ಕಾವ್ಯಸಂಗಾತಿ
ಅನುರಾಧ ರಾಜೀವ್
ಗಜಲ್


ವಿಧಿಯ ಬರಹ ಸಹಿಸಿ ನಾಳೆಯ
ಅರಸಿ ಸಾಗುವೆಯಾ
ನಿದಿರೆ ಬಾರದೆ ಹೊರಳಿ ನೋವಲಿ
ನರಳಿ ಬಾಗುವೆಯಾ
ಸಹನೆ ಎನುವ ಮೂಲ ಮಂತ್ರವ
ಜಪಿಸಿ ಬಳಲಿದೆಯಾ
ದೇಹವ ದಂಡಿಸಿ ಮನದ ದುಗುಡ
ಮರೆತು ಹೋಗುವೆಯಾ
ಒಳ್ಳೆಯ ದಿನದ ನಿರೀಕ್ಷೆ ಇರಲಿ
ನಿತ್ಯ ಬಾಳಿನಲಿ
ತಳ್ಳದೆ ಮನುಜ ಆಸರೆ ನೀಡಲು
ನೆನೆದು ಮಾಗುವೆಯಾ
ಸಮಯ ಒಂದೇ ತೆರದಿ ಬಾರದು
ಚಿಂತನೆ ಆಶಾದಾಯಕ
ತಮವ ಕಳೆವ ನೇಸರ ಮೂಡಲು
ಆನಂದದಿ ತೂಗುವೆಯಾ
ಬದುಕು ಬಂದಂತೆ ಸ್ವೀಕಾರ ಭಾವನೆ
ದೃಢತೆ ರಾಧೆಯಲಿ
ಮಧುರ ನೆನಪು ಅಳಿಸಿ ಯಾತನೆ
ಕರಗಿ ಬೀಗುವೆಯಾ
ಅನುರಾಧಾ ರಾಜೀವ್



