ಅಂಕಣ ಬರಹ

ಕಬ್ಬಿಗರ ಅಬ್ಬಿ

ಮೌ..ನದ ನಡುವಿನ ಮೌನ

Dry canyon with narrow path in Antelope valley

ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಡಿನ ನಟ್ಟ ನಡುವೆ, ಟೆಂಟ್ ನೊಳಗೆ ಮಲಗಿದ್ದೆ. ಚಿಕ್ಕಮಗಳೂರಿನ ಭದ್ರಾ ರಕ್ಷಿತಾರಣ್ಯದಲ್ಲಿ ಸ್ಕೌಟ್ ಕ್ಯಾಂಪ್ ಅದು. ವಿದ್ಯುತ್ ದೀಪಗಳು ಇರಲಿಲ್ಲ, ಕತ್ತಲು ಸುತ್ತಲೂ.  ವರ್ಷಗಳ ಹಿಂದೆ ದೂರ ನಕ್ಷತ್ರ ಗಳಿಂದ ಯಾತ್ರೆ ಹೊರಟು ಯಾತ್ರೆಯ ದಣಿವಿನಿಂದ ಮಂದವಾದ ಕಿರಣಗಳು, ತಂಗದಿರನ ಸೌಮ್ಯ ಬೆಳಕು ಮಾತ್ರ ಆ ಕಾಡನ್ನು ತಬ್ಬಿದ್ದವು. ಟೆಂಟು ಸುತ್ತಲೂ ಗಗನಕ್ಕೆ ಗೆಲ್ಲು ಚಾಚಿದ ಬೃಹತ್ ವೃಕ್ಷಗಳು. ಅವುಗಳಿಂದಾಚೆಗೆ ಕತ್ತಲೆ ಅಂದರೆ ಕತ್ತಲೆಯೇ. ಟೆಂಟ್ ನೊಳಗೆ ಕಣ್ಣೆಷ್ಟು ಅರಳಿಸಿದರೂ ಅರಿವಿಗೇ ಎಟುಕದಟಷ್ಟು ಕತ್ತಲೆ.

ಅದಕ್ಕಿಂತ ಗಾಢ ಅನುಭೂತಿ ಮೌನದ್ದು. ಎಲ್ಲೋ ದೂರದ ಪ್ರಾಣಿಗಳ ಕೂಗನ್ನು ಬಿಟ್ಟರೆ ಅಲ್ಲಿ ಶಬ್ಧಶೂನ್ಯತ್ವ. ಆ ಮೌನದ ತಂಪಿನಲ್ಲಿ ಮನಸ್ಸು ತಣಿದು ಸೂಕ್ಷ್ಮ ಸಂವೇದನೆಗಳು ಜಾಗೃತವಾಗುತ್ತೆ. ನಮ್ಮ ಎದೆಬಡಿತ ನಮಗೇ ಕೇಳ ತೊಡಗುತ್ತೆ.

ಸಾಗರದ ಅಲೆಗಳು ಶಾಂತವಾದಾಗ ಆಳದಲ್ಲಿ ಸದ್ದಿಲ್ಲದೆ ನಡೆಯುವ ಹರಿವಿನ ಅನುಭೂತಿ ಆಗುತ್ತೆ. ಆಳದಲ್ಲಿ ಈಜಾಡುವ ಮೀನುಗಳು, ಬೃಹತ್ ತಿಮಿಂಗಿಲಗಳು, ರಕ್ತಕ್ಕಾಗಿ ಹಸಿದು ಅಸಹನೆಯಿಂದ ಸರಸರನೆ ಈಜುವ ಶಾರ್ಕ್ ಗಳು ಮತ್ತು ಇನ್ನಿತರ ಜಲಚರಗಳು ತಮ್ಮ ಚಲನೆಯಿಂದ ನಡೆಯುವ ತಲ್ಲಣಗಳು ಅರಿವಿಗೂ ಬರುತ್ತವೆ.

green grass field near body of water

ಹೃಷೀಕೇಶದ ತಪ್ಪಲಿನಿಂದ, ಹಿಮಾಲಯದ ಏರು ಆರಂಭ. ಹತ್ತಾರು ಕಿಲೋಮೀಟರ್ ಹತ್ತಿದರೆ ವಸಿಷ್ಠ ಗುಹೆ. ಅದರೊಳಗೆ ಕುಳಿತರೂ ಅಷ್ಟೇ, ರಾತ್ರೆಯ ಕತ್ತಲು, ಹಿಮಾಲಯದ ತಂಪಿಗೆ, ಮನಸ್ಸು ಸ್ಪಟಿಕೀಕರಿಸಿ ಮೌನ ಸಂಭವಿಸುತ್ತೆ.

Photo of Snow Capped Mountain

ಒಂದು ವಿಷಯ ಗಮನಿಸಿ. ಮೌನ ಎಂದರೆ ನಾಲಿಗೆಯನ್ನು ಸುಮ್ಮನಿರಿಸುವುದಲ್ಲ, ಕಿವಿ ಮುಚ್ಚುವುದೂ ಅಲ್ಲ. ನಮ್ಮ ಇಂದ್ರಿಯಗಳು ಹೊರಗಿನ  ಅಲೆಗಳಿಗೆ ಸ್ಪಂದಿಸುತ್ತಲೇ ಇರುತ್ತವೆ. ದೃಶ್ಯ, ಶಬ್ದ, ಸ್ಪರ್ಶ, ರಸಸ್ವಾದ, ವಾಸನೆ ಇವುಗಳನ್ನು ಗ್ರಹಿಸಿ ಪ್ರತಿಕ್ರಿಯೆ ಕೊಡುತ್ತವೆ. ಇವು ದೇಹದ ಚಟುವಟಿಕೆಗಳಿಗೆ ಅಗತ್ಯವೂ ಹೌದು. ಮೌನದ ಮೊದಲನೆಯ ಹಂತದಲ್ಲಿ, ಈ ಇಂದ್ರಿಯಗಳನ್ನು ಸಂಪೂರ್ಣ ಶಾಂತವಾಗಿಸಬೇಕು. ಅದು ಮೌನದ ಮೊದಲ ಹಂತ.

ಮೌನದ ಎರಡನೆಯ ಹಂತದಲ್ಲಿ, ಭಾವ ಮತ್ತು ಕಲ್ಪನೆಗಳನ್ನು ಮೌನಕ್ಕೆ ಶರಣಾಗಿಸುವ ಕ್ರಿಯೆ. ಕಣ್ಣು ಮುಚ್ಚಿದರೆ, ಹೊರಗಿನ ದೃಶ್ಯ ಕಾಣದಿರಬಹುದು. ಆದರೆ ಮನಸ್ಸು, ಇಷ್ಟವಾದ, ಹಲವು ದೃಶ್ಯಗಳನ್ನು ಮನ:ಪಟಲದ ಮುಂದೆ ತಂದು ಆನಂದಿಸುತ್ತದೆ. ಹಾಗೆಯೇ ಶಬ್ಧವೂ. ಕಿವಿ ಮುಚ್ಚಿದರೂ, ಮನಸ್ಸಿನೊಳಗೆ ಇಷ್ಟವಾದ ಯಾವುದೋ ಹಾಡು, ಇನಿಯೆಯ ಪ್ರೀತಿಯ ಮಾತುಗಳು, ಮೇಷ್ಟ್ರು ಬೈದ ಮಾತುಗಳು, ಹೀಗೆ ಹತ್ತು ಹಲವು ಶಬ್ಧಗಳು ನಿಃಶಬ್ಧದ ಬಾಗಿಲು ಮುರಿದು ಒಳ ನುಗ್ಗುತ್ತವೆ. ಈ ಕಾನ್ಶಿಯಸ್ ಮೈಂಡ್ ಅನ್ನು ಮೌನವಾಗಿಸುವುದು ಎರಡನೆಯ ಹಂತ.

Silhouette of Person Raising Its Hand

ಮೂರನೆಯ ಹಂತದಲ್ಲಿ, ಧ್ಯಾನಕ್ಕೆ ಮನಸ್ಸನ್ನು ಸಮರ್ಪಿಸಿದರೆ, ಮೌನದ ತುರೀಯಕ್ಕೆ ಪ್ರಜ್ಞೆ ತಲಪುತ್ತೆ. ಇದರ ಬಗ್ಗೆ ಬೇಂದ್ರೆಯವರು ಹೀಗೆ ಹೇಳುತ್ತಾರೆ.

 “ಮೌನವು ಮಾತಿನ ತಪಸ್ಸು- ಮೊದಲ ಮೆಟ್ಟಿಲು. ಎರಡನೆಯ ಮೆಟ್ಟಿಲಲ್ಲಿ ಅದು ಮೌನದ ಅವಸ್ಥಾ ಶಿಖರ! ನಿಜವಾದ ಉತ್ತಮ ಮೌನವು ಮನದ ಗೌರೀಶಂಕರ, ಧವಲಗಿರಿ”

ಅರಬಿಂದೋ ಅವರ ಧ್ಯಾನ ಯೋಗದಿಂದ ಪ್ರೇರಣೆ ಪಡೆದು ೧೯೪೮ರಲ್ಲಿ, ಬೇಂದ್ರೆ ಮತ್ತು ವಿ.ಕೃ. ಗೋಕಾಕ್ ಅವರು, ಇತರ ಸಮಾನ ಮನಸ್ಕ ಗೆಳೆಯರ ಜತೆಗೆ ಮೌನ ಸಪ್ತಾಹ ಆಚರಿಸುತ್ತಾರೆ. ಆ ಮೌನ ಸಪ್ತಾಹದಲ್ಲಿ, ಮೌನಾಚರಣೆಯ ಗರ್ಭದ ಆಳಚಿಂತನೆಯಿಂದ ಅವರು ಬರೆದ ಕವನ ” ಅಸ್ಮಿತಾ” ಅದರ ಕೊನೆಯ ಸಾಲುಗಳು ಹೀಗಿವೆ.

Sri Aurobindo

“ತಾಯಿ ಕೂಸಿನ ಮುದ್ದು ಮೌನದಲಿ ಮಿಡಿದಾಗ

ಶ್ರುತಿಯನ್ನು ಹಿಡಿದಿರುವೆಯಾ ?

ಧ್ಯಾನ ಪಕ್ವತೆ ಪಡೆದು ಮೌನ ಬೀಜವು ಸಿಡಿದು

ಓಂವೇದ ಪಡೆದಿರುವೆಯಾ ?

ಸ್ಮಿತವೆ ವಿಸ್ಮಿತವಾಯ್ತು ಅಸ್ಪರ್ಶ ಸ್ಪರ್ಶದಲಿ

ಅಸ್ಮಿತೆಯು ಸ್ಫೂರ್ತಿಸಿತ್ತು

ವಿಸ್ಮಿತದ ಸ್ತಿಮಿತದಲಿ ಮೌನವೇ ಧ್ವನಿಸುತಿರೆ

ಸ್ಮಿತವಾಗಿ ಮೂರ್ತಿಸಿತ್ತು.”

ಮೌನದಾಚೆಗಿನ ಧ್ಯಾನಸ್ಥ ಸ್ಥಿತಿಯಿಂದ, ” ಸ್ಮಿತವೆ ವಿಸ್ಮಿತವಾಯ್ತು, ಅಸ್ಪರ್ಶ ಸ್ಪರ್ಶದಲಿ ಅಸ್ಮಿತೆಯು ಸ್ಪೂರ್ತಿಸಿತ್ತು, ” ಶಬ್ದಗಳ ಶಬ್ಧಕ್ಕೆ ಮೀರಿದ ಸಾಲುಗಳಿವು.

ಕಳಿಂಗ ಯುದ್ಧದ ನಂತರದ ರಾತ್ರೆ, ಚಕ್ರವರ್ತಿ ಅಶೋಕ ತಾನೇ ಹರಿಸಿದ ರಕ್ತದ ಕೋಡಿಯನ್ನು ನೋಡಿ ಹಲವು ಚಿಂತನೆಗಳಿಗೊಳಗಾಗುತ್ತಾನೆ. ರಾತ್ರೆಯಿಡೀ ಆತನ ಮೌನ, ಮಾರನೆಯ ದಿನ ತನ್ನ ಬದುಕನ್ನೇ ಅಹಿಂಸೆಗೆ ಸಮರ್ಪಣೆ ಮಾಡುವ ನಿರ್ಧಾರದ ಹಿಂದೆ ಯುದ್ಧಾನಂತರದ ಮೌನವಿದೆ.

ಧಾರಾಕಾರವಾಗಿ ಸುರಿದ ಮಳೆ, ಸಿಡಿಲು, ಕೋಲ್ಮಿಂಚು, ನಂತರ ಎಲ್ಲವೂ ಮೌನವಾಗುತ್ತೆ. ತಡೆಯಲಾದ ದುಃಖದಿಂದ ಬಿಕ್ಕಿ ಬಿಕ್ಕಿ ಅತ್ತ ನಂತರವೂ ಒಂದು ಸುದೀರ್ಘ ಮೌನವಿರುತ್ತದೆ. ಗಂಡ ಹೆಂಡತಿಯರ ಜಗಳದ ನಂತರದ ಮೌನಕ್ಕೆ ಔಷಧೀಯ ಗುಣವಿದೆ.

ಮೌನ ಖಾಲಿ ಹಾಳೆಯಂತೆ. ಅದರಲ್ಲಿ ನೀವೇನು ಕಾಣ ಬಯಸುತ್ತೀರೋ,ಅದನ್ನು ಬರೆಯಬಹುದು. ಅದಕ್ಕೇ ಮೌನವನ್ನು ಕವಿಗಳು ಕಾಡಿ ಕಂಡು ಹಾಡಿ, ಬಳಸಿದ್ದಾರೆ.

ಬೇಂದ್ರೆಯವರ “ಏಲಾಗೀತ” ದಲ್ಲಿ ಮೌನದ ಅಪೂರ್ವ ಸಾಲು ಹೀಗಿದೆ.

“ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು

ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು

 ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. “

ಮೌನ, ಶಬ್ಧಕ್ಕೆ ಹಾಸಿಗೆ ಅನ್ನುತ್ತಾರೆ,ಬೇಂದ್ರೆಯವರು

ಗೋಪಾಲಕೃಷ್ಣ ಅಡಿಗರ ಈ ಕೆಳಗಿನ ಕವನ ಆರಂಭವಾಗುವುದೇ ಮೌನದಿಂದ.

“ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ

ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ

ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು

ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು

ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;

ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು

ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,

ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು”

ಭೂಮಿಯೇ ಮೌನವನ್ನು ಬೆಚ್ಚಗೆ ಅಪ್ಪಿಕೊಂಡು ಪುಳಕಗೊಳ್ಳುವಾಗ, ಆಕೆ ಧಾರಿಣಿಯಾಗುತ್ತಾಳೆ. ಹಿಂದುಸ್ತಾನಿ ಸಂಗೀತದಲ್ಲಿ, ಒಂದು ಸ್ವರವನ್ನ ಬಿಗಿ ಹಿಡಿದು ಕಡಿಯದ ಧಾರೆಯಂತೆ ಮಾಡುವ ಸುದೀರ್ಘ ಆಲಾಪಕ್ಕೆ, ಧಾರಣೆ ಅನ್ನುವುದಿದೆ. ಧಾರಣೆಯಲ್ಲಿ ಸ್ವರಸಮರ್ಪಣೆಯ ಧ್ಯಾನಸ್ಥ ಮನಸ್ಸಿದೆ.

“ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,

ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು”

ಪ್ರಕೃತಿಯ ಕ್ರಿಯೆಗಳು ಮೌನವನ್ನು ಜತೆ ಜತೆಗೇ ಹೊತ್ತು ತರುತ್ತವೆ. ನಾವು ನಡೆಯುವಾಗ, ಎರಡು ಹೆಜ್ಜೆಗಳ ನಡುವೆ ಮೌನವಿದೆ. ನಾವು ಬರೆಯುವ ವಾಕ್ಯಗಳಲ್ಲಿ ಪದಗಳ ನಡುವೆ ಮೌನವಿದೆ. ಸ್ಫುರಿಸುವ ಭಾವ ವೈವಿಧ್ಯಗಳ ನಡುವೆ ಮೌನವಿದೆ.

ನಿತ್ಯಕವಿ ನಿಸಾರ್ ಅಹಮದ್ ಅವರ ಬೇಸರಾಗಿದೆ ಮಾತು ಕವನದ ಕೆಲವು ಸಾಲುಗಳು ಹೀಗಿದೆ ನೋಡಿ.

” ಬೇಸರಾಗಿದೆ ಮಾತು, ಭಾರವಾಗಿದೆ ಮೌನ

ನೋವು ಕರಗಿದೆ ಕಣ್ಣಲ್ಲಿ

ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿಯದಂತೆ

ಭಾವ ಕುಟುಕಿದೆ ಮನದಲಿ

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ

ಕನಸುವಂತೆಯೆ ಮೊಳಕೆಗೆ

ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ

ಹೊಸತು ಬದುಕಿನ ಬಯಕೆಗೆ”

ಅಡಿಗೆ ಚುಚ್ಚಿದ ಮುಳ್ಳು, ಒಳಗಡೆಯೆ ಮುರಿದು, ನೋವೇ ಕಣ್ಣೀರಲ್ಲಿ ಕರಗಿದ ದುಃಖದಿಂದ, ಮೌನ ಸಹಜವೂ ಹೌದು, ಆ ಮೌನ ಭಾರವೂ ಹೌದು.

ಆದರೆ ಅಂತಹ ಮೌನ ನೋವಿನ ಹಿಂದಿನ ಬಂಧನದ ಅರಿವನ್ನು ತಿಳಿಯಾಗಿಸಲು ದಾರಿಯಾಗುತ್ತೆ. ಎಲ್ಲ ನಂಟನು ತೊರೆದು ನಗ್ನವಾದ ಜೀವ, ಹೊಸ ಬದುಕಿನತ್ತ ಕದ ತೆರೆಯುತ್ತೆ. ಈ ಎಲ್ಲ ನಂಟನು ತೊರೆದು ನಗ್ನವಾಗುವ ಕ್ರಿಯೆಯ ಮೂಲದಲ್ಲಿ ಮೌನ ಸೃಜಿಸಿದ ಮಂಥನವಿದೆ.

ಹುಟ್ಟಿದ ನೆಲದಿಂದ ಗಿಡವನ್ನು ಕಿತ್ತು ತೆಗೆದರೆ ಗಿಡಕ್ಕೆಷ್ಟು ನೋವಾಗಬಹುದು. ಹಾಗೆ ಬೇರು ಸಹಿತ ಕಿತ್ತ ಗಿಡವನ್ನು ದೂರದ ಅರಿಯದ ಹೊಲದಲ್ಲಿ ನೆಟ್ಟರೆ?. ಮದುವೆಯಾಗಿ ಪ್ರೀತಿಯ ತನ್ನ ಮನೆ  ತವರುಮನೆಯಾಗುವ ಮಾರ್ಪಾಡಿನಲ್ಲಿ, ತಿಳಿಯದ ಇನ್ನೊಂದು ಮನೆ ಸ್ವಂತದ್ದಾಗಿಸಲೇ ಬೇಕಾದ ಟ್ರಾನ್ಸಿಷನ್ ಹೂಮನಸ್ಸಿನ ಹುಡುಗಿಗೆ ಹೇಗನಿಸಬಹುದು?. ಗಂಡನ ಮನೆಯ ಆ ಮೊದಲ ದಿನದ ಮೌನದ ಬಗ್ಗೆ ಬಹುಷಃ ಕೆ ಎಸ್ ನ ಅವರಿಗಿಂತ ಚಂದ ಯಾರೂ ಬರೆಯಲಾರರು.

“ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ

ಚಿಂತೆ ಬಿಡಿ ಹೂವ ಮುಡಿದಂತೆ

ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ

ಜೀವದಲಿ ಜಾತ್ರೆ ಮುಗಿದಂತೆ”

ಅಂತಹ ತಳಮಳ, ತನ್ನವರ ಅಗಲಿಕೆಯ ದುಃಖ,  ಭಾವೋದ್ವೇಗ, ಭಯ, ಎಲ್ಲವನ್ನೂ ಈ ಮೊದಲ ದಿನ ಮೌನ, ಮೌನವಾಗಿಯೇ ಹೇಳಿಬಿಡುತ್ತೆ.

ಪು ತಿ ನ ಅವರ “ಯದುಗಿರಿಯ ಮೌನ ವಿಕಾಸ” ಎಂಬ ಕವನವೂ ಮೌನ ಪ್ರತಿಮೆಯ ಸುತ್ತ ಹಲವು ರೂಪಗಳ ಕೆತ್ತಿದೆ.. ಈ ಕವಿತೆಯ ಬಗ್ಗೆ ಬರೆಯಲು ಒಂದು ಪೂರ್ತಿ ಲೇಖನವೂ ಸಣ್ಣದಾದೀತು, ಮುಂದೊಂದು ದಿನ ಬರೆಯುವೆ.

“ಅಲೆಯೊಳಗಿನ ಮೌನ”  ಎಂಬ ಗಜಲ್ ಸಂಕಲನದಲ್ಲಿ

ಶ್ರೀದೇವಿ ಕೆರೆಮನೆ ಅವರ ಕವಿತೆಯೂ ಪ್ರೀತಿ ಸಂವಾದದ ಸಾಲುಗಳಲ್ಲಿ ಮೌನಕ್ಕೆ ಹಲವು ಅರ್ಥಪ್ರಯೋಗ ಮಾಡಿದೆ.

“ಯುಗಾಂತರದಿಂದಲೂ ಮೌನಕ್ಕೆ ಜಾರಿದಂತೆ ಮನಸ್ಸು ಹೆಪ್ಪುಗಟ್ಟುತ್ತಿದೆ

ನಿನ್ನ ಒಂದು ಮಾತು ನನ್ನ ಬದುಕಿಗೆ ಮರಳುವಂತೆ ಮಾಡುತ್ತಿದೆ

ಮೌನದಿಂದ ನನ್ನನ್ನು ಕೊಲ್ಲುವ ಇರಾದೆ ಏಕೆ ನಿನಗೆ

ನಿನ್ನ ಮೌನ ನನ್ನನ್ನು ಇರಿದಿರಿದು ಸಾಯಿಸುತ್ತಿದೆ.

ಮುಗಿದ ಮಾತುಗಳ ಮೌನದರಮನೆಗೆ ರಾಣಿಯಾಗಲಾರೆ

ಅರಮನೆಯ ಸಂಕಲೆ ನನ್ನನ್ನು ದಿಕ್ಬಂಧನಕ್ಕೆ ಒಳಪಡಿಸುತ್ತಿದೆ

ಮಾತಿಗೂ ಬರಗಾಲ ತಂದಿಡುವ ಆಶಯವಾದರೂ ನಿನಗೇಕೆ?

ಮಾತು ಈಗ ದೂರದಲ್ಲಿ ಸೆಳೆಯುವ ಮೃಗಜಲದಂತೆ ಗೋಚರಿಸುತ್ತಿದೆ.

ಸಾಕುಬಿಡು ನಿನ್ನ ಗಾದೆ ಮಾತಿನ ಥಳುಕಿಗಷ್ಟು ಬೆಂಕಿಯಿಡು

ಬದುಕಿಸುವ ಮಾತಿನ ಬೆಳ್ಳಿಗಿಂತ ಮೌನದ ಬಂಗಾರ ಕೊಲ್ಲುತ್ತಿದೆ.

ಎಂದಾದರೂ ಬದುಕು ಮೌನದ ಕಣಿವೆಯೊಳಗೆ ಜಾರಲೇ ಬೇಕು

‘ಸಿರಿ’ ಒಂದಾಗಿಸುವ ಮೃದು ಮಾತನ್ನಷ್ಟೇ ಬೇಡುತಿದೆ.”

ಮೌನ ವಿರಹಸೂಚಕವಾಗಿ, ಮೌನವೇ ಎದೆಗಿರಿಯುವ ಆಯುಧವಾಗಿ, ಮೌನ ಅರಮನೆಯಾಗಿ, ಸಂಕಲೆಗಳಾಗಿ,  ಮಾತಿನ ಬರಗಾಲವಾಗಿ,  ಮೌನ,ಬದುಕಿನ ಅನಿವಾರ್ಯ ಕಣಿವೆಯಾಗಿ ಚಿತ್ರಿಸಲ್ಪಟ್ಟದ್ದು ಕವಯಿತ್ರಿಯ ಸೃಜನಶೀಲತೆಗೆ ಸಾಕ್ಷಿ.

ಅಲೆಯೊಳಗಿನ ಮೌನ ಎಂಬ ಸಂಕಲನದ ಶೀರ್ಷಿಕೆಗೂ ವಿಶೇಷ ಅರ್ಥವಿದೆ. ನಾದ ಎಂಬುದು ಒಂದಕ್ಕೊಂದು ಜೋಡಣೆಯಾಗಿ ಕಾಲಗತಿಯಲ್ಲಿ ಸಂಚರಿಸುವ ಅಲೆಯ ಪ್ರವಾಹ. ಆ ನಾದದೊಳಗೆ, ತರಂಗಾವರ್ತನಗಳೊಳಗೆ ಮೌನ ಕಾಣುವ ಅನನ್ಯ ನೋಟ ಕವಯಿತ್ರಿ ಅವರದ್ದು.

ಜನವರಿ ಇಪ್ಪತ್ತಾರು, ಕೆ ಎಸ್ ನ ಅವರ ಮತ್ತು ಮೂವತ್ತೊಂದು ಬೇಂದ್ರೆಯವರ ಜನ್ಮ ದಿನ. ಅವರಿಬ್ಬರ ದಿವ್ಯ ಭವ್ಯ ಚೇತನಗಳಿಗೆ ಶಿರಬಾಗಿ ನಮಿಪೆ.

**********************************************************

ಮಹಾದೇವ ಕಾನತ್ತಿಲ

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

5 thoughts on “

  1. ಮೌನದ ವಿವಿಧ ಆಯಾಮಗಳನ್ನು ಬಹಳ ಸುಂದರವಾಗಿ ಅನಾವರಣ ಮಾಡಿದ್ದಾರೆ ಮಹಾದೇವ್ ಅವರು. ವರ ಕವಿ ಬೇಂದ್ರೆ ಅವರ ದಾರ್ಶನಿಕ ದೃಷ್ಟಿಯಲ್ಲಿ, ‘ ಮೌನ’ ಓಂಕಾರದ ಪ್ರಣವಕ್ಕೆ ಗರ್ಭವಾಗುತ್ತದೆ. ಸ್ಮಿತಾ, ವಿಸ್ಮಿತೆ ಗಳಿಂದ ಹೊರಹೊಮ್ಮಿ ಅಸ್ಮಿತೆ ಯಾಗಿ ಆವಿರ್ಭಾವಗೊಳ್ಳುತ್ತದೆ. ಕವಿ ನಿಸಾರ ಅಹಮದ್ , ಕೆಎಸ್ಎನ್ ಅವರ ಕವನಗಳಲ್ಲಿ, ಮೌನದ ಬೇರೆ ಅವತರಣಿಕೆ ಗಳಿವೆ.
    ಕೊನೆಯ ಕವಿತೆಯಲ್ಲಿ, ಮೌನ ಅಸಹನೀಯವಾಗುವ ಬಗೆಯನ್ನು ಕವನ ಚೆನ್ನಾಗಿ ಬಿಂಬಿಸಿದೆ. ‘ ಕೊಲ್ಲುವ ಬಂಗಾರದ ಮೌನಕ್ಕಿಂತ, ಮಾತಿನ ಬೆಳ್ಳಿ ಬೇಕು’ ಎಂಬ ಸಾಲು, ಮೂಲತಃ ಸಂವೇದನಕ್ಕೆ ಅಗತ್ಯವಾದ ಸಂವಹನದ ಬಗ್ಗೆ ಒತ್ತು ನೀಡುತ್ತದೆ.
    ಕವನಗಳ ನೆಲೆಯಲ್ಲಿ ಮೌನದ ಅನೇಕ ಛಾಯೆಗಳನ್ನು ಪರಿಚಯಿಸಿದ ಮಹಾದೇವ್ ಅವರಿಗೆ ಹಾರ್ದಿಕ ಅಭಿನಂದನೆಗಳು

    1. ಪ್ರಹ್ಲಾದ ಸರ್,

      ” ‘ ಮೌನ’ ಓಂಕಾರದ ಪ್ರಣವಕ್ಕೆ ಗರ್ಭವಾಗುತ್ತದೆ. ಸ್ಮಿತಾ, ವಿಸ್ಮಿತೆ ಗಳಿಂದ ಹೊರಹೊಮ್ಮಿ ಅಸ್ಮಿತೆ ಯಾಗಿ ಆವಿರ್ಭಾವಗೊಳ್ಳುತ್ತದೆ. ”

      ಎಂಬ ನಿಮ್ಮ ಉಕ್ತಿಗಳು ಉಕ್ಕಿಗಿಂತಲೂ ಗಟ್ಟಿ. ಸರ್ವಕಾಲಿಕ ಮಾತು.
      ನನ್ನ ನೋಟದ ವ್ಯಾಪ್ತಿ ಗುಡ್ಡ ವಾದರೆ, ನಿಮ್ಮದು ದಿಗಂತ.

      ತುಂಬಾ ಧನ್ಯವಾದಗಳು ಸರ್

  2. ಬೇಂದ್ರೇ ಅವರು ಅಂತರಂಗದಾ ಮೃದಂಗ ದಲ್ಲಿ ಹೇಳುತ್ತಾರೆ ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ. ಮೌನ ಒಂದು ತಲ್ಲಣವನ್ನೂ ತೋರಬಹುದು, ನಂತರದ ನೆಮ್ಮದಿಗೂ ನಾಂದಿಯಾಗ ಬಹುದು. ರಾತ್ರಿಯ ನೀರವತೆ ಮತ್ತೊಂದು ಬೆಳಗಿಗೆ ಎಡೆ ಮಾಡಿ ಕೊಡುತ್ತೆ. ತನ್ನಲ್ಲಿ ಎಷ್ಟೂ ಭಾರ ಹೊತ್ತು ಮೌನ ಸಹಿಸುವ ಭೂತಾಯಿ ಎನಿಸುತ್ತದೆ.

    1. “ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ”
      ಈ ಬೇಂದ್ರೆಯವರ ಸಾಲುಗಳನ್ನು ನಿನಪಿಸಿ ಮೌನಕ್ಕೆ ವ್ಯಾಪ್ತಿ ಕೊಟ್ಟಿರಿ,ರಮೇಶ್ ಸರ್.

      ತನ್ನಲ್ಲಿ ಎಷ್ಟೂ ಭಾರ ಹೊತ್ತು ಮೌನ ಸಹಿಸುವ ಭೂತಾಯಿ ಎನಿಸುತ್ತದೆ. ಎಂಬ ನಿಮ್ಮ ಮಾತು ಹಲವು ಚಿಂತನೆಗೆ ಮನವನ್ನು ಹಚ್ಚುತ್ತೆ.
      ನಮಿಪೆ

  3. ಸ್ಕೌಟ ಕ್ಯಾಂಪಿನಲ್ಲಿ ಕತ್ತಲೆ ಹಾಗೂ ಮೌನವೆರಡರ ಅನುಭೂತಿ ನಿಮ್ಮನ್ನು ಮೌನದ ಸಂಶೋಧನೆಗೇ ಹಚ್ಚಿದಂತಿದೆ ಈ ಬರಹ.
    ಅರಿವಿಗೇ ಎಟುಕದಷ್ಟು ಕತ್ತಲೆ ಒಮ್ಮೊಮ್ಮೆ ಅರಿವನ್ನೇ ಕಳೆದುಕೊಳ್ಳುವಂತೆ ಮಾಡುತ್ತದಲ್ಲವೇ.
    ಹಿಮಾಲಯದ ತಂಪಿಗೆ,ವಸಿಷ್ಟ ಗುಹೆಯಲ್ಲಿ ಮನಸ್ಸು ಸ್ಫಟೀಕರಿಸಿ ಮೌನ ಸಂಭವವಾಗುತ್ತದೆ.ಇದರಲ್ಲಿ ಮನಸ್ಸು ಸ್ಫಟೀಕರಿಸಿ ಎಂಬ ಪ್ರಯೋಗ ತುಂಬಾ ಮನಸೆಳೆಯಿತು.

    ಮೌನವೆಂದರೆ ನಾಲಿಗೆ ಸುಮ್ಮನಿರಿಸುವುದಲ್ಲ.ಹೌದಲ್ಲವೇ ಮತ್ತೆ.ಕಣ್ಣು,ಉಸಿರು,ಕೈಕಾಲು ಮುಖಗಳಿಂದಾಗುವ ವಿಶಿಷ್ಟ ಚಲನೆಗಳೂ ಕೆಲವೊಮ್ಮೆ ಶಬ್ದಗಳಿಗಿಂತ ಸಶಕ್ತ ವಾಗಿ ಮಾತನಾಡುತ್ತವೆ.
    ಮೌನ ಕ್ರೋಧವಾಗಿರಬಹುದು,ತಿರಸ್ಕಾರವಾಗಿರಬಹುದು, ಸಮ್ಮತಿಯಾಗಿರಬಹುದು,ಪಲಾಯನವಾದವಾಗಿರಬಹುದು,ಇಬ್ಬರು ಮೂರ್ಖರೆಂದು ಸಿದ್ಧಪಡಿಸದೆ ಇರುವುದಕ್ಕೆ ಇರಬಹುದು.ಇವೆಲ್ಲವನ್ನು ಮೌನ ಧರಿಸಿದವರೊಡನೆ ಮಾತನಾಡುವಾಗ,ನೋಡುವಾಗ ಸ್ವಲ್ಪು ಮಟ್ಟಿಗೆ ಊಹಿಸಬಹುದು.
    ಮೌನದ ಮೆಟ್ಟಲುಗಳನ್ನು ಹೇಳುತ್ತ ತುರೀಯಾಸ್ಥಿತಿಯ ಬಗ್ಗೆ ಹೇಳಿದಿರಿ.ಈಗ ಅದು ಶುಭ್ರ ಹಾಳೆ.ಆ ಸ್ಥಿತಿಯನ್ನರಿಯದವರು ಏನೂ ಬರೆದುಕೊಳ್ಳಬಹುದು.ಶಮೀಕರು ಈ ಸ್ಥಿತಿಯಲ್ಲಿದ್ದಾಗಲೇ ಅಲ್ಲವೇ ಪರೀಕ್ಷಿತ ರಾಜ ಅವರ ಮೌನವನ್ನು ತನಗಾದ ಅಪಮಾನವೆಂದು ಈ ಖಾಲಿ ಹಾಳೆಯ ಮೇಲೆ ಬರೆದುಕೊಂಡು,ತಿಳಿದು ,ತಾನು ಮಾಡಿದ ಕೃತ್ಯಕ್ಕೆ ಶೃಂಗಿಯ ಪಾಪಕ್ಕೆ ಗುರಿಯಾದದ್ದು.
    ಮೌನದ ವಿವಿಧ ರೂಪಗಳನ್ನು ಚಿತ್ರಿಸಲು ನೀವು ಬೇಂದ್ರೆ,ಅರವಿಂದರ,ವಿಕೃ ಗೋಕಾಕರ,ಪುತಿನರವರ ಕೃತಿಗಳನ್ನಾಯ್ದು ಮಾಡಿದ ವಿವರಣೆ ಮೌನಕ್ಕೆ ನ್ಯಾಯ ಮಾಡುವುದಲ್ಲದೇ ನಮಗೆ ಆ ಕೃತಿಗಳ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು.
    ಗಾದೆ ಸುಳ್ಳಾಗುವುದಿಲ್ಲ ಎನ್ನುತ್ತಾರೆ. ಆದರೆ ಶ್ರೀದೇವಿ ಕೆರೆಮನೆಯವರ, ಬೇಸರಾಗಿದೆ ಮೌನ ಭಾರವಾಗಿದೆ ಮನ,ಮಾತಿನ ಬೆಳ್ಳಿಗಿಂತ ಮೌನದ ಬಂಗಾರ ಕೊಲ್ಲುತ್ತಿದೆ ಎಂಬ ಸಾಲುಗಳು ,ಮಾತು ಬೆಳ್ಳಿ ಮೌನ ಬಂಗಾರ ಎಂಬುದು ಎಲ್ಲ ಸಂದರ್ಭಗಳಲ್ಲಿ ಅಲ್ಲವೆನಿಸಿದೆ.

    ನಿನ್ನ ಒಂದು ಮಾತು ಬದುಕಿಗೆ ಮರಳುವಂತೆ ಮಾಡುತ್ತಿದೆ ಎಂಬ ಸಾಲುಗಳು ,ಕಲ್ಲಾಗಿದ್ದ ಅಹಲ್ಯೆ ರಾಮನ ಸ್ಪರ್ಶದಿಂದ ಜೀವತಳೆದದ್ದನ್ನು ಜ್ಞಾಪಿಸಿತು

    ಮೌನದ ಬಗ್ಗೆ ಬರೆದ ಈ ಸುಂದರ ಅರ್ಥಗರ್ಭಿತ ಬರಹವನ್ನು ಓದಿತ್ತಿದ್ದಂತೆ ಮೌನ ಇಷ್ಟೊಂದು ಮಾತನಾಡುತ್ತಾ ?ಎಂದು ವಿಸ್ಮಯದಿಂದ ಮೌನವಾದೆ.

Leave a Reply

Back To Top