[ಟೀಚರ್ ಒಂದ ಮಾತು ನನ್ನ ಮಗಳು ಅಭ್ಯಾಸದಲ್ಲಿ ಹೇಗಿದ್ದಾಳೆ? ಪರೀಕ್ಷೆ ಹತ್ತಿರ ಬಂತು‌ ಪುಸ್ತಕ ಹಿಡಿದು ಓದಲ್ಲ,ಏನ್ ಕಾನ್ಫಿಡೆನ್ಸ್ ಗೊತ್ತಿಲ್ಲ,ಪರೀಕ್ಷೇಲಿ ಕಾಫಿ ಚೀಟಿಗೆ ಅವಕಾಶ ಇದೆಯಾ? ಅಥವಾ ನೋಡಿ,ಕೇಳಿ ಬರಿತಾರಾ? ಮನೆಯಲ್ಲಿ ಒಂದ ಮಾತು ಕೇಳೊದಿಲ್ಲ,ಹಿರಿಯರು ಕಿರಿಯರು ಅನ್ನೊದ ನೋಡದೆ ಬಾಯಿಗೆ ಬಂದ ಹಾಗೆ ಮಾತಾಡತಾಳೆ. ಮಾತಿಗೆ ಮಾತು ಬೆಳೆಸುತ್ತಾಳೆ.ಹುಡುಗಿ ಚಿಕ್ಕವಳಲ್ಲ,ಹೊಡೆಯಲು ಮನಸ್ಸು ಬರೋದಿಲ್ಲ…ಆದ್ರೆ ಕಲಿಯಲು ಹಿಂದಿದ್ದಾಳೆ ಅನ್ನಿಸ್ತಿದೆ.ಇಂಗ್ಲಿಷ್, ಗಣಿತ,ವಿಜ್ಞಾನ ಸ್ವಲ್ಪ ಡಲ್ ಅನಿಸುತ್ತೆ..ಅವಳು ನಮ್ಮೊಂದಿಗೆ ಇದ್ದಿದ್ದಕ್ಕೆ ಹೀಗೆ ಆಗಿದಾಳಾ? ಅದಕೆ ಅವಳನ್ನು ಬೇರೆ ಕಡೆ ಹಾಕಬೇಕು ಅಂತ ವಿಚಾರ ಮಾಡತಿದ್ದಿನಿ…! ಏನಾದರೂ ಬೈದರೆ,ತಂಗಿಗೆ ಚೊಲೊ ಮಾಡಿತಿರಿ,ನನ್ನ ಮೇಲೆ ನಿಮಗೆ ಪ್ರೀತಿನೆ ಇಲ್ಲ..ಏನೇನೋ ಮಾತಾಡತಾಳೆ…ಪರೀಕ್ಷೆಲಿ ಏನು ಸಹಾಯ ಮಾಡಬೇಡಿ….ಅವಳ ಅಭ್ಯಾಸ ನನಗೆ ತೃಪ್ತಿ ಇಲ್ಲ!. ಹುಡುಗಾಟಿಕೆ,ತಮಾಷೆಯಲ್ಲೆ ಇರತಾಳೆ..ಸಿರಿಯಸ್ನೆಸ್ ಇಲ್ಲ..ಅದಕೆ ಅವಳಿಗಿಂತ ನಮಗೆ‌ ಟೆನ್ನಶನ್ ಜಾಸ್ತಿ!.

ಮತ್ತೆ ಶಾಲೆಯಲ್ಲಿ ಮಕ್ಕಳು ಕೆಟ್ಟ ಕೆಟ್ಟ ಮಾತು ಆಡತಾರ..ಯಾಕೆಂದರೆ ಮನೆಯಲ್ಲಿ ಅವಳು ಮಾತಾಡೋದನ್ನು ನೋಡಿದಿವಿ..ಬೈದರೆ.ಟೀಚರ್ ಗೆ ಹೇಳತೆವೆ ಅಂದ್ರೆ ನೀವು ಹೇಳೋದ ಬೇಡ ನಾ ಹೇಳಕೋತೆ…ಅಂತ ಹೇಳುವಾಗ,ಶಿಕ್ಷಕರ ಬಗ್ಗೆ ಹಗುರವಾಗಿ ಮಾತಾಡುವಾಗ ನಮಗೆ ಇದು ಯಾಕೆ ಹೀಗೆ? ಯಾರ ಅಥವಾ ಯಾವುದರ ಬಗ್ಗೆಯೂ ಗಂಭೀರತೆ ಇಲ್ಲ..ನಮಗೆ ಅವಳ ಭವಿಷ್ಯದ ಬಗ್ಗೆ ಚಿಂತೆಯಾಗಿದೆ.ಶಾಲೆಯಲ್ಲಿ ಮಕ್ಕಳು ಮನೆಯಲ್ಲಿ ಮಾತಾಡುವ ಭಾಷೆಯಲ್ಲಿ ಕೆಟ್ಟ ಪದಗಳನ್ನು ಬಳಸುತ್ತಿರುವುದು ಯಾಕೋ ಏನೋ ನಮಗೆ ತಲೆಬಿಸಿಯಾಗಿದೆ.ನಿಮ್ಮ ಹೆದರಿಕೆ ಇದೆ,ಆದ್ರೆ ನೀವೊಬ್ಬರ ಭಯ ಸಾಕಾಗಲ್ಲ!. ನನ್ನ ಮಗಳ ಮಾತು ಕಥೆ ಯಾವುದು ಮಕ್ಕಳ ತರ ಇಲ್ಲ….ನಮಗೆ ಚಿಂತೆಯಾಗಿದೆ.ಅಂದಾಗ ಯಾಕೋ ಏನೋ ಇದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ನನಗೆ ಅನಿವಾರ್ಯವಾಯಿತು.

ಈಗಿನ ಮಕ್ಕಳು ನಿಜವಾಗಿಯೂ ಮಕ್ಕಳಂತಿರುವರೇ?
ತರಗತಿಯಲ್ಲಿ ಮಕ್ಕಳು ನಮ್ಮೊಂದಿಗೆ ಹೇಗೆಲ್ಲ ಇರುತ್ತಾರೆ? ಶಿಕ್ಷಕರಿಗೆ ಮಕ್ಕಳ ಮೇಲೆ ಎಷ್ಟೆಲ್ಲ ಪ್ರೀತಿ,ಕಾಳಜಿ,ವಿಶ್ವಾಸ ಮತ್ತು ತಮ್ಮ ಮನೆ ಮಕ್ಕಳಿಗಿಂತ ಹೆಚ್ಚು ಶಾಲೆಯ ಮಕ್ಕಳನ್ನು ಹಚ್ಚಿಕೊಂಡಿರುತ್ತಾರೆ ಎಂಬ ವಿಷಯ ಯಾರು ಅಲ್ಲಗಳೆಯುವಂತಿಲ್ಲ.ಆದರೆ ಮಕ್ಕಳು ಶಿಕ್ಷಕರೊಂದಿಗೆ ಬೆರೆವ ಬಾಂಧವ್ಯದಲ್ಲಿ ಹುಳಿ ಹಿಂಡುತ್ತಿರುವವರಾರು? ಭಾವಿ ಭವಿಷ್ಯದ ಕೂಸುಗಳು ನಮಗರಿವಿಲ್ಲದೇ ನಮ್ಮ ಬೆನ್ನ ಹಿಂದೆ ದೋಷಾರೋಪಣೆ ಮಾಡುವ ಮತ್ತು ಬೈಗುಳದ ಅರ್ಥ ಗೊತ್ತಿಲ್ಲದೇ ಅದನ್ನು ಪುನಃ ಉಚ್ಚಾರಣೆ ಮಾಡುವ ಮಕ್ಕಳ ಮುಗ್ದ ಮನಸ್ಸು ಈಗಿಂದಲೇ ಬದಲಾಗುತ್ತಿರುವುದನ್ನು ಹತೋಟಿಗೆ ತರದಿದ್ದರೆ,ತಪ್ಪನ್ನು ತಿದ್ದದಿದ್ದರೆ ಅದು ಬೆಳೆದು ಹೆಮ್ಮರವಾಗುವುದಂತೂ ದಿಟ!.ಮಕ್ಕಳ ತುಂಟಾಟ,ಹಟ, ಗದ್ದಲ,ಜಗಳ,ಸುಳ್ಳುಗಳು,ಚಿಕ್ಕಪುಟ್ಟ ತಪ್ಪು, ಎಲ್ಲವೂ ತರಗತಿಯಲ್ಲಿ ಕಾಮನ್… ಆದರೆ ಕೆಲವೊಂದು ಮಕ್ಕಳಿಗೆ ಪಾಠಕ್ಕಿಂತ ಬೇಡದ ವಿಷಯಗಳಲ್ಲಿ ಆಸಕ್ತಿ ಜಾಸ್ತಿ.ಎಲ್ಲ ತರಹದ ಮಕ್ಕಳನ್ನು ನಿಭಾಯಿಸುವುದು ಒಬ್ಬ ಶಿಕ್ಷಕನಿಗೆ ಸವಾಲು!. ಪಾಪ ಮಕ್ಕಳು ದೇವರ ಸಮಾನ!. ಅವರಿಗೆ ವಾಸತಿಳಿಸಿಕೊಡಬೇಕು.ಅರ್ಥ ಅನರ್ಥಗಳ ಬಗ್ಗೆ ಗೊತ್ತಿಲ್ಲ. ಮನೆಯ ವಾತಾವರಣ ಮಕ್ಕಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಪಾಲಕರು ಅರಿತಿರಬೇಕು.

ಊರಿಗೊಂದು ಶಾಲೆ,ದೇವಾಲಯ ಎಷ್ಟು ಮುಖ್ಯ ಎಂಬುದನ್ನು ಬಲ್ಲವರು ಮಾತ್ರ ಬಲ್ಲರು..ಜ್ಞಾನ ಮತ್ತು ಭಕ್ತಿ ಇವು ಮನುಷ್ಯನ ಅಸ್ತಿತ್ವಕ್ಕೆ ಪ್ರಮುಖ ಕಾರಣಗಳು.ಪ್ರತಿಯಬ್ಬರಿಗೂ ಅವರದೇ ಆದ ಕೆಲಸಗಳು,ಒತ್ತಡಗಳು, ಕಷ್ಟಗಳು… ಆದರೆ ನಾಲಿಗೆ ಮಾತ್ರ ಏನು ಮಾತಾಡುತ್ತದೆ ಎಂಬುದು ಉಹಿಸಿದಷ್ಟು ಪದಗಳು ಸರಾಗವಾಗಿ ಹರಿದು ಬಂದಾಗ, ಮನೆಯಲ್ಲಿ ಆಗ ತಾನೆ ಮಾತು ಕಲಿಯುತ್ತಿರುವ ಮಕ್ಕಳಿಗೆ ಸುಲಭವಾಗಿ ಕಿವಿಗಳ ಮೂಲಕ ಮೆದುಳನ್ನು ಪ್ರವೇಶಿಸಿ ಶಾಶ್ವತ ಸ್ಥಾನ ಪಡೆದಿರುವುದು ಕೆಲವೊಮ್ಮೆ ಅವರಾಡುವ ಮಾತುಗಳಲ್ಲಿ ವ್ಯಕ್ತವಾಗುತ್ತದೆ.ಮಕ್ಕಳ ಮುಂದೆ ಪಾಲಕರು ಜಗಳವಾಡುವುದನ್ನು ಬಿಟ್ಟರೆ ಒಳಿತು,ಕುಡಿದು ಬರುವುದು ಮಕ್ಕಳಿಗೆ ಯಾವ ಸಂದೇಶ ಕೊಡುತ್ತಿರಿ ಎಂಬ ಪ್ರಶ್ನೆ ಅವರೊಳಗೆ ಉತ್ತರ ಹುಡುಕಬೇಕಿದೆ. ಗುರುಹಿರಿಯರಿಗೆ ಗೌರವ ಕೊಡುವುದನ್ನು ಮನೆಯಲ್ಲಿ ಪಾಲಿಸದಿದ್ದರೆ, ಕಲಿಸದಿದ್ದರೆ ಕಲಿಯುವುದು ಹೇಗೆ?

ಮಕ್ಕಳನ್ನುಪ್ರೀತಿಸಬೇಕು,ಮುದ್ದಿಸಬೇಕು,ಸರಿತಪ್ಪುಗಳ ಬಗ್ಗೆ ತಿಳಿಸಿಕೊಡಬೇಕುಮೊಬೈಲ್ ಗಳಲ್ಲಿ ಮಕ್ಕಳು ಏನು ನೋಡುತ್ತಾರೆ? ರೀಲ್ಸ್ ನೋಡುವುದು ಮತ್ತು ಅದರಂತೆ ಅನುಕರಣೆ ಮಾಡುವುದನ್ನು ತಪ್ಪಿಸಬೇಕಿದೆ. ವಯೋಸಹಜತೆಗೆ ಯಾವುದು ಮುಖ್ಯ ಎಂಬುದನ್ನು ಮನೆಯಲ್ಲಿರುವವರು,ಅಜ್ಜ,ಅಜ್ಜಿ,ಚಿಕ್ಕಪ್ಪ ಚಿಕ್ಕಮ್ಮ ಹೀಗೆ ಎಲ್ಲರೂ ಜವಾಬ್ದಾರಿ ಹೊರಬೇಕು. ತಪ್ಪಿಗೆ ಶಿಕ್ಷೆಯನ್ನು ನೀಡುವ ಮೂಲಕ ಸುಧಾರಿಸಲು ಅವಕಾಶ ನೀಡಬೇಕು. ಹೆತ್ತವರಿಗೆ ಹೆಗ್ಗಣ ಮುದ್ದು, ಹಾಗಂತ ನಮ್ಮ ಮಕ್ಕಳು ಮಾಡಿದ್ದು ಸರಿ ಎಂಬ ವಾದಗಳೇ ಮಕ್ಕಳನ್ನು ತಪ್ಪು ಹಾದಿ ಹಿಡಿಯಲು ಕಾರಣವಾಗುತ್ತದೆ.ಮಕ್ಕಳು ಒಂದಿರಲಿ, ಎರಡಿರಲಿ ಸಂಸ್ಕಾರ ಮುಖ್ಯ..ಮನೆಯಲ್ಲಿ ಮಕ್ಕಳು ತಪ್ಪುಮಾಡಿದರೆ ತಾಯಿಗೆ ದೋಷಾರೋಪಣೆ ಮಾಡುತ್ತಾರೆ. ಅಮ್ಮ ಏನು ಕಲಿಸ್ತಾಳೆ? ಶಾಲೆಯಲ್ಲಿ ಮಕ್ಕಳು ತಪ್ಪುಮಾಡಿದಾಗ ಮಾಸ್ತರರು ಇದೆ ಕಲಿಸ್ತಾರಾ? ಮಕ್ಕಳ ತಪ್ಪುಗಳನ್ನು ಕ್ಷಮಿಸುವುದು,ಮಾರ್ಗದರ್ಶನ ನೀಡುವುದನ್ನು ಶಿಕ್ಷಕರು ಹೊಣೆಹೊತ್ತು ನಿರ್ವಹಣೆ ಮಾಡುತ್ತಾರೆ.ಹೇಗೆ ತಾಯಿ ಮನೆಯಲ್ಲಿ ಮಕ್ಕಳನ್ನು ತಿದ್ದುವುದರಲ್ಲೆ ಅವಳ ಜೀವನ ಕಳೆಯುವುದು.

ಒಟ್ಟಾರೆಯಾಗಿ ಹೇಳುವುದಾದರೆ ಮಕ್ಕಳ ಮನಸ್ಸು ಸಂಸ್ಕಾರದ ಹಾದಿಯಲ್ಲಿರುವಂತೆ ಪಾಲಕರು ತಮ್ಮ ಮನೋಭಾವವನ್ನು ತಿದ್ದಿಕೊಳ್ಳಬೇಕು.ಎಲ್ಲರ ಆಶಯ ತಮ್ಮ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ನೋಡಬೇಕೆನ್ನುವುದು.ಶಿಕ್ಷಣದ ಜೊತೆ ಮಗುವಿನ ಮೇಲೆ ಪ್ರಭಾವ ಬೀರುವ ಅಂಶಗಳಿಂದ ದೂರವಿಡಿ.ಈಗಿನ ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸುವಂತೆ ಬೆಳೆಸಿ.ನಿಮ್ಮೊಳಗಿನ ಒಳ್ಳೆಯ ಅಂಶಗಳನ್ನು ಮಾತ್ರ ನೀಡಿ.ಜಗಳ,ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತಾಡುವುದನ್ನು ನಿಲ್ಲಿಸಿ.ಹಿಂದೆ ಮಾತಾಡಿ ಮಕ್ಕಳ ಮನಸ್ಸನ್ನು ಘಾಸಿಮಾಡಬೇಡಿ…ಮಕ್ಕಳು ನೀರಿದ್ದ ಹಾಗೆ…ಯಾವ ಪಾತ್ರೆಗೆ ಹಾಕಿದರೂ ಆ ಪಾತ್ರೆಯ ಆಕಾರ ಪಡೆಯುವ ಮುಗ್ದ ಮನಸ್ಸು.. ಅಂತಹ ಪ್ರಾಮಾಣಿಕ ಪಾರದರ್ಶಕ ಪಟಲಕ್ಕೆ ಪಾಲಕರು ಕನ್ನಡಿಯಂತೆ ಸ್ಪಷ್ಟವಾಗಿರಿ..ಗೌರವಿಸುವುದನ್ನು ಮೊದಲು ಮನೆಯಲ್ಲಿ ಅಳವಡಿಸಿ..ಕಲಿಸುವ ಪಾಠಶಾಲೆಯಲ್ಲಿ ಶಿಕ್ಷಕರೊಂದಿಗೆ ಕೈಜೋಡಿಸಿ ಮಕ್ಕಳ ಸೃಜನಶೀಲತೆಯ ಬೆಳವಣಿಗೆಗೆ ಸಹಕರಿಸಿ…ಇಲ್ಲ ಸಲ್ಲದ ವಿಷಯಗಳಿಂದ ಭಾವಿ ಭವಿಷ್ಯಕ್ಕೆ ಪಾಲಕರು,ಸಮುದಾಯ ಅಡ್ಡಗೋಡೆಯಾಗದಿರಲಿ…ಮಕ್ಕಳು ದೇಶದ ಭವಿಷ್ಯ…. ಸರಿಯಾದ ಹಾದಿಯಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿ.


Leave a Reply

Back To Top