ಕಾವ್ಯಯಾನ

ಸೋಲೆಂಬ ಸಂತೆಯಲಿ

multicolored abstract painting

ದೀಪ್ತಿ ಭದ್ರಾವತಿ

ಹೀಗೇಕೆ ಬೆನ್ನು ಬಿದ್ದಿದೆ ಸೋಲು

ರಚ್ಚೆ ಹಿಡಿದ ಮಗುವಿನಂತೆ

ಹೆಜ್ಜೆ ಇಟ್ಟೆಡೆಗೆ ಕಣ್ಣು ನೆಟ್ಟಿದೆ

ತಾಳಬಲ್ಲೆನೇ

ಸವಾರಿ?

ಕಣ್ಣಂಚಲಿ

ಮುತ್ತಿಕ್ಕುತ್ತಿದೆ ಸೋನೆ

ಸುಡುವ ಹರಳಿನಂತೆ

ಒರೆಸಿಕೊಳ್ಳಲೇ ಸುಮ್ಮನೆ?

ಎಷ್ಟೊಂದು ಸಂಕಟದ ಸಾಲಿದೆ

ಸೋಲೆಂಬ ಮೂಟೆಯೊಳಗೆ

ನಟ್ಟ ನಡು ಬಯಲಿನಲಿ ಒಂಟಿ

ಮತ್ತು ಒಂಟಿ ಮಾತ್ರ

ಹರಿಯಬಲ್ಲದೇ ಹರಿದಾರಿ?

ನಡೆಯುತ್ತದೆಯೇ ದಿಕ್ಕು ಮರೆತ ನೌಕೆ?

ಸುತ್ತ ಹತ್ತೂರಿಂದ ಬಂದ ಪುಂಡ

ಗಾಳಿ ಹೊತ್ತೊಯ್ದು ಬಿಡುವುದೇ

ನೆಟ್ಟ ಹಗಲಿನ ಕಂಪು?

ಯಾವ ದಾರಿಯ ಕೈ ಮರವೂ

ಕೈ ತೋರುತ್ತಿಲ್ಲ

ಮರೆತು ಹೋಗಿದೆ ದಿಕ್ಸೂಚಿಗೂ

ಗುರುತು

ಕಗ್ಗತ್ತಲ ಕರ‍್ತಿಕದಲಿ

ಹಚ್ಚುವ ಹಣತೆಯೂ ನಂಟು ಕಳಚಿದೆ

ಮುಖ ಮುಚ್ಚಿಕೊಂಡೀತೆ

ಬೆಳಕು ಬಯಲ ಬೆತ್ತಲೆಗೆ?

ಮುಗ್ಗರಿಸಿದ ಮಧ್ಯಹಾದಿಯ

ಮಗ್ಗಲು ಬದಲಿಸಲೇ?

ನೂರೆಂಟು ನವಿಲುಗರಿಗಳ

ನಡುವೆ ಹಾರಿದ ಮುಳ್ಳು

ಎದೆ ಚುಚ್ಚಿದೆ, ಕಣ್ಣು ನೆಟ್ಟಿದೆ

ಮತ್ತು ನೆತ್ತಿಯನ್ನೂ ಕೂಡ

ಸೋಲು ಭಾಷೆ ಬದಲಿಸುವುದಿಲ್ಲ

ನನಗೋ ಭಾಷೆಗಳು ಬರುವುದೇ ಇಲ್ಲ..  

***********

2 thoughts on “ಕಾವ್ಯಯಾನ

  1. ಮುಖ‌ ಮುಚ್ಚಿಕೊಂಡೀತೆ
    ಬೆಳಕು ಬಯಲ ಬೆತ್ತಲೆಗೆ…..,

    ಇಲ್ಲಿ‌ ‌ ಕಾವ್ಯದ ಔನ್ನತ್ಯವಿದೆ.‌

    ವಿಷಾದ ಮತ್ತು ನೋವನ್ನು ಹಾಗೂ ಸೋಲನ್ನು ಕಟ್ಟಿಕೊಡುವ ಕವಿತೆ ….

Leave a Reply

Back To Top