ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಗಡಿನಾಡ ಸೊಲ್ಲಾಪುರ-ಕನ್ನಡದ ಬೇರುಗಳು

ಸೊಲ್ಲಾಪುರದೊಳಗೆ ಸೊಲ್ಲ ಅಡಗಿಸಬ್ಯಾಡೋ
ನಿಲ್ಲೆಂದು ತಾಯಿನುಡು ನಿಲ್ಲಿಸಿದರು-
ಸಿದ್ದರಾಮ ಅಲ್ಲಗಳಿದವರಿಗೆ ತಿಳಿಹೇಳು ||

ಕನ್ನಡ ತಾಯಿನುಡಿ‌ |ಮನ್ನಿಸಿ ಮಾತನಾಡು
ಅನ್ಯಕ್ಕೆ ಮರುಳಾಗದಿರು ಮರುಳೇ-
ನೀ ಕನ್ನಡಿಗನೆಂದು ಮರೆಯಬೇಡ||

ಎಂದು ಜಯದೇವಿ ತಾಯಿಯವರು ಗಡಿನಾಡ ಕನ್ನಡಿಗರಿಗೆ ತಿಳಿಹೇಳಿದರು. ಅನ್ಯ ಬಗೆದವರಿಗೆ ತಿಳಿಹಳೆಂದು  ಆರಾಧ್ಯ ದೈವನಾದ ಸೊನ್ನಲಿಗಿ ಸಿದ್ದರಾಮನಲ್ಲಿ ಬೇಡಿಕೊಂಡರು.

೧೯೫೬ರಲ್ಲಿ ವಿಶಾಲ ಮೈಸೂರು ರಾಜ್ಯ ಉದಯವಾದರೂ, ಅವರ ಮನಸ್ಸಿನ ಕರ್ನಾಟಕದ ಗಡಿ ಅಲ್ಲಿ ನಿಲ್ಲಲಿಲ್ಲ. ಗಡಿಭಾಗದ ಕನ್ನಡಿಗರಿಗೆ ನೋವಾಗಿತ್ತು….  ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಬೆಳಗಾವಿ ಮತ್ತು ಇತರ ಗಡಿಪ್ರದೇಶಗಳ ಕನ್ನಡಿಗರ ಹಕ್ಕಿನ ಪ್ರಶ್ನೆಗಳನ್ನು ಎತ್ತುತ್ತ ಜಯದೇವಿತಾಯಿಯವರ ಹೋರಾಟ ಜನರ ಮಧ್ಯೆ ಮುಂದುವರಿಯುತ್ತಿತ್ತು.  ಹಾಗೇ ಜೀವನದ ಕೊನೆಯವರೆಗೂ ಜೀವಂತವಾಗಿಟ್ಟರು.

ಸೊಲ್ಲಾಪುರವೆಂಬುದು ಕನ್ನಡ ನಾಡಿನ ಐತಿಹಾಸಿಕ ನೆನಪುಗಳನ್ನು, ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಭಾಷಿಕ ಅಸ್ಮಿತೆಯನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ನೆಲ. ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದಾಗ ಸೊಲ್ಲಾಪುರದೊಂದಿಗೆ ಕನ್ನಡ ನಾಡಿಗಿದ್ದ ಸಂಬಂಧವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

 ಶತಮಾನಗಳ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳ ಮೂಲಕ ಈ ಪ್ರದೇಶವು ದಕ್ಷಿಣ ಭಾರತದ ವಿವಿಧ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಅವುಗಳಲ್ಲಿ ಕನ್ನಡ ನಾಡಿನ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅನೇಕ ರಾಜಮನೆತನಗಳೂ ಸೇರಿದ್ದವು.

ಶಾತವಾಹನರಿಂದ ಆರಂಭಿಸಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ದೇವಗಿರಿಯ ಯಾದವರು ಹಾಗೂ ವಿಜಯಪುರದ ಆದಿಲಶಾಹಿಗಳವರೆಗೆ ವಿವಿಧ ಅರಸು ಮನೆತನಗಳು ಈ ವಿಶಾಲ ಪ್ರದೇಶದ ಇತಿಹಾಸದ ಮೇಲೆ ತಮ್ಮ ಛಾಪು ಮೂಡಿಸಿವೆ. ಈ ರಾಜಮನೆತನಗಳ ಆಳ್ವಿಕೆಯ ಕಾಲದಲ್ಲಿ ಆಡಳಿತ, ಧರ್ಮ, ಸಾಹಿತ್ಯ, ಕಲೆ ಮತ್ತು ಜನಜೀವನದ ಹಲವು ಆಯಾಮಗಳಲ್ಲಿ ಪರಸ್ಪರ ಸಾಂಸ್ಕೃತಿಕ ವಿನಿಮಯಗಳು ಹುನ್ನಾರದಲ್ಲಿ ನಡೆದವು.

ಎಲ್ಲ ಐತಿಹಾಸಿಕ ಬೆಳವಣಿಗೆಗಳನ್ನು ಗಮನಿಸಿದಾಗ ಸೊಲ್ಲಾಪುರ ಮತ್ತು ಕನ್ನಡ ನಾಡಿನ ನಡುವಿನ ಸಂಬಂಧವು ಕೇವಲ ಭಾಷೆಯ ಮಟ್ಟಕ್ಕೆ ಸೀಮಿತವಾಗಿರದೆ, ವಿಶಾಲವಾದ ಐತಿಹಾಸಿಕ ಹಾಗೂ ಸಂಸ್ಕೃತಿಕ ಹಿನ್ನೆಲೆಯನ್ನು ಹೊಂದಿತ್ತು ಎಂಬುದು ಸ್ಪಷ್ಟವಾಗುತ್ತದೆ.

ಈ ಪ್ರದೇಶದ ಕನ್ನಡದ ಬೇರುಗಳನ್ನು ಅರಿಯಲು ರಾಜಮನೆತನಗಳ ಇತಿಹಾಸ…..ಅಲ್ಲಿನ ಜನಸಾಮಾನ್ಯರ ಬದುಕು, ಆಡಳಿತ ವ್ಯವಸ್ಥೆ, ಧಾರ್ಮಿಕ ಸಂಸ್ಥೆಗಳು, ಜಾತ್ರೆಗಳು, ಆಚರಣೆಗಳು ಮತ್ತು ಶಾಸನಗಳೂ ಅಷ್ಟೇ ಮಹತ್ವದ ಆಧಾರಗಳಾಗಿವೆ.
ಸೊಲ್ಲಾಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊರೆತಿರುವ ಶಾಸನಗಳು, ದೇವಾಲಯಗಳ ಪರಂಪರೆ ಮತ್ತು ಸ್ಥಳೀಯ ಧಾರ್ಮಿಕ ಆಚರಣೆಗಳು ಈ ನೆಲದ ಬಹುಮುಖ ಇತಿಹಾಸವನ್ನು ಪರಿಚಯಿಸುತ್ತವೆ. ಅವುಗಳಲ್ಲಿನ ಭಾಷೆ, ಕಾಲಮಾನ ಮತ್ತು ವಿಷಯವಸ್ತುವಿನ ಅಧ್ಯಯನವು ಕನ್ನಡದ ಐತಿಹಾಸಿಕ ಪ್ರಭಾವವನ್ನು ಗುರುತಿಸಲು ನೆರವಾಗುತ್ತದೆ.

ಒಂದು ಕಾಲದಲ್ಲಿ ಈ ಭಾಗದ ಆಡಳಿತಭಾಷೆಗಳ ಅಧ್ಯಯನ ಮಾಡಿದಾಗ, ಕನ್ನಡಿಗರ ಉಪಸ್ಥಿತಿ ಮತ್ತು ಕನ್ನಡ ಸಂಸ್ಕೃತಿಯ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ

 ಸೊಲ್ಲಾಪುರದ ಕನ್ನಡ ಸಂಸ್ಕೃತ ಪ್ರತಿಬಿಂಬಿಸುವ ಧಾರ್ಮಿಕ ಆಚರಣೆಗಳಲ್ಲಿಯೂ ಕನ್ನಡದ ಪರಂಪರೆಯ ಛಾಯೆಯನ್ನು ಕಾಣಬಹುದು.

ಹನ್ನೆರಡನೇ ಶತಮಾನದ ಸಿದ್ಧರಾಮೇಶ್ವರರ ಪರಂಪರೆ ಮತ್ತು ಅವರ ಹೆಸರಿನಲ್ಲಿ ನಡೆಯುವ ಜಾತ್ರೆಯು ಈ ಪ್ರದೇಶದ ಧಾರ್ಮಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ. ಸಿದ್ಧರಾಮೇಶ್ವರರು  ಶರಣ ಪರಂಪರೆಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು.   ಕನ್ನಡದ ಶರಣ ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿದೆ.

ಸೊಲ್ಲಾಪುರದ ಸಿದ್ಧರಾಮೇಶ್ವರರ ಅಂದರೆ ಈ ನೆಲದ ಧಾರ್ಮಿಕ ಇತಿಹಾಸದ ಜೊತೆಗೆ ಕನ್ನಡದ ಶರಣ ಚಳವಳಿಯ ಪ್ರಭಾವವನ್ನೂ ಅರಿಯುವುದಾಗಿದೆ.
ಜಾತ್ರೆಗಳು  ಒಂದು ಸಮಾಜದ ಸಾಮೂಹಿಕ ಸ್ಮೃತಿ, ಪರಂಪರೆ ಮತ್ತು ಸಾಂಸ್ಕೃತಿಕ ಒಗ್ಗಟ್ಟಿನ ಸಂಕೇತಗಳಾಗಿವೆ. ತಲೆಮಾರುಗಳಿಂದ ಮುಂದುವರಿದು ಬಂದ ಆಚರಣೆಗಳು, ಜನರ ನಂಬಿಕೆಗಳು, ಶರಣರ ಬಗೆಗಿನ ಭಕ್ತಿ ಮತ್ತು ಸ್ಥಳೀಯ ಸಂಪ್ರದಾಯಗಳು ಒಂದು ಪ್ರದೇಶದ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸೊಲ್ಲಾಪುರದ ಸಿದ್ಧರಾಮೇಶ್ವರರ ಪರಂಪರೆಯೂ ಅಂತಹ ಮಹತ್ವವನ್ನು ಹೊಂದಿದೆ. ಈ ಪರಂಪರೆಯ ಐತಿಹಾಸಿಕ ಬೇರುಗಳನ್ನು ಪರಿಶೀಲಿಸಿದಾಗ, ಕನ್ನಡದ ಶರಣ ಸಂಸ್ಕೃತಿ ಈ ಪ್ರದೇಶದ ಜನಜೀವನದೊಂದಿಗೆ ಹೊಂದಿದ್ದ ಸಂಬಂಧದ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ.

ಮುಂದೆ ಸೊಲ್ಲಾಪುರ ೧೩ನೇ ಶತಮಾನದಲ್ಲಿ ಉದ್ಯಮ ಕ್ಷೇತ್ರಕ್ಕೆ ವಲಸೆದಾರರು ಬಂದು ಮರಾಠಿಗರಿಂದ ಯಂತ್ರೋದ್ಯಮ ಕಲಿತ ಕನ್ನಡಿಗರು ಮರಾಠಿ ಪ್ರಭಾವಕ್ಕೆ ಒಳಗಾಗಿ ಕನ್ನಡವನ್ನು ಹಿಂದಕ್ಕೆ ಸೇರಿಸಲಾಯಿತು .ಆ ಸ್ಥಾನದಲ್ಲಿ ಮರಾಠಿ ಕಲಿತರು ತಾಯಿನುಡಿಯ ಅಭಿಮಾನಿಗಳಾದ ಮರಾಠಿಗರು ಕನ್ನಡವನ್ನು ಬಳಸಲು ಪ್ರಯತ್ನಿಸಲಿಲ್ಲ.
 ಬ್ರಿಟಿಷರ ವಿರುದ್ಧದ ಹೋರಾಟದ ಸಂಬಂಧದಲ್ಲಿ ತಿಲಕರು ಸೊಲ್ಲಾಪುರಕ್ಕೆ ಬಹಳ ಬಂದು ಹೋಗುತ್ತಿದ್ದರು. ಹೀಗಾಗಿ ಅವರ ಪ್ರಚಾರ ಮರಾಠಿಯಲೇ ಇರುತಿತ್ತು . ಇದು ಕೂಡ ಪ್ರಬಲವಾದ ಕಾರಣ ಅಂತ ಹೇಳಬಹುದು.
ಅಧಿಕಾರದ ಪ್ರಭಾವದಿಂದ ಮರಾಠಿ ತನ್ನ ನೆಲೆಯನ್ನು ಕಂಡು ಕೊಂಡು ಭದ್ರವಾಗಿತ್ತು.

 ಕನ್ನಡವು ಅನ್ಯ ನುಡಿಗಳಿಂದ ಹತ್ತಿಕಲ್ಪಟ್ಟಿತು.  ಈ ಮಧ್ಯದಲ್ಲಿ ಕನ್ನಡಪರ ಪ್ರಬಲ ಶಕ್ತಿಗಳಾಗಿ ಕೆಲವು ಕನ್ನಡ ಮನೆತನಗಳು ಇವೆ ಅಖಂಡ ಕರ್ನಾಟಕ ಸಾಹಿತ್ಯ ಪರಿಷತ್ತು, ಅಖಂಡ ಕರ್ನಾಟಕ ಏಕೀಕರಣ ಪರಿಷತ್ತು, ಅಖಂಡ ಕರ್ನಾಟಕ ಆಯುರ್ವೇದ ಪರಿಷತ್ತು ,ಮೊದಲಾದ ಕನ್ನಡ ಪರ ಸಂಸ್ಥೆಗಳು ಇಲ್ಲಿ ಕೆಲಸ ಮಾಡುತ್ತಿದ್ದವು .
ಮುಂಬೈ ಹೈಕೋರ್ಟಿನ ಚೀಫ್ ಜಸ್ಟಿಸ್ ಸೊಲ್ಲಾಪುರಕ್ಕೆ ಬೆಟ್ಟಿ ಕೊಟ್ಟಾಗ ಅಲ್ಲಿಯ ಕೋರ್ಟಿನಲ್ಲಿಯು ಸಹ ಕನ್ನಡ ಮಾಧ್ಯಮವಿರಬೇಕೆಂದು ಕೇಳಿಕೊಳ್ಳಲಾಯಿತು.

 ಸೊಲ್ಲಾಪುರ 12 ಶತಮಾನಕ್ಕಿಂತ ಮೊದಲನೇ ಕನ್ನಡ ಭಾಷೆಯು ಅವಿಭಾಜ್ಯ ಅಂಗವಾಗಿತ್ತು ಅಲ್ಲಿ ನೂರು ವರ್ಷಗಳಿಂದಲೂ ಕಾಗದ ಪತ್ರಗಳು ಕನ್ನಡದಲ್ಲಿ ಇರುವುದು ಗಮನಾರ್ಹವಾಗಿದೆ.
ಹೀಗಾಗಿ ಸೊಲ್ಲಾಪುರ ಪಟ್ಟಣವು ತನ್ನ ಪ್ರಭಾವವನ್ನು ಕನ್ನಡಿಗರ ಮೇಲೆ ಹೊಂದಿರುವುದು ಇಂದಿಗೂ ಕಾಣಬಹುದಾಗಿದೆ.

 ಕನ್ನಡ ಪಟ್ಟಣವಾದ ಸೋಲಾಪುರ ಮರಾಠಿ ಸ್ಥಳವಾಗಿ ಮಾರ್ಪಟ್ಟಿದ್ದು ಒಂದು ಆಕಸ್ಮಿಕ ಈ ಪಟ್ಟಣದ ಒಂದೇ ಒಂದು ಸಣ್ಣ ಭಾಗ ಮರಾಠಿ ಹಳ್ಳಿಗಳ ಜೊತೆಗೆ ಸಂಪರ್ಕ ಹೊಂದಿದ್ದು ಉಳಿದೆಲ್ಲ ಭಾಗ ಅಂದರೆ ತಾಲೂಕು ಹಳ್ಳಿಗಳು ಕನ್ನಡ ಪ್ರದೇಶಗಳಾಗಿವೆ. ಕನ್ನಡ ಜನತೆಯ ಕುಲ ಕಸುಬುಗಳು ಇಂದಿಗೂ ಕನ್ನಡ ಮಾಧ್ಯಮಿಕ ಪ್ರಾಥಮಿಕ ಮತ್ತು ಶಾಲೆಗಳು ನಡೆಯುತ್ತಿವೆ .

ಕನ್ನಡ ಗಡಿ ಭಾಗವೆಂದು ಕೊಳ್ಳುವ ಸೊಲ್ಲಾಪುರ ಅಕ್ಕಲಕೋಟ ಜತ್ತ ಕಾಸರಗೋಳ ತಾಳವಾಡಿ ಆದೂನಿ ,ಆಲೂರ ,ರಾಯದುರ್ಗ ,ಹೊಸೂರ ನೀಲಗಿರಿ, ಇಲ್ಲಿ ವಾಸಿಸುವ ಕನ್ನಡದ ಮಕ್ಕಳಿಗೆ ಶಾಲೆಗಳು  ಈಗಲೂ ಇವೆ.

ಕರ್ನಾಟಕದಿಂದ ಹೊರಗುಳಿದ ಕನ್ನಡ ನಾಡುಗಳ ಅಂಕಿ..ಅಂಶಗಳ ವಿವರ ಹೀಗಿದೆ….
೧೯೫೬ ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ, ದ್ವಿಭಾಷಾ ಮುಂಬೈ ಪ್ರಾಂತ್ಯದಲ್ಲಿ ಸುಮಾರು *೧೩ ಲಕ್ಷ ಕನ್ನಡಿಗರು* ಕರ್ನಾಟಕಕ್ಕೆ ಸೇರದೆ ಹೊರಗೆ ಉಳಿದರು.

 ಕೊಲ್ಲಾಪುರ ಮತ್ತು ಸತಾರಾ ಭಾಗ….ಗಡಹಿಂಗ್ಲಜ ತಾಲೂಕು..ಜನಸಂಖ್ಯೆ ೧,೧೧,೨೪೨, ವಿಸ್ತೀರ್ಣ ೧೫೧ ಚದರ ಮೈಲುಗಳಷ್ಟಾದರೆ,
 ಶಿರೋಳ ತಾಲೂಕಿನ…. ಜನಸಂಖ್ಯೆ ೧,೨೧,೯೧೨, ವಿಸ್ತೀರ್ಣ ೨೧೨ ಚದರ ಮೈಲುಗಳು,  
ಇನ್ನು ಹತ್ಕಣಂಗಲೆ ತಾಲೂಕು… ಜನಸಂಖ್ಯೆ ೧,೬೫,೨೦೦,ಮಿರಜ್ ತಾಲೂಕು… ಜನಸಂಖ್ಯೆ ೨,೮೫,೫೨೯, ವಿಸ್ತೀರ್ಣ ೨೧೧ ಚದರ ಮೈಲುಗಳು,
ಜತ ತಾಲೂಕು… ಜನಸಂಖ್ಯೆ ೧,೦೯,೫೨೦, ವಿಸ್ತೀರ್ಣ ೯೨ ಚದರ ಮೈಲುಗಳು,
ಇದರ ಜೊತೆಗೆ ತಾಸಗಾಂವ್ ಮತ್ತು ಏಳವಾ ತಾಲೂಕಿನ ಅನೇಕ ಕನ್ನಡ ಹಳ್ಳಿಗಳು ಕೂಡ ಸೇರಿವೆ.

ಸೊಲ್ಲಾಪುರ ಭಾಗ…..ದಕ್ಷಿಣ ಸೊಲ್ಲಾಪುರ ಅಂದರೆ ಸೊಲ್ಲಾಪುರ ನಗರ ಸೇರಿ…ಜನಸಂಖ್ಯೆ ೩,೨೦,೫೯೦
ಮಂಗಳವೇಡೆ ಮತ್ತು ಉತ್ತರ ಸೊಲ್ಲಾಪುರ… ಸುಮಾರು ೨೦ ಕನ್ನಡ ಹಳ್ಳಿಗಳು,
ಸಾಂಗೋಲಾ ತಾಲೂಕು….ಕೆಲವು ಕನ್ನಡ ಹಳ್ಳಿಗಳು
ಅಕ್ಕಲಕೋಟೆ ಪೂರ್ಣ ತಾಲೂಕು… ಜನಸಂಖ್ಯೆ ೧,೪೭,೭೪೫, ವಿಸ್ತೀರ್ಣ ೪೫೪ ಚದರ ಮೈಲು

ಇನ್ನು ಮರಾಠವಾಡದ ಭಾಗಗಳತ್ತ ಬಂದರೆ…..
ಉಸ್ಮಾನಾಬಾದ ಜಿಲ್ಲೆಯ ಉಮರ್ಗಾ ಮತ್ತು ನಳದುರ್ಗ ತಾಲೂಕುಗಳ ಅರ್ಧದಷ್ಟು ಭಾಗ,
ಲಾತೂರು ತಾಲೂಕಿನ ಕನ್ನಡ ಹಳ್ಳಿಗಳು,
 ನಾಂದೇಡ ಜಿಲ್ಲೆಯ ದೇಗಲೂರು ತಾಲೂಕು … ಇಲ್ಲಿ ಗೋದಾವರಿ ನದಿ ಹರಿಯುತ್ತದೆ, ಅದರ ತೀರದವರೆಗೆ ಇಂದಿಗೂ ಅಚ್ಚ ಕನ್ನಡ ಮಾತನಾಡುವ ಜನರಿದ್ದಾರೆ
ಭೀಡ ಮತ್ತು ಪರಭಣಿ ಜಿಲ್ಲೆಗಳಲ್ಲಿ ಸುಮಾರು ಎರಡು ತಾಲೂಕುಗಳಷ್ಟು ವಿಸ್ತೀರ್ಣದ ಕನ್ನಡ ಹಳ್ಳಿಗಳು ಇವೆ.

ಈ ಪಟ್ಟಿಯಲ್ಲಿಯೇ ಸುಮಾರು ೧೨ ರಿಂದ ೧೩ ಲಕ್ಷ ಜನಸಂಖ್ಯೆ ಮತ್ತು ೧೫೦೦ ಚದರ ಮೈಲುಗಿಂತ ಹೆಚ್ಚು ವಿಸ್ತೀರ್ಣದ ಕನ್ನಡ ನಾಡು ಹೊರಗೆ ಉಳಿದಿದೆ. (೧೯೫೧ ರ ಜನಗಣತಿಯ ಆಧಾರದ ಮೇಲೆಯೇ ಈ ಲೆಕ್ಕವನ್ನು ನೀಡಲಾಗಿದೆ.)

೯೨ ಚದರ ಮೈಲಿ ವಿಸ್ತೀರ್ಣ ಮತ್ತು ೧,೦೯,೫೨೦ ಜನಸಂಖ್ಯೆ ಹೊಂದಿರುವ ಈ ಪ್ರದೇಶ ಇಂದಿಗೂ ಕರ್ನಾಟಕದ ಗಡಿಯಿಂದ ಹೊರಗೆ ಉಳಿದುಹೋಯಿತು ಅನ್ನುವ ನಿರಾಸೆ ಜಯದೇವಿ ತಾಯಿಯವರಲಿತ್ತು….

ಅಕ್ಕಲಕೋಟೆ ಇಡೀ ತಾಲೂಕು …೪೫೪ ಚದರ ಮೈಲು ವಿಸ್ತೀರ್ಣ ಮತ್ತು ೧,೪೭,೭೪೫ ಜನಸಂಖ್ಯೆ ಹೊಂದಿದ್ದರೂ ಕರ್ನಾಟಕಕ್ಕೆ ಸೇರಿಲ್ಲ.

ಇದೇ ರೀತಿ ಉಸ್ಮಾನಾಬಾದ ಜಿಲ್ಲೆಯ ಉಮರ್ಗಾ ಮತ್ತು ನಳದುರ್ಗ ತಾಲೂಕುಗಳ ಅರ್ಧ ಭಾಗ, ಲಾತೂರು ತಾಲೂಕಿನ ಕನ್ನಡ ಹಳ್ಳಿಗಳು, ನಾಂದೇಡ ಜಿಲ್ಲೆಯ ದೇಗಲೂರು ತಾಲೂಕು ….ಈ ತಾಲೂಕಿನ ಮಧ್ಯದಲ್ಲಿಯೇ ಗೋದಾವರಿ ನದಿ ಹರಿಯುತ್ತದೆ, ಆ ನದಿಯ ತೀರದವರೆಗೂ ಇಂದಿಗೂ ಶುದ್ಧ ಕನ್ನಡ ಮಾತನಾಡುವ ಜನ ವಾಸಿಸುತ್ತಿದ್ದಾರೆ. ಅದಲ್ಲದೆ ಬೀಡ ಮತ್ತು ಪರಭಣಿ ಜಿಲ್ಲೆಗಳಲ್ಲಿ ಸುಮಾರು ಎರಡು ತಾಲೂಕುಗಳಷ್ಟು ಕನ್ನಡ ಹಳ್ಳಿಗಳು ಕರ್ನಾಟಕದಿಂದ ಹೊರಗುಳಿದಿವೆ.

*ಕನ್ನಡ ನಾಡಿನ ಸ್ಥಳದಲ್ಲಿ ಮತ್ತೊಂದು ಭಾಷೆವನ್ನು ತನ್ನ ಪ್ರಾಬಲ್ಯವನ್ನು ಸಾಧಿಸುವುದೆಂದರೆ ಅದರ ಪ್ರಭಾವಕ್ಕೆ ಒಳಗಾಗಿ ತನ್ನತನವನ್ನು ಕಳೆದುಕೊಂಡಿದೆ ಅನ್ನುವುದಕ್ಕೆ ಉದಾಹರಣೆ ಎಂದರೆ ಮುಂಬೈ ಅಂತ ನಗರದಲ್ಲಿ ಮೊಟ್ಟಮೊದಲ ಆಂಗ್ಲ ಗೌರ್ನರ್ ಗೆ ಕೊಡಮಾಡಿದ ನಾಗರಿಕ ಸನ್ಮಾನ ಪತ್ರ ಕನ್ನಡ ಭಾಷೆ ಕನ್ನಡ ಲಿಪಿಯಲ್ಲಿ ಇತ್ತು ಎನ್ನುವುದನ್ನು ನೆನೆಸಿಕೊಂಡು ಅಂದಿನಿಂದ ಇಂದಿನವರೆಗೂ ಪರಿಸ್ಥಿತಿಯನ್ನು ವೀಕ್ಷಿಸಿದರೆ ಕಾಲದ ಬದಲಾವಣೆಗೆ ತಕ್ಕಂತೆ ಕನ್ನಡಿಗರು ಹೊಂದುಕೊಂಡು ಬಂದಿರುವುದು ಸ್ಪಷ್ಟವಾಗುವದು.*

ಸೊಲ್ಲಾಪುರದ ಇತಿಹಾಸವನ್ನು ಈ ದೃಷ್ಟಿಕೋನದಿಂದ ಅಧ್ಯಯನ ಮಾಡಿದಾಗ, ಕರ್ನಾಟಕ ಏಕೀಕರಣದ ಹೋರಾಟದ ಹಿಂದೆ ಇದ್ದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡದ ಬೇರುಗಳು ಎಷ್ಟೇ ಆಳವಾಗಿದ್ದರೂ….ಅವುಗಳನ್ನು , ಸಂರಕ್ಷಿಸಿ, ಮುಂದಿನ ತಲೆಮಾರಿಗೆ ತಲುಪಿಸುವುದು ಕೂಡ ಇತಿಹಾಸದ ಅಧ್ಯಯನದ ಉದ್ದೇಶವಾಗ ಬೇಕೆನ್ನುತ್ತಿದ್ದರು ಜಯದೇವಿ ತಾಯಿಯವರು.

ಹೊರನಾಡ ಮತ್ತು ಗಡಿನಾಡ ಕನ್ನಡಿಗರಲ್ಲೂ ಕನ್ನಡದ ಕಿಚ್ಚು ಕನ್ನಡದ ಧರ್ಮ ಉಳಿದುಕೊಂಡು ಬೆಳೆದುಕೊಂಡು ಬರುವಂತೆ ನಮ್ಮ ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಬೇಕು ಎನ್ನುತ್ತಿದ್ದರು.

ಜಯದೇವಿ ತಾಯಿಯವರು ಕನ್ನಡ ಪ್ರಚಾರಕ್ಕೆ ರಾಜ್ಯಾದ್ಯಂತ ಸಂಚರಿಸಲು ತಯಾರಿಸಿದರು. ತಮ್ಮ ಸ್ವಹಿತಾಸಕ್ತಿಗಳನ್ನು ಬದಿಗಿಟ್ಟು ಕುಟುಂಬದ ಸಮಸ್ಯೆಗಳ ಮಧ್ಯದಲ್ಲೂ ಮನೆಯವರ ಮನ ಒಲಿಸಿಕೊಂಡು ಅಡುಗೆ ಕೆಲಸದವರನ್ನು ಕರೆದುಕೊಂಡು, ಮನೆಯಲ್ಲಿ ಕಾಳು ಕಡಿಗಳನ್ನು ಅಡುಗೆ ಸಾಮಾಗ್ರಿಗಳನ್ನು ಕಟ್ಟಿಕೊಂಡು ಕಾರಿನಲ್ಲಿ ಪ್ರಚಾರಕ್ಕೆ ಹೊರಡುವರು .ಕಾರುಹೋಗದ ಊರುಗಳಿಗೆ ಎತ್ತಿನ ಬಂಡಿಯಲ್ಲಿ ಸಂಚರಿಸಿದರು. ಅಕ್ಕನ ಬಳಗ, ಬಸವ ಜಯಂತಿ,ನಾಡಹಬ್ಬ, ಅನೇಕ ಸಭೀ ಸಮಾರಂಭಗಳ ವೇದಿಕೆಗಳ ಮೂಲಕ ಕನ್ನಡ ಪ್ರಚಾರ ಕೈಗೊಂಡರು. ಹೋದ ವೇದಿಕೆಯಲ್ಲಿ ಪ್ರಯಾಣದ ಭತ್ತಿ ತೆಗೆದುಕೊಳ್ಳುತ್ತಿರಲಿಲ್ಲ .ಇರಲು ಅವಕಾಶಕೊಟ್ಟರೆ ಅಲ್ಲಿ ಕನ್ನಡತನವನ್ನು ಬೆಳೆಸಲು ಉಪಯೋಗಿಸುತ್ತಿದ್ದರು.

“ಇಂತಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸೊಲ್ಲಾಪುರದ ನೆಲದಲ್ಲಿಯೇ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಂಡು ಮುಂದುವರಿಸಿಕೊಂಡು ಹೋಗುವ ಪ್ರಶ್ನೆ ಜಯದೇವಿತಾಯಿಯವರ ಬದುಕಿನ ಮಹತ್ವದ ಧ್ಯೇಯವಾಗಿ ರೂಪುಗೊಂಡಿತು. ತಮ್ಮ ಬದುಕನ್ನೇ ಹೋರಾಟದ ಹಾದಿಯಲ್ಲಿ ಮುಡಿಪಾಗಿಟ್ಟರು.
ಅದೇ ರೀತಿಯಾಗಿ….ಅಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗನು ಅನ್ಯ ಭಾಷೆಕರೊಂದಿಗೆ ಬೆಲೆಯೂ ಅವರೊಂದಿಗೆ ಸೌಹಾರ್ದತೆಯಿಂದ ಬಾಳ ಬದುಕಬೇಕು ಅನ್ನುವನ ಕರೆ ಕೊಟ್ಟರು. ಹಾಗೇಯೇ  ಗಡಿನಾಡ ಕನ್ನಡಿಗರು ಅನ್ಯಭಾಷಿಕರೊಂದಿಗೆ ಅನುಸರಿಸಿಕೊಂಡು ಬದುಕುತ್ತಿದ್ದರೂ ಕೂಡ.


About The Author

Leave a Reply

You cannot copy content of this page

Scroll to Top