಪ್ರಕಾಶ ಖಾಡೆಯವರ ಮಾನವೀಯ ಹುಡುಕಾಟ ಇಂದು ಎಲ್ಲರ ಹುಡುಕಾಟ ಆಗಬೇಕಾದ ಅವಶ್ಯಕತೆಯಾಗಿದೆ.  ನಮ್ಮ ಜೊತೆಗಿದ್ದವರನ್ನು ಮರೆತು ಬಿಡುತ್ತಿದ್ದೇವೆ. ಹೊಳೆ ದಾಟಿದ ನಂತರ ಅಂಬಿಗನ ಹಂಗಾದರೂ ಏಕೆ ಬೇಕು ಎಂಬಂತೆ ವರ್ತಿಸುವುದು ಎಲ್ಲರಿಗೂ ರೂಢಿಯಾಗುತ್ತಿದೆ. ಹೀಗಾಗಿ ನಮ್ಮ ಜೊತೆಗಿದ್ದವರನ್ನು ಎಷ್ಟು ಸುಲಭವಾಗಿ ಮರೆತುಬಿಡುತ್ತಿದ್ದೇವೆ ಎಂದರೆ ನಮ್ಮನ್ನು ಪ್ರೀತಿಸುವವರನ್ನು ಸುಲಭವಾಗಿ ದೂರ ಮಾಡಿಕೊಳ್ಳುತ್ತೇವೆ. ಮತ್ತೊಂದು ಮೈತ್ರಿಯನ್ನು ರಚಿಸಿಕೊಳ್ಳುತ್ತೇವೆ. ಅದು ವೈಯಕ್ತಿಕ ಪ್ರೀತಿಯೇ ಇರಬಹುದು. ರಾಜತಾಂತ್ರಿಕ ಕಾರಣಗಳೇ ಇರಬಹುದು. ಯಾವುದೂ ಸ್ಥಿರವಲ್ಲ. ಇಂದು ಸ್ನೇಹಿತನಂತೆ ವರ್ತಿಸುವ ದೇಶವೊಂದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಶತ್ರು ದೇಶವಾಗಿಬಿಡಬಹುದು. ಅನಾದಿ ಕಾಲದಿಂದಲೂ ಭಾರತದ ನೆರಳಾಗಿದ್ದ ನೇಪಾಳ ಕೂಡ ನಮ್ಮ ದೇಶದ ಭಾಗಗಳನ್ನು ತನ್ನದೆಂದು ಒತ್ತುವರಿ ಮಾಡಿಕೊಂಡ ಹಾಗೆ.      ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಳ್ಳುತ್ತಿದ್ದರು. ನಾನು ತಮಾಷೆಗೆ ‘ಅವಳನ್ನು ಎಷ್ಟು ಪ್ರೀತಿಸುತ್ತೀರಿ?’ ಎಂದು ಕೇಳಿದ್ದೆ. ಗೊತ್ತು, ಹಾಗೆ ಪ್ರೇಮವನ್ನು ಪ್ರಮಾಣಿಸಲಾಗುವುದಿಲ್ಲ ಎಂಬುದು. ಆದರೆ ಅವರು ಹೇಳಿದ ಮಾತು ನಿಜಕ್ಕೂ ನನ್ನನ್ನು ತಲ್ಲಣಗೊಳಿಸಿತ್ತು. ‘ಇವೆಲ್ಲ ಇಂದಿದ್ದು ನಾಳೆ ಮರೆಯಾಗುವಂತಹುದ್ದು. ನಿಜ ಜೀವನದಲ್ಲಿ ಇಂತಹ ಪ್ರೇಮಗಳು ಕೊನೆಯವರೆಗೆ ಮುಂದುವರೆಯುವಂತಹುದ್ದಲ್ಲ’ ಎಂದಿದ್ದರು. ನಾನು ದಂಗಾಗಿದ್ದೆ. ಒಂದು ಪ್ರೀತಿಯನ್ನು ಉಸಿರಿರುವವರೆಗೆ ಕಾಪಿಡುವ ನಾವು ಅದೆಷ್ಟು ಬೇಗ ಪ್ರೀತಿಯನ್ನು ದಿನನಿತ್ಯ  ಬದಲಾಯಿಸುವ ಉಡುಪಿಗೆ ಸಮನಾಗಿಸಿಕೊಂಡು ಬಿಟ್ಟೆವು ಎಂಬುದು ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಇಂದು ಧರಿಸಿದ ಮೇಲುಡುಪನ್ನು ನಾಳೆಯೂ ಧರಿಸುತ್ತೇವೆ. ಆದರೆ ಪ್ರೀತಿ ಎಂಬುದು ಒಳ ಉಡುಪಿನಂತಾಗಿದೆ. ಒಳ ಉಡುಪನ್ನು ಇಂದು ಧರಿಸಿದರೆ ಕಡ್ಡಾಯವಾಗಿ ಮರುದಿನ ಬದಲಾಯಿಸುತ್ತೇವೆ. ಹಾಗಿದ್ದರೆ ನಾವು ಜೊತೆಗಿರಬೇಕೆಂದರೆ ಜೊತೆಜೊತೆಯಾಗಿ ಇಟ್ಟ ಹೆಜ್ಜೆಗಳಿಗೆ ಕಡ್ಡಾಯವಾಗಿ ಒಂದು ಸಾಕ್ಷಿಯನ್ನು ಹುಡುಕಿಕೊಳ್ಳಬೇಕೆ?ಜೊತೆಗೆ ಬಂದವರ ನೆನಪುಗಳಿಗೆಸವೆದ ದಾರಿಯಷ್ಟೇ ಸಾಕ್ಷಿಎನ್ನುವ ಕವಿಗೆ ಅರಿವಿದೆ, ಸವೆದ ದಾರಿಗಳಾದರೂ ಅದೆಷ್ಟು ದಿನ ತನ್ನ ಸಾಕ್ಷಿಯನ್ನು ಉಳಿಸೀತು? ಧೂಳು ಹಾರಿ ನಡೆದ ಹೆಜ್ಜೆಯ ಗುರುತಿನ ಸಾಕ್ಷಿಯನ್ನು ಅಳಿಸಿಬಿಡಲು ಅದೆಷ್ಟು ಸಮಯ ಬೇಕು?ಪುಟ್ಟ ಹೃದಯದಲ್ಲಿಒಂದಿಷ್ಟು ಜಾಗ ಖಾತ್ರಿ ಮಾಡಿಕೊಳ್ಳಬೇಕುಬದುಕಿನ ಸಾಕ್ಷಿಗೆಕಡಲ ದಂಡೆಯಲ್ಲಿ ಬೆಳೆದವಳು ನಾನು. ನಡೆಯುವ ಹೆಜ್ಜೆ ಮೂಡುವ ಮುನ್ನವೇ ಅಲೆಯ ಮೃದು ಚುಂಬನಕ್ಕೂ ಹೆಜ್ಜೆ ಗುರುತು ಕರಗಿಬಿಡುವ ಮರ್ಮದ ಅರಿವಿದೆ. ಹೀಗಾಗಿ ಕವಿ ಹೇಳುವ ಜೊತೆಗಿದ್ದುದಕ್ಕೆ  ಸವೆದ ಹಾದಿಗಾಗಿ ಹೊಸ ಸಾಕ್ಷಿಯನ್ನು ಹುಡುಕಲೇ ಬೇಕಾದ ಅನಿವಾರ್‍ಯತೆಯಿದೆ.ದಾರಿಗೆ ಮುಳ್ಳನ್ನುಹೂವ ತಂದವರೇ ಹಚ್ಚಿದ್ದಾರೆನಮಗೆ ಹೂವು ನೀಡುವ ನಾಟಕವಾಡುತ್ತಲೇ ನಮ್ಮ ದಾರಿಗೆ ಮುಳ್ಳನ್ನಿಡುವ ಗೋಮುಖ ವ್ಯಾಘ್ರಗಳ ಸಂಖ್ಯೆ ಈಗ ಹೆಚ್ಚಿದೆ. ಜೊತೆಗಿರುತ್ತಲೇ ಮಗ್ಗುಲಿಗೆ ಚೂರಿ ಹಾಕುವ, ಬೆಣ್ಣೆಯಂತಹ ಮಾತನಾಡುತ್ತಲೇ ಊಟಕ್ಕೆ ವಿಷವಿಕ್ಕುವವರ ನಡುವೆ ನಾವೀಗ ಬದುಕಬೇಕಿದೆ.ಹಿಂದೆ ಮಾತನಾಡುವವರ ನಾಲಿಗೆಹರದಾರಿ ಚಾಚಲಿ ಬಿಡಿನಮ್ಮ ಶಾಂತ ಮನಸ್ಸು ವಿಚಲಿತವಾಗದಿರಲಿಎನ್ನುತ್ತಾರೆ ಕವಿ. ಯಾವ ಸ್ನೇಹವೂ ಅರ್ಥ ಉಳಿಸಿಕೊಳ್ಳದ ಈ ತುರ್ತು ಸ್ಥಿತಿಯಲ್ಲಿ ನಮ್ಮ ಬೆನ್ನ ಹಿಂದೆ ಆಡಿಕೊಳ್ಳುವವರ ದೊಡ್ಡ ದಂಡೆ ಇರುತ್ತದೆ.  ಕೆಟ್ಟ ಕೆಲಸ ಮಾಡಿದರೆ ಅದು ಸಹಜವೇ. ಆದರೆ ಒಳ್ಳೆಯ ಕೆಲಸಕ್ಕೂ ಕುರುಬುವವರಿಗೇನೂ ಕಡಿಮೆಯಿಲ್ಲ. ಪ್ರತಿಯೊಂದು ಯಶಸ್ವಿ ಹೆಜ್ಜೆಗೂ ಬೆನ್ನ ಹಿಂದೊಂದು ಹಿತಶತ್ರುಗಳ ಗುಂಪೇ ತಯಾರಾಗುತ್ತದೆ. ಇಡುವ ಪ್ರತಿ ಹೆಜ್ಜೆಗೂ ಒಂದು ಕುಹಕ ಸಿದ್ಧವಾಗಿರುತ್ತದೆ. ಹೀಗಾಗಿ ಕವಿ ಬೆನ್ನಿರಿಯುವವರ ಕುರಿತೂ ನಮ್ಮ ಮನಸ್ಸು ಶಾಂತವಾಗಿರಬೇಕೆಂದು ಬಯಸುತ್ತಾರೆ. ಹಾಗೊಂದುವೇಳೆ ನಮ್ಮ ಮನದ ಹತೋಟಿಯನ್ನು ನಾವೇ ಕಳೆದುಕೊಂಡು ಬಿಟ್ಟರೆ ಬುದುಕು ಮೂರಾಬಟ್ಟೆಯಾಗುವುದು ನಮ್ಮದೇ. ಏಕೆಂದರೆ,ಎಲೆ ಉದುರಿಸಿಕೊಂಡುಬೋಳಾಗುವ ಮರಗಳಿಗೂಬರಡಾಗುವ ನೋವುಇದ್ದೇ ಇರುತ್ತದೆ. ಅಂದರೆ ಕಳೆದುಕೊಂಡ ಎಲೆಗಳ ಜಾಗದಲ್ಲೊಂದು ಕಲೆ ಮರದಲ್ಲಿ ಸಾಶ್ವತವಾಗಿ ಉಳಿದುಬಿಡುವಂತೆ ಸಂಬಂಧದ ಕುರುಹುಗಳೂ ಶಾಶ್ವತವಾಗಿ ಉಳಿಯಲೇ ಬೇಕಿದೆ. ತೆಂಗಿನ ಮರದ ಗರಿ/ ಹೆಡೆ ಬಿದ್ದಾಗ ಮರದ ಕಾಂಡದಲ್ಲಿ ಅದರದ್ದೊಂದು ಗುರುತು ಹಾಗೆಯೇ ಉಳಿದು ಮರದ ಬೆಳವಣಿಗೆಯ ಸಾಕ್ಷಿ ಹೇಳುತ್ತದೆ. ಹೀಗಿರುವಾಗ ಜೀವನದಲ್ಲಿ ಹಿಂದೆ ಬಿಟ್ಟು ಹೋದ ಪ್ರೀತಿಗೊಂದು ಸಾಕ್ಷಿ ಬೇಡವೇ? ಹಾಗೆಂದು ಸಾಕ್ಷಿ ಕೇಳಿದರೆ ಮಾತುಗಳು ಹಾಗೇ ಉಳಿಯಬಹುದೇ? ಈಗ ಆಡಿದ ಮಾತನ್ನು ಇನ್ನೊಂದು ಕ್ಷಣದಲ್ಲೇ ತಿರುಗಿಸಿ ಹಾಗೆ ಹೇಳಿದ್ದು ನಾನಲ್ಲ ಎಂದು ಬಿಡುವಾಗ ಆಡುವ ಮಾತುಗಳಿಗೆ ಬೆಲೆಯೆಲ್ಲಿದೆ. ಹಾಗೆಂದೇ ಕವಿ ಎಷ್ಟೊಂದು ಮಾತುಗಳುತೂಕ ಕಳೆದುಕೊಂಡಿವೆ ಇಲ್ಲಿಎನ್ನುತ್ತಾರೆ. ಜೀವನದಲ್ಲಿ ಮಾತಿಗೆ ಬೆಲೆಯಿಲ್ಲ ಎಂದಾದರೆ ಮುಂದೆ ಅವರ ಮಾತಿಗೆ ಬೆಲೆ ಕೊಡುವವರಾದರೂ ಯಾರು? ಇಲ್ಲ. ಜೀವನದಲ್ಲಿ ಒಮ್ಮೆ ಕೊಟ್ಟ ಮಾತಿಗೆ ತಪ್ಪಿದರೆ ಮುಂದೆ ಯಾರೂ ಕೂಡ ನಂಬದಂತಹ ಸ್ಥಿತಿ ತಲುಪಿಬಿಡುತ್ತೇವೆ. ಆದರೆ ಕವಿ ಆಶಾವಾದಿ. ಹೀಗಾಗಿ ಬದುಕಿನ ತುಂಬ ಕನಸುಗಳನ್ನು ಉತ್ತು ಬೆಳೆಯುವ ಮಹದಾಸೆ ಇಟ್ಟುಕೊಂಡಿರುವವರು. ಕನಸುಗಳಿಲ್ಲದ ಜಾಗದಲ್ಲಿ ಒಂದು ಕ್ಷಣವೂ ಇರಲಾಗದು. ಕನಸುಗಳಿದ್ದರೆ ಆಕಾಶ ಕೂಡ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಸೂರ್‍ಯ ಕೂಡ ಇನ್ನಷ್ಟು ಪ್ರಕಾಶಮಾನವಾಗುತ್ತಾನೆ. ಕನಸಿನ ಶಕ್ತಿಯೇ ಅಂತಹದ್ದು. ಕಿತ್ತಷ್ಟು ಬೆಳೆವ ಕಸಕ್ಕೆಹೇಳದೆ ಬರುವ ಕನಸಿಗೆತೆರೆದಷ್ಟು ಆಕಾಶ, ಉಳಿದಷ್ಟು ಪ್ರಕಾಶಎನ್ನುವ ಕವಿಸಾಲುಗಳಲ್ಲಿ ನಿಜ ಜೀವನದ ಅನುಭವವೇ ಮೇಳೈಸಿದೆ. ಇಷ್ಟಾದರೂ ಕವಿಗೆ ಅರಿವಿದೆ. ಯಾರ ಮನಸ್ಸಿನಲ್ಲಿ ಅಪಾರವಾದ ನೋವಿರುತ್ತದೆಯೋ ಅವರು ತಮ್ಮ ನೋವನ್ನು ಮರೆಮಾಚಲು ಸದಾ ನಗುತ್ತ, ಇತರರನ್ನೂ ನಗಿಸುತ್ತಿರುತ್ತಾರಂತೆ. ನಗೆ ಮಾಂತ್ರಿಕ ಚಾರ್ಲಿ ಚಾಪ್ಲಿನ್‌ನ ಬದುಕು ನೋವಿನಿಂದ ಕೂಡಿದ್ದು. ಬಡತನದ ಬೇಗೆಯಲ್ಲೂ ಆತ ತಾನೂ ನಗುತ್ತ, ಉಳಿದವರನ್ನೂ ನಗಿಸುತ್ತಿದ್ದ. ‘ನಾನು ಸದಾ ಮಳೆಯಲ್ಲಿ ನೆನಯಲು ಇಷ್ಟಪಡುತ್ತೇನೆ. ಏಕೆಂದರೆ ನನ್ನ ಕಣ್ಣೀರು ಆಗ ಜಗದ ಕಣ್ಣಿಗೆ ನನ್ನ ಕಣ್ಣೀರು ಕಾಣಿಸುವುದಿಲ್ಲ ಎಂದ ಆತನ ಮಾತು ಸದಾ ನನ್ನನ್ನು ಕಾಡುತ್ತಿರುತ್ತದೆ. ಕವಿ ಕೂಡ ಇದೇ ಮಾತನ್ನು ಹೇಳುತ್ತಾರೆ. ನನಗೆ ಕೋಪಿಸಿಕೊಂಡವರ ನೋಡಬೇಕಿತ್ತುಮುಗುಳ್ನಗುವವರ ಬಳಿಹೋದೆಕೋಪಗೊಂಡವರ ಮುಖದಲ್ಲಿ ಮುಗುಳ್ನಗುವಿದೆ. ಹಾಗೆ ನೋಡಿದರೆ ನಮ್ಮ ಮೇಲೆ ಕೋಪಿಸಿಕೊಂಡವರೂ ಅದನ್ನು ಮರೆಮಾಚಲು ಮುಗುಳ್ನಗುತ್ತಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.  ಆದರೂ ಯಾವ ಮುಗುಳ್ನಗುವೂ ನಮ್ಮ ನಡುವಿನ ಬೇಲಿಯನ್ನು ಕಿತ್ತೆಸೆಯಲಾಗುತ್ತಿಲ್ಲ. ಮನುಷ್ಯ, ಮನುಷ್ಯನ ನಡುವೆ ಕಟ್ಟಿಕೊಂಡಿರುವ ಮನದ ಬೇಲಿಯನ್ನು ಕಿತ್ತೆಸೆಯದೇ ಐಕ್ಯತೆ ಸಾಧಿಸುವುದಾದರೂ ಹೇಗೆ? ಯಾವ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರ ಮೇಲೊಬ್ಬರು ಕೋಪಿಸಿಕೊಂಡು ಮನಸ್ಸನ್ನು ಕಲ್ಲಾಗಿಸಿಕೊಳ್ಳುತ್ತಿದ್ದೇವೆ. ಅದೇ ಕಲ್ಲುಗಳನ್ನು ಒಂದರ ಮೇಲೊಂದನ್ನು ಪೇರಿಸಿ ಭದ್ರವಾದ ಗೋಡೆ ಕಟ್ಟುತ್ತೇವೆ. ಪ್ರೀತಿ, ಅಂತಃಕರಣದ ಬೆಳಕಿನ ಕಿರಣ ನಮ್ಮ ಹೃದಯವನ್ನು ತಾಗದಂತೆ ಬಂದೋಬಸ್ತು ಮಾಡಿಕೊಂಡಿದ್ದೇವೆ. ಎಷ್ಟೊಂದು ಬೇಲಿಗಳುತಲೆ ಎತ್ತಿವೆ ಇಲ್ಲಿ ಎನ್ನುವ ಕವಿ ನಮ್ಮ ಗುರಿ ತಲುಪುವ ಪೈಪೋಟಿಯಲ್ಲಿ ಏಟು ತಿಮದವರ ಆರ್ತನಾದವನ್ನು ಕೇಳಿ ಮರುಗುವ ಸೂಕ್ಷ್ಮತೆಯನ್ನು ಮರೆಯುತ್ತಿರುವುದರ ಕುರಿತು ಹೇಳಿದ್ದಾರೆ. ಚಿಕ್ಕ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ನಾಯಿಗೆ ಕಲ್ಲೆಸೆಯುತ್ತಾರೆ. ಕಲ್ಲೇನಾದರೂ ಕಾಲಿಗೆ ತಾಗಿದರೆ ಕುಯ್ಯೋ ಮರ್ರೋ ಎನ್ನುವ ಅದರ ರೋಧನೆ ಕೇಳಿಬಿಟ್ಟರೆ ಮಕ್ಕಳಿಗೆ ಮತ್ತೂ ಕಲ್ಲು ಹೊಡೆಯುವ ಉಮ್ಮೇದಿ ಹೆಚ್ಚುತ್ತದೆ. ಒಬ್ಬನಿದ್ದವನು ನಾಲ್ಕಾಗುತ್ತಾರೆ, ಹತ್ತಾಗುತ್ತಾರೆ. ನಾಯಿಯ ನೋವಿನ ಆಕ್ರಂದನ ಹೆಚ್ಚಿದಷ್ಟೂ ಪೈಶಾಚಿಕ ಸಂತೋಷ ಸಿಕ್ಕಂತೆ ಬಲ ಬರುತ್ತದೆ. ಚಿಕ್ಕ ಮಕ್ಕಳಲ್ಲಿಯೇ ಈ ಮನೋಭಾವವನ್ನು ಕಾಣುವಾಗ ಕಲ್ಲು ಹೊಡೆದು ನಮ್ಮವರನ್ನೇ ಗಾಯಗೊಳಿಸಿ ಅಳಿಸಲು ದೊಡ್ಡವರಾದವರು ಹಿಂದೆಮುಂದೆ ನೋಡಿಯಾರೆ? ಎಸೆದ ಕಲ್ಲಿಗೆಗುರಿಯಷ್ಟೇ ಗೊತ್ತುಪೆಟ್ಟು ತಿಂದವರ ಆರ್ತನಾದ ಕೇಳದು ಆದರೆ ಕವಿ ಇಡೀ ಸಂಕಲನದಲ್ಲಿ ಎಲ್ಲಿಯೂ ದ್ವೇಷ ತಿರಿಸಿಕೊಳ್ಳುವ ಮಾತನಾಡುವುದಿಲ್ಲ. ಎಲ್ಲಿಯೂ ಹೊಡಿ ಬಡಿಯ ಶಬ್ಧಗಳಿಲ್ಲ. ತೀರಾ ಸರಳವಾದ ಮಾತುಗಳಲ್ಲಿ, ನಯವಾಗಿಯೇ ಹೇಳಬೇಕಾದುದನ್ನು ಹೇಳಿ ತಣ್ಣಗೆ ಕುಳಿತುಬಿಡುತ್ತಾರೆ. ಉದ್ವೇಗದ ಹೇಲಿಕೆಗಳಿಲ್ಲ, ಆದ ಅಪಮಾನಕ್ಕೆ ಸೇಡು ತಿರಿಸಿಕೊಳ್ಳಬೇಕೆಂಬ ವಾಂಛೆಯಿಲ್ಲ. ಎಲ್ಲವರೂ ತನ್ನವರು ಎನ್ನುವ ಸಹಜ ಪ್ರೀತಿಯ ಕವನಗಳಿವು. ಅಪಮಾನಗಳನ್ನು ನುಂಗಿ ಪ್ರೀತಿಯನ್ನೇ ಹಂಚುವ ಶುದ್ಧ ಹೃದಯದ ಭಾವಗಳಿವು.ನಾವು ಆದ ಅಪಮಾನಉಂಡ ನೋವು ಮರೆತುಪ್ರೀತಿ ಹಂಚಿಕೊಳ್ಳುತ್ತೇವೆಅವರೋ ಉರಿವ ಬೆಂಕಿಗೆ ಎಣ್ಣಿ ಸುರಿಯುತ್ತಾರೆಹೀಗೆ ಅವಮಾನವನ್ನು ಮರೆತು ಪ್ರೀತಿಯನ್ನೇ ಬೊಗಸೆಯಲ್ಲಿಟ್ಟುಕೊಂಡು ನೀಡಿದರೂ ಅದನ್ನು ಸ್ವೀಕರಿಸಲೂ ಒಂದು ಅರ್ಹತೆ ಬೇಕಲ್ಲ.? ಪ್ರೀತಿಯ ಮೇಲೆ ಸುಡು ಸುಡು ಎಣ್ಣೆ ಸುರಿದು ತಮಾಷೆ ನೋಡುವ ಮನಸ್ಥಿತಿ ಇಲ್ಲಿದೆ. ಹೊತ್ತುರಿಯುವ ದ್ವೇಷಕ್ಕೆ ಎಣ್ಣೆ ಸುರಿದು ಪ್ರಜ್ವಲಿಸುವಂತೆ ಮಾಡಬಲ್ಲರೇ ಹೊರತೂ ಶತ್ರುತ್ವವನ್ನು ಅಳಿಸಿ ಪ್ರೀತಿಯ ಹೂವನ್ನು ಅರಳಿಸುವ ಪ್ರಯತ್ನ ಮಾಡುವವರು ಸಿಕ್ಕಾರಾದರೂ ಎಲ್ಲಿ?ನಾನು ಸುಳ್ಳುಗಳ ಸೂಡು Pಟ್ಟಿಟ್ಟುಸತ್ಯದ ಬೆನ್ನು ಹತ್ತಿದೆಆದರೂ ದ್ವಂದ್ವಗಳುವಿಜೃಂಭಿಸಿ ಹೋದವುಬದುಕು ನಮ್ಮನ್ನು ಹೈರಾಣಾಗಿಸುತ್ತಿದೆ. ಸುಳ್ಳಿನ ಸುಡನ್ನು Pಟ್ಟಿಟ್ಟು ಸತ್ಯದ ಬೆನ್ನು ಹತ್ತುತ್ತಿದ್ದರೂ ವಿಜೃಂಭಿಸುವ ಕಟು ವಾಸ್ತವವೂ ಕೆಲವೊಮ್ಮೆ ಸತ್ಯದ ಮುಖವಾಡದಲ್ಲಿ ಅಡಗಿದ ಸುಳ್ಳುಗಳಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ನಾವೇನಾಗಬೇಕೆಂದು ಬಯಸಿದ್ದೆವೋ ಅದನ್ನು ಸಾಧಿಸುವುದಕ್ಕಾಗಿ ಸತ್ಯ ಸುಳ್ಳುಗಳನ್ನು ಒಂದಾಗಿಸುತ್ತಿದ್ದೇವೆ. ಮತಮತದಲ್ಲಿ, ಜಾತಿಜಾತಿಯಲ್ಲಿ ದ್ವೇಶದ ಬೀಜಗಳನ್ನು ಬಿತ್ತಾಗಿದ್ದು ಅದೀಗ ಮೊಳಕೆಯೊಡೆಯುತ್ತಿದೆ. ನಿಮ್ಮ ಮನಸಲಷ್ಟು ಜಾಗ ಕೊಡಿಶಾಂತಿ ಬೀಜಗಳ ಊರಿ ಸಂಭ್ರಮಿಸುವೆಎನ್ನುವ ಕವಿಯ ಮಾತುಗಳಲ್ಲಿರುವ ನಿಜಾಯತಿಯನ್ನು ಗುರುತಿಸಬೇಕು. ಶಾಂತಿ ಬೀಜಗಳು ಚಿಗುರೊಡೆಸಲು ಕವಿ ಕಾತರರರಾಗಿದ್ದಾರೆ. ಇಂದಿನ ತುರ್ತು ಅಗತ್ಯವೂ ಅದೇ ಆಗಿದೆ. ತೂರಿಬಿಟ್ಟಿ ಕನಸುಗಳ ಕಟ್ಟಲಾದರೂಹರಿದ ಸೂತ್ರಗಳಿಗೆಜಗದ ಬಂಧುತ್ವವೇ ಬೆಸುಗೆಯಾಗಲಿಜಗವು ಪ್ರೀತಿ ಎನ್ನುವ ಬಂಧನದಲ್ಲಿ ಬಂಧಿಯಾಗಲಿ ಹರಿದು ಹೋದ ಸೂತ್ರ ಒಗ್ಗೂಡಲಿ, ದೇಶ, ಮನಸ್ಸುಗಳಲ್ಲವೂ ಸುಭದ್ರವಾಗಲಿ.ವಿಶ್ವಭ್ರಾತ್ರತ್ವದ ನೆಲೆಯಲ್ಲಿ ಪ್ರಕಾಶ ಖಾಡೆಯವರ ಕವನಗಳನ್ನಿಟ್ಟು ನೋಡಬೇಕು. ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಕವಿತೆಗಳ ಸರಳತೆ ಮತ್ತು ಅದನ್ನು ವ್ಯಕ್ತಪಡಿಸಿರುವ ರೀತಿ. ಎಲ್ಲಿಯೂ ಶಬ್ಧಭಾರದಿಂದ ಕವಿತೆ ಕುಗ್ಗಿ ಹೋಗಿಲ್ಲ. ದೊಡ್ಡದೊಡ್ಡ ರೂಪಕಗಳಿಂದ ನುಲುಗಿಲ್ಲ. ಪಂಡಿತರನ್ನು ಮೆಚ್ಚಿಸಲೇಬೇಕೆಂಬ ಘನಂಧಾರಿ ಉದ್ದೇಶವೂ ಅವರಿಗಿಲ್ಲ. ಆನು ಒಲಿದಂತೆ ಹಾಡುವೆ ಎಂಬ ಭಾವವಿದೆ. ಆದರೆ ಇಡೀ ಸಂಕಲನವಾಗಿ ಓದಿದಾಗ ಭಾವಗಳು ಮತ್ತೆ ಮತ್ತೆ ಪುನರಾವರ್ತನೆಯಾದಮತೆ ತೋರುವ ಅಪಾಯವನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಮೊದಲ ಕವನದ ಭಾವವೇ ಮುಂದುವರೆಯುತ್ತ ಹೋದಂತೆ ಕೆಲವೊಮ್ಮೆ ಭಾಸವಾಗಿ ಖಂಡಕಾವ್ಯವನ್ನು ಓದುತ್ತಿರುವ ಏಕತಾನತೆಯನ್ನು ನೀಡಿಬಿಡುವ ಅಪಾಯವೂ ಇದೆ. ಆದರೂ ಸರಳ ಹಾಗೂ ಸುಮದರ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ. ********************* ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

ಶಬ್ಧಭಾರವಿಲ್ಲದ ಮನದ ಮಾತುಗಳು Read Post »

You cannot copy content of this page

Scroll to Top