ಪುಸ್ತಕ ಪ್ರಪಂಚ
ಶ್ರೀವಲ್ಲಭ. ರಾ. ಕುಲಕರ್ಣಿ

ಮಹಾಂತೇಶ. ವೀ. ಕೋಳಿವಾಡ
“ಬಸ್ ಪ್ರಪಂಚ”


ಪುಸ್ತಕದ ಹೆಸರು: ಬಸ್ ಪ್ರಪಂಚ
ಲೇಖಕರು: ಮಹಾಂತೇಶ. ವೀ. ಕೋಳಿವಾಡ
ಪ್ರಕಾಶಕರು: ಸುಮಂಗಲಾ ಪ್ರಕಾಶನ, ಹುಬ್ಬಳ್ಳಿ
ಮುದ್ರಣ ವರ್ಷ: 2026
ಬೆಲೆ: 100/-
ನಗುತಲೇ ಪಯಣಿಸೋಣ
ಬಸ್ ಪ್ರಯಾಣದಲ್ಲಿ ಪ್ರಯಾಣಿಕರ, ಪ್ರಣಯ, ಪ್ರಯಾಸ, ಪ್ರಸಂಗಗಳು ಎಂಬ ಅಡಿ ಬರಹವನ್ನು ಹೊತ್ತ “ಬಸ್ ಪ್ರಪಂಚ” ಸುಂದರ ಮುಕುಟಧಾರಿಯಾದ ಶೀರ್ಷಿಕೆಯೊಂದಿಗಿನ ಮುಖ ಪುಟವು ಮೊದಲ ನೋಟದಲ್ಲೇ ಓದುಗರ ಗಮನ ಸೆಳೆಯುತ್ತದೆ. ಈ ಹೊತ್ತಿಗೆಯಲ್ಲಿ ಸುಮಾರು ನಾಲ್ವತ್ತೈದು ಕಿರು ಬರಹಗಳಿದ್ದು ಬಸ್ ಪ್ರಯಾಣದ ಸಂದರ್ಭದಲ್ಲಿ ಏನೆಲ್ಲಾ ರೋಚಕ ಸಂಗತಿಗಳು ಜರಗುತ್ತವೆ ಎಂದು ನಿವೃತ್ತ ಕಂಡಕ್ಟರ್ ಆದ ಲೇಖಕರು ತಮಗಾದ ಅನುಭವಗಳ ಮುಖೇನ ಅಲ್ಲಲ್ಲಿ ಹಾಸ್ಯ ಸಿಂಚನಗೈದು ನೆನಹುಗಳನ್ನು ಮತ್ತೆ ಚಿಗುರೊಡೆಸಿದ್ದಾರೆ.
ಯಾವುದೇ ಒಂದು ವಿಷಯವನ್ನು ಹವ್ಯಾಸವನ್ನಾಗಿಸಿದಾಗ ಕಾರ್ಯ ಪೂರ್ಣವಾಗುವವರೆಗೂ ನಿದ್ರಿಸಲೂ ಬಿಡದು ಎಂಬುದಕ್ಕೆ ಶ್ರಮ ಜೀವಿಯಾದ ಮಹಾಂತೇಶ ಕೋಳಿವಾಡ ಅವರೇ ಸಾಕ್ಷಿ. ಅತ್ಯಂತ ರಸಪೂರ್ಣವಾಗಿ ಹೊರಹೊಮ್ಮಿದ ಈ ಹೊತ್ತಿಗೆಯನ್ನು ಓದಿದಾಗ ಕಾಲ ಹಿಂದೆ ಸರಿದಂತಾಗಿ ನಮಗಾದ ಅನುಭವಗಳ ಪುಟಗಳು ಮನದಲ್ಲಿ ಬಿಚ್ಚುತ್ತಾ ಹೋಗುತ್ತವೆ.
ಬಸ್ ಗಳು ಈ ನಾಗರಿಕ ಸಮಾಜದ ಅವಿಭಾಜ್ಯ ಅಂಗಗಳು ಮತ್ತು ಜೀವನಾಡಿಗಳು ಎಂದು ತಮ್ಮ ವೃತ್ತಿಯ ಧ್ಯೇಯವನ್ನು ಸ್ಪಷ್ಟವಾಗಿ ಹೃದಯಾಂತರಾಳದಿಂದ ಉಲ್ಲೇಖಿಸಿದ್ದಾರೆ. ತಮ್ಮ ಊರಿನ ಬಸ್ಸುಗಳನ್ನು ಹಳ್ಳಿಗರು ಮಧುವಣಗಿತ್ತಿಯಂತೆ ಸಿಂಗರಿಸುತ್ತಾರೆಂದು ಲೇಖಕರು ಸಹರ್ಷದಿಂದ ಧನ್ಯತಾಭಾವದೊಂದಿಗೆ ಹೇಳುತ್ತಾರೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಇರುವ ಬಸ್ ನಿಲ್ದಾಣದಲ್ಲಿನ ಸೌಕರ್ಯಗಳನ್ನು ಹಾಗೂ ಇಂದಿನ ಹೈಟೆಕ್ ಸೌಲಭ್ಯಗಳನ್ನು ಯಥಾಕಥಿತವಾಗಿ ಬಿಂಬಿಸಲಾಗಿದೆ.
ಬಸ್ ಬಂತು ಬಸ್ ಎಂಬ ಬರಹವನ್ನೋದಿದಾಗ ಭಿಕ್ಷುಕಿಯ ಜೀವನದ ಪಾಡು ಕಂಡು ಕಣ್ಣಾಲಿಗಳು ತೇಲಿ ಬರುತ್ತವೆ. ಬದಲಾಯಿಸಿದ ಬಸ್ ಬದುಕು ಎಂಬ ಲೇಖನದಲ್ಲಿ ಸ್ವತಃ ಲೇಖಕರೇ ತಮ್ಮ ಅನುಭವ ಬುತ್ತಿಯನ್ನು ಬಿಚ್ಚಿದ್ದು, ಆಗ ಅವರು ಪಟ್ಟ ಕಷ್ಟವನ್ನು ಓದಿದಾಗ ಕರುಳು ಹಿಂಡುವ ಅನುಭವ ಆಗುತ್ತದೆ.
ಅಪಘಾತದಲ್ಲಿ ನಾನು ಬದುಕಿದ್ದೇ ಹೆಚ್ಚು, ದಾರಿ ಕಾಣದಾಗಿದೆ ಯಾತ್ರಿಕನೇ, ಕೆಸರು ನೀರಿಗೆ ಬೆದರಿದ ಬಸ್, ಕಂಡಕ್ಟರ್ ನ ಸಮಯ ಪ್ರಜ್ಞೆ ಇಂತಹ ಅನೇಕ ನೈಜ ಘಟನೆಗಳಿಗೆ ಅಕ್ಷರ ರೂಪ ಕೊಟ್ಟು ಬದುಕಿನ ಮತ್ತೊಂದು ಮಜಲನ್ನು ಅನಾವರಣಗೊಳಿಸಿದ್ದಾರೆ. ಮಾನವೀಯತೆ ಎಂಬುದು ಜಾಗೃತ ಸ್ಥಿತಿಯಲ್ಲಿ ಇದ್ದಾಗ ಕಷ್ಟದ ಸಮಯದಲ್ಲಿ ಮತ್ತೊಬ್ಬರಿಗೆ ಹೇಗೆ ಸಹಾಯವಾಗಬಲ್ಲದೆಂದು ಸ್ವತಃ ಲೇಖಕರು ಕಂಡಕ್ಟರ್ ಆದಾಗ, ಹಾವು ಕಚ್ವಿದ ಮಹಿಳೆಯನ್ನು ಹೆಗಲ ಮೇಲೆ ಹೊತ್ತು ಸಕಾಲಕ್ಕೆ ಆಸ್ಪತ್ರೆಗೆ ಅ್ಯಡ್ಮಿಟ್ ಮಾಡಿ ಜೀವ ಉಳಿಸಿದ್ದು ನಮಗೂ ಮಾನವೀಯತೆಯ ಪಾಠ ಮಾಡುವಂತಿದೆ. ರಸ್ತೆಯ ಬದಿಯಲ್ಲಿ ಮರ ಏಕೆ ಬೆಳೆಸಬೇಕು? ಎಂಬ ಪ್ರಶ್ನೆಗೆ ಲೇಖಕರು ತಮ್ಮದೇ ಆದ ಧಾಟಿಯಲ್ಲಿ ಉತ್ತರಿಸಿದ್ದಾರೆ. ಅಪ್ಪಾಜೀ ಈ ಬಸ್ಸಿಗೆ ಡ್ರೈವರೇ ಇಲ್ಲ ಎಂದು ಮಗರಾಯ ಭಯದಿಂದ ಕೂಗಿದಾಗ ಅಪ್ಪ ಕೊಟ್ಟ ಉತ್ತರ ಏನು? ಪ್ರಸಕ್ತ ಹೊತ್ತಿಗೆಯನ್ನು ಓದಿಯೇ ತಿಳಿಯಬೇಕು.
ಬ್ಯಾಗ ತುಂಬಾ ರೊಕ್ಕಾ ಇರಬೇಕಾದರೆ ಏನು ಮಾಡಬೇಕು? ನನಗೆ ಜನನಾಯಕನಂಥಾ ಗಂಡ ಬೇಕು, ನಮ್ಮಪ್ಪ ಉಫ್ ಅಂತ ಊದಿದ್ರೆ ಬಸ್ ಓಡುತ್ತೆ, ಯಪ್ಪಾ ಸ್ವಲ್ಪ ನಿಮ್ಮ ಬಸ್ಸಿನ ಹಾರ್ನ್ ಬಾರಸ್ರಿ, ಇದು ಲಗ್ನದ ಗಾಡಿ ಏನ್ರಿ? ಮುಂತಾಗಿ ಅನೇಕ ಲೇಖನಗಳು ಗ್ರಾಮ್ಯ ಹಾಗೂ ಗ್ರಾಂಥಿಕ ಭಾಷೆಯಲ್ಲಿ ಮಿಶ್ರಣಗೊಂಡಿದ್ದು ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ.
ತಮಾಷೆ ರೂಪದಲ್ಲಿ ಆದರೂ ‘ಕಂಡಕ್ಟರ್ ಗೆ ಬುದ್ಧಿ ಹೇಳಿದ ಹಿರಿಯ ಜೀವಿ’ ಯ ಲೇಖನದಲ್ಲಿ ಬರುವಂತೆ ಆತನಾಡಿದ ಆ ಪ್ರಾಮಾಣಿಕ ನುಡಿಗಳು ನಮಗೂ ಸಹ ಕರ್ತವ್ಯ ಲೋಪದಿಂದ ಎಚ್ಚರವಾಗಿರಲು ತಿಳಿ ಹೇಳುತ್ತವೆ.
ಪ್ರತಿಯೊಂದು ಪುಟ್ಟ ಬರಹಗಳಿಗೂ ಲೇಖಕರು ಕಂಡಕ್ಟರ್ ಸೇವೆಯಲ್ಲಿ ಇದ್ದಾಗ ತಮಗಾದ ಅನುಭವಾಮೃತಗಳಿಗೆ ಹಾಸ್ಯದ ರಸಾಯನವನ್ನು ಭರಿಸಿ ತುಂಬಾ ಚೆನ್ನಾಗಿ ಅಭಿವ್ಯಕ್ತಿಸಿದ್ದಾರೆ.
ನಿಮ್ಮ ಮನಸ್ಸು ಹಾಸ್ಯವನ್ನಿಷ್ಟ ಪಡುತ್ತದೆಯೇ? ಬಸ್ ನಲ್ಲಿ ಜರಗುವ ಮತ್ತೊಬ್ಬರ ರಸ ನಿಮಿಷಗಳನ್ನು ಓದಿಯಾದರೂ ನಕ್ಕು ನಲಿಯಬೇಕೇ? ಹಾಗಿದ್ದರೆ ಈ ಪುಸ್ತಕವನ್ನು ಕೊಂಡು ಓದಿ. ಗಂಭೀರ ಚಿಂತನೆಯನ್ನು ಬಿತ್ತುವ ಲೇಖನಗಳ ನಡುವೆಯೂ ಶಿರಾದಲ್ಲಿ ಸಿಗುವ ದ್ರಾಕ್ಷಿ ಗೋಡಂಬಿಗಳಂತೆ ಮುದ ನೀಡುವ ಹಾಸ್ಯದ ತುಣುಕುಗಳು ಓದುಗರ ಹೊಟ್ಟೆ ಹುಣ್ಣಾಗಿಸುತ್ತವೆ.
ಅತ್ಯುತ್ತಮ ಭಾಷಾ ಪ್ರೌಢಿಮೆ ಮತ್ತು ಭಾವಾಭಿಲಾಷೆಗಳನ್ನೊಳಗೊಂಡ ಈ ಕೃತಿ ಕನ್ನಡ ಸಾರಸ್ವತ ಲೋಕದ ಹಿರಿಮೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಕೊನೆಯ ಪುಟಗಳಲ್ಲಿ ಬಸ್ ನಿಲ್ದಾಣದ ಸಂಪರ್ಕ ಸಂಖ್ಯೆಗಳನ್ನು ನೀಡಿದ್ದು, ಪುಟ್ಟ ಕೈಪಿಡಿಯಂತಿರುವ ಈ ಹೊತ್ತಿಗೆ ಪ್ರತೀ ಮನೆಯಲ್ಲಿಯೂ ಇದ್ದರೆ ಬಸ್ ರಿಸರ್ವೇಶನ್ ಮಾಡಲು ಸಹಾಯಕವಾಗುವುದರಲ್ಲಿ ಸಂಶಯವೇ ಇಲ್ಲ.
ಶ್ರೀವಲ್ಲಭ. ರಾ. ಕುಲಕರ್ಣಿ




