ಕಾವ್ಯ ಸಂಗಾತಿ
ಗೊರೂರು ಅನಂತರಾಜು

“ನೂರು ಸಿನಿಮಾ ಕನಸು ಹೊತ್ತು ಬಂದೆ,
ರಂಗನಟನಾದೆ” ರಮೇಶ್ ಸುರ್ವೆ


ನೂರು ಸಿನಿಮಾ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಆದರೆ ಮಾಡಲು ಸಾಧ್ಯವಾಗಿದ್ದು ಒಂದೆ ಸಿನಿಮಾ ಅದು ಮಂದಾಕಿನಿ ಎಂದರು ರಮೇಶ್ ಸುರ್ವೆ. ಕಥೆ, ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲಾ ನನ್ನದೆ. ಸಿನಿಮಾ ನೋಡಿದವರು ಒಂದು ಸಾವಿರ. ಚಿತ್ರದಲ್ಲಿ ಮನರಂಜನೆ ಇತ್ತು. ಅದೃಷ್ಟ ಕೈ ಕೊಟ್ಟಿತ್ತು. ಸಾಮಾಜಿಕ ಜಾಲ ತಾಣದಲ್ಲಿ ನೋಡಿದವರು ಬಹಳ ಇರಬಹುದು. ಬಾನಿಗೆ ಭಾಸ್ಕರ್ ಚೆಂದ..ಎಂಬ ನನ್ನ ಗೀತೆಗೆ ೨೦೦೮ರಲ್ಲಿ ಹಿನ್ನೆಲೆ ಗಾಯನಕ್ಕೆ ನಂದಿತಾ ಅವರು ಪ್ರಶಸ್ತಿ ಪಡೆದರು.. ಎಂದು ಸುರ್ವೆ ಸಮಾಧಾನಗೊಂಡರು. ಇವರು ನನಗೆ ಹಲವು ವರ್ಷಗಳಿಂದ ಪರಿಚಿತರು. ಸುರ್ವೆ ಪತ್ರಿಕೆ. ಇಂಜಿನಿಯರ್ ಡೈರಿ ಎರಡೂ ಪತ್ರಿಕೆಗಳ ಸಂಪಾದಕರು. ಸಿನಿಮಾ ರಂಗ ಇವರ ಕೈ ಹಿಡಿಯಲ್ಲಿಲ್ಲ. ಆದರೆ ಬರವಣಿಗೆ ಕೈ ಬಿಡಲಿಲ್ಲ.
ನಾನು ಜನಿಸಿದ್ದು ಇಟಗಿಯಲ್ಲಿ ದಿ. ೫.೫.೧೯೫೮ರಂದು. ಇಟಗಿ ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿಗೆ ಸೇರಿದ್ದು ಮಹಾದೇವ ದೇವಸ್ಥಾನದಿಂದ ಇತಿಹಾಸ ಪ್ರಸಿದ್ಧವಾಗಿದೆ. ನಾನು ಓದಿದ್ದು ಪಿಯುಸಿವರೆಗೆ. ನನ್ನ ಮೊದಲ ಕವಿತೆ ಮೊರಾರ್ಜಿ ಸ್ವಾಗತ ಗೀತೆ. ಬರೆದು ವಾಚಿಸಿದ್ದೆ. ದಿನಕರ ದೇಸಾಯಿ ಅವರ ಚುಟುಕು ನನಗೆ ಇಷ್ಟ. ಮೊದಲಿಗೆ ನನ್ನ ಕವಿತೆಗಳು ದುಡಿಮೆ, ವಾಸವಿ, ವಿಶ್ವ ಪರ್ಯಟನೆ, ವಿನೋದವಾಣಿ ಪತ್ರಿಕೆಗಳಲ್ಲಿ ಬೆಳಕು ಕಂಡವು. ನನ್ನ ತಂದೆ ಮಾರುತಿರಾವ್ ಸುರ್ವೆ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರು. ಅಜ್ಜ ಗೋವಿಂದರಾವ್ ಸುರ್ವೆ ಕರಣಿಕರು. ಕರಾರು ಪತ್ರ ಆಸ್ತಿ ಪತ್ರ ಬರೆಯುವ ಪರಿಣಿತರು. ಚಿಕ್ಕಪ್ಪ ಕೇಶವರಾವ್ ಭಜನಾ ಕಲಾವಿದರು. ಮಾವ ವಾಸುದೇವರಾವ್ ಬಯಲಾಟದಲ್ಲಿ ಆಂಜನೇಯ ಪಾತ್ರ ಮಾಡಿದ್ದರು. ಇವರೆಲ್ಲಾ ಪ್ರಭಾವ ನನ್ನ ಮೇಲಿತ್ತು. ಪ್ರಾಚಾರ್ಯ ಸೂರ್ಯನಾರಾಯಣರಾವ್ ಪ್ರೋತ್ಸಾಹದಿಂದ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕಾಲಿಟ್ಟೆ. ೧೦ ನಿಮಿಷದ ಭೀಮ ಏಕಪಾತ್ರಾಭಿನಯದಲ್ಲಿ ಗದೆ ಎತ್ತಿ ಆರ್ಭಟಿಸಿದೆ. ಇವೇ ೮೫ ಪ್ರದರ್ಶನ ಆಗಿವೆ. ಸೇತು ಮಾದವರಾವ್ ಹಂಜಕ್ಕಿ ಅವರ ಮಾರ್ಗದರ್ಶನದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೋಣಾಚಾರ್ಯ ಪಾತ್ರ ನಿರ್ವಹಿಸಿದಾಗ ನನಗೆ ವಯಸ್ಸು ೧೮.

ನನಗೆ ಮೊದಲು ಗುಬ್ಬಿ ಕಂಪನಿ ಜೊತೆ ಒಂದು ವರ್ಷದ ಗೆಳತನವಿತ್ತು. ಚಿತ್ರನಟಿ ಶೃತಿ ಅವರ ತಾಯಿ ರಾಧಾ ರುಕ್ಮಿಣಿ ಲವಕುಶ ಪಾತ್ರ ಮಾಡುತ್ತಿದ್ದರು. ನನ್ನ ರಂಗಾಸಕ್ತಿ ಗಮನಿಸಿ ವೀರಣ್ಣನವರು ನಾಟಕ ನೋಡಲು ಅವರ ಕ್ಯಾಂಟಿನ್ನಲ್ಲಿ ಊಟ ತಿಂಡಿ ನೀಡಿದರು. ಇದರಿಂದ ನನ್ನ ರಂಗಾಸಕ್ತಿ ಹೆಚ್ಚಿತು. ಕುಕನೂರು ರಹಮಾನರ ಕಂಪನಿ, ಮಹಾಂತೇಶ ಶಾಸ್ತ್ರಿಗಳ ಕಂಪನಿ, ಹಾರಾಪೂರ ರಾಮರಾವ್ ದೇಸಾಯಿ ಕಂಪನಿ, ಬನಶಂಕರಿ ನಾಟ್ಯ ಸಂಘ, ಹುಮ್ನಾಬಾದ್ ಕಂಪನಿಗಳ ಸಹವಾಸ. ಇಲ್ಲೆಲ್ಲಾ ಏಕದೃಶ್ಯ ಪಾತ್ರಕ್ಕೆ ಮಾತ್ರ ಸೀಮಿತ. ೧೯೭೭ರಲ್ಲಿ ಬೆಂಗಳೂರಿಗೆ ಬಂದೆ. ಆದರ್ಶ ಫಿಲಂ ಇನ್ಸ್ಟ್ಯೂಟ್ ಸೇರಿದೆ. ಬಿ.ವಿ.ಕಾರಂತರು, ಗಿರೀಶ್ ಕಾಸರವಳ್ಳಿ ಪ್ರಾಚಾರ್ಯರು. ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ನಾಗಾಭರಣ, ಟಿ.ಎಸ್.ರಂಗ, ಜಿ.ವಿ.ಅಯ್ಯರ್, ಸುಂದರರಾಜ್, ಆರ್.ಟಿ.ರಮಾ, ರಾಜನ್ ನಾಗೇಂದ್ರ ಮುಂತಾದ ದಿಗ್ಗಜರ ಪಾಠ ಮತ್ತು ಒಡನಾಟ ದೊರಕಿತು.

೧೯೭೮ರಲ್ಲಿ ಬೆಂಗಾಲಿ ನಾಟಕ ಕನ್ನಡಿಕರಿಸಿ ಬರೆದ ಪರಮೇಶಿ ಪಂಗನಾಮ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗ ಕಂಡಿತು. ಹಾಸ್ಯನಟ ವೈಜನಾಥ ಬಿರಾದಾರ ನನ್ನೊಂದಿಗೆ ನಟಿಸಿದ್ದರು. ಇದು ೨೦ ಪ್ರಯೋಗ ಕಂಡಿದೆ. ನನ್ನ ೨ನೇ ನಾಟಕ ಕುಟುಂಬದಲ್ಲಿ ಕುರುಕ್ಷೇತ್ರ. ನನ್ನೊಟ್ಟಿಗೆ ನಟಿಸಿದವರು ಮೈಸೂರು ರಮಾನಂದ, ವೈಜನಾಥ ಬಿರಾದರ, ಜಯಶ್ರೀ. ಜಲೀಲನ ಜಟಕಾ, ಕಿತಾಪತಿ ಕೃಷ್ಣಯ್ಯ ನನ್ನ ಇನ್ನೆರೆಡು ನಾಟಕಗಳು. ಹಾಸ್ಯವೇ ಈ ನಾಟಕಗಳ ಜೀವಾಳ. ೩೦ ನಿಮಿಷಗಳ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಏಕಪಾತ್ರಾಭಿನಯ ಸ್ತ್ರಿಪ್ಟ್ ಬರೆದು ಅಭಿನಯಿಸಿರುವೆ. ಛತ್ರಪತಿ ಶಿವಾಜಿ, ಕೆಂಪೇಗೌಡ ಮೊದಲಾಗಿ ವಿವಿಧ ಪಾತ್ರಗಳ ವೇಷ ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪೋಟೋಗಳು ನನ್ನ ಆಲ್ಬಂನಲ್ಲಿವೆ. ಇದು ಸುರ್ವೆ ಅವರ ನಾಟಕ ಸಿನಿಮಾ ರಂಗದ ಕಿರುನೋಟ. ಇನ್ನೂ ಪತ್ರಿಕೆ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಇವರ ಸಾಧನೆ ಬಹಳಷ್ಟಿದೆ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.




