ಜಾಮಿನಿಯ ನೆನಪಿನಲ್ಲಿ
ಈ ಮಳೆಗಾಲದಲ್ಲಿಯೇ ನೆನಪುಗಳು ಹುಟ್ಟಿಕೊಂಡಿರಬಹುದು ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಮೋಡಗಳೊಂದಿಗೆ ತಣ್ಣಗೆ ತೇಲಿಬಂದ ನೆನಪೊಂದು, ಏಕಾಂತ ಬಯಸಿ ಟೆರೇಸಿನಲ್ಲಿ ಕುಳಿತು ಆಕಾಶ ದಿಟ್ಟಿಸುತ್ತಿದ್ದ ಹೃದಯವೊಂದನ್ನು ತಾಕಿ ನೆಲಕ್ಕೆ ಇಳಿದಿರಬಹುದು. ಹಾಗೆ ತಾಕಿದ ನೆನಪು ಒಮ್ಮೆ ಬಾಲ್ಯದ ಬೆರಗಾಗಿ, ಇನ್ನೊಮ್ಮೆ ಹರೆಯದ ಕನಸಾಗಿ, ಮತ್ತೊಮ್ಮೆ ಫ್ರಿಡ್ಜ್ ನಲ್ಲಿಟ್ಟ ಐಸ್ ಕ್ರೀಮಾಗಿ ಎಲ್ಲರ ಅರಿವಿಗೂ ದಕ್ಕಿರಬಹುದು. ಹಾಗೆ ದಕ್ಕಿದ ನೆನಪು ಈಗಷ್ಟೇ ಟ್ರೆಕ್ಕಿಂಗ್ ಮುಗಿಸಿದ ಹುಡುಗನೊಬ್ಬನ ಭಾರವಾದ ಬ್ಯಾಗ್ ನಲ್ಲೋ, ಕಾಡುಪಾಪವೊಂದನ್ನು ಕಷ್ಟಪಟ್ಟು ಕ್ಲಿಕ್ಕಿಸಿದ ಫೋಟೋಗ್ರಾಫರ್ ನ ಕ್ಯಾಮರಾದಲ್ಲೋ, ಸಮುದ್ರದಂಚಿಗೆ ಕಾಲುಚಾಚಿ ಕುಳಿತ ಹುಡುಗಿಯೊಬ್ಬಳ ಉಗುರಿನೊಳಗೆ ಸೇರಿಕೊಂಡ ಮರಳಿನ ಕಣಗಳಲ್ಲೋ ಹೊಸದೊಂದು ರೂಪ ಪಡೆದುಕೊಂಡಿರಬಹುದು. ಹೀಗೆ ಹೊಸ ರೂಪ ಪಡೆದ ನೆನಪುಗಳೆಲ್ಲ ಒಂದೊಂದಾಗಿ ಹಿಂದೆಮುಂದೆ ಸುಳಿದಾಡಿ ಅವನೆಂದರೆ ಇವಳು, ಇವಳೆಂದರೆ ಬದುಕು ಹೀಗೆ ಎಲ್ಲವೂ ಹುಟ್ಟಿಕೊಂಡಿರಬಹುದು.
ಬದುಕು ಸಹ್ಯವಾಗುತ್ತಾ, ಸಲೀಸಾಗುತ್ತಾ ಸಾಗಬೇಕೆಂದರೆ ಅಲ್ಲೊಂದಿಷ್ಟು ಸುಂದರ ನೆನಪುಗಳು ಸರಿದಾಡುತ್ತಿರಬೇಕು. ಅಪ್ಪ ದೀಪಾವಳಿಗೆಂದು ತಂದುಕೊಟ್ಟ ಫ್ರಾಕಿನ ಮೇಲೆ ಪ್ರಿಂಟಾಗಿದ್ದ ಕೀಲಿಕೈಗಳು, ವಾಲಿಬಾಲ್ ಕೋರ್ಟ್ ನೊಳಗಿಂದಲೇ ಕದ್ದು ನೋಡುತ್ತಿದ್ದ ಹತ್ತನೇ ಕ್ಲಾಸಿನ ಹುಡುಗನ ಕಣ್ಣುಗಳಲ್ಲಿರುತ್ತಿದ್ದ ತುಂಟತನ, ಗಾಳಿ ಕೂಡಾ ನುಸುಳಲು ಸಾಧ್ಯವಾಗದಂತೆ ತುಂಬಿರುತ್ತಿದ್ದ ಸಿಟಿಬಸ್ಸನ್ನು ಸೇಫಾಗಿ ಕಾಲೇಜು ತಲುಪಿಸುತ್ತಿದ್ದ ಡ್ರೈವರ್ ಸಲೀಮಣ್ಣನ ಸಹನೆ, ಆಫೀಸಿನ ಗ್ರಾನೈಟ್ ಕಟ್ಟೆಯ ಮೇಲೆ ತಪಸ್ಸಿಗೆ ಕೂತ ಕಾಮಧೇನುವಿನಂಥ ಕಾಫಿ ಮಷಿನ್ನು ಹೀಗೇ ಲಕ್ಷ್ಯಕ್ಕೇ ಬಾರದ ಸಣ್ಣಪುಟ್ಟ ಸಂಗತಿಗಳೆಲ್ಲ ನೆನಪಾಗಿ ದಿನನಿತ್ಯ ಎದುರಾಗುತ್ತಲೇ ಇರುತ್ತವೆ. ಈ ನೆನಪುಗಳೊಟ್ಟಿಗಿನ ಸಾಂಗತ್ಯ ಸಾಧ್ಯವಾಗದೇ ಇದ್ದಿದ್ದರೆ ಪಾರಿವಾಳವೊಂದು ಪತ್ರ ವಿಲೇವಾರಿ ಮಾಡಿದ ಕಥೆಯೊಂದು ಸಿನೆಮಾವಾಗುತ್ತಲೇ ಇರಲಿಲ್ಲ; ಆ ಸಿನೆಮಾದ ಡ್ಯೂಯೆಟ್ ಒಂದು ಬಾತ್ ರೂಮ್ ಸಿಂಗರ್ ಗಳನ್ನು ಹುಟ್ಟುಹಾಕುತ್ತಿರಲಿಲ್ಲ; ಅಪ್ಪ-ಅಮ್ಮನ ವಿರೋಧವನ್ನು ಧಿಕ್ಕರಿಸಿ ಒಂದಾಗುವ ಪ್ರೇಮಿಗಳು ಆದರ್ಶಪ್ರೇಮವೊಂದರ ಉದಾಹರಣೆಯಾಗುತ್ತಿರಲಿಲ್ಲ. ಹೀಗೇ ನವರಸಗಳನ್ನೂ ಒಟ್ಟೊಟ್ಟಿಗೇ ನಮ್ಮೆದುರು ಬಿಚ್ಚಿಡುವ ಸಾಮರ್ಥ್ಯವೊಂದು ಅದು ಹೇಗೋ ಈ ನೆನಪಿಗೆ ಸಿದ್ಧಿಸಿದೆ.
ನೆನಪಿನ ಒಡನಾಟದಲ್ಲಿ ವಿಷಾದವೆನ್ನುವುದು ಇರದಿದ್ದರೆ ಬದುಕು ಇನ್ನಷ್ಟು ವರ್ಣಮಯವೆನ್ನಿಸುತ್ತಿದ್ದಿರಬಹುದು. ಹೊಸ ಸೀರೆಗೊಂದು ಮ್ಯಾಚಿಂಗ್ ಚಪ್ಪಲಿ ಧರಿಸಿ ಗೆಳತಿಯೊಬ್ಬಳ ಬರ್ತ್ ಡೇ ಪಾರ್ಟಿಯೊಂದಕ್ಕೆ ಹೋದಾಗ, ಊಟದ ತಟ್ಟೆಯಲ್ಲಿನ ಜಿಲೇಬಿಯೊಂದು ಜಿಲೇಬಿಪ್ರಿಯರನ್ನೆಲ್ಲ ನೆನಪಿಸುವುದುಂಟು. ಹಾಗೆ ಥಟ್ಟನೆ ನೆನಪಿಗೆ ಬರುವವರ ಲಿಸ್ಟ್ ನಲ್ಲಿ ಹೈಸ್ಕೂಲಿನ ಬೆಂಚಿನ ಮೇಲೆ ಊಟ ಹಂಚಿಕೊಂಡು ತಿಂದ ಗೆಳತಿಯೊಬ್ಬಳಿರಬಹುದು; ಮದುವೆ-ಮುಂಜಿಗಳಲ್ಲಿ ಮಾತ್ರ ಭೇಟಿಯಾಗುವ ದೂರದ ಸಂಬಂಧಿಯೊಬ್ಬನಿರಬಹುದು; ಫೇಸ್ ಬುಕ್ ಪೇಜಿನಲ್ಲಿ ಕಾಣಿಸಿಕೊಂಡ ಜಿಲೇಬಿ ತಿನ್ನುತ್ತಿರುವ ಪುಟ್ಟ ಮಗುವೊಂದಿರಬಹುದು. ಆ ಲಿಸ್ಟ್ ನಲ್ಲಿರುವ ಎಲ್ಲರೊಂದಿಗೂ ಕುಳಿತು ಜಿಲೇಬಿ ತಿನ್ನಲಾಗುವುದಿಲ್ಲ ಎನ್ನುವ ಸತ್ಯವೊಂದು ಗೊತ್ತಿದ್ದರೂ, ಅವರ ಊಟದ ತಟ್ಟೆಯಲ್ಲಿಯೂ ಜಿಲೇಬಿ ಲಭ್ಯವಿರುತ್ತದೆಯೆನ್ನುವ ಸಮಾಧಾನವೊಂದು ನೆನಪುಗಳನ್ನು ಸಲಹುತ್ತಿರುತ್ತದೆ. ಆದರೆ ಆ ಲಿಸ್ಟ್ ನಲ್ಲಿದ್ದ ಮುಖವೊಂದು ಇನ್ನೆಂದಿಗೂ ಎದುರಾಗುವುದೇ ಇಲ್ಲವೆನ್ನುವ ವಿಷಾದವೊಂದು ನೆನಪಿನ ರೂಪದಲ್ಲಿ ಜಿಲೇಬಿಯೊಂದಿಗೆ ಪ್ಲೇಟಿನ ತುದಿಯಲ್ಲಿ ಕಾಣಿಸಿಕೊಂಡಾಗ, ಜಿಲೇಬಿಯೆಡೆಗಿನ ಮೋಹ ಇನ್ನಿಲ್ಲದಂತೆ ಮಾಯವಾಗಿಬಿಡುತ್ತದೆ. ಹಾಗೆ ಲಿಸ್ಟ್ ನಿಂದ ಥಟ್ಟನೆ ಅರಿವಿಗೇ ಬಾರದಂತೆ ಕಳೆದುಹೋದವಳು ಜಾಮಿನಿ.
ಮಣಿಪುರದ ಹುಡುಗಿ ಜಾಮಿನಿ ನನ್ನೊಂದಿಗೇ ಕೆಲಸಕ್ಕೆ ಸೇರಿದವಳು. ಮೆತ್ತನೆಯ ಕೂದಲನ್ನು ಮೇಲಕ್ಕೆ ಎತ್ತಿಕಟ್ಟಿ ಜುಟ್ಟು ಅಲ್ಲಾಡಿಸುತ್ತಾ ಫ್ಲೋರ್ ತುಂಬಾ ಓಡಾಡುತ್ತಿದ್ದ ಜಾಮಿನಿ, ಅವಳ ಅಪರೂಪದ ಹೆಸರಿನಿಂದಾಗಿ ಆಫೀಸಿನಲ್ಲೆಲ್ಲ ಫೇಮಸ್ಸಾಗಿದ್ದಳು. ಮೆಲುಮಾತಿನ ಮಿತಭಾಷಿ ಜಾಮಿನಿ ಮನಸ್ಸಿಗೆ ಹತ್ತಿರವಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ತುಂಬುಕುಟುಂಬವೊಂದರ ಕಿರಿಯ ಸೊಸೆಯರಂತೆ ನಾವಿಬ್ಬರೂ ಮನಬಂದಾಗ ಕೆಲಸ ಮಾಡುತ್ತಾ, ಪಾಪ್ ಕಾರ್ನ್ ತಿನ್ನುತ್ತಾ ವರ್ಷಗಳನ್ನೇ ಕಳೆದೆವು. ಮೆಚ್ಚಿದ ಹುಡುಗನನ್ನು ಮದುವೆಯಾದ ಜಾಮಿನಿ ಕೆಲಸ ಬಿಟ್ಟು ಬೇರೆಡೆ ಸೇರಿಕೊಂಡಳು. ನಂತರದ ಐದು ವರ್ಷಗಳಲ್ಲಿ ಒಮ್ಮೆ ಭೇಟಿಯಾಗಿದ್ದು ಬಿಟ್ಟರೆ ಜಾಸ್ತಿ ಮಾತುಕತೆಯೇನೂ ನಮ್ಮಿಬ್ಬರ ಮಧ್ಯೆ ಇರಲಿಲ್ಲ. ಊಟ ಮಾಡುವಾಗಲೋ, ಪಾಪ್ ಕಾರ್ನ್ ತಿನ್ನುವಾಗಲೋ, ಕೆಲವೊಮ್ಮೆ ಮೀಟಿಂಗುಗಳಲ್ಲೋ ಅವಳ ವಿಷಯ ಪ್ರಸ್ತಾಪವಾಗುತ್ತಾ ಫ್ಲೋರ್ ನಲ್ಲಿ ಅವಳ ನೆನಪೊಂದು ಸುಳಿದಾಡುತ್ತಲೇ ಇತ್ತು. ಅಚಾನಕ್ಕಾಗಿ ಒಮ್ಮೆ ಮಧ್ಯಾಹ್ನದ ಹೊತ್ತು ಫೋನ್ ಮಾಡಿದವಳೇ, ಮಾತನಾಡುವುದಿದೆ ಭೇಟಿ ಆಗಬೇಕು ಎಂದಳು. ಅನಿವಾರ್ಯ ಕಾರಣಗಳಿಂದ ಆ ವೀಕೆಂಡ್ ಭೇಟಿ ಸಾಧ್ಯವಾಗಲೇ ಇಲ್ಲ. ಮುಂದಿನ ಶನಿವಾರ ಭೇಟಿಯಾಗುವುದಾಗಿ ಮೆಸೇಜ್ ಕಳಿಸಿ ಸುಮ್ಮನಾಗಿಬಿಟ್ಟೆ. ಅದಾಗಿ ನಾಲ್ಕೇ ದಿನಕ್ಕೆ, ಗುರುವಾರ ಸಂಜೆ ಕ್ಯಾಬ್ ನಲ್ಲಿ ಕುಳಿತು ಮೊಬೈಲ್ ತೆಗೆದರೆ ಜಾಮಿನಿ ಇನ್ನಿಲ್ಲವೆಂಬ ಸುದ್ದಿ ಹರಿದಾಡುತ್ತಿತ್ತು. ಏನಾಗಿತ್ತು, ಏನಾಯಿತು, ಅವಳ ಸಾವಿಗೆ ಕಾರಣವೇನು ಎನ್ನುವ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ಅವಳು ಎರಡು ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದಳೆಂಬ ವಿಷಯವೇ ನಮಗೆಲ್ಲ ಅವಳ ಬಗ್ಗೆ ದೊರಕಿದ ಕೊನೆಯ ಮಾಹಿತಿ. ಅವಳ ಮನಸ್ಸಿನಲ್ಲಿ ಏನಿತ್ತು, ಅವಳು ನನ್ನ ಹತ್ತಿರ ಮಾತನಾಡಬೇಕೆಂದಿದ್ದ ವಿಷಯ ಏನಿದ್ದಿರಬಹುದು, ಅವಳ ಸಮಸ್ಯೆಗೆ ನನ್ನಲ್ಲೇನಾದರೂ ಉತ್ತರವಿತ್ತೇ ಎನ್ನುವಂತಹ ಎಲ್ಲ ಪ್ರಶ್ನೆಗಳಿಗೂ ಈಗಲೂ ಉತ್ತರ ಹುಡುಕುತ್ತಲೇ ಇದ್ದೇನೆ. ನಾನು ಆ ವೀಕೆಂಡ್ ಅವಳನ್ನು ಭೇಟಿಯಾಗಿದ್ದರೆ ಅವಳ ಸಾವನ್ನು ತಪ್ಪಿಸಲು ಸಾಧ್ಯವಿತ್ತೇನೋ ಅಥವಾ ಕೊನೆಪಕ್ಷ ಮುಂದೂಡಬಹುದಿತ್ತೇನೋ ಎನ್ನುವ ಎಲ್ಲ ತಪ್ಪಿತಸ್ಥ ಭಾವನೆಗಳು ಈಗಲೂ ಹಾಗೆಯೇ ಇವೆ. ಜಾಮಿನಿಯ ಘಟನೆಯ ನಂತರ ಯಾರಾದರೂ ಭೇಟಿಯಾಗುವ ಪ್ರಸ್ತಾಪವನ್ನಿಟ್ಟರೆ ಕೆಲಸಗಳನ್ನೆಲ್ಲ ಬದಿಗಿಟ್ಟು, ಜೊತೆಗೊಂದು ಮಸಾಲೆದೋಸೆ ತಿಂದು ಬರುತ್ತೇನೆ. ಹಾಗೆ ಜೊತೆಯಾಗಿ ಕುಡಿದ ಕಾಫಿಯೊಂದು ಯಾವುದೋ ದುಃಖವೊಂದರ ಸಮಾಧಾನವಾಗಿರಬಹುದು; ಸಮಸ್ಯೆಯೊಂದಕ್ಕೆ ಪರಿಹಾರವೂ ಆಗಬಹುದು; ಏನಿಲ್ಲವೆಂದರೂ ಅಲ್ಲೊಂದು ಸುಂದರವಾದ ನೆನಪು ಹುಟ್ಟಿಕೊಳ್ಳಬಹುದು; ಆ ನೆನಪು ಜಾಮಿನಿಯಿಲ್ಲದ ನೋವನ್ನು ಕೊಂಚವಾದರೂ ಕಡಿಮೆ ಮಾಡಬಹುದು.
ನೋವಿನೊಂದಿಗಿನ ನೆನಪಿನ ಪಯಣ ಯಾವಾಗಲೂ ದೀರ್ಘ. ಖುಷಿಯಾಗಿ, ಸುಖವಾಗಿ ಕಳೆದ ಗಳಿಗೆಗಳನ್ನು ಎಷ್ಟೋ ಸಲ ಮರೆತೇಹೋಗಿರುತ್ತೇವಾದರೂ, ನೆನಪಲ್ಲಿ ಉಳಿದುಹೋದ ನೋವು ಮಾತ್ರ ಬೇಗ ಮರೆಯಾಗುವಂಥದ್ದಲ್ಲ. ಕಾರಣವೇ ಇಲ್ಲದೇ ಮುರಿದುಬಿದ್ದ ಮೊದಲಪ್ರೇಮ, ಆಪ್ತ ಸಂವಹನವಿಲ್ಲದೇ ಮುಗಿದುಹೋದ ಗೆಳೆತನ, ಅಜ್ಜಿಯ ಸಾವು ಹೀಗೇ ನೋವು ತರುವ ನೆನಪೊಂದು ಎಲ್ಲರ ಬದುಕಿನಲ್ಲೂ ಬೇಡವೆಂದರೂ ಜೀವಂತವಾಗಿರುತ್ತದೆ. ಅಂಥದ್ದೇ ಒಂದು ಅತ್ತ ತೀರಾ ಗಂಭೀರವೂ ಅಲ್ಲದ ಹಾಗಂತ ನಿರ್ಲಕ್ಷ್ಯಿಸಲೂ ಸಾಧ್ಯವಾಗದ, ನೆನಪಿನಿಂದ ಎಂದೂ ಮರೆಯಾಗದ ನೋವೆಂದರೆ ಮನೆಗಳನ್ನು ಬದಲಾಯಿಸುವುದು. ಕೆಲಸಕ್ಕಾಗಿ ಊರು ಬದಲಾಯಿಸುವವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ನಾಲ್ಕೈದು ಮನೆಗಳಾದರೂ ನೆನಪಿನ ಅರಮನೆಗಳಾಗಿ ಉಳಿದುಕೊಂಡಿರುತ್ತವೆ. ಪುಟ್ಟ ಮನೆಯೊಂದರ ಹಾಲ್ ನಲ್ಲಿ ರಾಜಗಾಂಭೀರ್ಯದಲ್ಲಿ ಕುಳಿತಿರುತ್ತಿದ್ದ ಆರಾಮ ಕುರ್ಚಿ, ವಿಶಾಲವಾದ ಮನೆಯಂಗಳದ ಅಂಚಿನಲ್ಲಿ ಯಾರೋ ನೆಟ್ಟು ಬೆಳೆಸಿದ್ದ ಕರಿಬೇವಿನ ಗಿಡ, ಅಪಾರ್ಟ್ಮೆಂಟಿನ ಫ್ಲ್ಯಾಟ್ ನ ಬಾಲ್ಕನಿಯ ಸರಳುಗಳಿಗೆ ಹಬ್ಬಿಕೊಂಡಿದ್ದ ಮನಿಪ್ಲಾಂಟ್ ಹೀಗೇ ಒಂದೊಂದು ಮನೆಯೂ ಸಿಂಪಲ್ಲಾದ ಯಾವುದೋ ನೆನಪಿನೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಮನೆ ಬದಲಾದಾಗ ಲಕ್ಷಗಟ್ಟಲೆ ಸುರಿದು ಸೋಫಾ ಖರೀದಿಸಿ ಮನೆಯನ್ನು ಅಲಂಕರಿಸಿದರೂ ಹಳೆಮನೆಯಲ್ಲಿದ್ದ ಆರಾಮ ಕುರ್ಚಿ ಆಗಾಗ ನೆನಪಿಗೆ ಬಂದು ಸುಖದ ಪರಿಕಲ್ಪನೆಯನ್ನು ಪ್ರಶ್ನಿಸುತ್ತಿರುತ್ತದೆ. ಹೀಗೆ ಸುಖ-ದುಃಖ, ನೋವು-ನಲಿವು ಎನ್ನುವ ಭಾವನೆಗಳೆಲ್ಲವೂ ನೆನಪಿನ ವ್ಯಾಪ್ತಿಯಲ್ಲಿ ಸ್ಥಾನಪಲ್ಲಟಗೊಳ್ಳುತ್ತಾ, ಹೊಸದಾಗಿ ಸೇರ್ಪಡೆಯಾದ ನೆನಪೊಂದು ಹಳೆಯ ನೆನಪುಗಳೊಂದಿಗೆ ವಾದ-ಸಂವಾದಗಳನ್ನು ನಡೆಸುತ್ತಾ ಬದುಕಿನ ಚಲನೆಯುದ್ದಕ್ಕೂ ನೆನಪಿನ ಹೆಜ್ಜೆಗಳು ಜೊತೆಯಾಗುತ್ತಲೇ ಇರುತ್ತವೆ. ದೀಪಾವಳಿಯ ಫ್ರಾಕಿನ ಮೇಲಿದ್ದ ಕೀಲಿಕೈಗಳೆಲ್ಲ ಬದಲಾಯಿಸಿದ ಮನೆಗಳ ನೆನಪೆಲ್ಲವನ್ನೂ ಜೋಪಾನ ಮಾಡಿದರೆ, ಥಿಯೇಟರಿನಲ್ಲಿ ಹೊಸ ಸಿನೆಮಾ ನೋಡುತ್ತಾ ಪಾಪ್ ಕಾರ್ನ್ ತಿನ್ನುವಾಗ ಜಾಮಿನಿಯ ನೆನಪೊಂದು ಪಕ್ಕದ ಸೀಟಿನಲ್ಲಿ ತಣ್ಣಗೆ ಕುಳಿತಿರುತ್ತದೆ.
*************
ಲೇಖಕರ ಬಗ್ಗೆ ಎರಡು ಮಾತು:
ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ವೀಕೆಂಡ್ ಓದಿಗೆ ಅರ್ಥಪೂರ್ಣ ಸೇರ್ಪಡೆ… ಈ ಅಂಕಣ.
ಧನ್ಯವಾದ ಮತ್ತು ಅಭಿನಂದನೆಗಳೂ ಸಹ.
good Anjana keep it up
ಆಪ್ತವಾಗುವ ನಿರೂಪಣಾ ಶೈಲಿ