ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಅವ್ವನಿಗೆ ಅಡುಗೆ ಮನೆಯೆಂದರೆ
ಸ್ವತಂತ್ರವಾದ  ಧ್ಯಾನ ಮಂದಿರ
ಮನದ ಭಿತ್ತಿಯೊಳಗಿನ ಬುತ್ತಿ ಬಿಚ್ಚಿ
ಮೌನದಿ ಮಾತಿಗಿಳಿವ ಕೋಣೆಯದು |

ವಿಧಧ ಬಣ್ಣದ ತರಕಾರಿಗಳ
ಅವರಿಷ್ಟದ ಆಕಾರದಿ ಕತ್ತರಿಸಿ
ಹುರಿದು, ಬೇಯಿಸಿ ಒಗ್ಗರಣೆ ಹಾಕುತ್ತಾಳೆ
 ಮಕ್ಕಳ ಕನಸುಗಳ ಘಮವ ಹರಡುತ್ತಾಳೆ |

ರೊಟ್ಟಿಗಿಟ್ಟ ಹೆಸರು ಕೊತಕೊತನೆ
ಕುದಿವಾಗ, ಮನದ ಕೋಪವ
ಅದರೊಳಗೆ ಎಸೆಯುತ್ತಾಳೆ
ಹಿಟ್ಟು ಕಲೆಸುವಾಗ ತಣಿಯುತ್ತಾಳೆ |

ಅವರಿವರು ಹಂಗಿಸಿದ ಮಾತುಗಳನು
ರೊಟ್ಟಿ ಬಡಿತದ ಸದ್ದಿನಲಿ
ಮೆಲ್ಲ ಮೆಲ್ಲನೆ ಕರಗಿಸುತ್ತಾಳೆ
ತನ್ನ ತಾನೇ ಹಗುರಾಗುತ್ತಾಳೆ |

ತವರು ಮನೆಯವರು, ಆತ್ಮೀಯರು
ಈಗಲೇ, ಎದೆಯೊಳಗೆ  ಬಂದಿಳಿಯುತ್ತಾರೆ
ರೊಟ್ಟಿಯ ಒತ್ತಿ ಒತ್ತಿ ಉಬ್ಬಿಸುವಾಗ
ತುಟಿಗಳಲಿ ನಗೆ ತಂದು ಕೊಳ್ಳುತ್ತಾಳೆ |

ಹೌದು, ಮನೆಯೊಳಗೆ ಚೆಂದ ಚೆಂದ
ಕೋಣೆಗಳಿದ್ದರೂ, ಬೇಡವಾದವು ಅವು
ಅಡುಗೆಮನೆಯ ಸಂತೆಯೊಳಗೆ
ಧ್ಯಾನಿಸುವಿದೇ ಇಷ್ಟ ಅವಳಿಗೆ |


About The Author

Leave a Reply

You cannot copy content of this page

Scroll to Top