ವಿಶೇಷ ಲೇಖನ
ವೀಣಾ ಹೇಮಂತ್ ಗೌಡ ಪಾಟೀಲ
“ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ


ಗೃಹಿಣಿ…. ಅಯ್ಯೋ ಈ ಮನೆ ಕೆಲಸ ಮುಗಿಯೋದೇ ಇಲ್ಲ ಇದರ ಮೇಲೆ ಮಕ್ಕಳು ಗಂಡ ಹೇಳಿದ್ದನ್ನೆಲ್ಲ ಮಾಡಿ ಹಾಕಬೇಕು. ಅತ್ತೆ ಮಾವನ ಕಾಳಜಿ ಮಾಡಬೇಕು. ನನ್ನ ಬದುಕು ಪೂರ್ತಿ ಗಂಡ ಮನೆ ಮಕ್ಕಳು ಅಂತ ಅವರ ಸುತ್ತಲೇ ಸುತ್ತುತ್ತದೆ ಅಂತ ಅನಿಸುತ್ತದೆ ನನಗೋಸ್ಕರ ಒಂದಷ್ಟು ಟೈಮ್ ಮಾಡ್ಕೋಬೇಕು ನಾನು ಕೂಡ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನೋ ಆಸೆ ನನಗೂ ಇದೆ ಆದರೆ ಏನು ಮಾಡೋದು ? ಯಾವುದೂ ಆಗ್ತಾ ಇಲ್ಲ…. ಪಕ್ಕದ ಮನೆಯ ಲೀಲಾ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡ್ತಾಳೆ ದೊಡ್ಡ ಸಂಬಳ ಬರದೇ ಇರಬಹುದು, ನಿಜ ಆದರೆ ಆಕೆ ಪ್ರತಿದಿನ ಸಮಯಕ್ಕೆ ಸರಿಯಾಗಿ ತಯಾರಾಗಿ ಶಾಲೆಗೆ ಹೋಗುವಾಗ ಆಕೆಯ ಮುಖದಲ್ಲಿರುವ ಸಂತಸ ಹೆಮ್ಮೆ ನೋಡಿದರೆ ನನಗೆ ಖುಷಿಯಾಗುತ್ತೆ. ಕೆಲಸ ಜೊತೆ ಕೆಲಸ ಆಯ್ತು ಶಾಲೆಯಲ್ಲಿ ನಡೆಯೋ ಎಲ್ಲಾ ಆಕ್ಟಿವಿಟೀಸ್ ಗಳಲ್ಲಿ ಅವರು ಪಾರ್ಟಿಸಿಪೇಟ್ ಮಾಡ್ತಾರೆ ಜನರ ಜೊತೆ ಸಂಪರ್ಕ ಇರುತ್ತೆ. ಮಕ್ಕಳ ಜೊತೆ ನಕ್ಕು ನಲೀತಾರೆ ಜೊತೆಗೆ ಒಂದಷ್ಟು ಪಾಕೆಟ್ ಮನಿ ರೀತಿಯಲ್ಲಿ ಹಣ ಕೂಡ ಸಂಪಾದಿಸುತ್ತಾರೆ.
ತಾವು ಖರೀದಿಸಿದ ಬಟ್ಟೆಗಳನ್ನ, ಒಡವೆಗಳನ್ನ ಆಯಾ ಕಾರ್ಯಕ್ರಮಗಳಿಗೆ ತಕ್ಕಂತೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋತಾರೆ. ಶಾಲೆಯಲ್ಲಿ ಮಕ್ಕಳೊಟ್ಟಿಗೆ, ನಂತರ ಸಹೋದ್ಯೋಗಿಗಳೊಂದಿಗೆ ವಿವಿಧ ಬಗೆಯ ಕಾರ್ಯಕ್ರಮಗಳನ್ನ ಅಟೆಂಡ್ ಮಾಡ್ತಾರೆ ಪ್ರವಾಸ ಹೋಗ್ತಾರೆ, ಬದುಕನ್ನ ಪರಿಪೂರ್ಣವಾಗಿ ಎಂಜಾಯ್ ಮಾಡ್ತಾರೆ…. ಒಟ್ಟಿನಲ್ಲಿ ನೆಮ್ಮದಿಯ ಬದುಕು ಅವರದು.
ಲೀಲಾ ಟೀಚರ್…. ಅಯ್ಯೋ ನಮ್ಮನೆಯವರು ಚೆನ್ನಾಗಿ ದುಡಿತಾ ಇದ್ರೆ, ನಾನ್ ಯಾಕ್ರೀ ಈ ಚಾಕರಿಗೆ ಬರ್ತಾ ಇದ್ದೆ. ಮನೆಯಲ್ಲಿ ಒಂದು ಇದ್ದರೆ ಒಂದು ಇರಲ್ಲ… ಆರ್ಥಿಕವಾಗಿ ಅನುಕೂಲ ಇದ್ರೆ ಎಲ್ಲವೂ ಚೆನ್ನ. ಅದಕ್ಕೆ ಅದೆಷ್ಟೇ ಕಷ್ಟ ಆದರೂ ಪರವಾಗಿಲ್ಲ ಅಂತ ಈ ಕೆಲಸಕ್ಕೆ ಸೇರಿಕೊಂಡಿದೀನಿ. ತಕ್ಕಮಟ್ಟಿಗೆ ಸಂಬಳಾನು ಸಿಗುತ್ತೆ ಅನ್ನಿ.
ಆದರೆ ಏನು ಮಾಡೋದು….ಕೆಲಸಕ್ಕೆ ಹೋಗೋ ಅವಸರದಲ್ಲಿ ಗಡಿಬಿಡಿಯಿಂದ ಮನೆಯ ಎಲ್ಲಾ ಕೆಲಸ ಮುಗಿಸಿ ಸ್ನಾನ ಮಾಡಿ ತಿಂಡಿ ತಿಂದು ಶಾಲೆಗೆ ಓಡಿ ಹೋಗುವಷ್ಟರಲ್ಲಿ ಅಬ್ಬಾ! ಸಾಕು ಈ ಧಾವಂತದ ಬದುಕು ಅನ್ಸುತ್ತೆ. ಇನ್ನು ಇಡೀ ದಿನ ಎಲ್ಲಾ ಶಾಲೆಯಲ್ಲಿ ಕಳೆದು ಹೋಗುತ್ತೆ. ಖಾಸಗಿ ಶಾಲೆ ಆಗಿರೋದ್ರಿಂದ ಎಲ್ಲರ ಮರ್ಜಿ ಕಾಯಬೇಕು. ಆಡಳಿತ ಮಂಡಳಿಯವರ ಕಣ್ಣಿಗೆ ಕಿಸುರಾಾಗಬಾರದು. ಪ್ರಿನ್ಸಿಪಾಲ್ ಹೇಳಿದ ರೀತಿಯಲ್ಲಿ ಕ್ಲಾಸ್ಗಳನ್ನ ತಗೋಬೇಕು. ಚೋಟುದ್ದ ಮಕ್ಕಳ ಧಿಮಾಕು ತುಸು ಹೆಚ್ಚೇ ಇರುತ್ತೆ ಅವರನ್ನು ಸರಿದಾರಿಗೆ ತರೋದಕ್ಕೆ ನಮ್ಮೆಲ್ಲಾ ಶ್ರಮವನ್ನ ಹಾಕಬೇಕು. ಇನ್ನು ಅವರ ಪಾಲಕರ ಮಾತನ್ನು ಕೂಡ ಕೇಳಬೇಕು… ಅವರು ಹೇಳ್ತಾರೆ ತಮ್ಮ ಮಕ್ಕಳು ಮನೆಯಲ್ಲಿ ಮಾತ್ರ ಗಲಾಟೆ ಮಾಡುತ್ತಾರೆ ಅವರನ್ನು ಹಿಡಿಯೋಕಾಗಲ್ಲ ಅಂತ. ಆದ್ರೆ ಶಾಲೆಯಲ್ಲಿ ಅವರಂತಹ ಒಳ್ಳೆಯವರೇ ಇಲ್ಲ ಅನ್ನೋ ರೀತಿ ಅವರ ವರ್ತನೆ ಇರುತ್ತದೆ.ಇನ್ನು ಈ ಮಕ್ಕಳು ತಮ್ಮ ಹೆತ್ತವರ ಮುಂದೆ ತುಂಬಾ ಮುಗ್ಧರು ಅನ್ನೋ ರೀತಿ ವರ್ತಿಸ್ತಾರೆ ಆದರೆ ಅವರದು ಪ್ರಳಯಾಂತಕ ಬುದ್ಧಿ.
ಮನೆಯಿಂದ ಹೊರಗೆ ನಾಲ್ಕು ಜನರ ಮಧ್ಯದಲ್ಲಿ ಓಡಾಡೋದ್ರಿಂದ ಸಮಾಜದಲ್ಲಿ ಒಂದಷ್ಟು ಗೌರವ, ನಮ್ಮ ಮಕ್ಕಳ ಶಿಕ್ಷಕರು ಎಂಬ ಪ್ರೀತಿ,ವಿಶ್ವಾಸ ಇರುತ್ತದೆ. ಆದರೆ ದೇಹಕ್ಕೆ ಮನಸ್ಸಿಗೆ ವಿಶ್ರಾಂತಿ ಎಂಬುದು ಕನಸಿನ ಮಾತು. ಇದಕ್ಕಿಂತ ಸರ್ಕಾರಿ ಶಾಲೆ, ಟೀಚರ್ ಆದ್ರೆ ಒಳ್ಳೆ ಸಂಬಳನೂ ಬರುತ್ತೆ ಯಾವುದೇ ಅಭದ್ರತೆ ಕಾಡೋದಿಲ್ಲ… ಏನು ಮಾಡೋದು ಎಲ್ಲಾನು ಪಡ್ಕೊಂಡು ಬಂದಿರಬೇಕಲ್ವೇ ?
ಸರ್ಕಾರಿ ಶಾಲೆ ಶಿಕ್ಷಕಿ….. ಹೌದು ರೀ ಹೇಳೋದಕ್ಕೆ ಸರ್ಕಾರಿ ನೌಕರಿ, ಸರ್ಕಾರಿ ಸಂಬಳ ಎಲ್ಲವೂ ಚೆನ್ನಾಗಿ ಕಾಣಿಸುತ್ತೆ. ಆದರೆ ಸರ್ಕಾರಿ ಕೆಲಸ ಒಂದು ರೀತಿ ಕತ್ತೆ ಚಾಕರಿ ಇದ್ದಹಾಗೆ ಅನ್ನೋದು ಜನರಿಗೆ ಗೊತ್ತಾಗಲ್ಲ. ಏನು ಕೆಲಸ ಮಾಡ್ತೀರಿ ? ಅಂತ ಕೇಳಿದ ಜನ ನಮ್ಮ ಉತ್ತರ ಕೇಳಿ ಗೌರ್ಮೆಂಟ್ ಸ್ಕೂಲ್ ಟೀಚರ್ರಾ, ಬಿಡಿ ಕೆಲಸ ಮಾಡಿದ್ರೂ ಸಂಬಳ ಬರುತ್ತೆ, ಮಾಡದೆ ಇದ್ರೂ ಬರುತ್ತೆ ಎಂದು ಮೂಗು ಮುರಿದಾಗ ಅದೆಷ್ಟು ನೋವಾಗುತ್ತೆ ಗೊತ್ತಾ ? ನಾವು ಶಾಲೆಗಳಲ್ಲಿ ಓದಿಸುವ ಮಕ್ಕಳು ಸಂಪೂರ್ಣ ಶಿಕ್ಷಿತರಲ್ಲದವರ ಮಕ್ಕಳು. ಮಕ್ಕಳಿಗೆ ಶಾಲೆಯಲ್ಲಿ ಪಾಠ ಹೇಳಿಕೊಡುವುದರ ಜೊತೆಗೆ ಮನೆಯಲ್ಲಿ ಮನೆ ಪಾಠವನ್ನು ನಾವು ಕೊಡುತ್ತೇವೆ, ನಿಜ….ಆದರೆ ಅದನ್ನು ಮಾಡಿಸೋರು ಯಾರು ? ಯಾಕೆಂದರೆ ಪಾಲಕರಿಗೆ ಅಯ್ಯೋ! ಅದೆಲ್ಲ ನಮಗೆ ಗೊತ್ತಾಗೋದಿಲ್ಲ ಅಂತ ಕೈ ಒದರೋದು ಮಾತ್ರ ಗೊತ್ತು. ಮಕ್ಕಳಿಗೆ ಒಂಚೂರು ಕಟ್ಟುನಿಟ್ಟು ಮಾಡಿದಾಗ ಓಡೋಡಿ ಬಂದು ನಾವೇ ನಮ್ಮ ಮಕ್ಕಳಿಗೆ ಏನೂ ಹೇಳೊಲ್ಲ, ಒಂದೇಟು ಹೊಡೆಯಲ್ಲ… ಅದು ಹೇಗೆ ರೀ ನೀವು ನಮ್ಮ ಮಕ್ಕಳಿಗೆ ಬಯ್ಯೋದು ಅಂತ ನಮ್ಮನ್ನ ದಬಾಯಿಸ್ತಾರೆ.ತೆಗೆದುಕೊಟ್ಟುಬಿಡಿ ನಮ್ಮ ಮಕ್ಕಳ ಟಿ ಸಿ ನ ಅಂತ ಗುರುಗುಟ್ಟತಾರೆ.
ಇನ್ನು ನಮ್ಮ ಸರ್ಕಾರಗಳು ಜನಗಣತಿಯಿಂದ ಹಿಡಿದು ದನಗಣತಿಯವರೆಗೆ ಎಲ್ಲ ಕೆಲಸಕ್ಕೂ ನಮ್ಮನ್ನೇ ಬಳಸಿಕೊಳ್ಳುತ್ತಾರೆ. ರಜಾ ದಿನಗಳಲ್ಲಂತೂ ಸರಿ… ಶಾಲೆ ಇದ್ದಾಗಲೂ ಈ ಕಾರ್ಯ ಮಾಡೋದು ಅಂದ್ರೆ ಮಕ್ಕಳ ಸಿಲಬಸ್ ಹೇಗೆ ಪೂರ್ಣಗೊಳಿಸಬೇಕು ಹೇಳಿ ?
ಇದರ ಮೇಲೆ ಬಿಸಿಊಟದ ವ್ಯವಸ್ಥೆ ನಮ್ಮ ನಮ್ಮ ತರಗತಿಯಲ್ಲಿ ಆ ದಿನ ಬಂದಿರುವ ವಿದ್ಯಾರ್ಥಿಗಳ ಸಂಖ್ಯೆ ಹೇಳಬೇಕು, ಹುಡುಗರು ಎಷ್ಟು ಹುಡುಗಿಯರು ಎಷ್ಟು ಯಾರು ಮೊಟ್ಟೆ ತಿಂತಾರೆ ? ಯಾರು ಬಾಳೆಹಣ್ಣು ತಿಂತಾರೆ ಎಂದೆಲ್ಲ ಲೆಕ್ಕ ಕೊಡಬೇಕು. ಅವರಿಗೆ ಮಾಡುವ ಅಡುಗೆ ಪೌಷ್ಟಿಕವಾಗಿದೆಯೇ? ತರಕಾರಿಗಳನ್ನು ಹಾಕಿ ಮಾಡಿದ್ದಾರೆಯೇ? ಹಾಲು ಚೆನ್ನಾಗಿ ಕಾಯಿಸಿದ್ದಾರೆಯೇ ಅನ್ನೋದನ್ನ ನೋಡ್ಕೋಬೇಕು. ಯಾರಿಗೆ ಬೇಕಪ್ಪ ಈ ಸರ್ಕಾರಿ ಶಿಕ್ಷಕರ ಕೆಲಸ. ಚೆನ್ನಾಗಿ ಓದಿ ಇಂಜಿನಿಯರಿಂಗ್ ಮಾಡಿದ್ರೆ ಎಸಿ ರೂಮಲ್ಲಿ ಕುತ್ಕೊಂಡು ಲ್ಯಾಪ್ಟಾಪ್ ಅಲ್ಲಿ ಕುಟ್ತಾ ಜುಮ್ ಅಂತ ನೌಕರಿ ಮಾಡ್ಕೊಂಡು ವೀಕೆಂಡ್ ಗಳಲ್ಲಿ ಫ್ರೆಂಡ್ಸ್ ಜೊತೆ ಪಾರ್ಟಿ, ಪಿಕ್ನಿಕ್ ಅಂತ ಹೋಗಬಹುದಿತ್ತು…. ಎಲ್ಲಾನು ಪಡ್ಕೊಂಡು ಬರೋಕೆ ಹಣೆಲಿ ಬರ್ದಿರ್ಬೇಕಲ್ಲ.
ಸಾಫ್ಟ್ ವೇರ್ ಇಂಜಿನಿಯರ್…. ನಿಜ ನಮ್ಮ ಬದುಕು ನೋಡಲು ಅತ್ಯಂತ ಆಕರ್ಷಕ. ಎಸಿ ರೂಮುಗಳಲ್ಲಿ ಬೋರ್ಡ್ ಮೀಟಿಂಗ್ ಗಳಲ್ಲಿ, ಆಕರ್ಷಕವಾದ ವಾತಾವರಣದಲ್ಲಿ ಠಾಕು ಠೀಕಾದ ಬಟ್ಟೆ ಧರಿಸಿ ಅದಕ್ಕೆ ತಕ್ಕಂತೆ ಶೂ ಇಲ್ಲವೇ ಚಪ್ಪಲಿ ಹಾಕಿಕೊಂಡು ಆತ್ಮವಿಶ್ವಾಸದಿಂದ ಎದೆ ಉಬ್ಬಿಸಿ ನಡೆಯುತ್ತಾ ಇದ್ದರೆ ಎಲ್ಲರೂ ನಮ್ಮನ್ನೇ ನೋಡಿ ಬೆಕ್ಕಸ ಬರಗಾಗುವಂತಹ ಬದುಕು ನಮ್ಮದು. ಆದರೆ ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ಒಂದೇ ಸಮನೆ ಲ್ಯಾಪ್ಟಾಪ್ ನೋಡಿ ಕೆಲಸ ಮಾಡುವ ನಮಗೆ ವಿಪರೀತ ದೈಹಿಕ ತೊಂದರೆಗಳು ಕಾಡುತ್ತವೆ. ಎಲ್ಲರಿಗೂ ನಲವತ್ತಕ್ಕೆ ಕನ್ನಡಕ ಬಂದರೆ ನಮಗೆ ನೌಕರಿ ಸೇರಿದ ಕೆಲವೇ ತಿಂಗಳುಗಳಲ್ಲಿ ಕಣ್ಣಿಗೆ ಕನ್ನಡಕ ಕಡ್ಡಾಯ. ಸದಾ ಕುಳಿತು ಕೆಲಸ ಮಾಡುವುದರಿಂದ ಕಣ್ಣುಗಳು ಡ್ರೈ ಆಗುವ, ಕುತ್ತಿಗೆ ಬೆನ್ನುಗಳಲ್ಲಿ ವಿಪರೀತ ನೋವು ಸಹಜ. ನಮ್ಮ ಒಡನಾಟ ಹೈ ಲೆವೆಲ್ ಕಾರ್ಪೊರೇಟ್ ಜನರೊಂದಿಗೆ ಇರುವುದರಿಂದ ಅಲ್ಲಿಯ ಊಟ ತಿಂಡಿಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ಕಾರಣ ದೇಹದಲ್ಲಿ ಅನವಶ್ಯಕ ಬೊಜ್ಜು ಸೇರಿಕೊಳ್ಳುತ್ತದೆ. ಪರಿಣಾಮವಾಗಿ 60ರ ನನ್ನ ಅಮ್ಮ ಇನ್ನೂ ಚಿರ ಯುವತಿಯಂತೆ ಓಡಾಡಿಕೊಂಡಿದ್ದರೆ ಅವರ ಮುಂದೆ ನಾನು ಸದಾ ಬಂದಿಲ್ಲೊಂದು ನೋವುಗಳನ್ನು ಹೇಳಿಕೊಂಡು ತಿರುಗುತ್ತೇನೆ. ಪ್ರಾರಂಭದ ಒಂದೆರಡು ವರ್ಷ ಜನ ಎಲ್ಲ ನೋಡೋ ಹಾಗೆ ಒಳ್ಳೆ ಕೆಲಸ, ಫ್ರೆಂಡ್ಸು, ವೀಕೆಂಡ್ ಮೋಜು ಮಜಾ ಅಂತ ಕಾಲ ಕಳೆಯಿತು…. ನಂತರ ಅಪ್ಪ-ಅಮ್ಮನ ವರಾತ ಶುರುವಾಗಿ ನನ್ನದೇ ಸಾಫ್ಟ ವೇರ್ ಫೀಲ್ಡಿನ ಯುವಕನೊಂದಿಗೆ ನನ್ನ ಮದುವೆಯೂ ಆಯಿತು. ಯವ್ವನದ ಹಸಿ ಬಿಸಿ ಆಸೆ ಆಕಾಂಕ್ಷೆಗಳ, ಕನಸುಗಳ ಹಂಚಿಕೆಯೂ ಆಗಿ, ಮದುವೆಯ ಹನಿಮೂನ್ ಅವಧಿ ಮುಗಿದು ಕೆಲಸಕ್ಕೆ ಮತ್ತೆ ಜಾಯಿನ್ ಆದದ್ದೇ ಬಂತು. ನಾವು ಪರಸ್ಪರ ಜೊತೆಯಾಗಿ ಇರಲು ಮಾತನಾಡಲು ಕೂಡ ವೀಕೆಂಡ್ಗಳಿಗಾಗಿ ಕಾಯಬೇಕು. ಇನ್ನು ವಿಪರೀತ ಒತ್ತಡದ ಕೆಲಸದ ನಂತರ ಬರುವ ವೀಕೆಂಡ್ ಗಳಲ್ಲಿ ಮನೆಯ ರಾಶಿ ಕೆಲಸಗಳು ಕಾಯುತ್ತಿರುತ್ತವೆ… ಅದೆಲ್ಲವನ್ನು ಹೇಗೋ ಮ್ಯಾನೇಜ್ ಮಾಡಿ ಉಸ್ತಪ್ಪ ಅಂತ ಸೋಫಾದಲ್ಲಿ ಕುಳಿತುಕೊಂಡರೆ ಅರಿವಿಲ್ಲದೆ ನಿದ್ರೆ ಆವರಿಸಿಕೊಳ್ಳುತ್ತದೆ. ನಾವಿಬ್ಬರೂ ಬದುಕಿನ ಪಯಣದಲ್ಲಿ ಕಂಪನಿಯಲ್ಲಿ ನೀಡುವ ಪ್ರಾಜೆಕ್ಟ್ ಗಳನ್ನು ಕಂಪ್ಲೀಟ್ ಮಾಡಲು ಒಂದೇ ಸಮನೆ ಓಡುತ್ತಿದ್ದೇವೆ… ನನಗೆ ಕೊಂಚ ಬಿಡುವ ದೊರೆತಾಗ ನನ್ನವನಿಗೆ ವಿಪರೀತ ಕೆಲಸದ ಒತ್ತಡ, ಮಾತಾಡಿದರೆ ಸಿಡಾರ್ ಎಂದು ಸಿಡುಕಬಹುದು ಎಂಬ ಅಳುಕು… ಕಾರಣ ಕೆಲಸದ ಒತ್ತಡ, ಭದ್ರತೆ ಅವನಂತೆ ನನಗೂ ಇದೆ ಅಲ್ಲವೇ ? ಇದರ ಮಧ್ಯದಲ್ಲಿ ಮಗುವಾದರೆ ಅದರೊಂದಿಗೆ ಎಂಜಾಯ್ ಮಾಡಲು ಕೂಡ ಆಗದೇ ಇರುವಷ್ಟು ಮುಂದಿನ ಬದುಕಿನ ಕುರಿತ ಕಾಳಜಿ. ಐದಾರು ತಿಂಗಳ ಮೆಟರ್ನಿಟಿ ಲೀವ್ ದೊರೆಯುತ್ತದೆ ನಿಜ… ಆದರೆ ನಾಗಾಲೋಟದಲ್ಲಿ ಬದಲಾಗುತ್ತಿರುವ ಐ ಟಿ ಕ್ಷೇತ್ರದ ಅಭಿವೃದ್ಧಿ ಪಥಕ್ಕೆ ನಾನು ಸರಿ ಹೊಂದದೆ ಎಲ್ಲಿ ಹಿಂದೆ ಉಳಿದುಬಿಡುವೆನೋ ಎಂಬ ಆತಂಕ, ಭಯ ನನ್ನನ್ನು ಇನ್ನಿಲ್ಲದಂತೆ ಕಾಡುತ್ತದೆ. ಒಂದು ವೇಳೆ ಹಾಗಾದಾಗ ನನಗೆ ನನ್ನ ಯೋಗ್ಯತೆಗೆ ತಕ್ಕ ಕೆಲಸ ದೊರೆಯದೆ ಹಿಂದುಳಿದು ಬಿಟ್ಟರೆ? ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಎಂಬ ಆತಂಕ…. ಇದರ ಜೊತೆಗೆ ಸಹಜವಾಗಿಯೇ ನನ್ನಮ್ಮ, ಅತ್ತೆಯಂತೆ ನಾನು ಕುಟುಂಬಕ್ಕೆ ನನ್ನ ಸಮಯವನ್ನು ನೀಡುತ್ತಿಲ್ಲ, ಮಕ್ಕಳಿಗೆ ನೀಡಬೇಕಾದ ಅಗತ್ಯ ಕಾಳಜಿಯನ್ನು ವಹಿಸಲಾಗುತ್ತಿಲ್ಲ ಎಂಬ ಭಾವ ನನ್ನನ್ನು ಸದಾ ಹಿಂಡಿ ಹಿಪ್ಪೆ ಮಾಡುತ್ತದೆ. ಅತ್ತ ಕೌಟುಂಬಿಕವಾಗಿ ಎಲ್ಲರನ್ನೂ ಮೆಚ್ಚಿಸಲಾಗದೆ, ಔದ್ಯೋಗಿಕವಾಗಿಯೂ ಎಲ್ಲವನ್ನು ನಿರ್ವಹಿಸಲಾಗದೆ ಎಲ್ಲಿಯೂ ಸಲ್ಲದವರಾಗಿ ಬಿಡುತ್ತೇವೆ ಎಂಬ ಭಯ. ಹೋಗಲಿ ಬಿಡು…, ಇಬ್ಬರಲ್ಲಿ ಒಬ್ಬರು ದುಡಿಯುತ್ತೇವಲ್ಲ ನೌಕರಿ ಬಿಟ್ಟರೆ ಆಯ್ತು ಅಂದುಕೊಳ್ಳಲು ಕಂತಿನಲ್ಲಿ ಖರೀದಿಸಿದ ಕಾರು, ಮನೆಗಳ ಸಾಲಗಳು… ಇನ್ನೂ ನಮ್ಮ ಬಾಕಿ ಇದೆ ಎಂದು ತಟ್ಟಿ ನಮ್ಮನ್ನು ಎಚ್ಚರಿಸುತ್ತವೆ. ಇದೆಲ್ಲಾ ನೋಡಿದರೆ ಹಳ್ಳಿಯಲ್ಲಿ ಆರಾಮಾಗಿ ಇರುವ ನನ್ನಮ್ಮನ ಹಾಗೆ ಬದುಕನ್ನು ಅದು ಇರುವಂತೆ ಸಾಗಿಸಿಕೊಂಡು ಹೋಗುವುದರಲ್ಲಿ ಅದೆಷ್ಟು ಸುಖವಿದೆ ಅಂತ ಅನ್ಸುತ್ತೆ… ಏನು ಮಾಡೋದು ಎಲ್ಲವೂ ನಮ್ಮ ಕೈಯಲ್ಲಿ ಇಲ್ಲ. ಪರಿಸ್ಥಿತಿ ಬಂದ ಹಾಗೆ ನಮ್ಮನ್ನು ನಾವು ಹೊಂದಿಸಿಕೊಂಡು ಹೋಗಬೇಕು ಇಲ್ಲದೆ ಹೋದರೆ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾಗುತ್ತದೆ. ಹಳ್ಳಿಯಲ್ಲಿರುವ ಅಮ್ಮ…. ಅಯ್ಯೋ ನಮ್ಮದು ಒಂದು ಬದುಕೇ? ನಾನು ಅಂತ ಇಷ್ಟು ದಿನ ಹೊಂದಿಕೊಂಡು ಹೋದೆ. ನಮ್ಮ ಹಳ್ಳಿಯ ಮನೆಗಳು ಕತ್ತಲ ಗೂಡುಗಳು ಕಣ್ಣು ಮುಚ್ಚಾಲೆ ಆಡೋ ಕರೆಂಟು, ಬಾವಿಯ ನೀರು ಸೇದಿ ಬಳಸಬೇಕು ಇಲ್ಲವೇ ಹಳ್ಳಕ್ಕೆ ಹೋಗಬೇಕು… ಇನ್ನು ಮನೆ ಮನೆಗೆ ನೀರಿನ ವ್ಯವಸ್ಥೆ ನಮ್ಮ ಹಳ್ಳಿಗೆ ಬಂದಿಲ್ಲ. ಹೊಲದಲ್ಲಿ ಸಾಕಷ್ಟು ಕಟ್ಟಿಗೆ ಇರುತ್ತೆ ಅದನ್ನೇ ಬಳಸುವ ಅಂತ ಯಜಮಾನ್ರು ಹೇಳ್ತಾರೆ ಅದು ನಿಜಾನೆ ಹೌದು. ಆದರೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ, ಅದರ ಹೊಗೆ ಕುಡಿದು ಅಸ್ತಮಾ, ಕೆಮ್ಮು ದಮ್ಮು ಎಂದು ಒದ್ದಾಡೋದು ನನ್ನ ಹಣೆಯಲ್ಲಿ ಬರೆದಿದೆ. ಈಗೀಗ ಎಲ್ಲದಕ್ಕೂ ಗ್ಯಾಸ್ ಒಲೆಯನ್ನೇ ಬಳಸ್ತೀನಿ… ನಾನಾದ್ರೂ ಎಷ್ಟು ಅಂತ ಮಾಡ್ಲಿ.
ಈ ಹಿಂದೆ ಮನೆಯಲ್ಲಿ ದನ ಕರು ಅಂತ ಸಾಕಷ್ಟು ಹಾಲು ಹಯಿನಿನ ಸಮೃದ್ಧಿ ಇತ್ತು ನಿಜ… ಆದರೆ ಈಗ ಎಲ್ಲಾ ಕೆಲಸ ನಾವೇ ಮಾಡಿಕೊಳ್ಳಬೇಕು. ಈ ಮುಂಚಿನಂತೆ ಆಳುಗಳು ಸಿಗೋದಿಲ್ಲ, ಅವರು ಕೇಳೋವಷ್ಟು ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳೋದಕ್ಕೆ ನಮಗೆ ಆಗೋದಿಲ್ಲ. ಅದಕ್ಕೆ ನಾವು ತಿನ್ನುವುದಾದರೂ ಎಷ್ಟು ಎಂದು ಎಲ್ಲಾ ದನಕರುಗಳನ್ನ ಮಾರಿ ಹಾಕಿದ್ದು ನಿಜ ಆದರೆ ಕೊಂಡ ಹಾಲು, ಮೊಸರು ಎಷ್ಟು ಈಡಾಗುತ್ತದೆ ನೀವೇ ಹೇಳಿ.
ಈ ಹಿಂದೆ ಬಟ್ಟೆ ಒಗೆಯಲು ಅಗಸರು ಬಂದರೆ, ಮೇಲು ಕೆಲಸಕ್ಕೆ ಹೊಲಕ್ಕೆ ಬರುವ ಹೆಣ್ಣು ಮಕ್ಕಳು ಸಿಕ್ತಾ ಇದ್ರು . ಆದರೆ ಈಗ ಅದು ಕೂಡ ತತ್ವಾರ. ಹಳ್ಳಿಯ ಒಕ್ಕಲುತನದ ಮನೆಯ ಬದುಕು ಅಷ್ಟು ಸುಲಭವಲ್ಲ ಒಂದು ಮನೆಯನ್ನು ಸಾಗಿಸಲು ಕನಿಷ್ಠ ಎಂದರೂ ನ ಮೂರು ಜನ ಸದಾ ದುಡಿಯುವ ಹೆಣ್ಣು ಮಕ್ಕಳು ಬೇಕು. ಬಿಸಿಲು ಕಾಣದೆ ಸದಾ ಮನೆಯಲ್ಲಿ ಇರುವ ನಮಗೆ ಕುಟ್ಟಲು ಬೀಸಲು ಅನುಕೂಲಗಳು ದೊರೆತಿವೆ ನಿಜ ಆದರೆ ಈ ಹಿಂದಿನ ಬದುಕಿನಲ್ಲಿ ಅದು ಕೂಡ ಸಾಧ್ಯ ಇರಲಿಲ್ಲ ಅದೆಲ್ಲವನ್ನು ಅನುಭವಿಸಿಯೇ ಈಗ ಕೊಂಚ ವಿರಾಮ ದೊರೆತಿದೆ, ಆದರೆ ಅದನ್ನು ಕೂಡ ಅನುಭವಿಸಲು ಯೋಗ ಬೇಕಲ್ಲ. ತಾರುಣ್ಯದ ಹುಮ್ಮಸ್ಸಿನಲ್ಲಿ ಅನಿವಾರ್ಯವಾಗಿಯಾದರೂ ಮಾಡಲೇಬೇಕಾದ ಕೆಲಸ ಕಾರ್ಯಗಳ ಒತ್ತಡದಿಂದ ಇದೀಗ ನನ್ನ ದೇಹ ಸೋತುಹೋಗಿದ್ದು ಮೊಣಕಾಲುಗಳಲ್ಲಿ, ಕೀಲುಗಳಲ್ಲಿ ನೋವು ಕಿತ್ತು ತಿನ್ನುವಷ್ಟಾಗಿದೆ. ನನ್ನ ಕೆಲಸ ನಾನು ಮಾಡಿಕೊಂಡು ಹೋದರೆ ಸಾಕು ಎಂಬಂತಹ ಪರಿಸ್ಥಿತಿ ನನ್ನದು. ಮನೆಯಲ್ಲಿ ನನ್ನ ಸೊಸೆಗೆ ಈಗ ತಾರಸಿ ಮನೆಯ ವಾಸ, ಗ್ಯಾಸ್ ಒಲೆಯ ಮೇಲೆ ಅಡುಗೆ, ಬಟ್ಟೆ ಒಗೆಯಲು ವಾಷಿಂಗ್ ಮಷೀನ್, ನೀರನ್ನು ತುಂಬಿಸಲು ಸಿಂಟೆಕ್ಸ್ ಮತ್ತು ಮೋಟಾರ್ ಗಳು ಇವೆ.. ಮನರಂಜನೆಗೆ ಟಿವಿ ಮೊಬೈಲ್ ಗಳು, ಆಗಾಗ ಮದುವೆ ಮುಂಜಿ ಪ್ರವಾಸ ಅಂತ ಹೊರಗಿನ ಸುತ್ತಾಟ ಎಲ್ಲವೂ ದೊರೆಯುತ್ತಿದೆ ಎಂಬುದು ಸಮಾಧಾನದ ವಿಷಯ. ಆದರೆ ಒಳಗುಟ್ಟು ಹೇಳ್ತೀನಿ ಕೇಳಿ…. ಇಷ್ಟಿಲ್ಲದಿದ್ದರೆ ಹಳ್ಳಿಯ ಮನೆಗೆ ಮದುವೆಯಾಗಿ ಬರಲು ಆಕೆಯಾದರೂ ಹೇಗೆ ಒಪ್ಪುತ್ತಿದ್ದಳು ಹೇಳಿ ?
ಹಳ್ಳಿ ಮನೆಯ ಸೊಸೆ….. ಹೌದು ನಮ್ಮತ್ತೆಯಷ್ಟು ಕಷ್ಟದ ಬದುಕು ನನ್ನದಲ್ಲ ನಿಜ… ಆದರೆ ನನಗೂ ಕೂಡ ನನ್ನದೇ ಆದ ಇತಿಮಿತಿಗಳಿವೆ. ಹಳ್ಳಿಯ ಊರಿನಲ್ಲಿ ನನಗೆ ಬೇಕಾದ ರೀತಿಯ ಬಟ್ಟೆ ಬರೆ ದರಿಸಲು ಸಾಧ್ಯವಾಗುವುದಿಲ್ಲ. ಸದಾ ಸೀರೆಯನ್ನೇ ಸುತ್ತಿಕೊಂಡಿರಬೇಕು. ಅನುಕೂಲಗಳು ಸಾಕಷ್ಟಿವೆ ನನ್ನ ಸ್ನೇಹಿತರು ಹೋದಂತೆ ಫ್ರೆಂಡ್ಸ್ ಜೊತೆ ಸುತ್ತಾಡಲು ಆಗಲ್ಲ. ಆರಾಮಾಗಿ ಕುತ್ಕೊಂಡು ಮೊಬೈಲ್ ನೋಡಕ್ಕಾಗಲ್ಲ… ಸಿಕ್ಕಾಪಟ್ಟೆ ಸಿಗ್ನಲ್ ಸಮಸ್ಯೆ. ಇನ್ನು ಟಿವಿಯದು ಕೂಡ ಅದೇ ಹಣೆಬರಹ. ಮನೆಯಿಂದ ಹೊರಗೆ ಕಾಲಿಡೋದೇ ಅಪರೂಪ ಅನ್ನೋ ಹಾಗೆ ಆಗುತ್ತದೆ. ರೈತರ ಮನೆಯ ಬದುಕು ಕೆಲ ವಿಷಯಗಳಿಗೆ ಮಾತ್ರ ಸೀಮಿತ ಎಂಬಂತೆ ನಾನು ಬದುಕುತ್ತಿದ್ದೇನೆ… ನನ್ನ ಕಷ್ಟ ನನಗೆ ಮಾತ್ರ ಗೊತ್ತು.
ನೋಡಿದಿರಾ ಸ್ನೇಹಿತರೆ ? ಈ ಬದುಕೇ ಹೀಗೆ…. ಪ್ರತಿಯೊಬ್ಬರೂ ಮತ್ತೊಬ್ಬರ ಬದುಕನ್ನು ಚೆನ್ನಾಗಿದೆ ಎಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬರ ಬದುಕಿಗೂ ಅವರದ್ದೇ ಆದ ತೊಂದರೆಗಳು, ಏರಿಳಿವುಗಳು ಸವಾಲುಗಳು ಇದ್ದೇ ಇರುತ್ತವೆ. ನಾವು ಅವರಂತೆ ಬದುಕಬೇಕು ಎಂದು ನಾವು ಬಯಸಬಹುದಷ್ಟೇ. ನಾವು ಬಯಸಿದ ಬದುಕು ನಮಗೆ ದೊರೆಯದೆ ಹೋದರೂ ಇರುವುದನ್ನು ಇರುವಂತೆ ಒಪ್ಪಿಕೊಂಡು ಅಪ್ಪಿಕೊಂಡರೆ ಅದಕ್ಕಿಂತ ಸುಖ ಮತ್ತೊಂದಿಲ್ಲ.
ವೀಣಾ ಹೇಮಂತ್ ಗೌಡ ಪಾಟೀಲ್




