
ಧಾರಾವಾಹಿ75
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಮಧು ಮೇಹದ ಮಾತ್ರೆ ಕೊಳ್ಳಲು ಸಾದ್ಯವಿರದ ಸುಮತಿಯ ಪಾಡು

ಊಟದ ಮಾಡಿದ ನಂತರ ಸ್ವಲ್ಪ ಸುಸ್ತು ಕಡಿಮೆ ಆದಂತೆ ಅನಿಸಿ ತಾನು ಮೊದಲು ನಿಂತಿದ್ದ ಸರತಿಯ ನಡುವಲ್ಲಿ ಬಂದು ನಿಂತಳು. ರೋಗಿಗಳು ಒಬ್ಬೊಬ್ಬರಾಗಿ ವೈದ್ಯರನ್ನು ಭೇಟಿ ಮಾಡಿ ಬರುತ್ತಿದ್ದರು. ಸುಮತಿಯನ್ನು ಕರೆದಾಗ ಚೀಟಿಯನ್ನು ಹಿಡಿದು ವೈದ್ಯರು ಇದ್ದ ಕೋಣೆಗೆ ಹೋದಳು.
ಸುಮತಿ ಕೊಟ್ಟ ಚೀಟಿಯನ್ನು ನೋಡಿದರು. ಅದರಲ್ಲಿ ದಂತವೈದ್ಯರು ಬರೆದ ಶಿಫಾರಸ್ಸು ಕೂಡಾ ಇತ್ತು. ಜೊತೆಗೆ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯ ಚೀಟಿಯನ್ನು ಗಮನಿಸಿದರು. ಕೆಲ ಕ್ಷಣ ಮೌನವಾಗಿದ್ದು….” ಸುಮತಿ ನಿಮಗೆ ಮಧುಮೇಹವಿರುವುದು ಈ ಪರೀಕ್ಷೆಗಳಿಂದ ದೃಢವಾಗಿದೆ. ಮೂತ್ರದಲ್ಲಿ ಇರುವ ಸಕ್ಕರೆಯ ಅಂಶವನ್ನು ನೋಡಿದರೆ ನಿಮಗೆ ಮಧುಮೇಹವು ಶುರುವಾಗಿ ಬಹುಶಃ ವರ್ಷಗಳು ಆಗಿರಬೇಕು ಎಂದು ಅನಿಸುತ್ತಿದೆ….ನಿಮಗೆ ಯಾವಾಗಿನಿಂದ ಹೆಚ್ಚಿನ ಆಯಾಸ, ಹಸಿವು, ನೀರಡಿಕೆ, ಹೆಚ್ಚು ಮೂತ್ರ ಹೋಗುವುದು ಇವೆಲ್ಲಾ ಪ್ರಾರಂಭವಾಗಿವೆ ಎಂದು ನೆನಪಿದೆಯೇ?”…. ಎಂದು ವೈದ್ಯರು ಕೇಳಿದರು.
ವೈದ್ಯರ ಪ್ರಶ್ನೆಗೆ ಕೆಲ ಕ್ಷಣಗಳು ಆಲೋಚಿಸುತ್ತಾ”…. ಸರ್ ಬಹುಶಃ ಮೂರು ವರ್ಷಗಳಿಂದ ಅನಿಸುತ್ತಿದೆ….
ಎಂದು ಸುಮತಿ ಉತ್ತರಿಸಿದಳು….” ನಿಮ್ಮ ಜೊತೆ ಯಾರೂ ಬರಲಿಲ್ಲವೇ?….ಎಂದು ಕೇಳುತ್ತಾ ಸುಮತಿಯನ್ನು ಒಮ್ಮೆ ದಿಟ್ಟಿಸಿ ನೋಡಿದರು. ಅವಳ ಬೋಳಾದ ಹಣೆ ಕುತ್ತಿಗೆಯಲ್ಲಿ ಮಾಂಗಲ್ಯ, ಕೈಯಲ್ಲಿ ಬಳೆಗಳು ಇಲ್ಲದಿರುವುದನ್ನು ಕಂಡು ಓಹ್!! ಈಕೆ ವಿಧವೆ ಎಂಬುದನ್ನು ಅರಿತರು. ಆದರೂ ಬೇರೆ ಯಾರಾದರೂ ಜೊತೆಗೆ ಬಂದಿರಬಹುದು ಎಂದುಕೊಳ್ಳುತ್ತಾ ಈ ಪ್ರಶ್ನೆಯನ್ನು ಕೇಳಿದ್ದರು. ವೈದ್ಯರ ಪ್ರಶ್ನೆಗೆ ಇಲ್ಲ ಎನ್ನುವಂತೆ ತಲೆಯಾಡಿಸಿದಳು….”ಸರ್ ನನ್ನ ಪತಿ ತೀರಿಹೋಗಿ ಈಗ ಏಳು ವರ್ಷಗಳು ಕಳೆದವು….ನನ್ನ ಮಕ್ಕಳು ಇನ್ನೂ ಚಿಕ್ಕವರು. ಅವರನ್ನು ಮನೆಯಲ್ಲಿ ಬಿಟ್ಟು ಬಂದಿರುವೆ”…. ಎಂದಳು.
ಅವಳ ಮಾತುಗಳನ್ನು ಕೇಳಿ ಅವಳ ಪರಿಸ್ಥಿತಿ ಎಂತಹುದು ಇರಬಹುದೆಂದು ವೈದ್ಯರಿಗೆ ಸ್ವಲ್ಪ ಮಟ್ಟಿಗೆ ಅರ್ಥವಾಯಿತು.
ಹೌದಾ ಛೇ!!…ದಯವಿಟ್ಟು ಕ್ಷಮಿಸಿ ಎಂದು ಹೇಳಿ….ಸುಮತಿಯವರೆ ನಾನು ಹೇಳುವುದನ್ನು ಗಮನವಿಟ್ಟು ಕೇಳಿ….ನಿಮ್ಮ ಆರೋಗ್ಯ ಸುಧಾರಿಸಬೇಕೆಂದರೆ ನೀವು ಒಳ್ಳೆಯ ಪೌಷ್ಟಿಕ ಆಹಾರವನ್ನು ಸೇವಿಸಬೇಕು…. ನಾರಿನ ಅಂಶವಿರುವ ತರಕಾರಿ ಹಣ್ಣುಗಳನ್ನು ಸೇವಿಸಬೇಕು…. ಅನ್ನವನ್ನು ಮಿತವಾಗಿ ಸ್ವಲ್ಪ ಕಡಿಮೆಯೇ ತಿನ್ನಬೇಕು…. ಗೋಧಿ ರಾಗಿಯಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಬೇಕು…. ಸಕ್ಕರೆಯಿಂದ ಮಾಡಿದ ಸಿಹಿ ತಿನಿಸುಗಳನ್ನು ವರ್ಜಿಸಬೇಕು…. ಜೀವನ ಶೈಲಿ ಹಾಗೂ ಆಹಾರಕ್ರಮವನ್ನು ಬದಲಾಯಿಸಬೇಕು….ಲಘು ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು…. ಅದು ನಡಿಗೆಯಾದರೂ ಸರಿ….
ಹೆಚ್ಚು ನೀರು ಕುಡಿಯಬೇಕು….ಚೆನ್ನಾಗಿ ನಿದ್ರಿಸಬೇಕು….
ಅತಿಯಾಗಿ ಚಿಂತೆ ಮಾಡಬಾರದು….ಇವೆಲ್ಲದರ ಜೊತೆಗೆ ನಾನು ಬರೆದುಕೊಡುವ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು….ನಿಮ್ಮ ಶರೀರದಲ್ಲಿ ಸಕ್ಕರೆಯ ಅಂಶದ ನಿಯಂತ್ರಣವಿರಬೇಕು….ಆಗಲೇ ದಂತ ವೈದ್ಯರು ನಿಮ್ಮ ಹಲ್ಲುಗಳನ್ನು ಕೀಳಲು ಸಾಧ್ಯ…ನಾನು ಈಗ ಹೇಳಿದ ಎಲ್ಲವನ್ನೂ ಜೀವನ ಪರ್ಯಂತ ಪಾಲಿಸಬೇಕು. ಸಕ್ಕರೆ ಖಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಆಗದು….ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು….ಖಾಯಿಲೆ ಉಲ್ಬಣಗೊಳ್ಳದಂತೆ ಸದಾ ಎಚ್ಚರಿಕೆ ವಹಿಸಬೇಕು…ಎಂದರು. ವೈದ್ಯರು ಹೇಳಿದ ಮಾತುಗಳನ್ನು ಕೇಳುತ್ತಿದ್ದ ಸುಮತಿಗೆ ತಲೆಯಲ್ಲಿ ಹಲವಾರು ಯೋಚನೆ ಒಂದೇ ಸಮನೆ ಮೂಡಿ ಮಾಯವಾಗುತ್ತಿತ್ತು. ವೈದ್ಯರು ಹೇಳಿದ ಎಲ್ಲವನ್ನೂ ನಾನು ಪಾಲಿಸಲು ಸಾಧ್ಯವೇ?
ತಾನು ಇಂದು ಕಡು ಬಡತನದಲ್ಲಿ ಇದ್ದೇನೆ. ವೈದ್ಯರು ಸೂಚಿಸಿದ ಹಾಗೆ ಪೌಷ್ಟಿಕ ಆಹಾರವನ್ನು ನಾನು ತೆಗೆದುಕೊಳ್ಳಲು ಸಾಧ್ಯವೇ? ಜೊತೆಗೆ ಜೀವನ ಪರ್ಯಂತ ಅವರು ಹೇಳಿದಷ್ಟು ಮಾತ್ರೆಗಳನ್ನು ಖರೀದಿಸಿ ಸೇವಿಸಲು ಸಾಧ್ಯವೇ?
ನನಗೆ ಬರುವ ಸಂಬಳವೂ ಅತೀ ಕಡಿಮೆ!! ಅದರಲ್ಲೂ ನಾಲ್ವರು ಹೆಣ್ಣುಮಕ್ಕಳಲ್ಲಿ ನಡುವಿನ ಇಬ್ಬರು ಅನಾಥಾಶ್ರಮದಲ್ಲಿ ಇದ್ದಾರೆ. ಆದರೆ ಇನ್ನುಳಿದ ಇಬ್ಬರು ಮಕ್ಕಳು ನನ್ನ ಜೊತೆ ಇದ್ದಾರೆ. ಅವರಿಗೆ ಹಾಗೂ ನನಗೆ ಊಟ ಬಟ್ಟೆ ಎಲ್ಲವೂ ಇದೇ ಸಂಬಳದಿಂದ ಆಗಬೇಕು.
ಇದರ ನಡುವೆ ನನ್ನ ಚಿಕಿತ್ಸೆಗಾಗಿ ಏನು ಮಾಡಲಿ? ಎಂದು ಸುಮತಿ ಯೋಚಿಸುತ್ತಿರುವಾಗ…”ಸುಮತಿಯವರೆ ನನ್ನ ಮಾತುಗಳು ನೆನಪಿದೆ ತಾನೇ?…ಎನ್ನುವ ವೈದ್ಯರ ನುಡಿ ಅವಳನ್ನು ವಾಸ್ತವಕ್ಕೆ ತಂದಿತು….”ನೆನಪಿದೆ ಸರ್ ಆದರೆ
ನಾನು ಒಬ್ಬ ಬಡ ಶಿಕ್ಷಕಿ…ಕಾಫಿ ತೋಟದಲ್ಲಿ ದುಡಿಯುವ ಕೂಲಿ ಕಾರ್ಮಿಕರ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು ನನ್ನ ಕೆಲಸ…. ನನ್ನದು ಸರ್ಕಾರಿ ನೌಕರಿಯೂ ಅಲ್ಲ….ನನ್ನ ಪರಿಸ್ಥಿತಿಯನ್ನು ಅರಿತ ಎಸ್ಟೇಟಿನ ಮಾಲಿಕರು ನನಗಾಗಿ ಈ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದಾರೆ….ಬರುವ ಕಡಿಮೆ ಸಂಬಳದಲ್ಲಿ ಮೂವರ ಹೊಟ್ಟೆ ತುಂಬಬೇಕು…. ಇನ್ನು ನನ್ನ ಚಿಕಿತ್ಸೆಗಾಗಿ ನಾನು ಹಣವನ್ನು ಎಲ್ಲಿಂದ ಹೊಂದಿಸಲಿ ಎಂಬ ಚಿಂತೆಯಾಗಿದೆ”….ಎಂದು ವೈದ್ಯರನ್ನು ದಯನೀಯವಾಗಿ ನೋಡಿದಳು. ಸುಮತಿಯ ಮಾತುಗಳನ್ನು ಕೇಳಿದ ವೈದ್ಯರ ಮನದಲ್ಲಿ ಅಯ್ಯೋ!! ಎಂತಹಾ ಸ್ಥಿತಿ ಈ ಹೆಣ್ಣಿನದು!! ಎಂದುಕೊಳ್ಳುತ್ತಾ….”ಸುಮತಿಯವರೇ….ಈಗ ಸಧ್ಯಕ್ಕೆ ನನ್ನ ಬಳಿ ಇರುವ ಸ್ಯಾಂಪಲ್ ಮಾತ್ರೆಗಳನ್ನೇ ನಿಮಗೆ ಕೊಡುತ್ತಿದ್ದೇನೆ”…. ಇವುಗಳನ್ನು ತೆಗೆದುಕೊಳ್ಳಿ…. ಮಧುಮೇಹದ ಮಾತ್ರೆಗಳು ನಮ್ಮಲ್ಲಿ ಇಲ್ಲ….ಇದು ಸರ್ಕಾರಿ ಆಸ್ಪತ್ರೆ….ಇಲ್ಲಿ ಚಿಕಿತ್ಸೆ ಉಚಿತ ಹಾಗೂ ಕೆಲವು ಚುಚ್ಚುಮದ್ದುಗಳು ಮತ್ತು ಔಷಧಿಗಳೂ ಉಚಿತ….ಆದರೆ ಎಲ್ಲಾ ಔಷಧಿಗಳು ಇಲ್ಲಿ ದೊರೆಯದು…ನೀವು ಹೊರಗಿನ ಔಷಧಾಲಯಗಳಲ್ಲಿ ಕೊಂಡುಕೊಳ್ಳಬೇಕಾಗುತ್ತದೆ”…. ಎಂದು ಹೇಳುತ್ತಾ ಮೇಜಿನ ಡ್ರಾಯರ್ ನಿಂದ ಒಂದು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಸುಮತಿಯ ಮುಂದೆ ಹಿಡಿದರು.
ಸುಮತಿಯು ಆ ಮಾತ್ರೆಗಳನ್ನು ಪಡೆದು ವೈದ್ಯರಿಗೆ ಕೃತಜ್ಞತೆಯಿಂದ ಕೈ ಮುಗಿದು ಹೊರಡಲು ಅನುವಾದಳು.
ಆಗ ವೈದ್ಯರು….” ಪ್ರತೀ ತಿಂಗಳೂ ಬಂದು ರಕ್ತ ಮೂತ್ರದ ಪರೀಕ್ಷೆಯನ್ನು ಮಾಡಿಸಿ, ಅದರ ವರದಿಯ ಜೊತೆಗೆ ತಪ್ಪದೇ ನನ್ನನ್ನು ಬಂದು ಕಾಣಬೇಕು….ನಿಯಮಿತ ತಪಾಸಣೆ ಕೂಡಾ ಮುಖ್ಯ”…. ಎಂದು ನೆನಪಿಸಿದರು. ಮೂತ್ರ ಪರೀಕ್ಷೆ ಮಾಡುವ ಸ್ಟ್ರಿಪ್ ಗಳನ್ನೂ ಆಸ್ಪತ್ರೆಯ ಔಷಧಾಲಯದಿಂದ ಕೊಡಿಸಿ, ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನೂ ವಿವರಿಸಿದರು. ವೈದ್ಯರು ಕೊಟ್ಟ ಮಾತ್ರೆಗಳು ಹಾಗೂ ಸ್ಟ್ರಿಪ್ ಗಳನ್ನು ಪಡೆದು ವೈದ್ಯರಿಗೆ ಕೈ ಮುಗಿದು ಕೊಠಡಿಯಿಂದ ಹೊರಗೆ ಬಂದಳು. ಹಾಗೆ ಬಂದವಳು ಸ್ವಲ್ಪ ಹೊತ್ತು ಆಲ್ಲಿನ ಬೆಂಚಿನ ಮೇಲೆ ಕುಳಿತಳು. ಅಳು ಉಕ್ಕಿ ಬರುತ್ತಿತ್ತು. ಆದರೆ ಅಲ್ಲಿ ಸುತ್ತಮುತ್ತ ಜನರು ಇದ್ದ ಕಾರಣ ಜೋರಾದ ನಿಟ್ಟುಸಿರಿನೊಂದಿಗೆ ಕಣ್ಣು ಮುಚ್ಚಿ ಕುಳಿತಳು. ಅಲ್ಲಿದ್ದ ಇತರ ರೋಗಿಗಳು ಇವಳು ಹೀಗೇಕೆ ಕುಳಿತಿರುವಳು ಪಾಪ!! ಏನೋ ತೀವ್ರ ಸ್ವರೂಪದ ಖಾಯಿಲೆ ಇರಬಹುದು. ಹಾಗಾಗಿ ಈಕೆ ನೊಂದಂತೆ ಕಾಣುತ್ತಾಳೆ ಎಂದು ಕೊಳ್ಳುತ್ತಾ ಸುಮ್ಮನಾದರು. ತನ್ನ ಮನಸ್ಸು ಸ್ವಲ್ಪ ತಹಬಂದಿಗೆ ಬಂತು ಎಂದು ಅನಿಸಿದಾಗ ಅಲ್ಲಿಂದ ಎದ್ದಳು. ದಂತ ವೈದ್ಯರಲ್ಲಿಗೆ ಹೋದಳು. ಫಿಸಿಷಿಯನ್ ಔಷಧಿಯನ್ನು ಬರೆದುಕೊಟ್ಟ ಚೀಟಿಯನ್ನು ಅವರಿಗೆ ತೋರಿಸುತ್ತಾ, ಅವರು ಹೇಳಿದ ಸಂಪೂರ್ಣ ವಿವರವನ್ನು ನೀಡಿದಳು. ಫಿಸಿಷಿಯನ್ ಹೇಳಿದಂತೆ ಮಾತ್ರೆಗಳನ್ನು ತೆಗೆದುಕೊಂಡು ಒಂದು ತಿಂಗಳ ನಂತ ಅವರು ಹೇಳಿದ ಪ್ರಕಾರಗಳ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಂಡು, ಶುಗರ್ ನಾರ್ಮಲ್ ಇದ್ದರೆ ಹಲ್ಲುಗಳಿಗೆ ಚಿಕಿತ್ಸೆಯನ್ನು ನೀಡುವುದಾಗಿ ಹೇಳಿದರು. ದಂತವೈದ್ಯರ ಮಾತಿಗೆ…”ಸರಿ ಸರ್”… ಎಂದು ಹೇಳಿ ಭಾರವಾದ ಹೆಜ್ಜೆಗಳನ್ನು ಇಡುತ್ತಾ ಆಸ್ಪತ್ರೆಯ ಆವರಣದಿಂದ ಹೊರಗೆ ಬಂದಳು. ಸಂತೆಗೆ ಹೋಗಿ ತರಕಾರಿ ಹಾಗೂ ಇತರೇ ಸಾಮಾಗ್ರಿಗಳನ್ನು ಖರೀದಿಸುವುದು ಇತ್ತು. ಹಾಗಾಗಿ ಸಂತೆಯ ಕಡೆಗೆ ನಡೆದಳು. ಆದರೆ ಅವಳ ಮನಸ್ಸು ಸಂಪೂರ್ಣ ಮಂಕಾಗಿಹೋಗಿತ್ತು.
