ಆತ ಹಠಕ್ಕೆ ಬಿದ್ದು ಕಾರ್ಯಕ್ರಮ ರೂಪಿಸಿದ, ಯಾರ ಮಾತನ್ನು ಕೇಳಲಿಲ್ಲ. ಆದರೆ ಕಾರ್ಯಕ್ರಮ ವಿಫಲವಾಯಿತು. ಹಣವನ್ನು ಕಳೆದುಕೊಂಡ, ಗುಣವನ್ನು ಕಳೆದುಕೊಂಡ.

ಅವಳು ತನ್ನಷ್ಟಕ್ಕೇ ತಾನೇ ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡಿದರೂ ಮಾಡಿದ ಉದ್ಯೋಗದಲ್ಲಿ ಸೋತಳು..! ಮಾಡಿದ ಶ್ರಮ, ಹಣ,ಸಮಯ ಎಲ್ಲವೂ ವ್ಯರ್ಥವಾಯಿತು..!

ಈ ಮೇಲಿನ ಎರಡು ಸನ್ನಿವೇಶಗಳನ್ನು ನೋಡಿದಾಗ, ನಾವು ಯಾವುದಾದರೂ ಒಂದು ಮಹತ್ವದ ಕಾರ್ಯಗಳನ್ನು ಮಾಡಬೇಕಾದರೆ ಮುಂದಾಲೋಚನೆಯಿಲ್ಲದೆ ಹೆಜ್ಜೆಯಿಟ್ಟರೆ ಅದು ವಿಫಲಕ್ಕೆ ಮುನ್ನಡೆಯಾಗುತ್ತದೆ.  ನಾವು ಮಾಡುವ ಕಾರ್ಯ ಯಾವುದು ಅದಕ್ಕೆ ಸಂಬಂಧಪಟ್ಟಿದೆ..?  ಯಾವ ರೀತಿಯ ಆಲೋಚನೆ ಮಾಡಬೇಕು..? ಆಲೋಚನೆಗೆ ತಕ್ಕಂತೆ ಯೋಜನೆಗಳನ್ನು ರೂಪಿಸುವ ನೀಲ ನಕ್ಷೆ ಸಿದ್ಧಗೊಳಿಸಬೇಕು. ಅದು ಮಾಡುವ ಕಾರ್ಯಕ್ಕೆ ಬೇಕಾದ ಅನೇಕ ಸಂಪನ್ಮೂಲಗಳನ್ನು ಕ್ರೋಢಿಕರಣ ಮಾಡಬೇಕು. ಸಂಪನ್ಮೂಲಗಳಲ್ಲಿದೆ ಯಾವುದಾದರೂ ಕೆಲಸವನ್ನು ಮಾಡಿದರೆ ಅದು ವ್ಯರ್ಥವಾಗುತ್ತದೆ. ಕೆಲವು ಸಲ ನಮ್ಮ ನಾಯಕರು, ಮುಖ್ಯಸ್ಥರು, ಅಧ್ಯಕ್ಷರು ಮುಂದಾಲೋಚನೆಯಿಲ್ಲದೆ ಅನೇಕ ಕಾರ್ಯಗಳಿಗೆ ಕೈ ಹಾಕಿ, ಕೈ ಸುಟ್ಟುಕೊಳ್ಳುವುದನ್ನು ನಾವು ನೋಡುತ್ತೇವೆ. ಇಂತಹ ಅನೇಕ ಉದಾಹರಣೆಗಳನ್ನು ನಾವು ಪಕ್ಷ, ಸಂಘ, ಸಂಸ್ಥೆ, ಸಂಘಟನೆಗಳ ಮುಂತಾದ ಮುಖ್ಯಸ್ಥರು ವಿವಿಧ ಕಾರ್ಯಕ್ರಮಗಳನ್ನು ಮಾಡಿಕೊಳ್ಳುವಾಗ ವಿಫಲರಾಗುತ್ತಾರೆ.  

 ಹಾಗಾದರೆ, ಮಾಡಬೇಕಾದ ಕೆಲಸ ಯಾವುದು..? ಅದಕ್ಕೆ ಸಂಬಂಧಪಟ್ಟಂತೆ ಪೂರ್ವ ಸಿದ್ಧತೆಗೆ ಅನುಗುಣವಾಗಿ ಪೂರ್ವಸಭೆಗಳನ್ನು ಮಾಡುವುದು. ಯಾವ ಸಮಯದಲ್ಲಿ ಅದು ಸೂಕ್ತ ಎನ್ನುವುದನ್ನು ನಾವು ಮುಂದಾಲೋಚನೆಯಿಂದಲೇ ಗುರುತಿಸಬೇಕು. ಉದಾಹರಣೆಗೆ ಯಾವುದಾದರೂ ವಿಶೇಷ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಬೇಕೆಂದರೆ ಅದು ಸೂಕ್ತ ಸಮಯವೇ ಎನ್ನುವುದನ್ನು ಮನಗಾಣಬೇಕು. ಸಂಬಂಧಪಟ್ಟಂತಹ ಸಂಪನ್ಮೂಲ ವ್ಯಕ್ತಿಗಳು ಸಂಪರ್ಕಿಸಬೇಕು. ವಿವಿಧ ಆಯಾಮಗಳಿಂದ ಎಲ್ಲರೂ ಭಾಗವಹಿಸಲು ಸಾಧ್ಯವೇ ಎನ್ನುವುದನ್ನು ಮನಗಾಣಬೇಕು. ಆಗ ಮಾತ್ರ ಒಂದು ಯಶಸ್ವಿ ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತದೆ. ನಾನು ಇದನ್ನು ಮಾಡಲೇಬೇಕು ಎನ್ನುವ ಹಠಕ್ಕೆ ಬಿದ್ದು ಯಾರೋ ಜಿದ್ದಾಜಿದ್ದಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಕಾರ್ಯಕ್ರಮ ವಿಫಲವಾಗಿ ಅದು ಎಲ್ಲರೆದುರು ಅಪಹಾಸ್ಯಕ್ಕೆ ಗುರಿಯಾಗುತ್ತದೆ.  ಮಾಡುವ ಕಾರ್ಯ ಯಾವುದು..?ಹೇಗೆ..?  ಎಲ್ಲಿ…? ಎನ್ನುವುದನ್ನು ಮೊದಲೇ ನಿರ್ಧಾರ ಮಾಡಿಕೊಂಡಿರಬೇಕು. ಕೇವಲ ನಮ್ಮ ಸ್ವಾರ್ಥ, ದ್ವೇಷ ಇರ್ಷೆಯಿಂದ ಕೆಲವೇ ಕೆಲವು ವ್ಯಕ್ತಿಗಳ ಮನಸ್ಸನ್ನು ಸಂತೃಪ್ತಿ ಮಾಡುವ ಸಲುವಾಗಿ ಮಾಡುವ ಕಾರ್ಯಗಳು ಯಾವತ್ತೂ ಯಶಸ್ವಿಯಾಗುವುದಿಲ್ಲ. ಒಂದು ಕಾರ್ಯ ಯಶಸ್ವಿಯಾಗಬೇಕೆಂದರೆ ಸರ್ವರನ್ನು ಒಳಗೊಂಡಿರಬೇಕು. ಅರ್ಹತೆಯನ್ನು ಗುರುತಿಸಿ, ಅವರಿಗೆ ಸೂಕ್ತವಾದ ಕೆಲಸವನ್ನು ಕೊಟ್ಟು ಅವರಿಂದ ಅದನ್ನು ಪಡೆದುಕೊಳ್ಳಬೇಕು. ಇಲ್ಲದೇ ಹೋದರೆ ಅರ್ಹತೆ ಅಲ್ಲದ ವ್ಯಕ್ತಿಗಳನ್ನು ತಲೆಯ ಮೇಲೆ ಹೊತ್ತು ಮೆರೆಸುವ ಅಪಾಯವೂ ಇದೆ.

.

 ಸೂಕ್ತವಲ್ಲದ ಮುಂದಾಲೋಚನೆಯಿಲ್ಲದ ಕಾರ್ಯಗಳು ಸದಾ ಎಡವುತ್ತಾ, ಕುಂಟುತ್ತಾ ಹೋಗುತ್ತವೆ. ಒಂದು ಯೋಜನೆಯನ್ನು ಪರಿಪೂರ್ಣಗೊಳಿಸಿ, ಕಾರ್ಯಗತಗೊಳಿಸಿ ಇನ್ನೊಂದು ಯೋಜನೆಗೆ ಕೈ ಹಾಕಿದಾಗ ಮಾತ್ರ ಅದು  ಫಲಪ್ರದವಾಗಬಲ್ಲದು. ಫಲಪ್ರದವಾಗದ ಕಾರ್ಯಗಳಿಗೆ ಸಾಕಷ್ಟು ಸಮಯ, ಹಣಕಾಸು, ಆರೋಗ್ಯ ಎಲ್ಲವನ್ನು ಹಾಳು ಮಾಡಿಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಂಡರೆ, ಅದು ವಿಫಲಗೊಂಡು, ತನ್ನ ಸತ್ವವನ್ನು ಕಳೆದುಕೊಂಡು ಬಿಡುತ್ತದೆ.  ಹಾಗಾಗಿ ಯಾವುದಾದರೂ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಾಗ ಒಂದು ಚೌಕಟ್ಟುನ್ನು  ನಾವು ಮೊದಲೇ ನಿರ್ಧರಿಸಬೇಕು. 

ಮುಂದಾಲೋಚನೆಯಿಲ್ಲದ ನಿರ್ಧಾರಗಳು ನಮ್ಮನ್ನು ಪ್ರಪಾತಕ್ಕೆ ತಳ್ಳುತ್ತವೆ. ಇವತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ಕೂಡ ಅದೇ ನಿಟ್ಟಿನಲ್ಲಿ ಸಾಗುತ್ತಿದೆ ಎನ್ನಬಹುದು. ವಿದ್ಯಾರ್ಥಿಗಳಿಗೆ ಕೊಡಬೇಕಾದ ಶಿಕ್ಷಣವು ದಿನಕ್ಕೊಂದು ಯೋಜನೆಗಳನ್ನು ತೆಗೆದುಕೊಂಡು, ಅದನ್ನು ಕಾರ್ಯಗೊಳಿಸುವ ಮುನ್ನವೇ ನಾವು ಅದನ್ನು ಬಿಟ್ಟು ಮತ್ತೊಂದು ಯೋಜನೆಯನ್ನು ಜಾರಿಗೆ ತರುವುದನ್ನು ನಾವು ಕಾಣುತ್ತೇವೆ.  ಹೀಗೆ ಒಂದು ಯೋಜನೆ ಪರಿಪೂರ್ಣವಾಗಿ ಕಾರ್ಯಗತಗೊಳಿಸಿ, ಅದರ ಸಾಧಕ ಬಾಧಕಗಳನ್ನು ಅವಲೋಕನ ಮಾಡಿಕೊಳ್ಳದೆ, ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಅದು ತುಂಬಾ ಅಪಾಯಕಾರಿಯಾದುದು. ಇವತ್ತು ಉದ್ಯಮ ಕ್ಷೇತ್ರ ಅದಕ್ಕೆ ಹೊರತಾಗಿಲ್ಲ. ಏನನ್ನೋ ಸಾಧಿಸಿ ಬಿಡುತ್ತೇನೆ, ದೊಡ್ಡ ಉದ್ಯಮವನ್ನು ನಾನು ಕಟ್ಟುತ್ತೇನೆ ಎಂದು ಪೂರ್ವ ಯೋಜನೆಯಿಲ್ಲದ ನೀಲ ನಕ್ಷೆಯೊಂದಿಗೆ ಮುನ್ನುಡಿ ಬರೆಯುವ ಉದ್ಯಮಿಗಳು ಹೇಳ ಹೆಸರಿಲ್ಲದೆ ಹೋಗುತ್ತವೆ. 
ಅದೇ ರೀತಿ ಇಲಾಖೆಯನ್ನು ವಹಿಸಿಕೊಂಡಿರುವ ಮಂತ್ರಿಗಳು ವಾರ್ಷಿಕ ಕ್ರಿಯಾ ಯೋಜನೆ ಮಾಡಿಕೊಳ್ಳದೆ, ಹ್ಯಾಗೆ ಬೇಕೋ  ಹಾಗೆ ಕಾರ್ಯಗಳನ್ನು ಮಾಡಿಕೊಂಡರೆ, ಅದು ವಿಫಲತೆಗೆ ದಾರಿ ಮಾಡಿಕೊಡುತ್ತದೆ. ಯಾವುದಾದರೂ ಒಂದು ಆಲೋಚನೆ ಮಾಡಿದಾಗ ಅದನ್ನು ಶಿಸ್ತು ಬದ್ಧವಾಗಿ ಯೋಜನೆಯನ್ನು ರೂಪಿಸಿಕೊಳ್ಳಬೇಕು ನಂತರ ಕಾರ್ಯಗತಗೊಳಿಸಬೇಕು. 

ಇದು ಬದುಕಿನ ಎಲ್ಲಾ ವಲಯಗಳಿಗೂ ಅನ್ವಯಿಸುತ್ತದೆ. ನಮ್ಮ  ಹಿರಿಯರು ಮೊದಲೇ ನಿರ್ಧರಿಸಿ ಎಲ್ಲವನ್ನು ವ್ಯವಸ್ಥಿತವಾಗಿ ಈ ಹಿಂದೆ ಕೆಲಸವನ್ನು ಮಾಡುತ್ತಿದ್ದರು. ಆಗ ನಮ್ಮ ಹಿರಿಯರು ಯಾವುದೇ ಕಾರ್ಯ ಕೈಗೊಂಡರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತಿದ್ದರು ಮತ್ತು ಆ ಕಾರ್ಯದಲ್ಲಿ ಗೆಲುವನ್ನು ಕಾಣುತ್ತಿದ್ದರು.
ಇಂದು ಏನಾಗಿದೆ ಎಂದರೆ ಸಂಸ್ಥೆಯ ಮುಖ್ಯಸ್ಥರು /  ಅಧ್ಯಕ್ಷರು ನಾನೇ ಅನ್ನುವ ಅಹಂಕಾರಕ್ಕೆ ಬಿದ್ದು ತಮಗೆ ತೋಚಿದ್ದನ್ನು, ತಮಗೆ ತಿಳಿದಿದ್ದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳದೆ, ಅನುಭವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.  ಏಕಮುಖವಾಗಿ ಕೆಲಸ ಮಾಡುವುದರಿಂದ ವಿಫಲತೆಯನ್ನು ನಾವು ಕಾಣುತ್ತೇವೆ.  ಎಲ್ಲಿ ಏಕಮುಖತೆ ಇರುತ್ತದೆಯೋ ಅಲ್ಲಿ ಗೆಲುವು ಇರುವುದಿಲ್ಲ. ಎಲ್ಲಿ ಬಹುತ್ವ ಮತ್ತು ಬಹುಮುಖತೆಯಿಂದ ಕೆಲಸ ಮಾಡುತ್ತೇವೆಯೋ ಅಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ಸಾಂಘಿಕ ಹೋರಾಟವೇ ಇದಕ್ಕೆ ಬಹುದೊಡ್ಡ ನಿರ್ದರ್ಶನ. ಸಾಂಘಿಕ ಹೋರಾಟವಿಲ್ಲದೆ ಏನನ್ನು ಸಾಧಿಸಲು ಆಗುವುದಿಲ್ಲ. ಮಾಡುವ ಕಾರ್ಯದ ಸಮಯ, ಅವಕಾಶಗಳು, ಆಲೋಚನೆಗಳು, ಗುರಿಗಳು, ಆಶಯಗಳು ಧನಾತ್ಮಕವಾಗಿ ಕೂಡಿಕೊಂಡಿದ್ದರೆ ಅವು ಯಶಸ್ವಿಯಾಗುತ್ತವೆ.  ಕೇವಲ ಋಣಾತ್ಮಕ ಮನಸ್ಸಿನಿಂದ ಮಾಡಿದ ಕರ್ತವ್ಯಗಳು ವಿಫಲತೆಯನ್ನು ಕಾಣಬಲ್ಲವೂ ಹಾಗಾಗಿ ನಾವು ಯಾವುದಾದರೂ ಕರ್ತವ್ಯವನ್ನು ಯೋಜನೆಯನ್ನು ರೂಪಿಸುವಾಗ ಎಲ್ಲವನ್ನು ಪರಮಾರ್ಶಿಸಿ ನೋಡುವ ಗುಣವಿರಬೇಕು.


Leave a Reply

Back To Top