ಅಧ್ಯಾತ್ಮಿಕ ತುಡಿತದೆಡೆಗೆ ಮನ

ಕಥೆ

ಅಧ್ಯಾತ್ಮಿಕ ತುಡಿತದೆಡೆಗೆ ಮನ

ಬಸವರಾಜ ಕಾಸೆ

person doing yoga on floor

ಆತ ಪ್ರಕಾಶ, ಅದೇನೋ ಚಿಕ್ಕವನು ಇದ್ದಾಗಿನಿಂದಲೇ ದೇವರೆಂದರೆ ಆತನಿಗೆ ಅಪಾರ ಭಕ್ತಿ. ಅವನ ಮನಸ್ಸು ಸದಾ ಅಲೌಕಿಕ ಕಡೆಗೆ ತುಡಿಯುತ್ತಿತ್ತು. ಆತನ ಮೈ ಬಣ್ಣ ಕಡುಕಪ್ಪು. ಆದರೆ ಶ್ವೇತ ಬಣ್ಣದ ಅತ್ಯಂತ ಸುಂದರ ಭಾವನೆಗಳಿದ್ದವು. ಆ ಬಣ್ಣದ ಕಾರಣದಿಂದ ಬಂಧುಗಳಿಂದಲೇ ಒಂದಿಷ್ಟು ತಿರಸ್ಕಾರಕ್ಕೆ ಒಳಗಾಗಿದ್ದ. ಆತನದು ಕೆಳಜಾತಿ ಎನ್ನುವ ಕಾರಣಕ್ಕೆ ಇನ್ನೂ ಹೊರಗಿನ ಜನಗಳಿಂದ ಅಸಡ್ಡೆಗೆ ಒಳಗಾಗಿದ್ದ. ಇವೆಲ್ಲವೂ ಒಂದೊಂದಾಗಿ ಬೆಳೀತಾ ಬೆಳೀತಾ ಆತನ ಅರಿವಿಗೆ ಬರತೊಡಗಿತು. ಇದರಿಂದಾಗಿ ಆತ ಹೆಚ್ಚೆಚ್ಚು ಇತರರೊಂದಿಗೆ ಬೆರೆಯುವುದನ್ನು ಬಿಟ್ಟು ಒಬ್ಬಂಟಿಯಾಗಿ ಉಳಿಯತೊಡಗಿದ.

ಇದರಿಂದ ಆಚೆ ಬೇರೆ ಒಂದಕ್ಕೆ ಅವನು ಸದಾ ಚಡಪಡಿಸುತ್ತಿದ್ದ. ಮತ್ತೆ ಈ ಜಾತಿ ಅಂತಹ ಅನಿಷ್ಟ ಕಟ್ಟಳೆಗಳನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದೇ ಹಂಬಲಿಸುತ್ತಿದ್ದನು. ಬಣ್ಣ ನೋಡಿ ಹೀಯಾಳಿಸುವವರೇ ಈ ಬಣ್ಣ ಒಪ್ಪಿ ಮೆಚ್ಚಬೇಕು ಎಂದೆಲ್ಲಾ ಹಾತೊರೆಯುತ್ತಿದ್ದ. ಕೃಷ್ಣನೂ ಸಹ ಕಪ್ಪು, ಆದರೆ ಕೃಷ್ಣನೆಂದರೆ ಅದೆಂತಹ ಮೋಹ ಅಂತೆಯೇ ಈ ಕಪ್ಪು ಅಂದರೂ ಸಹ ಅಂತಹ ಒಂದು ವ್ಯಾಮೋಹ, ಎಲ್ಲಾ ದೇವರುಗಳು ಎಂತೆಂತಹ ಜಾತಿ, ಅವರನ್ನೊಮ್ಮೆ ಕೇಳಿ ಬರಬೇಕು ಎಂಬ ತರಾತುರಿ. ಬಣ್ಣ, ಜಾತಿ ಮೊದಲಾದ ಮನುಷ್ಯ ಸೃಷ್ಟಿ ದಬ್ಬಾಳಿಕೆಗಳ ಅಂತ್ಯ ಎನ್ನುವ ಆತನ ಗುರಿಯೊಂದಿಗೆ ಅಧ್ಯಾತ್ಮದೆಡೆಗಿನ ಒಲವು ದಿನ ಕಳೆದಂತೆ ಹೆಚ್ಚಾಗತೊಡಗಿತು. ಯಾವುದಾವುದೋ ಧ್ಯಾನ ಶಿಬಿರಗಳಲ್ಲಿ ವರ್ಷಗಟ್ಟಲೆ ಕಳೆದ. ಯೋಗ ಸಿದ್ದಿಯನ್ನು ರೂಢಿಗತ ಮಾಡಿಕೊಂಡ. ಪಾಠ ಪ್ರವಚನಗಳಲ್ಲೇ ಸದಾ ಮಗ್ನನಾಗಿರುತ್ತಿದ್ದ.

ಅದೆಷ್ಟೋ ವರ್ಷಗಳು ಕಳೆದರೂ ಆತ ಇನ್ನೂ ಸರಿಯಾಗಿ ಮಾರ್ಗದರ್ಶನ ನೀಡುವ ಗುರುವಿನ ಹುಡುಕಾಟದಲ್ಲಿ ಇದ್ದ. ಜಾತಿಗೆ ಒಂದೊಂದು ಮಠ. “ನಿಮ್ಮ ಸೇವೆ ಮಾಡುವೆ, ಮಾರ್ಗದರ್ಶನ ನೀಡಿ” ಅವರೆಲ್ಲಾ ಕೇಳಿದೊಂದೆ “ನಿನ್ನದು ಯಾವ ಜಾತಿ”. ಅಲ್ಲಿಯೂ ಇವನಿಗೆ ಸ್ಥಳವಿರಲಿಲ್ಲ. ತನ್ನದೇ ಜಾತಿಯ ಮಠಕ್ಕೆ ಹೋದರೆ ಅಲ್ಲಿ ಬಣ್ಣದ ನೆಪ. ಹೆಚ್ಚಿನ ಮಠಗಳು ನೂರಾರು ವೈವಿಧ್ಯಮಯ ವ್ಯಾಪಾರಗಳು ಕುದುರುವ ಮತ್ತು ನಡೆಸುವ ಪುಣ್ಯ ಸ್ಥಳಗಳಾಗಿದ್ದವು. ಈತ ನಡೆ ಮುಂದೆ, ನಡೆ ಮುಂದೆ ಎಂದು ಖಾಲಿ ಜೋಳಿಗೆಯೊಂದನ್ನು ನೇತು ಹಾಕಿಕೊಂಡ ಫಕೀರ ದೇಶ ಸುತ್ತುತ್ತಾ ಹೊರಟ. ಆದರೆ ಅವನ ಆ ಜೋಳಿಗೆ ಜ್ಞಾನದಿಂದಲೇ ತುಂಬಿಕೊಂಡಿತು. ಪ್ರತಿ ಪ್ರದೇಶಕ್ಕೆ ಹೋದಾಗಲೂ ಹೊಸ ಹೊಸ ಅನುಭವ, ವಿಚಿತ್ರ ವಿಚಿತ್ರ ಜನಗಳ ಪರಿಚಯ, ವಿಭಿನ್ನ ಪರಿಸರದ ಸ್ವಾದ ಸವಿಯುತ್ತಲೇ ನಡೆದೇ ಇದ್ದ. ಆತನಿಗೆ ವಿಶ್ರಾಂತಿ ಬೇಕು ಎನಿಸಿದಾಗ ಸಿಗುವ ಸ್ಥಳವೇ ನೆಮ್ಮದಿ ತಾಣ. ಎಲ್ಲಿ ಏನು ಸಿಗುತ್ತೋ ಅದೇ ಆಹಾರ. ಜೀವನದ ಎಲ್ಲಾ ಜಂಜಾಟಗಳಿಂದ ದೂರ ಆಗಿದ್ದ ಆತನಿಗೆ ಸ್ವಾರ್ಥಗಳ ಪರಿಕಲ್ಪನೆಯೇ ನಡುಕ ಹುಟ್ಟಿಸುತ್ತಿತ್ತು.

ಅದೆಷ್ಟೋ ವರ್ಷಗಳ ಕಾಲ ನಡೆದು ಎಲ್ಲಾ ದೇವ ಸನ್ನಿದಿಗಳಿಗೆ ಭೇಟಿ ನೀಡಿದ. ಕೊನೆಗೆ ಹಿಮಾಲಯಕ್ಕೆ ಹೋಗಿ ಅಲ್ಲಿ ಇದ್ದ ಅಘೋರಿಗಳ ಪರಿಚಯಿಸಿಕೊಂಡು ಮುಕ್ತಿ ಮಾರ್ಗದೆಡೆಗೆ ಮುಕ್ತ ಮನಸ್ಸಿನಿಂದ ನನ್ನನ್ನು ಮುನ್ನೆಡೆಸಿ ಎಂದು ವಿನಂತಿಸಿದ. ಕೊನೆಗೆ ಒಬ್ಬ ಅಘೋರಿ ಕಠಿಣ ಯಾಗ, ಪರಿಶ್ರಮ, ತಪೋಧ್ಯಾನಗಳ ಕುರಿತು ನಿರಂತರವಾಗಿ ತಿಳಿಸುತ್ತಾ ಹೋದ. ಭಯಂಕರವಾದ ವಿಭಿನ್ನ ತಪಸ್ಸುಗಳನ್ನು ಆಚರಿಸತೊಡಗಿದ. ಆತನಿಗೆ ಈ ಜಗದ ಪರಿವೆ ಇರದೇ ಅದರಲ್ಲಿಯೇ ಕಳೆದು ಹೋಗಿ ಬಿಟ್ಟಿದ. ಭಂಗಿ ಸೇದುವುದೇ ಆತನ ಶಕ್ತಿ ಹೆಚ್ಚು ಮಾಡುತಿತ್ತು. ಇನ್ನೂ ಆಹಾರವಂತೂ ಸಿಕ್ಕಿದೆಲ್ಲವೂ ತಿನ್ನತೊಡಗಿದ. ರಹಸ್ಯ ವಿದ್ಯೆಗಳು ಎಲ್ಲಾವನ್ನು ತನ್ನೊಳಗೆ ಅರಗಿಸಿಕೊಳ್ಳತೊಡಗಿದ. ಆತನಿಗೆ ಅದೊಂದು ಸುಂದರ ಪ್ರಪಂಚವೇ ಆಗಿ ಹೋಗಿತ್ತು. ಆತನ ಮೈ ಮನಸ್ಸು ಹೇಗೇಗೋ ಹದಗೊಂಡು ಮತ್ತೊಂದು ರೂಪವೇ ಪಡೆದಿತ್ತು. ಹೀಗಾದರೆ ತನ್ನ ಗುರಿ ಎಂದುಕೊಂಡು ಹಿಮಾಲಯ ಬಿಟ್ಟು ಮತ್ತೆ ದೇಶ ಸುತ್ತುತ್ತಾ ಹಿಂತಿರುಗತೊಡಗಿದ. ಮತ್ತೆ ದಾರಿಯುದ್ದಕ್ಕೂ ಅಪರಿಚಿತ ಜನರೊಂದಿಗೆ ಓಡಾಟ, ಆತನ ದಿವ್ಯ ತೇಜಸ್ಸಿನ ಮುಖ ಮತ್ತು ಇರುವ ಜ್ಞಾನಕ್ಕೆ ಅಲ್ಲಲ್ಲಿ ಜನ ಸೋತು ಹೋದರು. ದಾರಿಯಲ್ಲಿ ಎಲ್ಲೇ ಏನೇ ಪ್ರವಚನ ನಡೆಯುತ್ತಿದ್ದರೂ ಅಲ್ಲಿ ಹೋಗಿ ವಾದಿಸತೊಡಗಿದ. ದೊಡ್ಡ ದೊಡ್ಡ ಸ್ವಾಮೀಜಿಗಳೇ ಬೆರಗಾಗುವಂತೆ ತನ್ನ ಸಿದ್ದಾಂತಗಳನ್ನು ಪ್ರತಿಪಾದಿಸತೋಡಗಿದ. ಹೋದಲ್ಲಿ ಎಲ್ಲಾ ತನ್ನದೇ ಉಪದೇಶಗಳನ್ನು ನೀಡತೊಡಗಿದ. ಅಧ್ಯಾತ್ಮಿಕತೆಯ ಉತ್ತುಂಗ ತಲುಪಿದ ಆತನ ಬೋಧನೆಗಳು ಸರಳವಾಗಿ ಜನರ ಮನಸ್ಸಿಗೆ ನಾಟಿದವು. ಈತನ ಈ ಕಾರ್ಯಗಳೆಲ್ಲವೂ ಜನರಿಂದ ಜನರಿಗೆ ಹಬ್ಬಿ ಮಾಧ್ಯಮಗಳ ಮೂಲಕ ಎಲ್ಲರನ್ನೂ ತಲುಪತೊಡಗಿದ. ಆತನ ಈ ದಾರಿಯಲ್ಲಿ ಎಷ್ಟೋ ಜನ ಆತನ ಭಕ್ತರಾದರೆ ಇನ್ನೂ ಕೆಲವರು ಆತನ ಶಿಷ್ಯಂದಿರೇ ಆದರು. ತನ್ನ ಸ್ವಂತ ಊರು ತಲುಪುವಷ್ಟರಲ್ಲಿ ಆತನ ಖ್ಯಾತಿ ಮನೆ ಮಾತಾಗಿತ್ತು. ಜಾತಿ, ಬಣ್ಣಗಳ ಮೀರಿ ಬೆಳೆದ ಆತನಿಗೆ ಅನುಯಾಯಿಗಳೇ ಆಶ್ರಮವೊಂದನ್ನು ಕಟ್ಟಿಸಿಕೊಟ್ಟರು. ಕಾಲ ಕಳೆದಂತೆ ವಿದೇಶಿ ಹಣವೂ ಹರಿದು ಬಂತು. ಅಣ್ಣ ಎಂದು ಆತನ ಶಿಷ್ಯಂದಿರೇ ಕರೆಯುತ್ತಿದ್ದರಿಂದ ಆತ ಅಣ್ಣ ಎಂದೇ ಹೆಸರು ವಾಸಿಯಾದ. ಕೈ ಕುಲುಕುವ ಒಂದು ಹೊಸ ಪದ್ಧತಿಯನ್ನು ರೂಡಿಸಿಕೊಂಡ ಆತನ ಕೈ ಕುಲುಕಲು ಇಂದು ಶ್ವೇತ ಬಣ್ಣದವರು, ಉಚ್ಚ ಜಾತಿಯವರು ಸರದಿಯಲ್ಲಿ ನಿಂತರೂ ಆತನ ದರುಶನವೇ ಇನ್ನೂ ಸಿಗುತ್ತಿಲ್ಲ.

****************************************

Leave a Reply

Back To Top