ಕಥಾ ಸಂಗಾತಿ
ಶ್ರೀಧರ ಗಸ್ತಿ ಧಾರವಾಡ
“ಅವ್ವರಸಿ”


ಹಗಲನ್ನು ತನ್ನೊಡಲಲ್ಲಿ ಬಾಚಿಕೊಂಡ ರಾತ್ರಿಯ ಸಮಯ. ಅದೇ ತಾನೇ ಊಟ ಮುಗಿಸಿ ಹಾಸಿಗೆಯ ಮೇಲೆ ಒರಗಿದ್ದೆ. ಅವ್ವ ಮತ್ತೇ ನೆನಪಾದಳು. ಲವಲವಿಕೆ ಇಲ್ಲದ ಅವಳ ಮುಖ, ಕೃಶವಾದ ದೇಹ, ಕ್ಷೀಣವಾದ ಧ್ವನಿ ಕಣ್ಣ ಮುಂದೆ ಬಂದಂತಾಯಿತು. ಆ ರೀತಿ ಅವ್ವನನ್ನು ನಾನೆಂದೂ ನೋಡಿರಲಿಲ್ಲ. ನನಗೆ ಅವಳ ಮುಂದೆ ಹೇಳಲೂ ಆಗಲಿಲ್ಲ. ಧ್ವನಿವರ್ಧಕವೇ ಬೇಡವಾದ ಗಟ್ಟಿ ದನಿ ಆಕೆಯದು. ಅಂತಹ ನಮ್ಮವ್ವ ಅಂದು ಸಪ್ಪೆ ಅನಿಸಿದಳು. ಕರುಳು ಹಿಂಡಿದಂತಾಯಿತು. ಮನಸ್ಸಿನ ತಳಮಳದ ನಡುವೆ ಹಾಸಿಗೆಯ ಮೇಲೆ ಹೊರಳಾಡಿದೆ. ಗೋಕಾಕದ ಬಿಸಿಲು, ದೇಹವನ್ನು ಬಳಲಿಸಿತ್ತು. ಆ ದಣಿವಿಗೆ ನನ್ನ ದೇಹ ಮೆಲ್ಲನೇ ನಿದ್ರೆಗೆ ಜಾರಿತ್ತು. ಫೋನ್ ರಿಂಗಾಯಿತು. ಇಷ್ಟು ಬೇಗ ಬೆಳಗಾಯಿತೇ ಎಂದು ಗಡಿಬಿಡಿಯಿಂದ ಎದ್ದೆ. ಅಕ್ಕ ಸುಮಾಳ ಫೋನು. ಟೈಂ ನೋಡಿಕೊಂಡೇ ಮಧ್ಯರಾತ್ರಿ 2 ಗಂಟೆ. ನೋಡುತ್ತಲೇ ಕಾಲುಗಳು ಕಂಪಿಸಿದಂತಾಯಿತು. ತುಟಿ ಒಣಗಿತು. ದೇಹ ಸ್ಥಿಮಿತ ಕಳೆದುಕೊಂಡಿತು. ಪಾತಾಳವೇ ಕುಸಿದ ಅನುಭವ. ಬೆವರು ತನಗರಿವಿಲ್ಲದೇ ದಳದಳನೇ ಸುರಿಯುತಿತ್ತು. ಫೋನ್ ರಿಸಿವ್ ಮಾಡಿದೆ. ‘ಏ ಏನು ಸುಮಕ್ಕ?’ ಇಷ್ಟೊತ್ತಿನಲ್ಲಿ ಅಂದೆ. “ಅವ್ವ ಯಾಕೋ ಗಾಬರಿ ಮಾಡಾತಾಳ;ನೀ ಹೆಂಗರೇ ಮಾಡಿ ದೌಡ್ನ ಬಂದಬಿಡು? ಒಂದ ಸವನ ಸಿರದರನ ಕರೆಸು,ಸಿರದರನ ಕರಸು ಅನ್ನಾತಾಳ. ದೊಡ್ಡ ಡಾಕ್ಟರ್ ಬಂದು ಒಳಗ ಕರಕೊಂಡ ಹೋಗಿದಾರು ನೀ ದೌಡ್ನ ಬಂದು ಬಿಡು” ಅಂದಳು. ನನ್ನ ಗಾಬರಿಯ ಮಾತುಗಳಿಗೆ ನನ್ನ ಹೆಂಡತಿಯು ಎದ್ದು ಕುಳಿತಳು. ನೌಕರಿಗಾಗಿ ಹುಟ್ಟಿದ ಊರನ್ನು ಬಿಟ್ಟಿದ್ದ ನನಗೆ ಸ್ಥಳೀಯರ ಪರಿಚಯ ಕಡಿಮೆ. ಪಕ್ಕದ್ಮನೆಯ ನನ್ನ ಕಸಿನ್ ಶಿವರಾಜನನ್ನು ಎಬ್ಬಿಸಿದೆ. ನಾನು ದಡಬಡನೇ ಬಾಗಿಲು ಬಡಿಯುವ ಸಪ್ಪಳಕ್ಕೆ ಎಲ್ಲರೂ ಎದ್ದರು. ಅವರಿಗೂ ವಿಷಯ ತಿಳಿಸಿದೆ. ತಕ್ಷಣ ಒಂದ ಗಾಡಿ ಬೇಕು ಅಂದೆ. ಆತ ತನ್ನ ಗೆಳೆಯನ ಟ್ರಾಕ್ಸ ತರಿಸಿದ, ನನ್ನ ಹೆಂಡ್ತೀನೂ ಬರ್ತಿನಂದ್ಳು, ನಮ್ಮ ಮಾವಾನೂ ಬಂದ.ಹುಡುಗರನ್ನು ನಮ್ಮ ಸಣ್ಣವ್ವಳಿಗೆ ಒಪ್ಪಿಸಿ ಹೊರಟೆವು.
ಗಾಡಿ ಶಿರಢಾಣ ದಾಟಿ ಘಟಪ್ರಭಾ ಮ್ಯಾಲ ಫಾಲ್ಸ್ ರೋಡಗುಂಟ ಹೊಂಟಿತ್ತು. ಸುಂಯ್ಯನೇ ಬೀಸುತಿದ್ದ ಗಾಳಿ ಬೇಸಿಗೆಯ ಸಮಯದಲ್ಲಿ ಹಿತಕರವಾಗಿತ್ತು. ನನಗೆ ಮಾತ್ರ ಮೈಯಲ್ಲಿ ನಡುಕ. ಬೀಸುತಿದ್ದ ಗಾಳಿಯ ವೇಗ ಕ್ರಮೇಣ ಹೆಚ್ಚಾಯಿತು. ಎಲ್ಲರೂ ಮುದುರಿಕೊಳ್ಳುತಿದ್ದರು. ನನಗೆ ಮಾತ್ರ ಬೆವರಿಳಿಯುತಿತ್ತು. ಪದೆಪದೇ ಅವ್ವ ಕಣ್ಣಮುಂದೆ ಬಂದು ನಿಲ್ಲುತಿದ್ದಳು. ಆಕೆಯ ಸಂಕಟ;ಬದುಕಿನುದ್ದಕೂ ಅವಳನುಭವಿಸಿದ ನೋವು, ಆ ದಯನೀಯ ಕರಾಳ ದಿನಗಳು ನೆನಪಾದವು. ದಶಕದ ಹಿಂದೆ ಅಪ್ಪ ಹೋದಾಗಿನ ಸಂಕಟ ನೆನೆಸಿಕೊಂಡು, ಮತ್ತೇ ಕುಸಿದ ಅನುಭವ. ಕಷ್ಟಗಳ ಮೂಟೆ ಹೊತ್ತುಕೊಂಡೇ ಜೀವನ ಸಾಗಿಸಿದ್ದ ನನ್ನವ್ವ, ಹೊರಗೆ ಬಂದ ದಿನಗಳಿವು. ಆ ಎಲ್ಲ ದಿನಗಳು ನನ್ನೊಳಗೆ ಆವಿರ್ಭವಿಸಿ ಕಣ್ಮುಂದೆ ಬಂದಂತಾಯಿತು. ಅವ್ವ ನಾಲ್ಕು ದಿನದ ಹಿಂದೆ ಎದೆನೋವು ಅಂತ ಚಡಪಡಿಸಿದ್ದಳು. ಭಾಳ ತ್ರಾಸ ಅಂತ ಗೊತ್ತಾದ ಕೂಡ್ಲೇ ಕೆಲಸಕ್ಕೆ ರಜಾ ಹಾಕಿ ಬಂದು ಬಿಟ್ಟಿದ್ದೆ. ಮಾರನೇ ದಿನಾನೇ ಗೋಕಾಕದ ಗಡಗಿ ದವಾಖಾನೇಕ ತೋರಸಾಕಂತ ಬಂದ್ವಿ. ಡಾಕ್ಟರ್ ಚೆಕ್ ಮಾಡಿ ರಕ್ತ ಪರೀಕ್ಷೆ ಮಾಡಾಕ ಬರದ್ರು. ಎಂಡೋಸ್ಕೋಪಿ ಮಾಡಿದ್ರು. ರಿಪೋರ್ಟ್ ಬರಲಿಕ್ಕೆ ಇನ್ನೂ ತಡ ಇತ್ತು. ಅವ್ವ ಊಣಲಾರದಕ್ಕ ನಾವ್ಯಾರೂ ಉಂಡಿದ್ದಿಲ್ಲ. ಆಕಿನss ಎಲ್ಲಾರ್ಗೂ ಊಟ ಮಾಡಲಿಕ್ಕೆ ಹೇಳಿದ್ಲು. ಹಸಿದ ಹೊಟ್ಟೆಗಳಿಗೆ ಏನಾದ್ರೂ ಬೇಕಿತ್ತು. ಗಡಿಬಿಡಿವಳಗ ರೊಟ್ಟಿಗಂಟು ತಂದಿದ್ದಿಲ್ಲ. ರೊಟ್ಟಿ ಖಾನಾವಳಿಗೆ ಬಂದ್ವಿ. ನನಗ ರೊಟ್ಟಿ ಅಂದ್ರ ಇಷ್ಟಾ; ಅದಕ್ಕ ಅವ್ವ ತನ್ನ ಅಗಲಾಗಿಂದ ಒಂದ ರೊಟ್ಟಿ ತಗದು ನನಗೆ ಹಾಕಿದ್ದು ನೆನಪಾತು, ಯಾಕೋ ದು:ಖ ಉಮ್ಮಳಿಸಿ ಬಂತು, ಕಣ್ಣಾಗಿನ ನೀರು ದಳದಳನೇ ಹರಿತಿದ್ವು. ‘ಅವ್ವ ನಿನಗ ಆರಾಮ ಇಲ್ಲಬೇ ಊಟಾ ಮಾಡು, ಮತ್ತ ಬೇಕಂದ್ರ ತುಗೋಳ್ಳೋಣಂತ’ ಅಂತ ಹೇಳಿದೆ. ಬ್ಯಾಡಾಪಾ ನನಗ ಒಂದ್ರೊಟ್ಟಿ ಸಾಕು ನೀ ಉಣ್ಣ, ಅಂತ ಅಂದ್ಳು. ಯಾಕೋ ಆಕಿ ಧ್ವನಿ ಒಳಗ ಭಯ ಇದ್ದಂಗ ಅನಿಸ್ತು. ನಮ್ಮವ್ವ ಅಂದು ಬ್ಯಾರೇನ ಕಂಡಳು. ಕಡಕ್ಕಾಗಿ ಮಾತಾಡೋ ನನ್ನವ್ವಳ ದನಿ ದನಿವಾರಿಸಿಕೊಳ್ಳಾಕ ಚಾಲು ಮಾಡಿದ್ದು ನನಗ ಗೊತ್ತಾಗಲೇ ಇಲ್ಲ.
ಊಟ ಮಾಡಿ ಮತ್ತೇ ದವಾಖಾನೇಕ ಬಂದ್ವಿ ರಿಪೋರ್ಟ್ ಬಂದಿತ್ತು. ನಿಮ್ಮ ತಾಯಿಗೆ ಹಾರ್ಟ್ ಅಟ್ಯಾಕ್ ಆಗಿದೆ, ಇನ್ನೊಂದಿನ ಲೇಟ್ ಮಾಡಿದ್ರೂ ನಿಮ್ಮವ್ವ ಉಳಿತೀರಕ್ಕಿಲ್ಲ, ಅಂತಾ ಡಾಕ್ಟರ್ ಮಹೇಶ ನನ್ನ ಕರದ ಹೇಳಿದ್ರು. ಅಡ್ಮಿಟ್ ಮಾಡ್ರಿ ಸರಿ ಹೋಗ್ತದ ಅಂದಾಗ ಮನಸ್ಸಿಗೆ ಸ್ವಲ್ಪ ನಿರಾಳವಾಯಿತು. ನಾವೂ ತಯಾರಿ ಒಳಗ ಬಂದಿದ್ದರಿಂದ ಸುಮಕ್ಕಳಿಗೆ ವಿಷಯ ತಿಳಿಸಿದೆ, ದೊಡ್ಡಕ್ಕ ಮಾದೇವಿನೂ ಬಂದಿದ್ಳು. ಅವ್ವಾಗ ಈ ವಿಷಯಾನ ಹೇಳ್ಲಿಲ್ಲ. ಡಾಕ್ಟರ್ ಆಗಲೇ ಅವರ ಕೆಲಸ ಶುರು ಮಾಡಿದ್ರು. ಅವ್ವಾನ ಕೂಡಾ ಮಾತಾಡ್ತಾ ದೊಡ್ಡಕ್ಕ ಮತ್ತು ಅವರ ಮಕ್ಕಳು ಚುಲೋ ಆಗ್ತಾ ಇರೋದನ್ನ ಮಾತಾಡಿದ್ವಿ. ಸುಮಕ್ಕಳ ಮಗ ವಿನೋದಂತೂ ದೊಡ್ಡ ಸಾಹೇಬ ಆಗ್ತಾನ ತುಗೋಪ ಅಂವ ಶ್ಯಾನ್ಯಾ ಅದಾನ ಅಂದ್ಳು. ತಮ್ಮ ರಾಜಪ್ಪನ ಬಗ್ಗೆ ಮಾತಾಡ್ತಾ ಕುಡಿಲಿಲ್ಲಂದ್ರ ಅದೆಷ್ಟ ಚೆಂದ ಮಾತಾಡ್ತಾನ,ಕುಡದಂದ್ರ ದಾರಿ ಬಿಡ್ತಾನ ನೋಡ ,ಯಾವಾಗ ಚುಲೋ ಆಗ್ತಾನೋ ಏನೋ ಅಂವನ ಮಕ್ಕಳೂ ಹಂಗ ಆಗ್ಯಾವ, ಅಂವನ ಹೆಂಡ್ತಿನೂ ಹಂಗ ಅದಾಳ ಅಂತ ನಮ್ಮವ್ವ ದೊಡ್ಡ ಉಸಿರು ಹಾಕಿದ್ಲು. ಹೆಂಗರೆ ಮಾಡಿ ಕುಡ್ಯೋದ ಬಿಡಸೋ ಅಂತ ಕೇಳಿಕೊಂಡಳು. ಹಿಂಗ ಮನಿದು, ಅಕ್ಕ ಪಕ್ಕದವರ್ದು, ಮತ್ತ ಎಲ್ಲಾ ಸಂಬಂಧಿಕರದ್ದು, ಊರಾಗಿನವರ್ದು, ಹುಟ್ಟಿದವರ್ದು, ಸತ್ತವರ್ದು, ಮದುವೆಯಾದವರ್ದು ಹಿಂಗ ಒಂದ್ಸಲ ನಮ್ಮೂರ ರೌಂಡ್ ಹೊಡಿಸಿ ಬಿಟ್ಟಳು ನಮ್ಮವ್ವ. ನಾ ಊರಿಗೆ ಬಂದಾಗೊಮ್ಮೆ ಹಿಂಗ, ನಮ್ಮವ್ವ ರಿಪೋರ್ಟ್ ಮಾಡ್ತಿದ್ದಳು. ಆರಾಮ ಇಲ್ಲಾರ್ಕ ನಿನ್ನೆಯಿಂದ ಚಡಪಡಸ್ತಿದ್ದಳು. ಎಲ್ಲಾನೂ ಮಾತಾಡ್ತಾ ಸಂಜೆಯಾಗಿದ್ದು ಗೊತ್ತಾಗಲಿಲ್ಲ. ದಾವಾಖಾನೆಯಲ್ಲಿ ಪೇಷಂಟ್ ಜೊತೆ ಒಬ್ಬರೇ ಇರಬೇಕಂದ್ರು. ದೊಡ್ಡಕ್ಕ ಯಾವುದೋ ಕೆಲಸದ ಮ್ಯಾಲೆ ಊರಿಗೆ ಹೋಗಬೇಕಿತ್ತು. ನನಗಿಂತ ಸುಮಕ್ಕಳೇss ಅವ್ವನ ಕೂಡ ಇದ್ರ ಒಳ್ಳೆದಂದ್ಕೊಂಡು ಡಾಕ್ಟರ್ ಕೂಡ ಮಾತಾಡಿದೆ. ಅವ್ರೂ ಸಹ ಒಬ್ರ ಇರ್ರಿ! ನಿಮ್ಮೂರೇನು ಇಲ್ಲೇ ಐತಲ್ಲ ಏನ ಚಿಂತೆ ಮಾಡ್ಬೇಡಿ ಹೋಗಿ ಬರ್ರಿ ಅಂದ್ರು. ಇಬ್ಬರಿಗೂ ಚಾ ತಂದಕೊಟ್ಟೆ, ಹಸಿವು ಇಲ್ಲಾರ್ದಕ್ಕ ರಾತ್ರಿ ಊಟ ಬ್ಯಾಡಂದ್ರು; ಇಬ್ಬರಿಗೂ ನಾಲ್ಕ ಪ್ಲೇನ್ ದೋಸೆ ತಂದಕೊಟ್ಟೆ. ಅವ್ವಾ, ಅಪ್ಪನ ನೆನಸಿಕೊಂಡು ಕಣ್ಣಾಗ ನೀರ ತಂದ್ಲು. ಅಲ್ಲೋ ಎಷ್ಟ ಕಾಳಜಿ ಮಾಡ್ತಿ? ನಿಮ್ಮಪ್ನಂಗ? ಮೊದಲss ಊರಿಗೆ ಹೋಗು, ಸಣ್ಣ ಮಕ್ಕಳದಾವ ನಿನ್ನ ಹೇಂತಿ ಒಬ್ಬಕೀನ ಏನ ಮಾಡ್ಯಾಳು? ಲಾಸ್ಟ್ ಬಸ್ ತಪ್ಪಿದ್ರ ಏನ ಮಾಡ್ತಿ ? ಅಂತ ನನ್ನ ಹೆಂಡತಿ ಮತ್ತು ಮಕ್ಕಳ ಬಗ್ಗೆ ಕಾಳಜಿ ಮಾಡಿದ್ದಳು. ಆಯ್ತಬೇ ನಾ ಬರ್ತಿನಿ ಅಂದಾಗ, ಧಾರವಾಡಕ್ಕೋಗಿ ಈ ಬೇ ಗೀ ಎಲ್ಲ ಕಲತ ಬಂದಾನ ಹೋಗೋಗ ದೌಡ ಅಂದ್ಳು. ಮುಗುಳ್ನಗ್ತಾ ಹೊರಗ ಬಂದೆ. ಮತ್ಯಾಕೋ ಕರದ್ಳು, “ಮಂಜವ್ವಗ ಫೋನ್ ಮಾಡಿದ್ದೇನೋ ಅಂದ್ಳು” ‘ಇಲ್ಲ’ ಅಂದೇ, “ನೋಡ ಆಕೀssನ ಮರೀತೇರಪಾ ನೀವುsss? ಗರೀಬ ಮಗಳ ಆಕಿ, ಹುಚ್ಚೇರಂತಾಕಿ, ಆಕಿ ಕಡೆನೂ ದೇಖರೇಕಿ ಇರಲಿಪಾ” ಅಂದ್ಲು. ಆಕಿ ಮಾತೆಲ್ಲಾ ನೆನಪಾಗಿ ಅಳು ಬಂತು ತಡಕ್ಕೋಳ್ಳಾಕಾಗಲಿಲ್ಲ.ಜೋರಾಗಿ ಅತ್ತುಬಿಟ್ಟೆ. ಅಣ್ಣ ಶಿವರಾಜ ನನ್ನ ಬೆನ್ನಮೇಲೆ ಕೈಯಾಡಸ್ತಾ ಇದ್ದ.
ಆಸ್ಪತ್ರೆ ಮುಂದ ನಮ್ಮ ಟ್ರ್ಯಾಕ್ಸ್ ನಿಂತಾಗ, ಸರಿರಾತ್ರಿ ಇದ್ದುದರಿಂದ ಜನರೇನೂ ಇರಲಿಲ್ಲ. ಸುಮಕ್ಕ ಬಾಗಲ ಹತೇಕ ನಿಂತು ನಮಗಾಗಿ ಕಾಯ್ತಾ ಇದ್ಳು. ನರ್ಸಗಳು ಮೊದಲಿಗೆ ಅವ್ವಾನ ನೋಡಾಕ ಬಿಡ್ಲಿಲ್ಲ. ಡಾಕ್ಟರ್ ಗೆ ಭೇಟಿಯಾಗ್ರಿ ಅಂದ್ರು. ಡಾಕ್ಟರ್ರೆ ನಮ್ಮತ್ತ ಬರುವುದು ಕಾಣಿಸಿತು. ಕನ್ನಡಕ ಮೇಲೇರಿಸುತ್ತಾ, “ಸಾರಿ ಸರ್, ನಿಮ್ಮ ಅವ್ವಾರ್ನ ಉಳಿಸಿಕೊಳ್ಳೋಕಾಗಲಿಲ್ಲ. ಹನ್ನೆರಡು ಗಂಟೆ ಹೊತ್ತಿಗೆ ಮತ್ತೇ ಸಿವಿಯರ್ ಅಟ್ಯಾಕ್ ಆಯ್ತು, ಪ್ರಯತ್ನ ಮಾಡಿದ್ವಿ ಕೆಲಸ ಆಗಲಿಲ್ಲ”. ಡಾಕ್ಟರ್ ಹೇಳಿದ ಮಾತು ಕೇಳಿ ಗರ ಬಡಿದವನಂತೆ ನಿಂತುಬಿಟ್ಟೆ. ಸುಮಕ್ಕ ತನ್ನ ದು:ಖದ ಕೋಡಿಯನ್ನು ಹರಿಬಿಟ್ಟಿದ್ದಳು. ಡಾಕ್ಟರ್ ಕೈಹಿಡಿದಾಗಲೇ ನನಗೆ ಎಚ್ಚರ ಬಂದಂತಾಯಿತು. ಅವ್ವ ಮಲಗಿದ್ದ ವಾರ್ಡ್ ಕಡೆ ಓಡೋಡಿ ಹೋದೆವು. ಕತ್ತಲೆಗೆ ಹೆದರುತಿದ್ದ ನಮ್ಮವ್ವ ಅದರೊಟ್ಟಿಗೆ ಒಂದಾಗಿದ್ದಳು. ಅವ್ವ ಅವ್ವ ಅಂತಾ ಕೂಗಿದೇವು. ಅದಾವುದು ಅವಳಿಗೆ ಕೇಳಿಸುತ್ತಲೇ ಇಲ್ಲ. ಅಚ್ಚ ಕಪ್ಪು ನೆಲದ ವಾಸನೆಯ ಘಮಲಿನಲ್ಲಿ ಬೆಳೆದ ನನ್ನವ್ವ, ಕಪ್ಪು ಛಾಯೆಯ ಬೀರಿ, ಕೈ ಬೀಸಿ ನಗುನಗುತ ಮರೆಯಾದಂತೆ ಕಂಡಳು. ಅಪ್ಪನ ಕಷ್ಟಕ್ಕೆ ನೆರಳಾಗಿ, ಬಡತನವ ಸೋಸಿ, ಗಂಜಿನಂಬಲಿಗಾಗಿ, ಮೈ ಬೆವರಿಂದ ಬದುಕು ಕಟ್ಟಿದವಳು. ಹರಕು ಸೀರೆಗೆ ತೇಪೆ ಹಾಕಿಕೊಂಡು ಅಪ್ಪನ ಹೊಸ ಧೋತರಕೆ ಆಸರೆಯಾದವಳು. ಅಪ್ಪನ ಜೊತೆಗೂಡಿ ನಮ್ಮೆಲ್ಲರ ಬದುಕಿಗೆ ನಾಂದಿ ಹಾಡಿದ ನನ್ನವ್ವ,ಇಂದು ಇದ್ದಕಿದ್ದಂತೆ ಎದ್ದು ಹೋದಳು ಅಪ್ಪನೆಡೆಗೆ. ಅಳುವಿನ ಆಕ್ರಂದನ ಆಸ್ಪತ್ರೆಯ ಇತರ ರೋಗಿಗಳ ಎದೆ ಝಲ್ ಎನಿಸಿತು, ಅವರೆಲ್ಲರ ಕಣ್ಣಾಲಿಗಳು ತುಂಬಿ ಬಂದಿದ್ದವು. ‘ಅಳಬ್ಯಾಡ್ರಿ ಎಲ್ಲಾರೂ ಒಂದಿನ ಹೋಗೋದss ಐತಿ’, ಎಂದು ನಿನ್ನೆ ಪಕ್ಕದ ಬೆಡ್ ನಲ್ಲಿ ತೀರಿಕೊಂಡ ಅಜ್ಜಿಯ ಬಳಗಕ್ಕೆ ಸಲಹೆ ನೀಡಿದ್ದಳು ನನ್ನವ್ವ. ಒಂದೇ ದಿನದಲ್ಲಿ ವಾರ್ಡಿನ ಎಲ್ಲ ರೋಗಿಗಳನ್ನು ನಗಿಸಿ ನಗುತ್ತಲೇ ಮರೆಯಾದಳು. ಭರವಸೆಯ ಬೆನ್ನೇರಿ ಇನ್ನಷ್ಟು ದಿನ ಬದುಕುವಾಸೆಯಿತ್ತಾಕೆಗೆ; ಕೈಗೂಡಲಿಲ್ಲ ಕೊನೆಗೂ, ಮರಳಿ ಬಂದಳು ತಾ ನಿತ್ಯ ಕುಳಿತು ಹರಟೆ ಹಾಕುವ ಕಟ್ಟೆಗೆ. ಅವಳ ಕಲಕಲ ಮಾತುಗಳು ಮೌನವಾಗಿ ಕುಳಿತವು . ಓಣಿ ಜಗಲಿಯ ಒಡತಿ, ಮಾತಿನಲ್ಲೇ ಕಥೆ ಕಟ್ಟುವ, ಒಡಪು ಹೇಳುವ, ಒಗಟು ಹೇಳಿ ಮಾತಿನಲ್ಲಿ ಜನರನ್ನು ಕಟ್ಟಿ ಹಾಕುವ ನನ್ನವ್ವ ಇಂದಿಲ್ಲ. ಆರತಿ ಎತ್ತುವಾಗಲೊಮ್ಮೆ ಅಡ್ಡ ಬರುತಿದ್ದ ನನ್ನವ್ವ, ಎಲ್ಲರಿಂದ ಒಡಪು ಕಟ್ಟಿ ಗಂಡನ ಹೆಸರು ಹೇಳಿಸುತಿದ್ದಳು. ಗಂಡನ ಹೆಸರು ಹೇಳಲು ನಾಚಿಕೆ ಪಡುತಿದ್ದ ಆ ಕಾಲದಲ್ಲಿ ಕೆಲ ಸಮಯ ಸಂತಸದ ವಾತಾವರಣ ನಿರ್ಮಿಸುತಿದ್ದಳು. ಹೇಳಲು ಬಾರದವರಿಗೆ ತಾನೇ ಹೇಳಿಕೊಡುತಿದ್ದಳು. ಅಂತ ನನ್ನವ್ವಳನ್ನು ನೆನೆಸಿಕೊಂಡು ವಾರಿಗೆಯವರೆಲ್ಲ ಗೋಳಿಟ್ಟು ಅಳುವುದು ಮರುಕ ಹುಟ್ಟಿಸುತಿತ್ತು. ಕುಬಸದ ಶುಭ ಕಾರ್ಯದಿಂದಿಡಿದು ಹುಟ್ಟಿದ ಕೂಸಿಗೆ ಹೆಸರಿಡುವುದು, ಹೆಣ್ಮಕಳು ದೊಡ್ಡವರಾದಾಗ, ಮದುವೆ ಮುಂಜಿ ಹಿಂಗ ಏನಿದ್ರೂ ನನ್ನವ್ವಳ ಉಪಸ್ಥಿತಿ ಇರುತಿತ್ತು. ಕೋಗಿಲೆಯಂತೆ ಕಪ್ಪಾದರೂ ಅಕ್ಷರದರಿವಿಲ್ಲದ ನನ್ನವ್ವ ಸಾವಿರಾರು ಪದಗಳನ್ನು ಹೇಳುವ ಒಡತಿ.
ಹಿಂಗ ಜಗಲಿಮ್ಯಾಗ ಕುಂದ್ರಿಸಿದ್ದ ನಮ್ಮವ್ವನ ಮುಂದ ತಮ್ಮ ಅನುಭವದ ಮೂಟೆ ಇಳಿಸಿಕೊಳ್ಳುತಿದ್ದರು. ನೆರೆಹೊರೆಯವರ, ಊರವರ ಒಡನಾಟ ಅವಳ ಒಂಟಿ ಜೀವನಕ್ಕೆ ಬಲ ತುಂಬಿತ್ತು. ಅವಳ ಬೆಲೆ ಮನೆಯವರಿಗೆ ಅರ್ಥವೇ ಆಗಲಿಲ್ಲ. ಹಿತ್ತಲಗಿಡ ಯಾವತ್ತೂ ಔಷಧಕ್ಕೆ ಬರೋದಿಲ್ಲ ಅನ್ನುವ ಹಾಗೆ ನನ್ನವ್ವ ತನ್ನ ನೋವುಗಳನ್ನು ತನ್ನ ಖುಷಿಯಲ್ಲಿಯೇ ಕಳೆದಳು. ಒಂದೆಡೇ ಕಿರಾತಕ ಮಗನ ಸಂಸಾರ, ಕಲಿಯೆಂದರೇ ಏನೇನೋ ಕಲಿತು ಖಾಸಗಿ ನೌಕರಿಯಲ್ಲಿ ಕೆಲಸ ಮಾಡಿ, ಕುಡಿತವೇ ತನ್ನ ಸರ್ವಸ್ವ ಅಂದ್ಕೊಂಡು ಅದೇ ಪ್ರಸಾದವನ್ನು ತನ್ನ ಮಡದಿ ಮಕ್ಕಳಿಗೆಲ್ಲಾ ಹರಿದು ಹಂಚಿದವ, ಆತ ಬಾಯಿ ಬಿಟ್ಟರೇ ಸಾಕು, ದುಡ್ಡು ಕೊಟ್ಟು ಹುಡುಕಿದರೂ ಸಿಗಲಾರದ ಬೈಗಳು. ಆತನ ಒಡನಾಟವೇ ಬೇಡವೆಂದು ದೂರವಿಡಲಾಗಿತ್ತು. ಆದರೂ ತಾಯಿ ಕರುಳು ಕೇಳಬೇಕಲ್ಲ? ಸದಾ ಅವರ ಏಳ್ಗೆಗಾಗಿ ಹಂಬಲಿಸುತಿದ್ದಳು. ಇನ್ನೊಂದು ಸಿರದರನೆಂಬ ಪ್ರಾಣಿ, ಬಹಳಷ್ಟು ಓದಿದವ, ಯಾವ ದು:ಶ್ಚಟಗಳಿಲ್ಲದಿದ್ದರೂ ಒಂದರ್ಥದಲ್ಲಿ ಅವ್ವಳಿಂದ ದೂರ ಉಳಿದ ಪಾಪಿ. ಎಲ್ಲದಕ್ಕೂ ಕಾರಣ ಇರಲೇಬೇಕಲ್ಲ. ನನ್ನವ್ವಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡವನು. ನಮ್ಮವ್ವ ನನ್ನೊಟ್ಟಿಗೆ ಇರಲು ಬಯಸಿದವ. ನನ್ನವ್ವ ಒಂದುವಾರ ನಿಂತ್ರ ಆಕಿಗೆ ಏನೋ ಕಳಕೊಂಡಂಗ ಆಗ್ತಿತ್ತು. ಯಾವಾಗಲೂ ಆಕೆ ಹೇಳುತಿದ್ದುದು ‘ನಿನ್ನ ಹ್ಯಾಂತಿ ಮಾತಾಡೋದ ಇಲ್ಲಲೋ ನಾ ಹ್ಯಾಂಗಿರಲಿ ಅಂತಿದ್ದಳು’. “ಆಕಿ ಮಾತss ಕಡಿಮೆ ಬಿಡಬೇ” ಅಂದಾಗ; ‘ಅಲ್ಲೋ ನೀ ಹಿಂಗನತಿ ಬಾಜುಕ ಅದಾರಲ ಮುಸ್ಲೇರು ಅವರ ಹೆಣ್ಣ ಮಕ್ಕಳ ಕೂಡಾ ಆರೇರ ಭಾಷೆದಾಗ ಮಾತಾಡಕತ್ತಳಂದ್ರ, ಅದೇನ ಕಿಲ ಕಿಲ ಅಂತ ನಗೋದು, ಮಾತಾಡೋದು, ನನಕೂಡ ಒಂದ ಮಾತ ಮಾತಾಡಾಕ ಆಗೋದಿಲ್ಲೇನ ಈಕೀಗಿ, ನನಗ ಸಂಕಟ ಆಗೋದಿಲ್ಲೇನ. ಅತ್ತೆ ಅನ್ನೋ ಖಬರಿ ಇಲ್ಲೇನ ಈಕೀಗಿ’. “ಅಲ್ಲss ಯವ್ವ ನಿನಗ ಉಣ್ಣಾಕ ತಿನ್ನಾಕ ಏನರೇ ತ್ರಾಸ ಆಗೇತೇನು ಆರಾಮ ಉಂಡ ತಿಂದ ಮೊಮ್ಮಕ್ಕಳ ಕೂಡ ಆರಾಮಾಗಿ ಇದ್ದಿರು.” ಅಂದಾಗ, ‘ನೋಡಪಾ ನನಗ ಗಳಬಳ ಮಾತಾಡಬೇಕ, ಹಂಗಿತ್ತಂದ್ರ ನಾಕದಿನಾ ಇಲ್ಲಿ ಇರ್ತೆನ;ಇಲ್ಲಾ ಅಂದ್ರ ನನ್ನ ಊರಿಗೆ ಕಳಿಸಿಬಿಡು ನಾ ಅಲ್ಲೇ ಆರಾಮ ಇರ್ತೇನಿ ಅಂತಿದ್ದಳು. ಒಂದ್ಸಲ ನೀವು ಇಷ್ಟ್ಯಾಕ ಕರ್ರಗ ಅದೇರಿ ಅಂದ್ಲು. ಇವರ ಮನ್ಯಾಗ್ಯಾರೂ ಕರ್ರಗss ಇಲ್ಲ ಏನ’ ಅಂತ ನನ್ನ ಮುಂದ ಅಂದಿದ್ಲು. ಅದೆಷ್ಟು ಹಿಂಸೆ ಆಗಿರ್ಬೆಕು ಅವಳಿಗೆ ಅಂತನಿಸ್ತು. ಹುಟ್ಟಿದಾಗ ಬಣ್ಣ ಏನ ಹೇಳಿ ಕೇಳಿ ಬರ್ತದ ಏನು? ಅದನ್ನೇನು ಅರೆದುಕೊಂಡು ಕುಡಿಯೋದೈತೇನು. ಹಿಂಗ ಇವೆಲ್ಲ ವಿಷಯಗಳು ಮನಸ್ಸಿನ್ಯಾಗ ಉಳದು ಯಾವುದೋ ಮತ್ತೊಂದು ವಿಷಯದಲ್ಲಿ ರಾದ್ಧಾಂತಗಳಾಗುತಿದ್ದವು. ಹಿಂಗಾಗಿ ಅವ್ವ ಬಂದಾಗಲೊಮ್ಮೆ ಬಹಳ ದಿನಾ ಇರತಿದ್ದಿಲ್ಲ. ಊರಾಗ ನನ್ನ ದೊಡ್ಡ ಬಳಗಾನ ಐತಿ ಆ ಬಳಗದಾಗ ಇರ್ತಿನಪಾ ನಾನು. ನಾ ಸತ್ತರೂ ಆ ಬಳಗದಾಗ ಸಾಯ್ತೇನಿ, ಅಂತ ಖಡಕ್ಕಾಗಿ ಹೇಳಿದಾಕಿ. ತನ್ನ ಮಾತಿನಂಗ ನಡದು ಹೊಂಟಿದ್ದ ನೋಡಿ, ನನಗ ದು:ಖ ತಡೆಯಲಾಗಲಿಲ್ಲ. ಅವ್ವ ಅವ್ವ ಅನ್ನುವ ಆ ಹಲಬುವಿಕೆ ನಿತ್ಯ ಸತ್ಯವಾಯಿತು. ಅಂದು ಅವ್ವ ತಾನಿಷ್ಟ ಪಟ್ಟು ಇಂತದೇ ಸೀರೆ ಬೇಕೆಂದು ಹಠ ಮಾಡಿ ತರಿಸಿಕೊಂಡಿದ್ದ, ಅಚ್ಚ ಮಸರಾಯಿ ಕೆಂಪು ಅಚ್ಚಿನ ಸೀರೆ ವಿಜಯಪುರದ ಸಂಬಂಧಿಕರ ಮದುವೆಯಲ್ಲಿ ಸಂಭ್ರಮಿಸಬೇಕಿತ್ತು. ಆದರೆ ವಿಧಿಯಾಟ ನೋಡಿ ಹೇಗಿದೆ! ಅದು ಅವಳ ಮಸಣದಲ್ಲಿ ಮಣ್ಣಾಗುತ್ತಿದೆ.
ಅವ್ವ ಮಣ್ಣಾದಳು ಖರೆ ಆಕೆ ಆಡಿದ ಆ ಕೊನೆ ಮಾತುಗಳು ಕಿವಿಯಲ್ಲಿ ಗುಂಯ್ ಗುಡುತಿದ್ದವು. ತಂಗಿಯನ್ನು ಹುಡುಕಾಡಿದೆ ಆಕೆ ಎಲ್ಲೂ ಕಾಣಲಿಲ್ಲ, ವಿಚಾರಿಸಿದೆ. ನಮ್ಮ ಸಣ್ಣವ್ವ ಹೇಳಿದ್ದು ಕೇಳಿ ನನಗೆ ಮತ್ತೇ ಶಾಕ್! ಆಯಿತು. ‘ಆಕಿ! ಅಗಸರ ಕತ್ತೆ ಇದ್ದಾಂಗ, ಯಾವಾಗ ನೋಡ್ತಿ ಆವಾಗ ದುಡ್ಯಾಕತ್ತಿರತೈತಿ. ಕೆನಾಲದಾಗ ಅರಿವಿ ಒಗಿತಿರಬೇಕು, ಇಲ್ಲಾ ಅಂದ್ರ ಭಾಂಡೆ ತಿಕ್ಕತಿರಬೇಕು, ನಿನಗ ಅಲ್ಲೇ ಸಿಗ್ತಾಳ ನೋಡು’ಅಂದಳು. ಯಾಕೋ ನನಗೆ ಕಸಿವಿಸಿ ಅನಿಸ್ತು. ಇಷ್ಟೊಂದ ಹೆಂಗಸ್ರದಾರ ಎಲ್ಲಾರ್ನೂ ಬಿಟ್ಟ ಈಕಿನ ಯಾಕ ಅರಿವಿ ತೊಳಿಬೇಕು? ಈಕೀನ ಯಾಕ ಭಾಂಡೆ ತಿಕ್ಕಬೇಕು? ಅನ್ನೋ ಪ್ರಶ್ನೆ ಕಾಡಲಿಕ್ಕಾರಂಭಾಯ್ತು.ಆಕಿ ಕೆಲಸಾ ಮಾಡ್ಬಾರದು ಅಂತೇನಿಲ್ಲ ನಮ್ಮ ಸಣ್ಣವ್ವ ಮತ್ತು ಅವರಿವರು ಹೇಳಿದ ರೀತಿ! ಯಾವಾಗ್ಲೂ ಅಗಸರ ಕತ್ತೇ ತರ ಅದನ್ನss ಮಾಡ್ತಿರ್ತಾಳ ಅನ್ನೋದು ಮನಸ್ಸಿಗೆ ನೋವಾಯ್ತು. ಸಂಜೆ ಹೆಂಗಸರನ್ನೆಲ್ಲ ಒಂದ್ಕಡೇ ಕೂಡಿಸಿದೆ. ಮತ್ತೇ ಅವ್ವನನ್ನೂ ನೆನೆಸಿಕೊಂಡು ಎಲ್ಲರೂ ಒಂದೊಂದು ತರದಲ್ಲಿ ಹಿಂದೆನಾಗಿತ್ತೋ, ಮುಂದೇನಾಗಬೇಕೋ ಅದೆಲ್ಲವನ್ನೂ ತಮ್ಮ ಅಳುವಿನಲ್ಲಿ ತೋಡಿಕೊಳ್ಳ ಹತ್ತಿದರು. ಅದರಲ್ಲಿ ಮತ್ತೇ ತಂಗಿ ಮಂಜುಳಾ ಕಾಣಲಿಲ್ಲ. ಸಾಕು, ಎಲ್ಲರೂ ಅಳು ನಿಲ್ಲಿಸ್ರಿ ಅಂದೆ, “ಮಂಜುಳಾ ಎಲ್ಲಿ?” ಅಂತ ಕೇಳಿದೆ. ಅಷ್ಟನ್ನೋದೇ ತಡ ಹಿತ್ತಲಲ್ಲಿ ಭಾಂಡೆ ತೊಳಿಯೋದ ಬಿಟ್ಟು ಓಡಿ ಬಂದಳು. ಅವ್ವ ಇರುವಷ್ಟು ದಿನ ತೌರುಮನೆಗೆ ಒಂದ ಅರ್ಥ ಇತ್ತು. ಈಗ ತಾಯಿಯಿಲ್ಲದ ತವರು ಅಂದ್ರ ಒಂತರ ನೆರಳಿಲ್ಲದ ಮರ ಇದ್ದಂಗ ಆಗಬಾರದು, ಅಂತ ಎಲ್ಲಾರೂ ಹೇಳ್ತಾರ. ಹಂಗ್ಯಾರು ಅಂದ್ಕೋಬ್ಯಾಡ್ರಿ ನನ್ನ ಕಡೆಯಿಂದ ಎಷ್ಟು ಸಾಧ್ಯನೋ ಅಷ್ಟು ಮಾಡ್ತಾನss ಬಂದಿನಿ. ಈಗಲೂ ಅಷ್ಟೇ! ನನಗ ನೌಕರಿ ಐತಿ ಅಂದ್ರ, ಅದರಂಗ ನನಗೂ ಖರ್ಚು ಇರ್ತಾವ, ಶಹರದಾಗ ಅದೇವಿ, ಅಲ್ಲಿ ಮಕ್ಕಳು ಓದಾಕತ್ತಾರ, ಆ ಖರ್ಚುಗಳೆಲ್ಲ ಭಾಳ ದುಬಾರಿ. ಇನ್ನ ಮ್ಯಾಲ ಮಂಜವ್ವ ಮತ್ತ ಆಕಿ ಮಗಳು ರಾಣಿ, ಅವರೆಲ್ಲರ ಕಡೆ ಸ್ವಲ್ಪ ಎಲ್ಲಾರ್ದು ಕಾಳಜಿ ಇರಲಿ.
ಸಂಬಂಧಗಳಿಗೆ ಕೊಂಡಿ ಬೆಸೆದುಹೋದ ಅವ್ವ ತಾನಾಡಿದ ಕೊನೆ ಮಾತುಗಳಲ್ಲಿ ಉಸಿರಾಗಿ ನಿಂತಳು. ಖಾಲಿ ಮನೆ ಮಾಡದೇ ಗೌಜು ಗದ್ದಲದ ಜೇನಿನ ಗೂಡಾಗಿರುವಂತೆ ಅಪೇಕ್ಷಿಸಿದ್ದಳು. ಅವು ನಮ್ಮ ಮನೆಯ ಗೋಡೆಗಳ ಮಧ್ಯೆ, ಜಗಲಿಯ ನಗುವಿನೊಳಗೆ, ಊಟದ ತಟ್ಟೆಗಳ ಸದ್ದಿನಲ್ಲಿ, ಸಂಬಂಧಗಳ ಉಸಿರಿನಲ್ಲಿ ಉಳಿದುಕೊಂಡವು. ಮಂಜವ್ವನ ಮಗಳು ರಾಣಿ ಓದುತ್ತಾ ದೊಡ್ಡವಳಾಗುತ್ತಿರುವಾಗ, ಅವ್ವ ಕನಸು ಕಂಡ ಬದುಕು ನಿಧಾನವಾಗಿ ರೂಪ ತಾಳುತ್ತಿರುವಂತೆ ಅನಿಸುತ್ತಿದೆ. ಒಮ್ಮೆ ಜಗಲಿಯ ಮೇಲೆ ಕೂತು ಎಲ್ಲರ ಬದುಕನ್ನು ಕಟ್ಟಿ ಹಿಡಿದಿದ್ದ ಅವ್ವ, ಇಂದು ಕಾಣಿಸದ ಕೈಯಾಗಿ ನಮ್ಮನ್ನೆಲ್ಲ ಒಟ್ಟಿಗೆ ಹಿಡಿದು ನಿಲ್ಲಿಸಿದಂತಿದೆ. “ಗರಿಬ ತಂಗಿ ಮಂಜವ್ವ, ಆಕೀ ಮಗಳು ರಾಣಿನ ಚೆನ್ನಾಗಿ ನೋಡಕೊಳ್ರಿ, ಅಂತಾವ್ ಎಷ್ಟೋ ಮಕ್ಕಳಿಗೆ ಆಸ್ರ ಆಗ್ರಿ” ಅಂತ ಹೇಳಿದ ಆಕೆಯ ಕೊನೆಯ ಮಾತುಗಳು, ಆಕೆ ಹೋದ ಮೇಲೂ ಅವು ನಮ್ಮನ್ನೆಲ್ಲ ಕಟ್ಟಿಹಾಕಿವೆ. ಒಂದೆಡೆ ಬಂಧಿಸಿವೆ. ನೆನಪುಗಳ ಅಲೆಗಳ ಮೇಲೆ ದೋಣಿ ಸಾಗುತಿದೆ ಮುಳುಗದೆ…
ಶ್ರೀಧರ ಗಸ್ತಿ ಧಾರವಾಡ



