ಕಾವ್ಯ ಸಂಗಾತಿ
ಡಾ.ಸರಸ್ವತಿ ಕಳಸದ
“ಶಶಿ… ನಿನ್ನನ್ನೇನು ಕರೆಯಲಿ?”


ಶಶಿ ಎನ್ನಲೇ?
ಚಂದ್ರ ಎನ್ನಲೇ?
ನಿನ್ನ ತಂಪಿನ ಬೆಳ್ಳಿಹನಿಯೆನ್ನಲೇ?
ಶಿವನ ಶಿರವನೇರಿದ ನಕ್ಷತ್ರವೆನ್ನಲೇ?
ಏನೆಂದು ಕರೆಯಲಿ
ನಿನ್ನ?
ಕ್ಷಣ ಹೊಳೆದು ಮುದವನು ಸುರಿಸಿ, ಮರುಕ್ಷಣ ಮೋಡದ ಮಡಿಲಲ್ಲಿ
ಮರೆಯಾಗುವುದೇಕೆ?
ನೀನು ಭಾನಲ್ಲಿದ್ದರೆ,
ನಾನು ಭುವಿಯಲ್ಲಿರುವೆ.
ಆಕಾಶ-ಭೂಮಿಯ ಅಂತರವನು ಕರಗಿಸಿ ಬಾ, ಗೆಳೆಯ!
ಮಸುಕಾದ ಕನ್ನಡಿಯಲ್ಲಿ ಬೆಳ್ಳಿಚಂದ್ರಿಕೆಯಾಗಿ ನನ್ನ ಬಿಂಬವ ತೋರಿದವನೇ.
ಕಲಕಿದ ಮನಕೆ ತಂಪನು ತುಂಬುವ ನಿಶ್ಶಬ್ದ ನದಿಯ ಸೆಲೆಯಾಗಿ ಸಾಗಿಬರುವೆಯಾ ನೀ?
ನನ್ನ ದಾರಿಯ ಕಂದಿಲಾಗಿ,
ಕತ್ತಲ ಹೆಜ್ಜೆಗಳಿಗೆ ದಿಕ್ಕಾಗಿ,
ಧೈರ್ಯದ ನೆಲೆಯಾಗಿ,
ಬಳಪ ಹಿಡಿಸಿ ಬರೆಸುವ ಬೆಳ್ಳಕ್ಕಿಯಾಗಿ ಬಾ, ಗೆಳೆಯ!
ಕಾಣದ ನಿನ್ನ ಕಾಣುವ ಹಂಬಲ, ಮೌನದಲ್ಲಿಯೂ ನಿನ್ನೊಡನೆ ಸಂಭಾಷಣೆ;
ಭಾಷೆ ಬೇಡ -ಭೇದವೂ ಬೇಡ—
ಎರಡು ತೀರಗಳ ನಡುವೆ ಹರಿಯುವ ಒಂದೇ ನದಿಯ ಅಂತರಂಗದ ಅರಿವೇ ಸಾಕು.
ಮೋಹವಿಲ್ಲ, ವ್ಯಾಮೋಹವಿಲ್ಲ,
ಸ್ವಾರ್ಥದ ಸೆಳೆತವೂ ಬೇಡ.
ತಿಳಿನದಿಯಂತೆ ಕಲ್ಲು-ಮಣ್ಣನು ದಾಟಿ,
ತೀರಗಳನ್ನೂ ತಬ್ಬಿಕೊಂಡು
ಒಂದಾಗಿ ಹರಿದು,
ಸ್ನೇಹದ ತ್ರಿವೇಣಿಯಾ
ಗೋಣ ಬಾ!
ನನ್ನನ್ನು ಬಂಧಿಸದೆ, ನನ್ನೊಳಗಿನ ಶಕ್ತಿಯನು ಅರಳಿಸಿ,
ನಂದಿಹೋಗದ ದೀಪದಂತೆ
ನಾನು ನಾನಾಗಿಯೇ ಉಳಿಯುವಂತೆ
ಜೊತೆಯಾಗಿ ನಡೆಯುವೆಯಾ, ಶಶಿ?
ಚಂದ್ರನಾದರೆ ತಂಪಿನ ಮಳೆ ಸುರಿಸು,
ದೀಪವಾದರೆ ಕತ್ತಲ ಹೃದಯ ಬೆಳಗಿಸು;
ನದಿಯಾದರೆ ದಾಹದ ಮನ ತಣಿಸು,
ಸ್ನೇಹವೆಂಬ ಪವಿತ್ರ ಭಾವವಾಗಿ
ನನ್ನ ಮನದೊಳಗೆ ನೆಲೆಸು.
ಏನೆಂದು ಕರೆಯಲಿ ನಿನ್ನ, ಶಶಿ?
ನನ್ನ ಮನ
ಮಿಡಿಯುವ ಗೆಳೆಯ,
ನಿರ್ಮಲ ಸ್ನೇಹದ ಚಂದ್ರಬೆಳಕು ನೀನು—ನನ್ನ ಬದುಕಿನ ದಾರಿದೀಪ ನೀನು!
ಡಾ.ಸರಸ್ವತಿ ಕಳಸದ



