ಕಾವ್ಯ ಸಂಗಾತಿ
ಶಂಕರರಾವ ಉಭಾಳೆ ಅವರ
“ಮರದೊಳಗಣ ಅಗ್ನಿ”

ಮರದೊಳಗಣ ಅಗ್ನಿ
ಬೋಧಿಸತ್ವ ಹೇಳಿತು,
“ಬುದ್ಧ ನನ್ನ ಕೆಳಗೆ ಧ್ಯಾನಕ್ಕೆ ಕುಳಿತಾಗ

ಆತನೊಂದಿಗೆ ನನಗೂ
ಮನಃಶಾಂತಿ ದೊರಕಿತ್ತು.
ಅರಮನೆಯ ಬೇಲಿಯೊಳಗೆ
ಸೆರೆಮನೆಯ ಗಾಳಿಯಿತ್ತು.
ಹಂಗಿನ ಒಡ್ಡಿನಲ್ಲಿ ಬೆಳೆದ ಮರ
ಸಾಲದ ಬಡ್ಡಿಯಂತೆ ಫಲ ನೀಡಲೇಬೇಕು.
ಮರ ಅಮರವಾಗೋದು
ಸಮರ ನಿಂತಾಗಲೇ…..
ಮರಾ….. ಎಂದು ಜಪಿಸಿದವ
ರಾಮನ ರಾರಾಜಿಸಿದ.
ಆದಿ ಪೂಜಿತನಾದ
ಕೆಲವೊಮ್ಮೆ ಗಿಡದ ಎಲೆಯಿಂದ
ಗಿರಿಧರನನ್ನೇ ತೂಗಿದ ದೃಷ್ಟಾಂತವಿದೆ
ತಿಮ್ಮಕ್ಕ ನೆಟ್ಟು ಬೆಳೆಸಿದ
ದಾರಿಯ ಇಕ್ಕೆಲಗಳ ಮರ
ಇಂದು ಕಲ್ಪವೃಕ್ಷವಾಗಿದೆ ತಾಯ ಒಡಲು
ಶಸ್ತ್ರಗಳನ್ನ ಒಡಲಲ್ಲಿಟ್ಟುಕೊಂಡ
ಬನ್ನಿ ಮರಕ್ಕಿಂತ
ದಾರಿಯಲ್ಲಿ ನೆರಳು ನೀಡುವ
ಸಾಲು ಮರದ ತಿಮ್ಮಕ್ಕ ಬೆಳೆಸಿದ
ಮರ ಶ್ರೇಷ್ಠವೆನಿಸಿತು
ಮದ್ದು ಗುಂಡುಗಳ ಬೆಂಕಿಯಲಿ ಉಕ್ರೇನ್
ಬೂದಿಯಾಗುವಾಗ
ಹಸಿರ ಹುಲ್ಲಿನ ಓಕ್ ಮರದ ಇಬ್ಬನಿ
ಕಂಬನಿಯಲಿ ಆವಿಯಾಯಿತು
ಪೂರ್ವದಿಂದಲೂ ಮರಕ್ಕೂ ಮಹರ್ಷಿಗಳಿಗೂ ಅದೇನೋ ಸಾಂಗತ್ಯ
ಕಾಲಾನುಕ್ರಮದಲ್ಲಿ ಮರವು ಪಿಶಾಚಿಗಳ
ಮನೆಯಾಗಿತ್ತು
ಮನುಷ್ಯರಿಲ್ಲದ ಲೋಕದಲ್ಲಿ ಮರ
ಅರಸನಂತಿತ್ತು
ದಾನವರ ವಿಷಪ್ರಾಶನದಿಂದ ಮಸಣವಾದ
ನೆಲದಲ್ಲಿ ಬೀಜ ನೆಟ್ಟರೆ
ಬರೀ ಕೆಂಪು ದಾಸವಾಳವೇ ಹುಟ್ಟಿತು
ಭವಿಷ್ಯ ನುಡಿದ ತಾಳೇಗರಿಗಳು ಬೆಚ್ಚಿಬಿದ್ದಿವೆ
ಕೆಟ್ಟ ಗಾಳಿಯಿಂದ ಜನ ಪಟಪಟನೆ ಸಾಯುವಾಗ
ಮರದ ತಾಕತ್ತು ಗೊತ್ತಾಗಿತ್ತು
ಪಾರಿಜಾತ ಬೇಕೆಂದರೆ ಸ್ವರ್ಗಕ್ಕೆ ಹೋಗಬೇಕೆಂದಿಲ್ಲ
ಮನದ ಪೊರೆ ಕಳಚಿದರೆ ಸಾಕು..!
ಅಳಿವ ಮನೆಗಿಂತ
ಬೆಳೆವ ಮರ
ಭವಿಷ್ಯದ ರಾಯಭಾರಿಯಂತೆ
ಅಂತರಂಗದಿ ಅಗ್ನಿಯಿದ್ದರೂ ಜಗಕೆ
ಗಾಳಿಯನ್ನೇ ಕೊಡುವೆ
ನೀರಿಗೂ ಕರ ವಿಧಿಸಿದಂತೆ
ನನ್ನ ಸಂತತಿ ನಾಶವಾದರೆ
ಗಾಳಿಗೂ ಕರ ಕೊಟ್ಟು ಕರಗದಂತೆ
ಮೆರವಣಿಗೆ ಮಾಡಬೇಕಾದೀತು
ಶಂಕರರಾವ ಉಭಾಳೆ



