
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ವೃದ್ಧರ ಉತ್ಸಾಹಿ ಬದುಕು
ಮತ್ತು ಯುವಜನತೆ

ಇದು 1955 ರಲ್ಲಿ ನಡೆದ ಒಂದು ಘಟನೆ… ಎಮ್ಮಾ ಗೇಟ್ ವುಡ್ ಎಂಬಾಕೆ ಅಮೆರಿಕ ದೇಶದ ಓಹಿಯೋ ರಾಜ್ಯದಲ್ಲಿ ಇರುತ್ತಿದ್ದಳು. ತಾನೊಂದು ಸುದೀರ್ಘ ನಡಿಗೆಯನ್ನು ಆರಂಭಿಸುವೆ ಎಂದು ತನ್ನ ಮನೆಯವರಿಗೆ ಹೇಳುತ್ತಿದ್ದ ಆಕೆ ಆ ದಿನ ತನ್ನ ನಡಿಗೆಯನ್ನು ಆರಂಭಿಸಿಯೇಬಿಟ್ಟಳು. ಹಾಗೆ ಆರಂಭವಾದ ಆಕೆಯ ನಡಿಗೆ ಸುಮಾರು 2000 ಕಿ.ಮೀಗಳಷ್ಟು ದೂರದವರೆಗೆ ಮುಂದುವರೆದು ಆಕೆ ಬೆಟ್ಟ ಗುಡ್ಡಗಳು, ನದಿಯ, ಕಣಿವೆಗಳ ತಿರುವುಗಳಲ್ಲಿ ಹಾದು ನಡೆದಳು.
ತನ್ನ 67ನೇ ವಯಸ್ಸಿನಲ್ಲಿ ಆಕೆ ಈ ರೀತಿ ಏಕಾಂಗಿಯಾಗಿ ಪಯಣಿಸಿದ ಮೊದಲ ಮಹಿಳೆಯಾದಳು. ಒಂದು ಗುರುತುಮಾನದಲ್ಲಿ ಈ ರೀತಿ ಯಾವುದೇ ನಿರ್ವಾಹಕರಿಲ್ಲದ ಸಹಾಯಕರಿಲ್ಲದ ಆಕೆಯ ಈ ನಡಿಗೆ ಸಂಪೂರ್ಣವಾಗಿ ಏಕ ವ್ಯಕ್ತಿ ಪ್ರದರ್ಶನವಾಗಿತ್ತು. ಆಕೆ ಮನೆಯಿಂದ ತಾನು ಮನೆಯಲ್ಲೇ ತಯಾರಿಸಿದ ಡೆನಿಮ್ ಬಟ್ಟೆಯ ಒಂದು ಚೀಲದಲ್ಲಿ ಒಂದೆರಡು ಜೊತೆ ಬಟ್ಟೆ, ಒಂದು ಜೊತೆ ಕೆಡ್ ಸ್ನಿಕ್ಕರ್ ಮತ್ತು ಒಂದು ಶವರ್ಗೆ ಬಳಸುವ ಕರ್ಟನ್ ಮಾತ್ರ ತೆಗೆದುಕೊಂಡಿದ್ದಳು. ಶವರಿಗೆ ಬಳಸುವ ಕರ್ಟನ್ ನ್ನು ಆಕೆ ತನ್ನ ವಾಸದ ಟೆಂಟನ್ನಾಗಿ ಮಾರ್ಪಡಿಸುತ್ತಿದ್ದಳು.
ಹೀಗೆ ಮನೆ ಬಿಟ್ಟು ಏಕಾಏಕಿ ಆಕೆ ನಡಿಗೆಯನ್ನು ಆರಂಭಿಸಲು ಕಾರಣವೇನು? ತಾನು ಹೀಗೆ ನಡೆಯಬಲ್ಲೆ ಎಂಬುದನ್ನು ಸಾಬೀತುಪಡಿಸಲು ಎಮ್ಮಾ ಈ ಸಾಹಸಕ್ಕೆ ಕೈ ಹಾಕಿದಳು. ಅತ್ಯಂತ ಕಠಿಣವಾದ, ಸದಾ ನೋವು, ಕಿರಿಕಿರಿಯನ್ನು ಹೊಂದಿದ ದಾಂಪತ್ಯ ಜೀವನ, 11 ಮಕ್ಕಳ ಬೆಳೆಸುವಿಕೆಯ ಜೊತೆಗೆ ನಿರಂತರವಾದ ತೊಂದರೆಗಳನ್ನು ಎಮ್ಮಾ ತನ್ನ ಬದುಕಿನಲ್ಲಿ ಅನುಭವಿಸಿದ್ದಳು. ಒಂದೊಮ್ಮೆ ಮಾನಸಿಕವಾಗಿ ಖಿನ್ನತೆಗೆ ಕೂಡ ಜಾರಿದ ಆಕೆ ಅಪ್ಲಾಶಿಯನ್ ಟ್ರಯಲ್ ಇನ್ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನ ನಡಿಗೆಗೆ ತಯಾರಾದಳು. ಒಂದು ಬಾರಿ ತಾನು ಹೀಗೆ ಹೊರಡಲೇಬೇಕು ಎಂದು ಎತ್ತರಿಸಿದ ದನಿಯಲ್ಲಿ ಹೇಳಿದ ಆಕೆ ಯಾರ ಮಾತಿಗೂ ಕಿವಿಗೊಡಲಿಲ್ಲ.
ಎದೆಗುಂದದ ಧೈರ್ಯ, ದಾರಿ ಹೋಕರ ದಯಾಳುತನ ಮತ್ತು ಪ್ರಕೃತಿಯ ಕುರಿತಾದ ಆಕೆಯ ಅದಮ್ಯ ಪ್ರೀತಿಯ ಭಾವನೆಗಳು ಆಕೆಗೆ ಜೊತೆಗೂಡಿ ಆಕೆ ಈ ಚಾರಣದ ಪಯಣದಲ್ಲಿ ಪಾಲ್ಗೊಂಡು ಒಂದಿಡಿ
ಅಪ್ಲಾಶಿಯನ್ ಟ್ರಯಲ್ ಚಾರಣ ಪ್ರಿಯರ ಪೀಳಿಗೆಗೆ ಸ್ಪೂರ್ತಿಯಾದಳು. 1960ರಲ್ಲಿ ಮತ್ತೊಮ್ಮೆ ಚಾರಣಕ್ಕೆ ಸಜ್ಜಾದ ಆಕೆ 1963 ರಲ್ಲಿ ಮೂರನೇ ಬಾರಿ ಚಾರಣವನ್ನು ಯಶಸ್ವಿಯಾಗಿ ಪೂರೈಸಿದಳು. ಹೀಗೆ ಮೂರು ಅಪ್ಲಾಶಿಯನ್ ಚಾರಣ ಟ್ರಯಲ್ಗಳನ್ನು ಪೂರೈಸಿದ ಏಕೈಕ ಮಹಿಳೆ ಆಕೆ ಎಂದು ಇತಿಹಾಸದಲ್ಲಿ ದಾಖಲಾದಳು.
ಎಮ್ಮಾಳ ಧೈರ್ಯ, ಸಾಹಸ ಮತ್ತು ಬದ್ಧತೆಯ ಚಾರಣ ಆಕೆಯನ್ನು ಚಾರಣ ಜಗತ್ತಿನ ಕಣ್ಮಣಿಯನ್ನಾಗಿಸಿತ್ತು ಆಕೆಯ ಚಾರಣದ ಕುರಿತಾದ ಆಸಕ್ತಿ ಯಾವ ರೀತಿ ಚಾರಣಕ್ಕೆ ಹೋಗುವುದು, ತಮ್ಮ ಅತ್ಯವಶ್ಯಕ ವಸ್ತುಗಳನ್ನು ಹೇಗೆ ಜೋಡಿಸಬೇಕು ಎಂಬುದರಿಂದ ಹಿಡಿದು ಚಾರಣವನ್ನು ಹೇಗೆ ಮಾಡಬೇಕು ಎಂಬಲ್ಲಿ ಅವರಿಗೆ ಇಡೀ ಜಗತ್ತೇ ನಿಬ್ಬೆರಗಾಗುವಂತೆ ಆಸಕ್ತಿಯಿಂದ ವಿವರಿಸಿದಳು.
ಇಂದು ಆಕೆ ತನ್ನ ಅದ್ಭುತವಾದ ಕಾರ್ಯನಿರ್ವಹಣೆಯಿಂದಾಗಿ ಅಮೇರಿಕಾ ದೇಶದ ಚಾರಣ ಪ್ರಿಯರ ಪಾಲಿನ ದಂತಕತೆಯಾಗಿದ್ದಾಳೆ. ಇಂದಿಗೂ ಆಕೆ ತೋರಿದ ಪಥಗಳಲ್ಲಿಯೇ ಚಾರಣಪ್ರಿಯರು ನಡೆದಾಡುತ್ತಾರೆ. ಆಕೆ ನಡೆದ ದಾರಿಯನ್ನು ‘ಗ್ರ್ಯಾಂಡ್ ಮಾ ಗೇಟ್ ರೋಡ್’ ಎಂದು ಕರೆದು ಅಮೆರಿಕ ಸರ್ಕಾರ ಗೌರವ ಸಲ್ಲಿಸಿದೆ. ಗ್ರಾಂಡ್ ಮಾ ಗೇಟ ಒಂದು ಉನ್ನತ ಉದ್ದೇಶಕ್ಕಾಗಿ ಮನೆಯನ್ನು ತೊರೆದು ನಡುಗೆಯನ್ನು ಆರಂಭಿಸಿ ಮರಳಿ ಬಾರದಂತೆ 2 ಸಾವಿರ ಕಿಲೋಮೀಟರ್ ನಡಿಗೆಯನ್ನು ಪೂರೈಸಿದ್ದಾಳೆ ಎಂದರೆ ಅದು ನಮಗೆಲ್ಲರಿಗೂ ಸ್ಪೂರ್ತಿಯ ವಿಷಯ ಎಂದು ಹೇಳಲು ಮಹಿಳೆಯಾದ ನನಗೆ ಅತ್ಯಂತ ಸಂತೋಷವೆನಿಸುತ್ತದೆ.
ನೋಡಿದಿರಾ ಸ್ನೇಹಿತರೆ,ಅರೋಗ್ಯವಂತ ಶರೀರಕ್ಕೆ ವಯಸ್ಸಿನ ಹಂಗಿಲ್ಲ. ತಮ್ಮ ಇಳಿ ವಯಸ್ಸಿನಲ್ಲಿಯೂ ಜೀವನದ ರೋಚಕತೆ, ಸಾಹಸಮಯ ಯಾತ್ರೆ, ಉತ್ಸಾಹಗಳನ್ನು ಉಳಿಸಿಕೊಂಡಿರುವ ವೃದ್ಧರ ನಡುವೆ
ಸಣ್ಣ ಪುಟ್ಟ ತೊಂದರೆಗಳಿಗೂ ಬದುಕಿನ ಮೇಲಿನ ಆಸಕ್ತಿಯನ್ನು ಕಳೆದುಕೊಂಡಂತೆ ತೋರುವ ಯುವಜನತೆ ನಮ್ಮ ಮುಂದಿದ್ದಾರೆ.
ಇಂದಿಗೂ ಹಬ್ಬ ಹುಣ್ಣಿಮೆಗಳನ್ನು ಮಾಡುತ್ತಾ, ಜಾತ್ರೆಗೆ ಮಕ್ಕಳನ್ನು ಕರೆಸುವ ಹಲವಾರು ಜನರಿಗೆ ಅಡುಗೆ ಮಾಡಿ ಬಡಿಸುವ ಶಕ್ತಿಯನ್ನು ಹೊಂದಿರುವ ತಾಯಂದಿರು ನಮ್ಮಲ್ಲಿದ್ದಾರೆ. ಆಯಾ ಋತುವಿನ ಬದಲಾವಣೆಗೆ ತಕ್ಕಂತೆ ಅವರ ಬದುಕಿನಲ್ಲಿ ಉಂಟಾಗುವ ಬದಲಾವಣೆಗಳನ್ನು ಸರ್ವೇಸಾಮಾನ್ಯ ಎಂಬಂತೆ ಸ್ವೀಕರಿಸಿ ಬದುಕನ್ನು ಸಾಗಿಸುವ ಅವರು ಬದುಕಿನ ಪಾಠವನ್ನು ಯಾವುದೇ ಮ್ಯಾನೇಜ್ಮೆಂಟ್ ಕಾಲೇಜುಗಳಿಂದ, ವೃತ್ತಿಪರ ತರಬೇತುದಾರರಿಂದ ಪಡೆದಿಲ್ಲ. ಬದಲಾಗಿ ಅವರ ಬದುಕೇ ಅವರಿಗೆ ಪಾಠಶಾಲೆಯಾಗಿದ್ದು ಬದುಕಿನಲ್ಲಿ ಬರುವ ಸವಾಲುಗಳು, ಏರಿಳಿತಗಳು, ಸುಖ ದುಃಖಗಳು ಅವರಿಗೆ ಬದುಕನ್ನು ಕಲಿಸುವ ಶಿಕ್ಷಕರಾಗಿ ಅನುಭವಗಳು ಕಲಿಯುವ ಪಾಠಗಳಾಗಿ ಅವರನ್ನು ಒಳ್ಳೆಯ ವಿಧ್ಯಾರ್ಥಿಗಳಾಗಿಸುತ್ತವೆ.
ಒಕ್ಕಲುತನದ ಬದುಕಿನಲ್ಲಿ ಇರುವ ಎಲ್ಲ ಮಕ್ಕಳನ್ನು ಓದಿಸಿ ತಕ್ಕ ಮಟ್ಟಿಗಿನ ಉದ್ಯೋಗ ಕೊಡಿಸಿ, ಮದುವೆ ಮಾಡಿಸಿ ವೃದ್ಯಾಪ್ಯಕ್ಕೆ ತಲೆಯ ಮೇಲೊಂದು ಸೂರನ್ನು
ಕಟ್ಟಿಸಿ ಸಾರ್ಥಕತೆಯ ನಿಟ್ಟುಸಿರು ಬಿಡುತ್ತಿದ್ದ ಪಾಲಕರನ್ನು ಹೊಂದಿದ್ದ ಇಂದಿನ ಯುವ ಜನತೆ ಮೊಬೈಲ್ನಲ್ಲಿ ಸಿಗ್ನಲ್ ದೊರೆಯಲಿಲ್ಲವೆಂದರೆ ಏನನ್ನೋ ಕಳೆದುಕೊಂಡವರಂತೆ ಒದ್ದಾಡುವರು. ನೌಕರಿಯಲ್ಲಿ ಹೈಕ ದೊರೆಯದಿದ್ದರೆ,ಬಾಸ್ ಬೈದರೆ ಜೀವನವೇ ಮುಗಿದು ಹೋಯಿತು ಎಂಬಂತೆ ಆಡುವ ಇಂದಿನ ಯುವ ಜನಾಂಗ ಎಮ್ಮಾ ಗೇಟ್ ವುಡ್ ರಂತಹ ವೃದ್ಧರಿಂದ
ಕಲಿಯುವುದು ಬಹಳವೇ ಇದೆ.
ಏನಂತೀರಾ??
ವೀಣಾ ಹೇಮಂತ್ ಗೌಡ ಪಾಟೀಲ್,

ಅದ್ಭುತ ಅನುಭವದ ಕಥೆ ರೋಮಾಂಚನ ಹುಟ್ಟಿಸುವ ಮಹಿಳೆಯ ಯಶೋಗಾಥೆ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ.