ಗುರು-ಶಿಷ್ಯ ಸಂಬಂದ
ಪ್ರಜ್ಞಾ ಮತ್ತಿಹಳ್ಳಿ
ಕೇವಲ ತರಗತಿಯ ನಾಕು ಗೋಡೆಗಳ ನಡುವೆ ವೇಳಾಪಟ್ಟಿಯ ಚೌಕಗಳ ಮಧ್ಯದಲ್ಲಿ ಸಿಲೆಬಸ್ ಎಂಬ ಅಕ್ಷರದ ಅಂಗಡಿ ಇಟ್ಟುಕೊಂಡ ಇವತ್ತಿನ ಗುರು, ಅಕ್ವೇರಿಯಂನ ಮೀನಿನಂತೆ ಅಸಹಾಯಕನಾಗಿದ್ದಾನೆ. ಅವನಿಗೆ ಸಮಯಮಿತಿ ಹಾಗೂ ವಿಷಯಮಿತಿ. ದಿನಕ್ಕೊಂದೊಂದೇ ಗುಳಿಗೆ ಆಹಾರ ನುಂಗಿ ಗಾಜಿನ ಗೋಡೆಗೆ ಮೂತಿ ಗುದ್ದುತ್ತ ಬುಳುಕ್ ಬುಳುಕ್ ಮುಳುಗುತ್ತಿದ್ದಾನೆ.
ಗುರು-ಶಿಷ್ಯರು ಈ ಚರಾಚರದ ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯಬಲ್ಲ ಸಂಬಂಧವನ್ನು ಹೊಂದಿರುತ್ತಾರೆ. ತರಗತಿಯ ಕರಿಹಲಗೆಯ ಮೇಲೆ ಬಿಳಿ ಸೀಮೆ ಸುಣ್ಣಕ್ಕೆ ನೋವಾಗದಂತೆ ಭೂಮಿಯ ಚಿತ್ರ ತೆಗೆಯುವವನು ಗುರುವೇ. ತನ್ನ ಜ್ಞಾನದ ಕಿರಣಗಳಿಂದ ಶಿಷ್ಯನ ಚಿತ್ತಬಿತ್ತಿಯ ಮೇಲೆ ಆಕಾಶಗಂಗೆಯ ಹಾಲುಹಾದಿ ತೆರೆಯುವವನೂ ಗುರುವೇ. ಹಾಗಾಗಿ ಗುರು-ಶಿಷ್ಯರ ಸಂಬಂಧ ಎನ್ನುವುದು ಯಾವುದೇ ಗೋಡೆ,ಛಾವಣಿಗಳ ಹಂಗಿಲ್ಲದ ಮಂದಿರದಂತೆ. ಕೊಡುವ ಗುರುವಿನ ಅಂತ:ಸತ್ವದ ಅಗಾಧತೆ ಹಾಗೂ ತೆಗೆದುಕೊಳ್ಳುವ ಶಿಷ್ಯನ ಧಾರಣ ಶಕ್ತಿಗಳನ್ನು ಅವಲಂಬಿಸಿ ಈ ಸಂಬಂಧದ ವ್ಯಾಖ್ಯೆ ಬದಲಾಗುತ್ತದೆ. ಮಮತೆ ಕರುಣೆಗಳ ವಾರಿಧಿಯಂಥ ಗುರು ಸಾಕ್ಷಾತ ಅಮ್ಮನಾಗುತ್ತಾನೆ. ಅವನ ಮಡಿಲಲ್ಲಿ ಶಿಶುವಾಗುವ ಶಿಷ್ಯ ವಾತ್ಸಲ್ಯದ ಗುಟುಕು ಗುಟುಕರಿಸಿ ಅಮೃತಂಗಮಯನಾಗುತ್ತಾನೆ. ಜ್ಞಾನದ ದಾಹದ ಶಿಷ್ಯ ರೋಗಿಯಂತೆ ನರಳುವಾಗ ಗುರು ವೈದ್ಯನಾಗಿ ಸಲಹುತ್ತಾನೆ. ಸಮಾನ ಮನಸ್ಕ-ಸಮಾನ ಆಸಕ್ತ ವಿಷಯಗಳಲ್ಲಿ ಅವರಿಬ್ಬರೂ ಸ್ನೇಹಿತರೇ ಆಗಿಬಿಡುತ್ತಾರೆ. ಆಧ್ಯಾತ್ಮ ಹಾಗೂ ಸಂಗೀತಗಳಲ್ಲಿ ಗುರು ಶಿಷ್ಯರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಸಂಗತಿಗಳಿಗೆ ಎಣೆಯಾಗಲೀ, ಎಣಿಕೆಯಾಗಲಿ, ಎಲ್ಲೆಯಾಗಲೀ ಇಲ್ಲವೇ ಇಲ್ಲ. ರಾಗದ ದಾರಿಯಲ್ಲಿ ಸಾಗುತ್ತ ಸಾಗುತ್ತ ಅವರು ಅಮರರಾಗುತ್ತಾರೆ ನಾದದ ಸಾಧನೆಯಲ್ಲಿ ಲೀನವಾಗುತ್ತ, ಲೀನವಾಗುತ್ತ ಈ ಲೋಕದ ಸೀಮೆಗಳನ್ನು ದಾಟುತ್ತಾರೆ. ಅಲೌಕಿಕವನ್ನು ಅರಸುತ್ತ, ಅರಸುತ್ತ ಪರಸ್ಪರರಿಗೆ ದಾರಿಯಾಗಿ ತೆರೆದುಕೊಳ್ಳುತ್ತಾರೆ.
ಗುರು-ಶಿಷ್ಯಂದಿರು ಪರಸ್ಪರರನ್ನು ಬೆಳೆಸಬಲ್ಲರು. ಶಿಷ್ಯನ ಇಲ್ಲಗಳನ್ನು ತುಂಬುವುದಕ್ಕಾಗಿ ಗುರು ತಾನು ಮೊದಲು ತುಂಬಿಕೊಳ್ಳುತ್ತಾನೆ. ಹೀಗೆ ಇಬ್ಬರೂ ಬೆಳೆಯುತ್ತಾರೆ. ನಿಜವಾದ ಗುರು “ಮಲಗಿ ಪರಮಾದರದಿ ಕೇಳಲು ಕುಳಿತು ಕಲಿಸುವ, ಕುಳಿತು ಕೇಳಲು ನಿಲುವ, ನಿಂತು ಕೇಳಿದರೆ ನಲಿದು ಕಲಿಸುವ” ಉತ್ಸಾಹಿಯಾಗಿರುತ್ತಾನೆ. ಗುರು-ಶಿಷ್ಯರ ನಡುವೆ ಜಾತಿ-ಲಿಂಗ-ವಯಸ್ಸು-ಹಣ ಗಳ ಅಂತರ ಬರುವುದಿಲ್ಲ. ಆಸಕ್ತಿ ಶ್ರದ್ದೆ ಅರಿವಿನ ಎಚ್ಚರಗಳು ಮಾತ್ರ ಪರಿಗಣಿಸಲ್ಪಡುತ್ತವೆ. ಗುರು-ಶಿಷ್ಯರ ಸಂಬಂಧ ಮನುಕುಲದ ಎಲ್ಲ ಸಂಬಂಧಗಳಿಂದಲೂ ಒಂದೊಂದು ರಂಗು ಪಡೆದು ಅರಳುವ ಕಾಮನಬಿಲ್ಲಿನ ಹಾಗೆ. ಅರಳುತ್ತರಳುತ್ತಲೇ ಹಗುರಾಗಿ ಹಂಗು ಕಳಚಿ ಮೇಲೆ ಹಾರುವ ಸ್ವರ್ಗೀಯ ಕುಸುಮದ ಹಾಗೆ. ಅಲ್ಲಮ-ಗುಹೇಶ್ವರ, ಸಂತ ಶಿಶುನಾಳ ಶರೀಫ-ಗೋವಿಂದಭಟ್ಟರು ವಿವೇಕಾನಂದ-ಪರಮಹಂಸರು, ಬುದ್ದ ಮತ್ತವನ ಅಸಂಖ್ಯಾತ ಶಿಷ್ಯರು ಸಾವಿರ ಸಾವಿರ ಮಾದರಿಗಳನ್ನು ಬಿಟ್ಟು ಹೋಗಿದ್ದಾರೆ. ಭಾರತೀಯ ಗುರು ಏನೂ ಆಗಬಲ್ಲ ಎಂದು ಜಗತ್ತಿಗೆ ತೋರಿಸಿದ್ದೇವೆ. ಆದರೂ ಕಲ್ಲು ಗೋಡೆಯ ಪಡಕಿನಲ್ಲಿ ಘಿಲ್ಲನೆ ಅರಳುವ ಗರಿಕೆಯ ಹಾಗೆ ಅಲ್ಲೊಂದು ಇಲ್ಲೊಂದು ಪುಟಾಣಿ ಅನುಬಂಧಗಳು ಪಿಳಿ ಪಿಳಿ ನಗುತ್ತವೆ. ಕ್ರೀಡಾ ಜಗತ್ತಿನಲ್ಲಿ ಅನೇಕ ಗುರುಗಳುತಮ್ಮ ಶಿಷ್ಯರನ್ನು ತಾರೆಗಳಾಗಿ ಬೆಳೆಸಿದ ಉದಾಹರಣೆಗಳಿವೆ. ಅನೇಕ ತಾರೆಗಳು ಬಾನೇರಿ ಜಗಮಗಿಸುವಾಗ ಗುರು ನೇಪಥ್ಯದ ಕತ್ತಲಲ್ಲೇ ಮುಳುಗಿರಲೂಬಹುದು. ಪತ್ರಿಕಾರಂಗದಲ್ಲೂ ಅನೇಕರು ಉತ್ತಮ ಶಿಷ್ಯರನ್ನು ಬೆಳೆಸಿದ್ದಾರೆ. ಕೆಲವರು ತಾವು ತಮ್ಮನ್ನು ಗುರುವಾಗಿ ಗುರುತಿಸದಿದ್ದರೂ ಅವರ ಬದುಕನ್ನು ಸಮೀಪದಿಂದ ಕಂಡವರು ಆಂತರ್ಯದ ಶಿಷ್ಯತ್ವದಿಂದ ಅವರಿಂದ ಕಲಿತು ಬೆಳೆದಿದ್ದಾರೆ.
ಕಲಿಯುವ ಹಂಬಲವುಳ್ಳ ಮನುಜನಿಗೆ ಕಲಿಸುವ ಸಂಗತಿಗಳೆಲ್ಲ ಗುರುವೇ. ನದಿ-ನದ-ಬಾನು-ಬಯಲು-ಹೂ-ದುಂಬಿ-ಸಾಗರ-ಚುಕ್ಕಿ-ಚಂದ್ರಮರೆಲ್ಲ ಹಲವು ಸಂಗತಿಗಳನ್ನು ಕಲಿಸುತ್ತಲೇ ಇದ್ದಾವೆ. ಪ್ರಕ್ರತಿಯಂತಹ ದೊಡ್ಡ ಗುರು ಇನ್ನೊಂದಿಲ್ಲ. ಬಡವನಿಗೆ ಅವನ ಹಸಿವೇ ಗುರು. ದರಿದ್ರನಿಗೆ ಅವನ ಕೊರತೆಯೇ ಗುರು. ದೀನನಿಗೆ ಅವನ ನೋವೇ ಗುರು. ಹುಟ್ಟಿನಿಂದ ಚಟ್ಟದ ತನಕ ನಾವು ಕಾಣುವ ಸಂಗತಿಗಳೆಲ್ಲ ನಮಗೆ ಗುರುವಾಗಬಲ್ಲವು. ಕಲಿಯುವ ವಿಧೇಯತೆ ನಮಗಿದ್ದರೆ ಮಾತ್ರ.
ತರಣಿ ದರ್ಶನಕ್ಕಿಂತ ಕಿರಣಾನುಭವ ಸುಲಭ
ಪರಮ ಶಾಸ್ತ್ರಕ್ಕಿಂತ ಸರಿಯುದಾಹರಣೆ
ಪರಮ ತತ್ವವ ಕಂಡ ಗುರುವನರಸುವುದೆಲ್ಲಿ?
ದೊರೆತಂದು ನೀಂ ಧನ್ಯ-ಮಂಕುತಿಮ್ಮ
ಸೂರ್ಯನನ್ನು ನೋಡುವುದಕ್ಕಿಂತ ಅವನ ಕಿರಣಗಳನ್ನು ಅನುಭವಿಸುವುದು ಸುಲಭವಾದದ್ದು. ಶ್ರೇಷ್ಠ ಶಾಸ್ತ್ರಗಳನ್ನು ತಿಳಿದುಕೊಳ್ಳುವುದಕ್ಕಿಂತ ಒ೦ದು ಉದಾಹರಣೆಯನ್ನು ಅರಿಯುವುದು ಸುಲಭ. ಆದರೆ ಪರಮ ತತ್ವವನ್ನು ಕಂಡಿರುವ ಗುರುವನ್ನು ಹುಡುಕುವುದು ಕಷ್ಟ. ಅಂತಹ ಗುರು ಸಿಕ್ಕ ದಿನ ನೀನು-ನಾವು ಎಲ್ಲರೂ ಧನ್ಯರು. ಹೀಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಅಸತ್ಯದಿಂದ ಸತ್ಯದ ಕಡೆಗೆ ಸಾಗುತ್ತಿರುವ ಈ ಪ್ರಯಾಣ ಕೇವಲ ಒಬ್ಬ ಗುರುವಿನಿಂದ ಮುಗಿಯುವುದಿಲ್ಲ. ನಾವೆಲ್ಲರೂ ನಮಗೆಲ್ಲರಿಗೂ ಕಲಿಸುತ್ತ ಕಲಿಯುತ್ತ ಸಾಗುವುದೇ ಬದುಕು.
*****************************
ವಾವ್ ಸತ್ಯಸ್ಯ ಮಾತು.ಸುಂದರ ಲೇಖನ ಮೆಡಮ್ ಅವರ ವಿದ್ವತ್ತು,ಬರಹದ ರೀತಿ ಸರ್ವಾಂಗ ಸುಂದರ ಓದಿ ಧನ್ಯರಾದೆವು
ಯಾಕೊಳಿ.ಯ ಮಾ
ಸವದತ್ತಿ
ತುಂಬಾ ಚೆನ್ನಾಗಿ ಬರೆದಿದ್ದೀ ಪ್ರಜ್ಞಾ.
Tumba chennagi bardedidder madam.. congratulations.
Guru shishyar sambandha chennagi mana muttuvante bareriddira. Kavita Katti
True lines of great relationship.
Real relationship between teacher and student mem .
You have written very nicely about student and teachers relationship. Wish you happy guru poornima. From shivajirao K H. CSI Collegemate.
Really heart touching true lines madam.. ನಿಮ್ಮ ಮಿಂಚಿನ ಬರಹ ಸುಂದರವಾಗಿದೆ, ಓದಿ ಧನ್ಯಳಾದೇ.
Nice Madam
Thumba chennagi barediddira madam.Guru Shishyara sambandhada bagge Guru Poornimeya Dina intaha ondu olle vichardhare odi manassige khushi aaytu.
Wonderful meaning of today’s life
ಮುತ್ತಿನಂಥ ಶಬ್ದಗಳನ್ನು ಜೋಡಿಸಿದ ಅದ್ಭುತ ಹಾರವೆಂದೇ ಹೇಳಬೇಕು ಈ ಲೇಖನಕ್ಕೆ
ಮೇಡಂ ತಮ್ಮ ಲೇಖನ ತುಂಬ ಚೆನ್ನಾಗಿದೆ ಮತ್ತು ಗುರು ಶಿಷ್ಯರ ಸಂಬಂಧ ಪ್ರಜ್ಞೆಯನ್ನು ಆತ್ಮಾವಲೋನಕ್ಕೆ ಕರೆದೊಯ್ಯಿತು ಧನ್ಯಾದಗಳೊಂದಿಗೆ ಉಮಾ