ಚಹಾ ಎನ್ನುವ ಜನುಮದ ಸಾಕಿ
ಬುಕ್ ಆಫ್ ಟೀ
ಲೇಖಕರು – ಕುಮಾರ್ ಎಸ್
ಬೆಲೆ- -100
ಎಲ್ಲವನ್ನೂ ಬೆಸೆದ ಚಹಾ ಪ್ರೀತಿಗೆ ಎನ್ನುವ ಬರೆಹದೊಂದಿಗೆ ಈ ಪುಸ್ತಕ ನನ್ನ ಕೈ ಸೇರಿದಾಗ ಎಷ್ಟೊಂದು ಖುಷಿಯಾಗಿತ್ತು ಎಂದರೆ ಕುಳಿತಲ್ಲೇ ಒಂದು ಕಪ್ಪು ಬಿಸಿಬಿಸಿ ಚಹಾ ಕುಡಿದಷ್ಟು ರಿಲ್ಯಾಕ್ಸ್ ಆಗಿದ್ದೆ. ನನ್ನ ಚಹಾ ಪ್ರೀತಿಯೇ ಅಂತಹುದ್ದು. ಕೊಟ್ಟರೆ ಮೊಗಮೊಗೆದು ಕುಡಿಯುತ್ತಲೇ ಇರುವ ಇಲ್ಲದಿದ್ದರೆ ದಿನವಿಡೀ ಕುಡಿಯದ ಪ್ರೀತಿಯಂತಹ ಪ್ರೀತಿ ಈ ಚಹ. ಪ್ರೀತಿಯೂ ಹಾಗೆ. ಪ್ರೇಮ ಸಾಗರದಲ್ಲಿ ಮುಳುಗೇಳು ಎಂದರೆ ‘ಮುಳುಗಿಯೇ ಇರುತ್ತೇನೆ ಬಿಡು’ ಎನ್ನಬಲ್ಲೆ ನಾನು. ‘ಬೇಡ, ಒಂಟಿಯಾಗಿರು’ ಎಂದರೆ ಸರಿ ಬಿಡು ಎನ್ನುತ್ತ ಯಾವುದೋ ಪುಸ್ತಕ ಹಿಡಿದು ಕುಳಿತುಬಿಡಲೂ ಸೈ. ಅದಕ್ಕೇ ನನಗೆ ಈ ಪ್ರೀತಿ ಮತ್ತು ಚಹಾ ಒಂದೇ ರೀತಿಯದ್ದಾಗಿ ಕಾಣುತ್ತದೆ. ಆದರೆ ಪ್ರೀತಿಯಲ್ಲಿರುವ ಸುಖ ಒಂಟಿಯಾಗಿರುವುದರಲ್ಲೆಲ್ಲಿದೆ ಹೇಳಿ? ಹೀಗಾಗಿಯೇ ಚಹ ಕೊಟ್ಟಷ್ಟೂ ಪ್ರೀತಿಯಿಂದ ಕುಡಿಯುತ್ತಲೇ ಇರುತ್ತೇನೆ. ಹೀಗಾಗಿ ಪುಸ್ತಕ ಕೈ ಸೇರಿದಾಗ ಮತ್ತೊಮ್ಮೆ ಚಹಾ ಕುಡಿದಷ್ಟೇ ಖುಷಿಯಿಂದ ಓದತೊಡಗಿದೆ.
ಈ ಪುಸ್ತಕವನ್ನು ಕುಮಾರ್ ಅವರು ನನಗೆ ಕಳುಹಿಸಲೂ ಒಂದು ಉದ್ದೇಶವಿದೆ. ನಾನು ಆಗ ದಿನಕ್ಕೊಂದರಂತೆ ಚಹಾ ಕವನಗಳನ್ನು ಬರೆಯುತ್ತಿದ್ದೆ. ಹಿಂದಿನ ದಿನ ರಾತ್ರಿ ಕುಳಿತು ಕವನ ಬರೆಯುವುದು, ಬೆಳಗೆದ್ದು ಒಮ್ಮೆ ಅದನ್ನು ಓದಿ, ತಿದ್ದುವುದಿದ್ದರೆ ತಿದ್ದಿ, ಪೋಸ್ಟ್ ಮಾಡುವುದು. ಪ್ರಾರಂಭದಲ್ಲಿ ಕೇವಲ ಇಬ್ಬರು ಸದಾ ಪ್ರೀತಿಸುವ ಜೀವಗಳ- ಅದು ಪ್ರೇಮಿಗಳೂ ಆಗಿರಬಹುದು ಅಥವಾ ಗಂಡ ಹೆಂಡಿರೂ ಆಗಿರಬಹುದು. – ನಡುವಣ ಪ್ರೇಮ ಸಲ್ಲಾಪಕ್ಕೆ ಚಹಾ ಒಂದು ಮಾಧ್ಯಮ ಎಂಬಂತೆ ಚಿತ್ರಿಸಿ ಬರೆಯುತ್ತಿದ್ದರೆ ನಂತರದ ದಿನಗಳಲ್ಲಿ ಹೆಣ್ಣಿನ ಒಳಕುದಿತವನ್ನು ಕುದಿಯುತ್ತಿರುವ ಡಿಕಾಕ್ಷನ್ಗೆ ಹೋಲಿಸಿ ಬರೆಯುತ್ತಿದ್ದೆ. ಬಹಳಷ್ಟು ಜನರಿಗೆ ಅದು ಬಹಳ ಇಷ್ಟವಾಗುತ್ತಿತ್ತು. (ಕೆಲವರಿಗೆ ಕಿರಿಕಿರಿ ಎನ್ನಿಸಿತೆಂದೂ ನಂತರ ತಿಳಿಯಿತು.) ಹಿರಿಯರಾದ ಎಲ್ ಸಿ ನಾಗರಾಜ್ ಚಹಾದ ಕುರಿತು ಜಪಾನಿ ಹಾಯಿಕುಗಳನ್ನು ಕಳಿಸುತ್ತ ಬರೆಯಿರಿ. ನಾನು ಬೇಕಾದ ಮಾಹಿತಿ ಕೊಡುತ್ತೇನೆ ಎನ್ನುತ್ತ ಜಪಾನಿನ ಪ್ರಸಿದ್ದ ಚಹಾ ಗೋಷ್ಠಿಯ ಕುರಿತು ಮಾಹಿತಿ ನೀಡಿದರು. ಈ ಸಮಯದಲ್ಲಿ ಕುಮಾರ್ ಕೂಡ ಈ ಕವಿತೆಗಳನ್ನು ಓದಿ ಅದೆಷ್ಟು ಖುಷಿಪಟ್ಟರೆಂದರೆ ಚಹಾದ ಕುರಿತಾಗಿ ನನ್ನದೊಂದು ಪುಸ್ತಕವಿದೆ ಎಂದು ಕಳಿಸಿಯೇ ಬಿಟ್ಟರು. ಹೀಗೆ ಚಹಾದ ಘಮದ ಬೆನ್ನು ಹತ್ತಿ ಮನೆಗೆ ಬಂದ ಪುಸ್ತಕ ಇದು.
ಕುಡಿಯುವವರು ಯಾವಾಗಲೂ ಹೇಳುವ ಮಾತೊಂದಿದೆ. ‘ನಾವೇನೂ ಕುಡಿಯುವ ಕಿಕ್ಕಿಗಾಗಿ ಕುಡಿಯುತ್ತೇವೆ ಎಂದುಕೊಂಡಿದ್ದೀರಾ? ಹಾಗೇನಿಲ್ಲ. ಕುಡಿಯುವ ನೆಪದಿಂದ ಸ್ನೇಹಿತರೆಲ್ಲ ಜೊತೆಗೆ ಸೇರ್ತೀವಿ, ಎಲ್ಲರ ಮನದ ಮಾತು ಹೊರಗೆ ಬರುತ್ತದೆ, ಎಲ್ಲರೂ ಪರಸ್ಪರ ಮುನಿಸು ಮರೆತು ಮತ್ತೆ ಒಂದಾಗ್ತೀವಿ ಅದಕ್ಕೇ ಕುಡಿಯೋದು.’ ಆಗೆಲ್ಲ ನಾನು ಅಂದುಕೊಳ್ಳುತ್ತಿದ್ದೆ. ‘ಹೌದಲ್ವಾ? ಕುಡಿಯೋಕೆ ಕುಳಿತರೆ ಎಷ್ಟೆಲ್ಲ ವಿಷಯಗಳು ಹೊರಬರುತ್ತವೆ. ಆದರೆ ಅದಕ್ಕೆ ಅಲ್ಕೋಹಾಲ್ ಯಾಕಾಗಬೇಕು? ಚಹ ಆಗುವುದಿಲ್ಲವೇ?’ ಎಂದುಕೊಳ್ಳುವಾಗಲೇ ಈ ಪುಸ್ತಕ ನನ್ನ ಕೈ ಸೇರಿದ್ದು. ನಿಮ್ಮ ಜೊತೆಗೆ ಒಂದು ಕಪ್ ಚಹಾದೊಂದಿಗೆ ಇದನ್ನೆಲ್ಲ ಹಂಚಿಕೊಳ್ಳಬಹುದೆಂದುಕೊಂಡೇ ಈ ಬುಕ್ ಆಫ್ ಟೀ’ ನಿಮ್ಮ ಕೂಗಿಡುತ್ತಿದ್ದೇನೆ’ ಎನ್ನುತ್ತ ಕುಮಾರ್ ಚಹಾದ ಜಗತ್ತಿನೊಳಗೆ ನಮ್ಮನ್ನೆಲ್ಲ ಅಕ್ಷರಶಃ ಕೈ ಹಿಡಿದು ಯಾತ್ರೆ ಹೊರಡಿಸುತ್ತಾರೆ. ಚಹಾದ ಬಗ್ಗೆ ಇನ್ನೂವರೆಗೆ ನಾವೆಲ್ಲ ಕಂಡು ಕೇಳರಿಯದ ಎಷ್ಟೊಂದು ವಿಷಯಗಳು ಬರುತ್ತವೆಂದರೆ ನಾವು ಕುಡಿಯುವ ಯಕಶ್ಚಿತ್ ಚಹಾದೊಳಗೆ ಇಷ್ಟೆಲ್ಲ ವಿಷಯ ಇದೆಯಾ? ಎಂದು ಖಂಡಿತವಾಗಿ ನಿಬ್ಬೆರಗಾಗಿ ಬಿಡುತ್ತೇವೆ. ಚಹಾದ ಬಗ್ಗೆ ನಾನು ತಿಳಿದುಕೊಳ್ಳಲೇ ಬೇಕೆಂದುಕೊಂಡ ಎಲ್ಲ ವಿಷಯಗಳೂ ಇಲ್ಲಿದ್ದು ನನ್ನಂತಹ ಚಹಾದ ಬಯಕೆಯವರಿಗೆ ಇದು ಸಣ್ಣ ಎನ್ಸೈಕ್ಲೋಪೀಡಿಯಾ ಅಂತನ್ನಿಸುವುದರಲ್ಲಿ ಯಾವ ಸಂಶಯವೂ ಇಲ್ಲ.
ಚಿಕ್ಕವಳಿರುವಾಗ ನಾನು ಚಹಾ ಕುಡಿಯುತ್ತಲೇ ಇರಲಿಲ್ಲ. ನನ್ನ ಅಣ್ಣ ಈಗಲೂ ಚಹಾ ಕುಡಿಯುವುದಿಲ್ಲ. ‘ಮಾವ ಇನ್ನೂ ಸಣ್ಣ ಪಾಪು, ಹಾಲು ಕುಡಿತಾನೆ’ ನನ್ನ ಮಕ್ಕಳು ನನ್ನಣ್ಣನನ್ನು ಅವನು ಚಹಾ ಕುಡಿಯದಿರುವುದಕ್ಕಾಗಿ ಕಿಚಾಯಿಸುತ್ತಾರೆ. ಚಿಕ್ಕವಳಿದ್ದಾಗ ಚಹಾ ಬೇಕು ಎಂದರೆ ಮೊದಲೇ ಕಪ್ಪು, ಚಹಾ ಕುಡಿದರೆ ಮತ್ತಿಷ್ಟು ಕಪ್ಪಾಗ್ತೀಯಾ ನೋಡು’ ಅಮ್ಮ ಅತ್ತ ಹೆದರಿಸುವ ದನಿಯೂ ಅಲ್ಲದ, ಇತ್ತ ರೇಗುವ ದನಿಯೂ ಅಲ್ಲದ ಧ್ವನಿಯಲ್ಲಿ ಸೀರಿಯಸ್ ಆಗಿ ಹೇಳುವಾಗಲೆಲ್ಲ ತುಟಿಗಿಟ್ಟ ಚಹಾದ ಲೋಟವನ್ನು ಮರುಮಾತನಾಡದೇ ಕೆಳಗಿಡುತ್ತಿದ್ದೆ. ಥೇಟ್ ಅಪ್ಪನ ಬಣ್ಣವನ್ನೇ ಹೊತ್ತುಕೊಂಡು ಬಂದಿದ್ದ ನನಗೆ ಆ ಕ್ಷಣಕ್ಕೆ ನನ್ನ ಬಣ್ಣ ಹಾಗೂ ಚಹಾದ ಸೆಳೆತ ಎರಡೂ ಒಂದೊಂದು ಕಡೆ ಪಾಶ ಹಾಕಿ ಎಳೆದಂತೆ ಭಾಸವಾಗುತ್ತಿತ್ತು. ಆದರೆ ಬಣ್ಣ ಅನ್ನುವುದು ಯೋಚಿಸಬೇಕಾದ ವಿಷಯವೇ ಅಲ್ಲ, ಅಪ್ಪ ನಾನು ಬಣ್ಣದ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ಮೂಲೆಗೆ ಸೇರದಂತೆ ಕಿವಿ ಮಾತು ಹೇಳುತ್ತಲೇ ಆತ್ಮವಿಶ್ವಾಸ ತುಂಬುವ ಹೊತ್ತಿಗೆ ಅದ್ಯಾವ ಮಾಯಕದಲ್ಲಿ ನಾನು ಚಹಾದ ಅತ್ಯುಗ್ರ ಅಭಿಮಾನಿಯಾಗಿ ಬದಲಾದೆನೋ ನನಗೆ ಅರ್ಥವೇ ಆಗಲಿಲ್ಲ.
ಚಹಾದ ಸಮಗ್ರ ಇತಿಹಾಸವನ್ನು ಕಟ್ಟಿಕೊಡಲು ಲೇಖಕರು ಇಲ್ಲಿ ಪ್ರಯತ್ನಿಸಿದ್ದಾರೆ. ಚಹಾ ಮೊದಲು ಕೇವಲ ಈಗಿನಂತೆ ಪೇಯವಾಗಿರಲಿಲ್ಲ. ಅದೊಂದು ಔಷಧಿಯಾಗಿತ್ತು ಎನ್ನುತ್ತಲೇ ತಮ್ಮ ಚಹಾದ ಅತಿ ಪ್ರೀತಿಗೊಂದು ಘನತೆಯನ್ನು ತಂದುಕೊಡಲೆತ್ನಿಸುತ್ತ ತಮ್ಮ ಬರೆಹವನ್ನು ಪ್ರಾರಂಭಿಸುತ್ತಾರೆ. ಐದು ಸಾವಿರ ವರ್ಷಗಳ ಹಿಂದೆ ಜಗತ್ತಿನ ಮೊಟ್ಟಮೊದಲ ಚಹಾವನ್ನು ತಯಾರಿಸಿದ್ದು ಚೀನಿ ದೊರೆ ಶೆನ್ ನುಂಗ್ ಕೃಷಿ ದೇವರೆಂದೇ ಆತನನ್ನು ಪೂಜಿಸುತ್ತಿದ್ದ ಚೀನಿಯರಿಗೆ ಆತ ಹೊಸ ಹೊಸ ಕೃಷಿ ಪದ್ದತಿಯನ್ನು ಕಲಿಸಿಕೊಟ್ಟಿದ್ದ ಶೆನ್ ನುಂಗ್ ಒಮ್ಮೆ ಔಷಧಿಯ ಸಸ್ಯಗಳನ್ನು ಹುಡುಕುತ್ತ ಹೋದಾಗ ವಿಶ್ರಾಂತಿಗೆಂದು ತಂಗಿದ್ದ ಕುಟೀರದಲ್ಲಿ ಆತನ ಕುದಿಸುವ ನೀರಿನ ಪಾತ್ರೆಗೆ ಎಲ್ಲಿಂದಲೋ ಚಹಾದ ಎಲೆಯೊಂದು ಹಾರಿ ಬಂದು ಬಿದ್ದಿತ್ತಂತೆ. ಅದು ನೀರಿನ ಬಣ್ಣವನ್ನು ಬದಲಾಯಿಸಿತ್ತು. ಅದನ್ನು ಕುಡಿದ ಶೆನ್ ನುಂಗ್ ದೊರೆಗೆ ಆಯಾಸವೆಲ್ಲ ಪರಿಹಾರವಾಗಿ ಹೊಸ ಚೈತನ್ಯ ಮೂಡಿತ್ತಂತೆ. ಆದರೆ ಈಗಿನ ಚೀನಾ- ಭಾರತದ ನಡುವಣ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಚಹಾ ಚೀನಿಯದ್ದು ಎಂದು ಹೇಳಲೂ ಭಯವೇ ಆದರೂ ಅದು ನಿಷೇಧೀತ ಪಟ್ಟಿಯಲ್ಲಿಲ್ಲ ಎಂಬುದೇ ಚಹಾದ ತಲುಬಿರುವವರಿಗೆ ಸಮಾಧಾನದ ವಿಷಯ. ಯಾಕೆಂದರೆ ಚಹಾ ಕುಡಿಯುವವರಿಗೆ ಒಮ್ಮೆ ಚಹಾ ಕುಡಿಯಬೇಕು ಎನ್ನಿಸಿದರೆ ತಕ್ಷಣವೇ ಕುಡಿಯಲೇ ಬೇಕು ಅನ್ನಿಸಿಬಿಡುತ್ತದೆ. ಆ ಸಮಯದಲ್ಲಿ ಉಳಿದೆಲ್ಲವೂ ನಗಣ್ಯವಾಗಿ ಬಿಡಬಹುದು. ಆದರೆ ಮತ್ತೊಂದು ಸಮಾಧಾನದ ವಿಷಯವೇನೆಂದರೆ ಕುಮಾರ್ ಉಲ್ಲೇಖಿಸಿದ ಮತ್ತೊಂದು ಕಥೆಯ ಪ್ರಕಾರ ಚಹಾದ ಮೂಲ ಭಾರತವೇ ಆಗಿರುವುದು. ಬೋಧಿಧರ್ಮ ಸತತ ಒಂಬತ್ತು ವರ್ಷಗಳ ಕಾಲ ನಿರಂತರ ಧ್ಯಾನ ಮಾಡುವ ಶಪಥ ಮಾಡಿದ್ದ. ಆದರೆ ಕೆಲವು ಸಮಯದ ನಂತರ ನಿತ್ರಾಣಗೊಂಡು ನಿದ್ದೆ ಹೋದ. ಎದ್ದಾಗ ತನ್ನ ಕಣ್ಣುಗಳ ಮೇಲೆ ಕೋಪಗೊಂಡು ಮುಚ್ಚಿಕೊಂಡ ರೆಪ್ಪೆಗಳನ್ನು ಕಿತ್ತೆಸೆದ. ಆ ರೆಪ್ಪೆಗಳು ಬೇರು ಬಿಟ್ಟು ಗಿಡವಾಗಿ ಬೆಳೆಯಿತು. ಅದರ ಎಲೆಗಳು ಕಣ್ಣಿನ ರೆಪ್ಪೆಯ ಆಕಾರದಲ್ಲೇ ಇತ್ತು. ಆ ಎಲೆಗಳನ್ನು ತಿಂದಾಗ ಆಯಾಸವೆಲ್ಲ ಪರಿಹಾರವಾಗಿ ಉತ್ಸಾಹ ತುಂಬಿಕೊಂಡಿತ್ತು. ಈತನೇ ಮುಂದೆ ಈ ಗಿಡವನ್ನು ಚೀನಾಕ್ಕೆ ಒಯ್ದನೆಂದು ಹೇಳಲಾಗುತ್ತದೆ. ನಂತರ ಬೇರೆ ಬೇರೆ ದೇಶಗಳಲ್ಲಿ ಚಹಾದ ಮಹಿಮೆ ಹಬ್ಬಿತು.
ಕ್ರಿಶ 726ರಲ್ಲಿ ಚಹಾ ಜಪಾನನ್ನು ಪ್ರವೇಶಿಸಿತು. ಶೋಮು ಎಂಬ ದೊರೆ ಚಹಾದ ಕೃಷಿಯನ್ನು ಪ್ರಾರಂಭಿಸಿದ. ಚೀನಾದ ಹೊರಗೆ ಚಹಾ ಬೆಳೆದ ಮೊದಲ ದೇಶ ಎಂಬ ಹೆಗ್ಗಳಿಕೆ ದೊರೆಯಿತು. ಚೀನಾದಲ್ಲಿ ಟಿಯಿಸಂ ಬೆಳೆದ ಹಾಗೆ ಜಪಾನಿನಲ್ಲಿ ಚಹಾ ಸಮಾರಾಧನೆ ಎನ್ನುವ ವಿಶಿಷ್ಟ ಸಂಪ್ರದಾಯವೇ ಬೆಳೆಯಿತು. ಹೇಗೆ ಸಮಾರಾಧನೆಯ ಕೋಣೆಯನ್ನು ಪ್ರವೇಶಿಸಬೇಕು, ಹೇಗೆ ನಿಂತುಕೊಳ್ಳಬೇಕು ಎಂಬುದರಿಂದ ಹಿಡಿದು ಪ್ರತಿಯೊಂದನ್ನೂ ಹೀಗೆಯೇ ಮಾಡಬೇಕು ಎನ್ನುವ ನಿಯಮಗಳನ್ನು ರೂಪಿಸಿ ಮಾಡುವ ಸಮಾರಾಧನೆ ಇದು.
16ನೇ ಶತಮಾನದಲ್ಲಿ ಡಚ್ಚರಿಂದ ಚಹಾ ಯುರೋಪಿಗೆ ಪರಿಚಯಿಸಲ್ಪಟ್ಟಿತ್ತು. ಅವರು ಚೀನಾದ ಪ್ರಮುಖ ಬಂದರಾದ ಅಮೋಯ್ ಎಂಬಲ್ಲಿ. ಅಲ್ಲಿನ ವ್ಯಾಪಾರಿಗಳು ತಮ್ಮ ಆಡು ಭಾಷೆಯಲ್ಲಿ ಟೇ ಎನ್ನುತ್ತಿದ್ದರಂತೆ. ಹೀಗಾಗಿ ಡಚ್ಚರು ಅದನ್ನು ಟೀ ಯನ್ನಾಗಿಸಿದರು. 1650ರಲ್ಲಿ ಚಹಾ ಇಂಗ್ಲೆಂಡಿಗೆ ಕಾಲಿಟ್ಟಾಗ ಅದ್ಭುತವೂ, ವೈದ್ಯರಿಂದ ಪ್ರಮಾಣಿಕೃತವೂ ಆದ ಚೀನಿ ಪೇಯ.’ ಎಂದಿದ್ದು ದಾಖಲೆಯಾಗಿ ಉಳಿದಿದೆ. ಮೊದಮೊದಲು ಚಾ, ಚಾಯ್, ಟು, ಟೆ, ಮಿಂಗ್, ಥಿಯ ಮುಂತಾದ ಪದಗಳಿಂದ ಪರಿಚಿತವಾಗಿದ್ದ ಈ ಪಾನೀಯಕ್ಕೆ ಚಹಾ ಹಾಗೂ ಟೀ ಎನ್ನುವ ಹೆಸೆರು ಸೂಟ್ ಆದಷ್ಟು ಬೇರೆ ಯಾವುದೇ ಹೆಸರೂ ಆಗುವುದಿಲ್ಲ.
ನಾನು ಕೆಲಸ ಸಿಕ್ಕ ಸಂಭ್ರಮದಲ್ಲಿ ಯಾವ ಸ್ಥಳ ಒಳ್ಳೆಯದೆಂದೇ ತಿಳಿಯದೇ ಬೆಳ್ತಂಗಡಿಯ ಒಂದು ಕಾಡೊಳಗಿನ ಹಳ್ಳಿಯನ್ನು ಆರಿಸಿಕೊಂಡಿದ್ದೆ. ಅಲ್ಲಿನ ಹೆಚ್ಚಿನವರಿಗೆ ಕನ್ನಡವೇ ಬರುವುದಿಲ್ಲ. ಆದರೆ ನಮಗೆ ತುಳು ಮಾತನಾಡಲು ಬರದಿದ್ದರೆ ‘ಭಾಷೆ ಇಜ್ಜಿ’ ಎನ್ನುವವರು. ಹೀಗಾಗಿ ತುಳು ಕಲಿಯಲೇ ಬೇಕಾಗಿತ್ತು. ಪ್ರೌಢಶಾಲೆಯಲ್ಲಿ ಉಳಿದ ಶಿಕ್ಷಕರೆಲ್ಲ ತುಳು ಮಾತಾಡುವಾಗ ನಾನು ಮುಖ ಮುಖ ನೋಡುತ್ತ ಕುಳಿತುಕೊಳ್ಳಬೇಕಾಗಿತ್ತು. ಹೀಗಾಗಿ ತುಳು ಕಲಿಯುವ ಪ್ರಯತ್ನದಲ್ಲಿ ನನಗೆ ಸಿಕ್ಕ ಮೊದಲ ವಾಕ್ಯವೇ ‘ಚಾ ಪೆರಿಯಾರ?’ ಮುಂದಿನ ವಾಕ್ಯ ‘ಬಲ್ಲೆ, ಚಾ ಪರ್ಕ’ ಹೀಗಾಗಿ ಚಹಾ ನನಗೆ ನನ್ನನ್ನು ತುಳುನಾಡಿನೊಟ್ಟಿಗೆ ಬೆಸೆಯುವ ಕೊಂಡಿಯಾಗಿದ್ದು. ಮುಂದೆ ಈ ‘ಬಲ್ಲೆ ಚಾ ಪರ್ಕ’ ಎನ್ನುವುದು ತುಳುನಾಡಿನ ಪ್ರಸಿದ್ಧ ನಾಟಕವೊಂದರ ಹೆಸರು ಎಂಬುದೂ ಗೊತ್ತಾಗಿದ್ದು. ನಾಟಕಕ್ಕೂ ಚಹಾ ಕುಡಿಯೋಣ ಬನ್ನಿ ಎಂಬ ಹೆಸರಿಡುತ್ತಾರೆಂದರೆ ಈ ಚಹಾ ನಮ್ಮನ್ನು ಎಲ್ಲಿಂದ ಎಲ್ಲಿಗೆ ಬೆಸೆಯುತ್ತದೆ ನೋಡಿ. ‘ಒಬ್ಬ ಬಾಲ್ಟಿಯೊಂದಿಗೆ ನೀವು ಚಹಾ ಕುಡಿಯುತ್ತಿದ್ದೀರಿ ಎಂದರೆ ನೀವೊಬ್ಬ ಅಪರಿಚಿತ ಅಷ್ಟೆ. ಎರಡನೇ ಸಾರಿ ನೀವು ಅವನೊಡನೆ ಚಹಾ ಸೇವಿಸುತ್ತಿದ್ದೀರಿ ಎಂದರೆ ನೀವು ಆತನ ಅತಿಥಿ, ಮೂರನೇ ಸಲ ನೀವು ಅವನೊಂದಿಗೆ ಚಹಾ ಕಪ್ ಹಂಚಿಕೊಳ್ಳುತ್ತಿದ್ದೀರೆಂದರೆ ಅದರರ್ಥ ನೀವು ಆ ಕುಟುಂಬದ ಸದಸ್ಯ. ನಿಮಗಾಗಿ ಆತ ಸಾಯಲೂ ಸಿದ್ಧ ಎಂದರ್ಥ’ ಈ ಮಾತನ್ನು ಹೇಳಿದ್ದು ಒಬ್ಬ ತಾಲಿಬಾನಿಯಂತೆ. ಅಂದರೆ ಚಹಾದ ಶ್ರೇಷ್ಟತೆಯನ್ನು ಅರ್ಥಮಾಡಿಕೊಳ್ಳಿ. ಇಂತಹ ಚಹಾದ ಹಿರಿಮೆಯನ್ನು ಓದುತ್ತಿದ್ದರೆ ನನಗೆ ನಾನೆಲ್ಲೋ ಕಳೆದು ಹೋಗುತ್ತಿದ್ದೇನೆ ಎಂಬಂತೆ ಭಾಸವಾಗುತ್ತಿತ್ತು. ಚಹಾದ ಕುರಿತಾದ ಲೇಖನಗಳೂ ಅಷ್ಟೇ. ಒಂದೊಂದೂ ಒಂದೊಂದು ತರಹ ಚಹಾದ ಬಗ್ಗೆ ಸಮಗ್ರ ಮಾಹಿತಿ ನೀಡುವಂತಹುದ್ದು. ಚಹಾದ ಮೂಲ, ಎಲ್ಲೆಲ್ಲಿ ಬೆಳೆದ ಚಹಾದ ರುಚಿ ಹೇಗಿರುತ್ತದೆ, ವಿವಿಧ ಚಹಾ ಪ್ರಕಾರಗಳ ಬಗ್ಗೆ, ಟೀ ಬ್ಯಾಗ್ ಕುರಿತು, ಜಾರ್ಜ್ ಆರ್ವೆಲ್ಲರ ಟೀ ಟಿಪ್ಸ್ ಬಗ್ಗೆ, ಚಹಾದ ಎಲೆಗಳನ್ನು ಸಂಗ್ರಹಿಸುವ ಒಣಗಿಸುವ ಹಾಗೂ ಸಂಸ್ಕರಿಸುವ ವಿಧಾನಗಳನ್ನು ತಿಳಿಸುವ ಲೇಖನಗಳು ಖಂಡಿತಾ ಗಮನ ಸೆಳೆಯುತ್ತವೆ. ಹಲವಾರು ತರಹದ ಚಹಾ ಮಾಡುವ ವಿಧಾನಗಳ ಬಗ್ಗೆಯೂ ಲೇಖಕರು ವಿವರವಾಗಿ ತಿಳಿಸುತ್ತಾರೆ. ಇದರೊಟ್ಟಿಗೆ ಬೇರೆ ಬೇರೆ ದೇಶಗಳ ಚಹಾ ಪ್ರೀಯತೆ ಮತ್ತು ಅವರು ಇಷ್ಟಪಡುವ ಚಹಾದ ವೆರೈಟಿಯನ್ನೂ ತಿಳಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಹಾ ಇಷ್ಟ ಎಂಬುದನ್ನು ಬಹು ಚಂದವಾಗಿ ವಿವರಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಜಪಾನಿನಲ್ಲಿ ನಡೆಯುವ ಚಹಾ ಸಮಾರಾಧನೆಯ ಹಾಗೂ ಸೆನ್ ರಿಕ್ಯೂ ಹೇಳಿದ ಚಹಾದ ನಾಲ್ಕು ತತ್ವಗಳು ತೀರಾ ಆಕಷರ್ಿಸುತ್ತವೆ.
ಹಿಂದೆ ನಮ್ಮ ಹಳ್ಳಿಯ ಕಡೆ ಬೆಳಗೆದ್ದು ಚಹಾ ಕುಡಿಯುತ್ತಾರೆಂದರೆ ಕೀಳು ಎಂಬಂತೆ ಕಾಣುತ್ತಿದ್ದರಂತೆ. ‘ಛೀ ಅಂವಾ ಬೆಳಿಗ್ಗೆನೇ ಚಹಾ ಕುಡಿತಾನೆ’ ಎಂದು ಆಡಿಕೊಳ್ಳುತ್ತಿದ್ದುದೂ ಇತ್ತಂತೆ. ನಾವೀಗ ಹೇಗೆ ‘ಅವನು ಬೆಳಿಗ್ಗೆ ಬೆಳಿಗ್ಗೆನೆ ಕುಡಿತಾನೆ’ ಎಂದು ಕುಡುಕರನ್ನು ಆಡಿಕೊಳ್ಳುತ್ತೇವೋ ಹಾಗೆ. ಹಳ್ಳಿಯ ಯಾವುದೋ ಮನೆಯಲ್ಲಿ ಚಹಾವನ್ನು ಬಳಸಲು ಪ್ರಾರಂಭಿಸಿದಾಗ ಹಳ್ಳಿಯ ಜನ ಅವರ ಮನೆಗೆ ಹೋಗದೆ, ಮಾತಾಡದೇ ದುರ ಇಟ್ಟ ಪ್ರಸಂಗಗಳೂ ಸಾಕಷ್ಟಿರುವ ಕಥೆಗಳನ್ನು ಕೇಳಿದ್ದೇನೆ. ಆದರೆ ನಮಗೀಗ ಬೆಳಂಬೆಳಿಗ್ಗೆ ಚಹಾ ಇಲ್ಲದಿದ್ದರೆ ಆಗುವುದೇ ಇಲ್ಲ. ಆದರೀಗ ಮನೆಯೊಳಗೆ ಚಹಾ ಕುಡಿಯುವುದು ಸೆರೆ ಕುಡಿಯುವಷ್ಟೇ ಅಪರಾಧ ಎನ್ನುವ ನಂಬಿಕೆಯನ್ನು ದಾಟಿ, ಬೀದಿ ಬದಿಯ ಗೂಡಂಗಡಿಯಾದರೂ ಸರಿ ಹೊತ್ತಿಗೆ ಸರಿಯಾಗಿ ಚಹಾ ಕುಡಿಯಲೇಬೇಕು ಎನ್ನುವ ಗೀಳಿನವರೆಗೆ ನಾವು ಬಂದು ತಲುಪಿದ್ದೇವೆ.
ಮುಂದಿನ ಭಾಗದಲ್ಲಿ ಚಹಾದ ಬಗೆಗಿನ ಹನ್ನೆರಡು ಕಥೆಗಳಿವೆ. ಚಹಾದ ಕುರಿತಾಗಿ ಹುಟ್ಟಿಕೊಂಡ ಭಾರತದ, ಚೀನಾದ ಹಾಗೂ ಜಪಾನಿನ ಮತ್ತು ಇನ್ನಿತರ ಕಥೆಗಳಿವೆ. ನಿಜಕ್ಕೂ ಈ ಕಥೆಗಳು ಹೊಸ ಅನುಭವಗಳನ್ನೇ ನೀಡುತ್ತವೆ. ಹನ್ನೆರಡನೆಯ ಕಥೆ ಶ್ರೇಷ್ಠ ಟೀ ಎನ್ನುವುದು ಒಂದು ಅದ್ಭುತ ಕಥೆ. ಯಾಕೋ ಅದು ಬರಿದೇ ಚಹಾದ ಕುರಿತಾಗಿ ಇರುವ ಕಥೆಯೇ? ಅಥವಾ ಮತ್ತೇನೋ ಹೇಳ ಹೊರಟಿರುವ ಡಿಕಾಕ್ಷನ್ ಆಗಿತ್ತೋ? ಹೆಚ್ಚಿನ ಕಥೆಗಳು ಇದೇ ಭಾವವನ್ನು ಹುಟ್ಟಿಸುತ್ತವೆ. ಚಹಾದ ಹೆಸರಿನಲ್ಲಿ ಚಿಂತನೆಗೆ ಹಚ್ಚುತ್ತವೆ. ನಂತರದ್ದು ಚಹಾದ ಕುರಿತಾದ ಕವನಗಳು.
ಒಂದು ಕಪ್ ಟೀ
ಬರೀ ಟೀಯಷ್ಟೇ ಅಲ್ಲ
ನಸುಕಿನಲ್ಲಿ
ನೀನು ಅವನಿಗಾಗಿ ಮಾಡಿದಾಗ
ಎನ್ನುವ ಮೀನಾಕಂದಸಾಮಿಯವರ ಕವನ ನನಗೆ ಬಹಳಷ್ಟು ಇಷ್ಟವಾಗಿದ್ದು. ನನ್ನ ಬೈ ಟೂ ಚಹಾ ಕವನ ಸಂಕಲನದಲ್ಲಿ ಇದನ್ನು ಬಳಸಿಕೊಂಡಿದ್ದೇನೆ. ಈ ಪುಸ್ತಕವನ್ನು ಓದಿದಾಗಲೆಲ್ಲ ‘ಈ ಸಂಕಲನದಲ್ಲಿ ನನ್ನದೊಂದು ಚಹಾ ಕವನ ಇರಬೇಕಿತ್ತು’ ಎಂದು ಪ್ರತಿಸಲ ಅಂದುಕೊಳ್ಳುವಷ್ಟು ಜಲಸಿ ಹುಟ್ಟಿಸುವಂತಿದೆ.
ಮುಂದಿನ ಭಾಗ ಚಹಾ ಮಾಸ್ಟರುಗಳ ಕುರಿತಾದುದು. ಚಹಾ ಸಮಾರಾಧನೆಯ ಬಗ್ಗೆ, ಸೆನ್ ರಿಕ್ಯೂನ ಬಗ್ಗೆ ನನಗೆ ಮೊದಲು ಹೇಳಿದ್ದು ಎಲ್. ಸಿ ನಾಗರಾಜ್. ಸೇನ್ ರಿಕ್ಯೂನ ಕುರಿತು ಪದೇಪದೇ ಹೇಳುತ್ತ ಆ ಕವನಗಳನ್ನು ಓದು ಎನ್ನುತ್ತ ಅವುಗಳನ್ನು ಕಳುಹಿಸುತ್ತಿದ್ದರು. ಆದರೆ ಈ ಚಹಾ ಸಮಾರಾಧನೆ ಪೂರ್ತಿಯಾಗಿ ನನ್ನ ತಲೆಗೆ ಹೋಗಿದ್ದು ಈ ಪುಸ್ತಕವನ್ನು ಓದಿದ ನಂತರವೇ. ಅದರಲ್ಲೂ ಟೀ ಮಾಸ್ಟರುಗಳ ಬಗ್ಗೆ ಸಮಗ್ರ ಮಾಹಿತಿಯಂತೂ ಇಲ್ಲಿಂದಲೇ ತಿಳಿಯಬೇಕು ಎನ್ನುವಷ್ಟು ಪ್ರಬುದ್ಧ. ಇದರ ಜೊತೆಗೆ ಟೀಯೊಂದಿಗೆ ಬೆರೆತ ನಂಬಿಕೆಗಳ ಮಾಹಿತಿಗಳು ಆಸಕ್ತಿದಾಯಕವಾಗಿದೆ. ಚಹಾ ಮಾಡುವ ಪ್ರಕ್ರೀಯೆಯಲ್ಲಿನ ಹಾಗೂ ಚಹಾವನ್ನು ಸುರಿಯುವ ರೀತಿಯಲ್ಲೂ ಒಂದೊಮದು ನಂಬಿಕೆಯಿದೆ. ಸುರಿದ ಚಹಾ ಕಪ್ಪಿನ ಮೇಲೆ ತೇಲುವ ಕಡ್ಡಿ ಅಥವಾ ಚಹಾದ ಎಲೆಗಳ ಬಗ್ಗೆಯೂ ನಂಬಿಕೆಗಳಿವೆ. ಚಹಾವನ್ನು ಕಪ್ಪಿಗೆ ಸುರಿದ ನಂತರ ಗುಳ್ಳೆಗಳು ಕಪ್ನ ಅಂಚಿಗೆ ಅಂಟಿಕೊಂಡರೆ ಚಹಾ ಕುಡಿಯುತ್ತಿರುವವರು ಪ್ರೀತಿಯಲ್ಲಿದ್ದಾರೆ ಹಾಗೂ ಆ ಗುಳ್ಳೆಗಳು ಅವರು ಕೊಡುವ ಮುತ್ತುಗಳ ಸಂಖ್ಯೆಗಳನ್ನು ಅವಲಂಭಿಸಿದೆ ಎನ್ನುವ ನಂಬಿಕೆಯೂ ಚಾಲ್ತಿಯಲ್ಲಿದೆ ಎಂದರೆ ನೀವು ನಂಬಲೇಬೇಕು. ಚಹಾ ಸಮಾರಾಧನೆಯ ಕೊಠಡಿಯ ಬಗ್ಗೆ, ಕೆ.ಟಿ ಬಗ್ಗೆ, ಲಾಸ್ಟ್ ಕಪ್ ಆಫ್ ಟೀ ಬಗ್ಗೆ ಬೋಸ್ಟಬ್ ಟೀ ಪಾಟರ್ಿಯ ಬಗ್ಗೆ ಇಲ್ಲಿನ ಚಂದದ ವಿವರಣೆಗಳಿವೆ. ಚಹಾದ ರುಚಿ ನೋಡುವ ವೃತ್ತಿಯ ಬಗ್ಗೆಯೂ ಲೇಖಕರು ವಿವರಿಸಿದ್ದಾರೆ.
ಚಹಾವನ್ನು ಸೂಫಿಗಳು ‘ದ್ರವ ರೂಪದ ದೇವರು’ ಎಂದು ಕರೆಯುತ್ತಾರೆಂದು ಕುಮಾರ್ ಹೇಳುತ್ತಾರೆ. ಅದನ್ನು ಓದಿದಾಗಲೆಲ್ಲ ನನಗೆ ಇದು ಅತಿಶಯೋಕ್ತಿ ಏನಲ್ಲ ಎಂದು ಪದೇಪದೆ ಅನ್ನಿಸುತ್ತದೆ. ನನಗಂತೂ ಚಹಾ ಥೇಟ್ ದೇವರಂತೆಯೇ ಕಾಣಿಸಿದೆ. ಇದರೊಟ್ಟಿಗೆ ಸೂಫಿಗಳು ಹೇಳುವ ಜೀವದ ಆತ್ಯಂತಿಕ ಗೆಳತಿ ಚಹಾ ಎನ್ನುವ ಜನುಮದ ಸಾಕಿಯೇ ಇರಬೇಕು ಎಂದು ಎಷ್ಟೋ ಸಲ ಅನ್ನಿಸುವುದಿದೆ. ಸಮಾಧಿ ಸ್ಥಿತಿಯ ಆನಂದವನ್ನು ಒಂದು ಬಟ್ಟಲು ಚಹಾ ಸೇವಿಸುವುದರಿಂದ ಪಡೆಯಬಹುದು ಎಂದು ಚೀನಿ ಹಾಗೂ ಜಪಾನಿ ಸಂತರು ಹೇಳುತ್ತಿದ್ದರಂತೆ. ತಪ್ಪೇನಿಲ್ಲ ಬಿಡಿ. ಸುಗಂಧ ಭರಿತವಾದ, ಚಿಕಿತ್ಸಕ ಗುಣ ಹೊಂದಿರುವ, ನಿಧಾನವಾಗಿ ಮೈ ಮನಸ್ಸನ್ನು ಆವರಿಸಿಕೊಳ್ಳುವ ಚಹಾವನ್ನು ಆಸ್ವಾದಿಸುತ್ತ ಈ ಪುಸ್ತಕವನ್ನು ಓದುವ ಸುಖ ನಿಮ್ಮೆಲ್ಲರದ್ದಾಗಲಿ.
********
ಲೇಖಕರ ಬಗ್ಗೆ ಎರಡು ಮಾತು:
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು
ಬುಕ್ ಆಫ್ ಟೀ ಒಳಗೊಂಡ ಸಮಗ್ರ ಮಾಹಿತಿಯನ್ನು ,ತಮ್ಮ ಲೇಖನಿಯ ಮುಲಕ ಆಪ್ತವಾಗಿ ಬಿಚ್ಚಿಟ್ಟ ಪರಿ ಸುಂದರವಾಗಿದೆ
ಚಹಾ ವಿಲ್ಲದೆ ದಿನದ ಪ್ರಾರಂಭವೆ ಇಲ್ಲ ಎನ್ನುವ ನನ್ನಂಥ ಚಹಪ್ರೀಯರು ಓದಲೇಬೇಕಾದ ಪುಸ್ತಕ ಪರಿಚಯಿಸಪರಿಚಯಿಸಿದ ಲೇಖಕಿಗೆ ಧನ್ಯವಾದಗಳು
ಈ ಪುಸ್ತಕ ಮೊದಲೇ ಓದಿದ್ದೆ. ಮತ್ತೊಮ್ಮೆ ಟೀ ಕುಡಿದಂತಾಯ್ತು….
Eee chaha chennagide, Aadare nimma bisi chahada kavana eennu chennagide.
ಚಹಾ ನನಗೂ ಇಷ್ಟ.ಬರಹ ನೈಸ್