ಕಾವ್ಯ ವಿಶ್ಲೇಷಣೆ

ಟಿ . ಎಸ್. ಏಲಿಯಟ್ ನ ಕವನ

“ಜೆ.ಆಲ್ಫ್ರೆಡ್  ಪ್ರುಫ಼್ರಾಕ್ ನ ಪ್ರೇಮ ಗೀತೆ

ಆಂಗ್ಲ ಸಾಹಿತ್ಯದಲ್ಲಿ ಸ೦ತೃಪ್ತಿಯ ( ಸ್ಯಾಚುರೇಶನ್ ಪಾಯಿ೦ಟ್ ) ಎಲ್ಲೆಯನ್ನು ಮೀರಿ

ಏಕತಾನವಾಗುತ್ತಿದ್ದ ರೊಮ್ಯಾಂಟಿಕ್ ಕಾವ್ಯ ಪ್ರಕಾರವನ್ನು ಸ೦ಪೂರ್ಣವಾಗಿ ನಿರಾಕರಿಸಿ

ಮಾಡರ್ನಿಸಂನ ಹಾದಿಯಲ್ಲಿ ಸಾಗುತ್ತಾ ಜಗತ್ತಿನ ಸಾಹಿತ್ಯಕ್ಕೇ ಒಂದು ಹೊಸ ತಿರುವನ್ನು

ತಂದುಕೊಟ್ಟದ್ದು ಟಿ.ಏಸ್.ಏಲಿಯಟ್. ಅವನಿಗೆ ಬೆಂಬಲವಾಗಿ ನಿ೦ತವನು ಎಜ಼್ರಾಪೌ೦ಡ್.

ಏಲಿಯಟ್ ನ ಪ್ರಾರಂಭಿಕ ಕವನಗಳಲ್ಲಿ ಪ್ರಸಿದ್ಧವಾದ ಒಂದು ಕವನ “ಜೆ.ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ ( ಲವ್ ಸಾಂಗ್ ಆಫ್ ಜೆ.ಆಲ್ಫ್ರೆ ಡ್ ಪ್ರುಫ಼್ರಾಕ್).

೧೯೧೫ ರಲ್ಲಿ ಷಿಕಾಗೋದ “ಪೊಯೆಟ್ರಿ”ಪತ್ರಿಕೆಯಲ್ಲಿ ಈ ಕವನ ಪ್ರಕಟಗೊಂಡಾಗ ಸಾಹಿತ್ಯ

ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದವು. ಕೆಲವರು, ಹಿಂದೆಂದೂ ಓದಿರದ ಹೊಸ ಶೈಲಿಯ, ಅರ್ಥವಾಗದಿದ್ದರೂ ಮಿಂಚಿನಂತಹ ಕೆಲವು ಸಾಲುಗಳಿಂದ ಆಕರ್ಷಿಸುತ್ತಿದ್ದ ಕವಿತೆಯನ್ನು ಓದಿ ಆಶ್ಚರ್ಯ ಚಕಿತರಾಗಿ ಹುಬ್ಬು ಮೇಲೇರಿಸಿದರು. ಕೆಲವರು ಅದೊಂದು ಪದ್ಯವೇ ಅಲ್ಲವೆಂದು ಅಲ್ಲಗಳೆದರು. ಆರ್ಥರ್ ವಾ ಎಂಬ ವಿಮರ್ಷಕ “ದಿ ಕ್ರಿಟಿಕಲ್

ಕ್ವಾರ್ಟರ್ಲಿ” ಎಂಬ ಪತ್ರಿಕೆಯಲ್ಲಿ ಕವಿತೆಯನ್ನು ಕುರಿತು ” ಲಯದ ಶಿಸ್ತನ್ನೇ ಅರಿಯದ “ಇದೊಂದು ಅರ್ಥಹೀನ ಪ್ರಲಾಪ” ವೆಂದು ಬರೆದ. ಮುಂದುವರಿದು ಏಲಿಯಟ್ ನನ್ನು ” ಎ.ಡ್ರಂಕನ್ ಹೆಲಾಟ್” ಎ೦ದು ಜರೆದ. ಮುಂದೆ ಏಜ಼್ರಾ ಪೌಂಡ್ ಈ ಕವಿತೆಯನ್ನು

ವಿಮರ್ಷಿಸುತ್ತಾ ಕವಿತೆಯ ಶಿಲ್ಪದಲ್ಲಿರುವ ನಾವೀನ್ಯತೆಯನ್ನ ಹೊಸ ವಸ್ತು ವಿನ್ಯಾಸವನ್ನ

ಎತ್ತಿ ಹಿಡಿದ. ಮುಂದೆ ಏಲಿಯಟ್ ನೋಬೆಲ್ ಪಾರಿತೋಷಕಕ್ಕೆ ಭಾಜನನಾದ.

“ಜೆ. ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ” ಒಂದು ವಿಡಂಬನಾತ್ಮಕ ಕವಿತೆ.

ಶೀರ್ಶಿಕೆಯಲ್ಲಿರುವಂತೆ ಇದೊಂದು ಪ್ರೇಮ ಗೀತೆಯಲ್ಲ. ಬದಲಿಗೆ ಒಬ್ಬ ಅಳ್ಳೆದೆಯ,ಹ್ಯಾಮ್ಲೆಟ್ ನ ಹಾಗೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಲಾಗದೇ ಸದಾ

ತೊಳಲಾಟದಲ್ಲಿರುವ ವ್ಯಕ್ತಿಯೊಬ್ಬನ ಸ್ವಗತವಾಗಿದೆ. ಷಿಕಾಗೋ ದ “ಪೊಯೆಟ್ರಿ” ಎಂಬ

ಪತ್ರಿಕೆಯಲ್ಲಿ ಈ ಕವನ ಮೊದಲು ಪ್ರಕಟವಾದಾಗ ಆ ಪತ್ರಿಕೆಯ ಸಂಪಾದಕಿ “ಹ್ಯಾರಿಯೆಟ್ ಮನ್ರೋ” ಗೆ ಬರೆದ ಪತ್ರದಲ್ಲಿ ಕವಿ ತನ್ನ ಕವಿತೆಗೆ “ಪ್ರೇಮ ಗೀತೆ” ಎನ್ನುವ ಶೀರ್ಷಿಕೆ ಯಾವ ರೀತಿಯಲ್ಲೂ ಹೊಂದಾಣಿಕೆಯಾಗದೆಂದು ತನಗೆ ಗೊತ್ತಿದ್ದರೂ “ರುಡ್ಯಾರ್ಡ್  ಕಿಪ್ಲಿಂಗ್” ನ ಕವಿತೆ “ಲವ್ ಸಾಂಗ್ ಆಫ್ ಹರ್-ದಯಾಲ್” ತನ್ನ ಮನಸ್ಸಿನಲ್ಲಿ ನಿ೦ತು

ಬಿಟ್ಟಿದ್ದರಿ೦ದ ಅದರ ಆಕರ್ಷಣೆಗೆ ಒಳಗಾಗಿ ಈ ಶೀರ್ಷಿಕೆಯನ್ನು ತನ್ನ ಕವಿತೆಗೆ ನೀಡಿರುವುದಾಗಿ ತಿಳಿಸಿದ್ದಾನೆ.

ಕವಿತೆಯಲ್ಲಿ ಬರುವ ಎಲ್ಲ ಪ್ರತಿಮೆಗಳೂ ಪ್ರುಫ್ರಾಕ್ ನ ಇಬ್ಬಂದಿ ತನದ, ತೊಳಲಾಟದ

ಪ್ರತೀಕಗಳೇ ಆಗಿವೆ. ಅವನು ಮುಖ್ಯವಾದ ವಿಚಾರವೊಂದನ್ನು ಹೇಳ ಬೇಕೆಂದು ಕೊಳ್ಳುತ್ತಾನೆ.

ಆದರೆ ಹೇಳುವುದಿಲ್ಲ. ಅದು ಯಾರಿಗೆ ಎಂಬುದೂ ಸ್ಪಷ್ಟವಾಗಿಲ್ಲ. ಬಹುಶಃ ಅವನು ಪ್ರೀತಿಸುವ ಹುಡುಗಿಗೆ ಇರಬಹುದು ಎನ್ನುವುದು ಕೆಲವರ ಅಭಿಪ್ರಾಯವಾದರೆ ಮತ್ತೆ ಕೆಲವರು ಅವನು ಯಾವುದೋ ತಾತ್ವಿಕ ಒಳನೋಟವನ್ನೋ ಅಥವಾ ಸಮಾಜದಿಂದ ಉಂಟಾದ ಭ್ರಮನಿರಸನವನ್ನೋ ಹೇಳಲಿಚ್ಛಿಸುತ್ತಿದ್ದಾನೆ ಎಂದು ಅಭಿಪ್ರಾಯ ಪಡುತ್ತಾರೆ. ಒಟ್ಟಿನಲ್ಲಿ

ಪ್ರುಫ್ರಾಕ್ ನ ದ್ವಂದ್ವದ ತೊಳಲಾಟ ಆಧುನಿಕ ಸಮಾಜದಲ್ಲಿ ಅರ್ಥಪೂರ್ಣ ಅಸ್ತಿತ್ವದ

ಬದುಕನ್ನು ಬದುಕಲಾಗದ ಅಸಹಾಯಕತೆಯನ್ನು ಬಿಂಬಿಸುತ್ತದೆ. ಪ್ರುಫ್ರಾಕ್ ಒಬ್ಬ ಸೂಕ್ಷ್ಮ

ಸಂವೇದನೆಯ ವ್ಯಕ್ತಿಯಾಗಿದ್ದು ಪ್ರತಿಯೊಂದನ್ನೂ ತಾರ್ಕಿಕವಾಗಿ ನೋಡುವ, ಜಿಜ್ಞಾಸೆಗೆ

ಒಳಪಡುವ, ಹಾಗೆಯೇ ಹಿಂಜರಿಕೆಯ ವ್ಯಕ್ತಿತ್ವವುಳ್ಳವನಾಗಿದ್ದಾನೆ. ಹಾಗಾಗಿ ಯಾವ

ತೀರ್ಮಾನವನ್ನೂ ಅವನು ತೆಗೆದುಕೊಳ್ಳಲಾರ. ಅವನ ಪ್ರಪಂಚದಲ್ಲಿ ಸುಂದರವಾದ,ಮನಸ್ಸನ್ನು ಅರಳಿಸುವ ಯಾವ ವಸ್ತುಗಳೂ ಅಥವಾ ಸ್ಥಳಗಳೂ ಇಲ್ಲ. ಅವನಿಗೆ

ಸ೦ಜೆಯೆನ್ನುವುದು ಕ್ಲೋರೋ ಫಾರ್ಮಿನ ಪ್ರಭಾವಕ್ಕೆ ಒಳಗಾದ ವ್ಯಕ್ತಿ ಆಪರೇಷನ್ ಟೇಬಲ್ಲಿನ ಮೇಲೆ ಮಲಗಿದ ಹಾಗೆ ಕಾಣಿಸುತ್ತದೆ. ಅವನು ಕರೆದೊಯ್ಯುವುದು ಹೊಲಸು ರೆಸ್ಟೋರೆಂಟ್ಗಳಿಂದ ಹೊಮ್ಮುವ ಗಬ್ಬು ವಾಸನೆಯ ಬೀದಿಗಳ ಮೂಲಕ.

ವಯಸ್ಸು ಮಿರುತ್ತಿರುವ ಪ್ರುಫ್ರಾಕ್ ಹೋಗ ಬೇಕಾಗಿರುವುದು ಒ೦ದು ದೊಡ್ಡ ಮಹಲಿನಲ್ಲಿರುವ ಸುಂದರಿಯರನ್ನು ಭೇಟಿ ಮಾಡಲು. ಆ ಸುಂದರಿಯರು ತಮ್ಮ ಪ್ರತಿಷ್ಠೆಯನ್ನು ಮೆರೆಯಲು ಒಂದು ಕೋಣೆಯಿ೦ದ ಮತ್ತೊಂದಕ್ಕೆ ವೈಯಾರದಿಂದ

ನಡೆದಾಡುತ್ತಾ, ಶ್ರೇಷ್ಠ ಫ್ರೆಂಚ್ ಕಲೆಗಾರ, ಶಿಲ್ಪಿ, ಕವಿ ಮೈಖೆಲೇಂಜಲೋನ ಬಗ್ಗೆ, ತಮಗೆ ಅಷ್ಟಾಗಿ ಗೊತ್ತಿರದಿದ್ದರೂ ಬಹಳ ಗೊತ್ತಿರುವವರ ಹಾಗೆ

ಮಾತನಾಡುತ್ತಿರುತ್ತಾರೆ.ಅಲ್ಲಿಗೆ ಈ ಅಳ್ಳೆದೆಯ ಪ್ರುಫ್ರಾಕ್ ಹೋಗಿ ಅವರನ್ನು ಭೇಟಿಯಾಗಬೇಕಾಗಿದೆ ಮತ್ತು ವಿಷಯವೊಂದನ್ನು( ಬಹುಶಃ ಪ್ರೇಮ ನಿವೇದನೆಯಿರ ಬಹುದು) ಪ್ರಸ್ತಾಪಿಸ ಬೇಕಾಗಿದೆ. ಆದರೆ ಆ ಹೆಣ್ಣುಗಳು ತನ್ನನ್ನು ನಿರಾಕರಿಸಿಬಿಟ್ಟರೆ ಎ೦ಬ

ಭಯದಿಂದ ಅವನು ಕೊನೆಯವರೆಗೂ ತನ್ನ ಮನದ ಇಂಗಿತವನ್ನು ಹೇಳುವುದೇ ಇಲ್ಲ.

ಕವನದಲ್ಲಿ ಸೊಗಸಾಗಿ ಮೂಡಿ ಬಂದಿರುವ ಮಹಲಿನ ಕಿಟಕಿ ಗಾಜುಗಳಿಗೆ ಬೆನ್ನುಜ್ಜುವ ಹಳದಿ

ಮಂಜು ಮತ್ತು ಹಳದಿ ಗಾಳಿ, ಅದು ಕೊಳಚೆ ಗಟಾರಗಳ ಮೇಲೆ ಸುಳಿದಾಡಿ ಸುಸ್ತಾಗಿ ಸುರುಳಿ

ಸುತ್ತಿಕೊಂಡು ಮಲಗುವ ಚಿತ್ರ ಪ್ರುಫ್ರಾಕ್ ನ ಕಲ್ಪನಾ ಲೋಕ ಅಂತ್ಯವಾಗುವ ರೀತಿಯನ್ನು

ಸಾರುತ್ತದೆ.

ಪ್ರುಫ್ರಾಕ್ ನಿಗೆ ಆಧುನಿಕ ಸಮಾಜದ ಬದುಕು ನೀರಸವೆನಿಸುತ್ತಿದೆ. ಇಂಥ ಸಮಾಜದಿಂದ ದೂರ

ಹೋಗಿಬಿಡಬೇಕೆಂಬುದು ಅವನ ಬಯಕೆ. ಅದಕ್ಕಾಗಿ “ ಮೌನ ಶರಧಿಯ ಮೇಲೆ ಸಲೀಸು ಜಾರಬಲ್ಲಂಥ ಜೋಡಿ ಪಂಜಗಳುಳ್ಳವನು ನಾನಾಗಿದ್ದರೆ” ಎಂದುಕೊಳ್ಳುತ್ತಾನೆ. ಹಿಂಜರಿಕೆಯ ಸ್ವಭಾವದ ಪ್ರುಫ್ರಾಕ್ ತನ್ನ ಪ್ರೇಮ ನಿವೇದನೆಯನ್ನು ಕೊನೆಯವರೆಗೂ ಮಾಡಿಕೊಳ್ಳ ಲಾರದವನಾಗಿ ತನ್ನನ್ನೇ ತಾನು ಹೀಗೆ ಪ್ರಶ್ನಿಸಿ ಕೊಳ್ಳುತ್ತಾನೆ : “ ಆ ಗಳಿಗೆಯನ್ನು ಅದರ ಉತ್ತುಂಗಕ್ಕೆ ಕೊಂಡೊಯ್ಯಬಲ್ಲ ಬಲ ಇದೆಯೇ ನನಗೆ”?. ಅದನ್ನು

ಹೇಳುವುದು ಅವನಿಗೆ ಎಷ್ಟು ಕಷ್ಟವೆಂದರೆ “ ಮಾಯಾ ಲಾಂದ್ರವೊಂದು ಸ್ಕ್ರೀನಿನ ಮೇಲೆ

ನರಗಳ ವಿವಿಧ ವಿನ್ಯಾಸಗಳನ್ನು” ಮೂಡಿಸಿದ ಹಾಗೆ!

ಇಷ್ಟೆಲ್ಲಾ ತೊಳಲಾಟಗಳಿದ್ದರೂ, ಡೋಲಾಯಮಾನ ಸ್ವಭಾವದವನಾಗಿದ್ದರೂ ತಾನು ಮಾತ್ರ

ರಾಜಕುಮಾರ ಹ್ಯಾಮ್ಲೆಟ್ ಅಲ್ಲ, ಬದಲಿಗೆ ತಾನು ಅವನ ಪರಿಚಾರಕನೆನ್ನುತ್ತಾನೆ. ತನಗೆ ಅವನಾಗುವ ಯಾವ ಯೋಗ್ಯತೆಯೂ ಇಲ್ಲ ಎಂದು ತನ್ನನ್ನು ತಾನು ವಿಡಂಬನಾತ್ಮಕ ವಿಷ್ಲೇಶಣೆಗೆ ಒಳಪಡಿಸಿಕೊಳ್ಳುತ್ತಾ; ತಾನು ಕೆಲವೊಮ್ಮೆ ಹಾಸ್ಯಾಸ್ಪದ ವ್ಯಕ್ತಿ ಮತ್ತು ಕೆಲವೊಮ್ಮೆ

ಪೂರ್ಣ ವಿದೂಷಕ ಎನ್ನುತ್ತಾನೆ.

ಪ್ರುಫ್ರಾಕನಿಗೆ ತಾನು ಮುದುಕನಾಗುತ್ತಿದ್ದೇನೆ ಎ೦ಬ ಅರಿವು ಇದೆ. ತನ್ನ ಕಲ್ಪನೆಯ ಕಡಲ ಕಿನಾರೆಯಲ್ಲಿ ನಡೆಯುವಾಗ ಮತ್ಸ್ಯ ಕನ್ಯೆಯರು ಹಾಡುವುದನ್ನು ಕೇಳಿಸಿಕೊಳ್ಳುವ ಪ್ರುಫ್ರಾಕ್ನಲ್ಲಿ ಕಡಲ ಕನ್ಯೆಯರು ತನಗಾಗಿ ಹಾಡಲಾರರು ಎ೦ಬ ಅರಿವೂ ಇದೆ.

ತಾನು ಹೇಳಬೇಕಾದ್ದನ್ನು ಹೇಳಲಾಗದ ಪ್ರುಫ್ರಾಕ್ ವಾಸ್ತವವನ್ನು ಎದುರಿಸಲಾಗದೇ ತನ್ನ ಕಲ್ಪನಾ ಸಾಮ್ರಾಜ್ಯದ ಕಡಲ ಕೋಣೆಯಲ್ಲಿ ಮತ್ಸ್ಯ ಕನ್ಯೆಯರ ಜತೆಯಲ್ಲಿ ಕಲ್ಪನಾವಿಹಾರದಲ್ಲಿ ಮುಳುಗಿ ಹೋಗುವುದರೊ೦ದಿಗೆ ಕವಿತೆ ಮುಕ್ತಾಯವಾಗುತ್ತದೆ.

ಕವಿತೆಯ ಪ್ರಾರ೦ಭಕ್ಕೆ ಮುನ್ನ ಏಲಿಯಟ್ ಡಾ೦ಟೆಯ “ಡಿವೈನ್ ಕಾಮಿಡಿ” ಯಲ್ಲಿ ಡಾ೦ಟೆ

ಮತ್ತು ಗ್ಯಿಡೋಡಾ ಮಾಂಟೆಫೆಲ್ಟ್ರೋರ ಭೇಟಿಯ ಸ೦ದರ್ಭದಲ್ಲಿ ಪೋಪ್ ನ ಮಾರ್ಗದರ್ಶಕ

ನಾಗಿದ್ದ ಮಾಂಟೇಫೆಲ್ಟ್ರೋ ಡಾ೦ಟೆಗೆ ಹೇಳುವ ಮಾತುಗಳನ್ನು ಬಳಸಿಕೊ೦ಡಿದ್ದಾನೆ. ಪೋಪ್

ಬೋನಿಫೇಸ್ VIII ಗೆ ಸಲಹೆಗಾರನಾಗಿದ್ದ ಗ್ಯಿಡಾಡೋ ಮಾ೦ಟೆ ಫೆಲ್ಟ್ರೋ ನೀಡಿದ ಸಲಹೆಯ

ಮೇರೆಗೆ ಪೋಪ್ ದುಷ್ಟ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ. ಇದರಿ೦ದಾಗಿ ಮಾಂಟೇ

ಫೆಲ್ಟ್ರೋ ನರಕದ ನಾಲ್ಕನೆಯ ವೃತ್ತದಲ್ಲಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ.

“ಲಾಜರಸ್ ನಾನು, ಸತ್ತವರ ನಡುವಿ೦ದ ಎದ್ದು ಬ೦ದಿದ್ದೇನೆ……” ಎನ್ನುವ ಸಾಲುಗಳಲ್ಲಿ ಉದ್ದ್ರತವಾಗಿರುವ “ಲಾಜರಸ್” ಬೈಬಲ್ಲಿನಲ್ಲಿ ಬರುವ ಒಬ್ಬ ಭಿಕ್ಷುಕ. ಇನ್ನೊಬ್ಬ ಶ್ರೀಮಂತ ಡೈವ್ಸ್ . ಸತ್ತ ಮೇಲೆ ಲಾಜರಸ್ ಸ್ವರ್ಗಕ್ಕೂ, ಡೈವ್ಸ್ ನರಕಕ್ಕೂ

ಹೋಗುತ್ತಾರೆ. ನರಕ ಹೇಗಿದೆ ಎಂದು ತನ್ನ ನಾಲ್ಕು ಜನ ಸೋದರರಿಗೆ ತಿಳಿಸಿ ಅವರನ್ನು

ಎಚ್ಚರಿಸಲು ಬಯಸುವ ಡೈವ್ಸ್ ಇದಕ್ಕಾಗಿ ಲಾಜರಸ್ನನ್ನು ಭೂಮಿಗೆ ಕಳಿಸಬೇಕೆ೦ದು ಅಬ್ರಾಹಂನನ್ನು ಕೇಳಿಕೊಳ್ಳುತ್ತಾನೆ. ಅದಕ್ಕೆ ಅಬ್ರಾಹಂ ಒಪ್ಪುವುದಿಲ್ಲ. ಮೋಸೆಸ್ ಮತ್ತು ಪ್ರವಾದಿಗಳ ಉಪದೇಶವನ್ನು ಕೇಳದ ಹೊರತು ಸತ್ತವನು ಎದ್ದು ಬಂದು ಹೇಳಿದರೂ ನಿನ್ನ

ಸೋದರರು ಬದಲಾಗುವುದಿಲ್ಲ ಎ೦ದು ಅಬ್ರಾಹ್ ಹೇಳುತ್ತಾನೆ. ಅಲ್ಲದೆ ಕವಿತೆಯಲ್ಲಿ ಬರುವ

“ಅಮರ ಪರಿಚಾರಕ ನನ್ನ ಕೋಟನ್ನು ಎಳೆದು ಕುಚೋದ್ಯ ಮಾಡಿದ್ದನ್ನು ನೋಡಿದ್ದೇನೆ “ಎನ್ನುವ ಸಾಲುಗಳಲ್ಲಿ ಬರುವ “ಅಮರ ಪರಿಚಾರಕ ಸಾವಿನ ಮೂರ್ತ ರೂಪ.

ನಾನು ಮಾಡಿದ ಕವಿತೆಯ ಕನ್ನಡಾನುವಾದ ಇಲ್ಲಿದೆ:

ಜೆ.ಆಲ್ಫ್ರೆಡ್ ಪ್ರಫ್ರಾಕ್ ನ ಪ್ರೇಮ ಗೀತೆ

ನನ್ನ ಉತ್ತರ ಭೂ ಲೋಕಕ್ಕೆ ಎ೦ದೂ ಮರಳದವನಿಗೆ ಎ೦ದು ಯೋಚಿಸಿದ್ದರೆ, ಈ ಜ್ವಾಲೆ

ನಿಶ್ಚಲವಾಗುತ್ತಿತ್ತು.

ಆದರೆ ನರಕದ ಈ ಕೂಪದಿ೦ದ ಯಾರೂ ಹಿ೦ದಿರುಗಿಲ್ಲವೆಂಬ ನಾನು ಕೇಳಿದ ಮಾತು ನಿಜವೇ

ಆಗಿದ್ದರೆ ಯಾವ ಅಪಕೀರ್ತಿಯ ಭಯವೂ ಇಲ್ಲದೇ ನಾನು ಉತ್ತರಿಸ ಬಲ್ಲೆ….

( ಪೋಪ್ ಬೋನಿಫೇಸ್ VIII ನ ಸಲಹೆಗಾರ ಗ್ಯಿಡೋಡಾ ಮಾ೦ಟೆ ಫೆಲ್ಟ್ರೋ ಡಾ೦ಟೆ ಗೆ

ನರಕದಲ್ಲಿ ಹೇಳಿದ್ದು)

ಹಾಗಿದ್ದರೆ ನಡಿ ನಾವಿಬ್ಬರೂ ಹೊರಡೋಣ ಇನ್ನು

ಟೇಬಲ್ಲಿನ ಮೇಲೆ ಅರಿವಳಿಕೆ ಔಷಧಿಗೆ ಮೈ ಮರೆತು ಮಲಗಿರುವ ರೋಗಿಯಂತೆ

ಸಂಜೆ ಹರಡಿರುವಾಗ ಬಾನಿನ ತುಂಬ

ಹಾದು ಹೋಗೋಣ ನಡಿ ಅರ್ಧ ಬರಿದಾದ ಬೀದಿಗಳನ್ನ,

ಅಶಾಂತ ರಾತ್ರಿಗಳ ಪಿಸುಮಾತಿನ ಅಡಗು ತಾಣಗಳಾದ

ಒಂದು ರಾತ್ರಿಯ ಕಳಪೆ ಹೋಟೆಲುಗಳನ್ನ,

ಮೃದ್ವಂಗಿ ಕಪ್ಪೆ ಚಿಪ್ಪುಗಳ ಕೊಳಕು ರೆಸ್ಟೋರಂಟುಗಳನ್ನ

ಚಕಿತಗೊಳಿಸುವ ಪ್ರಶ್ನೆಗಳೆಡೆಗೆ ನಿನ್ನನ್ನು ಕರೆದೊಯ್ವ ಕುಟಿಲ ವಾದಗಳ ಹಾಗೆ

ನಿನ್ನನ್ನು ಬಳಲಿಸುವ ಬೀದಿಗಳನ್ನ.

ಓಹ್! ಕೇಳ ಬೇಡ ಇದೇನೆಂದು

ಖುದ್ದಾಗಿ ಹೋಗಿ ನೋಡೋಣ ಬಾ.

ಕೋಣೆಯೊಳಗೆ ಹೆಂಗಸರು ಬಂದು ಹೋಗುತ್ತಿದ್ದಾರೆ

ಮೈಖೆಲೇಂಜಲೋನ ಬಗ್ಗೆ ಮಾತನಾಡುತ್ತಾ.

ಹಳದಿ ಮಂಜು ಬೆನ್ನುಜ್ಜುತ್ತಿದೆ ಕಿಟಕಿ ಗಾಜಿನ ಮೇಲೆ

ಹಳದಿ ಹೊಗೆ ಮೂತಿ ಉಜುತ್ತಿದೆ ಕಿಟಕಿ ಗಾಜಿನ ಮೇಲೆ

ನಾಲಿಗೆಯಿಂದ ನೆಕ್ಕಿತದು ಸ೦ಜೆಯ ಮೂಲೆ ಮೂಲೆಗಳನ್ನ.

ಸುಳಿದಾಡಿತದು ಕೊಳಕು ನೀರು ಮಡುಗಟ್ಟಿನಿ೦ತ ಚರಂಡಿಗಳ ಮೇಲೆ

ತಾರಸಿಯಿಂದ ಕಾಲು ಜಾರಿ ಅನಿರೀಕ್ಷಿತ ನೆಗೆಯಿತದು ಕೆಳಗೆ

ಅಕ್ಟೋಬರಿನ ಹಿತಕರ ಸಂಜೆಯನ್ನು ನೋಡಿ ಸುತ್ತಿ ಕೊಂಡಿತದು

ಮತ್ತೆ ಮನೆಯ ಸುತ್ತಾ.

ಹಾಗೆಯೇ ನಿದ್ದೆ ಹೋಯಿತು.

ನಿಜಕ್ಕೂ ಕಾಲವಿದೆ ಮು೦ದೆ

ಕಿಟಕಿ ಗಾಜುಗಳಿಗೆ ಬೆನ್ನುಜ್ಜುತ್ತಾ

ಬೀದಿಯಲ್ಲಿ ಹಾಯ್ದು ಹೋಗುವ ಹಳದಿ ಹೊಗೆಗೆ

ಕಾಲವಿದೆ ಮುಂದೆ, ಖಂಡಿತಾ ಕಾಲವಿದೆ ಮುಂದೆ

ನೀನು ಭೇಟಿ ಮಾಡುವ ಮುಖಗಳನ್ನು ಭೇಟಿ ಮಾಡುವ

ಮುಖವೊಂದನ್ನು ಸಜ್ಜುಗೊಳಿಸಲು

ಕಾಲವಿದೆ ಮುಂದೆ ಹತ್ಯೆಗಯ್ಯಲು ಮತ್ತು ಸೃಷ್ಟಿಸಲು

ಕಾಲವಿದೆ, ಧುತ್ತನೇ ಪ್ರಶ್ನೆಯೊಂದನ್ನೆತ್ತಿ

ನಿನ್ನ ತಟ್ಟೆಗೆ ಹಾಕುವ

ಕೈಯ ಕೆಲಸಗಳಿಗೆ ಮತ್ತು ಅದರ ದಿನಗಳಿಗೆ.

ನಿನಗೂ ಸಮಯವಿದೆ , ನನಗೂ ಸಮಯವಿದೆ

ಮತ್ತು ಸಮಯವಿದೆ ಇನ್ನೂ ನೂರು ಅನಿಶ್ಚತತೆಯ ತೊಳಲಾಟಗಳಿಗೆ

ಮತ್ತು ನೂರು ದಾರ್ಶನಿಕತೆಗೆ, ಮತ್ತು ಪುನರಾವಲೋಕನಕ್ಕೆ

ಕಾಲವಿದೆ ಎಲ್ಲದಕ್ಕೂ

ಚಹ ಮತ್ತು ಟೋಸ್ಟ್ ಗಳನ್ನು ಸೇವಿಸುವ ಮೊದಲು.

ಕೋಣೆಯಲ್ಲಿ ಹೆಂಗಸರು ಬ೦ದು ಹೋಗುತ್ತಿದ್ದಾರೆ

ಮೈಖೆಲೇಂಜಲೋನ ಬಗ್ಗೆ ಮಾತನಾಡುತ್ತಾ.

ನಿಜಕ್ಕೂ ಕಾಲವಿದೆ ಮು೦ದೆ

ನನಗೆ ಎದೆಗಾರಿಕೆ ಇದೆಯೇ? ಇದೆಯೇ ನನಗೆ ಎದೆಗಾರಿಕೆ!

ಎಂದು ಅಚ್ಚರಿ ಪಡಲು.

ಕಾಲವಿದೆ, ಕೂದಲುಗಳ ನಡುವೆ ಇಷ್ಟಗಲ ಬೋಳಾದ ತಲೆ ಹೊತ್ತು

ಹಿಂದಿರುಗಿ ಮೆಟ್ಟಿಲುಗಳನ್ನಿಳಿಯಲು.

( ಹೇಳುತ್ತಾರವರು : ಅವನ ತಲೆಗೂದಲು ಎಷ್ಟು ತೆಳುವಾಗುತ್ತಿದೆ ! )

ನನ್ನ ಬೆಳಗಿನ ಕೋಟು, ಗದ್ದಕ್ಕೆ ತಗುಲುವ೦ತೆ

ಸೆಟೆದು ನಿ೦ತ ನನ್ನ ಕಾಲರ್,

ದುಬಾರಿ ಬೆಲೆಯ ಆದರೆ ಸರಳವಾದ,

ಸಾಧಾರಣ ಪಿನ್ ನಿಂದ ಧೃಡವಾಗಿ ನಿ೦ತ ನನ್ನ ನೆಕ್ ಟೈ

( ಹೇಳುವರು ಅವರು : ಅವನ ಕೈ ಕಾಲುಗಳು ಅದೆಷ್ಟು ಬಡಕಲಾಗಿವೆ!)

ಎದೆಗಾರಿಕೆ ಇದೆಯೆ ನನಗೆ

ಲೋಕವನ್ನೇ ಅಲ್ಲೋಲ ಕಲ್ಲೋಲ ಗೊಳಿಸಲು?

ಕ್ಷಣದಲ್ಲೇ ಕಾಲವಿದೆ ತೆಗೆದು ಕೊಳ್ಳುವ ತೀರ್ಮಾನಗಳಿಗೆ ಮತ್ತು

ಪುನರ್ವಿಮರ್ಷಿತ ಮರು ತೀರ್ಮಾನಗಳಿಗೆ ಮತ್ತು

ಮರುಕ್ಷಣವೇ ಅವುಗಳ ಬದಲಾವಣೆಗೆ.

ಲಾಗಾಯ್ತಿನಿಂದಲೇ ಗೊತ್ತಿದ್ದಾರೆ ಅವರೆಲ್ಲ ನನಗೆ. ಗೊತ್ತಿದ್ದಾರೆ ಅವರೆಲ್ಲ.

ನಾ ಬಲ್ಲೆ ಸಂಜೆಗಳನ್ನು , ಬೆಳಗುಗಳನ್ನು, ಮಧ್ಯಾಹ್ನಗಳನ್ನು.

ಕಾಫಿ ಚಮಚಗಳಲ್ಲಿ ಅಳೆದಿದ್ದೇನೆ ನನ್ನ ಬದುಕನ್ನು.

ನಾ ಬಲ್ಲೆ, ದೂರದ ಕೊಠಡಿಯೊ೦ದರಿಂದ ತೇಲಿ ಬರುವ ಸಂಗೀತದಲೆಗಳ ಕೆಳಗೆ

ಬಿದ್ದು ಸಾಯುತ್ತಿರುವ ಧ್ವನಿಗಳನ್ನು

ಆದ್ದರಿಂದ ಹೇಗೆ ತಾನೇ ಊಹಿಸಲಿ ನಾನು ಇದು ಹೀಗೇ ಎ೦ದು?

ಆ ಕಣ್ಣುಗಳನ್ನು ನಾನಾಗಲೇ ಬಲ್ಲೆ, ಎಲ್ಲವೂ ತಿಳಿದಿದೆ ನನಗೆ –

ಕಟ್ಟಿದ ನುಡಿಗಟ್ಟುಗಳ ಜಾಲದಲ್ಲಿ ನಮ್ಮನ್ನು ಸಿಲುಕಿಸುವ ಆ ಕಣ್ಣುಗಳು!

ನಾನು ಮೊಳೆಗೆ ಸಿಲುಕಿ ಅಡ್ಡಾ ದಿಡ್ಡಿ ಕೈ ಕಾಲು ಚಾಚಿಕೊಂಡಿರುವಾಗ

ನನ್ನನ್ನು ಗೋಡೆಗಿಟ್ಟು ಮೊಳೆ ಜಡಿದು ನೋವಿ೦ದ ನಾನು ನರಳುತ್ತಿರುವಾಗ

ಹೇಗೆ ತಾನೇ ಪ್ರಾರಂಭಿಸಲಿ ಹೇಳು

ನನ್ನ ಧಗ್ಧ ಬದುಕಿನ ಅಳಿದುಳಿದ ಅವಶೇಷಗಳನ್ನು ಹೊರ ಹಾಕಲು?

ಹೇಗೆ ತಾನೇ ತೀರ್ಮಾನಿಸಲಿ?

ಬಲ್ಲೆ ನಾನು ಆ ತೋಳುಗಳನ್ನು, ಅವೆಲ್ಲವೂ ಗೊತ್ತಿದೆ ನನಗೆ-

ನಾಗಮುರಿಗೆಯನ್ನು ತೊಟ್ಟ ಆ ಬಿಳಿಯ ತೋಳುಗಳು

(ಲ್ಯಾಂಪಿನ ಬೆಳಕಲ್ಲಿ ಕಾಣುವ ಅವುಗಳ ಮೇಲಿನ ಕ೦ದು ರೋಮಗಳು)

ಯಾವುದೋ ಉಡುಪಿನಿಂದ ಹೊಮ್ಮುತ್ತಿರುವ ಪರಿಮಳ

ನನ್ನನ್ನು ಹೀಗೆ ವಿಷಯಾಂತರ ಮಾಡುವಂತೆ ಪ್ರೇರೇಪಿಸುತ್ತಿರ ಬಹುದೆ?

ಟೇಬಲ್ಲಿನ ಮೇಲೆ ಚಾಚಿಕೊ೦ಡಿರುವ ತೋಳುಗಳೆ?

ಅಥವಾ ಶಾಲು ಸುತ್ತಿಕೊಂಡಿರುವ ತೊಳುಗಳೇ?

ಯಾವುದೆ೦ದು ಹೇಗೆ ತಾನೆ ಊಹಿಸಲಿ?

ಹೇಗೆ ತಾನೇ ಪ್ರಾರಂಭಿಸಲಿ?

ಹೇಳಲೇ ಎಲ್ಲವನ್ನೂ ನಾನು? –

ಇಳಿ ಸಂಜೆಯಲ್ಲಿ ಇಕ್ಕಟ್ಟಿನ ಗಲ್ಲಿಗಳಲ್ಲಿ ಹಾದು ಹೋಗಿದ್ದೇನೆ

ಕಿಟಕಿಯಿಂದ ಬಾಗಿ ಹೊರಗಿಣುಕುವ ತುಂಡು ತೋಳಿನ ಅಂಗಿಯ

ಏಕಾಂಗಿ ಗಂಡಸರು ಸೇದುವ ತ೦ಬಾಕಿನ ಪೈಪುಗಳಿಂದ

ಮೇಲೇಳುವ ಹೊಗೆಯನ್ನು ಗಮನಿಸಿದ್ದೇನೆ.

ಮೌನ ಶರಧಿಯ ಮೇಲೆಮೇಲೆ ಸಲೀಸು ಜಾರಬಲ್ಲಂಥ

ಜೋಡಿ ಪ೦ಜಗಳುಳ್ಳವನು ನಾನಾಗ ಬೇಕಿತ್ತು.

ನೀಳ ಮೃದು ಬೆರಳುಗಳು ಮೈದಡವುತಿರುವಾಗ

ಎಷ್ಟು ಪ್ರಶಾ೦ತವಾಗಿ ಮಲಗಿದೆ ಮಧ್ಯಾಹ್ನ ಸಂಜೆಗಳು

ನಮ್ಮಿಬ್ಬರ ನಡುವೆ ಇಲ್ಲೆ ಪಕ್ಕದಲ್ಲಿ

ಮಲಗಿವೆ ನೆಲದ ಮೇಲೆ.

ಗಾಢ ನಿದ್ದೆ……ಆಯಾಸಗೊಂಡಿವೆ………ಅಥವಾ ಹಾಗೆ ನಟಿಸುತ್ತಿವೆ.

ಚಹ, ಕೇಕು ಮತ್ತು ಐಸ್ ಕ್ರಿಂ ಗಳನ್ನು ತೆಗೆದು ಕೊಂಡ ಮೇಲೆ

ಆ ರೋಚಕ ಗಳಿಗೆಯನ್ನು ಅದರ ಉತ್ತುಂಗಕ್ಕೆ ಕೊಂಡೊಯ್ಯ ಬಲ್ಲ

ತಾಕತ್ತು ಇದೆಯೆ ನನಗೆ?

ನಾನು ಎಷ್ಟೇ ಅತ್ತರೂ, ಉಪವಾಸ ಮಾಡಿದರೂ, ದುಃಖದಿ೦ದ ಪ್ರಾರ್ಥಿಸಿದರೂ

ನನ್ನ ತಲೆಯನ್ನೇ ( ಅದು ಈಗ ಸ್ವಲ್ಪ ಬೋಳಾಗಿದೆ) ತಟ್ಟೆಯೊಳಗಿಟ್ಟು ಒಳಗೆ ತಂದರೂ

ನಾನು ಪ್ರವಾದಿಯಲ್ಲ; ಇದೊ೦ದು ದೊಡ್ಡ ವಿಚಾರವೂ ಅಲ್ಲ.

ನನ್ನ ಹಿರಿಮೆಯ ದಿನಗಳು ಕಂಪಿಸಿದ್ದನ್ನು ಕಂಡಿದ್ದೇನೆ

ಅಮರ ಪರಿಚಾರಕ ನನ್ನ ಕೋಟನ್ನು ಜಗ್ಗಿ ಕುಚೋದ್ಯ ಮಾಡಿದ್ದನ್ನು ನೋಡಿದ್ದೇನೆ.

ನಿಜ ಹೇಳ ಬೇಕೆಂದರೆ, ನಾನು ಹೆದರಿದ್ದೆ!

ಮತ್ತೆ ಕೇವಲ ಇವೆಲ್ಲಕ್ಕೆ ಯೋಗ್ಯವೇ ಅದು

ಮದ್ಯ, ರಸಾಯನ, ಚಹಾ ಮುಗಿದ ನಂತರ

ಪಿಂಗಾಣಿ ಪ್ಲೇಟು ಕಪ್ಪುಗಳ ನಡುವೆ

ನಮ್ಮಿಬ್ಬರ ಮಾತಿನ ನಡುವೆ

ಇವೆಲ್ಲ ಯೋಗ್ಯವೇ ಹೇಳು?

ಮುಗುಳು ನಗೆ ಬೀರುತ್ತಾ ಅದೇ ವಿಷಯಕ್ಕೇ ಅಂಟಿಕೊಳ್ಳುವುದು?

ಇಡೀ ಜಗತ್ತನ್ನೇ ಒ೦ದು ಚೆಂಡಿನೊಳಗೆ ತುರುಕಿ

ಬಹು ದೊಡ್ಡ ಗಂಭೀರ ಪ್ರಶ್ನೆಯೆಡೆಗೆ ಅದನ್ನು ಉರುಳಿಸುವುದು?

ಇವೆಲ್ಲ ಸರಿಯೇ ಹೇಳು?

ನಾನು “ಲಾಜರಸ್”; ಸತ್ತವರ ನಡುವಿಂದ ಎದ್ದು ಬಂದಿದ್ದೇನೆ

ಬ೦ದಿದ್ದೇನೆ ಮರಳಿ, ಎಲ್ಲವನ್ನೂ ನಿಮಗೆ ಹೇಳಲು

ಹೇಳುತ್ತೇನೆ ನಾನು ನಿಮಗೆ ಎಲ್ಲವನ್ನೂ ಎಂದು ಹೇಳಲು

ಒಬ್ಬಾಕೆ ತಲೆದಿ೦ಬು ಸರಿ ಪಡಿಸಿಕೊಳ್ಳುತ್ತಾ

“ ನನ್ನ ಮಾತಿನ ಅರ್ಥ ಅದಲ್ಲವೇ ಅಲ್ಲ

ಖ೦ಡಿತಾ ಅದಲ್ಲವೇ ಅಲ್ಲ”

ಎ೦ದು ಹೇಳಿ ಬಿಟ್ಟರೆ ಮಾಡುವುದೇನು?

ಮತ್ತೆ ಇವೆಲ್ಲಕ್ಕೆ ಯೋಗ್ಯವೇ ಅದು ಹೇಳು?

ಯೋಗ್ಯವಾಗಿರಲು ಸಾಧ್ಯವೇ?ಸೂರ್ಯಾಸ್ತಗಳು, ಮನೆಯಂಗಳಗಳು, ಚದುರಿದ ಬೀದಿಗಳು, ಎಲ್ಲವೂ

ಮುಗಿದ ಮೇಲೆ,

ಕಾದಂಬರಿಗಳೂ ಮುಗಿದ ಮೇಲೆ, ಚಹದ ಕಪ್ಪುಗಳೂ ಮುಗಿದ ಮೇಲೆ,

ನಡೆವಾಗ ನೆಲ ಸವರುವ ಲಂಗಗಳೂ ಮುಗಿದ ಮೇಲೆ

ಇಷ್ಟಲ್ಲದೇ ಇನ್ನೂ ಬಹಳಷ್ಟು ಮುಗಿದ ಮೇಲೆ

ಯೋಗ್ಯವಾಗಿರಲು ಸಾಧ್ಯವೇ ಅದು?

ನಾನಂದುಕೊಂಡದ್ದನ್ನು ಹೇಳುವುದು ಬಲು ಕಷ್ಟ

ಮಾಯಾ ಲಾಂದ್ರವೊಂದು ಸ್ಕ್ರೀನಿನ ಮೇಲೆ

ನರಗಳ ವಿವಿಧ ವಿನ್ಯಾಸಗಳನ್ನು ಮೂಡಿಸಿದ ಹಾಗೆ!

ಎಂದಿಗಾದರೂ ಇದು ಯೋಗ್ಯವಾದೀತೆ ಹೇಳು?

ಯಾರೋ ದಿ೦ಬನ್ನು ಅನುಗೊಳಿಸಿಕೊಳ್ಳುತ್ತಲೋ,

ಶಾಲನ್ನು ಸರಿ ಪಡಿಸಿಕೊಳ್ಳುತ್ತಲೋ

ತಿರುಗಿ ಕಿಟಕಿಯ ಮೂಲಕ ಹೊರಗೆ ನೋಡುತ್ತಲೋ

“ಅದಲ್ಲವೇ ಅಲ್ಲ

ನನ್ನ ಮಾತಿನ ಅರ್ಥ ಖಂಡಿತಾ ಅದಲ್ಲವೇ ಅಲ್ಲ”

ಎಂದು ಹೇಳಿ ಬಿಟ್ಟರೆ?

ಅಲ್ಲ! ನಾನು ರಾಜಕುಮಾರ ಹ್ಯಾಮ್ಲೆಟ್ ಅಲ್ಲ,

ಅವನಾಗುವ ಯಾವ ಯೋಗ್ಯತೆಯೂ ನನಗಿಲ್ಲ

ಕೇವಲ ನಾನೊಬ್ಬ ರಾಜಕುಮಾರನ ಪರಿಚಾರಕ

ನಾಟಕವನ್ನು ಹಿಗ್ಗಿಸಲು,

ಒಂದೋ ಎರಡೋ ದೃಶ್ಯಗಳನ್ನು ಪ್ರಾರ೦ಭಿಸಲು,

ರಾಜಕುಮಾರನಿಗೆ ಬುದ್ಧಿ ಹೇಳಲು,

ಅನುಮಾನವೇ ಬೇಡ, ನಾನೊಂದು ಉಪಯೋಗಿಸ ಬಲ್ಲ ಸುಲಭ ಉಪಕರಣ,

ಅನುಸರಣೀಯ, ಉಪಯೋಗಿಸಿಕೊಂಡರೆ ಖುಷಿ ಪಡುವವ

ತ೦ತ್ರಗಾರ, ಹುಷಾರಿನವ, ಕರಾರವಾಕ್ಕಿನವ,

ಘನವಾದ ಭಾಷಣಕಾರ, ಆದರೆ ಸ್ವಲ್ಪ ಪೆದ್ದ,

ನಿಜಕ್ಕೂ ಕೆಲವೊಮ್ಮೆ ಬಹಳಷ್ಟು ಹಾಸ್ಯಾಸ್ಪದ,

ಕೆಲವೊಮ್ಮೆ ಪೂರ್ಣ ವಿದೂಷಕ.

ನಾನು ಮುದುಕನಾದೆ…… ಮುದುಕನಾದೆ ನಾನು.

ಪ್ಯಾಂಟಿನ ಕಾಲುಗಳ ತಳವನ್ನು ಮಡಿಸಿ ತೊಡುವೆ ನಾನು.

ನನ್ನ ಕೂದಲನ್ನು ಹಿಂದಕ್ಕೆ ಬಾಚಲೇ ?

ಧೈರ್ಯವಾಗಿ ಪೀಚ್ ಹಣ್ಣನ್ನು ತಿನ್ನ ಬಲ್ಲೆನೆ ?

ನಾನು ಬಿಳಿಯ ಫ್ಲಾನಲ್ ಪ್ಯಾಂಟು ತೊಡುತ್ತೇನೆ,

ತೊಟ್ಟು ಕಡಲ ಕಿನಾರೆಯಲ್ಲಿ ನಡೆಯುತ್ತೇನೆ.

ಮತ್ಸ್ಯ ಕನ್ಯೆಯರು ತಮ್ಮ ತಮ್ಮಲ್ಲೇ ಹಾಡುವುದ ಕೇಳಿದ್ದೇನೆ.

ಹಾಡಲಾರರು ಅವರು ನನಗಾಗಿ ಎನಿಸುತಿದೆ!

ಬೀಸುಗಾಳಿಗೆ ಕಡಲ ನೀರು

ನೊರೆ ಬಿಳುಪು ಮತ್ತು ಕಪ್ಪು ಕಪ್ಪಾಗಿ ಕಾಣುವಾಗ

ಆ ಮತ್ಸ್ಯ ಕನ್ಯೆಯರು ಅಲೆಗಳನೇರಿ ಹೊರಟು ಸವಾರಿ

ಅಲೆಗಳ ಬಿಳಿಗೂದಲನ್ನು ಹಿ೦ದಕ್ಕೆ ಸರಿಸುತ್ತಾ

ಸಾಗುವುದ ಕ೦ಡಿದ್ದೇನೆ.

ಕೆಂಪು ಮತ್ತು ಕ೦ದು ಕಡಲ ಕಳೆಗಳಿ೦ದ

ಸಿಂಗರಗೊಂಡ ಕಡಲ ಕನ್ಯೆಯರೊಡನೆ

ಕಾಲ ಕಳೆದಿದ್ದೇವೆ ನಾವು ಕಡಲ ಕೋಣೆಗಳಲ್ಲಿ

ಮನುಷ್ಯ ಧ್ವನಿಗಳು ನಮ್ಮನ್ನು ಎಚ್ಚರಿಸುವ ವರೆಗೆ

ಮತ್ತೆ ಮುಳುಗುತ್ತೇವೆ.

*************

ಇ೦ಗ್ಲಿಷ್ ನಲ್ಲಿ : ಟಿ.ಎಸ್.ಏಲಿಯಟ್

ಕನ್ನಡಕ್ಕೆ : ಮೇಗರವಳ್ಳಿ ರಮೇಶ್

( ಋಣಿಯಾಗಿದ್ದೇನೆ: ಅ೦ತರ್ಜಾಲಕ್ಕೆ ಮತ್ತು ಎನ್.ಎಸ್. ಲಕ್ಶ್ಮೀನಾರಾಯನ ಭಟ್ಟರ
“ಏಲಿಯಟ್ ಕಾವ್ಯ ಸಂಪುಟ” ಕ್ಕೆ)

ಮೇಗರವಳ್ಳಿ ರಮೇಶಶಶ್

Leave a Reply

Back To Top