ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
“ನಕ್ಕಿತು ಕನ್ನಡಿ”


ಕಂಡದ್ದು ಕಂಡಹಾಗೆ
ತೋರಿದರೆ
ಕೆಂಡದಂತ ಕೋಪ
ಕನ್ನಡಿ ಸರಿಗಿಲ್ಲ
ಭೂತಗನ್ನಡಿ ಎನ್ನುವ
ಭೂತಗಳ ಕಂಡು
ನಿಜವನರಿಯದ ನಿತ್ಯ
ನಡೆವ ನಾಟಕದ ರೂವಾರಿಗಳ ಕಂಡು
ರಾವುಗನ್ನಡಿಯ ಹಿಂದೆ
ಮನದ ಕನ್ನಡಿ ಮುಚ್ಚಿದ ವಿಚಾರವಾದಿಗಳ ಕಹಿಸತ್ಯವ ಕಂಡು
ಜನಸಾಮಾನ್ಯರನು ಮಳ್ಳು
ಮಾಡುವ ವಿವೇಕಿಗಳ
ಅವಿವೇಕತೆಯ ಕಂಡು
ವಿವೇಕ ಇದ್ದರೂ ತಪ್ಪನ್ನು
ತಪ್ಪೆಂದು ಒಪ್ಪದವರ ಕಂಡು
ಅವರಿವರನು ಬಳಸಿಕೊಂಡು
ಶಾಂತಿ ನೆಮ್ಮದಿ ಸೌಹಾರ್ದ
ಹಾಳು ಮಾಡುವ ಮತಿಹೀನರ ಮಂಗನಾಟದಲಿ
ಮುಗ್ಧಜನರ ಬಲಿಪಶು ಕಂಡು
ಇದ್ದದ್ದು ಇದ್ದಂಗ ತೋರಿದರೂ
ಮತ್ತೊಂದು ಬಣ್ಣ ಹಚ್ಚಿ ಕನ್ನಡಿಯ ಬಿಂಬ ಸರಿಯಿಲ್ಲ ಎನ್ನುವ ಸೈಲೆಂಟ ಕಿಲ್ಲರ್ ಮನಸುಗಳ ವಿಕ್ರತ ಮನಸು ಕಂಡು
ಮುಸು ಮುಸು ಕನ್ನಡಿ ನಕ್ಕಿತು
ಕನ್ನಡಿ ನಕ್ಕಿತು
ಲಲಿತಾ ಪ್ರಭು ಅಂಗಡಿ ಮಂಬಯಿ.



