ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ನೀನು ಮಳೆ, ನಾನು ನವಿಲು,
ನಿನ್ನ ನಗು ಹೊನ್ನ ಹೊಳಪು;
ನೀಲಿ ಹಸಿರು ಗರಿಯ ತುಂಬ
ನಿನ್ನ ಒಲವ ರೇಷ್ಮೆ ಒನಪು.

ಹನಿಯ ಗೆಜ್ಜೆ ಮಣ್ಣಿಗೆ ತಾಗಿ,
ಅದರ ತಾಳಕೆ ನಾನು ಕುಣಿದೆ;
ನೀನು ನಗುತ್ತ ನೋಡಿದಾಗ
ಗರಿಯ ನೆರಳಲಿ ಜಾಗ ಕೊಟ್ಟೆ.

ಕೃಷ್ಣನ ಮುಡಿಯ ನೀಲಿ ಗರಿಯಂತೆ
ನಿನ್ನ ಮನದಿ ನೆಲೆ ಬಯಸಿದೆ;
ನಿನಗಾಗಿ ತಂದ ನವಿಲಗರಿಯ
ಕೊಡಲು ಕೈಯಲ್ಲಿ ಹಿಡಿದು ನಿಂತೆ.

ಹೇಳಬೇಕಿದ್ದ ಮಾತು ಉಳಿಯಿತು,
ಚಾಚಬೇಕಿದ್ದ ಕೈ ಮುದುಡಿತು;
ಮೋಡದಂತೆ ನೀನು ಸರಿದೆ,
ನನ್ನ ಹಾಡಲಿ ನಾನೇ ಉಳಿದೆ.

ಪುಸ್ತಕದಲಿ ಹೊನ್ನಂಚಿನ ಗರಿಯಿಟ್ಟು
ಮರಿ ಬರುವುದೆಂದು ಕಾದೆ;
ಪುಟ ತೆರೆದು ಗರಿಯ ಸವರಿ
ನೀನು ಬರುವ ಕನಸು ಕಂಡೆ.

ಮರೆಯಲೆಂದು ಮಧು ಹಿಡಿದೆ,
ಹೊರಗೆ ಮಳೆಹನಿಯ ಸದ್ದು;
ನೀನು ಬಂದೆಯೆಂದು ತಿರುಗಿದೆ
ಬಾಗಿಲಲ್ಲಿ ಗಾಳಿಯ ಗುದ್ದು.

ಮತ್ತೆ ಮಳೆ, ಮತ್ತೆ ಕುಣಿತ,
ನೀನು ನಿಂತ ಜಾಗ ಮಾತ್ರ ಖಾಲಿ;
ಪುಸ್ತಕ ಮುಚ್ಚಿ ಎದೆಗೊತ್ತಿಕೊಂಡೆ
ಒಳಗೆ ಇನ್ನೂ ಮುರಿದ ಗರಿ.

ಮೊದಲ ಹನಿಗೆ ಗರಿ ತೆರೆದೆ,
ನಿನ್ನ ನೆನಪಿಗೆ ಕಣ್ಣು ತುಂಬಿ;
ಮಳೆ ನಿಂತ ಮೇಲೂ ಒದ್ದೆ
ನೀನು ಮುಡಿಯದ ನವಿಲಗರಿ.

About The Author

Leave a Reply

You cannot copy content of this page

Scroll to Top