ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಸರ್ವಮಂಗಳ ಜಯರಾಂ

ಅವರ ಗಜಲ್ ಗಳಲ್ಲಿ ಬಂಧುತ್ವ

ಎಲ್ಲರಿಗೂ ನಮಸ್ಕಾರಗಳು, ಎಲ್ಲರೂ ಸೌಖ್ಯವಾಗಿರುವಿರಿ ಎಂಬ ಭಾವದೊಲವಿನೊಂದಿಗೆ ತಮ್ಮ ಮುಂದೆ ಗಜಲ್ ಗಂಗೆ ಸಮೇತ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಬಂದಿರುವೆ, ಅದೂ ಗಜಲ್ ಬಾನಂಗಳ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಏನಿದ್ದರೂ ಇವಾಗ ಗಜಲಯಾನ…

“ನೆನಪಿರಲಿ ಅವನಿಗೂ ಒಂದು ಅಪೂರ್ಣ ಕಥೆಯಾದರೂ ಇರಬೇಕು.
ಅವನು ನಿನ್ನೆ ದಾರಿಯಲ್ಲಿ ನನ್ನನ್ನು ಗುರುತಾದರೂ ಹಿಡಿದಿರಬೇಕು”
-ಜಾವೇದ್ ಅಕ್ತರ್

        ಭಾಷೆಯು ಅನುವಂಶಿಕ ಕೊಡುಗೆಯಲ್ಲ, ಅದು ಸಾಮಾಜಿಕ ಕೊಡುಗೆಯಾಗಿದೆ. ಹೊಸ ಭಾಷೆಯನ್ನು ಕಲಿಯುವುದು ಬದುಕಿನ ಫಲಶೃತಿ. ಕಲಿಕೆ ಒಂದು ನಿಧಿಯಾಗಿದ್ದು ಅದು ತನ್ನ ಯಜಮಾನನ್ನು ಎಲ್ಲೆಡೆಯೂ ಅನುಸರಿಸುತ್ತದೆ. ಯಾವುದೇ ಸಮಯದಲ್ಲಿ ಬೇರೆ ಭಾಷೆಗಳು ವಿಚಿತ್ರವಾಗಿವೆ ಎಂದು ನಾವು ಭಾವಿಸಲೇಬಾರದು. ಹಾಗೆ ಒಂದು ವೇಳೆ ಭಾವಿಸಿದರೆ ನಮ್ಮ ಜ್ಞಾನದ ಕ್ಷಿತಿಜ ಸಂಕುಚಿತಗೊಳ್ಳುತ್ತದೆ. ಭಾಷೆಗಳ ಜ್ಞಾನವು ಬುದ್ಧಿವಂತಿಕೆಯ ದ್ವಾರವಾಗಿದೆ. ನಮಗೆ ಎಷ್ಟು ಎಷ್ಟು ಭಾಷೆಗಳು ಬರುತ್ತವೆಯೋ ಅಷ್ಟಷ್ಟು ಜ್ಞಾನದ ದ್ವಾರಗಳು ನಮಗಾಗಿ ತೆರೆದುಕೊಳ್ಳುತ್ತವೆ. ಅಂತೆಯೇ “ಭಾಷೆಯನ್ನು ಕಲಿಯುವುದೆಂದರೆ ಜಗತ್ತನ್ನು ನೋಡಲು ಇನ್ನೊಂದು ಕಿಟಕಿಯನ್ನು ಹೊಂದಿರುವುದು” ಎಂಬ ಗಾದೆ ಮಾತು ಚೀನಾದಲ್ಲಿ ಪ್ರಚಲಿತದಲ್ಲಿದೆ. ಅನ್ಯ ಭಾಷೆಗಳು ಜೀವನದಲ್ಲಿ ವಿಭಿನ್ನ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ. ಇನ್ನೊಂದು ಭಾಷೆಯನ್ನು ಕಲಿಯುವುದು ಎಂದರೆ ಒಂದೇ ವಿಷಯಕ್ಕೆ ವಿಭಿನ್ನ  ಪದಗಳನ್ನು ಕಲಿಯುವುದು ಎಂದರ್ಥವಲ್ಲ, ಬದಲಿಗೆ ಒಂದೇ ವಿಷಯದ ಬಗ್ಗೆ ಇನ್ನೊಂದು ರೀತಿಯಲ್ಲಿ ಯೋಚಿಸಲು ಕಲಿಯುವುದಾಗಿದೆ. ನಾವು ಅನ್ಯ ಭಾಷೆಗಳ ಪರಿಸರದಲ್ಲಿ ಬೆಳೆದಾಗ ಒಂದು ರೀತಿಯ ಸಾಂದರ್ಭಿಕ ನಿರರ್ಗಳತೆ ನಮ್ಮಲ್ಲಿ ಮೂಡುತ್ತದೆ. ಭಾಷೆಗಳು ವಿಭಿನ್ನ ಬಣ್ಣಗಳಾಗಿದ್ದರೂ, ಅನುಭವಕ್ಕೆ ಪಾರದರ್ಶಕವಾಗಿ ತೋರುತ್ತವೆ. ನಾವು ವ್ಯಕ್ತಿಗಳೊಂದಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದರೆ ಅದು ಅವರಿಗೆ ಅರ್ಥವಾಗುತ್ತದೆ, ನಿಸ್ಸಂಶಯವಾಗಿ ತಲೆಗೆ ಹೋಗುತ್ತದೆ. ಆದರೆ ನಾವು ಅವರ ಭಾಷೆಯಲ್ಲಿ ಅವರೊಂದಿಗೆ ಮಾತನಾಡಿದರೆ ಅದು ಅವರ ಹೃದಯವನ್ನು ತಲುಪುತ್ತದೆ. ನಾವು ಬೇರೆ ಭಾಷೆಯಲ್ಲಿ ಮಾತನಾಡಿದರೆ ಸ್ವಲ್ಪ ವಿಭಿನ್ನವಾದ ಜಗತ್ತನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಅಂತೆಯೇ ಅಮೇರಿಕಾದ ಭಾಷಾ ಶಾಸ್ತ್ರಜ್ಞ ನೋಮ್ ಚೋಮ್ಸ್ಕಿ ಯವರ “ಭಾಷೆಯು ಕೇವಲ ಪದಗಳಲ್ಲ. ಇದು ಒಂದು ಸಂಸ್ಕೃತಿ, ಸಂಪ್ರದಾಯ, ಸಮುದಾಯದ ಏಕೀಕರಣ, ಇಡೀ ಇತಿಹಾಸವು ಒಂದು ಸಮುದಾಯವನ್ನು ರಚಿಸುತ್ತದೆ. ಇದು ಒಂದು ಭಾಷೆಯಲ್ಲಿ ಸಾಕಾರಗೊಂಡಿದೆ.” ಎನ್ನುವ ಹೇಳಿಕೆ ಭಾಷೆಯ ಮಹತ್ವವನ್ನು ಸಾರುತ್ತದೆ. ಪದಗಳು ಕ್ರಿಯೆಯ ಒಂದು ರೂಪವಾಗಿದ್ದು, ಬದಲಾವಣೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿವೆ. ಇದೊಂದು ಸಂಸ್ಕೃತಿಯ ನಕ್ಷೆಯಾಗಿದೆ. ಜನರು ಎಲ್ಲಿಂದ ಬರುತ್ತಾರೆ ಮತ್ತು ಎಲ್ಲಿಗೆ ಹೋಗುತ್ತಾರೆಂಬುದನ್ನು ನಮಗೆ ತಿಳಿಸುತ್ತದೆ. ಇದು ನಾವು ಯೋಚಿಸುವ ವಿಧಾನವನ್ನು ರೂಪಿಸುತ್ತದೆ ಮತ್ತು ಏನನ್ನು ಯೋಚಿಸಬಹುದು ಎಂಬುದನ್ನು ನಿರ್ಧರಿಸುತ್ತದೆ. ಈ ನೆಲೆಯಲ್ಲಿ ಭಾಷೆಯನ್ನು ಕಲಿಸುವ, ಕಲಿಯಲು ಸಹಾಯ ಮಾಡುವ ಸಾಹಿತ್ಯವು ನಮಗೆ ಮುಖ್ಯವಾಗುತ್ತದೆ. ಇದಕ್ಕೆ ‘ಅನುವಾದ ಸಾಹಿತ್ಯ’ ವು ಸೇತುವೆಯಾಗಿದ್ದು, ಪ್ರಪಂಚದ ಎಲ್ಲ ಕಾವ್ಯ ಪ್ರಕಾರಗಳು ಸಮನ್ವಯತೆ ಸಾಧಿಸುವಲ್ಲಿ ನೆರವಾಗಿದೆ. ಇದರ ದೆಸೆಯಿಂದಾಗಿಯೇ ಅರಬ್ ನ ಖರ್ಜೂರ ಕನ್ನಡದ ಕಸ್ತೂರಿಯಲ್ಲಿ ಲೀನಗೊಂಡಿದೆ! ಇಂದು ಕನ್ನಡದಲ್ಲಿ ಗಜಲ್ ಬರೆಯುವ ಬಹುದೊಡ್ಡ ಪಡೆಯೇ ನಿರ್ಮಾಣವಾಗಿದೆ. ಅವರಲ್ಲಿ ಶ್ರೀಮತಿ ಸರ್ವಮಂಗಳ ಜಯರಾಂ ರವರೂ ಒಬ್ಬರು.

        ಶ್ರೀಮತಿ ಸರ್ವಮಂಗಳ ಜಯರಾಂ ರವರು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ
ಅರಳಾಪುರ ಗ್ರಾಮದಲ್ಲಿ ಬಿ.ನಂಜುಂಡಪ್ಪ ಹಾಗೂ ಶ್ರೀಮತಿ ಲಕ್ಷ್ಮಮ್ಮ ದಂಪತಿಗಳ ಮಗಳಾಗಿ ಜನಿಸಿದರು.‌ ಎಂ.ಎ., ಬಿ.ಎಡ್ ಪದವೀಧರರಾದ ಇವರು ಪ್ರಸ್ತುತವಾಗಿ ಗೌರಿಬಿದನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಾಯಕದ ಜೊತೆಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುವ ಇವರು ಕಾವ್ಯ, ಕಥೆ, ಲೇಖನ, ಅಂಕಣ, ಗಜಲ್.. ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ. ‘ಕಾವ್ಯ ಕುಸುರಿ’ ಎಂಬ ಕವನ ಸಂಕಲನ, ‘ಕಥಾಸಿರಿ’ ಎಂಬ ಕಥಾ ಸಂಕಲನ, ಗುಲ್ಮೋಹರ್’ ಹಾಗೂ ‘ಮಾಧುರಿಯ ಮಿಡಿತಗಳು’, ಎಂಬ ಗಜಲ್ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.‌

ಶ್ರೀಮತಿ ಸರ್ವಮಂಗಳ ಜಯರಾಂ ಅವರು ಹಲವಾರು ರಾಜ್ಯಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸುತ್ತಾ ಸದಾ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಹಲವು ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.‌ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ರಾಜ್ಯದ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ “ಡಾ. ಎಸ್. ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ”, “ಸಾಹಿತ್ಯ್ಯೋತ್ಸವ ಪ್ರಶಸ್ತಿ”, “ಯೋಗಿ ನಾರಾಯಣ ಪ್ರಶಸ್ತಿ”, “ವಾಗ್ದೇವಿಯ ವರಪುತ್ರಿಯ ಪ್ರಶಸ್ತಿ”, “ಕೆಂಪಮ್ಮ ಪುರಸ್ಕಾರ”, “ಮಹಿಳಾ ಚೈತನ್ಯ ರತ್ನ ಪ್ರಶಸ್ತಿ”, “ವೀರ ಕೇಸರಿ ರಾಷ್ಟ್ರೀಯ ಪ್ರಶಸ್ತಿ”, “ಪ್ರತಿಭಾ ಸಮ್ಮಾನ್ ಪುರಸ್ಕಾರ”…. ಮುಂತಾದವು ಪ್ರಮುಖವಾಗಿವೆ.

      ದಣಿದ ತನು, ಮನಕ್ಕೆ ವಿರಾಮ, ವಿಶ್ರಾಂತಿ ಅತ್ಯಗತ್ಯ.‌ಸಂತೋಷ, ಸಂಭ್ರಮಕ್ಕೆ ವಿರಾಮ ಬೇಕಾಗಿಲ್ಲ, ಆದರೆ ದುಃಖ, ನೋವುಗಳಿಗೆ ವಿಶ್ರಾಂತಿ ತೀರ ಅತ್ಯವಶ್ಯಕ. ವಿಶ್ರಾಂತಿಯು ಶ್ರಮದ ಸಿಹಿ ರಸವಾಗಿದೆ. ಇದು ಆಲಸ್ಯವಲ್ಲ. ಪ್ರೀತಿಯು ಕೆಲಸವನ್ನು ವಿಶ್ರಾಂತಿಯಾಗಿ ಪರಿವರ್ತಿಸುತ್ತದೆ. ಈ ನೆಲೆಯಲ್ಲಿ ಪ್ರೀತಿಯ ಸ್ಥಾಯಿ ರೂಪವಾದ ಗಜಲ್ ಎಂಬುದು ಪ್ರೇಮಿಯಂತೆ ಮನವನ್ನು ಸಂತೈಸುವ, ಮುದ್ದಿಸುವ ಹಾಗೂ ತಾಯಿಯಂತೆ ಲಾಲಿ ಹಾಡು ಹಾಡುವ ಕೆಲಸ ಮಾಡುತ್ತದೆ. ಅಂತೆಯೇ ಗಜಲ್ ಎಂಬುದು ಮನಸ್ಸಿಗೆ ಮುದ ನೀಡುವ, ಪ್ರೆಶ್ ನೆಸ್ ಫೀಲ್ ನೀಡುವ ತಂಗಾಳಿಯಾಗಿದೆ. ಒತ್ತಡವನ್ನು ಶಮನಗೊಳಿಸುವ, ಚಿಂತೆಯನ್ನು ತಡೆಯುವ, ಮನಸನ್ನು ಹಗುರಗೊಳಿಸುವ ದಿವ್ಯಾಮೃತವೇ ಈ ಗಜಲ್ ಎಂದರೆ ಅತಿಶಯೋಕ್ತಿಯಾಗದು. ಈ ನೆಲೆಯಲ್ಲಿ ಶಾಯರಾ ಶ್ರೀಮತಿ ಸರ್ವಮಂಗಳ ಜಯರಾಂ ಅವರ “ಮಾಧುರಿಯ ಮಿಡಿತಗಳು” ಗಜಲ್ ಸಂಕಲನವನ್ನು ಗಮನಿಸಿದಾಗ ಪ್ರೀತಿ, ಪ್ರೇಮ, ಪ್ರಣಯ, ವಿರಹ, ನಿರೀಕ್ಷೆ, ಕನವರಿಕೆ, ತಾಯಿಯ ಮಮತೆ, ಕನ್ನಡ ಪ್ರೀತಿ, ದೇಶಪ್ರೇಮ, ಮೌಲ್ಯಗಳ ತಾಕಲಾಟ, ಸಾಮಾಜಿಕ ಸಂಬಂಧಗಳ ತೊಳಲಾಟ, ವ್ಯವಸ್ಥೆಯ ಅರಾಜಕತೆ, ಬಡವರ ಅಸಹಾಯಕತೆ, ಬಂಡವಾಳಶಾಹಿಯ ದರ್ಪ, ರಾಜಕೀಯ ವ್ಯವಸ್ಥೆಯ ಪೊಳ್ಳುತನ, ಪ್ರಸ್ತುತ ದಿನಗಳ ಕ್ಷ-ಕಿರಣ, ಸಾಮಾಜಿಕ ಮಾಧ್ಯಮಗಳ ಅಟ್ಟಹಾಸ… ಮುಂತಾದ ವೈವಿಧ್ಯಮಯ ವಿಷಯಗಳು ಸಹೃದಯ ಓದುಗರನ್ನು ಮುಖಾಮುಖಿಯಾಗುತ್ತವೆ.

“ಬದುಕಿನಲಿ ಬಡತನವಿದ್ದರೂ ಪ್ರೀತಿಯಲಿ ಸಿರಿವಂತಳಿವಳು.
ಮಾಧುರಿಯು ಹೃದಯವನ್ನೇ ಅರ್ಪಿಸಿದವಳು ಹೆತ್ತವ್ವ ಇವಳು”

ಜೀವನದಲ್ಲಿ ತಾಯ್ತನಕ್ಕಿಂತ ಹೆಚ್ಚಿನ ಪಾತ್ರವಿಲ್ಲ. ಅಂತೆಯೇ ತಾಯಿಯಷ್ಟು ಶಕ್ತಿಯುತವಾದ ಪ್ರಭಾವ ಬೇರೊಂದು ಇಲ್ಲ. ತಾಯಿಯ ತೋಳುಗಳು ಬೇರೆಯವರಿಗಿಂತ ಹೆಚ್ಚು ಸಾಂತ್ವನ ನೀಡುತ್ತವೆ. ಏಕೆಂದರೆ ಅವುಗಳು ಮೃದುತ್ವದಿಂದ ಮಾಡಲ್ಪಟ್ಟಿವೆ. ತಾಯಿಯ ಪ್ರೀತಿಗಿಂತ ಯಾವ ಹೂವು ತಾಜಾ ಹಾಗೂ ಸುಂದರವಾಗಿರಲು ಸಾಧ್ಯವಿಲ್ಲ. ತಾಯಿಯ ಮಡಿಲಿನಷ್ಟು ಮೃದುವಾದ ಹಾಸಿಗೆ ಯಾವ ಬಜಾರಿನಲ್ಲೂ ಸಿಗುವುದಿಲ್ಲ. ಅವಳ ನಗುವಿನಷ್ಟು ಸುಂದರವಾದ ಗುಲಾಬಿ ಇಲ್ಲ, ಅವಳ ಹೆಜ್ಜೆಗಳನ್ನು ಮುದ್ರಿಸುವಷ್ಟು ಹೂವಿನ ಹಾದಿ ಹುಡುಕಿದರೂ ಸಿಗುವುದಿಲ್ಲ. ತಾಯಿಯ ಸಂತೋಷವು ದಾರಿದೀಪದಂತೆ, ಮಕ್ಕಳ ಭವಿಷ್ಯವನ್ನು ಬೆಳಗಿಸುತ್ತದೆ. ಮಕ್ಕಳಿಗೆ ಬದುಕುವ ಕಲೆಯನ್ನು ಕಲಿಸುವ ಕಲೆ ತಾಯಿಗೆ ಕರಗತವಾಗಿರುತ್ತದೆ.‌ ಇಲ್ಲಿ ಗಜಲ್ ಗೋ ಶ್ರೀಮತಿ ಸರ್ವಮಂಗಳ ಜಯರಾಂ ಅವರು ತಾಯಿಯ ಮಹತ್ವವನ್ನು ತುಂಬಾ ಸರಳವಾಗಿ ಹಾಗೂ ಸಶಕ್ತವಾಗಿ ತಮ್ಮ ಷೇರ್ ನಲ್ಲಿ ದಾಖಲಿಸಿದ್ದಾರೆ.

“ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕಾಲವಿದು
ನಿನಗೂ ಒಂದು ಅಸ್ತಿತ್ವವಿದೆ ತಲ್ಲಣಿಸದಿರು ಮನವೇ”

ಈ ಮೇಲಿನ ಷೇರ್ ಸುಖನವರ್ ಅವರ ಸಾಮಾಜಿಕ ಪ್ರೀತಿಯ ದ್ಯೋತಕವಾಗಿದೆ. ಇಂದಿನ ಕಾಲಘಟ್ಟ ತುಂಬಾ ಹದಗೆಟ್ಟಿದೆಯೆಂದು ಹಲುಬುವ ನಾವುಗಳು ಕೇವಲ ನಮ್ಮ ಮೂಗಿನ ನೇರಕ್ಕೆ ಮಾತಾಡುತ್ತಾ ನಮ್ಮ ಹಿಂದಿನವರಿಗೂ ಮೂಗಿತ್ತು, ನಮ್ಮ ಮುಂದಿನವರಿಗೂ ಮೂಗು ಇರುತ್ತದೆ ಎಂಬುದನ್ನು ಮರೆಯುತ್ತೇವೆ. ಈ ಷೇರ್ ಮನುಷ್ಯನ ಅಸ್ಮಿತೆಗೆ ಧಕ್ಕೆ ತರುವ ಅಪವಾದಗಳ ಮಳೆಯನ್ನು ಪ್ರತಿನಿಧಿಸುತ್ತದೆ.

        ಜೀವನವು ತಂಗಾಳಿಯಂತೆ, ಇದು ಸಾಧ್ಯವಾಗಬೇಕಾದರೆ ನಿಮ್ಮ ಚಿಂತೆಗಳು ಹಾರಿ ಹೋಗಬೇಕು. ಒಂದು ತಂಪಾದ ಗಾಳಿಯು ಅತ್ಯಂತ ಬಿಸಿಯಾದ ದಿನವನ್ನು ಸಹಿಸಿಕೊಳ್ಳುತ್ತದೆ. ಸಮುದ್ರ, ಸೂರ್ಯ ಮತ್ತು ಸೌಮ್ಯವಾದ ಗಾಳಿ ನಮಗೆ ಸಂತೋಷವನ್ನು ನೀಡುತ್ತವೆ. ಇವೆಲ್ಲವನ್ನು ಗಜಲ್ ತನ್ನ ಅಶಅರ್ ನಲ್ಲಿ ಸೆರೆ ಹಿಡಿದು ಸಹೃದಯ ಓದುಗರ ಮನವನ್ನು ತಣಿಸುತ್ತ ಬಂದಿದೆ. ಈ ನೆಲೆಯಲ್ಲಿ ಶಾಯರಾ ಶ್ರೀಮತಿ ಸರ್ವಮಂಗಳ ಜಯರಾಂ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ಮೂಡಿಬರಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.

“ಹೃದಯದಲ್ಲಿ ಭೇಟಿಯಾಗುವ ಬಯಕೆ ಬೆಂಕಿ ಅದುಮಿಡಲಾಗಿದೆ
ಮದರಂಗಿ ಹಚ್ಚಿದ ಕೈಗಳನ್ನು ಎಲ್ಲಿ ಬಚ್ಚಿಡಲಿ”
-ಕಿಶ್ವರ್ ನಾಹೀದ್

       ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ.‌ ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top