ಪುಸ್ತಕ ಸಂಗಾತಿ
ಶಿವಲೀಲಾ ಹುಣಸಗಿ

ಗಿರಿಜಾ ನಿರ್ವಾಣಿ ಹಾಸನ
“ಕರಿ ಮುಗಿಲು“


ಕವಯತ್ರಿಗಿರಿಜಾ ನಿರ್ವಾಣಿಯವರು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು.’ಕರಿಮುಗಿಲು’ ಇವರ ಎರಡನೇ ಕೃತಿಯಾಗಿದೆ.ಗಿರಿಜಾರವರ ಮನಸ್ಸು ಮತ್ತು ಕಾಯಕ ಸದಾ ಚೈತನ್ಯದಿಂದ ಕೂಡಿದ್ದು.ವೃತ್ತಿಗೆ ಸೇರಿದ ಎಲ್ಲ ಶಿಕ್ಷಕರ ಹೃದಯ ಸಕಾರಾತ್ಮಕ ಪ್ರತಿಕ್ರಿಯೆ ನೀಡುವ ಮಾಧ್ಯಮವೆಂದರೆ ತಪ್ಪಾಗದು.ಯಾವಾಗಲೂ ಒಂದಿಲ್ಲೊಂದು ಕ್ರಿಯಾತ್ಮಕ ಹಾಗೂ ಕ್ರಿಯಾಶೀಲ ಗುಣದಿಂದ ಕೂಡಿರುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ ಗಿರಿಜಾರವರು.ಮಕ್ಕಳೊಂದಿಗೆ ಮಕ್ಕಳಾಗಿ ನಲಿಯುವ ಭಾಗ್ಯ ಶಿಕ್ಷಕರಿಗೆ ಭಗವಂತ ನೀಡಿದ ಕೊಡುಗೆಯಿದೆ.ಸಂತೃಪ್ತ ಭಾವ ಮೂಡುತ್ತದೆ.ಅದನ್ನು ಯಥೇಚ್ಛವಾಗಿ ಅನುಭವಿಸುವ ಯೋಗ ಎಲ್ಲರಿಗೂ ಒಲಿದರೆ ಅದರಷ್ಟು ಅದೃಷ್ಟ ಯಾರಿಗುಂಟು,ಯಾರಿಗಿಲ್ಲ..ಕವಿತೆಗಳ ವಿಮರ್ಶೆ ಮಾಡುವಷ್ಟು ಅನುಭವ ನನಗಿಲ್ಲ.ಆದರೆ ಕವಿತೆಗಳನ್ನು ಓದಿ ಆಸ್ವಾಧಿಸುವ ಸಹೃದಯ ನನಗಿದೆ.ಕವಿತೆ ಬರೆಯುವ ಹುಚ್ಚು ಎಲ್ಲರಿಗೂ ದಕ್ಕುವುದಿಲ್ಲ.ದಕ್ಕಿದ್ದೆಲ್ಲವೂ ಕವಿತೆಯಾಗುವುದಿಲ್ಲ.ಓದುಗರ ಮನದಲ್ಲಿ ನೆಲೆ ನಿಲ್ಲುವುದಿಲ್ಲ..ಅದೊಂದು ತಪಸ್ಸು. ಓದು,ಬರಹ,ಅರಿವಿನ ಪಥ ಹುಡುಕ ಹೊರಟವನಿಗೆ ಗಿರಿಜಾರ ಕರಿಮುಗಿಲು ಕೊಂಚ ಆಶಾ ಭಾವ ಹುಟ್ಟು ಹಾಕುವುದರಲ್ಲಿ ಸಂಶಯವಿಲ್ಲ..
ಮುನ್ನುಡಿಯನ್ನು ಹಿರಿಯ ಸಾಹಿತಿಗಳಾದ ಶ್ರೀ ರಂಜಾನ್ ದರ್ಗಾ ಅವರು;”ಯಾವುದೇ ಸೃಜನಶೀಲ ಬರಹಗಾರ ಮೊದಲಿಗೆ ಕವಿಯಾಗಲು ಬಯಸುತ್ತಾನೆ;ಆದರೆ ಬರಬರುತ್ತಾ ಕಾವ್ಯದ ಜೊತೆಗಿನ ಸಂಬಂಧ ಬಹಳ ಕಠಿಣ ಭಾವ ಮೂಡುವುದು”.” ಕಾವ್ಯ ಪ್ರತಿಭೆಯೆಂಬುದು ಬಂದೂಕು ಇದ್ದಂತೆ;ಕವಿಯ ಪ್ರತಿಭೆಯಿಂದ ಮಾತ್ರ. ಶಬ್ದಗುಂಡುಗಳು ತೀವ್ರ ತರವಾಗಿ ಹಾರಿ ಅಜ್ಞಾನ ಎಂಬ ವೈರಿಯನ್ನು ಕೊಲ್ಲಬಲ್ಲವು” ಎಂಬ ಸಾಲುಗಳು ಸಾಕು.ಒಬ್ಬ ಕವಿಗಿರಬೇಕಾದ ತಾಳ್ಮೆ ಕಾಯಕನಿಷ್ಠೆ ಜೊತೆಗೆ ಸಮಾಜದ ಒಳಹರಿವನ್ನು ಗುರುತಿಸಿ ತೀಕ್ಷ್ಣವಾಗಿ ಖಂಡಿಸುವ ಎದೆಗಾರಿಕೆ ಬೆರಳೆಣಿಕೆಯಷ್ಟು ಕವಿಗಳಿಗೆ ಸಾಧ್ಯ.ನಿಷ್ಠುರವಾಗಿ ಎಲ್ಲರಿಂದಲೂ ದೂರಾಗುವ ಮುನ್ಸೂಚನೆ ದಕ್ಕಿ ದೂರಾದ ಉದಾಹರಣೆ ಕೂಡ ಇದೆ.ಹೀಗಾಗಿ ಕಾಲಕ್ಕೆ ತಕ್ಕಂತೆ ಕವಿಗಳು ಕೂಡ ಬದಲಾಗುತ್ತಿದ್ದಾರೆ…ಅಂದರೆ ತಪ್ಪಿಲ್ಲ….ಗಿರಿಜಾರವರು ತಮ್ಮ ಅನುಭವದ ಮೂಸೆಯಲ್ಲಿ ಮಿಂದೆದ್ದ ಜನಪರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸೃಜನಶೀಲ ಬರಹಗಾರ್ತಿ.
“ಕರಿಮುಗಿಲು” ಕವನ ಸಂಕಲನ ಒಟ್ಟು 63 ಕವನಗಳನ್ನು ಹೊಂದಿದೆ. ಪ್ರತಿ ಕವಿ ಮನಸು ಆರಾಧಿಸುವುದು ” ನಿಸ್ವಾರ್ಥ ಪ್ರೀತಿ”ಯನ್ನು ಅದು “ರಾಧಾ ಕೃಷ್ಣ” ಇಂದಿಗೂ ಅಜರಾಮರ.ಎಷ್ಟೋ ಪ್ರೀತಿಗಳು ನನಸಾಗದೇ ಕನಸಾಗಿ ಉಳಿದಿವೆ..ಆದರೆ ಕವಯತ್ರಿಯ ಪ್ರೇಮದಲಿ ಸ್ವತಃ ತಾನೆ ಕೃಷ್ಣನಾಗಿ ರಾಧೆಯನ್ನು ಪಡೆದ ಪ್ರೀತಿ ಮೆಚ್ಚುವಂತಹುದು.
ಕನಸಿನಲ್ಲಿ ಬಂದವಳು ನನಸಾಗಿ ನಿಂತಳು
ಭವ ಬಂಧನಗಳ ಬೆಸೆದು
ಬಾಳೆಂಬ ಪಥದಿ ಒಲವೆಂಬ ಹೂಚಲ್ಲಿ
ಜೀವನವೆಂಬ ಬಂಡಿಯ ಎಳೆದೇವೂ..
– ಕನಸಿನ ರಾಧೆ
ಪ್ರೀತಿಯಂದರೆ ಹಾಗೆಯೇ, ಒಮ್ಮೆ ಹೃದಯದಿ ಬೆರೆತು ನಿಂತಾದ ಮೇಲೆ ಅದು ತನ್ನ ನಶೆಯನ್ನು ಹಂತಹಂತವಾಗಿ ಇಡೀ ಜೀವನದುದ್ದಕ್ಕೂ ಬೆಸುಗೆಯಾಗಿ ನಿಲ್ಲುವಂತೆ ಮಾಡುವುದಾಗಿದೆ.ದಾಂಪತ್ಯ ರಸವತ್ತಾಗಿರಲು ದಂಪತಿಗಳು ವಿರಸದತ್ತ ಸಾಗದೇ ನವರಸದತ್ತ ಒಲವ ಹರಿಸಿದರೆ ಪ್ರೇಮಕ್ಕೊಂದು ಬೆಲೆ..ತನ್ನ ಉಸಿರಾದ ಜೀವಕ್ಕೆ ಕೊಡುವ ಗೌರವ.
ಹೋಗದಿರು ನೆರಳೆ ನೀ ನನ್ನ ಬಿಟ್ಟು
ಬಯಸಿ ಬಂದೆ ಅಪ್ಪುಗೆಯ
ನಿಲ್ಲು ನಿಲ್ಲು ಅಂತರಾಳದ ಬಿಂಬವೆ
ಆಗಸದಿ ತೇಲುತ್ತಿಹ ಮೋಡವೇ
– ಓ ನನ್ನ ಪ್ರಿಯತಮ
ಕವಯತ್ರಿ ಗಿರಿಜಾ ನಿರ್ವಾಣಿಯವರು,ಸಾಧಿಸುವ ಹಾದಿ ಯಾವತ್ತೂ ಹೂಗಳಿಂದ ಕೂಡಿರುವುದೆಂದು ತಿಳಿದರೇ ಅದು ಸಾಧನೆಯ ಮೊದಲ ಅಡತಡೆ..ಕಾರಣ ಸಾಧಿಸುವ ಛಲಗಾರನಿಗೆ ಮಾತ್ರ ಸಾಧನೆಯ ಮಹತ್ವ ಗೊತ್ತು..ಹಠವಿರಬೇಕು ತನ್ನ ಗುರಿಯ ತಾನು ಮುಟ್ಟಲು.ಎಷ್ಟೋ ಹಗೆ ಸಾಧಿಸುವವರ ಮುಂದೆ ಸೋಲದೇ,ಸೋಲನ್ನು ಗೆಲುವಿನ ಮೆಟ್ಟಿಲು ಮಾಡಿಕೊಳ್ಳುವ ಗುಣ ಹೊಂದಬೇಕು…ಸ್ವತಃ ಕ್ರೀಡಾಪಟುವಾದ ಗಿರಿಜಾರವರು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಸಾಧಿಸಬೇಕಾದ ಹಾದಿಯನ್ನು ಸರಳವಾಗಿ ಉದಾ.ಮೂಲಕ ವ್ಯಕ್ತ ಪಡಿಸಿದ್ದಾರೆ.
ಸಾಧಕನಿಗೆ ಛಲವಿರಬೇಕೆ ವಿನಃ
ಅಸೂಯೆ ಇರಬಾರದು
ಏನಾದರೂ ಆಗಲಿ ಎಂತಾದರು
ಆಗಲಿ ಸಾಧಿಸುವ ಅಟ್ಟ ಛಲವ
ಬಿಡಬೇಡವೆಂದ ನಮ್ಮಪ್ಪ ನಿಮ್ಮಪ್ಪ ಬಸಪ್ಪ
– ಸಾಧನೆಯ ಹಾದಿ
ಹೆಣ್ಣು ಮಕ್ಕಳ ಜೀವನ ಕಷ್ಟಕಾರ್ಪಣ್ಯಗಳ ಸಂಗಮ.ವೃದ್ಧಾಪ್ಯದ
ಗೋಳು ಒಂದುತರ.ಅದರಲ್ಲೂ ಮದುವೆಯಾಗಿ ಮಕ್ಕಳಾಗಿದ ಮೇಲೆ ಅನುಭವಿಸುವ ನೋವನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಸಮಾಜದ ಅಂಕುಡೊಂಕಿನ ಭಾವಕ್ಕೆ ಸವಾಲಾಗಿ ಬರೆದಿದ್ದಾರೆ.ಬಂಜೆಯಾದರೂ ಪರವಾಗಿಲ್ಲ,ಮಕ್ಕಳಿದ್ದೂ ಬಂಜೆಯ ಬಾಳು ಕಾಣುವವರಿಗೆ ಇದರಂತ ಸಂಕಷ್ಟ ಬೇರೊಂದಿಲ್ಲ..ಸಮಾಜದಲ್ಲಿ ವೃದ್ದಾಶ್ರಮಗಳು ಹೆಚ್ಚುತ್ತಿರುವ ಬಗ್ಗೆ ಮಕ್ಕಳು ಏಕೆ ಬೇಕು ಎನ್ನುವುದನ್ನು ಮಾರ್ಮಿಕವಾಗಿ ಕವಿತೆಯ ಮೂಲಕ ವ್ಯಕ್ತ ಪಡಿಸಿದ್ದಾರೆ.
ಕಷ್ಟ ಪಟ್ಟು ಕೂಲಿಯ ಮಾಡಿ
ಹೊಟ್ಟೆಗೆ ಬಟ್ಟೆಯ ಕಟ್ಟಿ ತಾವು
ಕಟ್ಟಿದ ಮನೆಯೊಳಗೆ ಜಾಗವಿಲ್ಲ
ಅವರ ಕೂಗು ದೇವರಿಗೆ ಕೇಳಿಸಬೇಕಲ್ಲ..
ಮನೆತುಂಬ ರಂಪಾಟ ಮಾಡಿ
ಮಕ್ಕಳು ಬಂದಾಗ ಕಿವಿ ಚುಚ್ಚುತ್ತಾರ
ನಿಮ್ಮಪ್ಪನ ಹತ್ತಿರ ಮನೆಭಾಗ ಕೇಳಿ
ಒಟ್ಟಿಗೆ ಇರಲು ಆಗೋಲ್ಲ ಅಂತಾರ
– ಬಂಜೆ ಎನ್ನುವ ಪದ ಒಂದೇ ಸಾಕು
ನವಮಾಸ,ಹಣೆಯ ಸಿಂಧೂರ,ತಾಯಿಹಕ್ಕಿ,ಜೀವನವೊಂದು ನಾಟಕ, ಸೂರು,ಜೀವನ ನೀರ ಮೇಲಿನ ಗುಳ್ಳೆ,ಬಯಕೆ ಹೂ ಬಿಡದ ಬಳ್ಳಿನಾನು,
ಎಂಬೆಲ್ಲ ಕವಿತೆಗಳು ಸ್ರ್ರೀ ಪರ ಮತ್ತು ಶೋಷಿತ ಮನಕೆ ಧೈರ್ಯ,ನೈಜತೆಯನ್ನು ಸಾರುವ ಮತ್ತು ಜೀವನದ ವಿವಿಧ ಮಜಲುಗಳನ್ನು ಎತ್ತಿಹಿಡಿಯುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.
ಕವನ ಸಂಕಲನದ ಶೀರ್ಷಿಕೆ ಕವಿತೆ “ಕರಿಮುಗಿಲು”
ಮರವು ಬಾಗಿ ಗಿಡವು ನೆಲವನ್ನು ಕಚ್ಚಿದೆ
ಬಾರಿ ಬಿರುಗಾಳಿ ಬೀಸಿ ಮೋಡ ಮಳೆ ಸುರಿಸಿದೆ
ಸುರಿವ ಮಳೆಯ ಸದ್ದಿಗೆ
ಮಗುವು ಮಲಗದೆ ಎದ್ದಿದೆ
ಪಕ್ಷಿಗಳ ಕಲರವು ಮುಗಿಲು ಮುಟ್ಟಿದೆ
ರೆಕ್ಕೆ ಬಡಿದು ಸದ್ದು ಮಾಡದೆ
ಮುದುಡಿ ಎಲೆಗಳ ಮರೆಯಲಿ ಮಲಗಿವೆ
-ಕರಿಮುಗಿಲು
ರೈತನ ಮೊಗದಲ್ಲಿ ಜೀವಕಳೆ ಬರಬೇಕು ಎಂದರೆ,ಇಳೆಗೆ ವರುಣ ತಂಪೆರೆಯಬೇಕು..ಹಚ್ಚ ಹಸಿರು ಜೀವಜಗತ್ತಿನ ಉಸಿರೆಂಬುದನ್ನು ಸಾರಿ ಸಾರಿ ಹೇಳಬೇಕು..ಅಂದಾಗ ಮಾತ್ರ ಧರಣಿ ಹರಿಣಿಯಂತೆ ಕುಣಿದು ಕುಪ್ಪಳಿಸಲು ಸಾಧ್ಯ.ಕರಿಮುಗಿಲು ಚೈತನ್ಯವನ್ನು ಹಿಡಿದಿಟ್ಟುಕೊಂಡ ಜೀವಸೆಲೆ…ಇದನ್ನು ಆರಾಧಿಸುವ ಮಣ್ಣಿನ ಮಕ್ಕಳು ಬಲ್ಲರು.ಅನ್ನದಾತ ನೀಡುವ ಬೆಳೆ ಅಮೃತಕ್ಕೆ ಸಮಾನ..ಕವಯತ್ರಿ ಜಗತ್ತಿನ ಜೀವಾಳ ಸೂರ್ಯನನ್ನು ಐಶ್ವರ್ಯದ ಸಂಕೇತವೆಂಬಂತೆ ಭಾವಿಸಿದ್ದು ಪ್ರಸ್ತುತ..
ಉಷೆಯ ಕಿರಣ,ಶ್ರಾವಣ ಮಾಸದ ಜಡಿಮಳೆ,ತಾಯಿಮಡಿಲು, ಬೇಸರ,ಚಿಗುರೊಡೆದ ಹೊಂಗೆಮರ,ಇಳೆ ಮಳೆ..ಹೀಗೆ ಪ್ರಕೃತಿಯನ್ನು ವಿಧ ವಿಧವಾಗಿ ವರ್ಗೀಕರಿಸಿ ತಮ್ಮೊಳಗಿನ ಭಾವವನ್ನು ಕವಿತೆಯಲ್ಲಿ ಪ್ರತಿನಿಧಿಸಿದ್ದಾರೆ.
ಒಟ್ಟಾರೆ ಹೇಳುವುದಾದರೆ,, “ಕರಿಮುಗಿಲು” ಕವನಸಂಕಲನ ತನ್ನದೇ ಆದಂತಹ ವಿವಿಧ ಮಜಲುಗಳನ್ನು ಹೊತ್ತು ಕವಯತ್ರಿಯ ಮನದಂಗಳದಲ್ಲಿ ಅರಳಿರುವ ಹತ್ತಾರೂ ಭಾವದ ಹೂವುಗಳಾಗಿವೆ.ದೇಶ ಸೇವೆಯೆಂದ ಹಿಡಿದು ಮನುಷ್ಯನ ಸ್ವಾರ್ಥಕ್ಕೆ ಬಲಿಯಾದ ಎಲ್ಲ ವಾಸ್ತವತೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.ಅವರ ಅಕ್ಷರ ಪ್ರೀತಿ ಕನ್ನಡ ಸಾಹಿತ್ಯ ಕಣಜಕ್ಕೆ ಹೊಸ ಆಯಾಮಗಳಿಂದ ತುಂಬುವ ಶಕ್ತಿ ನೀಡಲೆಂದು ಹಾರೈಸುತ್ತೇನೆ.
ಶಿವಲೀಲಾ ಹುಣಸಗಿ ಯಲ್ಲಾಪುರ.




