ಕಾವ್ಯ ಸಂಗಾತಿ
ಅರುಣಾ ನರೇಂದ್ರ ಕವಿತೆ
ಮೊಗ್ಗು ಹೂವಾದ ಗಳಿಗೆ
ಬಾಳ ಬೆಂಗಾಡಿನಲಿ
ಕಲ್ಲು ಮುಳ್ಳುಗಳ ತುಳಿದು
ಸುಸ್ತಾಗಿ ಕುಳಿತಾಗ
ಮುಳ್ಳ ಕಂಟಿಯಲ್ಲೊಂದು
ಹೂ ಬಿರಿದು ನಗುತ್ತಿತ್ತು
ನಿರಾಸೆಗೊಂಡ ಬಾಳಿಗೆ
ಕೈಯಾಸರೆ ನೀಡಿತ್ತು
ಕೈಚೆಲ್ಲಿ ಕುಳಿತವಳಿಗೆ
ಅದೇನೊ ಹೊಸ ಹುಮ್ಮಸ್ಸು
ಮತ್ತೆ ಮುನ್ನಡೆವ ಉತ್ಸಾಹ !
ಬಾಳ ಬಳ್ಳಿಯಲಿ
ಈಟೀಟೇ ಚಿಗುರು
ಹೊಸ ಹೂವ ಕನಸು
ಕದ ತೆರೆದು ಕತ್ತು ಹಿಡಿದು
ಹೊರನೂಕಿದ ಕನಸುಗಳೆಲ್ಲ
ಮತ್ತೆ ಮತ್ತೆ ಬರಬರನೆ ಬಂದು
ಎದೆಯೇರಿ
ನವ ದಾರಿಯಲಿ ಲಂಘನ!
ಕಾಡುತ್ತವೆ ಬೇಡುತ್ತವೆ
ರಂಗೇರಲು ಹವಣಿಸುತ್ತವೆ
ಇನ್ನೊಮ್ಮೆ ಇಡಿಯಾಗಿ
ಹೊಸತಾಗಿ ಬಾಳು
ಕಟ್ಟುವ ಆಸೆ ಚಿಗುರಿಸುತ್ತವೆ
ಬಣ್ಣದಿಂದ ಬದುಕಲ್ಲ
ಬದುಕು ಬಣ್ಣವಾಗಲು
ಕೊಟ್ಟಿರುವ ಭರವಸೆ
ಬೆನ್ನ ಹಿಂದಿರಲಿ ಸಖಾ
ಹೊಳೆಯನ್ನೇನು?
ಸಾಗರವ ಈಜಿಯೇನು!
ನೋವ ಕುಲುಮೆಯಲಿ
ಇನ್ನೆಷ್ಟು ಕುದಿಸುವೆ
ನಿನ್ನೆದೆಯ ಪ್ರೀತಿಯ ಕಡಲಲ್ಲಿ
ಮೀಯಿಸು ತೋಯಿಸು
ಬೇಡವೆಂದರೆ
ನಿನ್ನ ಕಣ್ಣ ಕಿಡಿಯಲ್ಲೇ
ನನ್ನ ಸಾಯಿಸು
ಅರುಣಾ ನರೇಂದ್ರ