ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಗಜಲ್
(ಲಕ್ಷ್ಮಣ್ ಶರೆಗಾರ್ ಸರ್ ಅವರ ಶಾಯರಿಯ ಮಿಸ್ರಾ ಬಳಸಿಕೊಂಡು ಬರೆದದ್ದು
ನಿನ್ನನು ನೀ ಹಿಡಿದಿಟ್ಟುಕೊಂಡ ಮೇಲೆ ನನ್ನನು ನಾನು ಬಿಡಿಸಿಕೊಂಡಿದ್ದೇನೆ )
ನಿನ್ನನು ನೀನು ಹಿಡಿದಿಟ್ಟುಕೊಂಡ ಮೇಲೆ
ನನ್ನನು ನಾನು ಬಿಡಿಸಿಕೊಂಡಿದ್ದೇನೆ
ನೀ ಮೌನವ ಅಪ್ಪಿಕೊಂಡ ಮೇಲೆ,
ನಾ ಮಾತಿನೊಂದಿಗೆ ಅಂತರ ಇರಿಸಿಕೊಂಡಿದ್ದೇನೆ
ಅದೆಷ್ಟು ಸಲೀಸಾಗಿ ನನ್ನನು
ಕಡೆಗಣಿಸಿ ಮುಂದೆ ಸಾಗಿದೆ
ನೀ ನನ್ನನು ಆಯ್ಕೆಯಾಗಿ ನೋಡಿದ ಮೇಲೆ,
ನನ್ನನೇ ನಾ ಆದ್ಯತೆಯನ್ನಾಗಿ ಆರಿಸಿಕೊಂಡಿದ್ದೇನೆ
ಮೊಹಬ್ಬತ್ತಿನ ಅದಾಲತ್ತಿನಲಿ
ಮನಸುಗಳೇ ಸಾಕ್ಷಿ ಹೇಳುವವು
ನೀ ಹೃದಯದ ಕರೆಗೆ ಓಗೊಡದಾಗ,
ನಾ ನೆನಪುಗಳ ಜೈಲಿನಿಂದ ತಪ್ಪಿಸಿಕೊಂಡಿದ್ದೇನೆ
ನಿನ್ನನು ಹಳಸದ ಹೊಂಗನಸಿನಂತೆ ಸಿಂಗರಿಸಿ ರಾತ್ರಿ ಕಳೆಯುತ್ತಿದ್ದೆ
ನೀ ಮಗ್ಗಲು ಬದಲಿಸಿದ ಮೇಲೆ,
ನಾ ಕಣ್ತುಂಬ ನಿದಿರೆಯನು ಕಟ್ಟಿಟ್ಟುಕೊಂಡಿದ್ದೇನೆ
ಹುಸಿ ಕಲ್ಪನೆಯಲಿ ಸುಮ್
ಸುಮ್ಮನೆ ಖರ್ಚಾದಳು ವಾಣಿ
ನೀ ದೂರಾದ ಮೇಲೆ ,
ನಾ ಬಾಳಲು ತುಸು ಬದುಕನು
ಕೂಡಿಟ್ಟುಕೊಂಡಿದ್ದೇನೆ.
ವಾಣಿ ಯಡಹಳ್ಳಿಮಠ



