ನಮ್ಮ ದೇಶದ ಆರ್ಥಿಕ ರಾಜಧಾನಿ, ಮುಂಬಯಿ ‌ಮಹಾನಗರವನ್ನು‌ ಕುರಿತು ಹೊರರಾಜ್ಯಗಳ ಜನರಿಗೆ ಇರುವ‌ ಪರಿಕಲ್ಪನೆ ಅತ್ಯಂತ ವಿಭಿನ್ನವಾಗಿದೆ.. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಈ ಮಹಾನಗರದ ಸ್ವರೂಪವನ್ನು ಕಲ್ಪಿಸಿಕೊಳ್ಳುತ್ತಾರೆ..
ಕೆಲವರಿಗೆ ಮುಂಬಯಿನ ಗಗನಚುಂಬಿ ಕಟ್ಟಡಗಳು, ಐಷಾರಾಮಿ ಜೀವನಶೈಲಿ, ಬಾಲಿವುಡ್ ಪ್ರಪಂಚ ಮಾತ್ರ ಕಾಣಿಸಿದರೆ, ಇನ್ನು ‌ಕೆಲವರಿಗೆ ಮುಂಬಯಿನ ಜನಜಂಗುಳಿ, ಲೋಕಲ್ ಟ್ರೈನ್, ಕೊಳೆಗೇರಿ ಪ್ರದೇಶಗಳು, ಕಷ್ಟಕರ ಜೀವನ ಕಾಣಿಸುತ್ತದೆ..ಇನ್ನೂ ಕೆಲವರಿಗೆ ಆಧುನಿಕ ಮತ್ತು ಯಾಂತ್ರಿಕ ಜೀವನ, ಅಸಂಸ್ಕೃತ ಜನ, ಮೋಸ, ವಂಚನೆ ಮುಂತಾದವುಗಳು ಕಾಣಬಹುದು. ತಾವು ಎಲ್ಲೋ ಓದಿದ, ನೋಡಿದ, ಕೇಳಿದ ಭಾಗ ಮಾತ್ರ ಸತ್ಯವೆಂಬ ಭಾವನೆ, ಜೊತೆಗೆ ಇನ್ನಿತರ ಊಹಾಪೋಹಗಳಿಂದ ಮುಂಬಯಿನ ಸಂಸ್ಕೃತಿ, ಸತ್ಯಗಳ ಅಸ್ಪಷ್ಟ ಚಿತ್ರಣ ಮನದಲ್ಲಿ ಇರಬಹುದು..
ಒಟ್ಟಾರೆ ಇದನ್ನು ಕುರುಡರು ಮತ್ತು ಆನೆಯ ಕಥೆಗೆ ಹೋಲಿಸಬಹುದಾಗಿದೆ.
ವಾಸ್ತವವಾಗಿ ಈ ನಗರವು ಅತ್ಯಂತ ವಿಭಿನ್ನವಾಗಿದ್ದು, ಸಾಂಸ್ಕೃತಿಕವಾಗಿ, ಹಾಗೂ ಭಾವನಾತ್ಮಕವಾಗಿ ಶ್ರೀಮಂತವಾಗಿದೆ. ಬದುಕಿನ ಎಲ್ಲಾ ಆಯಾಮಗಳನ್ನು ಅನುಭವಿಸಿ ಆನಂದಿಸಲು ಅಭಿವೃದ್ಧಿಗೊಳಿಸಲು ಇದು ಸೂಕ್ತ ಸ್ಥಳವಾಗಿದೆ..ಆಧುನಿಕತೆ ಮತ್ತು ಸಂಪ್ರದಾಯಗಳನ್ನು ಒಂದೆಡೆ ಸಂಯೋಜಿಸಿ ಸುಖ, ಸಮಾಧಾನದಿಂದ ಬಾಳಲು ಅನುವು ನೀಡುವ ಉಲ್ಲಾಸ, ಉತ್ಸಾಹಭರಿತ, ವಿಶಾಲ ಹೃದಯಿ ಈ ಮುಂಬಯಿ ‌ಮಹಾನಗರಿ..

ಕನಸುಗಳ ಬೀಜ ಬಿತ್ತಿ ಹೊನ್ನ ನನಸುಗಳ ಫಲ ಪಡೆವ ಆಸೆಗಳನ್ನು ಹೊತ್ತು ಪರ ಪ್ರದೇಶಗಳಿಂದ ಲಕ್ಷಾಂತರ ‌ಜನರು ಇಲ್ಲಿಗೆ ವಲಸೆ ‌ಬರುತ್ತಾರೆ.‌ ತಮ್ಮ ತಾಯ್ತಂದೆ, ಒಡಹುಟ್ಟಿದವರು, ಸಂಬಂಧಿಗಳನ್ನು ತೊರೆದು ಜೀವನೋಪಾಯಕ್ಕಾಗಿ ನಗರ ಸೇರಿದ ಜನರಿಗೆ ಆರಂಭದಲ್ಲಿ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೆನಿಸಿದರೂ ಈ ಮುಂಬಾ ಆಯಿ ಅವರನ್ನು ಅಪ್ಪಿ, ತನ್ನ ಮಡಿಲಲ್ಲಿ ಆಶ್ರಯವಿತ್ತು, ಸಾಂತ್ವನ ನೀಡುತ್ತಾಳೆ. ಜಾತೀಯತೆಯ ಗೆರೆ ದಾಟಿ, ಸ್ನೇಹದ ವರ್ತುಲದಲ್ಲಿ ಸೇರಿ, ತನ್ನವರ ಕೊರತೆಯನ್ನು ಮರೆತು ನೆಮ್ಮದಿಯಿಂದ ಬಾಳುವ ಪರಿಯನ್ನು ಕಲಿಸುತ್ತಾಳೆ. ಕೊಳೆಗೇರಿ, ಚಾ಼ಳ್(ವಠಾರ), ಮಧ್ಯಮ ವರ್ಗ,ಮೇಲು ವರ್ಗ, ಶ್ರೀಮಂತ ವರ್ಗ, ಹೀಗೆ ಎಲ್ಲರೂ ಕಷ್ಟ ಸುಖ ಹಂಚಿಕೊಂಡು ಪರಸ್ಪರ ಬೆಂಬಲವಿತ್ತು ಬಾಳುವುದನ್ನು ಕಲಿತು, ಇಲ್ಲಿಯ ಜೀವನಶೈಲಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ..
ಈ ಪ್ರಕ್ರಿಯೆಯನ್ನು ಮೈಗೂಡಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯದ ಹಲವಾರು ಹಬ್ಬಗಳು ಸಹಾಯಕವಾಗುತ್ತದೆ..
ಕೋಜಾಗಿರಿ ಪೂರ್ಣಿಮ, ಬೋಂಡಲ, ಗಣೇಶೋತ್ಸವ, ನವರಾತ್ರಿ, ದೀಪಾವಳಿ ಈ ಎಲ್ಲವೂ ಜಾತಿ ಮತ ಬೇಧ ಭಾವವಿಲ್ಲದೆ ಎಲ್ಲರೊಂದಾಗಿ ಸಾಮೂಹಿಕವಾಗಿ ಆಚರಿಸಲ್ಪಡುವ ಹಬ್ಬಗಳಾಗಿವೆ..
ಈ ಹಬ್ಬಗಳಿಂದ ಸ್ಪೂರ್ತಿ, ಪ್ರೇರಣೆಗಳನ್ನು ‌ಪಡೆದು, ಅವುಗಳಿಗೊಂದು ಹೊಸ ರೂಪ ನೀಡಿ ಆಚರಿಸಿ ಆನಂದಿಸುವ ಆಧುನಿಕ ಕಾರ್ಯಕ್ರಮಗಳೇ ಡಬ್ಬಾಪಾರ್ಟಿ ಮತ್ತು ಕಿಟ್ಟಿ ಪಾರ್ಟಿ ಎನ್ನಬಹುದು..
ದಿನನಿತ್ಯದ ವ್ಯಸ್ತ ಜೀವನ, ಆಫೀಸು, ಮನೆ, ಪ್ರವಾಸ, ಕೆಲಸದೊತ್ತಡಗಳಿಂದ ಮುಕ್ತವಾಗಿ ಕೆಲ ಸಮಯವಾದರೂ ಸ್ನೇಹಿತರು, ಬಂಧು ಬಳಗದವರೊಡನೆ ಸಂತೋಷದಿಂದ ಕಾಲ ಕಳೆಯಲು ಅನುವು ಮಾಡಿಕೊಡುವ ಈ ಸುಂದರ ಪಾರ್ಟಿಗಳತ್ತ ಒಮ್ಮೆ ಕಣ್ಣು ಹಾಯಿಸೋಣ ಬನ್ನಿ…

——–

ಮಹಾನಗರದ ಕಾರ್ಪೊರೇಟ್ ಆಫೀಸುಗಳಲ್ಲಿ “ಪಾಟ್ ಲಕ್ ಪಾರ್ಟಿ “(“Potluck Dinner or Potluck Lunch”) ಹೆಸರಿನಿಂದ ಕರೆಯಲ್ಪಡುವ ಈ ಕಾರ್ಯಕ್ರಮ “ಡಬ್ಬಾಪಾರ್ಟಿ” ಹೆಸರಿನಿಂದ ಅತ್ಯಂತ ಪ್ರಸಿದ್ಧಿ ಪಡೆದಿದೆ..ಡಬ್ಬಾ ಅಂದರೆ ನಮ್ಮ ಸ್ಟೀಲ್ ಡಬ್ಬಿ, (ಟಿಫಿನ್ ಬಾಕ್ಸ್)..

ಇದೊಂದು ವಿಶೇಷ, ವಿಶಿಷ್ಟ ಸಾಮಾಜಿಕ ಸಹಭೋಜನದ ಕಾರ್ಯಕ್ರಮವಾಗಿದ್ದು, ಸ್ನೇಹಿತರು, ಸಹೋದ್ಯೋಗಿಗಳು, ಒಂದೇ ಸೊಸೈಟಿಯ ಸದಸ್ಯರು, ಹೀಗೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ ಆಹಾರ ಪದಾರ್ಥವನ್ನು ತಂದು ಒಟ್ಟಾಗಿ ಸೇರಿ ಊಟ ಮಾಡುತ್ತಾರೆ..
ಹಾಡು, ಕುಣಿತ, ಹರಟೆ, ವಿವಿಧ ವಿಷಯಗಳ ಮೇಲೆ ಚರ್ಚೆ, ಯಾವುದಾದರೂ ವಿಷಯದ ಬಗ್ಗೆ ತಮ್ಮ ಮನೋಗತವನ್ನುಹಂಚಿಕೊಳ್ಳುವುದು, ಹೀಗೆ ಕೊಡು ಕೊಳ್ಳುವ, ಈ ಸುಂದರ ಕಾರ್ಯಕ್ರಮವನ್ನು ೪-೫ ತಿಂಗಳಿಗೊಮ್ಮೆ ಆಯೋಜಿಸಲಾಗುತ್ತದೆ..10 ರಿಂದ ೩೦-೪೦ ಜನರವರೆಗೂ ಇದರಲ್ಲಿ ಭಾಗವಹಿಸಬಹುದು. ಸೊಸೈಟಿಯ ಕ್ಲಬ್ ಹೌಸ್ ನಲ್ಲಿ, ಚಿಕ್ಕ ಪುಟ್ಟ ಹಾಲ್ ಗಳಲ್ಲಿ, ಅಥವಾ ಸದಸ್ಯರ ಮನೆಗಳಲ್ಲಿ ಡಬ್ಬಾ ಪಾರ್ಟಿಯನ್ನು ಆಯೋಜಿಸಲಾಗುವುದು


ಇದರಲ್ಲಿ ಭಾಗವಹಿಸಲು ಇಚ್ಛಿಸುವ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ತಯಾರಿಸಿದ ಒಂದು ರುಚಿಕರ ಪದಾರ್ಥವನ್ನು ಡಬ್ಬಿಯಲ್ಲಿ ತೆಗೆದುಕೊಂಡು ಹೋಗಬೇಕು. ಹೋಟೆಲ್ ತಿಂಡಿ ತಿನಿಸುಗಳಿಗಿಲ್ಲಿ ಅವಕಾಶವಿಲ್ಲ..ತಮ್ಮ ತಮ್ಮ ಮನೆಗಳಿಂದ ತಂದ ತಿನಿಸಿನ ಡಬ್ಬಿಗಳನ್ನು ನಡುವೆ ಇಟ್ಟು ಸುತ್ತಲೂ ಎಲ್ಲಾ ಸದಸ್ಯರು ಕುಳಿತು ಹಾಡುತ್ತ, ಹರಟುತ್ತ ನಗು ನಗುತ್ತ, ಹಳೆಯ ನೆನಪುಗಳನ್ನು ಹಂಚುತ್ತಾ, ಉಣ್ಣುವಾಗ ಅದೆಂತಹ ಅದ್ಭುತ ಖುಷಿ ಸಿಗುತ್ತೆ ಅಂತೀರಿ..ಆಹಾ..

ಇಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ರುಚಿಯ ಮಿಶ್ರಣ ‌ಕಂಡು ಬರುತ್ತದೆ.. ಒಂದೆಡೆ ಮರಾಠಿ ಸಾಂಪ್ರದಾಯಿಕ ಪಿಠ್ಲ ಭಾಕರಿ, ಪಂಜಾಬ್ ನ ಪರಾಠಾ, ಗುಜರಾತಿನ ಥೇಪ್ಲಾ,ಢೋಕ್ಲಾ, ಬಂಗಾಲದ ರಸಗುಲ್ಲ, ದಕ್ಷಿಣದ ಇಡ್ಲಿ, ವಿವಿಧ ರೀತಿಯ ಅನ್ನಗಳು,, ಹೀಗೆ ಎಲ್ಲವೂ ಒಂದೇ ಭೋಜನದಲ್ಲಿ ಸಿಗುವಾಗ ಆನಂದವಲ್ಲದೇ ಮತ್ತೇನು. ಅಂದ ಹಾಗೆ ನಾನು ಭಾಗವಹಿಸುವ ಪಾರ್ಟಿಯ ಎಲ್ಲ ಸದಸ್ಯರಿಂದ ನಮ್ಮ ಬಿಸಿಬೇಳೆಭಾತ್ ಗೆ ಸದಾ ಅತ್ಯಂತ ಹೆಚ್ಚು ಬೇಡಿಕೆ ಇರುತ್ತದೆ..ಮನೆಯ ಸ್ವಚ್ಚತೆ ಮತ್ತು ಪ್ರೀತಿ,ಕಾಳಜಿ ತುಂಬಿದ ಈ ಹಿತಕರ ಊಟ ಆರೋಗ್ಯಕರವೂ ಹೌದು..

ಕೆಲವೊಮ್ಮೆ ಕುರುಕಲು ತಿಂಡಿಗಳೊಡನೆ ಚಹಾ ಅಥವಾ ಕಾಫಿ ಪಾರ್ಟಿಯನ್ನೂ ಮಾಡುವುದುಂಟು..ದಿನ ನಿತ್ಯದ ಬದುಕಿನಲ್ಲಿ ನವೋಲ್ಲಾಸ,ನವ ಉತ್ಸಾಹ ಚೈತನ್ಯಗಳನ್ನು ನೀಡಬಲ್ಲ ಈ ಡಬ್ಬಾಪಾರ್ಟಿಗಳು ನಮ್ಮ ಶಾಲೆಯ ದಿನಗಳ ಹೊರಸಂಚಾರವನ್ನು(ಪಿಕ್ ನಿಕ್) ನೆನಪಿಸುತ್ತವೆ..ಇಲ್ಲಿಯ ಹಲವಾರು ಶಾಲೆಗಳಲ್ಲಿ “ಟಿಫಿನ್ ಇಂಡಿಯಾ” ಎಂಬ ಹೆಸರಿನಿಂದ ಈ ಡಬ್ಬಾಪಾರ್ಟಿಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.. ಶಾಲೆಯ ಮಕ್ಕಳಲ್ಲಿ ಸ್ನೇಹ, ಸೌಹಾರ್ದತೆ, ಹಂಚಿ ಉಣ್ಣುವ ಮನೋಭಾವಗಳನ್ನು ಬೆಳೆಸಲು ಇದು ತುಂಬಾ ಸಹಕಾರಿಯಾಗುವುದಲ್ಲದೆ ನಮ್ಮ ದೇಶದ ವಿವಿಧ ರಾಜ್ಯಗಳ ಆಹಾರದ ರುಚಿ ಸವಿಯುವ ಅವಕಾಶವೂ ಲಭ್ಯವಾಗುತ್ತದೆ..ಊಟವೆಂದರೆ ಬರೀ ದೇಹದ ಅವಶ್ಯಕತೆ ಅಷ್ಟೇ ಅಲ್ಲ, ಆತ್ಮೀಯತೆ, ಸಂತಸಗಳನ್ನು,ಸ್ನೇಹ ಸೌಹಾರ್ದತೆಗಳನ್ನು ಇತರರೊಡನೆ ಹಂಚುವ ಸುಂದರ ಕಾರ್ಯ ಎಂಬ ಅರಿವನ್ನು ಮೂಡಿಸುವ ಈ ಡಬ್ಬಾಪಾರ್ಟಿ ದಿನೇ ದಿನೇ ಪ್ರಗತಿಯೆಡೆಗೆ ಸಾಗುತ್ತಿದೆ..

ಈ ಡಬ್ಬಾಪಾರ್ಟಿ ಸಂಪ್ರದಾಯ ಇತ್ತೀಚೆಗೆ ಹೊಸ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳಿಂದಾಗಿ ಇನ್ನೂ ಹೆಚ್ಚು ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದೆ. ವಿವಿಧ ರೀತಿಯ ಥೀಮ್ ಗಳನ್ನ ಇಟ್ಟು ಡಬ್ಬಾಪಾರ್ಟಿಯನ್ನು ಆಯೋಜಿಸಲಾಗುತ್ತದೆ.
ಆರೋಗ್ಯಕರ ತಿನಿಸು, ಹಣ್ಣುಗಳಿಂದ ಅಡುಗೆ, ಡಯಟ್ ತಿನಿಸುಗಳು, ಅಡುಗೆ ಇಂಧನ ಬಳಸದೆ ತಯಾರಿಸುವ ತಿನಿಸುಗಳು, ಹೀಗೆ ಹತ್ತು ಹಲವು ಥೀಮ್ ಗಳ ಹೊಸ ಹೊಸ ಪ್ರಯೋಗಗಳು ಯಶಸ್ವಿಯಾಗಿ ‌ನಡೆಯುತ್ತಿವೆ..

—–

ನಮ್ಮ ದೇಶದ ಸಂಸ್ಕೃತಿಯಲ್ಲಿ ಮಹಿಳೆಯರ ಜೀವನವು ಅತ್ಯಂತ ಹೊಣೆಗಾರಿಕೆಯಿಂದ ಕೂಡಿರುತ್ತದೆ. ಮಕ್ಕಳು, ಹಿರಿಯರು, ಕಿರಿಯರು, ಅತಿಥಿ ಅಭ್ಯಾಗತರು, ಮನೆಗೆಲಸ, ನೌಕರಿ, ಹೀಗೇ ಇನ್ನಿತರ ಜವಾಬ್ದಾರಿಗಳಲ್ಲಿ ಸದಾ ತನ್ನನ್ನು ತಾನು ತೊಡಗಿಸಿಕೊಂಡ ಹೆಣ್ಣು ತನ್ನ ವೈಯುಕ್ತಿಕ ಆಸಕ್ತಿಗಳನ್ನು, ತನ್ನ ಪ್ರತಿಭೆಯನ್ನು ಮೂಲೆಗೆ ಸರಿಸ ಬೇಕಾಗುತ್ತದೆ. ತನ್ನ ನಿತ್ಯದ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸಿದರೂ ಸಹ ಆಕೆಗೆ ತನ್ನತನವನ್ನು ಬೆಳೆಸಿ, ಆನಂದಿಸಲು ಸಾಧ್ಯವಾಗದಂತಹ ಉದಾಹರಣೆಗಳೂ ಸಾಕಷ್ಟಿವೆ.
ಇಂತಹ ಬೇಸರವನ್ನು ಅಥವಾ ಇನ್ನಾವುದೇ ಮನದಾಳದ ಮಾತುಗಳನ್ನು ತನ್ನ ಆತ್ಮೀಯ ಗೆಳತಿಯರಲ್ಲಿ ಹಂಚಿಕೊಂಡು ಹಗುರಾಗಲು ಈ ಗೆಳತಿಯರ ಗುಂಪು ಸಹಾಯಕವಾಗುತ್ತದೆ.
ಕೆಲವೊಮ್ಮೆ ಅವಳಲ್ಲಿ ಅಡಗಿರುವ ಪ್ರತಿಭೆ ಹಾಗೆಯೇ ಮುರುಟಿ ಹೋಗುವುದೂ ಉಂಟು..ಇಂತಹ ಸಮಯದಲ್ಲಿ ಆತ್ಮೀಯ ಗೆಳತಿಯರು ಪ್ರೋತ್ಸಾಹ, ಮೆಚ್ಚುಗೆಯ ನುಡಿಗಳನಾಡಿ, ಬೆಂಬಲಿಸಿ ಆಕೆಯಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿ, ಅವಳ ಪ್ರತಿಭೆಯನ್ನು ಅರಳಿಸಬಲ್ಲರು.

ಮುಂಬಯಿ ಮಾಯಾನಗರಿ ರಾತ್ರಿ ನಿದ್ರಿಸದ ಸದಾ ಓಡುತ್ತಲೇ‌ ಇರುವ‌ ನಗರವೆಂದೇ ಪ್ರಸಿದ್ಧಿ ಪಡೆದಿದೆ..
ಇಲ್ಲಿಯ ಜೀವನವೇ ಗತಿಯ ಮೇಲೆ ಸ್ಥಿರವಾಗಿದೆ. ಕೆಲಸ, ಕುಟುಂಬ, ಹಿತ-ಅಹಿತಗಳ ನಡುವೆಯೂ ಮುಂಬಯಿಯ ಮಹಿಳೆಯರು ತಮ್ಮ ಸ್ನೇಹಕ್ಕೆ ಮತ್ತು ಖುಷಿಗೆ ಒಂದು ವಿಶಿಷ್ಟ ಅವಕಾಶವನ್ನು ಹುಡುಕುತ್ತಾರೆ..
ಸಮಾನ ಮನಸ್ಕ ‌ಗೆಳತಿಯರೊಡನೆ ಮನಸಾರೆ ಹರಟಿ,ನಕ್ಕು ನಲಿಯವ‌ ಒಂದು ಸುವರ್ಣ ಅವಕಾಶವೇ ಈ ಕಿಟ್ಟಿಪಾರ್ಟಿ ಎನ್ನಬಹುದು..

ಕಿಟ್ಟಿ ಪಾರ್ಟಿ ಎಂಬುದು ಸಾಮಾನ್ಯವಾಗಿ  ಮಹಿಳೆಯರಿಗಾಗಿಯೇ ರಚಿಸಲ್ಪಟ್ಟ ವಿಶೇಷ ಸ್ನೇಹ ಕೂಟ. ಹನ್ನೆರಡು ಸಮಾನ ಮನಸ್ಕ ಗೆಳತಿಯರ ಗುಂಪು..ಪ್ರತಿ ತಿಂಗಳಲ್ಲಿ ಒಮ್ಮೆ ನಿರ್ಧರಿಸಿದ ದಿನದಂದು ಈ ಗುಂಪಿನ ಯಾರಾದರೂ ಒಬ್ಬರ ಮನೆಯಲ್ಲಿ ಎಲ್ಲರೂ ಭೇಟಿಯಾಗಿ ತಮ್ಮ ಸುಖ ದುಃಖಗಳನ್ನು, ವಿವಿಧ ಅನುಭವಗಳನ್ನು, ಹಂಚಿಕೊಂಡು, ಸಂಗೀತ, ಸಾಹಿತ್ಯ, ಸಿನಿಮಾ ನಾಟಕಗಳ ಬಗ್ಗೆ ಮುಕ್ತಮನದಿಂದ ಚರ್ಚಿಸಿ, ಆನಂದಿಸುವ ಒಂದು ರೀತಿಯ ಮಾಸಿಕ ಸಭೆ.. ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ನಂತರ  ೩-೪ ಗಂಟೆಗಳ ಕಾಲ ವಿಶ್ರಾಂತಿ ಪಡೆದು ಗೆಳತಿಯರೊಡನೆ ಉತ್ತಮ ರೀತಿಯಿಂದ ಸಮಯ ವಿನಿಯೋಗಿಸಲಿಕ್ಕಾಗಿಯೇ ವಿನ್ಯಾಸಗೊಂಡ ಸುಂದರ ಸ್ನೇಹ ಸಮ್ಮೇಳನವಿದು ಎನ್ನಬಹುದು. ‌

ಕಿಟ್ಟಿ ಪಾರ್ಟಿಯಲ್ಲಿ ಪ್ರತಿ ತಿಂಗಳು ನಿಗದಿತ ಹಣವನ್ನು ಒಂದೆಡೆ ಕೂಡಿಸಿ ಇಡುತ್ತಾರೆ. ಈ ಸಂಗ್ರಹಿತ ಹಣವನ್ನು ಅಗತ್ಯವಿರುವ ಗುಂಪಿನ ಒಬ್ಬಳು ಸದಸ್ಯೆಯ ಹೆಸರಿನಲ್ಲಿ ಇಡಲಾಗುತ್ತದೆ.
ಆಕೆ ಗುಂಪಿನ ಎಲ್ಲರಿಗೂ ಔತಣಕೂಟ ಏರ್ಪಡಿಸಿ ಆಮಂತ್ರಣ ನೀಡುತ್ತಾಳೆ.
ಆ ದಿನದಂದು ಸಂಗ್ರಹಿತ ಮೊತ್ತವನ್ನು ಆಕೆಗೆ ನೀಡಲಾಗುತ್ತದೆ..
ಮುಂದಿನ ತಿಂಗಳು ಇನ್ನೊಬ್ಬಳ ಸರದಿ..ಹೀಗೇ ಒಂದು ವರ್ಷದಲ್ಲಿ ಹನ್ನೆರಡು ಗೆಳತಿಯರೂ ಹಣ ಪಡೆದು ಔತಣಕೂಟ ಏರ್ಪಡಿಸಿ ಮನಸಾರೆ ಆನಂದಿಸುತ್ತಾರೆ..ಗೃಹಿಣಿಯ ಕೈಯಿಂದ ಪ್ರತಿ ತಿಂಗಳು ಸ್ವಲ್ಪ ಹಣ ಉಳಿತಾಯ ಆಗಿ ಒಂದೇ ಬಾರಿಗೆ ದೊಡ್ಡ ಮೊತ್ತ ಆಕೆಯ ಕೈ ಸೇರುತ್ತದೆಂಬುದು ಇಲ್ಲಿ ವಿಶೇಷವಾದರೂ, ನಿಜವಾಗಿ ಹೇಳಬೇಕೆಂದರೆ ಇಲ್ಲಿ ಹಣ ನಗಣ್ಯ..ದಿನದಿಂದ ದಿನಕ್ಕೆ ಸಖಿಯರ ಆತ್ಮೀಯತೆ, ಸ್ನೇಹ ವಿಶ್ವಾಸಗಳು ವೃದ್ಧಿಯಾಗುತ್ತ ರಕ್ತಸಂಬಂಧಕ್ಕಿಂತಲೂ ಹೆಚ್ಚಿನ ಸುಮಧುರ ಬಾಂಧವ್ಯ ನಿರ್ಮಾಣವಾಗುತ್ತದೆ ಎಂಬುದು ಮಹತ್ವದ ವಿಷಯವಾಗಿದೆ..

ಕಳೆದ ಇಪ್ಪತ್ತು ವರ್ಷಗಳಿಂದ ನನ್ನೀ ಅತ್ಯಂತ ಆಪ್ತ ಪ್ರೀತಿಯ ಗೆಳತಿಯರೊಡನೆ ಕಿಟ್ಟಿ ಪಾರ್ಟಿ ಯಾವುದೇ ರೀತಿಯ ಅಡೆ ತಡೆಗಳಿಲ್ಲದೆ ಸುವ್ಯವಸ್ಥಿತವಾಗಿ ನಡೆಯುತ್ತಿದೆ..
ಪ್ರತಿ ಸೋಮವಾರ ಮಧ್ಯಾಹ್ನ ೩ ರಿಂದ ೫ ರವರೆಗೆ ನಮ್ಮ ಗುಂಪಿನವರೆಲ್ಲರೂ ಕೂಡಿ ಮನೆಯಲ್ಲಿ ಸತ್ಸಂಗ, ಏರ್ಪಡಿಸಿ..ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಗಣಪತಿ ಅಥರ್ವ ಶೀರ್ಷ, ಲಿಂಗಾಷದಟಕಂ, ಬಿಲ್ವಾಷ್ಟಕಂ, ದೇವಿ ಮಹಾತ್ಮೆಗಳ ಪಾರಾಯಣ ಮಾಡುತ್ತೇವೆ..ಕೊರೋನ ಖಾಯಿಲೆಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಆನ್ ಲೈನ್ ಸತ್ಸಂಗ ಮಾಡುತ್ತಿದ್ದೆವು..
ಈ ಸ್ನೇಹದೊಡನೆ ನಮ್ಮ ಹನ್ನೆರಡು ಕುಟುಂಬಗಳ ಬಾಂಧವ್ಯವೂ ಬೆಳೆದು ಭದ್ರವಾಗಿರುವುದು ನನಗೆ ಹೆಮ್ಮೆಯ ವಿಷಯ..ನನ್ನೆಲ್ಲ ಕಷ್ಟ ಸುಖಗಳಲ್ಲಿ ಕೈ ನೀಡಿ, ಸೋದರಿಯರಂತೆ ಸಾಥ್ ನೀಡುವ,ಕರೆದೊಡನೇ ಓಡಿ ಬರುವ, ನನ್ನ ಆನಂದದ ಕ್ಷಣಗಳನ್ನು ತಮ್ಮದೆಂಬಂತೆ ಸಂಭ್ರಮಿಸುವ ಇಂತಹ ಸುಸಂಸ್ಕೃತ, ವಾತ್ಸಲ್ಯಮಯಿ ಗೆಳತಿಯರು ನನಗೆ ಪ್ರಾಪ್ತರಾಗಿದ್ದು ನನ್ನ ಪೂರ್ವಜನ್ಮದ ಪುಣ್ಯವೆಂದೇ ನನ್ನ ಭಾವನೆ..

ಮುಂಬಯಿಯ ಕಿಟ್ಟಿ ಪಾರ್ಟಿ ಎಂದರೆ ಸ್ನೇಹದ ಉತ್ಸವ, ಮೋಜಿನ ಕ್ಷಣಗಳು, ಹಾಗೂ ಮಹಿಳಾ ಸಬಲೀಕರಣದ ವೇದಿಕೆ! ಇದು ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವ ಒಂದು ಪುಟ್ಟ ಹಬ್ಬ. ಉತ್ತಮ ಬದಲಾವಣೆ, ಬೆಳವಣಿಗೆಗಳಿಗೆ ಅವಕಾಶ ‌ನೀಡುವ ಸಕಾರಾತ್ಮಕ ಚಟುವಟಿಕೆ..

ನೀವೂ ಸಹ ನಿಮ್ಮ ಆತ್ಮೀಯ ಸ್ನೇಹಿತೆಯರೊಂದಿಗೆ ಕಿಟ್ಟಿ ಪಾರ್ಟಿ ಆಯೋಜಿಸಿ, ಅದನ್ನು ವಿಶೇಷವಾಗಿ ಆಚರಿಸಿ, ಸ್ನೇಹದ ಈ ಸುಗ್ಗಿಯನ್ನು ಸದಾ ಹಸಿರಾಗಿ ಇರಿಸೊಕೊಳ್ಳಿ…


Leave a Reply

Back To Top