ಕಾವ್ಯ ಸಂಗಾತಿ
ಟಿ.ಆರ್. ಶ್ರೀಧರ್ ತರೀಕೆರೆ
“ಹಸನ್ಮುಖಿ ರಾಮ, ಸಂಜೀವಿನಿ ಹನುಮ”


ಬಿಲ್ಲಿಡಿದು ಗುರಿಯಿಟ್ಟ ರಾಮ ಬೇಡ,
ಹಸನ್ಮುಖಿ ಪರಿವಾರ ಸಮೇತ ರಾಮ ಬೇಕು.
ದುರುಗುಟ್ಟಿ ನೋಡುವ ಅಂಜನೇಯ ಬೇಡ,
ಸಂಜೀವಿನಿ ತಂದ ಹನುಮ ಬೇಕು.
ತೊಡೆಯ ಮೇಲೆ ಕುಳಿತ ಸೀತೆ, ಪ್ರೀತಿಯ ಮಡಿಲು,
ಲಕ್ಷ್ಮಣ-ಭರತ-ಶತ್ರುಘ್ನರ ಒಗ್ಗಟ್ಟಿನ ನೆಲೆವೀಡು.
ಜೀವ ಉಳಿಸುವ ಕೈಗಳು, ಸೇವೆಯ ಮನಸ್ಸು,
ಶಕ್ತಿ-ಬುದ್ಧಿಯ ಹದವರಿತ ಲೋಕದ ಸೇವಕ.
ರಾಮನಿಗೆ ಹನುಮ, ಹನುಮನಿಗೆ ರಾಮ,
ಭಕ್ತಿ-ಪ್ರೀತಿಯ ಬಂಧವೇ ನಮ್ಮ ಧರ್ಮ!
ಧರ್ಮ ಮನವ ಅರಳಿಸಲಿ, ದ್ವೇಷ ದೂರವಿರಲಿ,
ಶಾಂತಿ-ಸೌಹಾರ್ದದ ಬೆಳಕು ಎಲ್ಲೆಡೆ ಪಸರಿಸಲಿ.
ಒಂಟಿ ಕೋಪವ ಬಿಟ್ಟು, ಒಂದಾಗಿ ಸಾಗೋಣ,
ಪ್ರೀತಿ-ನಂಬಿಕೆಯ ಬಾಳಲ್ಲಿ ನೆಮ್ಮದಿ ಕಾಣೋಣ.
——–
ಟಿ.ಆರ್. ಶ್ರೀಧರ್ ತರೀಕೆರೆ



