ಕಾವ್ಯಯಾನ

ಮಳೆ ಹಾಡು...

rain drop on leaf

ಆಶಾ ಜಗದೀಶ್

ತಾರಸಿಯಿಂದ ಇಳಿಯುತ್ತಿರುವ
ಒಂದೊಂದೇ ಹನಿಗಳನ್ನು
ನಿಲ್ಲಿಸಿ ಮಾತನಾಡಿಸಿ
ಮೆಲ್ಲಗೆ ಹೆಸರ ಕೇಳಿ
ಹಾಗೇ ಮೆಟ್ಟಿಲ ಮೇಲೆ
ನಯವಾಗಿ ಕೂರಿಸಿಕೊಂಡು
ಈಗ ಬಿಟ್ಟು ಬಂದವನ ನೆನಪೋ
ಬಂದು ಸೇರಿದವನ ನೆನಪೋ
ಒಮ್ಮೆ ಕೇಳಬೇಕಿದೆ

ಜಡಿ ಹಿಡಿದು ಸುರಿವಾಗ
ಯಾರ ಮೇಲಿನ ಮೋಹ
ಆವೇಶವಾಗಿ ಆವಾಹಗೊಳ್ಳುತ್ತದೆ
ಜೀವ ಮರಗುಟ್ಟುವ ಶೀತಲೆತೆಯೊಳಗೆ
ಬೆಂಕಿಯೊಂದನ್ನು ನಂದದಂತೆ
ಹೇಗೆ ತಾನೆ ಬಚ್ಚಿಟ್ಟುಕೊಂಡಿರುವೆ
ಎಂದಾದರೂ ಒಂದು ಸಣ್ಣ ಪ್ರಶ್ನೆಗೆ
ಉತ್ತರ ಕೇಳಿಟ್ಟುಕೊಳ್ಳಬೇಕಿದೆ

ಮುಚ್ಚಿದ ಕಿಟಕಿಯ ದಾಟಿ ಹಾಯುವ
ತಂಗಾಳಿ ಮೈ ಸೋಕುವಾಗೆಲ್ಲ
ಒಂದು ಮಳೆಹನಿಯ ಹಟದ ಮುಂದೆ
ಯಾವುದೂ ಸಮವಲ್ಲ ಎನಿಸಿಬಿಡುತ್ತದೆ
ಮತ್ತೆ ಮತ್ತೆ ಇಷ್ಟಿಷ್ಟೆ ಚೈತನ್ಯ ಒಟ್ಟಾಗಿಸಿಕೊಂಡು
ಹನಿಯುವ ಇಚ್ಛಾಶಕ್ತಿಗೆ ಜಗವೇ ಬಾಗಿದೆ
ಅಂತಲೂ ಋತುಚಕ್ರ ತಿರುಗಿದಾಗಲೆಲ್ಲಾ
ಅನಿಸುತ್ತಲೇ ಇರುತ್ತದೆ

ಸಣ್ಣದೊಂದು ಹನಿಯೊಡೆದು
ಸಹಸ್ರಪಟ್ಟು ಅಧಿಕ ಪಾದಗಳ ಗುರುತು
ಹನಿಗಳುದುರಿ ಹೋದದ್ದರ
ನೆನಪಿಗೆ ಭುವಿಯ ತುಂಬಾ ಬುಗುಟು
ಒಂದೊಂದು ಬುಗುಟಿನೊಳಗೂ
ಮಿಡಿವ ಹೃದಯ…

ಅದು ಸತ್ತಿಲ್ಲ
ಅದು ಬದುಕಿಯೂ ಇಲ್ಲ

*************

8 thoughts on “ಕಾವ್ಯಯಾನ

  1. ತುಂಬಾ ಇಷ್ಟವಾಯಿತು . ಮಳೆಯ ಪದ್ಯ ಮಳೆಯಂತೆ ಇದೆ.

Leave a Reply

Back To Top