ಕಾವ್ಯ ಸಂಗಾತಿ
ಎನ್. ಜಯಚಂದ್ರನ್ ದಾಂಡೇಲಿ
“ಬದುಕೇ ಅಮರತ್ವ”


ಸಾವಿನ ದಡದಾಚೆಯೂ
ಬೆಳಕಾಗಿ ಉಳಿಯುವ ಹೆಜ್ಜೆಯೇ ಅಮರತ್ವ,
ಕಾಲದ ಮರಳಿನ ಮೇಲೆ
ಅಳಿಯದ ಗುರುತು ಬಿಡುವ ಬದುಕೇ ಅಮರತ್ವ.
ಉಸಿರು ನಿಲ್ಲಬಹುದು,
ದೇಹ ಮಣ್ಣಿನಲ್ಲಿ ಬೆರೆತು ಹೋಗಬಹುದು,
ಆದರೆ ;
ಸತ್ಕಾರ್ಯದ ಸುಗಂಧ
ಯುಗಗಳವರೆಗೂ ಹರಡಬಹುದು.
ಮರವು ಬಿದ್ದು ಹೋದರೂ
ಅದರ ಬೀಜ ಕಾಡಾಗಿ ಬೆಳೆಯುವಂತೆ,
ಮನುಜನ ದೇಹ ಮರೆಯಾದರೂ ;
ಅವನ ಚಿಂತನೆಗಳು ಜೀವಂತವಾಗಿರುತ್ತವೆ.
ಕವಿಯು ಬರೆದ ಸಾಲುಗಳಲ್ಲಿ,
ವೀರನ ರಕ್ತದ ತ್ಯಾಗದಲ್ಲಿ,
ತಾಯಿಯ ಮಮತೆಯ ಸ್ಪರ್ಶದಲ್ಲಿ,
ಗುರುವಿನ ಜ್ಞಾನದ ಬೆಳಕಿನಲ್ಲಿ
ಅಮರತ್ವ ಮೌನವಾಗಿ ಅರಳುತ್ತದೆ.
ಅದು ದೇವರ ವರವಲ್ಲ,
ಮಾನವನ ಕರ್ಮದ ಫಲವೂ ಅಲ್ಲ ,
ಸ್ವಾರ್ಥದಾಚೆ ಬದುಕಿದ
ಆತ್ಮದ ಹುಸಿ ಕಲ್ಪನೆಯೂ ಅಲ್ಲ ;
ಅಮರತ್ವ ಎಂಬುದು ಕಾಯ ಕಾಯಕಗಳ
ಶಾಶ್ವತ ಪ್ರತಿಫಲ
ಕಾಲವು ಎಲ್ಲವನ್ನೂ ಕಸಿದುಕೊಳ್ಳಬಹುದು,
ಆದರೆ ಪ್ರೀತಿಯಿಂದ ಕಟ್ಟಿದ ನೆನಪುಗಳನ್ನು ಅಲ್ಲ;
ಸತ್ಯಕ್ಕಾಗಿ ಬದುಕಿದ ಜೀವವನ್ನು ಅಲ್ಲ,
ಮಾನವೀಯತೆಯ ಜ್ಯೋತಿಯನ್ನು ಅಲ್ಲ
ಈ ಕಾರಣ ಬದುಕು
ಕೇವಲ ಉಸಿರಿನ ಎಣಿಕೆಯಾಗಬಾರದು,
ಹೃದಯಗಳಲ್ಲಿ ಬೆಳಗುವ
ಒಂದು ದೀಪವಾಗಬೇಕು
ಆ ದೀಪವೇ ಅಮರತ್ವ,
ಆ ಬೆಳಕೇ ಶಾಶ್ವತತೆ,
ಮರಣವನ್ನೂ ಮೀರಿ ಉಳಿಯುವ
ಮನುಷ್ಯತ್ವದ ಮಹೋನ್ನತ ಗೀತೆ.
ಎನ್. ಜಯಚಂದ್ರನ್ .ದಾಂಡೇಲಿ




ಚೆಂದ ಕವಿತೆ