ಪುಸ್ತಕ ಸಂಗಾತಿ
ಶಿವಲೀಲಾ ಹುಣಸಗಿ ಯಲ್ಲಾಪುರ
ಸುಧಾರಾಣಿ ನಾಯ್ಕ ಅವರ ಕೃತಿ
“ಮನದ ರಿಂಗಣ” .


ಸುಧಾರಾಣಿ ಉದಯೋನ್ಮುಖ ಹಾಗೂ ಭರವಸೆಯ ಕವಯತ್ರಿ.. ಅವಳ ನೇರ ನಿಲುವು,ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಗಟ್ಟಿಗಿತ್ತಿ.ಅಷ್ಟೇ ಮೃದುವಾಗಿ ಪ್ರೀತಿಗೆ ಕರಗಿ ಹೋಗುವ ಮನಸ್ಸುಳ್ಳವಳು.ಹಾಗಂತ ಅವಳನ್ನು ಹತ್ತಿರದಿಂದ,ದೂರದಿಂದ ಬಲ್ಲವರಿಗೆ’ ಸುಧಾ’ ಅಸಮಾನ್ಯ ಳಂತೂ ಹೌದು.ಕ್ರೀಡಾಪಟು,ನೃತ್ಯಗಾತಿ,ಹಾಡುಗಾರ್ತಿ,ಸಂಘಟಕಿ,
ಒಳ್ಳೆಯ ಓದುಗಳು.ಒಟ್ನಲ್ಲಿ ಬಹುಮುಖ ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ.
‘ಸುಧಾ’ ಳ ಚೊಚ್ಚಿಲ ಕವನ ‘ಮನದ ರಿಂಗಣ’ ನನ್ನ ಕೈಗಿತ್ತಾಗ ಸುಧಾ ತನ್ನೆಲ್ಲ ಬವಣೆಗಳ ಹೊತ್ತು ಹೊರಟ ಸಾಮಾನ್ಯ ಮಹಿಳೆಯಂತೆ ಕಾಣುವುದಂತೂ ಸತ್ಯ. ಈ ಕವನಸಂಕಲನದ ಕವಿತೆಗಳನ್ನು ಓದುತ್ತ ಹೊರಟವಳಿಗೆ; ನನ್ನೊಳಗಿನ ಭಾವ ಮೈತಳೆದು ನಿಂತಂತೆ, ಅನುಭವ ಕಟ್ಟಿಕೊಳ್ಳುವತ್ತ ಹೆಜ್ಜೆ ಇಟ್ಟಂತೆ.
“ಅವ್ವ” ಕವಿತೆ ಒಂದು ಕ್ಷಣ ಕಣ್ಣತೇವಗೊಳಿಸಿದ್ದು ಗೊತ್ತಾಗಲೇ ಇಲ್ಲ.
ಕಣ್ಣೇರಡು ಬತ್ತಿದೆ ಅಪ್ಪನ ಕುಡಿತದ ಅಮಲಿಗೆ
ರಕ್ತ ಅಲ್ಲಲ್ಲಿ ಮರಟಿದೆ
ಎದ್ದ ಬಾಸುಂಡೆಯ ಕುರುಹಾಗಿ
ಆದರೂ ಅವ್ವ ಹಚ್ಚಗೆ ನಗುತ್ತಾಳೆ
ಕಲೆಯ ಮೇಲೆ ಬೆಚ್ಚಗಿನ ಬಟ್ಟೆ ಒತ್ತಿದಂತೆ!
‘ಅವ್ವ’ ಎಂದರೆ ಹಾಗೆ ಅಲ್ಲವಾ? ಎಲ್ಲ ದುಗುಡ ದುಮ್ಮಾನಗಳ ಬದಿಗೊತ್ತಿ ನಗುವ ಛಾತಿ ಹೊತ್ತಿರುವ ಏಕೈಕ ವಿಶ್ವದ ಮಹಿಳೆಯೆಂದರೆ ಅವ್ವ.ಅವಳನ್ನು ಸೋಲಿಸುವುದು ಅಷ್ಟು ಸುಲಭವಿಲ್ಲ.ಆದರೆ ನರಕ ತೋರಿಸುವ ಗಂಡ,ಕೊನೆಗೆ ಇಲ್ಲವಾದಾಗಲೂ ಅವ್ವ ಹೆಬ್ಬಂಡೆಯಂತೆ.ಸುಟ್ಟ ರೊಟ್ಟಿಯಂತೆ ಬೆಂದಾಗಲೂ ಅವ್ವ ನಗುತ್ತಾಳೆ ಎಂದರೆ ಅವಳ ಮೌನ ವ್ಯರ್ಥವಾಗಲು ಬಿಡದ ಛಲಗಾರ್ತಿ ಎಂದರೆ ತಪ್ಪಾಗದು..ಇಂತಹ ವಿಶಿಷ್ಟ ಹಾಗೂ ಸ್ತ್ರೀ ಸಮಾನತೆಯೆಂಬ ಮೌಡ್ಯಗಳು ಒಮ್ಮೆ ಸುಳಿದಾಡಿದ್ದಂತೂ ದಿಟ.
‘ರಂಗೇರಿಸು’ ಎಂಬ ಕವಿತೆ ವಿರಹಿಯಾಗಿ ಕಂಗೆಟ್ಟ ಕನವರಿಕೆಗಳು ಮನತಟ್ಟಿದವು.
ನಿನ್ನ ಕನವರಿಕೆಗೆ
ನಿದ್ದೆಗಣ್ಣಲೂ ಕೈ ತಡಕಾಡಿದೆ
ಎದೆಗೊತ್ತಿ ದೂಡಿ
ಮತ್ತೆ ಕಾಡಬೇಡ ಹೋಗೆಂದು
ಹುಸಿಯಾಗಿ ತಳ್ಳಲು,
ಕನಸ ನನಸಾಗಿಸಿ,ಆಲಂಗಿಸು
ನಮ್ಮ ಮಿಲನಕೆ ಚಂದಿರನು
ಕೋಟಿ ತಾರೆಯ ಮಧ್ಯೆ
ವಿರಹಿಯಾಗುವಂತೆ!..
ಇದೊಂದು ವಿರಹ ಸಾಕು ಕೋಟಿ ಕಟ್ಟಳೆಗಳ ನಡುವೆಯೂ ಪ್ತೇಮವು ಭಗ್ನಪ್ರೇಮಿಯಂತೆ ರಾರಾಜಿಸುತ್ತಿದೆ..ಸುಧಾಳ ಮನಸ್ಸು ಚಂಚಲವಾಗಿ ಕೊನೆಗೆ ಹಿಡಿದಿಟ್ಟುಕೊಳ್ಳುವ ಕಾರ್ಯ ವೈಖರಿ ಪ್ರೇಮ ಗೆದ್ದಂತೆ ಅನ್ನಿಸದಿರದು.
“ಮತ್ತೆ ಆವಿರ್ಭವಿಸು”
ಈ ಇದೊಂದು ವಿಶೇಷ ಕವಿತೆ.ವಿಶ್ವಗುರು..ಕ್ರಾಂತಿಕಾರಿ ಬಸವಣ್ಣನವರು ಎಲ್ಲರಿಗೆ ಕಾಯಕವೇ ಕೈಲಾಸ ಎಂದು ಎಲ್ಲರಿಗೂ ಲಿಂಗ ಧಾರಣೆ ಮಾಡಿಸಿ ಸಮಾನತೆಯ ಬೀಜ ಬಿತ್ತಿದ ಮಹಾನ್ ವ್ಯಕ್ತಿಗಳು. ವಚನದೊಂದಿಗೆ ಭವದ ಕಷ್ಟವ ನೂಕಬೇಕು ಎಂಬುದನ್ನು ಸಾರಿದ್ದನ್ನು ಮರೆಯುವಂತ ಸ್ಥಿತಿಗೆ ನಾವೆಲ್ಲ ಬಂದು ನಿಂತಿದ್ದಿವಿ ಎಂದರೆ ವಿಷಾದನೀಯ.
ಬದಲಾಗಬೇಕಿದೆ ಮನುಕುಲ
ನೀನೆಣಿಸಿದಂತೆ
ಪ್ರತಿಮೆಯಾಗಿ ಸ್ಥಾವರವಾಗದೇ
ಜಂಗಮವಾಗು
ಮತ್ತೆ ಅಮರನಾಗು ಅವಿರ್ಭವಿಸು..
ಕವಯತ್ರಿಯ ಅಳಲು ಒಂದೇ ಒಂದು.ಜಾತಿ,ಧರ್ಮ ಮೀರಿ ಮಾರ್ದನಿಸಲಿ ಮಾನವ ಜಾತಿಯೊಂದೆ ಎಂದು ಮತ್ತೆ ಬೋಧಿಸಲಿ ಜಗದ ಚಕ್ಷು ಶುಚಿಯಾಗಲಿ ಎಂಬ ಕಳಕಳಿಗೆ ಮನಸ್ಸು ಮಾಗುವತ್ತ ಸಾಗಿದೆ ಎಂಬುದಕ್ಕೆ ಸಾಕ್ಷಿ.ಪುನಃ ಪುನಃ ಹುಟ್ಟಿ ಬರಬೇಕು ಭಗವಂತನ ಅನುಯಾಯಿಗಳು.. ಎಂಬ ನಿರೀಕ್ಷೆ ಕವಯತ್ರಿಯದು.
ನಾನು ಎಂಬ ಕವಿತೆ ಸುಧಾಳ ಒಳಮನಸ್ಸನ್ನು ತಿರುವಿ ಹಾಕಿಬೇಕಿದ್ದನ್ನು
ಒಮ್ಮೆ ಓದಬೇಕು.ನಾನು ಎಂದರೆ ಯಾರೆಂಬುದನ್ನು ಮನೋಜ್ಞವಾಗಿ ವಿವರಿಸಿದ್ದಾರೆ..
ಬಾಲ್ಯದಂತೆ ನೋವಾದಾಗಲೆಲ್ಲ
ಸಂತೈಸುವರ ನಿರೀಕ್ಷಸುವಂತಿಲ್ಲ
ಬೊಬ್ವಿಟ್ಟು ಅಳುವಂತಿಲ್ಲ
ಬೆಚ್ಚಿಬಿಟ್ಟೆ ನಾನು ನನ್ನ ಅಸ್ತಿತ್ವ ನೆನದು
ಸತ್ಯದ ವ್ಯಂಗ್ಯನಗೆಗೆ ಶೂನ್ಯವೆನಿಸಿತು
ನನಗೆ ‘ನಾನು’ ಎಂಬ ಹೆಗ್ಗಳಿಕೆಗೆ
ನಾನು ಎಂಬ ಮರಿಚೀಕೆಯ ಒಳಹೊರಗು ಪ್ರತಿಯೊಬ್ಬರಲ್ಲೂ ನಾನೆಂಬುದು ಹಾಸುಹೊಕ್ಕಾಗಿದೆ.ಕೊನೆಗೆ ವಿಷಾದದ ನಗೆಯಲ್ಲಿ ಜೀವನದಲ್ಲಿ ನಿಂತಿರುವುದು ನಾನೆ ಎಂಬ ಶೂನ್ಯ ಅರಿವಾದಾಗ ನಮ್ಮ ಅಸ್ತಿತ್ವ ಎಷ್ಟು ಬೇರು ಬಿಟ್ಟಿದೆ ಎಂಬುದು ಗೋಚರಿಸುತ್ತದೆ. ಹೀಗೆ ಕವಯತ್ರಿಯ ಪಯಣ ಸುಖ,ದುಃಖ, ನೋವು ನಲಿವು,ಕೋಪ,ಒಂಟಿತನ,ಅಪ್ಪ,ಬುದ್ದನೊಬ್ಬನೇ,ಇಂತಾದರೆ ಉಳಿದಿತೇ ಸ್ವಾತಂತ್ರ್ಯ, ಪೊರಕೆ ಮಾರುವ ಹುಡುಗಿ,ಕೆಣಕಬೇಡಿ, ಒಲವ ಧ್ಯಾನ,
ಶಪಥ,ಮಂದಾಗ್ನಿ,ಒಲವ ಪ್ರಣತಿ, ಹೀಗೆ ಒಟ್ಟು 44 ವೈವಿಧ್ಯಮಯ ಕವಿತೆಗಳು ಒಮ್ಮೆ ಪ್ರಕೃತಿಯನ್ನು, ಮತ್ತೊಮ್ಮೆ ಸಂಬಂಧಗಳು,ಇನ್ನೊಂದು ಮತ್ತೆ ಹೆಣ್ಣಾಗಿ ಹುಟ್ಟಬೇಕಿದೆ ಎಂಬ ಭಾವಗಳು ಶವಯಾತ್ರೆಯ ಮುಂದೆ ಸಮಾಧಿ ತನಕ ಸುಧಾಳ ಮನದಲ್ಲಿ ರಿಂಗಣಿಸಿದ ಎಲ್ಲ ಪಾತ್ರಗಳು ಅನಾವರಣಗೊಂಡಿದ್ದು ಕವಯತ್ರಿಯ ಭಾವಯಾನದಲ್ಲಿ ಅಲ್ಲಲ್ಲಿ ಮೈಲುಗಲ್ಲುಗಳನ್ನು ನಿಲ್ಲಿಸಲು ಪ್ರಯತ್ನ ಮಾಡಿರುವುದು ಅಭಿನಂದನಾರ್ಹ.
ಒಟ್ಟಾರೆ ಹೇಳುವುದಾದರೆ, ಕವನಸಂಕಲನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನಸಹಾಯ ಪಡೆದ ಕೃತಿ ಇದಾಗಿದ್ದು ಉತ್ತಮ ಸಂವಹನ ಹಾಗೂ ಓದುಗನ ಮನದಲ್ಲಿ ಒಂದಿಷ್ಟು ಕವಿತೆಗಳ ಸಾಲುಗಳು ನೆಲೆನಿಲ್ಲುವುದಂತೂ ದಿಟ!.ಹೀಗೆ ಸಾಗಲಿ ಅಕ್ಷರಗಳ ಪ್ರೇಮ,ಶಿಲ್ಪಿಯ ತೆರದಿ ಉಳಿಬಿಳಲಿ ಕವಿತೆಗಳ ಅಂತರಂಗಕೆ,ಅದರ ಸದ್ದುಗಲ್ಲುಗಲ್ಲಿಗೂ ಡಂಗುರ ಸಾರುವಂತಿರಲೆಂದು ಶುಭ ಹಾರೈಸುವೆ…
ಶಿವಲೀಲಾ ಹುಣಸಗಿ





ಮನಮುಟ್ಟುವ ಅನುಭವದ ಮೂಸೆಯಲಿ ಸಾಹಿತಿ ಶಿವಲೀಲಾರವರ ವಿಮರ್ಶೆ ಆಂತರ್ಯದ ಕದವನು ತಟ್ಟುವ ಮೂಲಕ ಕವನಗಳ ಜೀವಕೆ ಭಾವತುಂಬಿದ ಅದುಮಿಟ್ಟ ಕನಸುಗಳ ಮುಕ್ತತೆಯಲಿ ಅನಾವರಣಗೊಳಿಸುವ ಮೂಲಕ ಕಾವ್ಯ ಪ್ರಪಂಚಕೆ ಭಾವನೆಗಳ ರಂಗನು ಬಳಿದು ಓದುವ ಗುಂಗನು ಬಡಿದೆಬ್ಬಸಿದ್ದಾರೆ ನಿಜಕೂ ತುಂಬ ಅಂದದ ಕವನ ಚಂದದ ವಿಮರ್ಶೆಯ ತನನ.
ಅಭಿನಂದನೆಗಳು