ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನನಗಿನ್ನೂ ನೆನಪಿದೆ. ನನ್ನವಳನ್ನು ನಾನು ಮೊದಲು ನೋಡಿದ್ದು  ಸಾವಿರದೊಂಬೈನೂರಾ ತೊಂಬತ್ತೆಂಟರ ಆಷಾಢ ಏಕಾದಶಿ ದಿನದಂದು.  ಅಧಿಕೃತವಾಗಿ, ಅಂದ್ರೆ ಶಾಸ್ತ್ರೋಕ್ತವಾಗಿಯೇ ನೋಡಿದ್ದು. ಆವಾಗ ನಾವೆಷ್ಟೇ ಮುಂದುವರಿದವರಾಗಿದ್ದರೂ ಅಪ್ಪ-ಅಮ್ಮ ತೋರಿಸುವ ಕನ್ಯೆಯನ್ನು ನೋಡಬೇಕು,   ಮದುವೆಗೆ ಒಪ್ಪಿಗೆ ಸೂಚಿಸಬೇಕು.  ಆಯ್ಕೆಯ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವನ್ನು ನಮ್ಮಪ್ಪ ನಮಗೆ ನೀಡಿದ್ದರು, ಅನ್ನೋದಷ್ಟೆ ಖುಷಿಯ ವಿಚಾರ. ಇದೇ ಮನಸ್ಥಿತೀಲಿ ಆ ಏಕಾದಶಿ ದಿನ ಗದುಗಿಗೆ ಅಂಟಿಕೊಂಡಿರುವ ಬೆಟಗೇರಿಗೆ ನಮ್ಮ ಚಿಕ್ಕಪ್ಪನವರು ಒಂದು ಕನ್ಯೆ ತೋರಿಸಲು ನನ್ನನ್ನು ಕರೆದುಕೊಂಡು ಹೋಗಿದ್ದರು. ಹಳ್ಳಿಗರಾದ ನಮಗೆ ಗದಗು ದೊಡ್ಡದಾದ ಮತ್ತು ಚೆಂದದ ಪಟ್ಟಣದಂತೆ ಕಂಡಿತ್ತು. ನಾ ಮೊದಲು ಬಿದ್ದದ್ದು ಅಲ್ಲೆ…………. ಪಟ್ಟಣದ ಆಕರ್ಷಣೆಗೆ ಕಣ್ರೀ. ಅಲ್ಲಿಂದ ಬೆಟಗೇರಿಯ ನನ್ನವಳ ತವರು ಮನೆಗೆ ಕರೆದುಕೊಂಡು ಬಂದರು ನಮ್ಮ ಚಿಕ್ಕಪ್ಪನವರು. ಹಳೆಯದಾದರೂ ಅಚ್ಚುಕಟ್ಟಾದ ಮನೆ. ನಮ್ಮ ಅತ್ತೆ ಮಾವನವರಿಂದ ಸ್ವಾಗತ ದೊರೆಯಿತು. ನನ್ನ ಕಣ್ಣು ಏನನ್ನೋ ಹುಡುಕುತ್ತಿತ್ತು. ನಮ್ಮ ಚಿಕ್ಕಪ್ಪನವರು ಮತ್ತು ಹೆಣ್ಣು ಕೊಡಬೇಕಿರುವ ಮಾವನವರು ಮೊದಲೇ ಪರಿಚಿತರಿದ್ದರಲ್ಲವೇ ಉಭಯ ಕುಶಲೋಪರಿ, ಅದೂ….ಇದೂ ಮಾತಾಡ್ತಾ ಕುಳಿತರು. ಹುಡುಗಿಯನ್ನು ನೋಡಬೇಕೆನ್ನುವ ಕುತೂಹಲ ನನ್ನೊಳಗೆ ತವ ತವಕಿಸುತ್ತಿತ್ತು. ಅತ್ತ ಅವರ ಮಾತು ಮುಗಿಯಲೊಲ್ಲದು ಇತ್ತ ನನ್ನ ಚಿತ್ತದ ಚಡಪಡಿಕೆ….. ಹೇಗಾಗಿರಬೇಡ. ಕೊನೆಗೂ ನನ್ನ ತವಕ ಅವರಿಗೆ ಅರ್ಥವಾಯಿತೋ ಅಥವಾ ಅವರ ಮಾತುಗಳು ಮುಗಿದವೋ ಗೊತ್ತಿಲ್ಲ. ನನ್ನವಳ ನೋಡುವ ಮೊದಲ ಅವಕಾಶ ಬಂದೇ ಬಿಡ್ತು!

ಅವರ ಅಡುಗೆ ಮನೆಯ ಒಳಗಿನಿಂದ
ಹಳದಿ ಮತ್ತು ಗುಲಾಬಿ ಬಣ್ಣದ ಸುಂದರ ಸಮತೋಲಿತ ಮಿಶ್ರಣ ಹೊಂದಿದ ರೇಷ್ಮೆ ಸೀರೆಯಲ್ಲೊಂದು ನೀಳ್ಜಡೆಯ ಚೆಂದದ ಹುಡುಗಿಯೊಂದು ಬಂತು. ನಾನು ಮೊದಲು ನೋಡಿದ್ದು ಅವಳ ರೇಷ್ಮೆಯಂದದ ನೀಳ್ಜಡೆಯನ್ನು, ಹೊಳೆವ ಕಂಗಳನ್ನು ಮತ್ತು ನಿಷ್ಕಲ್ಮಶ ನಗುವಿನ ಹಿಂದಿನ ದಾಳಿಂಬೆ ಸಾಲುಗಳನ್ನು. ಮೊದಲ ನೋಟದಲ್ಲೇ ನಾನು ಬಿದ್ದೋದೆ. ನಮ್ಮ ಚಿಕ್ಕಪ್ಪ ಆ ಹುಡುಗಿಯನ್ನು ಮಾತನಾಡಿಸಿದರು.
“ಏನವಾ….. ತಂಗಿ ನಿನ್ ಹೆಸರೇನು?”
“ಭಾರತೀ……”
“ಹೆಸರೇಳಂದ್ರ ಹಿಂಗೇಳ್ಬಾರ್ದಮ ಹೆಸರು ತಂದೆ ಹೆಸರು ಅಡ್ಡ ಹೆಸರು ಹೇಳಬೇಕಮ್ಮಾ”
“ಭಾರತಿ ಬಸವರಾಜ ಗಿಡ್ನಂದಿ”……. ಹೀಗಂದ ಅವಳ ಇನಿದನಿ ನನ್ನ ಕರ್ಣಪಟಲದ ತುಂಬಾ ಆವರಿಸಿಕೊಂಡು ಬಿಟ್ಟಿತು….. ನಮ್ಮ ಚಿಕ್ಕಪ್ಪ ಮತ್ತೇನು ಕೇಳಿದರೋ……. ಅವಳೇನು ಹೇಳಿದಳೋ ಯಾರಿಗೆ ಬೇಕು ಅವಳ ಇನಿದನಿ ನನ್ನ ಕಿವಿಯೊಳಗೆ ಗುಂಯ್ ಗುಡುತ್ತಿದೆ ಅಷ್ಟು ಸಾಕು. ಮದುವೆ ಅಂತಾದರೆ ಇವಳನ್ನೇ, ಅಂತ ನಿರ್ಧರಿಸಿತು ನನ್ನ ಮನ. ಹೌದಪ್ಪಾ….. ಅವರು ನಿನಗೆ ಹೆಣ್ಣು ಕೊಡಲು ಒಪ್ಪಲಿಲ್ಲಾಂದ್ರೆ? ಏನ್ಮಾಡ್ತಿ?
ಛಾನ್ಸೇ ಇಲ್ಲ ನನ್ನ ರೂಪವನ್ನು ಯಾರೂ ತಿರಸ್ಕರಿಸಲಾರರು ಎಂಬ ಧೃಡತೆ, ಇದಕ್ಕೂ ಮಿಗಿಲಾಗಿ ನನಗೆ ಸರಕಾರಿ ನೌಕರಿ ಇತ್ತು!

ನಮ್ಮ ಚಿಕ್ಕಪ್ಪ ಆ ಹುಡುಗಿಯ ಇಂಟರ್ವ್ಯೂ ತಗೋಳದನ್ನು ಮುಗಿಸಿದರು. ಹುಡುಗಿಯನ್ನು ಒಳಗೆ ಕಳಿಸಲಾಯಿತು. ಖರೆನೆ ಅವರ ಮನೆಯೊಳಗಿನ ಕರೆಂಟ್ ಹೋದಂತಾಯ್ತು. ಮತ್ತೆ ಆ ರೂಮಿನಲ್ಲಿ ನನ್ನ ಮೌನದ ಸುತ್ತ ಅವರ ಮಾತುಗಳು. ಹೋಗಿದ್ದ ಕರೆಂಟ್ ಮತ್ತೆ ಬಂತು. ಅದೇ ಹುಡುಗಿ ಒಂದು ಟ್ರೇ ನಲ್ಲಿ ಎಲ್ಲರಿಗೂ ತಿಂಡಿ ತಂದಿದ್ದಳು. ಸೊಗಸಾದ ಅವಲಕ್ಕಿ ವಗ್ಗರಣೆ! ವಾಹ್….. ಅದರ ರುಚಿ! ಅವಲಕ್ಕಿಯನ್ನು ಎಲ್ಲರಿಗೂ ಕೊಡುತ್ತಾ ಆ ಹುಡುಗಿ ನನಗೆ ಕೊಡುವಾಗ ಸ್ಬಲ್ಪ ಬಾಗಿದ್ದಳು ಅವಳ ನುಣುಪು ನೀಳ್ಜಡೆ ಸರಕ್ಕನೆ ಮುಂದೆ ಬಂದು ನಾಟ್ಯ ಮಾಡಲು ಶುರುಮಾಡಿತು. ಆ ಕೇಶ ನೃತ್ಯದ ಜೊತೆ ಅವಳ ಸೊಗಸಾದ ನಗುವಿನ ನೋಟದೊಂದಿಗೆ ಬೆರೆತ ದುಂಡುಮಲ್ಲಿಗೆ ಘಮ!  ನಾನು ಕಳೆದು ಹೋಗಲು ಇನ್ನೇನು ಬೇಕು? ನನ್ನೆದೆ ಢವ ಢವ ಅನ್ನೋದನ್ನ ಬಿಟ್ಟು ಇವಳೇ ಫಿಕ್ಸು…. ಇವಳೇ ಫಿಕ್ಸು ….. ಅನ್ನತೊಡಗಿತ್ತು. ಹುಡುಗಿ ಅವಲಕ್ಕಿ ಕೊಟ್ಟು ಅಡುಗೆ ಮನೆ ಸೇರಿತು. ಮತ್ತೆ ಕರೆಂಟ್ ಹೋಯಿತು. ಛೇ…. ಅವಲಕ್ಕಿ ರುಚಿಸುತ್ತಿಲ್ಲ. ಹೆಂಗೂ ಚಹ ಕೊಡಲು ಬರಬೇಕಲ್ಲ….? ಅದೇ ಆಸೆಯಿಂದ  ಅವಲಕ್ಕಿ ಯನ್ನು ಗಬಗಬನೆ ತಿಂದೆ. ನಮ್ ಚಿಕ್ಕಪ್ಪ,
“ಎಷ್ಟು ಜಲ್ದೀ ಅವಲಕ್ಕಿನ ತಿಂದ್ಯೋ….” ಅಂದ್ರು. ನನ್ನ ಅವಸರ ಅವರಿಗೇನು ಗೊತ್ತು. ಸುಮ್ನೆ ನಾನು, “ಹಿ…ಹಿ…ಹಿ” ಅಂತ ಹಲ್ಲು ಕಿಸಿದೆ. ನನಗೆ ಚಹ ತರುವ ನೆಪದಲ್ಲಿ ಕರೆಂಟ್ ಬರಬೇಕಿತ್ತು, ಆದ್ರೆ ಈ ಬಾರಿ ಪವರ್ ಕಟ್….. ಕರೆಂಟ್ ಬರಲಿಲ್ಲ. ನಮ್ಮತ್ತೆ ಚಹಾ ತಗೆದುಕೊಂಡು ಬಂದ್ರು. ಸಿಹಿ ಚಹಾ ಸಪ್ಪೆ ಸಪ್ಪೆ. ನನ್ನ ಮುಖವೂ…..
ಮುಂದೇನಾಯಿತು ಸಧ್ಯದಲ್ಲೇ ಹೇಳುವೆ.


About The Author

Leave a Reply

You cannot copy content of this page

Scroll to Top