ಪುಸ್ತಕ ಸಂಗಾತಿ
ಬಸವರಾಜ ಹೊನಗೌಡರ

ಗಂಗಾದೇವಿ ಚಕ್ರಸಾಲಿ
“ಸೇದಿ ಬಾವಿ”


ಉತ್ತರ ಕರ್ನಾಟಕದ ವಿಶಿಷ್ಟ ಭಾಷೆಯನ್ನು ಸಮರ್ಥವಾಗಿ ಬಳಕೆ ಮಾಡಿ, ದಿನನಿತ್ಯದ ನಮ್ಮ ನಡೆಯುವ ಘಟನೆಗಳನ್ನು ಸುಂದರವಾಗಿ, ಮನಮುಟ್ಟುವಂತೆ ಕಥೆ ಹೆಣೆಯುವ ಕಲೆಯನ್ನು ಶ್ರೀಮತಿ ಗಂಗಾದೇವಿ ಚಕ್ರಸಾಲಿಯವರ ಎರಡನೇ ಕೃತಿ, “ಸೇದಿ ಬಾವಿ” ಕಥಾಸಂಕಲನದಲ್ಲಿ ನೋಡಬಹುದು. ಸುಮಾರು 110 ಪುಟಗಳ, 12 ಕತೆಗಳನ್ನೊಳಗೊಂಡ ಮಿಂಚುಳ್ಳಿ ಪ್ರಕಾಶನದಲ್ಲಿ ಮೂಡಿಬಂದಿದೆ. ಈ ಕಥಾಸಂಕಲನ ಕನ್ನಡ ಓದುಗರಿಗೆ ಒಂದು ವಿಶಿಷ್ಟ ಅನುಭವ ನೀಡುತ್ತದೆ.
ಇಲ್ಲಿ ಪ್ರತಿಯೊಂದು ಕತೆಯು ಜೀವನ್ಮುಖಿಯಾಗಿದೆ, ಒಂದಿಷ್ಟು ಸಮಾಜಕ್ಕೆ ಸಂದೇಶ ನೀಡುತ್ತವೆ. ಮೊದಲನೆಯ ಕಥೆ ‘ಅರುಂಧತಿ’ ಯಲ್ಲಿ, ಇಂದಿನ ದಾಂಪತ್ಯ ಜೀವನವು ಅಧುನಿಕ ಕೆಲಸದ ಜಂಜಾಟಗಳಲ್ಲಿ ತನ್ನ ಮಹತ್ವ ಕಳೆದುಕೊಳ್ಳುತ್ತಿರುವುದನ್ನು ಅರುಂಧತಿ ಮತ್ತು ಅಜಯ ಪಾತ್ರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇಬ್ಬರೂ ಹೊರಗೆ ದುಡಿಯುವ ದಂಪತಿಗಳಲ್ಲಿ ಸಮಾನತೆಯ ಪರಿಕಲ್ಪನೆ ಇದ್ದರೆ, ಒಬ್ಬರನ್ನೊಬ್ಬರು ಗೌರವಿಸಿದರೆ ಮಾತ್ರ ದಾಂಪತ್ಯ ಚಕ್ರ ಮುಂದೆ ಸಾಗುತ್ತದೆ. ಅಲ್ಲಿ ನಾನು ಹೆಚ್ಚು ನೀನು ಕಡಿಮೆ ಎಂಬ ಅಹಂ ಅಡ್ಡ ಬಂದರೆ ಸಂಸಾರ ಒಡೆಯುವುದನ್ನು ಈ ಕತೆಯಲ್ಲಿ ನೋಡಬಹುದು. ಅರುಂಧತಿ ತನ್ನ ಹಾಳಾದ ಸಂಸಾರವನ್ನು ಸರಿ ದಾರಿಗೆ ತರಲು ಮಾಡುವ ಪ್ರಯತ್ನ ತಡವಾಗುತ್ತದೆ, ಅಷ್ಟರಲ್ಲಿ ಅಜಯ ಮತ್ತೊಬ್ಬಳನ್ನು ಕಟ್ಟಿಕೊಂಡಿರುತ್ತಾನೆ. ಇಲ್ಲಿ ಅರುಂಧತಿಯ ಆಂತರಿಕ ತುಮುಲಗಳನ್ನು ನೋಡಬಹುದು. ಕತೆಯಲ್ಲಿ ಬರುವ ಸಾಲುಗಳು “ಅರುಂಧತಿಗೆ ಗಂಡಸರೆಂದರೆ ಸ್ವಾರ್ಥಿಗಳು ಎಂಬ ಅಭಿಪ್ರಾಯ ಅಚ್ಚೊತ್ತಿ ಬಿಟ್ಟಿತ್ತು. ಅಜಯ್ ನ ತರಹವೇ ಎಲ್ಲ ಗಂಡಸರು ಇರುತ್ತಾರೆ ಎಂದುಕೊಂಡೇ ಗಂಡಸರೊಂದಿಗೆ ಅವಳು ವ್ಯವಹರಿಸುತ್ತಿದ್ದಳು” ಅವಳ ಪೂರ್ವಾಗ್ರಹ ಪೀಡಿತ ಮನಸ್ಸೇ ಅವಳ ನೆಮ್ಮದಿಯನ್ನು ಹಾಳು ಮಾಡಿತ್ತು.
“ಕಪ್ಪು ಹುಡುಗಿ” ಕಥೆ ಸಮಾಜದ ಅಂಕುಡೊಂಕಿಗೆ ಉದಾಹರಣೆಯಾಗಿ ನಿಲ್ಲುತ್ತದೆ. ಅವಳು ಕಪ್ಪುಹುಡುಗಿ, ಅವಳ ಹೆಸರು ಶ್ವೇತಾ. ಕಥೆಯಲ್ಲಿ ಕಪ್ಪು ಬಿಳಪುಗಳ ಸಂಘರ್ಷ ಕಾಣಬಹುದು. ಕಥೆಗಾರ್ತಿಯೇ ಹೇಳಿರುವ ಸಾಲುಗಳನ್ನು ನೋಡಬಹುದು “ಆರ್ಯರು ಬಿಳಿಯರು, ದ್ರಾವಿಡರು ಕಪ್ಪು, ದೇವರುಗಳು ಬಿಳಿ, ರಾಕ್ಷಸರು ಕಪ್ಪು. ಅಂದರೆ ಬಿಳಿ ಎಂದರೆ ಶ್ರೇಷ್ಠ, ಉತ್ತಮ ಗುಣ ಮೊದಲಿಂದಲೂ ಇದೆ. ಕಪ್ಪು ಎಂದರೆ ಅಶುಭ, ಕೆಟ್ಟ, ಕಡಿಮೆ ಹೀಗೆ ಅನಾವರ್ಥಕಗಳು ಬೆಳೆದುಕೊಂಡೇ ಬಂದಿವೆ” ಶ್ವೇತಾಳ ನೋಡಲು ಬರುವ ಹುಡುಗರು ಅವಳ ಗುಣ ನೋಡದೇ ಕೇವಲ ಬಣ್ಣವನ್ನು ನೋಡಿ ಮದುವೆಗೆ ಒಪ್ಪುತ್ತಿರಲಿಲ್ಲ. ನಂತರ ಅವಳು ದೊಡ್ಡ ಅಧಿಕಾರಿಯಾಗುತ್ತಾಳೆ ಮತ್ತೊಬ್ಬ ಅಧಿಕಾರಿ ಅವಳನ್ನು ಮದುವೆಯಾಗುತ್ತಾನೆ.
ಲೇಖಕಿ ಸ್ವತಃ ಶಿಕ್ಷಕಿಯಾಗಿರುವುದರಿಂದ “ಕಲ್ಲೇಶಿ” ಎಂಬ ಕಥೆಯಲ್ಲಿ ಅವರು ನೋಡಿದ, ಅನುಭವಿಸಿದ ಘಟನೆಗಳು ಕಥೆಯಲ್ಲಿ ಮೂಡಿಬಂದಿರಬಹುದು. ಇದರಲ್ಲಿ ಕಲ್ಲೇಶಿನ ಪಾತ್ರ ಇಂದಿನ ಶಿಕ್ಷಣ ಪದ್ದತಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಅವನಿಗೆ ಇಷ್ಟವಿಲ್ಲದ ಕಲಿಕೆಯನ್ನು ಒತ್ತಾಯಪೂರ್ವಕವಾಗಿ ಕಲಿಸುವುದರಿಂದ ಶಿಕ್ಷಣದಿಂದ ಮತ್ತಷ್ಟು ವಿಮುಖನಾಗುತ್ತಾನೆ. “ಇಂದಿನ ಶಿಕ್ಷಣ ವ್ಯವಸ್ಥೆ ಏನಾಗಿದೆ. ಅಂಕಗಳಿಕೆಯೊಂದೇ ಪ್ರತಿಯೊಬ್ಬರಿಗೂ ಆದ್ಯತೆಯಾಗಿದೆ. ಅಂಕಗಳಿಕೆಯ ಪಂದ್ಯದಲ್ಲಿರುವವರು ಯಾರು? ಶಿಕ್ಷಣ ಇಲಾಖೆ… ಶಿಕ್ಷಕರು ಪಾಲಕರು… ಇಂದಿನ ಬದಲಾದ ಸಮಾಜ ವ್ಯವಸ್ಥೆ…. ಬದಲಾದ ವೃತ್ತಿಗಳು…. ಯಾವುದರ ಮೇಲೆ ಆಪಾದನೆ ಮಾಡಲು ಸಾಧ್ಯ?” ಹೀಗೆ ಕಥೆಯಲ್ಲಿ ಬರುವ ಸಾಲುಗಳು ಇಂದಿನ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿವೆ. “ಕುಲ ಮರ್ಯಾದೆ” ಕತೆಯಲ್ಲಿ ಕಥಾನಾಯಕ ಹಾಗೂ ಕಥಾನಾಯಕಿ ಬೇರೆ ಬೇರೆ ಜಾತಿಯವರು ಹೀಗಾಗಿ ಮದುವೆಗೆ ಹುಡುಗಿಯ ಮನೆಯಲ್ಲಿ ಒಪ್ಪಿಗೆ ಸಿಗದೇ ಅವಳು ಅನುಮಾನಾಸ್ಪದ ರೀತಿಯಲ್ಲಿ ಸಾಯುತ್ತಾಳೆ. ಕಾಲೇಜಿನ ವಯಸ್ಸಿನಲ್ಲಿ ಸಹಜವಾಗಿ ಮೂಡುವಂತೆ ಪ್ರೀತಿ ಮೂಡಿರುತ್ತದೆ. ಆದರೆ ಜಾತಿಯ ಗೋಡೆ ಅಡ್ಡ ಬಂದು ಕಥಾನಾಯಕಿ ಸಾವಿನಿಂದ ಕಥೆ ಕೊನೆಗೊಳ್ಳುತ್ತದೆ. ಕಲ್ಲೇಶಿ ಕಥೆಯಂತೆ “ನಾಣಿ” ಯ ಕಥೆಯು ಸಹ ಒಂದು ಮುಗ್ಧ ಹುಡುಗನ ಅಕ್ಷರ ಕಲಿಯಲು ನಡೆಸಿದ ಹೋರಾಟ, ಅವನ ದೈಹಿಕ ನ್ಯೂನತೆಗಳಿಂದ ಎಲ್ಲರಿಗೂ ಜೋಕರ್ ನಂತಾಗಿದ್ದು ಓದುಗರಿಗೆ ನಾಣಿಯ ಬಗ್ಗೆ ಅನುಕಂಪ ಮೂಡುವಂತೆ ಮಾಡುತ್ತದೆ.
“ಮಡಿಲ ಕೆಂಡ” ಕಥೆಯು ಇಂದು ಮುಂದುವರೆದ ಸಮಾಜವು ಸಹ ಮಕ್ಕಳಾಗದೇ ಇದ್ದರೆ ಅದಕ್ಕೆ ಸ್ತ್ರೀ ಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇಲ್ಲಿಯೂ ಸಹ ಹೆಂಡತಿ ತನಗೆ ಮಕ್ಕಳು ಆಗದಿದ್ದಕ್ಕೆ ತಾನೆ ಕಾರಣವೆಂದು ತಿಳಿದು ತನ್ನ ಗಂಡನಿಗೆ ತನ್ನ ತಂಗಿಯ ಜೊತೆ ಮದುವೆ ಮಾಡಿಸುತ್ತಾಳೆ. ಆದರೆ ತಾನೇ ಮತ್ತೊಬ್ಬನಿಗೆ ಬಸುರಾಗುತ್ತಾಳೆ. ಇದನ್ನು ಗಂಡನಿಗೆ ಹೇಳಲಾಗದೇ ಒದ್ದಾಡುತ್ತಾಳೆ. “ಸೇದಿಬಾವಿ” ಕತೆಯಲ್ಲಿ ಗುರುಬಸಪ್ಪ ಹಾಗೂ ಸೇದಿಬಾವಿ ಅವಿನಾಭಾವ ಸಂಬಂಧದ ಬಗ್ಗೆ ಹೇಳುತ್ತಾ ಎರಡು ಮೂರು ತಲೆಮಾರುಗಳ ಬದಲಾವಣೆಯನ್ನು ಹೇಳಿದ್ದಾರೆ. ಕನ್ನಡದಿಂದ ಇಂಗ್ಲೀಷ್ ಮೀಡಿಯಂ, ಬಾವಿ ನೀರಿನಿಂದ ನಳದ ನೀರು ಹೀಗೆ ಸಾಕಷ್ಟು ಬದಲಾವಣೆಯಾದರೂ ಕೊನೆಗೆ ಒಂದಿಷ್ಟು ಅಂಶಗಳು ಹಳೆಯದರ ಕಡೆಗೆ ವಾಲುವುದನ್ನು ಕಥೆಯಲ್ಲಿ ನೋಡಬಹುದು.
ಇದೇ ರೀತಿ ಇನ್ನುಳಿದ ಕಥೆಗಳಾದ ಶರಣ, ಕಲ್ಯಾಣ ಜಂಕ್ಷನ್, ದೇವಮ್ಮಜ್ಜಿ ಮತ್ತು ಮನೆ ಕತೆಗಳು ಓದುಗರನ್ನು ಕಾಡುತ್ತವೆ. ಎಲ್ಲಾ ಕತೆಗಳು ಭಾಷೆಯ ಪ್ರಯೋಗದಿಂದ ಶಕ್ತಿಶಾಲಿಯಾಗಿವೆ. ಹೆಚ್ಚಿನ ಕಥೆಗಳು ಗ್ರಾಮೀಣ ಭಾಗದ ಕಥಾವಸ್ತು ಹೊಂದಿವೆ. ಇಂದಿನ ಸಮಾಜ ಹಾಗೂ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಕಥೆಗಾರರು ಮಾಡಿದ್ದಾರೆ. ಇವರ ಸಾಹಿತ್ಯ ಕೃಷಿ ಹೀಗೆಯೇ ಬೆಳೆಯಲೆಂದು ಆಶಿಸುತ್ತೇನೆ.
ಬಸವರಾಜ ಹೊನಗೌಡರ




