ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಆಸರೆಯಿಲ್ಲದ ಬಳ್ಳಿಯಂತೆ
ನೆಲೆಯಿಲ್ಲದ ಬಾಳ ಸಂತೆಯಲಿ
ತರಗಲೆಯಂತೆ ಉದುರುವಾಗ
ಭಾವನೆಗಳ ಹೊತ್ತಿಸಿ ದೀಪವಾದೆ
ಬದುಕಲಿ ಬೆಳಕ ಚಿಮ್ಮಿಸಿದೆ
ಮತ್ತೆ ಬದುಕಬೇಕೆಂಬ ಕಿಡಿಹಚ್ಚಿದ
ಚತುರೆ ನೀನಾರೆ….
.
ಸೋತಬದುಕಲಿ ಗೆಲುವು ತುಂಬಿದೆ
ಬಾನಂಗಳದ ಬೆಳಕಾಗಿ ನಿಂದೆ
ಉಷೆಯಂತೆ ಉಲಿಯುತ ಉನ್ಮಾದ ಉಕ್ಕಿಸಿದೆ ನವಚೈತ್ರದಿ
ಜೀವಜಂಜಡ ಮರೆಸಿದ ಕೋಗಿಲೆ
ಹಾಡು ಕಲಿಸಿದ ಹಮ್ಮಿಲ್ಲದ ಹಕ್ಕಿಯೇ…ನೀನಾರೆ…..

ಸುಖವೇನೆಂದು ಅರುಹಿದೆ ನಲುಗಿದ
ಜೀವಕೆ ಜೀವವಾಹಿನಿಯಾದೆ….
ಅಂಧಕಾರದ ಮಡಿಲಿಂದ ಜ್ಯೋತಿಯೆಡೆ 
ಕೈ ಹಿಡಿದು ನಡೆಸಿದೆ.
ಬದುಕೇ ಇಲ್ಲ ಬಾಳೇ ಬೇಡಂದವನ
ಬಾಳಲಿ ಭಾಗ್ಯದ ಕಿರಣ ಹೊಮ್ಮಿಸಿದೆ
ಪದಗಳಲಿ ಕಟ್ಟಲಾರೆ ನಿನ್ನನು…. ನೀನಾರು ..

ನನ್ನ ಉಸಿರ ಬಸಿರಲಿ ಬೆರಗು ತಂದವಳೆ.
ಬೆಂದ ಬಾಳಿಗೆ ಜೀವತುಂಬಿದ ಬೆಡಗಿನವಳೆ.
ನೀನೆ ನನ್ನವಳು ಸದಾ ಚಿನ್ಮಯಿ ಚಿತ್ಕಳೆಯವಳೆ…
ಮುಂಗುರುಳ ಉಂಗುರದ ಕೆನ್ನೆಯವಳೆ
ಮಲ್ಲಿಗೆಯೆ ನಾಚುವ ಮುಗುಳ್ನಗೆಯವಳೆ
ಹೇಳಬಾರದೆ ನೀನಾರು…

ಕಣ್ಣ ಅಂಚಿನ ಸಂಚಿನ ಮಿಂಚಂಚೆಯವಳೆ
ಬೆಂಗಾಡಿನಲಿ ಬಳಕುವ ಬೆಳಕ ಬೀರಿದವಳೆ
ನಗುವ ನೈದಿಲೆಯಾಗಿ ಈ ಹೃದಯವ
ಆಳುಬಾ ಬಾಳುವ ಬಾ ದೀಪವಾಗಿ
ಬೆಳಗು ಬಾ….
ಯಾರೆ ನೀ ಮಂದಸ್ಮಿತ ತಂದವಳೆ….


About The Author

Leave a Reply

You cannot copy content of this page

Scroll to Top