ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಡಾ.ಪ್ರಕಾಶ ಖಾಡೆ ಈ ಹೆಸರು ನಮ್ಮ ಜಿಲ್ಲೆಯಲ್ಲಿ ಸದಾ ಸಂಚಲನದಲ್ಲಿರುವ ಹೆಸರು. ನಡೆಯಂತೆ ನುಡಿ ನುಡಿಯಂತೆ ನಡೆ ಇವರ ಸ್ವಭಾವ. ಆಡು ಮುಟ್ಟದ ಗಿಡವಿಲ್ಲ ಖಾಡೆಸರ್ ಬರೆಯದ ಸಾಹಿತ್ಯವಿಲ್ಲ ಎಂದು ಸರಳವಾಗಿ ಹೇಳಬಹುದು. ಎಲ್ಲರೊಂದಿಗೆ ಬೆರೆಯುವ, ಮಾತನಾಡುವ ಮೃದು ಸ್ವಭಾವದ ಹಮ್ಮು ಬಿಮ್ಮು ಇಲ್ಲದ ವ್ಯಕ್ತಿತ್ವ. ಇವರ ಮಾತು ನಮಸ್ಕಾರ ಸರ್, ನಮಸ್ಕಾರ ಮೇಡಂ ಎಂಬುದರೊಂದಿಗೆ ಪ್ರಾರಂಭವಾಗುತ್ತದೆ ಅದು ಫೋನ್ ಆಗಿರಲಿ ಎದುರಿಗೆ ಇರಲಿ. ಚಿಕ್ಕವರಿರಲಿ ದೊಡ್ಡವರು ಇರಲಿ ಅದೇ ಸರಳತೆ ಅದೇ ನಯವಿನಯತೆ. ಯಾವುದೇ ವೇದಿಕೆಯಲ್ಲಿ ತಮಗೆ ಕೊಟ್ಟ ಕಾರ್ಯ ಉಪನ್ಯಾಸ, ವಿಚಾರ ಸಂಕಿರಣ, ಜಾನಪದ  ಇರಲಿ ಅತ್ಯಂತ ಸುಂದರವಾಗಿ, ಲೀಲಾಜಾಲವಾಗಿ ಮನತಟ್ಟುವಂತೆ ಮಾತನಾಡಿ ಮುಗಿಸುವ ಶೈಲಿ ಅದ್ಭುತ.

ಜಾನಪದದಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ. ಕಾರಣ ಅಷ್ಟು ಜಾನಪದದಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಪ್ರಕಾಶ್ ಸರ್ ನಮಗೆ ಆಗಾಗ ಮುಖಾಮುಖಿ ಆಗುತ್ತಲೇ ಇರುತ್ತಾರೆ. 

            ಅವರ ಬೆಳಕಾಯಿತು ಬಾಗಲಕೋಟೆ ಎಂಬ ಉಪನ್ಯಾಸ ಸರಣಿ ಫೇಸ್ಬುಕ್ ಲೈವ್ ನಲ್ಲಿ ನಾಡಿನ ವಿದ್ವಾಂಸರಿಂದ ಅವಿಭಜಿತ ವಿಜಯಪುರ ಬಾಗಲಕೋಟೆ ಜಿಲ್ಲೆಯ ಸಾಧಕರನ್ನು ಕುರಿತು 140  ಕ್ಕೂಹೆಚ್ಚು ಉಪನ್ಯಾಸಗಳು ಪ್ರಸಾರವಾಗಿವೆ. ಇವುಗಳಲ್ಲಿ ನನ್ನದು ಒಂದು ಉಪನ್ಯಾಸ ಸೇರಿಕೊಂಡಿದೆ ಇವರ ಒಟ್ಟು 51 ಕೃತಿಗಳು ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ ಆಜೂರ ಪ್ರತಿಷ್ಠಾನ ಪ್ರಶಸ್ತಿ ಹೀಗೆ ಒಂದರ ಹಿಂದೆ ಒಂದರಂತೆ ಸಾಲು ಸಾಲು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದದ್ದು ವಿಶೇಷ. ಇವರ ಲೇಖನಗಳು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಗಳ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿವೆ. ನಿಜಕ್ಕೂ ಇದು ಬಾಗಲಕೋಟೆ ಜಿಲ್ಲೆಗೆ ಹೆಮ್ಮೆಯ ವಿಷಯವೇ ಸರಿ.

    ಇದೇ ವರ್ಷ ಜೂನ್ ತಿಂಗಳಲ್ಲಿ‌ 60 ತುಂಬಿ ವೃತ್ತಿಯಿಂದ ನಿವೃತ್ತಿ ಹೊಂದಿದರು. ಆದರೆ ಪ್ರವೃತ್ತಿಗೆ ಇನ್ನೂ ಹೆಚ್ಚಿನ ಇಂಬು ಸಿಕ್ಕಂತಾಯಿತು. ಅರಳು ಮರಳು ಎನ್ನುವ ವಯಸ್ಸಿನ ಮರುಳತೆ ಇವರಿಗೆ ಇಲ್ಲವೇ ಇಲ್ಲ.

ಮರಳಿ ಅರಳುವದು ಎಂದರೆ ಇವರಿಗೆ ಒಪ್ಪುತ್ತದೆ. ಹಾಗೆ ಇನ್ನೂ ಹೆಚ್ಚಿನ ಕ್ರಿಯಾಶೀಲತೆ ಹೊಂದಿ ನಿತ್ಯವೂ ಒಂದಿಲ್ಲ ಒಂದು ಕಾರ್ಯಕ್ರಮಗಳ ಜರ್ನಿ ನಡೆದೇ ಇದೆ. ಮನುಷ್ಯ ಸದಾ ಕ್ರಿಯಾಶೀಲತೆ ಹೊಂದಿದ್ದರೆ ಅವರಿಗೆ ವಯಸ್ಸು ಒಂದು ಲೆಕ್ಕವಷ್ಟೇ. ಉದಾಹರಣೆ ಖಾಡೆ ಸರ್ ಎಂದು ಹೇಳಬಹುದು. ಕಳೆದೆರಡು ದಶಕಗಳಿಂದ ದಣಿವರಿಯದೆ ಬರೆಯುತ್ತಿರುವ ಅವಿಶ್ರಾಂತ ಬರಹಗಾರರು ನಮ್ಮ ಸಾಹಿತ್ಯ ಲೋಕದ ಒಡನಾಡಿ ಪ್ರಕಾಶ್ ಸರ್.

    ನಾನು ಅವರ ಬಗ್ಗೆ ಪ್ರಶಂಸೆ ಮಾಡಲು ಹೊರಟಿಲ್ಲ ಹಾಗೆ ಅವರಿಗೆ ಪ್ರಶಂಸೆಯ ಅವಶ್ಯಕತೆ ಇಲ್ಲ. ಹೂ ಯಾರ ಅನತಿಗೂ ಕಾಯದೆ ಅರಳುತ್ತದೆ. ಹಾಗೆ ಪ್ರಕಾಶ್ ಸರ್ ತಮ್ಮನ್ನು ತಾವು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅವರ ಕೆಲವು ಪುಸ್ತಕಗಳು ನನ್ನಲ್ಲಿವೆ. ಅದರಲ್ಲಿ ನಾನು ಇಷ್ಟಪಟ್ಟು ಓದಿದ ಹಾಗೂ ಒಂದೇ ಬಾರಿ ಓದಿ ಮುಗಿಸಿದ ಕಥಾ ಸಂಕಲನ ಎಂದರೆ ‘ಬಾಳುಕುನ ಪುರಾಣ’. ನನಗೆ ಕಥೆ ಓದುವುದೆಂದರೆ ತುಂಬಾ ಇಷ್ಟ. ಆದರೆ ನಾನು ಕಥೆಗಳನ್ನು ಬರೆದಿದ್ದು ತುಂಬಾ ಕಡಿಮೆ. ದೊಡ್ಡಮಟ್ಟದ ಕಥೆಗಳನ್ನು ಬರೆದಿಲ್ಲ. ಸಣ್ಣ ಸಣ್ಣ ಕಥೆಗಳನ್ನು ಬರೆದಿರುವೆ. ಆದರೆ ಅವುಗಳನ್ನ ಅಚ್ಚಾಗಿಸಿಲ್ಲ. ಏನಿದ್ದರೂ ನನಗೆ ಕಾವ್ಯವೇ ಪ್ರಧಾನವಾಗಿ ಆರಿಸಿಕೊಂಡವಳು. ಕಾವ್ಯದ ವಿವಿಧ ಪ್ರಕಾರಗಳಲ್ಲಿ ಬರೆಯಬಲ್ಲೆ. ಅದೇಕೋ ಕತೆ ನನಗೆ ಒಲೆಯಲಿಲ್ಲವೋ ಅಥವಾ ನಾನೇ ಮನಸ್ಸು ಮಾಡಲಿಲ್ಲವೋ ಅರ್ಥವಾಗಿಲ್ಲ. ಆದರೆ ಒಂದಂತೂ ಸತ್ಯ ಪ್ರಕಾಶ್ ಸರ್ ಈ ಎರಡನೇ ಕಥಾಸಂಕಲನ ಓದಿದ ಮೇಲೆ ಕಥೆ ಬರೆಯಬೇಕೆಂಬ ಹಂಬಲ ಹುಟ್ಟಿಕೊಂಡಿದೆ. 

ಅಷ್ಟು ಈ ಕಥಾಸಂಕಲನ ನನ್ನ ಮೇಲೆ ಜಾದು ಮಾಡಿದೆ. 

ಬಾಳುಕುನ ಪುರಾಣ ಕುರಿತು.

ಈ ಕಥಾ ಸಂಕಲನದಲ್ಲಿ ಒಟ್ಟು 10 ಕತೆಗಳಿವೆ. ಅನಿಕೇತ ಪ್ರಕಾಶನ ನವನಗರ ಬಾಗಲಕೋಟೆಯಿಂದ ಪ್ರಕಾಶನಗೊಂಡಿದೆ.ಡಾ. ಬಸು ಬೇವಿನಗಿಡದ ಇವರು ಅತ್ಯಂತ ಸೊಗಸಾಗಿ ಮುನ್ನುಡಿ ಬರೆದಿದ್ದಾರೆ. ಮುನ್ನುಡಿ ಓದಿದರೆ ಸಾಕು 10 ಕಥೆಗಳ ಮಾರ್ಮಿಕ ದರ್ಶನ ಸಿಗುತ್ತದೆ. ಬಸ್ಸು ಸರ್ ಬರವಣಿಗೆಯಲ್ಲಿ ಎತ್ತಿದ ಕೈ. ಅವರಿಂದ ಬರೆಸಿಕೊಂಡ ಬಾಳುಕುನ ಪುರಾಣದ ಮುನ್ನುಡಿ ಹೇಗಿರಬೇಕೆಂದು ಊಹಿಸಿಕೊಳ್ಳಿ. ಕಥಾ ಸಂಕಲನದ ಲೇಖಕರು ಕಥಾ ಸಂಕಲನಕ್ಕೆ ಮುನ್ನುಡಿ ಬರೆದವರು ಇಬ್ಬರೂ ಹೆಮ್ಮೆಯ ಬರಹಗಾರರು. ಬೆನ್ನುಡಿ ಬರೆದು ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿ ಬೆನ್ನು ತಟ್ಟಿದ ನಾಡಿನ ಖ್ಯಾತ ಕಥೆಗಾರರಾದ ಕುಂವೀ ಸರ್ ಕೂಡ ಅತ್ಯಂತ ಹೃದ್ಯವಾಗಿ ಬೆನ್ನುಡಿ ಬರೆದಿದ್ದಾರೆ. ಮುಖಪುಟ ವಿನ್ಯಾಸ ಮಾಡಿದ ಟಿ .ಎಫ್. ಹಾದಿಮನಿಯವರಿಗೂ ಹೃತ್ಪೂರ್ವಕ ನಮನಗಳನ್ನ ಹೇಳಲೇಬೇಕು. ಕಥಾ ಸಂಕಲನಕ್ಕೆ ಅಷ್ಟು ಸೊಗಸಾದ ವಿನ್ಯಾಸ ಮಾಡಿದ್ದಾರೆ.

ಈ ಹತ್ತು ಕಥೆಗಳಲ್ಲಿ ಬಾದಾಮಿ, ಬಾಗಲಕೋಟೆ, ಜಮಖಂಡಿ, ತೊದಲಬಾಗಿ, ಕೆರೂರ, ಇಳಕಲ್ಲ, ಮಹಾಕೂಟ ಹೀಗೆ ಬಾಗಲಕೋಟ ಜಿಲ್ಲೆಯಲ್ಲಿ ಸುತ್ತುವರಿದು ಕಥೆಗಳನ್ನ ಹುಟ್ಟು ಹಾಕಿದ್ದಾರೆ. ಖಾಡೆ ಸರ್ ನಿಸರ್ಗ ಪ್ರೇಮಿ. ಪರಿಸರದ ಕೂಸಾಗಿ ಪರಿಸರವನ್ನೇ ಹಾಸಿ ಹೊದ್ದು ಕಥೆಗಳ ಚೆಲುವನ್ನು ಓದುಗರಿಗೆ ಉಣಬಡಿಸಿದ್ದಾರೆ. ಇಲ್ಲಿನ ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ ಕಥೆಗಳಾಗಿವೆ. ಗ್ರಾಮ್ಯ ಭಾಷೆಯ ಸೊಗಡನ್ನು ಕಥೆಗಳಲ್ಲಿ ತೊಡಗಿಸಿದ ತಂತ್ರಗಾರಿಕೆಯನ್ನು ಓದಿಯೇ ಅನುಭವಿಸಬೇಕು. ಎಷ್ಟೊಂದು ಹಳೆಯ ಕನ್ನಡ ಶಬ್ದಗಳು ಇಂದು ನಮ್ಮ ನಿಮ್ಮಲ್ಲಿ ಕಳೆದು ಹೋಗಿವೆ. ಅಂತಹ ಶಬ್ದಗಳು ನಿಮಗೆ ಇಲ್ಲಿ ಆರಾಮವಾಗಿ ಸಿಗುತ್ತವೆ. ಆದರೆ ಕನ್ನಡದ ಗ್ರಾಮ್ಯ ಭಾಷೆಯ ಶಬ್ದಗಳನ್ನ ಅರಿಯಲು ನಾವು ಹರಸಾಹಸ ಪಡಬೇಕು. ಕಾರಣ ಇಂದು ನಾವು ಅವುಗಳನ್ನು ಬಳಸುವುದನ್ನೇ ಬಿಟ್ಟಿದ್ದೇವೆ. ಅಂತಹ ಗ್ರಾಮೀಣ ಭಾಷೆಯನ್ನ ಉಳಿಸಿ ಬೆಳೆಸುವ ಮಹತ್ವಪೂರ್ಣ ಕಾರ್ಯ ಈ ಕಥಾಸಂಕಲನದಲ್ಲಿ ಆಗಿದೆ. ನಮ್ಮ ಮಕ್ಕಳು ಮೊಮ್ಮಕ್ಕಳು ಮುಂದಿನ ಪೀಳಿಗೆಗೆ ಈ ಕಥೆಗಳು ಗ್ರಾಮೀಣ ಸೊಗಡನ್ನು ನೀಡಿ ಮರೆಯದೆ ಉಳಿಸಿ ಬೆಳೆಸಲು ಸಹಾಯವಾಗಿದೆ. ಓದಿನ ಪ್ರೀತಿಯನ್ನ ವಿಸ್ತರಿಸುತ್ತಾ ಸಾಗುವ ಜಾಣ್ಮೆ ನಿಜಕ್ಕೂ ಸ್ವಾಗತಾರ್ಹ 

ಜಾನಪದ ತಜ್ಞರಾದ ಖಾಡೆ ಸರ್ ಜಾನಪದ ದಾಟಿಯಲ್ಲಿಯೇ ಹಳ್ಳಿಗರನ್ನ ನಮ್ಮ ಜೊತೆ ಮಾತನಾಡಿಸಿದ್ದಾರೆ. ಇಲ್ಲಿಯ ಪಾತ್ರಗಳು ಕಥೆಗಳನ್ನ ಹೇಳುತ್ತಾ ನಮ್ಮನ್ನು ಅದ್ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತವೆ. ಇಲ್ಲಿ ನಾನು ಯಾವ ಕಥೆಯ ಬಗ್ಗೆ ಬರೆಯಬೇಕು ಎಂಬುದೇ ಗೊತ್ತಾಗುತ್ತಿಲ್ಲ ಕಾರಣ ಎಲ್ಲವೂ ಮೇಲುಗೈ ಸಾಧಿಸಿದ ಕಥೆಗಳೇ ಆಗಿವೆ. ಓದ್ತಾ ಓದ್ತಾ ಒಮ್ಮೊಮ್ಮೆ ಸಂಕೋಚ, ಒಮ್ಮೊಮ್ಮೆ ಹಾಸ್ಯ, ಒಮ್ಮೊಮ್ಮೆ ವಿಡಂಬನೆ, ಅಯ್ಯೋ ಮುಂದೇನಾಗುತ್ತೋ ಎಂಬ ಪೇಚಿನಲ್ಲಿ ಸಿಕ್ಕಿಸುತ್ತದೆ ಕೂಡಲೇ ಏನು ನಡೆಯಲೇ ಇಲ್ಲ ಎಂಬಂತೆ ನಿರಾಳವೆನಿಸುತ್ತದೆ. ಎಳೆ ಎಳೆಯಾಗಿ ಓದಿಸಿಕೊಂಡು ಮೈಮನವೆಲ್ಲ ಅದೇನೋ ಪ್ರಭಾವಲಯ ಆವರಿಸಿದಂತಾಗುತ್ತದೆ. ಕಥೆಗಳನ್ನು ಹೀಗೂ ಬರೆಯಬಹುದಾ ಎಂಬ ಜಿಜ್ಞಾಸೆ ಹುಟ್ಟಿದ್ದು ಸತ್ಯ. ಇಲ್ಲಿಯ ಪಾತ್ರಗಳು ಕೇವಲ ಪಾತ್ರಗಳಾಗಿಲ್ಲ ಅವುಗಳಲ್ಲಿ ಜೀವಂತಿಕೆ ಇದೆ. ನಮ್ಮನ್ನು ಹಿಡಿದಿಡುವ ಉತ್ಸುಕತೆ ಇದೆ. ಆ ಪಾತ್ರಗಳ ಚಿತ್ರಣ ಇಲ್ಲಿಯೇ ನಮ್ಮ ಮುಂದೆಯೇ ನಡೆದಿದೆ ಏನೋ ಎಂದು ಭಾಸವಾಗುತ್ತದೆ. ಬಹಳ ದಿನಗಳ ನಂತರ ಒಂದು ಒಳ್ಳೆಯ ಪುಸ್ತಕ ಓದಿದ ಖುಷಿ ನನ್ನನ್ನು ಆವರಿಸಿತು.

       ಅಕ್ಕರ ತಾಯವ್ವ ಹಾಗೂ ಸಾಲಿ ಝಂಡಾ ಕಥೆಗಳಲ್ಲಿ ನನ್ನ ಅನುಭವಗಳು ಇದರಲ್ಲಿ ಇವೆ ಏನೋ ಎಂದು ನನಗೆ ಭಾಸವಾಯಿತು. ಒಪ್ಪಾರೆ ಮೀಸಿ ಅದೆಷ್ಟು ವಿನೋದ ಒಡ್ಡುತ್ತದೆ ಎಂದರೆ ಒಬ್ಬರೇ ನಗಬಹುದು. ‘ಬುದ್ಧ ಪ್ರಿಯೆ ಶಾಂತಿ ಕಥೆಯು ಗಮನಾರ್ಹವಾಗಿ ಮನಸೆಳೆಯುತ್ತದೆ. ವಾಸ್ತವ ನೆಲಗಟ್ಟಿನ ಇವರ ಎಲ್ಲಾ ಕಥೆಗಳಲ್ಲಿ ಜಾನಪದ ಶೈಲಿಯ ಭಾಷೆಯ ಚೆಲುವು ಎದ್ದು ಕಾಣುತ್ತದೆ. ಬಹಿರೂಪಗಾರರ ತಂಡವು ಊರಿಂದ ಊರಿಗೆ ತಮ್ಮ ನಾಟಕ ಪ್ರದರ್ಶನಗಳನ್ನ ಕೊಡುವುದನ್ನು ನಾನು ಕೂಡ ಚಿಕ್ಕವಳಿದ್ದಾಗ ನೋಡಿರುವೆ. ಕೊರವಂಜಿಯವರು, ಪಿನ್ನು ಪುಗ್ಗ ಮಾರುವವರು, ದುರಗಮುರುಗಿಯವರು ಹೀಗೆ ಎಷ್ಟು ರೀತಿಯ ವೇಷ ಹಾಕಿಕೊಳ್ಳುವವರು ಇಂದು ನಮ್ಮ ನಡುವೆ ಸರಿದು ಹೋಗಿವೆ.  ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ   ಚಪಾತಿ ಪಾಂಡ್ಯ ಎನ್ನುವ ಚಿಕ್ಕ ಚಿಕ್ಕ ಸರ್ಕಸ್ ನಲ್ಲಿ ಶಾಲೆಗೆ ಬರುವ ವೇಷಧಾರಿಗಳಲ್ಲಿ ಅತ್ಯಂತ ಹಾಸ್ಯಮಯವಾದ  ನೆನಪಿನಲ್ಲಿ ಉಳಿಯುವ ಪಾತ್ರ.. ಮುಳುಗದಿರಲಿ ಬದುಕು ಇಲ್ಲಿ ಸ್ಕೂಟಿಯಲ್ಲಿ ಬಂದ ಹುಡುಗಿ ಅವನ ಜೀವನದ ಮಹತ್ವಪೂರ್ಣವಾದ ಎಲ್ಲಾ ಕಾಗದ ಪತ್ರಗಳನ್ನ ತಲುಪಿಸುವಲ್ಲಿ ನಡೆಯುವ ತಳಮಳ ನಾವೇ ಅನುಭವಿಸಿದಂತಾಗುತ್ತದೆ. ನನಗೆ ಬಹಳ ಹಿಡಿಸಿದ ಕಥೆ ಮೊದಲ ಕಥೆ. ಅದುವೇ ಬಾಳಕುನ ಪುರಾಣ.

   10 ಕಥೆಗಳ ಬಗ್ಗೆ ಬರೆದರೆ ಮತ್ತೊಂದು ಕತೆಯೇ ಆದೀತು. ಅದಕ್ಕೆ ನಾನು ಹಾಗೆ ಮಾಡಲಾರೆ. ಈಗಾಗಲೇ ಬಹಳ ಜನರ ಕೈ ತಲುಪಿದ ಕಥಾ ಸಂಕಲನ ಮನವನ್ನು ತಟ್ಟಿದೆ. ಅಂದಮೇಲೆ ನಾನೇನು ಹೆಚ್ಚಿಗೆ ಹೇಳಲಾರೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಜಾದು ಮಾತ್ರ ಇದರಲ್ಲಿ ಅಡಗಿದೆ. ತುಂಬಾ ಬೇಜಾರಾದಾಗ ಡಾ. ಪ್ರಕಾಶ್ ಖಾಡೆಯವರ “ಬಾಳಕುಣ ಪುರಾಣ‌‌” ಕೈಗೆತ್ತಿಕೊಳ್ಳಿ ಸಾಕು. ಬೇಜಾರು ಹೇಳ ಹೆಸರಿಲ್ಲದೆ ಓಡಿ ಹೋಗುತ್ತದೆ ಇಷ್ಟು ಮಾತ್ರ ಹೇಳಬಲ್ಲೆ. 

ಖಾಡೆ ಸರ್ ಬಗ್ಗೆ ಮತ್ತೆ ಮತ್ತೆ ಹೇಳಿದರೆ ಅದು ಸೂರ್ಯನನ್ನು ಪರಿಚಯ ಮಾಡಿದಂತಾಗುತ್ತದೆ.


ಮುಖ್ಯಾಧ್ಯಾಪಕಿ 

ನೂತನ ಪ್ರೌಢಶಾಲೆ ಜಾಲಿಹಾಳ.

ತಾ.ಬಾದಾಮಿ.

ಜಿ. ಬಾಗಲಕೋಟೆ. 

7022762780

About The Author

Leave a Reply

You cannot copy content of this page

Scroll to Top