ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಈ ಪ್ರೇಮದಲ್ಲಿ
ಒಂದಲ್ಲ ಒಂದು ದಿನ
ನಾವು ಮತ್ತೆ ಎದುರುಗೊಳ್ಳುತ್ತೇವೆ
ಎಂಬ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ..!

ಅವಳು ಮತ್ತೆ ಎದುರುಗೊಂಡಳು..!
ಆಗಸದ ಕಾಮನಬಿಲ್ಲಿನ ಹಾಗೆ
ಕಣ್ಣು ಕೋರೈಸುವಂತೆ
ಮುಂದೆಯೇ ನಿಂತಿದ್ದಳು..!

ನಮ್ಮ ನಡುವೆ
ಈ ಹಿಂದೆ ಏನು ನಡೆದೇ ಇಲ್ಲ
ಎನ್ನುವ ನಾಜೂಕಿನಲ್ಲಿ
ಲವಲವಿಕೆಯ ಮಾತಿನಲ್ಲಿ
ಕುಶಲೋಪರಿ
ವಿಚಾರಿಸಿಕೊಂಡಳು..!

ಕೊಂಚವೂ ವಿಷಾದಿಸದೆ
ಬೇಸರಿಸದೆ ದುಃಖಿಸದೆ
ಮೊದಲ ಭೇಟಿಯಲ್ಲಿ ಸಿಕ್ಕಂತೆ
ಚಹಾವೋ?ಕಾಫಿಯೋ?
ಹೀಗೆ ಏನಾದರೊಂದು ನೆವದಲ್ಲಿ
ಮಾತನ್ನೇ ಮುತ್ತುಗಳಾಗಿ ಪೋಣಿಸಿ
ಸನಿಹದಲ್ಲಿಯೇ ಕೂತು ಬಿಟ್ಟಳು..!

ನಾನೋ
ಮುಗಿಲು ಹರಿಯುವಷ್ಟು ದುಃಖ
ಕಡಲು ಉಕ್ಕುವಷ್ಟು ಕಣ್ಣೀರು
ಎದೆಬಿರಿಯುವ ಕನಸುಗಳ
ಮಹಾಭೂಕಂಪವೆಂಬ
ಪ್ರೇಮವಿಲಾಪದಲ್ಲಿ ಒದ್ದಾಡುತ್ತಿದ್ದೆ..!

ಆದರವಳು
ಕೊಂಚ ಕೂಡ ಕಲ್ಮಶವಿರದ
ಹಾಲಿನಂತಹ ಹುಡುಗಿ
ಬದುಕನ್ನು
ಎಷ್ಟು ಸಲೀಸಾಗಿ ಸ್ವೀಕರಿಸಿದ್ದಳೆಂದರೆ
ಒಂದು ಕೈಯಲ್ಲಿ ಮಗು
ಮತ್ತವಳ ಅಸಹಾಯಕ ನಗು
ಮಾತ್ರವೇ ಜೀವಂತವಾಗಿ
ಉಳಿದುಕೊಂಡಿದ್ದವು..!


About The Author

Leave a Reply

You cannot copy content of this page

Scroll to Top