ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್


ಅನುರಾಗದ ಬಾಗಿಲು ತೆರೆದಿದ್ದೆ ನಾ ಧ್ಯಾನಸ್ಥನಾಗಿದ್ದ ಅವನು
ಎದೆಯಲಿ ಮೂತಿ೯ ಇಟ್ಟು ಕುಳಿತಿದ್ದೆ ನಾ ಅಲೆಮಾರಿಯಾಗಿದ್ದ ಅವನು
ಮೋಹವ ತೊರೆದು ದೂರಾಗಿ ಕನಸಲಿ ನಿತ್ಯ ಕಾಡಿದವನು
ವಿರಹ ದಾಹ ತಣಿಯಲು ಅಪ್ಪಲು ಬಯಸಿದ್ದೆ ನಾ ಮಾಯವಾಗಿದ್ದ ಅವನು
ತ್ರಿಲೋಕ ಸುಂದರಿ ಎಂಬ ಅಹಂದಲಿ ಜಗವ ಗೆಲ್ಲಲು ಹೋದೆ ನಾ
ಗೆಜ್ಜೆ ಕಟ್ಟಿ ಮೋಹಿನಿಯಾಗಿ ಕುಣಿಯುತ್ತಿದ್ದೆ ನಾ ನಿರಾಕಾರನಾಗಿದ್ದ ಅವನು
ಸಪ್ತ ಪದಿಗಳ ತುಳಿದು ಸಂಸಾರಿಯಾಗಿ ಮಾಯೆಯ ಉಡುಗೆ ತೊಟ್ಟಿದ್ದೆ ನಾ
ಬದುಕಿನ ಸುಳಿಯಲಿ ಬಂಧಿಸಲು ಆಶಿಸಿದ್ದೆ ನಾ ಜಂಗಮನಾಗಿದ್ದ ಅವನು
ಕಾಡು ಮೇಡಲಿ ಸ್ವಚ್ಛಂದವಾಗಿ ತಿರುಗುತ್ತಾ ಸಂತಸದಲಿದ್ದೆ ನಾ
ನಶೆಯಲಿ ಸೋಮಾರಿಯಾಗಿದ್ದೆ ನಾ ಕಾಯಕ ಯೋಗಿಯಾಗಿದ್ದ ಅವನು
ಚೆಲುವ ಮಾಯೆಯಾಗಿ ನತಿ೯ಸುತಾ ಎಲ್ಲರನು ಮರುಳುಮಾಡಿದ್ದೆ ನಾ
ವಿರಾಗಿಣಿ ಯಾಗಿ ಜಗದ ಬಂಧನ ಕಳಿಚಿದ್ದೆ ನಾ ಅಲ್ಲಮಪ್ರಭುವಾಗಿದ್ದ ಅವನು
ಮೌಢ್ಯದ ಕಡಲಲಿ ಜಾರಿ ಮೇಲೇಳಲಾಗದೆ ಚಡಪಡಿಸುತ್ತಿದ್ದೆ ನಾ
ಅಂಧಕಾರ ಹೊದ್ದು ಮಲಗಿದ್ದೆ ನಾ ಅರುವಿನ ಜ್ಞಾನ ಪ್ರಭೆಯಾಗಿದ್ದ ಅವನು
ಪ್ರಭಾವತಿ ಎಸ್ ದೇಸಾಯಿ



