ಕಾವ್ಯ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್
“ಒಲವಮುಖಗಳು”


1
ಹೊಳಿ ಮಗ್ಗುಲ ಕಲ್ಲು
ಚಿಗುರದು, ಒಣಗದು
ನೀನಿದ್ದೂ ನನ್ನಂತೆ..!
2
ರೆಕ್ಕೆ ನಂಬಿ ಹೊಂಟ ಹಕ್ಕಿ…ಒಲವು
ನಿನ್ನನ್ನೇ…ನಂಬಿದೆ
ಮರದ ಕೊಂಬೆ ಬೇಕೀಗ…
3
ಸಿಮೆಂಟು ರೋಡೇ ಎರಡು
ತಿಂಗಳಿಗೆ ಸೀಳಿದೆ…ಒಲವಿಗೀಗ
ವ್ಯಾಲಿಡಿಟಿ ಕಡಿಮೆ ಅಂತಿದ್ರಪ..
4
ಹಣದ ಹಿಂದೆ ಗಿರಕಿ ಹೊಡೆವ
ಜಗತ್ತಿಗೆ ಒಲವಿನ
ಭಾಷೆ ಹೊಸದು; ಕಾಗುಣಿತದ ಅರಿವಿಲ್ಲ
5
ಅವ್ವ ಮುನಿಸಿಕೊಂಡಾಗೆಲ್ಲಾ
ಅಪ್ಪ ತುತ್ತು ಜಾಸ್ತಿ ಉಣ್ತಿದ್ದ;
ಒಲವಿಗೆ ಹೊಸ ವ್ಯಾಖ್ಯಾನ ಅಂತ ಅವ್ವನ ಸಮಜಾಯಿಷಿ!
6
ಮಸಣ ದೂರ ಕಣೋ ಇಲ್ಲಿಂದಲೇ ಹೂ
ಒಗೆವೆ ದಾರಿಯಲ್ಲಿ
ಜೊತೆಗಿದ್ದೇನೆ ಅಂದುಕೋ ಒಲವ ಹುಡುಗಾ..
7
ಬೆರಳು ಸೋಕದೆಯೂ ಒಲವ ಉಣಬಡಿಸಿದ
ರಾಜಕುಮಾರನೆದುರು
ಮೇಲೆ ಬಿದ್ದು ಹೊರಳಾಡಿದ ಈಗಿನ ಪ್ರೀತಿ ಸಪ್ಪೆ
ಸಂತೆಬೆನ್ನೂರು ಫೈಜ್ನಟ್ರಾಜ್



