ಪುಸ್ತಕಸಂಗಾತಿ
ಅರುಣಾ ನರೇಂದ್ರ

ಲೌಕಿಕ ಅಲೌಕಿಕಗಳ ಸಮನಾದ ಚಿಂತನೆ
ಡಾ.ಗೋವಿಂದಹಹೆಗಡೆ
“ಬದುಕು ಬಾರಾ ಕಮಾನು”


ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಡಾ. ಗೋವಿಂದ ಹೆಗಡೆಯವರು ವೃತ್ತಿಯಿಂದ ವೈದ್ಯರು. ಅರಿವಳಿಕೆ ತಜ್ಞರಾಗಿ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಡಾ. ಗೋವಿಂದ ಹೆಗಡೆಯವರು ಸುಮಾರು ಒಂದು ದಶಕದಿಂದ ನನಗೆ ಪರಿಚಿತರು. ಗಜಲ್ ಗುಂಪುಗಳಲ್ಲಿ ಗಜಲ್ ಬರವಣಿಗೆಯ ಮೂಲಕ ಆತ್ಮೀಯರಾದವರು. ಹಿರಿಯರೂ, ಪ್ರಾಜ್ಞರೂ ಎಂಬ ಗೌರವ ಭಾವ ನನಗಿದೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಭೇಟಿಯಾದಾಗ ಡಾ. ಹೆಗಡೆಯವರು *ಬದುಕು ಬಾರಾ ಕಮಾನು*, *ಗಜಲ್ ತಿಳಿಯೋಣ, ಬನ್ನಿ!* ಈ ಎರಡು ಕೃತಿಗಳನ್ನು ನನಗೆ ಪ್ರೀತಿಪೂರ್ವಕವಾಗಿ ಕೊಟ್ಟಿದ್ದರು. ಬಹಳ ಕುತೂಹಲದಿಂದ ಓದಿದೆ. ಕೆಲಸದ ಒತ್ತಡದಲ್ಲಿ ಪುಸ್ತಕ ಕುರಿತು ಬರೆಯಲು ತಡವಾಯಿತು. ಡಾ. ಹೆಗಡೆಯವರು ಓದಿದ್ದು ವೈದ್ಯಕೀಯ ಆದರೂ ಸಾಹಿತ್ಯದ ಕಡೆಗೆ ಹೆಚ್ಚು ಒಲವು. ಓದು ಅಧ್ಯಯನದಿಂದ ಮಾಗಿದ ವ್ಯಕ್ತಿತ್ವ. ಹಾಯಿಕು, ರುಬಾಯಿ, ಗಜಲ್ ಕುರಿತು ಸಾಕಷ್ಟು ಅಧ್ಯಯನ ಮಾಡಿದವರು. ತನಗ ಎಂಬ ಫಿಲಿಫೈನ್ಸ್ ಮೂಲದ ಕಿರು ಕಾವ್ಯಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇವರು ಕನ್ನಡ ಭಾಷೆಯನ್ನು ಚೆನ್ನಾಗಿ ತಿಳಿದವರು. ಗಜಲ್ ಕವಿಗಳಲ್ಲಿ ಶಬ್ದ ಶುದ್ಧತೆ ಮತ್ತು ಛಂದೋ ಬದ್ಧತೆಯನ್ನು ಅತ್ಯಂತ ಸೂಕ್ಷ್ಮವಾಗಿ ನಿರೀಕ್ಷಿಸುತ್ತಾರೆ. ಅಶುದ್ಧ ಬರಹ ಅಪಾರ್ಥಕ್ಕೆ ಎಡೆ ಮಾಡುತ್ತದೆ ಎಂಬುದು ಅವರ ಕಟ್ಟುನಿಟ್ಟಿನ ನಿಲುವು. ಇತ್ತೀಚಿಗೆ ಹೊಸ ಪ್ರಯೋಗದ ಹೆಸರಿನಲ್ಲಿ ಗಜಲ್ನ ಚೌಕಟ್ಟನ್ನು ಗಾಳಿಗೆ ತೂರಿ ಗಜಲ್ ರಚಿಸುವವರನ್ನು ತಿದ್ದಲು ಪ್ರಯತ್ನಿಸುತ್ತಲೇ ಇರುತ್ತಾರೆ. ಗಜಲ್ ಬರೆಸುವ, ಅವುಗಳನ್ನು ತಿದ್ದುವ ಕೆಲಸ ಮಾಡುವುದರ ಮೂಲಕ ಹಲವಾರು ಗಜಲ್ಕಾರರನ್ನು ಹುಟ್ಟುಹಾಕಿದ್ದಾರೆ ಮತ್ತು ಬೆಳೆಸಿದ್ದಾರೆ.
ಸಮಕಾಲೀನ ಗಜಲ್ಕಾರರಲ್ಲಿ ಗಜಲ್ ಕಾವ್ಯದ ಪರಿಶುದ್ಧತೆ, ಛಂದೋಬದ್ಧತೆ ಮತ್ತು ಗೇಯತೆಯತ್ತ ಹೆಚ್ಚು ಗಮನ ಕೊಟ್ಟು ಗಜಲ್ ಬರೆಯುವ ಕವಿಗಳಲ್ಲಿ ಡಾ. ಗೋವಿಂದ ಹೆಗಡೆಯವರು ಪ್ರಮುಖರು.
“ಬದುಕು ಬಾರಾ ಕಮಾನು” ಇದು ಇವರ ಮೊದಲ ಗಜಲ್ ಸಂಕಲನ. ‘ಜಂಗಮ’ ಕಾವ್ಯನಾಮದಿಂದ ಬರೆದ ೬೦ ಸುಂದರ ಗಜಲ್ಗಳು ಈ ಸಂಕಲನದಲ್ಲಿವೆ. ಸಂಕಲನದ ಹೆಸರೂ ತುಂಬಾ ವಿಶಿಷ್ಟವಾಗಿದೆ. ವಿಜಯಪುರ ಹೆಸರಾಗಿರುವದು ಅಲ್ಲಿರುವ ಗೋಲಗುಮ್ಮಟಕ್ಕೆ. ಆದರೆ ಅದರ ಎತ್ತರವನ್ನೂ ಭವ್ಯತೆಯನ್ನೂ ಮೀರಿಸಬೇಕೆಂದು ಕಟ್ಟಲು ಹೊರಟ ಇಮಾರತು ಬಾರಾ ಕಮಾನು. ಅದು ಪೂರ್ಣಗೊಂಡರೆ ಎಲ್ಲಿ ಗೋಲಗುಂಬಜ್ದ ಮಹತ್ವ ಹೋಗುತ್ತದೆಯೋ ಎಂದು ಅದನ್ನು ಪೂರ್ಣಗೊಳ್ಳದಂತೆ ತಡೆಯಲಾಯಿತು. ಅದು ಅಪೂರ್ಣವಾಗಿಯೇ ನಿಂತಿತು ಎಂದು ವಿಜಯಪುರದ ಸುತ್ತ ಮುತ್ತ ಕಥೆಗಳಿವೆ. ನಮ್ಮ ಬದುಕು ಕೂಡ ಹಾಗೆಯೇ ಅಲ್ಲವೇ! ಎಷ್ಟೋ ಪೂರ್ಣವಾಗದ ಸಂಗತಿಗಳು ಮನುಷ್ಯನ ಜೀವನದಲ್ಲಿ ಉಳಿದೇ ಇರುತ್ತವೆ ಎನ್ನುವ ಅರ್ಥದಲ್ಲಿ ಈ ಶೀರ್ಷಿಕೆ ಇದೆ ಎಂದು ಮುನ್ನುಡಿಯಲ್ಲಿ ಹಿರಿಯ ಗಜಲ್ಕಾರ ಡಾ. ಗಿರೀಶ ಜಕಾಪುರೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೌಕಿಕದ ಜೊತೆ ಜೊತೆಗೆ ಅಲೌಕಿಕದತ್ತ ಚಿಂತಿಸುವ ಸಾಲುಗಳನ್ನು ಡಾ. ಹೆಗಡೆಯವರು ಶೇರ್ ಆಗಿಸುವಲ್ಲಿ ಸಿದ್ಧಹಸ್ತರು. ಅವರ ಮೊದಲ ಗಜಲ್ನಲ್ಲಿಯೇ
*ಮತಿ ಕೃತಿಗಳ ನಡುವೆ ಎಷ್ಟು ಅಂತರ ಗೆಳೆಯ*
*ಎಲ್ಲವೂ ಇವೆ ಇಲ್ಲಿ, ಆತ್ಮದ ಹಾದಿ ಮರೆತು ಹೋಗಿದೆ*
ಹನ್ನೆರಡನೆಯ ಶತಮಾನದ ಬಸವಣ್ಣನವರು ತಮ್ಮ ವಚನದಲ್ಲಿ “ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲ
ನೋಡಯ್ಯಾ..
ಎನ್ನುವ ಅರ್ಥದಲ್ಲಿ ಈ ಗಜಲ್ ‘ಎಲ್ಲವೂ ಇದೆ ಇಲ್ಲಿ ಆತ್ಮದ ಹಾದಿ ಮರೆತು ಹೋಗಿದೆ’ ಎಂದು ಆ ಇನ್ನೊಂದರ ಚಿಂತನೆ ನಡೆಸುತ್ತಿರುವದು ಸೋಜಿಗವಾಗಿದೆ. ಇಂಥ ಅಮೂಲ್ಯ ಚಿಂತನೆಗಳನ್ನು ರೂಪಕವಾಗಿಸುವದಕ್ಕೆ ಅಪಾರವಾದ ಓದು, ಪರಿಶ್ರಮ ಬೇಕು. ಅದು ಡಾ. ಹೆಗಡೆಯವರ ಗಜಲ್ಗಳಲ್ಲಿ ಎದ್ದು ತೋರುತ್ತದೆ.
ಮೂರನೆಯ ಗಜಲ್ ಕೊನೆಯಲ್ಲಿ
*ಈ ಜಂಗಮನ ನಿಗೂಢ ನಡೆಗಳ ಅರ್ಥವೇನು*
*ಕೂಡಿ ಕಳೆದರೆ ಸಿಗದು ಅವನ ಲೆಕ್ಕ – ಗುಣಿಸಬೇಕು* ಎಂಬಲ್ಲಿಯೂ ಇಂತಹುದೇ ಭಾವವಿದೆ.
ಹೀಗೆ ಅನೂಹ್ಯವಾದುದುರ ಸಾಕಾರ ಮಾಡಿಕೊಳ್ಳುವ ಚಿಂತನೆ ಅಧಿಕವಾಗಿದೆ. ಹೀಗಾಗಿ ಡಾ.ಹೆಗಡೆಯವರ ಗಜಲ್ಗಳು ಅನುಭವ- ಅನುಭಾವದ ಮಿಳಿತದಿಂದ ಮನಸಿಗೆ ಮುದ ನೀಡುವ ರಚನೆಗಳು ಎನ್ನುವದು ಒಂದೇ ಓದಿಗೆ ಅರ್ಥವಾಗಿ ಬಿಡುತ್ತದೆ.
ಕಾವ್ಯ ಅದು ಯಾವುದೇ ಇರಲಿ, ಅದು ಹುಡುಕುವದು ಪ್ರೇಮದ ಹಾದಿಯನ್ನು. ಅದು ಲೌಕಿಕವೋ ಪಾರಮಾರ್ಥವೋ ಎಲ್ಲ ಪ್ರೇಮಗಳೂ ಒಂದೇ. ಆದರೆ ಪ್ರೇಮದ ಹಾದಿ ಮರೆತು ಹೋದಾಗ ಜಗತ್ತು ಬರಡಾಗುತ್ತದೆ ಎಂಬ ಸೂಚನೆಯನ್ನು ಕವಿ ನೀಡುತ್ತಾರೆ.
ಕೊರೋನಾದ ಕಾಲಕ್ಕೆ ಬರೆಯಲ್ಪಟ್ಟ ಸಾವಿರಾರು ಕವಿತೆಗಳನ್ನು ನಾವು ಓದಿದ್ದೆವು. ಡಾ. ಹೆಗಡೆಯವರು ಅಂದು ಮನುಷ್ಯತ್ವವೇ ಸತ್ತಂತೆ ವರ್ತಿಸಿದ ನಮ್ಮ ನಡೆಯನ್ನು ಟೀಕಿಸುತ್ತಾರೆ. ಮನುಷ್ಯತ್ವ ಬೇಕು ಎನ್ನುವ ನಾವೇ ಮನುಷ್ಯತ್ವವೇ ಸತ್ತು ಹೋದಂತೆ ಕೊರೋನಾ ಮಹಾಮಾರಿ ಮೇಲೆರಗಿದಾಗ ಒಬ್ಬರನ್ನೊಬ್ಬರು ಮುಟ್ಟದೇ ಬದುಕಿದ್ದೆವು.
*ಮನುಷ್ಯತ್ವಕ್ಕೆ ಮಿಗಿಲಾದ ಧರ್ಮವಿಲ್ಲ ಎಂದೇ ನಂಬಿದ್ದೆ*
*ಮುಗ್ಧತೆ ಸತ್ತ ಸಾವಿರ ಸಾವುಗಳ ಬಗ್ಗೆ ಹೇಳಲು ಮಾತುಗಳಿಲ್ಲ*
ಎಂದು ನಮ್ಮೆಲ್ಲರ ನಡೆಯನ್ನು ಪುನರಾವಲೋಕನ ಮಾಡಿಕೊಳ್ಳಲು ಹಚ್ಚುತ್ತವೆ.
ಈ ಜಗತ್ತಿನಲ್ಲಿ ಎಲ್ಲವೂ ಸುಂದರವಾಗಿ ಏನೂ ಇಲ್ಲ. *ಹಾಲೆಂದು ಸುಣ್ಣದ ನೀರು ಕುಡಿಸುತ್ತಾರೆ ಯಾರೋ* ಎಂದು ನೀಡಿದ ಎಚ್ಚರಿಕೆಯಾಗಿದೆ.
ಗಜಲ್ 7 ರಲ್ಲಿಯೂ ಮನುಷ್ಯ ತನ್ನ ದುರುಳತೆಯ ಅಟ್ಟಹಾಸಕ್ಕೆ ಕರೋನಾದಂಥ ಮಹಾಮಾರಿಗೆ ಸಿಲುಕಿ ‘ಕಟ್ಟಿದ ಸ್ವರ್ಗ ಅಳಿದ’ ಚಿತ್ರವಿದೆ.
ಕೇವಲ ನಕಾರಾತ್ಮಕತೆಯತ್ತ, ಇಲ್ಲಿ ಆಗುವ ಘೋರ ಅನ್ಯಾಯದತ್ತ ಮಾತ್ರ ಯೋಚಿಸದೇ ಡಾ. ಹೆಗಡೆಯವರ ಗಜಲ್ ಗಳು ಬದುಕಿನಲ್ಲಿರುವ ಸೌಂದರ್ಯದ ಕುರಿತೂ ಚಿಂತನೆ ಮಾಡುತ್ತವೆ ಎನ್ನುವದೂ ಮಹತ್ವದ್ದಾಗಿದೆ. ಇಲ್ಲಿ ಬರೀ ದು:ಖಗಳಿಲ್ಲ, ಸಂಕಟಗಳಿಲ್ಲ, ಅದಕ್ಕೆ ಪರಿಹಾರ ನೀಡುವ ದಾರಿಗಳೂ ಇವೆ ಎನ್ನುವದನ್ನು ಕವಿ ಸಾರುತ್ತಾರೆ…
*ಸುರಂಗಕ್ಕೊಂದು ಕೊನೆಯಿದ್ದೇ ಇದೆ ನಂಬಿಕೆ ಇರಲಿ*
*ಕತ್ತಲ ಕೊನೆಯಲ್ಲಿ ಬೆಳಕಿದ್ದೇ ಇದೆ ನಂಬಿಕೆ ಇರಲಿ*
ಕವಿಯ ಕಾರ್ಯ ಇಂಥ ನಂಬಿಕೆಯನ್ನು ಗಟ್ಟಿಗೊಳಿಸುವದೇ ಅಲ್ಲವೇ? ಇಲ್ಲವಾದರೆ ಇಲ್ಲಿ ಏನೂ ಇರಲಾರದು. ಇಂಥದೊಂದು ನಂಬಿಕೆಯನ್ನು ನಾವು ಜನಮಾನಸದಲ್ಲಿ ತುಂಬಿಸುವ ಕಾರ್ಯವನ್ನು ನಮ್ಮ ಎಲ್ಲ ಬಗೆಯ ಕವಿತೆಗಳೂ, ಸೃಜನಾತ್ಮಕ ಕಾರ್ಯಗಳೂ ಮಾಡಬೇಕು ಎನ್ನುವದೇ ಕವಿಯ ಆಶಯವಾಗಿದೆ.
ಬದುಕಿನ ಕಷ್ಟ-ನಷ್ಟಗಳಿಗೆ ಜುಗುಪ್ಸೆಗೊಳ್ಳದೇ ಜ್ಞಾನದ ಬೆಳಕಿಗಾಗಿ ಹಂಬಲಿಸುವ ಆಧ್ಯಾತ್ಮಿಕ ತವಕದ ಸುಂದರ ಅಭಿವ್ಯಕ್ತಿ ಇಲ್ಲಿದೆ
*ನೀನಿಲ್ಲದೆ ಏನಿದೆ ಹೇಳು ಇಲ್ಲಿ ಬಾಯಾರಿ ಬಿರಿದಿದೆ ನೆಲ*
*ಹನಿಸು ನೀರು ಸುರಿಸು ಮಳೆ ಬಾ ಕುರುಳ ನೇವರಿಸು*
ಅವನ ದಯೆ ಇರದೆ ಬದುಕು ಬರಡಾಗಿದೆ. ಬಿರಿದೆದೆಗೆ ಪ್ರೀತಿ ಧಾರೆ ಸುರಿಸಿ ಕುರುಳ ನೇವರಿಸು ಎಂದು ವಿನಂತಿಸಿಕೊಳ್ಳುವ ದೈನ್ಯ ಭಾವ ಇಲ್ಲಿದೆ.
ಹಾಗೇ ಮುಂದುವರಿದು ಮಕ್ತಾದಲ್ಲಿ ಕವಿ ಆ ದಿವ್ಯ ಶಕ್ತಿಯನ್ನು ಕರೆಯುವ ಶೇರ್ ಹೃದಯಸ್ಪರ್ಶಿಯಾಗಿದೆ.
*ಪಡಿ ಬೇಡಿ ದಣಿದಿದ್ದೇನೆ ಜಂಗಮ ಖಾಲಿ ಇದೆ ಪಾತ್ರೆ*
*ನೀನಲ್ಲದೆ ಯಾರು ಎರೆದಾರು ಬೆಳಕ ಬಾ ಹದುಳಿಸು*
ಬದುಕಿನ ಅಲೆದಾಟದಲ್ಲಿ ದಣಿದ ಮನಸ್ಸಿನ ನೋವುಗಳನ್ನು ಕಟ್ಟಿಕೊಡುವ ಸಾಲುಗಳಿವು.
ಆಧ್ಯಾತ್ಮಿಕ ಮತ್ತು ಲೌಕಿಕದ ಹಸಿವು, ಬಡತನವನ್ನು ಸೊಗಸಾಗಿ ಬಿಂಬಿಸಿದೆ. ಕತ್ತಲು ಕವಿದ ಬದುಕಿಗೆ ಭಗವಂತನ ಪ್ರೀತಿಯ ಬೆಳಕನ್ನು ಬೇಡುವ ಮತ್ತು ನೀನಲ್ಲದೆ ಯಾರು ಎರೆದಾರು ಬೆಳಕು ಎಂಬ ಪ್ರಶ್ನೆ ಇಡೀ ಗಜಲ್ಗೆ ಅಪೂರ್ವವಾದ ತೀವ್ರತೆಯನ್ನು ನೀಡಿದೆ.
ಎಲ್ಲ ಅರವತ್ತು ಗಜಲ್ಗಳೂ ಸೊಗಸಾಗಿವೆ. ತುಂಬಾ ವಿಶಿಷ್ಟವಾದ ರೂಪಕ, ಉಪಮೆಗಳನ್ನು ಕಟ್ಟುವಲ್ಲಿ ಡಾ. ಹೆಗಡೆಯವರ ಲೇಖನಿಗೆ ಅಪರೂಪದ ಶಕ್ತಿ ಇದೆ. ಇಂಥ ಸಶಕ್ತವಾದ ಗಜಲ್ಗಳ ಸಂಕಲನವನ್ನು ಹೊರತಂದಿರುವ ಡಾ. ಗೋವಿಂದ ಹೆಗಡೆಯವರಿಗೆ ಶುಭ ಕೋರುತ್ತೇನೆ.
ಅರುಣಾ ನರೇಂದ್ರ




