ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸಣ್ಣ ಕಥೆ:

ದಸರಾ  ಗೊಂಬೆ

   “ತ್ರಿವೇಣಿ ಯಾವಾಗವ್ವ ನೀನು ಅಡ್ಡಾಡೋದು?.  ಮೈಸೂರು ದಸರಾ ಬಹಳ ದೊಡ್ಡದು, ಒಂದ್ಸಾರಿ ಆದರೂ ನೋಡಿ ಬರೋಣ ಬಾರೆ” ಎಂದು ಅಪ್ಪ-ಅವ್ವ ಕರೆದಾಗೊಮ್ಮೆ ನಾನು ಸಾಲಿ ಕಲಿತು ದೊಡ್ಡೋಳಾಗಿ ನೌಕರಿ ಹಿಡಿದ ಮೇಲೇನೆ… ನನ್ನ ರೊಕ್ಕದಲ್ಲಿ ಅಡ್ಡಾಡತೀನಿ .ಬಹಳಷ್ಟು ಮೈಸೂರ ದಸರಾ ಗೊಂಬೆಗಳನ್ನು ನನ್ನ ರೊಕ್ಕದಲ್ಲೇ ತಗೋತೀನಿ. ನನ್ನ ಸಾಲೀ ಕಲಿಸ್ತೀರಿ ಅಲ್ಲವಾ ನೀವು ಅಷ್ಟ ಸಾಕು ನನಗ ಅನ್ನೋ ಸ್ವಾಭಿಮಾನದ ಭಾಷಣ ಕೇಳಿ ಕೇಳಿ ಅವರಿಗೂ ಸಾಕಾಗಿ ಹೋಗಿತ್ತು. ನನಗೂ ನನ್ನ ಸ್ವಾಭಿಮಾನದ ಪಿತ್ತ ನೆತ್ತಿಗೇರುತ್ತಲೇ ಇತ್ತು.
      ಬೇಗನೆ ನೌಕರಿ ಹಿಡಿದು ಅಲ್ಲಿ ಇಲ್ಲಿ ವರ್ಗಾವಣೆಯಾಗುತ್ತ ಅಪ್ಪನ ನೆರವಿನಿಂದ, ಕೆಲವೊಮ್ಮೆ ಒಬ್ಬಂಟಿಗಳಾಗಿ ಕಾಲಕಳೆಯುತ್ತ ಊರಿನ ಹತ್ತಿರ ವರ್ಗವಾಗಿ ಬರಲು ನಾಲೈದು ವರ್ಷಗಳೇ ಕಳೆದವು. ಆಗಾಗ ಮೈಸೂರು ದಸರಾ ಉತ್ಸವದಲ್ಲಿ ಸೋಗು ಹಾಕಿರುವ ದೊಡ್ಡ ದೊಡ್ಡ ಗೊಂಬೆಗಳು ,ಆಟಿಕೆ ಗೊಂಬೆಗಳು,ನವದುರ್ಗೆಯರ ನಾನಾ ಅವತಾರದ ಗೊಂಬೆಗಳು ಕನಸ್ಸಲ್ಲಿ ಮೂಡಿ ಮರೆಯಾಗುತ್ತ ಕುಟುಂಬ ಸಮೇತರಾಗಿ ನೋಡಬೇಕೆಂಬ ಆಸೆ ಚಿಗುರಿಸುತ್ತಿದ್ದವು. ಹುಟ್ಟಿದಾಗಿಂದ ನೋಡದೆ ಸುಪ್ತವಾಗಿದ್ದ ಆಸೆ ಎಂದು ನೆರವೇರುವುದೋ.
    ಅದರೆ ಗಟ್ಟಿಯಾಗಿದ್ದ ತಂದೆ ಅದ್ಯಾವುದೋ ದಾಯಾದಿ ಕಲಹದ ವಿಷಯವೊಂದನ್ನು ಮನಸ್ಸಿಗೆ ಹಚ್ಚಿಕೊಂಡು ಅನಾರೋಗ್ಯಕ್ಕೆ ಒಳಗಾಗಿ ದಿನೇ ದಿನೇ ಕೃಶವಾಗುತ್ತ ಹಾಸಿಗೆ ಹಿಡಿದು ತೀರಿಹೋದರು.
      ಕೌಟುಂಬಿಕ ಜವಾವ್ದಾರಿ ಹೊತ್ತ ತ್ರಿವೇಣಿ ಇರಲೊಂದು ಬೆಚ್ಚನೆಯ ಮನೆಕಟ್ಟುವ ಸಾಹಸಕ್ಕೆ ಕೈಹಾಕಿದಳು. ದಸರಾ ಗೊಂಬೆಗಳು ಕನಸ್ಸಲ್ಲಿ ಅಷ್ಟೇ ಅಲ್ಲದೆ ಮನಸ್ಸಲ್ಲೂ ಕೂಡ ಮೂಡದೆ ಮರೆಯೆಲ್ಲೆಲ್ಲೋ ಸರಿದು ನಿಂತವು.

ದಸರಾ ಗೊಂಬೆಯಂತೆ ತೆಳ್ಳಗೆ ಬೆಳ್ಳಗೆ ಸ್ಪುರದ್ರೂಪಿಯಾದ ತ್ರಿವೇಣಿಗೆ ತನ್ನ ನೌಕರಿ, ಮನೆ ಹಾಗೂ ಕೌಟುಂಬಿಕ ಜಂಜಡಗಳಲ್ಲಿ ಮುಳುಗಿ ಆಗಲೇ ಮೂವತ್ತು ವರ್ಷದವಳಾಗಿ ಅಲ್ಲಲ್ಲಿ ಬಿಳಿಗೂದಲು ಮೂಡತೊಡಗಿದವು. ಮನೆಯವರು ಹಾಗೂ ಹೀಗೂ ಒತ್ತಾಯಿಸಿ ಮದುವೆಗೆ ಒಪ್ಪಿಸಿದರು.
       ಅಂತೂ ಹೆಣ್ಣು ದಸರಾ ಗೊಂಬೆಯಂತ ತ್ರಿವೇಣಿಗೆ ಬ್ಯಾಂಕ ಮ್ಯಾನೇಜರ ಹುದ್ದೆಯಲ್ಲಿದ್ದ ಸ್ಪುರದ್ರೂಪ ಗಂಡು ದಸರಾ ಗೊಂಬೆಯಂತಹ ವರ ಸಿಕ್ಕು ಮದುವೆಯೂ ಆಯಿತು. ಹೃದ್ರಾಬಾದಿನಲ್ಲಿದ್ದ ಗಂಡ ತಿಂಗಳಿಗೊಮ್ಮೆ ಮಾತ್ರ ಊರಿಗೆ ಬರುತ್ತಿದ್ದ. ತ್ರಿವೇಣಿ ನೌಕರಿ ಮಾಡುವ ಜಿಲ್ಲೆಗೆ ವರ್ಗವಾಗದೆ ಒದ್ದಾಡುತ್ತಿದ್ದ.

ಎರಡು ಮುದ್ದಾದ ಮಕ್ಕಳು ಏಳೆಂಟು ವರ್ಷದ್ದಾಗಿದ್ದವು. “ಮೈಸೂರು ದಸರಾ ಹೇಗಿರುತ್ತದಮ್ಮ! ಅಕ್ಟೋಬರ್ ರಜೆಯಲ್ಲಿ ಕರೆದುಕೊಂಡು ಹೋಗಮ್ಮ” ಎಂದಾಗ. ತನ್ನಪ್ಪ ತಟ್ಟನೆ ನೆನಪಾದ. ದಸರೆ ನೋಡಲು ಅಪ್ಪ ಅದೆಷ್ಟು ಕರೆದರೂ ಹೋಗದ ನನ್ನ ಸ್ವಾಭಿಮಾನ ಇಂದು ಗಂಡನ ಬಿಡುವಿಗಾಗಿ, ಆತನ ರಜೆಗಾಗಿ, ಅದಕ್ಕೂ ಮೀರಿ ಅತನಿಲ್ಲದೆ ಹೋಗದಂತಹ ಸ್ಥಿತಿ. ಒಂದು ವೇಳೆ ಹೋಗಬೇಕೆಂದರೂ ಆತನ ಅನುಮತಿಗೆ  ಕಾದು ಕಾದು ಸುಸ್ತಾದ ಅಸಹಾಯಕತೆಯನ್ನು ನೆನೆಯುತ್ತ ಅಪ್ಪನನ್ನು ಸ್ಮರಿಸುತ್ತ, ಗಂಡನ ಅಗಮನಕ್ಕೆ ತಹಿತಹಿಸುತ್ತ ತ್ರಿವೇಣಿ ಲೋಡ್ ಶೆಡ್ಡಿಂಗನಿಂದ ಕರೆಂಟು ಇರದ ರೂಮಲಿ ಮಕ್ಕಳನ್ನು ಮಲಗಿಸಿ ದಿಂಬಿಗೊರಗಿದಳು. 
     “ಗಂಡ ಬೆಳಗಿನ ನಾಲ್ಕರ ಜಾವ ಕಾರಿನ ಸಮೇತ ಮನೆಗೆ ಬಂದು ಲಗುಬಗೆಯಿಂದ ನಮ್ಮನ್ನೆಲ್ಲ ಕರೆದುಕೊಂಡು ಮೈಸೂರಿಗೆ ಹೊರಟ. ಮಲಗಿದ ಮಕ್ಕಳನ್ನು ಎತ್ತಿ ಕಾರಲ್ಲೇ ಮಲಗಿಸಿಕೊಂಡ,ಅರೆನಿದ್ದೆಯಲ್ಲಿದ್ದ ನನ್ನನ್ನು ಕಾರಿನಲ್ಲಿ ಕುಳ್ಳಿರಿಸಿದ. ಕಾರು ಐದುನೂರು ಕಿಲೋ ಮೀಟರ ಪ್ರಯಾಣವನ್ನು ಕಣ್ಣೆವೆ ತೆರೆಯುವಷ್ಟರಲ್ಲೇ ತಲುಪಿ, ಮಕ್ಕಳು ನಾನು ಕಣ್ಣು ಬಿಟ್ಟಾಗ ಭವ್ಯ ಅರಮನೆಯ ದ್ವಾರದಲ್ಲಿದ್ದೆವು. ಈ ಸಾಕಷ್ಟು ಬಾರಿ ಕನಸ್ಸಿನಲ್ಲಿ ಬಂದ ದೊಡ್ಡ ದೊಡ್ಡ ಗೊಂಬೆಗಳು ನಡು ಬಳಕಿಸುತ್ತ ಸೋಗು ಹಾಕಿ ನರ್ತಿಸುತ್ತಿದ್ದವು. ಸಣ್ಣ ಸಣ್ಣ ಅಲಂಕಾರಿಕ ಗೊಂಬೆಗಳು ಕಣ್ಣು ಮಿಟುಕಿಸುತ್ತ, ಕೊರಳು ಕುಣಿಸುತ್ತ ನಮ್ಮನ್ನೆ ನೋಡುತ್ತಿದ್ದಂತೆ  ಅವುಗಳನ್ನು ಎತ್ತಿಕೊಳ್ಳಲು ಮಕ್ಕಳು ಒಬ್ಬರಿಗೊಬ್ಬರು ಜಗಳಕ್ಕೆ ಇಳಿದು ಸುಂದರವಾದ ಗೊಂಬೆಗಳನ್ನೆಲ್ಲ ಕೆಳ ಬೀಳಿಸಿದರು. ರಾಜಬೀದಿಯಲ್ಲಿ ಖಾಸಗಿ ದರ್ಭಾರಿನ ರಾಜ,ಮಂತ್ರಿ, ಅವರ ಕಾಲ್ದಳ, ಅಶ್ವ ಪಡೆ ಪರೇಡ ಮಾಡುತ್ತ ನಮ್ಮ ಕಡೆಗೆ ಬರತೊಡಗಿತು. ಆಳೆತ್ತರದ ಬಿಳಿ ಕುದುರೆಗಳು ನಮ್ಮನ್ನು ಹತ್ತಿಸಿಕೊಂಡು ನಾ ಮುಂದೆ ತಾಮುಂದೆ ಎಂದು ಓಡತೊಡಗಿದವು. ಮಕ್ಕಳು  ಹುಟ್ಟಾ ಕುದುರೆ ಸವಾರಿ ಕಲಿತವರಂತೆ ವೇಗವಾಗಿ ಓಡಿಸತೊಡಗಿದರು. ಅಲಂಕೃತ ರಥವೊಂದು  ನಮ್ಮನ್ನು ಸುತ್ತಾಡಿಸಲು ತಯಾರಾಗಿ ನಿಂತಿತ್ತು. ಅದೆಂತ ಅದೃಷ್ಟ ಎಂದರೆ ಗಂಡನೇ ಸಾರಥಿಯಾಗುವಂತಹ ಅವಕಾಶ ಒದಗಿ ನನ್ನನ್ನು ಮಹಾರಾಣಿಯಂತೆ ರಾಜಬೀದಿಗಳಲ್ಲಿ ಸುತ್ತಾಡಿಸಿದರು. ಗಜ ಪಡೆಗಳು ಚಾಮುಂಡಿ ತಾಯಿಯನ್ನು ಹೊತ್ತು ಹೆಜ್ಜೆ ಇಡುತ್ತಿದ್ದವು. ನಮ್ಮನ್ನು ನೋಡಿದ್ದೆ ತಡ ಸೊಂಡಿಲಿನಿಂದ ಆಶೀರ್ವದಿಸಿದವು. ಝಗಮಗಿಸುವ ಚಿನ್ನದ ಅಂಬಾರಿ ಹೊಳೆಯುತ್ತ, ಮಿಂಚುತ್ತ ಕಣ್ಣುಗಳನ್ನು ಅದೆಷ್ಟು ಕುಕ್ಕುತ್ತಿತ್ತೆಂದರೆ ತ್ರಿವೇಣಿ ತಟ್ಟನೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು.  ಅಷ್ಟೊಂದು ಬೆಳಕು ಅವಳ ಕಣ್ಣಿಗೆ ಬಡಿಯಿತು. ಅದರೂ ಅರೆ ಕಣ್ಣು ತೆರೆದು ನೋಡಿದಾಗ ರೂಮಿನೊಳಗೆ ಕರೆಂಟ ಬಂದಿತ್ತು. ಇಲ್ಲಿವರೆಗೆ ಕಂಡಿದ್ದು ಕನಸಾ? ಎಂದು ತ್ರಿವೇಣಿ ಪೆಚ್ಚು ಮೋರೆ ಹಾಕುತ್ತ ಟೈಮ್‌ ನೋಡಿದಳು. 

ರಾತ್ರಿ ಹನ್ನೆರಡು ಗಂಟೆ. ಅಷ್ಟರಲ್ಲೆ ಅವಳ ಪೋನ್‌ ರಿಂಗಾಗತೊಡಗಿತು. ಆಕಡೆಯಿಂದ ಗಂಡ “ನನಗೆ ರಜೆ ಸಿಗಲಿಲ್ಲ ಮುಂದಿನ ದಸರಾಕ್ಕೆ ಹೋದರಾಯಿತು ಮಲಕೊ” ಎಂದು ಹೇಳಿ ಪೋನ್ ಕಟ್ ಮಾಡಿದ.


About The Author

Leave a Reply

You cannot copy content of this page

Scroll to Top