ಕಾವ್ಯ ಸಂಗಾತಿ
ಡಾ. ಪುಷ್ಪಾವತಿ ಶಲವಡಿಮಠ
“ಯುದ್ಧ ಮತ್ತು ಅವಳು”


ಅವಳೆಂದೂ ಯುದ್ಧಕ್ಕಿಳಿಯಲೇ ಇಲ್ಲ
ಶಸ್ತ್ರಗಳನೆoದೂ ತೊಡಲಿಲ್ಲ
ಶತಶತಮಾನಗಳಿಂದ ಅವಳನು ಸೋಲಿಸಬೇಕೆಂಬ
ಅವರ ದಾಹ ಮಾತ್ರ ತಣಿಯುತ್ತಿಲ್ಲ
ಹೂಮೊಗ ತೊಟ್ಟು
ಅವರು ಇರಿಯಲು ಬರುತ್ತಾರೆ
ಅವಳೋ ಬಂದವರಿಗೆ
ಹೂ ಹಾಸುತ್ತಾಳೆ,ದಣಿವಾರಿಸುತ್ತಾಳೆ
ಜೋಗುಳ ಹಾಡುತ್ತಾಳೆ, ನೆರಳಾಗುತ್ತಾಳೆ
ಆದರೂ….
ಕತ್ತರಿಸಬೇಕೆಂಬ ಅವರ ದಾಹ ತಣಿಯುತ್ತಿಲ್ಲ
ಅವರು ಕತ್ತರಿಸುತ್ತಾರೆ
ಅವಳೆಲ್ಲೋ ಮತ್ತೆ ಚಿಗುರುತ್ತಾಳೆ
ವಿಸ್ಮಯವಿದು!
ಮತ್ತೆಲ್ಲೋ ಹೂವಾಗಿ ಅರಳುತ್ತಾಳೆ
ತುಂಡರಿಸಿದರೂ ತಮ್ಮಿಂದ ಬೇರ್ಪಡಿಸಿದಾಗಲೂ
ಅವಳು ಅಖಂಡವಾಗುತ್ತಾಳೆ
ಪರಿಪೂರ್ಣಳಾಗುತ್ತಾಳೆ
ಅವಳೆಂದೂ
ರಣಭೂಮಿಗಿಳಿಯಲೇ ಇಲ್ಲ
ಮರಭೂಮಿಯನು ಹಸಿರಾಗಿಸುವ ಧಾವಂತದಲ್ಲಿದ್ದಾಳೆ
ಅವರಾದರೋ ಯುದ್ಧಕ್ಕೆ
ಕರೆಯುತ್ತಲೇ ಇದ್ದಾರೆ
ಶಸ್ತ್ರಸ್ತ್ರ ಹಿಡಿದು ಬರುತ್ತಲೇ ಇದ್ದಾರೆ
ಅವಳೋ ಶಸ್ತ್ರಗಳನ್ನೇ ಮುದ್ದಿಸಿ
ಯುದ್ಧ ಮುಗಿಸಿ ಬಿಡುತ್ತಾಳೆ
ಅಹಂಗಾಗಿ ಪ್ರತಿಷ್ಠೆಗಾಗಿ
ಸೋಲಿಸುವ – ಗೆಲುವ
ಈ ಯುದ್ಧ ನಡೆಯುತ್ತಲೇ ಇದೆ
ಗೆಲ್ಲಲೇಬೇಕೆಂಬ ಹಠದಿಂದ
ಅವರು ಸೋಲುತ್ತಲೇ ಇದ್ದಾರೆ…
ಅವಳು ಮಾತ್ರ ಸೋಲುತ್ತಲೇ ಗೆಲ್ಲುತ್ತಿದ್ದಾಳೆ….
ಅವಳೆಂದೂ ಯುದ್ಧಕ್ಕಿಳಿಯಲೇ ಇಲ್ಲ…..
ಡಾ. ಪುಷ್ಪಾವತಿ ಶಲವಡಿಮಠ



