ಪುಸ್ತಕ ಸಂಗಾತಿ
ಡಾ.ರೇಣುಕಾ ನಾಗರಾಜ

ಶಿವಲೀಲಾ ಹುಣಸಗಿ
” ಬೇಲಿಯಾಚೆಗಿನ ಪಿಸುಮಾತು”
ಬೇಲಿಯಾಚಿನ ಪಿಸುಮಾತು
ಆಲಿಸಿದೆ ಆನಂದವಾಯ್ತು…..


ಬೇಲಿಯಾಚಿನ ಪಿಸುಮಾತು ಆಲಿಸಿದೆ ಆನಂದವಾಯ್ತು…..
ಕನ್ನಡ ಸಾಹಿತ್ಯದಲ್ಲಿ ಕಾವ್ಯ ಪರಂಪರೆಗೆ ಹೆಚ್ಚಿನ ಮಹತ್ವವಿದೆ. ಚಿಕ್ಕದಾಗಿ ಚೊಕ್ಕದಾಗಿ ಮೂಡಿಬರುವ ಕವನಗಳು ಎಲ್ಲರ ಮನವನ್ನು ಸೆಳೆಯುತ್ತವೆ. ಓದಬೇಕೆಂಬ ಕುತೂಹಲ ಮೂಡಿಸುತ್ತವೆ. ನನಗೂ ಕವನ ಸಂಕಲನಗಳನ್ನು ನೋಡಿದಾಗ ಓದಬೇಕು ಎನ್ನುವ ಹುಚ್ಚು ತುಸು ಹೆಚ್ಚೆನ್ನಬಹುದು. ಶಿರಸಿಯ ನೆಮ್ಮದಿ ಕುಟೀರದಲ್ಲಿ ಒಂದು ಸಾಹಿತ್ಯದ ಅವಲೋಕನ ಕಾರ್ಯಕ್ರಮದಲ್ಲಿ ಭೇಟಿಯಾದ ಶಿವಲೀಲಾ ಅಕ್ಕ ಪ್ರೀತಿಯಿಂದ ತಮ್ಮ ‘ಬೇಲಿಯಾಚಿನ ಪಿಸುಮಾತು’ ಕವನ ಸಂಕಲನವನ್ನು ನೀಡಿದಾಗ ಬಹಳ ಸಂತೋಷದಿಂದ ಅದನ್ನು ಸ್ವೀಕರಿಸಿದೆ. ಬೇಲಿಯಾಚಿನ ಪಿಸು ಮಾತು ಸಂಕಲನದ ಹೆಸರೇ ಬಹಳ ಆಕರ್ಷಿಸಿತು. ಸಂಕಲನವನ್ನು ಓದುವ ತನಕವೂ ಕಾಡಿದ್ದೂ ಸುಳ್ಳಲ್ಲ. ಏನಿರಬಹುದು ಬೇಲಿಯಾಚೆ….? ಪಿಸುಮಾತು ಆಲಿಸಲಾದೀತೆ….? ಕಿವಿಯಾನಿಸುವ ಮನಸ್ಸಾದದ್ದು ಹೌದು. ಯಾಕೆಂದರೆ ಆಧುನಿಕತೆ ಬೆಳದಂತೆಲ್ಲ ತನ್ನ ಸುತ್ತ ಒಂದು ಬೇಲಿಯನ್ನು ಹಾಕಿಕೊಂಡು ಅದರೊಳಗೆ ಅಡಿ ಇಡುವ ಮಾನವನ ಮನಸ್ಸು ಬೇಲಿ ಆಚೆಗೂ ಕೇಳಿ ಬರುವ ಪಿಸುಮಾತಿಗೆ ಕಿವಿಯಾನಿಸಿದರೆ ಏನಾದರೂ ಬದಲಾವಣೆಯಾದೀತೆ ಎನ್ನುವ ಭಾವ ಮೂಡಿದ್ದು ಹೌದು.
ಭಾವವು ಕ್ರಿಯೆಯಾಗಿ ಪುಸ್ತಕದ ಸುತ್ತ ಸುಳಿದಾಗ ಕಂಡಿದ್ದು ಮೊದಲೇ ಕಿವಿಯಾನಿಸಿ ಕವಿ ಮನಸಿನ ತುಮುಲಗಳಿಗೆ ಶ್ರೀ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಇವರು ಮುನ್ನುಡಿಯಲಿ ಲೇಖನಿ ಮೂಡಿಸಿಯಾಗಿತ್ತು. ಕಾವ್ಯಮಟ್ಟವನ್ನು ಕಾದುಕೊಂಡು, ಪ್ರೌಢಿಮೆಯನ್ನು ಉಳಿಸಿಕೊಂಡು, ವಸ್ತು ವಿಷಯಗಳ ಎಳೆ ಬಿಚ್ಚಿಡುವ ಕವಯಿತ್ರಿಯ ಕಾವ್ಯ ಚತುರತೆಗೆ ಅಭಿನಂದನೆ ದೊರಕಿತ್ತು. ಶ್ರೀ ಪ್ರಕಾಶ ಕಡಮೆಯವರ ಬೆನ್ನುಡಿ ಪಿಸುಮಾತಿಗೆ ಬಲವಾಗಿ ನಿಂತಿತ್ತು. ಭಾವನೆಗಳನ್ನು ಅಭಿವ್ಯಕ್ತಿಸುವ ಮೂಲಕ ಅವ್ಯಕ್ತ ಭಾವಜೀವಿಗಳಿಗೆ ಅರ್ಪಣೆಯಾದದ್ದು ಕವಿಯ ಕವಿತ್ವದ ತತ್ವ ಸತ್ವ ಎರಡನ್ನೂ ನಿರೂಪಿಸುತ್ತದೆ.
ಕೃತಿಯಲ್ಲಿ 53 ಕವಿತೆಗಳಿದ್ದು ಒಂದೊಂದನ್ನು ಓದುವಾಗಲೂ ಒಂದು ಭಾವ ಪ್ರಪಂಚ ತೆರೆದುಕೊಳ್ಳುತ್ತದೆ. ಶೀರ್ಷಿಕೆಯ ಆಕರ್ಷಣೆ ಒಂದೆಡೆಯಾದರೆ ಭಾವವನ್ನು ಬಿತ್ತರಿಸುವ ಕವಿತೆಯ ಬಗೆ ಇನ್ನೊಂದು ಕಡೆ. ಎರಡೂ ಸೇರಿ ಬಿಟ್ಟೂ ಬಿಡದಂತೆ ಓದಿಸಿಕೊಂಡು ಹೋಗುವ ಪರಿ ನಿಜಕ್ಕೂ ಸೋಜಿಗವೇ. ‘ನೀನಿಲ್ಲದಾ ಗಳಿಗೆ ‘ ಎನ್ನುವ ಕವಿತೆಯೊಂದಿಗಿನ ಆರಂಭ ಸೃಷ್ಟಿಯ ಮೂಲವೇ ಪ್ರೇಮ ಎನ್ನುವಂತೆ ನಲ್ಲನನ್ನು ಕಾಯುವ ನಲ್ಲೆಯ ಅಭಿವ್ಯಕ್ತಿ ಆಶಾಢ ಮಾಸದ ಮನದ ತಳಮಳವನ್ನು ಹೊರಹಾಕಿ ಮನವ ಹಗುರರಾಗಿಸುತ್ತದೆ.
‘ ನಿನ್ನ ಕೋಪ ತಾಪಕೆ ಒಗ್ಗಿದೆ ನನ್ನೆದೆಯು
ನೀನೆಷ್ಟು ಗುಡುಗಿದರೂ ಪ್ರೀತಿಸುವೆ ನಿನ್ನ’
ಎನುವ ‘ಮಳೆಯಾಗಿ ನೀ ಸುರಿದಂತೆಲ್ಲ ‘
ಕವಿತೆಯ ಸಾಲುಗಳು ನಲ್ಲನನ್ನು ಮಳೆಯಂತೆ ಭಾವಿಸಿ, ಅನುಭವಿಸಿ ಚಿತ್ರಿಸಿದ ಪರಿ ಮನಸ್ಸಿಗೆ ಬಹಳ ಹತ್ತಿರವಾಗುತ್ತದೆ. ಸುರಿವ ಮಳೆಯನೊಮ್ಮೆ ಬೈದು, ಅದಕಾಗಿಯೇ ಕಾಯುವ ಚಾತಕ ಪಕ್ಷಿಯಂತೆ ನೀ ಗುಡುಗಿದರೂ ಸಿಡುಕಿದರೂ ನಿನ್ನನೇ ಪ್ರೀತಿಸುವೆ ಎನುವ ಭರತ ಕುಲದ ಹೆಣ್ಣಿನ ಗುಣ ಮಣ್ಣಿನ ಗುಣ ಎರಡನ್ನೂ ಎರಕ ಹೊಯ್ದಂತೆ ನಲ್ಲ ನಲ್ಲೆಯರ ಪ್ರೀತಿಯನ್ನು ಕಾಮನಬಿಲ್ಲಿನ ರಂಗೋತ್ಸವದಲ್ಲಿ ಕಂಡ ಕವಿ ಮನಸಿನ ಹಾಡು ಗುನುಗುನಿಸುವಂತದ್ದು.
ಕಷ್ಟಗಳಿಗೆ ಕಟುವಾಗಿ ಪ್ರೇಮಕ್ಕೆ ಮೃದುವಾಗಿ
ಜಗದ ಏಳಿಗೆಯ ಹರಿಕಾರಳಾಗಿ
ದುಃಖ ದುಮ್ಮಾನಕೆ ಮೇರು ಪರ್ವತವಾಗಿ
ಧಿಕ್ಕರಿಸಿದವರೆದುರು ಬದುಕ ಕಟ್ಟಿದಾಕಿ ‘
ಜೀವಾಮೃತ ನೀನಮ್ಮಾ…..
ನಿಜ ಅಮ್ಮ ಅಂದರೆ ಲೋಕದ ಅದ್ಭುತವೇ ಹೌದು. ತನ್ನ ಬದುಕನ್ನು ಬದಿಗೊತ್ತಿ ತಾನು ಹೆತ್ತ ಮಕ್ಕಳ ಬದುಕಿಗಾಗಿ ಬದುಕುವ ಜೀವಾತ್ಮದ ಉಸಿರನ್ನು ನೆನೆಯುವ ಕವಿಯ ಚಿತ್ತದಲಿ ಮೂಡಿರುವ ಸಾಲುಗಳು ಮತ್ತೆ ಮತ್ತೆ ಓದುವಂತೆ ಮಾಡಿದ್ದು ಸುಳ್ಳಲ್ಲ.
ಪ್ರಕೃತಿಯೊಂದಿಗೆ ಕವಿಯ ನಂಟು ಇಂದಿನದಲ್ಲ ಹಿಂದಿನಿಂದಲೂ ಬೆಂಬಿಡದೆ ಬಂದಿದ್ದು. ಆದರೆ ನಂಟಿನೊಂದಿಗೆ ಜಾಗ್ರತೆಯ ಗಂಟು ಹಾಕಿದರೆ ಭವಿತವ್ಯ ಹಸಿರಾಗುವುದು, ಬದುಕು ಉಸಿರಾಡುವುದು ‘ಮತ್ತೇನ್ ಸುದ್ದಿ’ ಎನ್ನುವ ಕವಿತೆಯಲ್ಲಿ ಅರಳಿ ಬಂದಿದೆ. ತರಗೆಲೆಗಳ ಮೂಲಕ ತನ್ನ ಕಾಲ ಮುಗಿದರೂ, ತನ್ನವರ ಮುಂದಿನ ಬದುಕಿಗೆ ಮಣ್ಣಲ್ಲಿ ಮಣ್ಣಾದರೂ ನೂರು ಕನಸು ಹೆಣೆಯುವ,….
‘ಬಸವಳಿದ ಬದುಕಿಗೆ
ಪ್ರೀತಿಯೇ ಹಸಿರಿಂದು
ಈ ಸುದ್ದಿ ಗೊತ್ತಿದ್ದು ಗೊತ್ತಿಲ್ಲದಂತೆ ಮಣ್ಣಲಿ ಮಣ್ಣಾಗೋ ಮನಸಿಗೆ ಹೆಣೆದವು ನೂರು ಕನಸು ‘
ಸಾಲುಗಳು ಬಹಳ ಆಪ್ತವಾಗುತ್ತವೆ.ಸರಾಗವಾಗಿ ಕವಿಯ ಮನದಲ್ಲಿ ಹೊಳೆಯುವ ಹೋಲಿಕೆಗಳು ಕಿರಿದರಲ್ಲಿ ಹಿರಿದರ್ಥವನ್ನು ಕೊಡುವಂತಿವೆ.
‘ ಯುಗಗಳುರುಳಿದರೂ ಬದಲಾಗದ ಕಾರಿರುಳು
ಕರಿಬೇವು ಇಂಗು ಸಾಸಿವೆಯನೂ ಎಣ್ಣೆಯಲಿ ಸಿಡಿದಷ್ಟೇ ಹೊತ್ತು ‘
ಎನುವ ಸಾಲುಗಳು ಆಸ್ತಿರವಾದ ಬದುಕಿನ ಶೂನ್ಯತೆಯನ್ನು ಬಿತ್ತರಿಸುತ್ತ ಸಾಗುತ್ತವೆ. ಅತೃಪ್ತ ಮನಸಿನ ಬೇಗುದಿ ಭಾವವಾಗಿ ಹರಿದಂತೆ ಭಾಸವಾಗುತ್ತದೆ. ಅದು ಹೆಣ್ಣು ಮನಸು ಎನ್ನುವುದು ಸ್ಪಷ್ಟವಾದರೂ ಕೂಡ ಆಸ್ಪಷ್ಟವಾಗಿಯೇ ಇಟ್ಟು ಎಲ್ಲೂ ಅದನ್ನು ತೋರಗೊಡದ ಕವಿತೆ ಪ್ರತಿಯೊಬ್ಬ ಜೀವಿಯ ಬದುಕೂ ಹೀಗೆಯೇ ಅಂತ ಆಣಿಸುವ ಹಾಗೆ ಬಿತ್ತರಿಸಿದ ಕವಿಗೆ ಒಂದು ಸಲಾಂ.
‘ ಬೇಲಿಯಾಚಿನ ಪಿಸು ಮಾತು’ ಕವಿತೆಗೆ ಕಿವಿಯಾಗ ಹೊರಟರೆ ಕಾಣುವ ಸಾಲುಗಳು –
‘ಹೊತ್ತೊತ್ತಿಗೆ ಭತ್ತ ಕುಟ್ಟುತ
ಕುಂಟು ನೆಪ ಮಾಡಿಕೊಂಡು ಆಗಾಗ
ಮರೆಯಾಗುವ ಮರೀಚಿಕೆಯ ಆಲಿಂಗನ
ಅಯ್ಯೋ ಕನವರಿಕೆಗಳ ಜಾಡು ಬೇಲಿಯ ಸುತ್ತ ಮರುಗುಟ್ಟುವ ಪಿಸು ಮಾತಿನ ಪರಿಭಾಷೆ ಮುತ್ತಿಕೊಂಡು
ಬಣ್ಣ ಬದಲಿಸುವ ಓತಿಕ್ಯಾತದಂತೆ ಮನಸ್ಸು- ಮನಗಳ ನಡುವೆ
ಜೇಡ ಬಲ ಕಟ್ಟಿದಂತೆ
ಮಣ್ಣಿಗೆ ಹತ್ತಿರವಾದಂತೆ ‘ ಓದುತ್ತ ಹೋದಂತೆ ವಾಕ್ಯಾರ್ಥವೂ, ವಾಚ್ಯಾರ್ಥವೂ, ಭಾವಾರ್ಥವೂ ಮೇಳೈಸಿ ಹತ್ತು ಹಲವು ಅರ್ಥಗಳನ್ನು ತೋರುತ್ತ ಚಿಂತಾನವೂ ಮಂಥನವಾಗುವಂತೆ ಕಾಡುತ್ತದೆ.
ಭಾವಗಳಲ್ಲೇ ಕಳೆದುಹೋಗದ ಕವಿ ಮನಸು ನಾಡಿಗಾಗಿ ಮಿಡಿಯುವುದು ‘ ಯುದ್ಧಗಳು ಬೇಕೇ? ಎನ್ನುವುದರಲ್ಲೇ ಉತ್ತರ ದೊರೆಯುತ್ತದೆ.
‘ ಯುದ್ದಬೇಕೆ ನಮ್ಮೊಳಗೆ ಶಾಂತಿ ಕದಡಲು
ಪ್ರೀತಿ ಬಿತ್ತಿ ಬೆಳೆದವರು ಮಣ್ಣಾಗಿಹರು
ಪ್ರೀತಿ ಹೂ ಬಂದೂಕಿನ ತುಟಿಯಲ್ಲಿ ಅರಳಲಿ
ಶಸ್ತ್ರಾಸ್ತ್ರ ಪೈಪೋಟಿ ಮಣ್ಣಾಗಿದ್ದಷ್ಟು ಒಳಿತು….’
ಎನ್ನುವ ಸಾಲುಗಳು ದೇಶದ ಶಾಂತಿಗಾಗಿ ಏನಾಗಬೇಕು ಎನ್ನುವುದನ್ನು ಸಾರುತ್ತವೆ.
ಕಾಯಕವೇ ಕೈಲಾಸ ಎಂದು ಸಾರಿ ನೂರಾರು ವರ್ಷಗಳೇ ಉರುಳಿದರೂ ದುಡಿಯುವ ಕೈಗಳನ್ನು ಗೌರವಿಸುವ ಮಾನವೀಯತೆ ಇನ್ನೂ ಬೆಳೆದು ಬಂದಿಲ್ಲ ಎಂದು ದುಃಖಿಸುವ ಕವಿ ಹೃದಯದ ಸಾಲುಗಳಿಗೆ ಇನ್ನಾದರೂ ಅರ್ಥ ಬರಬೇಕು. ಅಂದಾಗಲೇ ಬರಹಕ್ಕೊಂದು ಸಾರ್ಥಕತೆ ಒದಗುವುದು ಕವಿಗೆ ಸಾಂತ್ವನ ದೊರೆಯುವುದು.
‘ ದಿನಗೂಲಿಯಾಗಿ ನಿಯತ್ತಾಗಿದ್ದವರಿವರು
ಕಸ,ಮಲ ಮೂತ್ರವೆತ್ತಿ ಹೇಸಿಗೆ ಪಡೆದವರು
ದುಡಿದು ತಿನ್ನುವುದು ಸ್ವಾಭಿಮಾನವೆಂದವರು
ಕೀಳಾಗಿ ಕಾಣದಿರಿ ಕಾರ್ಮಿಕ ಬಂಧುಗಳನು ‘
ಎನ್ನುವಲ್ಲಿ ಹತ್ತು ಹಲವು ಕಾಯಕಗಳಲ್ಲಿ ತೊಡಗಿಕೊಂಡ ಕಾರ್ಮಿಕರನ್ನು ಗೌರವಿಸೋಣ ನಮಿಸೋಣ ಎಂಬುದು ನಿಜಕ್ಕೂ ಸತ್ಯದ ಮಾತು. ಹೀಗೆ ಎಲ್ಲ ಕವಿತೆಗಳು ಸರಳತೆಯಿಂದ ಕೂಡಿದ್ದರು ಕಾಠಿಣ್ಯದ ಸಂದೇಶವನ್ನು ಹೊತ್ತು ತಂದು ನವಿರಾಗಿ ಮನಕೆ ತಲುಪಿಸುವ ಹೊಣೆಯನ್ನು ಹೊತ್ತು ನಿಂತತಿವೆ. ಸುಗ್ಗಿಯ ಸಂಭ್ರಮ, ಇನ್ನಾದರೂ ಚಿಂತಿಸಬೇಕಿದೆ, ದೀಪದೊಳಗೊಂದು ಬೆಳಗು, ಬತ್ತಿದ ಕಂಗಳು, ನಿನ್ನಾಗಮನದ ಹೊರತು, ಮನಸು ದಾರಿಗುಂಟ…. ಹೀಗೆಯೇ ಎಲ್ಲ ಕವಿತೆಗಳು ಕೂಡ ಮನವನ್ನು ತಟ್ಟಿ ಎಲ್ಲ ಭಾವಗಳನ್ನು ಗಟ್ಟಿಯಾಗಿ ಹಿಡಿದಿಡುತ್ತವೆ. ಈಗಾಗಲೇ ಹಲವು ಸಾಹಿತ್ಯ ಕಾಣ್ಕೆಗಳು ಸಾಹಿತ್ಯ ಪ್ರಪಂಚದಲ್ಲಿ ಹೆಸರು ಮಾಡಿವೆ. ಅದರಲ್ಲಿ ‘ಬೇಲಿಯಾಚಿನ ಪಿಸುಮಾತು ‘ ಕೂಡ ವಿಶಿಷ್ಟತೆಯೊಂದಿಗೆ ಒಡಮೂಡಿದೆ ಎಂದರೆ ತಪ್ಪಾಗಲಾರದು. ಹೀಗೆಯೇ ಶ್ರೀಮತಿ ಶಿವಲೀಲಾ ಹುಣಸಗಿರವರ ಲೇಖನಿಯಿಂದ ನೂರಾರು ಕೃತಿಗಳು ಇಳಿದು ಬರಲಿ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಲಿ ಎನ್ನುವ ಆಶಯದೊಂದಿಗೆ ಅಭಿನಂದನೆಗಳು
ಡಾ.ರೇಣುಕಾ ನಾಗರಾಜ




