ಅಂಕಣ ಬರಹ
ಮಕ್ಕಳು ಮಾತ್ರ ಹೀಗಿರಲು ಸಾಧ್ಯ ಅಲ್ಲವಾ..
ಹೆರಿಗೆ ನೋವು ಶುರುವಾಗುವ ಸೂಚನೆಗಳಿದ್ದವು. ಅಂದು ಬೆಳಗ್ಗೆ ಮಗ್ಗಲು ಬದಲಾಯಿಸುವಾಗಲೇ ಎಂಥದೋ ನೋವಿನ ಸಳುಕು ಚುಳ್ ಎನ್ನಲು ಶುರುಮಾಡಿತ್ತು. ನಿಧಾನ ಎದ್ದು ನೆಲಕ್ಕೆ ಕಾಲು ಊರಿದಾಗ ಪಾದಗಳು ನೋಯುತ್ತಿದ್ದವು. ಇನ್ನು ಈ ದೇಹದ ಭಾರ ಹೊರಲಾರೆ ಎನ್ನುವಷ್ಟು ಊದಿಕೊಂಡಿದ್ದ ಪಾದಗಳು ಇಡಲಾರದೆ ಹೆಜ್ಜೆ ಇಡುತ್ತಿದ್ದವು. ಮೆಲ್ಲಗೆ ಹೋಗಿ ಹಲ್ಲುಜ್ಜಿ, ಮುಖ ತೊಳೆದು ಬಂದೆ. ಹೆರಿಗೆ ನೋವು ಶುರುವಾಗಿಯೇ ಬಿಟ್ಟಿತು… ಸಮುದ್ರದ ಅಲೆಯಂತಹ ನೋವದು. ಬಿಟ್ಟು ಬಿಟ್ಟು ಬರುತ್ತಿತ್ತು. ನಾವು ಆಸ್ಪತ್ರೆಗೆ ಹೊರಡಲು ತಯಾರಾದೆವು. ಆದರೆ ಎಷ್ಟು ಹೊತ್ತಾದರೂ ನೋವು ತೀವ್ರವಾಗಲಿಲ್ಲ. ಒಂಥರಾ ಭಯ ಒಂಥರಾ ಗಾಬರಿ… ಸರಿ ಎಂದು ಆಸ್ಪತ್ರೆಗೆ ಹೊರಟೆವು. ಐದು ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಹೋಗುವುದು ಎಂದುಕೊಂಡೆವು. ಆದರೆ ಅವನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವುದಿಲ್ಲ ಎಂದು ಹಟ ಹಿಡಿದ. ಗತ್ಯಂತರವಿಲ್ಲದೆ ಅವನನ್ನೂ ಕರೆದುಕೊಂಡು ಹೊರಟೆವು. ಅವನಿಗೋ ದೊಡ್ಡ ಕುತೂಹಲ. ಅಮ್ಮನ ಹೊಟ್ಟೆಯಿಂದ ಪಾಪು ಹೇಗೆ ಬರುತ್ತದೆ, ಪಾಪು ಹೇಗಿರುತ್ತದೆ ಎಂದು. ಸಾಲದ್ದಕ್ಕೆ ಅವನಿಗೆ ತಮ್ಮ ಬೇಕಾಗಿತ್ತು. ನಿನಗೆ ತಂಗಿ ಬೇಕೋ ತಮ್ಮ ಬೇಕೋ ಅಂತ ಯಾವಾಗ ಕೇಳಿದರೂ ನನಗೆ ತಮ್ಮನೇ ಬೇಕು ಎನ್ನುತ್ತಿದ್ದ. ನಾವೇ ಲ್ಲ ನಗುತ್ತಿದ್ದೆವು. ಆಸ್ಪತ್ರೆಗೆ ಹೋದಾಗ ಹೆಚ್ಚು ಕಡಿಮೆ ಸಂಜೆಯಾಗಿತ್ತು. ಹೋಗಿ ಅಡ್ಮಿಟ್ ಆದೆವು. ರಾತ್ರಿ ಹತ್ತಾದರೂ ಹೆರಿಗೆ ಆಗಲಿಲ್ಲ. ಮಗನಿಗೆ ನೀನು ಮಲಗು ಪುಟ್ಟಾ ಬೆಳಗ್ಗೆ ಹೊತ್ತಿಗೆ ಪಾಪು ಬಂದಿರುತ್ತದೆ, ಆಗ ನೋಡುವಿಯಂತೆ ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ಹಟ ಹಿಡಿದು ಕೂತಿದ್ದ. ತಮ್ಮ ಬಂದ ಮೇಲೆಯೇ ಮಲಗುತ್ತೇನೆ ಎಂದು. ನಂತರ ಡಾಕ್ಟರ್ ಬಂದು ಚೆಕಪ್ ಮಾಡಿ ಹೆರಿಗೆ ನಾರ್ಮಲ್ ಆಗುವುದಿಲ್ಲ ಸಿಸೇರಿಯನ್ ಮಾಡಬೇಕು ಎಂದರು. ಸರಿ ಎಲ್ಲ ಸಿದ್ಧವಾಯಿತು. ನನ್ನನ್ನು ಓಟಿ ಗೆ ಕರೆದೊಯ್ಯುತ್ತಿದ್ದರು, ಪಾಪ ಮಗನ ಮುಖ ಇಷ್ಟಾಗಿತ್ತು. ಆ ಕ್ಷಣ ಅವನ ಮುಖ ನೋಡುವಾಗ ಸಧ್ಯ ಎಲ್ಲ ಸುಗಮವಾಗಿ ಆದರೆ ಸಾಕಪ್ಪಾ ಎಂದು ದೇವರಲ್ಲಿ ಬೇಡಿಕೊಳ್ಳಬೇಕೆನಿಸಿತು. ಅಂತೂ ಎಲ್ಲ ಸಸೂತ್ರ ಆಯಿತು. ಆದರೆ ಮಗನ ಆಸೆ ಮಾತ್ರ ಈಡೇರಲಿಲ್ಲ. ತಮ್ಮನ ಬದಲಾಗಿ ತಂಗಿ ಬಂದಳು. ಅನೆಸ್ತೀಶಿಯ ನೀಡಿದ್ದರಿಂದ ದೇಹ ಇನ್ನು ಅದರ ಪ್ರಭಾವದಿಂದ ಹೊರಬಂದಿರಲಿಲ್ಲ. ಅಕ್ಷರಶಃ ಹೆಣದ ರೀತಿಯಲ್ಲಿ ಓಟಿಯಿಂದ ವಾರ್ಡಿಗೆ ಶಿಫ್ಟ್ ಮಾಡಿದರು. ಇದನ್ನೆಲ್ಲ ನೋಡುತ್ತಿದ್ದ ಮಗನಿಗೆ ಎಷ್ಟು ಭಯವಾಯಿತೋ… ಪಾಪ ಕಣ್ಣಲ್ಲಿ ನೀರು ತುಂಬಿತ್ತ. ಬಾರೋ ಇಲ್ಲಿ… ಹತ್ರ ಬಾರೋ… ನೋಡಿಲ್ಲಿ ನಂಗೇನು ಆಗಿಲ್ಲ ಅಂತ ಕರೆದೆ. ಪಾಪ ಪೆಚ್ಚು ಪೆಚ್ಚಾಗಿ ಬಂದು ಕುಳಿತುಕೊಂಡ. ಅವನ ಮೈತಡವಿದೆ, ಮುದ್ದು ಮಾಡಿದೆ. ಆಮೇಲೆ ನೋಡೋ ನಿನ್ನಚತಂಗಿ ಬಂದಿದಾಳೆ ಅಂದೆ. ಎಲ್ಲರೂ ನಗಲು ಶುರು ಮಾಡಿದರು. ಅಯ್ಯೋ ಪಾಪ ಸಿದ್ಧಾಂತನಿಗೆ ತಂಗಿ ಬರಲಿಲ್ಲ…. ಎಂದು ಗೇಲಿ ಮಾಡಿದರು. ಅವನಿಗೂ ನಗು ಬಂತು. ಅವನಿಗೆ ಪಾಪುವನ್ನು ನೋಡುವುದೇ ಸಂಭ್ರಮ ಎನಿಸಿಬಿಟ್ಟಿತ್ತು. ಅವನಿಗಿದ್ದಿದ್ದೆಲ್ಲ ಒಂದೇ ತಂಗಿಯಾದರೆ ನನ್ನವಜೊತೆ ಆಡಲು ಬರುವುದಿಲ್ಲ ತಮ್ಮನಾದರೆ ನನ್ನ ಜೊತೆ ಆಡಲು ಬರುತ್ತಾನೆ ಎಂದು. ಆದರೆ ಹೊಸ ಪಾಪುವುನ ಮುಖ ನೋಡಿದಾಕ್ಷಣ ಅದೆಲ್ಲವೂ ಗಾಳಿಗೆ ತೂರಿ ಹೋಯಿತು. ತಂಗಿಯ ಮುಖ ನೋಡಿಯಾದ ಮೇಲೆಯೇ ಅವ ಮಲಗಿದ್ದು. ಮರುದಿನ ಸರಿ ತಂಗಿ ಬಂದಾಯಿತಲ್ಲ ಮನೆಗೆ ಹೋಗೋಣ ನಡಿಯೋ ಎಂದರೆ ಕೇಳುತ್ತಲೇ ಇಲ್ಲ ನಾನೂ ತಂಗಿಯ ಜೊತೆಯೇ ಇರುತ್ತೇನೆ ಎಂದು ಹಟ ಹಿಡಿದ. ಹಂಗೂ ಹಿಂಗೂ ಮಾಡಿ ಮೂರು ದಿನ ಆಸ್ಪತ್ರೆಯಲ್ಲೇ ಕಳೆದ. ನಾಲ್ಕನೇ ದಿನ ಯಾಮಾರಿಸಿ ಅವನನ್ನು ಮನೆಗೆ ಕಳಿಸಿದ್ದೆವು.
ಈಗಲೂ ಅದನ್ನೆಲ್ಲ ನೆನೆದರೆ ವಿಪರೀತ ನಗು ಬರುತ್ತದೆ. ಈಗಂತೂ ಮಗಳಿಗೆ ಮೂರು ವರ್ಷ. ಇಬ್ಬರೂ ಒಮ್ಮೊಮ್ಮೆ ಪರಮಾಪ್ತ ಗೆಳೆಯರು ಒಮ್ಮೊಮ್ಮೆ ಹಾವು ಮುಂಗಸಿಗಳು. ಒಂದಂತೂ ಅಚ್ಚರಿ ನನಗೆ ಮಕ್ಕಳ ಮುಗ್ಧತೆ ಕುತೂಹಲ ಯಾಪರಿ ಇರುತ್ತದಲ್ಲಾ ಎಂದು.
ಅಂದು ಮನೆಯಲ್ಲಿ ಹಬ್ಬವಿತ್ತು. ಮಗ ಪದೇ ಪದೇ ಕಿತಾಪತಿ ಮಾಡುತ್ತಿದ್ದ. ತಂಟೆ ಮಾಡುತ್ತಾನೆಂದು ಮಗನನ್ನು ಅದು ಮಾಡಬೇಡ ಇದು ಮಾಡಬೇಡ ಅಂತ ಪದೇ ಪದೇ ಅನ್ನುತ್ತಿದ್ದೆವು. ಇದರಿಂದ ಬಹುಶಃ ಅವನಿಗೆ ಬೇಸರವಾಗಿರಬೇಕು. ನಂತರ ಅಲ್ಲಿಂದ ಅವ ಹೊರಟುಹೋದ. ಸುಮಾರು ಹೊತ್ತಾದರೂ ಅವ ಎಲ್ಲೂ ಕಾಣಿಸಲಿಲ್ಲ. ನಮ್ಮದೆಲ್ಲ ಕೆಲಸ ಆದಮೇಲೆ ಎಲ್ಲಿ ಹೋದ ಅಂತ ನೋಡಿದರೆ ಪಕ್ಕದ ಪ್ಯಾಸೇಜಿನಲ್ಲಿ ಇದ್ದಾನೆ! ನೋಡಿದರೆ ತನ್ನ ಯೂನಿಫಾಮ್ ಶೂಗಳನ್ನು ನೀಟಾಗಿ ತೊಳೆದು ಅದಕ್ಕೆ ವಿಭೂತಿ, ಗಂಧ, ಅರಶಿಣ, ಕುಂಕುಮ ಹಚ್ಚಿ ಉದುಕಡ್ಡಿ ಬೆಳಗುತ್ತಿದ್ದಾನೆ! ಯಪ್ಪಾ ಅವತ್ತಿನಷ್ಟು ನಾವೆಲ್ಲ ಎಂದೂ ನಕ್ಕಿರಲಿಲ್ಲ ಕಾಣುತ್ತದೆ. ತನ್ನ ಪಾದುಕೆಯ ಪೂಜೆಯನ್ನು ತಾನೇ ಮಾಡಿಕೊಂಡ ಮಹಾನುಭಾವ ಅವನು….
ಮೊನ್ನೆ ನನ್ನ ಪುಟ್ಟ ಮಗಳು ನಾನೂ ಅಡುಗೆ ಮಾಡ್ತೀನಿ ಅಂತ ಹೇಳಿ ಹಟ ಮಾಡಿ ಕಿಚನ್ ಸೆಟ್ (ಆಟದ ಕಿಚನ್ ಸೆಟ್) ಕೊಡಿಸಿಕೊಂಡು ತಂದುಕೊಂಡಳು. ಮನೆಗೆ ಬಂದು ಅಡುಗೆ ಮಾಡಿದ್ದೇ ಮಾಡಿದ್ದು… ಮರು ದಿನ ತರಕಾರಿ ತೆಗೆದುಕೊಳ್ಳಲಿಕ್ಕೆಂದು ಫ್ರಿಜ್ ತೆಗೆದ ನನಗೆ ಕಂಡದ್ದು ಮಾತ್ರ ಆಶ್ಚರ್ಯ. ಅದ್ಯಾವಾಗಲೋ ಗೊತ್ತಿಲ್ಲ ಮಗಳು ತನ್ನ ಪ್ಲಾಸ್ಟಿಕ್ ತರಕಾರಿಗಳನ್ನು ತನ್ನ ಪುಟ್ಟ ಪ್ಯಾನ್ ಒಂದಕ್ಕೆ ಹಾಕಿ ಫ್ರಿಜ್ಜಿನಲ್ಲಿ ಇಟ್ಟಿದ್ದಳು. ಅವಳ ಪಪ್ಪನನ್ನೂ ಕರೆದು ತೋರಿಸಿದೆ. ಇಬ್ಬರೂ ನಕ್ಕೆವು. ಅವಳ ಮುಗ್ಧತೆ ಮತ್ತು ಜಾಣ್ಮೆಗೆ ಮುದ್ದುಕ್ಕಿ ಬಂತು…
ಮಕ್ಕಳಿಗೆ ಹೇಗೆ ಇವೆಲ್ಲ ಹೊಳೆಯುತ್ತವೆ ಎಂದು ಸದಾ ಆಶ್ಚರ್ಯವಾಗುತ್ತಿರುತ್ತದೆ ನನಗೆ. ಅದರಲ್ಲೂ ಸದಾ ಮಕ್ಕಳ ಜೊತೆಯೇ ಕಾಲ ಕಳೆಯುವ ನಮ್ಮಂಥವರಿಗೆ ಇಂತಹ ಅನುಭವಗಳು ನಿತ್ಯವೂ ಆಗುತ್ತಿರುತ್ತವೆ. ನಾವು ಎಷ್ಟೇ ತಿಳಿದವರಾಗಿದ್ದರೂ ಮಕ್ಕಳ ಮುಗ್ಧತೆಯ ಮುಂದೆ ಸೋತುಬಿಡುತ್ತೇವೆ. ನಮ್ಮ ಗತ್ತು, ಅಹಂಕಾರ, ದೊಡ್ಡತನ…. ಎಲ್ಲವೂ ಮಕ್ಕಳ ಮುಂದೆ ಮಂಡಿಯೂರುತ್ತವೆ. ನಾವು ನಮ್ಮನ್ನು ಕಳೆದುಕೊಂಡುಬಿಡುತ್ತೇವೆ ಅವರ ಮುಂದೆ. ಮಕ್ಕಳು ಮಾತ್ರ ಹೀಗಿರಲು ಸಾಧ್ಯವೇನೋ ಅಲ್ಲವಾ… ಕಲ್ಲುಸಕ್ಕರೆಯಂತಹ ಇಂಥ ಅನುಭವಗಳು ಸದಾ ನಮ್ಮ ಬದುಕಿನ ತಿಜೋರಿಯನ್ನು ತುಂಬಿಕೊಳ್ಳುತ್ತಿರಲಿ ಎನ್ನುವ ಆಸೆಯೊಂದು ಮಾತ್ರ ಸದಾ ಜೀವ ಹಿಡಿದು ಕೂರುತ್ತದೆ…
*************
–ಆಶಾ ಜಗದೀಶ್
ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.