ಕಥಾ ಸಂಗಾತಿ
ಶ್ರೀದೇವಿ. ಮ. ಗುಮ್ಮಗೋಳ
“ಕರ್ಮದ ಫಲ”


ಅಂದು ನಾನು ಮದುವೆಯಾದ ಹೊಸ ವರುಷ. ಮಂಗಳಗೌರಿ ವೃತ ಇಟ್ಟಕೊಂಡಿದ್ದೆ. ಪೂಜಾ ಸಾಮಗ್ರಿಗಳನ್ನು ಸಜ್ಜು ಮಾಡಿದೆ. ಟೇಬಲ್ ಮೇಲೆ ವಸ್ತ್ರ ಹಾಸ ಬೇಕಾಗಿತ್ತು. ದೇವರನ್ನು ಕೂಡಿಸುವಾಗ ಕೆಳಗೆ ಕೆಂಪ ವಸ್ತ್ರ ಹಾಕಬೇಕಂತ ನಮ್ಮಜ್ಜಿ ಹೇಳತಿದ್ಲು. ತಕ್ಷಣ ನನಗ ನನ್ನಜ್ಜಿ ಸಾಯುವ ಮುಂಚೆ ಕೊಟ್ಟ ಆ ಕೆಂಪು ರೇಷ್ಮೆ ವಸ್ತ್ರ ಹೊರಗ ತಗದೆ. ಅದರ ಮೇಲೆ ದಾರದಿಂದ ಹೊಲೆದ ಹಳದಿ ಬಣ್ಣದ ಕಮಲದ ಚಿತ್ತಾರ ಸುಂದರವಾಗಿತ್ತು. ಅದರ ಮೇಲೆ ಹಾಗೆ ಕೈಯಾಡಿಸಿದೆ. ನನ್ನಜ್ಜಿಯ ನೆನಪು ಬಂತು. ಅದರೊಳಗಿಂದ ನನ್ನಜ್ಜಿ “ಸೀತವ್ವ ನಿನ್ನ ಸಂಸಾರ ಚಂದ ಇರಲಿ. ನಿನ್ನ ಮದುವಿ ನೋಡು ಭಾಗ್ಯ ನನಗ ಬರಲಿಲ್ಲ. ನಾನು ಇಲ್ಲದಿದ್ದರೂ ಈ ವಸ್ತ್ರದಾಗ ನನ್ನ ಜೀವ ಐತಿ” ಸಣ್ಣಗ ಪಕ್ಕದಲ್ಲಿ ನಿಂತು ಹೇಳದಂಗಾತು. ರೇಷ್ಮೆಯ ನೂಲಿನ ಎಳೆಗಳನ್ನು ದಿಟ್ಟಿಸತೊಡಗಿದೆ. ಆ ಎಳೆಗಳು ನನ್ನ ಹಿಂದಿನ ನೆನಪುಗಳನ್ನು ಎಳೆದು ಎಳೆದು ತಂದು ಕಣ್ಮುಂದೆ ನಿಲ್ಲಿಸಿತು. ನನ್ನ ಮನ ಮದುವೆ ಮುಂಚಿನ ದಿನಗಳತ್ತ ಹೊರಳಿತು.
******************
ಅಮ್ಮ ಅಪ್ಪನಿಗೆ ಹೇಳುತ್ತಿದ್ದಳು “ರೀ… ಅತ್ತಿಯಾರಿಗೆ ಇವತ್ತ… ಊಟ ಕೊಡಾಕ ಹೋದಾಗ ಕಣ್ಣೀರು ಹಾಕ್ತಿದ್ದರು. ನಾನ ನಿನಗ… ಎಷ್ಟ ಕಷ್ಟ ಕೊಟ್ಟನಿ. ಜಗಳದೊಳಗ ಬೈ ಬಾರದನೆಲ್ಲಾ ಬೈದ್ನಿ… ಅನಬಾರದೆಲ್ಲಾ ಅಂದ್ನಿ…. ಆದರೂ ನೀ ಎನು ಮನಸಗ ಹಚ್ಚಗೊದ ನನ್ನ ಚಾಕರಿ ಮಾಡಿದಿ…. ನಾನು ಇನ್ನ ಬಾಳ ದಿವಸ ಇರುದಿಲ್ಲಾ ಅನಸಾಕ್ಕತ್ತೈತಿ ಅಂತ ಅತ್ತಿಯವರು ಹೇಳಿ ಬಾಳ ನೊಂದಕೊಂಡರು.”
ಅಪ್ಪ “ಹೌದು ನನಗೂ… ಮನಸಿಗೆ ಬಾಳ ದುಃಖ ಆಗಕ್ಕತ್ತೈತಿ… ಅಪ್ಪಿಲ್ಲದ ನನ್ನನ್ನ ಒಬ್ಬಕೀನ ಸಾಕಿ ಬೆಳಿಸಿ… ಈ ಮಟ್ಟಕ ತಂದಾಳು. ಬಾಳ ಕಷ್ಟ ಪಟ್ಟಾಳು ಮಗಳ ಮದ್ವಿ ನೋಡಿಲಿ ಅಂತ… ಮನಸ ಬಯಸಾಕ್ಕತ್ತೈತಿ ಆದರ ದೇವರ ಇಚ್ಛೆ ಏನೈತೊ ಏನೋ” ಎಂದು ಹೇಳಿ ಅಪ್ಪ ಆಫೀಸಿಗೆ ಹೊರಟು ನಿಂತರು. ನಾನು ಹಾಲ್ ನಲ್ಲಿ ಕುಳಿತು ಇದನ್ನೆಲ್ಲಾ ಕೇಳತಿದ್ದವಳಿಗೆ ನನ್ನಜ್ಜಿಯ ಬಗ್ಗೆ ಬಹಳ ಬೇಸರವೆನಿಸಿತು.
ನನ್ನಜ್ಜಿಗೆ ಈಗ ತೊಂಬತ್ತು ವಯಸ್ಸು. ಹಾಸಗಿ ಹಿಡಿದು ಒಂದ ತಿಂಗಳಾಯಿತು. ಅಪ್ಪ ಇನ್ನೂ ಆರೇಳು ವರ್ಷದಾಗ ಇದ್ದಾಗನ ಅಜ್ಜ ತೀರಿಕೊಂಡನಂತೆ. ನಮ್ಮಜ್ಜಿ ಅಪ್ಪನ್ನ ಬೇರಯವರ ಮನೆ ಕಸ ಮುಸರೆ ತಿಕ್ಕಿ ಸಾಲಸೊಲ ಮಾಡಿ ಚೆನ್ನಾಗಿ ಓದಿಸಿದ್ದರಿಂದ ಅಪ್ಪನಿಗೊಂದು ಸರಕಾರಿ ಗುಮಾಸ್ತನಾಗುವ ಬಾಗ್ಯ ಸಿಕ್ಕಿತು. ನಮ್ಮಪ್ಪನಿಗೆ ನಾನೊಬ್ಬಳೆ ಮಗಳು ಡಿಗ್ರಿ ಓದ್ತಾ ಇದ್ದೆ. ಅಜ್ಜಿ ನನಗ ಸಣ್ಣವಳಿದ್ದಾಗ ತನ್ನ ಹತ್ತಿರ ಇರುವ ಬಿಡಿಗಾಸುಗಳಿಂದ ಊರೊಳಗ ಮಾರಲಿಕ್ಕ ಬ್ಯಾಡರು ತಂದಂತಹ ಕವಳಿ ಹಣ್ಣು, ನೀರಲ ಹಣ್ಣು, ಪೇರಲ ಹಣ್ಣು ಕೊಡಸುತ್ತಿದ್ದಳು. ನಿತ್ಯವು ಹತ್ತಿರದ ಶಿವನ ಗುಡಿಗೆ ಕೈ ಹಿಡಿದು ಕರೆದು ಕೊಂಡು ಹೋಗವಳು. ದೇವರ ಬಗ್ಗೆ ಭಕ್ತಿ ಭಾವ ನನ್ನೊಳಗ ಅದ ಅಂದರ ಅದಕ್ಕ ಅಜ್ಜಿನ ಕಾರಣ. ಅವಳ ಪೂಜೆಯಲ್ಲಿ ನಾನು ನೆರವಾಗುತ್ತಿದ್ದೆ. ಪೂಜೆಯ ಪರಿಪಾಠ ಹಾಕಿದವಳು ಅವಳು.
ಅಜ್ಜಿ ಹಾಸಗಿ ಹಿಡದ ಮ್ಯಾಲ ಅವ್ವ ಅವಳ ಹೊತ್ತ ಹೊತ್ತಗೆ ಸರಿಯಾಗಿ ತಿಂಡಿ ಊಟ ಕೊಟ್ಟು ಉಪಚರಿಸುತ್ತಿದ್ದಳು. ಅವ್ವನ ಮನಸ್ಸು ಹೂವಿನಂತದು ಅಂದಕೊಂಡೆ. ಅಜ್ಜಿ ಅತ್ತಿ ಅನ್ನುವ ಅಧಿಕಾರದಲ್ಲಿ ನಮ್ಮವ್ವಗ ಬಾಯಿಗೆ ಬಂದಂಗ ಬೈದುದ್ದುಂಟು ಆದರ ಮನಸ್ಸು ಬೆಣ್ಣಯಂತದು. ಅಮ್ಮ ಅದನ್ನೆಲ್ಲಾ ಹಚ್ಚಕೊದ ಚಾಕರಿ ಮಾಡುತ್ತಿರುವದು ಆಶ್ಚರ್ಯ ಆಗಿತ್ತು.
ಈಗ ಕೆಲದಿನಗಳಿಂದ ಅಜ್ಜಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಕಿವಿಯು ಮಂದವಾಗಿದ್ದವು. ಒಂದ ದಿನಾ ನಾನು ಕಾಲೇಜನಿಂದ ಮನಿಗೆ ಬಂದಾಗ ಅಮ್ಮ “ಅಜ್ಜಿ ನಿನ್ನನ್ನ ಬಾಳ ಕೇಳಾಕತಿದ್ಲು. ಸೀತವ್ವ ಬಂದ ಕೂಡಲೇ ನನ್ನ ಹತ್ತರ ಕಳಿಸು ಅಂದ್ಲು. ಇನ್ನೇನು ಬಾಳ ದಿನಾ ಬದಕುದಲ್ಲಾ ಅಂತ ಅನಸ್ತದ. ಎನರ ಬಂಗಾರ ಬೆಳ್ಳಿ ದುಡ್ಡು ಕೂಡಿಟ್ಟದ್ದರ ಕೊಡತಾಳ ಹೋಗು”
ನನಗ ಅಮ್ಮನ ಮಾತು ಕೇಳಿ ಆಶ್ಚರ್ಯ ತಂತು. ಹಂಗಾದರ ಅಮ್ಮಾ ಇದ ಆಸೆಕ ಅಜ್ಜಿ ಚಾಕರಿ ಮಾಡಕ್ಕತ್ತಾಳು ಅನಸ್ತು. “ಹೌದಾ ಆತು” ಎಂದು ಕೈ ಕಾಲು ಮುಖ ತೊಳೆದು ಅಜ್ಜಿಯ ಹತ್ತಿರ ಹೋಗಿ ಕುಳಿತೆ.
“ಎನಜ್ಜಿ ನನ್ನ ಕೇಳ್ತಾ.. ಇದ್ದಂತಲ್ಲ ಯಾಕ….” ಅಂದ್ನಿ.
ಅವಳು ತನ್ನತ್ತರ ಇರುವ ಚೀಲ ದೊಳಗಿಂದ ಮಡಚಿದ ಒಂದು ಕೆಂಪು ರೇಶ್ಮೆ ವಸ್ತ್ರ ತಗೆದು “ನೋಡ…. ಸೀ….ತವ್ವ ನನ್ನ ಹತ್ತರ ನಿನಗ….. ಅಂತ… ಕೊ…..ಕೊ….ಡಾಕ ಯಾವ ಬೆಳ್ಳಿ ಬಂಗಾರ…. ಒಂದು ಇಲ್ಲ. ಇರೊದು… ಇದೊಂದು ನನ್ನವ್ವ ಕೊಟ್ಟ ವಸ್ತ್ರ. ಇದನ್ನ ಇಟಕೊ….. ಪಾ..ಪ ನಿಮ್ಮವ್ವ ಬಾಳ ಚಾಕರಿ ಮಾಡಿದಳು ಅವಳಿಗೆ ಏನು ಕೊಡದ ಬರಿ..ಗೈ…ಲೆ… ಹೋಗುದಾ..ತು.” ಎಂದು ತಡೆದು ತಡೆದು ಮಾತಾಡುತ ನೋವು ತೋಡಿಕೊಂಡಳು.
ನಾನು ” ಆತು ಅಜ್ಜಿ ನೀ ಹಂಗೆಲ್ಲಾ ತಿಳಕೊ ಬೇಡ. ಅದು ಅಮ್ಮನ ಕರ್ತವ್ಯ ಮಾಡಬೇಕು. ಮಾಡಿದಾಳು. ನೀ ಹಂಗೆಲ್ಲಾ ಯೋಚಿಸಬ್ಯಾಡ” ಅಂದ್ನಿ.
ಅಜ್ಜಿ ನನ್ನ ಕೈ ಹಿಡಿದು ಅಳ ತೊಡಗಿದಳು. “ಸೀತವ್ವ… ನಿನ್ನ ತಲಿ ಮ್ಯಾಲ ….. ಎರಡ ಅಕ್ಕಿ…..ಕಾಳು ಹಾಕು ಬಾಗ್ಯ ….ಇ…ಲ್ಲ.” ನನಗೂ ಮನಸ್ಸಿಗೆ ಬಹಳ ದುಃಖ ಆತು ಬರುವ ಕಣ್ಣಿರನ್ನು ಒಳಗೆ ನುಂಗಿದೆ.
ನಮ್ಮವ್ವ ಅಡುಗಿ ಮನಿಯಿಂದ ನನ್ನ ಕೂಗಾಕ್ಕತ್ಲು. ನಾನು ಬಂದೆ ತಡಿ ಅಜ್ಜಿ ಅಂತ ಅವ್ವನ ಕಡೆ ಹೋದೆ. ಅವ್ವ ನೋಡಿ “ಅಜ್ಜಿಗೆ ಈ ಚಹಾ ಕೊಟ್ಟ ಬಾ. ನೀನು ಚಹಾಕುಡಿಯವಂತಿ” ಅಂತ ಹೇಳಿದಳು. ನಾನು ಅಜ್ಜಿಗೆ ಚಹಾ ಕೊಟ್ಟ ಬಂದ್ನಿ.
ನಮ್ಮವ್ವ ಬಹಳ ಕುತೂಹಲದಿಂದ ”ಅಜ್ಜಿ ಏನ ಕೊಟ್ಲು ನಿನಗ” ಅಂತ ಕೇಳಿದಳು. ನಾನು ಟೇಬಲ್ ಮೇಲೆ ಇಟ್ಟ ರೇಷ್ಮೆ ವಸ್ತ್ರ ತಂದ ತೋರಿಸಿದೆ. ಅಜ್ಜಿ ಇದನ್ನ ಇಟ್ಟಕೊ ಅಂತ ಕೊಟ್ಟಾಳು ಅಂದಾಗ ನಮ್ಮವ್ವ “ಅಯ್ಯ ನಾ ಮಾಡಿದ ಚಾಕರಿ ಎಲ್ಲ ವ್ಯರ್ಥ ಆತು. ಏನರ ಬಂಗಾರ ಬೆಳ್ಳಿ ರೊಕ್ಕಾ ಹಂತೆಕ ಅಡಿಗಿಸಿಟ್ಟುಕೊಂಡಾಳು ಎನರ ಕೊಡತಾಳು ಅನಕೊಂಡಿದ್ನಿ ಇದನ್ನ ಕೊಟ್ಟಾಳ. ಇದೇದಕ ಬರತೇತಿ” ಅಂದ್ಲು.
ನಾನು “ಬಿಡಮ್ಮ ಅಜ್ಜಿ ಬಗ್ಗೆ ಹಾಗ ಮಾತಡಬ್ಯಾಡ. ಪಾಪ ಅಜ್ಜಿ ಕಡೆ ಏನಿರಬೇಕು. ನಿನಗೂ ಗೊತ್ತಿದ್ದ ಅದ… ಅಪ್ಪ ಹೇಳುದೂ ಕೇಳಿ. ಅಪ್ಪನ್ನ ಅಜ್ಜಿ ಕಷ್ಟ ಪಟ್ಟು ಓದಸ್ಯಾಳು ಅಂತ. ಅಪ್ಪನಿಗೂ ಮಾಡಿದ ಸಾಲ ತೀರಸಾಕ, ನನ್ನ ಓದಸಾಕ ಅರ್ದ ಜೀವನ ಹೋಯಿತು. ಬಂಗಾರ, ಬದುಕಿನ ಆಸೆ ಬಿಡು. ನೀನು ನಿಸ್ವಾರ್ಥ ದಿಂದ ಸೇವೆ ಮಾಡಿದ್ದರ. ಎಲ್ಲಿಂದರ ಅದರ ಲಾಭ ನಿನಗ ಇದ್ದ ಇರ್ತದ”
ನಾನು ಮನಸ್ಸನೊಳಗ ಅಂದುಕೊಂಡೆ ಹಾಗಾದರೆ ಅವ್ವ ಇಷ್ಟ ದಿವಸ ಅಜ್ಜಿ ಚಾಕರಿ ಮಾಡಿದ್ದು ಏನೊ ಸಿಗತೈತಿ ಅನ್ನು ಆಸೆಕ. ಅವ್ವನಿಗೆ ಎಷ್ಟೊ ಒಳ್ಳೆ ಮನಸ್ಸು ಅದ ಅನ್ನಕೊಂಡಿದ್ದು ಸುಳ್ಳಾತು. ಆಮೇಲೆ ಅಮ್ಮ ಅಜ್ಜಿಯ ಕಾಳಜಿಯಲ್ಲಿ ಏನೊ ನಿರಾಶ ಭಾವ ತಾತ್ಸಾರ ಕಂಡೆ. ಅಜ್ಜಿ ಆ ಒಂದ ವಾರದ ನಂತರ ತೀರಕೊಂಡ್ಲು. ಅಮ್ಮ ತನ್ನ ಸಂಬಂಧಿಕರ ಮುಂದೆ ಆಗಾಗ ಅಜ್ಜಿಯ ಚಾಕರಿ ಮಾಡಿದ್ದು. ಅದರ ಅವಳಿಂದ ತನಗೇನು ಸಿಗಲಿಲ್ಲ ಅಂತ ತನ್ನ ಹತಾಸೆ ತೋಡಕೊತಿದ್ಲು. ನಂತರ ನನ್ನ ತಂದೆಯ ಪರಿಚಯದವರ ಮೂಲಕ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀಪಾದರ ಜೊತೆ ನನ್ನ ಮದುವೆಯಾಯಿತು. ಮದುವೆಯಾಗಿ ನಾನು ಬೆಂಗಳೂರಿಗೆ ಬಂದೆ.
******”
“ಸೀತಾ...ಸೀತಾ…..” ಎಂದು ಯಾರೊ ಕರೆದ ಹಾಗಾಯಿತು. ನಾನು ನನ್ನ ಹಳೆಯ ನೆನಪುಗಳಿಂದ ವಾಸ್ತವಕ್ಕೆ ಬಂದೆ.
ಪಕ್ಕದ ಮನೆ ವಿಶಾಲಕ್ಷಮ್ಮನವರು ತಮ್ಮ ಮನಿ ಮಂಗವಾಳರದ ಲಕ್ಷ್ಮಿ ಪೂಜಾದ ಅರಿಷಣ ಕುಂಕಮ ಕರೆಯಲು ಬಂದಿದ್ದರು. ಬರುತ್ತೇನೆ ಎಂದು ಹೇಳಿ ಕಳಿಸಿದೆ. ನಾನು ಬೇಗ ಬೇಗನೆ ಪೂಜೆ ಮುಗಸಬೇಕೆಂದು ನನ್ನ ಕಾರ್ಯ ದಲ್ಲಿ ತಲ್ಲೀನಳಾದೆ.
*********
ಎರಡು ದಿನಗಳ ನಂತರ ಅಮ್ಮನಿಂದ ಪೋನ ಬಂತು. ಅಮ್ಮ “ಲೇ ಸೀತಾ ಅಜ್ಜಿ ಬಗ್ಗೆ ಹಾಗ ಮಾತಾಡಬಾರದಿತ್ತು. ಮೊನ್ನೆ ಅಪ್ಪನಿಗೆ ಕಪಾಟನಲ್ಲಿ ಒಂದ ರಸೀದಿ ಸಿಕ್ಕಿತು. ನಿನ್ನಜ್ಜಿ ಇಪ್ಪತ್ತ ವರಷದ ಹಿಂದ ೧೦೦೦೦ ರೂಪಾಯಿ ಪೊಸ್ಟ ಆಫಿಸನಾಗ ಇಟ್ಟಿದ್ಲಂತ ಅದೀಗ ೧ ಲಕ್ಷ ಸಮೀಪ ಆಗೇತಿ. ಇವರು ಅದರಲೇನ ನನಗೊಂದು ಬೋರಮಾಳ ಸರ ಮಾಡಸಿರು. ನೀನು ನಿಮ್ಮತ್ತಿಗೆ ಚಾಕರಿ ಮಾಡುವಾಗ ನನ್ನಂಗ ಯೊಚಿಸಬೇಡ” ಎಂದು ಖುಷಿಯಲೆ ಹೇಳಿದಳು. ನಾನು “ನೊಡಮ್ಮ ನಾನಂದಿದ್ದಿಲ್ಲಾ ನಿನ್ನ ಸೇವೆಯ ಫಲ ಸಿಗ್ತದಂತ. ಚುಲೊ ಆತು” ಎಂದು ಉಳಿದೆಲ್ಲ ಕುಶಲೊಪಚರಿ ಮಾತನಾಡಿ ಪೊನ್ ಇಟ್ಟೆ.
**********
ಮನಸ್ಸು ಯೊಚಿಸತೊಡಗಿತು. ಮನಷ್ಯನಿಗೆ ಆಸೆ ಸಹಜ. ಎಷ್ಟೊ ಸಾರಿ ಬದುಕಿನ ಸಂದಿಗ್ದ ಪರಿಸ್ಥತಿಯಲ್ಲಿ ‘ಏನ ಮಾಡುದ ಬಂತಪಾ ಕರ್ಮ’ ಎಂದು ಯೊಚಿಸುತ್ತೇವೆ. ಕರ್ಮದ ಫಲಗಳ ಮೇಲಿನ ಆಸೆಯಿಂದ ಅಂದು ಕೊಳ್ಳುತ್ತಿರುತ್ತೇವೆ. ಆದರೆ ಆಸೆಯನ್ನು ಬದಿಗಿಟ್ಟು ಮನಸಾಕ್ಷಿಯಿಂದ ಕೆಲಸ ಮಾಡಿಬೇಕು. ಶ್ರೀ ಕೃಷ್ಣ ಹೇಳಿದಂಗ ನಮ್ಮ ಕರ್ತವ್ಯವನ್ನು ಶ್ರದ್ದೆಯಿಂದ ಮಾಡುಬೇಕು. ಕೆಲಸ, ಕರ್ತವ್ಯಗಳನ್ನು ಮಾಡುವದರಲ್ಲಿ ಮನಸ್ಸಿಡಬೇಕು. ಫಲಾ ಫಲಗಳನ್ನ ದೇವರಿಗೆ ಬಿಡುಬೇಕು
“ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ|| ಮಾ ಕರ್ಮಫಲ ಹೇತುರ್ಭೂ || ಮಾ ತೇ ಸಂಗೋಸ್ತ್ವ ಕರ್ಮಣಿ”
ಶ್ರೀದೇವಿ. ಮ. ಗುಮ್ಮಗೋಳ



