ಕಾವ್ಯಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಮುರಿದ ಗೂಡಿನ ಪಾಡು”


ಹಿತ್ಲ ಬೇವಿನ ನೆರಳಲ್ಲಿ,
ಅವ್ವ ಜೋಗುಳ ಹಾಡಿದ್ಲು;
ಅಪ್ಪನ ಹೆಗಲ ಹತ್ತಿದ ,
ಕೂಸು ಚಂದಿರ ಹಿಡಿದಿತ್ತು.
ಮಂಗನ ಮನಸು ನಮ್ದು ,
ಕೊಂಬೆಗೊಂದು ಮಿನುಗುವ ಹಣ್ಣು;
ದೂರದ ಬೆಟ್ಟ ನುಣ್ಣಗೆ
ಹಿತ್ಲ ಗೂಡಿಗೇ ಬೆನ್ನು!
ಕಾಸಿನ ಹಸಿರಿಗೆ ಕಣ್ಣು,
ಕುರ್ಚಿಯ ನೆರಳಿಗೆ ಮನಸು;
ಪರರ ನಗುವಿಗೆ ಮೈಮರೆತು,
ಎರಡು ಗೂಡುಗಳಿಗೆ ಮಣ್ಣು
ಕಾರ್ಮೋಡ ಮುಚ್ಚಿದ ಮುಗಿಲು
ಮುಸ್ಸಂಜೆ ಮುಸುಕಿದ ಹೊಸ್ತಿಲು
ಇಲ್ಲೊಂದು ಜೋಗುಳ ಮೌನ
ಅಲ್ಲೊಂದು ತೊಟ್ಟಿಲಿಗೆ ನಡುಕ.
ಆಷಾಢದ ಜಡಿಮಳೆಗೆ,
ಎರಡೂ ಕಿಟಕಿಗಳು ತೆರೆದು,
ಇಲ್ಲೊಂದು ತುತ್ತು ತಣ್ಣಗೆ,
ಅಲ್ಲೊಂದು ದಿಂಬಿಗೆ ಉಪ್ಪು.
ಮಾಸ್ತರು ಮನೆ ಬಿಡಿಸೆಂದ್ರು,
ಕೂಸು ಎರಡು ಮನೆ ಬರೆದು;
ನಡುವೆ ತನ್ನ ತಾ ಹುಡುಕಲು,
ಮುರಿಯಿತು ಬಳಪ!
ದಸರಾ ರಜೆಗೆ,
ವಸತಿನಿಲಯದ
ಗೆಳೆಯರೆಲ್ಲ
ಅವರವರ
ಗೂಡು ಸೇರಿದ್ರು;
ಮನೆಯಿದ್ದೂ
ಮಡಿಲಿಲ್ಲದೆ,
ಪುಟ್ಟ ಚಪ್ಪಲಿ
ಕಾಯುತ್ತಿತ್ತು.
ಜಡಿಮಳೆ ನಿಂತ
ನಟ್ಟಿರುಳು,
ಬೇವಿನೆಲೆಯ ಮೇಲೆ
ಬೆಳದಿಂಗಳು;
ಅತ್ತ
ಮಂಗ ತನ್ನ ಮರಿಯ
ತಬ್ಬಿಕೊಂಡಿತು ,
ಇತ್ತ
ಕೂಸಿನ ಕಣ್ಣು
ಕೆರಳಿತು
‘ಅವ್ವಾ, ನಮ್ಮ ಗೂಡೆಲ್ಲಿ?’
ಡಾ. ಹೆಚ್. ನಟರಾಜ್ ಆರ್ಯ




ಡಾ.ಎಚ್.ನಟರಾಜ್ ಆರ್ಯ ಅವರ ಗೂಡಿನ ಪಾಡು ಕವಿತೆ ಬಹಳ ಮೌಲ್ಯವುಳ್ಳ ಸಂದೇಶ ಹೊತ್ತು ತಂದಿದೆ. ಅವರ ಬಹಳಷ್ಟು ಕವಿತೆಗಳನ್ನು ಓದಿರುವೆ. ಕವಿತೆಗಳಲ್ಲೂ ಮನುಷ್ಯ ಸಂವೇದನೆ ಇದೆ. ನನಗೆ ಎನ್.ಕೆ. ಹನುಮಂತಯ್ಯ ಅವರ ನಂತರ ಒಳ್ಳೆಯ ಕವಿತೆಗಳನ್ನು ಬರೆಯುವ ಕವಿ ನಮ್ಮ ಡಾ.ಎಚ್.ನಟರಾಜ ಸರ್ ಅವರು ಎಂಬುದು ಗಮನಾರ್ಹ. ಅವರಿಂದ ಈ ನಾಡು ಹೆಚ್ಚೆಚ್ಚು ಕವಿತೆ ಬಯಸಿದೆ. ಮತ್ತಷ್ಟು ಬರೆಯಲಿ. ಕಾವ್ಯ ಕೃಷಿ ಹೆಚ್ಚಲಿ.
ಗೂಡಿನ ಪಾಡು ಕಾವ್ಯ ಬದುಕಿನ ಸೂಕ್ಷ್ಮ ಭಾವಗಳನ್ನು ಅತ್ಯಂತ ಸುಂದರ ಶಬ್ದಗಳ ಹೆಣಿಕೆಯೊಂದಿಗೆ ಹೃದಯ ಸೀರೆಹಿಡಿಯುವ ಕಾವ್ಯವಿದಾಗಿದೆ.ಧನ್ಯವಾದಗಳು
ಪ್ರೋ. ಡಾ. ಸರಸ್ವತಿ ಕಳಸದ