ಕಥಾ ಸಂಗಾತಿ
ಶ್ರೀಧರ ಗಸ್ತಿ
“ಕುಂಟಲಗಿತ್ತಿ”


ಮುರಗಾಲೆಪ್ಪನ ಧ್ವನಿ ಕ್ಷೀಣಿಸುತ್ತಿತ್ತು. ಹೆಂಡತಿ ಪಾರ್ವತಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಳು. ಆಕೆಯ ಸ್ಥಿತಿ ಕಂಡ ಕ್ಷಣವೇ ಆತನ ಉಸಿರು ಗಂಟಲಲ್ಲೇ ಸಿಕ್ಕಿಕೊಂಡಿತ್ತು. “ಯಾರಾದ್ರೂ ಕಾಪಾಡ್ರಿ…” ಎನ್ನುವ ಆತನ ಕೂಗು ಮನೆಯ ಗೋಡೆಗಳನ್ನು ದಾಟಿ ಹೊರಗೆ ಹೋಗಲೇ ಇಲ್ಲ. ಮುರಗಾಲೆಪ್ಪ ಅಂಗವಿಕಲ. ಸದಾ ಮೂರುಗಾಲಿಯನ್ನೇ ಆಶ್ರಯಿಸಿಕೊಂಡು ಬದುಕಿದವ. ಹೀಗಾಗಿ ಅವನ ನಿಜ ಹೆಸರು ಮರೆತು, ಊರಿಗೇ ಅವನು “ಮುರಗಾಲೆಪ್ಪ”ನಾಗಿಬಿಟ್ಟಿದ್ದ. ವಯಸ್ಸು ಮಾಗುತ್ತಿದ್ದರೂ ಮದುವೆ ಕೂಡಿ ಬಂದಿರಲಿಲ್ಲ. ಪಾರ್ವತಿಯೂ ಅಂಗವಿಕಲಳೇ. ಆದರೆ ಅದು ಮೊದಲ ನೋಟಕ್ಕೆ ಕಾಣಿಸುವಂತಿರಲಿಲ್ಲ. ಸ್ವಲ್ಪ ಓರೆಯಾಗಿ ನಡೆಯುತ್ತಿದ್ದಳು. ಕಪ್ಪು ಮೈಬಣ್ಣ, ದುಂಡನೆಯ ಮುಖ—ಆಕೆಯ ಸೌಂದರ್ಯ ರೂಪದಲ್ಲಿರಲಿಲ್ಲ; ಆಕೆಯ ಚುರುಕು ಮಾತುಗಳಲ್ಲಿ ಎದ್ದು ಕಾಣುತಿತ್ತು. ಒಂಟಿತನ ಕಾಡದಿರಲೆಂದು ಆಕೆ ಮುರಗಾಲೆಪ್ಪನನ್ನು ವರಿಸಿದ್ದಳು. ಗುಡಿಸಲಿನ ಚಾಪೆಯಡಿಯಲ್ಲಿ ಟೀ ಅಂಗಡಿ, ಮೂರುಗಾಲಿಯ ಗಾಡಿ—ಅಷ್ಟೇ ಮುರಗಾಲೆಪ್ಪನ ಆಸ್ತಿ. ಆದರೆ ಪಾರ್ವತಿ ಬಂದ ಮೇಲೆ ಆ ಚಿಕ್ಕ ಟೀ ಅಂಗಡಿಯೇ ನಿಧಾನವಾಗಿ ಹೊಟೇಲಾಗಿಬಿಟ್ಟಿತ್ತು. ಅಂತವಳು ಇಂದು ರಕ್ತದ ಮಡುವಿನಲ್ಲಿ ಒದ್ದಾಡುತಿದ್ದಳು. ರಾಯಣ್ಣ ಇದ್ದಿದ್ದರೆ ಅದರ ಕಥೆಯೇ ಬೇರೆ ಆಗುತಿತ್ತು. ಹೊಂಚು ಹಾಕಿ ಸಂಚು ಮಾಡಿ ಪಾರ್ವತೀನ ಹೊಡೆದದ್ದು ಊರ ತುಂಬಾ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಗಟ್ಟಿಗಿತ್ತಿ ಪಾರ್ವತಿ ಕೊಲೆ ಆಗೋದಂದ್ರೆ ಏನು,ಎನ್ನುವಂತೆ ಮಾತನಾಡುತಿದ್ದರು. ಆಕೆಯ ದಿಟ್ಟತನದ ವ್ಯಕ್ತಿತ್ವ ನೆನೆಸಿಕೊಳ್ಳುತ್ತಲೇ ಮುರಗಾಲೆಪ್ಪ ಕುಸಿದು ಬಿಟ್ಟ.
ರಾಜವಾಡೆ ಅಂದರೆ ಅದೇನು ರಾಜರಿಂದ ತುಂಬಿ ತುಳುಕುವ ಆಸ್ಥಾನವಾಗಿರಲಿಲ್ಲ. ಕಡುಬಡವರಿಂದ ತುಂಬಿಕೊಂಡ ಸ್ಲಂ ಏರಿಯಾ. ಆವತ್ತು ದುಡಿದು ಆವತ್ತೇ ತಂದು ತಿನ್ನುವ ಜನಾಂಗ. ಇದ್ದರೂ ಇಲ್ಲದಿದ್ದರೂ ರಾಜನಂತೆ ಸದಾ ನೆಮ್ಮದಿಯಿಂದ ಇರುವ ಜನಾಂಗ. ಇವರನ್ನು ನೋಡಿಯೇ ರಾಜವಾಡೆ ಹೆಸರು ಬಂದಿರಬೇಕು ಅನಿಸುತ್ತದೆ. ತಮಗೆ ತಾವೇ ನಿರ್ಮಿಸಿಕೊಂಡ ಮನೆಗಳು. ಜಾತಿಗಿಂತ ಸ್ಲಂ ಏರಿಯಾ ಅನ್ನೋದೇ ಪ್ರಧಾನ. ಸದಾಶಿವ, ಕೆಂಪ, ಭೀಮಣ್ಣ ಸೂರ ಇವರೆಲ್ಲ ಮುಖ್ಯವಾಗಿ ಕಾಣುವಂತಹ ವ್ಯಕ್ತಿಗಳು. ಇದರಲ್ಲಿ ಸದಾಶಿವನ ಸಾಕು ಮಗಳೇ ನಂದಿನಿ. ಅನಾಥನಿಗೆ ಅನಾಥ ಶಿಶು ಸಿಕ್ಕಿದ್ದರಿಂದ;ಮಗಳಂತೆ ಬೆಳೆಸಿದ. ಅವಳಿಗೆ ಎಂದಿಗೂ ಅನಾಥ ಪ್ರಜ್ಞೆ ಕಾಡಲಿಲ್ಲ. ಅದನ್ನು ಗೊತ್ತೂ ಮಾಡಿರಲಿಲ್ಲ. ಸದಾ ಚುರುಕು ಬುದ್ಧಿಯ ಹುಡುಗಿ ಎಲ್ಲರಿಗೂ ಪ್ರೀತಿಯ ಮಗಳಾಗಿದ್ದಳು. ಹುಟ್ಟಿನಿಂದಲೇ ರಾಜವಾಡೆಯ ಹೆಂಗಸರೆಲ್ಲ ಆಕೆಗೆ ಮೊಲೆ ಹಾಲುಣಿಸಿ ತಾಯಿಯ ಪ್ರೀತಿ ತುಂಬಿದ್ದರು. ಕಾಲೇಜು ಹಂತಕ್ಕೆ ಬಂದಾಗ ಅವಳ ಸೌಂದರ್ಯ ಕಣ್ಣು ಕುಕ್ಕುವಂತಿತ್ತು. ‘ಸ್ಲಂ ಮಂದಿಯೆಲ್ಲ, ಕಲಿತದ್ದು ಸಾಕು ಸಹದೇವ ಮದುವೆ ಮಾಡೋಣ’ ಅಂದರು. ಸಹದೇವ ಸುತಾರಾಂ ಒಪ್ಪಲಿಲ್ಲ. “ಮಗಳು ಕಲಿಯಲಿ ಏನಾದರೊಂದು ಸಾಧನೆ ಮಾಡಲಿ ಆಮೇಲೆ ನೋಡೋಣ” ಅಂದುಬಿಟ್ಟಿದ್ದ. ನಂದಿನಿಯು ಸಹ ಅಷ್ಟೇ ಚುರುಕಾಗಿ ಉತ್ತರಿಸಿದ್ದಳು. ತನ್ನ ಮದುವೆಯ ತಂಟೆಗೆ ಬರದಂತೆ ಬೇಡಿಕೊಂಡಿದ್ದಳು. ಮೇಲಾಗಿ ಅದೇ ಏರಿಯಾದಲ್ಲೇ ದೊಡ್ಡ ಕಾಲೇಜು ಇದ್ದುದರಿಂದ ತೊಂದರೆ ಅನಿಸಲಿಲ್ಲ. ನಂದಿನಿ ಜಾಣ ವಿದ್ಯಾರ್ಥಿನಿ ಆಗಿದ್ದಳು. ಕಾಲೇಜು ಅಂದಾಗ ಹುಡುಗಾಟಿಕೆ, ರ್ಯಾಗಿಂಗ್ ಮಾಡುವುದು ಇದ್ದದ್ದೇ. ಅದೆಲ್ಲವನ್ನು ಚೆನ್ನಾಗಿ ನಿಭಾಯಿಸುವ ಚುರುಕುತನ ಅವಳಿಗೆ ಇತ್ತು. ಜಾಣ ಹುಡುಗಿಯಾಗಿದ್ದರೂ ತುಸು ಒರಟುತನ, ಗುಂಡಾಗಿರಿ ರೂಢಿಸಿಕೊಂಡಿದ್ದಳು. ಅದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಳಸಿದ ತಂತ್ರವಾಗಿತ್ತು. ಹುಡುಗಿಯರ ಜೊತೆ ಜಾಣ,ಉಡಾಳ ಹುಡುಗರೆಲ್ಲ ಸಹ ಇದ್ದರು. ಸ್ನೇಹದ ವಾತಾವರಣವೇ ಇತ್ತು. ಹಳೆಯ ಸಿನೇಮಾಗಳಂತೆ ವಿಲನ್ ಇರಲಿಲ್ಲ.
ಬಸವರಾಜೇಗೌಡ ಆ ಸಂಸ್ಥೆಯ ಮುಖ್ಯಸ್ಥ. ಆತನಿಗೆ ತುಂಬಾ ಗೌರವ ಇತ್ತು. ಮೂವತ್ತೈದರ ಹರೆಯ ಇರಬಹುದು. ಬಂಗಾರದ ಚಮಚ ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿದ್ದರಿಂದ ಸುಖ ಸುಪ್ಪತ್ತಿಗೆಯ ರಾಜವೈಭವ. ಆತನ ಬಗ್ಗೆ ಎಲ್ಲಿಯೂ ನೆಗೆಟಿವ್ ಮಾತುಗಳೇ ಇರಲಿಲ್ಲ. ಸದಾ ಲವಲವಿಕೆಯಿಂದ ಕೆಲಸ ಮಾಡುವವ. ಕಾಲೇಜಿನ ಪ್ರತಿಯೊಂದು ಕಾರ್ಯಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತಿದ್ದ. ಪ್ರತಿ ವರ್ಷದಂತೆ ಶಾಲೆಯ ವಾರ್ಷಿಕೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ ಜೋರಾಗಿಯೇ ನಡೆದಿತ್ತು. ದ್ವಿತೀಯ ವರ್ಷದ ನಂದಿನಿ ಶಾಲಾ ವಾರ್ಷಿಕೋತ್ಸವದ ನೇತ್ರತ್ವ ವಹಿಸಿದ್ದಳು. ‘ನೋಡಮ್ಮ ಈ ವರ್ಷದ ವಾರ್ಷಿಕೋತ್ಸವ ಬಹಳ ಅದ್ದೂರಿಯಾಗಿ ಮಾಡಬೇಕೆಂದು ಅಧ್ಯಕ್ಷರು ಹೇಳಿದ್ದಾರೆ. ಸಂಸ್ಥೆಗೆ ನೂರರ ಸಂಭ್ರಮ ಅಂತೆ. ನಿನ್ನ ಮೇಲೆ ಬಹಳಷ್ಟು ಜವಾಬ್ದಾರಿ ಇದೆಯೆಂದು’ ಪ್ರಿನ್ಸಿಪಾಲ್ ನಾಗಶೆಟ್ಟಿ ಹೇಳಿದ್ದರು. ನಂದಿನಿ ತನ್ನ ಸ್ನೇಹಿತರ ಸಹಕಾರದಿಂದ ಶ್ರದ್ಧೆಯಿಂದಲೇ ಎಲ್ಲ ಕೆಲಸವನ್ನು ಮಾಡಿದ್ದಳು. ಸಣ್ಣ ಪುಟ್ಟ ಸಮಸ್ಯೆಗಳನ್ನೆಲ್ಲಾ ಪ್ರಿನ್ಸಿಪಾಲರು ನೀಗಿಸಿದರೆ, ಕೆಲವೊಮ್ಮೆ ಅಧ್ಯಕ್ಷ ಬಸವರಾಜೇಗೌಡರನ್ನು ಭೇಟಿಯಾಗಬೇಕಿತ್ತು.
ವಾರ್ಷಿಕೋತ್ಸವದ ಸಮಾರಂಭ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಿದ್ದವು. ನಾಟಕವೊಂದರ ಪಾತ್ರದಲ್ಲಿ ನಂದಿನಿ ಬಿಳಿವಸ್ತ್ರಧಾರಿಯಾಗಿ ವೇದಿಕೆಗೆ ಬಂದಳು. ಇಡೀ ವೇದಿಕೆ ಅವಳ ಸೌಂದರ್ಯ ಮತ್ತು ನಟನೆಗೆ ಚಪ್ಪಾಳೆ ಹೊಡೆದಿತ್ತು. ಆಕೆಯ ಮೋಹಕ ನಡಿಗೆ, ಮಾತು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಆ ಸಲದ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಯೂ ಸಹ ಆವಳ ಪಾಲಿಗೆ ಲಭಿಸಿತ್ತು. ರಾಜವಾಡೆಯ ಸ್ಲಂ ಜನರಿಗೆ ರಾಣಿಯೊಬ್ಬಳು ಸಿಕ್ಕಂತೆ ಭಾಸವಾಗಿತ್ತು. ವಾರ್ಷಿಕೋತ್ಸವ ಮುಗಿದಾದ ಮೇಲೆ ಎಲ್ಲ ಗೆಳೆಯರು ತಮ್ಮ ಪಾಲಿನ ಕರ್ತವ್ಯ ಮುಗಿಸಿ ಮನೆಯತ್ತ ಸಾಗಿದರು. ಇಡೀ ಊರು, ಕಾಲೇಜಿನ ಚಟುವಟಿಕೆಗಳನ್ನು, ಬಸವರಾಜೇಗೌಡನನ್ನು, ಹೊಗಳುತಿದ್ದರು. ಪ್ರಿನ್ಸಿಪಾಲ್, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೆಚ್ಚುಗೆಯ ಮಾತುಗಳು ಲಭಿಸಿದ್ದವು. ವಾರ್ಷಿಕೋತ್ಸವ ಮುಗಿದಾದ ಮೇಲೆ ಕ್ಲಾಸುಗಳು ನಡೆಯುತ್ತಿರಲಿಲ್ಲ. ಮಾರನೇ ದಿನ ಬಸವರಾಜೇಗೌಡ ಖುಷಿಯ ಪಾರ್ಟಿ ಇಟ್ಟುಕೊಂಡಿದ್ದನು. ಪಾರ್ಟಿಗೆ ಎಲ್ಲ ವಿದ್ಯಾರ್ಥಿಗಳನ್ನು ಕರೆದಿದ್ದನು. ಕಾಲೇಜ ವಿದ್ಯಾರ್ಥಿಗಳೆಲ್ಲ ಜಮಾಯಿಸಿ ಮತ್ತೇ ಹಾಡು ಹರಟೆಯಲ್ಲಿ ತೊಡಗಿದ್ದರು. ಬಸವರಾಜೇಗೌಡನಿಗೆ ಮುಂದೆ ಎಂ ಎಲ್ ಎಂ ಆಗುವ ಕನಸು ಗರಿಗೆದರಿತ್ತು. ಅದನ್ನು ಎಲ್ಲರಿಗೂ ಹೇಳಿದ್ದ. ತನ್ನ ಪರವಾಗಿ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದನು. ಎಲ್ಲರಿಗೂ ಭರ್ಜರಿ ಊಟದ ಔತಣ ಖುಷಿ ನೀಡಿತ್ತು.
ಬೆಳಗಾಗುತಿದ್ದಂತೆ ಬಸವರಾಜೇಗೌಡನ ಕಾರು ರಾಜವಾಡೆಯತ್ತ ಸಾಗಿತು. ಸದಾಶಿವನ ಮನೆಯ ಮುಂದೆ ಕಾರು ನಿಂತಿತು. ಅಕ್ಕ ಪಕ್ಕದ ಜನರೆಲ್ಲರೂ ಕಾತರದಿಂದ ಅತ್ತಲೇ ದೃಷ್ಟಿ ಹಾಯಿಸಿದರು. ನಂದಿನಿ ಗೌಡನಿಗೆ ಜೋರಾಗಿಯೇ ಬೈಯುತ್ತಿದ್ದಳು. ಊರ ಸಾವ್ಕಾರನಿಗೆ ಆ ಹುಡುಗಿ ಬೈಯುವುದು ಕೇಳಿ ಅದರಲ್ಲೂ ಒಳ್ಳೆಯ ಹೆಸರು ಗಳಿಸಿದವ. ಇನ್ನೂ ಎಷ್ಟುದಿನ ಹೀಗೆ ಬ್ಲ್ಯಾಕ್ ಮೇಲ್ ಮಾಡುತ್ತೀರಿ ಎಂದು ಚೀರಾಡುತಿದ್ದಳು.ಅಪ್ಪ ಸದಾಶಿವ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದ. ನಂದಿನಿ ಬಿಕ್ಕಿಬಿಕ್ಕಿ ಅಳುತಿದ್ದಳು. ಬಸವರಾಜೇಗೌಡ ಗಹಗಹಿಸಿ ನಗುತ್ತಾ, ವಿಡಿಯೋ ತೋರಿಸುತಿದ್ದಂತೆ ಹೆದರಿದಳು. ನೀನೊಬ್ಬ ಮೋಸಗಾರ ಅಂತಾ ಊರಿಗೆ ಗೊತ್ತು ಮಾಡುತ್ತೇನೆ ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಹರಿಹಾಯ್ದಳು. ‘ಈ ಬಸವರಾಜೇಗೌಡನಿಗೆ ರಾಜೀಯಾದರೆ ಈ ರಾಜವಾಡೆಗೆ ನೀನೇ ರಾಣಿ’ ಎಂದು ಹೇಳುತಿದ್ದ. “ನಿನ್ನ ರಾಜವಾಡೆಗೂ ನಿನಗೂ ಬೆಂಕಿ ಹಾಕಬೇಕು, ನೀನೊಬ್ಬ ಗೋಮುಖ ವ್ಯಾಘ್ರ” ಎಂದು ಜೋರು ಮಾಡುತಿದ್ದಳು. ‘ಕಿರುಚಬೇಡ ನಂದಿನಿ, ಇಂದು ರಾತ್ರಿ ಕಾರು ಕಳಿಸುವೆ ಈ ಗೌಡನ ರಾಜವಾಡೆಗೆ ಬರಬೇಕು,ಬರಲೇಬೇಕು,ಬರುತ್ತೀಯಾ’ ಎಂಬ ನಾಟಕದ ಮಾತುಗಳನ್ನಾಡಿ ಹೊರಟು ಹೋದ. ಅತ್ತ ಕಾರು ಹೋಗುತ್ತಿದ್ದಂತೆ ಸದಾಶಿವ ಮಗಳನ್ನು ತರಾಟೆಗೆ ತೆಗೆದುಕೊಂಡನು. ಹೊಡೆಯಲು ಕೈ ಎತ್ತಿದನು ಆದರೆ ಎತ್ತಿದ ಕೈ ಮೇಲೇಳುವ ಮೊದಲೇ ಸೊಟ್ಟಾದವು. ಬೈಯಲು ತಗೆದ ಬಾಯಿ ತಿರುವು ಮುರುವಾಯಿತು. ಬಾಯಿಂದ ಜೊಲ್ಲು ಸುರಿಯಲಾರಂಭಿಸಿತು. ಸದಾಶಿವ ಆಘಾತದ ಸುದ್ದಿಗೆ ಪಾರ್ಶ್ವವಾಯು ಪೀಡಿತನಾಗಿದ್ದ.
“ಅಪ್ಪಾ ನಾನು ತಪ್ಪು ಮಾಡಿಲ್ಲಪ್ಪ ಎಲ್ಲಾ ಮೋಸ ಮಾಡಿದ್ದಾರೆ “ ಎಂದು ಅಪ್ಪನ ಮೇಲೆ ಒರಗಿದಳು. ಬಾಯಿಯಿಂದ ಬುರುಗು ಬುಸುಗುಡುತ್ತಲೇ ಇತ್ತು. “ಅಪ್ಪಾ ಅಂದು ವಾರ್ಷಿಕೋತ್ಸವ ಮುಗಿದಾದ ಮೇಲೆ ಎಲ್ಲರಿಗೂ ಜೂಸ್ ಕೊಟ್ಟರು. ನಾನು ಸಹ ಕುಡಿದೆ ಅಮೇಲೆ ಏನಾಯಿತೋ ಗೊತ್ತಿಲ್ಲ. ನನಗೆ ಎಚ್ಚರವಾದಾಗ ಎಲ್ಲರ ನಡುವೆನೇ ಇದ್ದೆ. ನನಗೆ ಯಾವುದು ಗೊತ್ತಾಗಲಿಲ್ಲ ಸ್ವಲ್ಪ ಸುಸ್ತಾಗಿತ್ತು ಅಷ್ಟೆ. ಅದು ಏಕೆ ಏನು ಎಂಬುದನ್ನು ಯಾರೂ ಹೇಳಲೇ ಇಲ್ಲ. ನನ್ನ ಜೊತೆ ಇದ್ದವರೆಲ್ಲಾ ಗೊತ್ತಿದ್ದರೂ ನನಗೆ ಮೋಸ ಮಾಡಿದ್ದಾರೆ” ಎಂದು ಅಳಲಿಕ್ಕೆ ಶುರುಮಾಡಿದಳು. ಮರುದಿನ ನನ್ನನ್ನು ಕರೆಸಿಕೊಂಡು ವಿಡಿಯೋಗಳನ್ನು ತೋರಿಸಿದಾಗ ನಂಬಲಾಗಲಿಲ್ಲ,ಪ್ರತಿಭಟಿಸಿದೆ. ಅವನ ಮೇಲೆ ಏರಿ ಹೋದೆ. ಆ ರಭಸದಲ್ಲಿ ನನ್ನನ್ನು ಮತ್ತೇ ಹಾಳುಮಾಡಿದ. “ಹೀಗೆ ಕೊಸರಾಡಿದರೆ ನಿನ್ನ ಹೆಣ ರಾಜವಾಡೆ ಕಾಲುವೆಯಲ್ಲಿರುತ್ತದೆ. ರಾಜೀಯಾಗದಿದ್ದರೇ ಈ ವಿಡಿಯೋಗಳೆಲ್ಲ ಮಿಡಿಯಾಗಳಲ್ಲಿರುತ್ತವೆ ಎಂದು ಹೆದರಿಸಿದ. ಮತ್ತೇ ಮತ್ತೇ ಭೋಗಿಸಿದ. ಅಪ್ಪ ಈಗ ಹೇಳು ನಂದೇನಾದರೂ ತಪ್ಪೈತಾ ಹೇಳು ಹೇಳು” ಎಂದು ಗದ್ದ ಹಿಡಿದು ಅಲುಗಾಡಿಸಿದಳು. ಸದಾಶಿವ ಶಿವನ ಪಾದ ಸೇರಿಬಿಟ್ಟಿದ್ದ.
ತಾನಿಲ್ಲೇ ಇದ್ದರೇ ಈ ಸಮುದಾಯವೇ ನನ್ನನ್ನು ತಪ್ಪಿತಸ್ಥಳನ್ನಾಗಿ ಮಾಡುತ್ತದೆ ಎಂದು ಹೆದರಿದಳು. ಆತ್ಮಹತ್ಯೆಗೆ ಒಳ ಮನಸ್ಸು ದಾರಿ ತೋರಿಸಿತು. ಆದರೆ ಮತ್ತೊಂದು ಕಡೆ ಎಚ್ಚರಿಸಿತು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗುತ್ತೇನು? ಎಂದು ಪ್ರಶ್ನಿಸಿತು. ಅಪ್ಪನ ದಿನಕರ್ಮ ಮುಗಿಸಿದ ನಂದಿನಿ ಊರು ಬಿಟ್ಟಳು. ಮನಸ್ಸು ಎಲ್ಲಿಗೆ ಕರೆದೊಯ್ಯುತ್ತೋ ಒಯ್ಯಲಿ ಎಂದು ರೈಲು ನಿಲ್ದಾಣದತ್ತ ನಡೆದಳು. ಚಲಿಸಲು ರೇಡಿಯಾಗಿದ್ದ ರೈಲನ್ನು ಏರಿದಳು.
———-***———-
ರೈಲು ಹತ್ತಿದ ಸ್ವಲ್ಪ ಹೊತ್ತಿಗೆ ಟೀಕೇಟ್ ಕಲೆಕ್ಟರ್ ಬಂದ. ತನ್ನ ಪರಿಸ್ಥಿತಿಯನ್ನು ಅವನಿಗೆ ವಿವರಿಸಿದಳು. ಆತ ಸೀಟು ಕೊಡುತ್ತೇನೆಂದು ಯಾರೂ ಇಲ್ಲದ ಬೋಗಿಗೆ ಕರೆದುಕೊಂಡು ಹೋದ. ತನ್ನ ಅಮಾಯಕತೆಯನ್ನು ದುರುಪಯೋಗ ಪಡಿಸಿಕೊಂಡನು. ಯಾರೂ ಇಲ್ಲದ ಬೋಗಿಯಲ್ಲಿ ಮತ್ತೇ ನನ್ನ ಶೀಲ ಹರಣವಾಗಿತ್ತು. ನನ್ನ ಕೂಗು ಯಾರಿಗೂ ಕೇಳಲೇ ಇಲ್ಲ. ಬೆಳಗಾಗುವ ಹೊತ್ತಿಗೆ ರೈಲು ಜಾಗನೂರ ತಲುಪಿತು. ಅಲ್ಲಿ ರೋಡ ಕ್ರಾಸಿಂಗ್ ಇದ್ದುದರಿಂದ ರೈಲು ನಿಂತಿತ್ತು. ನನ್ನ ಪಕ್ಕದಲ್ಲಿ ಕೂತಿದ್ದ ಟಿಕೇಟ್ ಕಲೆಕ್ಟರ್ ನಿದ್ರೆಗೆ ಜಾರಿದ್ದ. ಕಾಲೇಜಿನಲ್ಲಿ ಕಲಿಸಿದ್ದ ಕರಾಟೆ ಲೇಟಾಗಿ ನೆನಪಿಗೆ ಬಂತು. ಜೋರಾದ ಮುಷ್ಠಿಯೊಂದಿಗೆ ಆತನ ಮುಖಕ್ಕೆ ಗುದ್ದಿದೆ. ಗೊಳಕ್ ಎಂದು ಗೋಣು ಚೆಲ್ಲಿದ. ಆತನ ಕಿಸೆಯಲ್ಲಿದ್ದ ಹಣವನೆಲ್ಲ ಬಾಚಿಕೊಂಡು ರೈಲು ಇಳಿದು ಬರಬರನೇ ನಡೆಯತೊಡಗಿದೆ. ನನ್ನ ನಡೆಯುವ ರಭಸಕ್ಕೆ ಯಾರಿಗಾದರೂ ಏನೂ ಸಂದೇಹ ಬರದಿರಲೆಂದು ನಟಿಸಿದೆ. ಅಲ್ಲೊಬ್ಬ ಟಾಂಗಾವಾಲಾ ಜನರನ್ನು ಕರೆಯುತಿದ್ದ. ‘ಬರ್ತಿಯೇನು ಬೇಟಿ’ ಅಂತಾ ಕೇಳಿದ. ಮೊದಲು ಆ ಊರನ್ನು ದಾಟಬೇಕಿತ್ತು. “ಹುಂ” ಎಂದೆ. ‘ಎಲ್ಲಿಗೆ ಹೋಗಬೇಕು’ ಬೇಟಿ ಅಂದಾ. ನನ್ನ ಜೊತೆ ಕುಳಿತವರು ಮಠಕ್ಕೆ ಹೋಗಬೇಕು ಎಂದು ಹೇಳಿದ್ದು ನೆನಪಾಗಿ “ಮಠ” ಎಂದೆ. ಟಾಂಗಾವಾಲಾ ಮಾತುಗಾರನಾಗಿದ್ದ. ಎಲ್ಲರನ್ನೂ ಮಾತನಾಡಿಸುತ್ತಲೇ ‘ನನ್ನ ಹೆಸರು ರಸೂಲ್ ಟಾಂಗಾವಾಲಾ ಕೆಲಸ ಮಾಡ್ತಿನಿ, ಅವಶ್ಯ ಇದ್ರೆ ಫೋನ್ ಮಾಡ್ರಿ’ ಅಂತಾ ಕಾರ್ಡ್ ಕೊಟ್ಟ.
ಟಾಂಗಾವಾಲಾನ ಕುದುರೆ ಮಠದ ಮುಂದೆ ಬಂದು ನಿಂತಿತು. ದೊಡ್ಡ ಅಕ್ಷರದಲ್ಲಿ “ಬಟಾಬಯಲು ಮಠಕ್ಕೆ ಸ್ವಾಗತ” ಎಂದು ಬರೆಯಲಾಗಿತ್ತು. ಟಾಂಗಾವಾಲಾನಿಗೆ ಎಲ್ರೂ 50 ರೂ ಕೊಡ್ತಾ ಇದ್ರು. ನಾನೂ ಸಹ ನೂರರ ನೋಟೊಂದನು ಕೊಟ್ಟೆ. ಬೇಟಿ ಯಾವುದೋ ಸಮಸ್ಯೆ ತುಗೊಂಡು ಬಂದಂಗ ಕಾಣ್ತೀಯ ಬೇಡ ಬೇಟಿ. ಅಂತಾ ಹೇಳಿ ಹೊರಟ. ‘ಏ ಟಾಂಗಾವಾಲಾ ಇದರಾಗ ಏನೂ ಮೋಸ ಇಲ್ಲ ಹೌದಲ್ಲ’ ಅಂದೆ. “ಬೇಟಿ ನಿನಗ್ಯಾರೋ ಮೋಸ ಮಾಡವ್ರೆ ಅಂತಾ ಎಲ್ಲಾರ್ನೂ ಹಂಗ ನೋಡಬ್ಯಾಡಾ, ಮೈಮರತು ಮೋಸಾನೂ ಹೋಗಬ್ಯಾಡಾ” ಅಂತೇಳಿ ಹೊರಟೇ ಬಿಟ್ಟ. ಹೊರವಲಯದ ಕಾನನದ ಮಧ್ಯೆ ಮಠ ಎನ್ನುವುದಕ್ಕೆ ಅರ್ಥ ಬರುವಂತಿತ್ತು. ಒಳ್ಳೆಯ ಸ್ಥಳ ಅಂತನಿಸಿದರೂ ಮಠಗಳು ಅಲ್ಲಿಯ ಸ್ವಾಮಿಗಳ ಕಾಮಲೀಲೆಗಳು ನೆನಪಿಗೆ ಬಂದು ತುಸು ಭಯವಾಯಿತು. ನಂದಿನಿ ನಿಧಾನವಾಗಿ ಮಠದೊಳಗೆ ಹೆಜ್ಜೆ ಹಾಕಿದಳು. ಒಬ್ಬ ಕೇಸರಿ ಸೀರೆಯುಟ್ಟ ಹೆಂಗಸು ಎದುರುಗೊಂಡಳು. ಮಹಿಳೆ ಸಿಕ್ಕಿದ್ದಕ್ಕೆ ನಂದಿನಿ ತುಸು ನಿರುಮ್ಮಳವಾದಳು. ಅವಳ ಸಹಾಯದಿಂದ ನಂದಿನಿ ನಿತ್ಯ ಕರ್ಮ ಮತ್ತು ಸ್ನಾನ ಮುಗಿಸಿದಳು.
ಅಮಾವಾಸ್ಯೆ ಇದ್ದುದರಿಂದ ಭಕ್ತರು ಬಹಳಷ್ಟು ಜನ ಆಗಮಿಸುತಿದ್ದರು. ಎಲ್ಲರೂ ಸ್ವಾಮಿಗಳ ದರ್ಶನಕ್ಕಾಗಿ ಕಾದು ಕುಳಿತಿದ್ದರು. ನಂದಿನಿಗೆ ಅದಾವ ಉದ್ದೇಶವೂ ಇರಲಿಲ್ಲ. ಕೆಲ ಹೊತ್ತಿಗೆ ಎಲ್ಲರೂ ನಿರೀಕ್ಷಿಸಿದ್ದ ಸ್ವಾಮಿಗಳು ಗುಹೆಯ ಬಾಗಿಲನ್ನು ತೆರೆದು ಹೊರಬಂದರು. ಆದರೆ ಅವರು ಸ್ವಾಮಿನಿ ಆಗಿದ್ದರು. ನಂದಿನಿಗೆ ಕುತೂಹಲ ಉಂಟಾಯಿತು. ಇದೇನು? ಹೊರಗಡೆ ಬಟಾಬಯಲು ಸ್ವಾಮಿಗಳ ಮಠ ಅಂತಿದೆ ಒಳಗಡೆ ಸ್ವಾಮಿನಿ ಇದ್ದಾರೆ ಎಂದು ಒಂದುಕಡೆ ಖುಷಿ,ಮತ್ತೊಂದೆಡೆ ಕುತೂಹಲವೂ ಉಂಟಾಯಿತು. ಎಲ್ಲರ ಸಮಸ್ಯೆಗೆ ಪರಿಹಾರ ಕೊಟ್ಟಾದ ಮೇಲೆ ನಂದಿನಿಯನ್ನು ಕೈ ಮಾಡಿ ಕರೆದರು. ‘ಏನು? ದಾರಿ ತಪ್ಪಿ ಬಂದಿಯೇನು?’ ಅಂತಾ ಕೇಳಿದರು. “ಹುಂನ್ರಿ” ಅಂದಳು. ಮಾದೇವ ಅಂತಾ ಕರೆದರು. ಯಾರೋ ಹೆಂಗಸು ಬಂದಳು. ‘ಇವಳನ್ನು ಕರೆದುಕೊಂಡು ಹೋಗು ರೆಸ್ಟ್ ಮಾಡಲಿ’ ಅಂದರು. ಅಲ್ಲಿ ಎಲ್ಲವೂ ಸ್ವಲ್ಪ ವಿಚಿತ್ರವೆನಿಸಿತು. ಎಲ್ಲಿ ಮತ್ತೊಂದು ಸಮಸ್ಯೆಗೆ ಸಿಕ್ಕ ಹಾಕೊಳ್ತಿನೇನೋ ಅಂತನಿಸಿತು. ಮುಂಜಾನೆ ಉಪ್ಪಿಟ್ಟು ಮಧ್ಯಾಹ್ನ ಊಟ ಚೆನ್ನಾಗಿಯೇ ಆಯಿತು. ಗಿಡುಗರ ಕೈಗೆ ಸಿಕ್ಕು ನಲುಗಿದ ದೇಹ ವಿಶ್ರಾಂತಿ ಬಯಸಿ ನಂದಿನಿ ನಿದ್ರೆಗೆ ಜಾರಿದಳು.
ಎಚ್ಚರವಾದಾಗ ರಾತ್ರಿ ಎಂಟಾಗಿತ್ತು. ನಂದಿನಿಯ ಪಕ್ಕದಲ್ಲಿ ಗಡ್ಡಧಾರಿ ಸ್ವಾಮಿ ಕುಳಿತಿದ್ದನು. ನಂದಿನಿ ಚಟಾರ್ ಎಂದು ಚೀರಿದಳು. “ಯಾ, ಯಾರು ನೀನು” ಅಂತಾ ಕೇಳಿದಳು. ‘ಏ! ಇಲ್ಲಿ ಚೀರೋದು, ಒದರೋದು ಇನ್ನಮ್ಯಾಲ ಚಾಲು ಆಗ್ತಾವ. ನಿನ್ನ ಕೂಗು ಇಲ್ಲಿ ಯಾರಿಗೂ ಕೇಳಲ್ಲ. ರಾತ್ರಿ ಎದ್ದ ದೆವ್ವಗಳು ಕೂಗ್ತಾವಂತ ಊರಾಗ ಹಬ್ಬಿಸಿಬಿಟ್ಟೇವಿ. ಯಾರೂ ಹೊರಗ ಬರಲ್ಲ. ಈ ಕಡೆ ಅಂತೂ ಹೊಳ್ಯೂ ಮಕ್ಕೊಳ್ಳಾಂಗಿಲ್ಲ. ನಾವು ಸೇವಾ ಮಾಡಾಕ ಹುಟ್ಟಿದವ್ರು, ಸೇವಾ ಮಾಡ್ತಾ ಇರಬೇಕು. ಬಂದಾವ್ರಿಗೆ ಹಾಸಿಗ್ಯಾಗಬೇಕು. ಹೊತ್ತಕೊಳ್ಳಾಕ ಚಾದ್ದರ ಆಗಬೇಕು. ಹೊಟ್ಟಿಗೆ ಆಸ್ರಾಗಬೇಕು. ಬಿದ್ದ ಹೋಗೋ ಈ ದೇಹ ಇದ್ರೆಷ್ಟು ಬಿಟ್ರೆಷ್ಟು ಒಬ್ಬರಿಗೆ ಅನುಕೂಲ ಆಗಬೇಕು. ನಾವು ಅವ್ರಿಗೆ ಮೆಟ್ಟಿಲಾಗಬೇಕು. ಒಟ್ಟ ಹೇಳ್ತನು ಕೇಳು, ನಾವ್ಯಾಲ್ಲಾ ಒಂತರ ಕುಂಟಲಗಿತ್ಯಾರ ಇದ್ದಂಗ, ಕುಂಟಲಗಿತ್ಯಾರು ಅಂದ್ರ ಜಗಳಾ ಹಚ್ಚೋದಲ್ಲ, ಅನುಕೂಲ ಮಾಡಾಕ ಸಾಥ್ ಕೊಡಬೇಕು. ಇರೋ ನಾಕ ದಿನಾ ಚೆಂದಂಗಿರಬೇಕು. ನಿನ್ನ ತೆಳ್ಳಾನ ದೇಹ, ಬೆಳ್ಳಾನ ಮೈಯಿ ರುಚಿ ನೋಡಿದ್ ಮ್ಯಾಲ ಬಿಡ್ತಾರೇನು? ಸುಮ್ನಿರೋದ ಅಷ್ಟ. ಇನ್ನಮ್ಯಾಕ ಗೌಡ್ರು ನಿನ್ನನ್ನು ಹಳಸೋತನಾ ಬಳಸ್ಕೋತಾರ. ಅದಕ್ಕ ನೀನು ಗೌಡ್ರಿಗೆ ಆಸ್ರಾಗಬೇಕು. ಏ, ಏಳ ಹುಚ್ಚಿ ಊಟ ಮಾಡೇಳು’ ಅಂದಾಗ ಮೈ ತುಂಬಾ ಚೇಳು ಕಟುಕಿದಂತೆ ಅನಿಸಿತು. ನಂದಿನಿ ಮತ್ತೇ ಗೌಡನ ಆಖಾಡದಲ್ಲೇ ಬಂದು ಸಿಲುಕಿದ್ದು ಬರಸಿಡಿಲು ಬಡಿದಂಗಾಯಿತು.
“ಅಯ್ಯೋ ದೇವ್ರೆ! ಇದು ಒಂದ ಮಠಾನಾ?ಇಲ್ಲಿ ದೇವ್ರು ಇದಾವಾ? ಇಂತಾದು ಒಂದ ಭಂಡ ಜನ್ಮ ಬೇಕಾ? ಅಂತಾ ಸಿಡುಕಿದಳು. ಕೂಗಾಡಿದಳು ನಮ್ಮಂತ ಹೆಣ್ಣುಮಕ್ಕಳನ್ನು ಈ ರೀತಿ ಬಳಸಿಕೊಳ್ಳುವ ನಿಮ್ಮ ಗೌಡನಿಗೆ ನನ್ನದೊಂದು ಧಿಕ್ಕಾರವಿರಲಿ. ಅವನಿಗೆ ಅನುಕೂಲ ಮಾಡಿಕೊಟ್ಟು ನಮ್ಮಂತ ಹೆಣ್ಣುಗಳನ್ನು ಬಲಿಕೊಡೋ ನೀವು ಗಂಡಸರಲ್ಲ ಸೆಂಡರು ಅಂದಳು. ಹೆಣ್ಣಿಗೆ ಹೆಣ್ಣೆ ಶತ್ರುಗಳಾಗಿ, ಅಂತ ನಾಲಾಯಕನಿಗೆ ಸೆರಗ ಹಾಸಲಿಕ್ಕೆ ತಲಿ ಹಿಡಿಯೋ ಖರೆ ಖರೆನ ಕುಂಟಲಗಿತ್ತಿಯರು ನೀವೆಲ್ಲ. ನಿಮ್ಮನ್ನ ಸುಮ್ಮನೇ ಬಿಡಲ್ಲ” ಎಂದು ಕೂಗಾಡಿದಳು. ಸಿಕ್ಕ ವಸ್ತುಗಳನ್ನೆಲ್ಲಾ ಬೀಸಾಡಿದಳು. ಅಲ್ಲಿ ರಾತ್ರಿಯ ದೃಶ್ಯಗಳನ್ನು ನೋಡಿ ದಂಗಾದಳು. ದಲ್ಲಾಳಿಗಳು, ರಾಜಕಾರಿಣಿಗಳು, ಯುವ ಪುಡಾರಿಗಳು, ಹೀಗೆ ನಾನಾ ತೆರನಾದ ಜನರು ಅಲ್ಲಿ ಬರುತಿದ್ದರು. ಮುಂಜಾನೆ ತನ್ನನ್ನು ಸ್ವಾಗತಿಸಿದ ಸ್ವಾಮಿನಿ ಕುಡಿದು ತೂರಾಡುತಿದ್ದಳು. ಅವಳಂತೆ ಅನೇಕರು ಕಂಡರು. ದೊಡ್ಡ ದೊಡ್ಡವರ ಹೆಣ್ಣು ಗಂಡುಗಳು ಸ್ವೇಚ್ಛಾಚಾರಿಗಳಾಗಿದ್ದರು. ಹಗಲು ಹೊತ್ತಿನಲ್ಲಿರುವ ಸ್ವಾಮಿನಿಷ್ಠೆ ದೇವರು, ಸ್ವಾಮಿಗಳೆಲ್ಲ ಮೂಲೆ ಗುಂಪಾಗಿ ಹೊಸ ರೂಪ ಬರುತಿತ್ತು. ಇದು ಮಠವೋ ಬಾರೋ ಅಥವಾ ವೇಶ್ಯಾಗೃಹವೋ ಅನ್ನುವಷ್ಟು ಕ್ರೂರವಾಗಿತ್ತು. ಹಿಂದಿನ ದಿನವೇ ನೊಂದ ದೇಹ, ಮನಸ್ಸು ಮತ್ತೇ ಕಸಿವಿಸಿಗೊಂಡಿತು. ನಂದಿನ ಊಟ ಮಾಡಲಿಲ್ಲ; ಬದಲಾಗಿ ಇಲ್ಲಿಂದ ಹೊರಹೋಗಲು ಸಂಚು ರೂಪಿಸುತಿದ್ದಳು. ತಕ್ಷಣ ಆಕೆಗೆ ಹೊಳೆದದ್ದು ಟಾಂಗಾವಾಲಾ ರಸೂಲ ಕಾಕಾ. ಆತನಿಗೆ ಮೆಸೆಜ್ ಮಾಡಿ, ಇಲ್ಲಿಯ ಪರಿಸ್ಥಿತಿ ವಿವರಿಸಿದಳು. ಎಸ್ಕೇಪ್ ಮಾಡುವಂತೆ ಭಿನ್ನವಿಸಿದಳು. ಆವನೂ ಇವರಂತೆಯೇ ಇದ್ದರೆ ಎಂದು ಯೋಚಿಸಿ ಮತ್ತೇ ಡಿಲಿಟ್ ಮಾಡಿದಳು, ಮತ್ತೇ ಹಾಕಿದಳು.’ ರಸೂಲ ಅದನ್ನು ನೋಡಿ ಮುಗುಳ್ನಗುತ್ತಾ, “ಅಲ್ಲಿಯ ರಾತ್ರಿ ವಿಷಯಗಳನ್ನು ಕೇಳಿದ್ದೆ,ಆದರೆ ಹೀಗೆಲ್ಲಾ ನಡೀತದ ಅನ್ನುವುದು ಗೊತ್ತಿರಲಿಲ್ಲ. ನೀನು ಎಲ್ಲರೂ ಮಲಗಿದ್ದಾರೆ ಎಂದು ಖಾತ್ರಿ ಆದಮೇಲೆ, ಸಮೀಪದಲ್ಲೇ ಒಂದು ಮಸೀದಿ ಇದೆ ಅಲ್ಲಿಗೆ ಬಾ” ಅಂತ ಮೆಸೇಜ್ ಕಳಿಸಿದ. ಹೊರಗೆ ಬರುವುದು ಅಷ್ಟು ಸುಲಭವಲ್ಲ. ಹೆಜ್ಜೆ ಹೆಜ್ಜೆಗೂ ಎಲ್ಲಾರ್ನೂ ನೋಡ್ತಾ ಇರ್ತಾರ, ನೀನು ಹೊರಗಡೆ ಬರಬೇಕಂದ್ರ ಅಲ್ಲಿ ಸ್ವಾಮಿನಿಯರ ಡ್ರೆಸ್ ಹಾಕ್ಕೊಂಡು ಬಾ, ಅಮಾವಾಸ್ಯೆ ಕತ್ತಲೆಯಿದೆ, ಹುಷಾರ್!” ಎಂದು ಎಚ್ಚರಿಸಿ ಟೈಪಿಸಿದ.
ನಂದಿನಿ ಪ್ರತಿಭಟಿಸಿದ್ದರಿಂದಲೋ ಏನೋ ಅವಳ ಉಸಾಬರಿಗೆ ಯಾರೂ ಬಂದಿರಲಿಲ್ಲ.ಆದರೆ ಅಲ್ಲೊಬ್ಬ ಸ್ವಾಮಿನಿ ಇವಳ ಚಲನ-ವಲನ ಗಮನಿಸುತ್ತಲೇ ಇದ್ದಳು. ನಾವು ಹಾಳಾಗಿದ್ದೇವೆ ಈ ಹುಡುಗಿ ಇನ್ನೂ ಸಣ್ಣದಿದೆ,ಕಲಿಯೋ ವಯಸ್ಸು ಎಂದು ಸಹಾಯ ಮಾಡಲು ಮುಂದಾದಳು. ಅವಳು ತನ್ನ ಸ್ವಾಮಿನಿ ಡ್ರೆಸ್ ಕೊಟ್ಟು ಇಲ್ಲಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದಳು. ಅದೆಷ್ಟು ಅಮಾಯಕರು ಇಲ್ಲಿ ಸಿಲುಕಿದ್ದಾರೋ ಎಂದು ಮರುಗಿದಳು. ಶೌಚಾಲಯಕ್ಕೆ ಹೋಗುವಂತೆ ನಟಿಸಿ ಹಿಂದಿನ ದ್ವಾರದ ಮೂಲಕ ಹೊರಬಿದ್ದಳು. ಅಲ್ಲಿಯ ಬೀದಿ ಕಂಬಗಳಿಗೆ ಒಂದೂ ಸಹ ಲೈಟು ಇರಲಿಲ್ಲ. ಯಾವ ದಾರಿಯೂ ಗೊತ್ತಿಲ್ಲ. ಮತ್ತೇ ರಸೂಲ ಕಾಕಾನಿಗೆ ಟೈಪಿಸಿದಳು. ‘ನಾನು ಹಿಂದಿನ ಬಾಗಿಲಿನಿಂದ ಹೊರಬಂದಿರುವುದಾಗಿ’ ಎಂದು. ರಸೂಲ್ ಅಷ್ಟೇ ಚುರುಕಾಗಿ ರಿಪ್ಲೈ ಮಾಡಿದ್ದ. ಹಾಗೆ ಮುಂದೆ ಬರುವಂತೆ ಹೇಳಿ ತನ್ನ ಟಾರ್ಚನ್ನೇ ಆನ್ ಮಾಡಿ ಅವಳಿಗೆ ದಾರಿ ತೋರಿಸಿದ. ನಾಯಿಗಳು ಬೊಗಳುತಿದ್ದವು. ಸ್ಲಂ ದಲ್ಲಿ ಬೆಳೆದ ಹುಡುಗಿಯಾದ್ದರಿಂದ ನಾಯಿಗಳನ್ನು ಪಳಗಿಸುವುದು ಕಷ್ಟವಾಗಲಿಲ್ಲ. ರಸೂಲನು ತನ್ನ ಮನೆಯತ್ತ ನಡೆದನು. ಆತನ ಮನೆಯೂ ಸಹ ಊರ ಹೊರಗೇ ಇತ್ತು. ಆ ಮನೆಯಲ್ಲಿ ಯಾರುನೂ ಇರಲಿಲ್ಲ. ಮತ್ತೇ ಗಾಬರಿಯಾದಳು. ರಸೂಲನೇ ‘ಬೇಟಿ ಗಾಬರಿ ಆಗಬೇಡ. ಮೊದಲು ಊಟ ಮಾಡು ಎಂದು ಊಟವನ್ನು ಬಡಿಸಿದ. ಈಗ ಹಸಿವಾಗಿತ್ತು. ತಡ ರಾತ್ರಿಯಾಗಿದ್ದರೂ ಊಟ ಮಾಡಿದಳು ಜೊತೆಗೆ ತನ್ನ ಕತೆಯನ್ನೂ ಹೇಳಿದಳು. ಆಕೆ ಈಗ ಪರದೇಶಿ ಎಂಬುದು ಗೊತ್ತಾದಾಗ ಕೆಲವು ದಿನ ತನ್ನ ಮನೆಯಲ್ಲೇ ಉಳಿಯುವಂತೆ ಕೇಳಿಕೊಂಡ. ಮತ್ತೇ ಅವಳಿಗೆ ನ್ಯಾಯ ಕೊಡಿಸಲು ಏನಾದರೂ ಮಾಡುವೆ ಎಂಬುದನ್ನು ಹೇಳಿದ.
ದಿನಗಳು ಊರುಳುತಿದ್ದವು. ನಂದಿನಿಗೆ ರಸೂಲನು ತಂದೆಯ ತರಹ ಟ್ರೀಟ್ ಮಾಡುತಿದ್ದ. ನಂದಿನಿ ಆಗಿರುವ ಘಟನೆಯಿಂದ ಕುಸಿದು ಹೋಗಿದ್ದಳು. ತನ್ನ ತಿಂಗಳ ಪಿರಿಯಡ್ ನಿಂತು ಹೋಗಿರುವುದೂ ಸಹ ಏಕೆಂದು ಗೊತ್ತಾಗಿರಲಿಲ್ಲ. ತಾಯಿಯಿಲ್ಲದ ತಬ್ಬಲಿಯಾಗಿ ಬೆಳೆದ ನಂದಿನಿಗೆ ಸದಾಶಿವ ಅಪ್ಪ,ಅವ್ವನಾಗಿದ್ದರೂ ; ತಾಯಿಯ ಪಾತ್ರ ವಹಿಸುವುದು ಆಗಿರಲಿಲ್ಲ. ಅವಳು ರಸೂಲ್ ಕಾಕಾನ ಹತ್ತಿರವಿದ್ದು ನಾಲ್ಕೈದು ತಿಂಗಳು ಕಳೆದಿದ್ದವು. ಇಷ್ಟವಿಲ್ಲದ ಬೀಜ ಅಂಕುರಿಸಿದಂತೆ ಭಾಸವಾಯಿತು. ಈ ಸಂಗತಿಯನ್ನು ರಸೂಲನಿಗೆ ಹೇಳಿದಳು. ಗೊತ್ತಿರುವ ವೈದ್ಯರಿಗೆ ತೋರಿಸಿದಾಗಲೇ ತಿಳಿಯಿತು ತಾನು ಗರ್ಭಿನಿ ಎಂದು. ವೈದ್ಯೆ ಸುಶೀಲಾ ಆಕೆಯ ಮನವಿಗೆ ಸ್ಪಂದಸಿದಳು. ನೀನೂ ತಡವಾಗಿ ಹೇಳ್ತಿರೋದರಿಂದ ಅಬಾರ್ಷನ್ ಸಾಧ್ಯವಿಲ್ಲ ಎಂಬ ವಿಚಾರ ಅವಳಿಗೆ ಇನ್ನಷ್ಟು ಆಘಾತ ನೀಡಿತು. ರಸೂಲ್ ಅವಳನ್ನು ಸಂತೈಸಿದ. ಬೇಟಿ ನನಗೆ ಯಾರೂ ಇಲ್ಲ ನೀನೆ ನನ್ನ ಮಗಳು ಇಲ್ಲಿಯೇ ಇರು ಎಂದು ಭಿನ್ನವಿಸಿದ.
———-***———-
ತಿಂಗಳುಗಳು ಉರುಳಿದವು. ತುಂಬು ಗರ್ಭಿಣಿಯಾದ ನಂದಿನಿ ರಸೂಲನ ಆರೈಕೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು. ಕಷ್ಟ ಕಾರ್ಪಣ್ಯಗಳ ಸುಪರ್ದಿಯಲ್ಲಿ ನಂದಿನಿ ಅನೇಕ ನೋವು ಅನುಭವಿಸಿದಳು. ಒಲ್ಲದ ಅನುರಾಗಕ್ಕೆ ಹುಟ್ಟಿದ ಕೂಸು ಮಾಡಿರುವ ಅನ್ಯಾಯವೇನು? ಎಂದು ಯೋಚಿಸಿದಳು. ತನ್ನ ಬದುಕಿನ ಸ್ಥಿತ್ಯಂತರಗಳನ್ನೇ ಬುಡಮೇಲು ಮಾಡಿದ ವ್ಯಕ್ತಿಯ ವಿರುದ್ಧ ಹಗೆ ಸಾಧಿಸಲು ಸನ್ನದ್ಧವಾದಳು. ಮಗುವಿನ ಬಾಲ್ಯತನ ಆಕೆಯ ನೋವುಗಳನ್ನು ಮರೆಸಿತು. ಆ ಮರೆಯುವಿಕೆಯ ಗುಂಗಿನಲ್ಲೇ ಮಗ ತನ್ನೆತ್ತರಕ್ಕೆ ಬೆಳೆದು ನಿಂತಿದ್ದನು. ಮಗನಿಗೆ ತಂದೆ ಯಾರು ಎಂದು ಹೇಳಲು ಚಿಂತಿಸಿದಳು. ರಸೂಲ್ ಕಾಕಾ ಈ ಕುರಿತು ಬಹಳಷ್ಟು ಸಲಹೆ ನೀಡಿದ್ದ. ಮಗನಿಗೆ ರಾಯಣ್ಣ ಅಂತಾ ನಾಮಕರಣ ಆಗಿತ್ತು. ಮಗನಿಗೆ ತಂದೆಯ ಹೆಸರನ್ನು ಬಸವರಾಜೇಗೌಡ ಎಂದೇ ಹೇಳಿದ್ದಳು. ಆದರೆ ಆತ ಯಾರು ಎಲ್ಲಿದ್ದಾನೆ ಎಂಬುದು ರಹಸ್ಯವಾಗಿಟ್ಟಳು. ಕಾಲ ಉರುಳುತಿತ್ತು, ಮಗ ದೊಡ್ಡವನಾಗುತಿದ್ದಂತೆ ರಸೂಲ ಪ್ಲಾನ್ ವೊಂದನ್ನು ರೂಪಿಸಿದ್ದನು. ನಂದಿನಿಗೆ ಮುರಗಾಲೆಪ್ಪನ ಪರಿಚಯ ಮಾಡಿಸಿದ್ದನು. ಐವತ್ತೈದು ವರ್ಷ ದಾಟಿದ್ದ ಮುರಗಾಲೆಪ್ಪ ರಸೂಲ್ ಹೇಳಿದಂತೆ ನಂದಿನಿಯನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಿದ. ತಂದೆಯ ವಯಸ್ಸಾಗಿದ್ದರೂ ಸಣ್ಣ ವಯಸ್ಸಿನ ಹುಡುಗಿ. ಒಂದು ಹಟ ಸಾಧಿಸಲು ಹೆಸರಿಗೆ ಹೆಂಡತಿಯಾದಳು. ಈಗವಳು ನಂದಿನಿಯಲ್ಲ ಪಾರ್ವತಿ. ಪಾರ್ವತಿ ಈಗ ಕಪ್ಪು ವರ್ಣದ ಹೆಣ್ಣಾದಳು. ಗಾಡಿದಡಿ ಸೀರೆ ಉಟ್ಟಳು. ಹಣೆ ತುಂಬ ಕುಂಕುಮ ಇಟ್ಟಳು. ಕಾಲೊಂದು ಎಳೆಯುವ ತರಹ ರೂಢಿ ಮಾಡಿಕೊಂಡಳು. ಮುರಗಾಲೆಪ್ಪನ ಕಾಲ್ಪನಿಕ ಹೆಂಡತಿಯಾಗಿ ರಾಜವಾಡೆಗೆ ಬಂದಳು.
ರಾಜವಾಡೆಯಲ್ಲಿ ಮುರಗಾಲೆಪ್ಪ ಮದುವೆ ಆಗಿರುವ ಸುದ್ದಿ ಊರ ತುಂಬ ಹರಡಿತು. ಮದುವೆಯಾದ ಹೊಸತರಲ್ಲೇ ಟೀ ಅಂಗಡಿ, ಹೊಟೇಲ್ ಆಗಿ ಮಾರ್ಪಟ್ಟಿತ್ತು. ಮೂರು ಗಾಲಿ ಮೇಲೆ ತಿರುಗಾಡುವ ಕಾಲಿಲ್ಲದವನಿಗೆ, ಈ ವಯಸ್ಸಿನಲ್ಲಿ ಮದುವೆ ಬೇಕಿತ್ತಾ ಎಂದು ಮಾತನಾಡಿದರು. ಗಾಡಿ ದಡಿಯ ಸೀರೆ ಅವಳ ವಯಸ್ಸನ್ನು ಮುಚ್ಚಿತ್ತು. ಸೆರಗು ಎದೆಯ ಮೇಲೆ ನಿಲ್ಲುತ್ತಿರಲಿಲ್ಲ. ಹಣೆಯ ಮೇಲಿನ ದುಂಡನೆಯ ದೊಡ್ಡ ಕುಂಕುಮದ ಬೊಟ್ಟು ಅವಳ ಗೌರವ ಹೆಚ್ಚಿಸಿತ್ತು. ಅವಳ ಮಾತುಗಳು ಎಲ್ಲರನ್ನೂ ಆಕರ್ಷಿಸುತಿದ್ದವು. ಪಾರ್ವತಿಯನ್ನು ನೋಡಲೆಂದೇ ಬರುವ ಗಿರಾಕಿಗಳು ಅಧಿಕವಾಗಿದ್ದರು. ಅವಳು ಮಾಡುವ ತಿಂಡಿಗಳು ಊರ ಮಂದಿಯನ್ನು ಆಕರ್ಷಿಸಿತ್ತು. ಊರಿಗೆ ಹೆಚ್ಚಾದ ಮಂದಿಯಲ್ಲಾ ಖಾಯಂ ಗಿರಾಕಿಗಳಾಗಿದ್ದರು. ಕೆಲವೇ ದಿನಗಳಲ್ಲಿ ಮುರಗಾಲೆಪ್ಪನ ಅಂಗಡಿ ಹೆಸರಾಯಿತು. ಅಲ್ಲಿಯ ತಿಂಡಿ,ಊಟ,ಸಂಜೆಯ ಫರಾಳ ಊರ ಮಂದಿಗೆ,ಹೋಗಿ ಬರುವ ಪ್ರಯಾಣಿಕರಿಗೆಲ್ಲ ಹಿಡಿಸಿತ್ತು.ಆ ಹೊಟೇಲ್ ಒಂದು ತರಹ ಬಸ್ಟಾಂಡ್ ಆದಂಗ ಆಗಿತ್ತು.
ರಿಟೈರ್ ಶಂಕರ ಮಾಸ್ತರ ಬಂದ ಕುಂತ್ರ ಆತು ಅಂಗಡಿ ತುಂಬಿದಂಗ ಆಗತಿತ್ತು. ಮಲ್ಲನಗೌಡ್ರು, ಓಸಿ ಬರಿಯೋ ರಾಜೇಶಪ್ಪ, ಹನುಮ, ಕಾಡು ಕಲ್ಲಪ್ಪ ಹಿಂಗ ಹತ್ತಾರು ಮಂದಿ ಮುಂಜಾನಿಂದ ಸಂಜೀತನ ಹೊಟೇಲಿನಲ್ಲಿ ಸೇರುತಿದ್ದರು. ಊರ ಉಸಾಬರಿಯೆಲ್ಲ ಮಾತುಗಳಲ್ಲಿ ಬಂದು ಹೋಗುತಿದ್ದವು. ಪಾರ್ವತಿ ಬಾಯ್ತುಂಬ ಎಲೆ ಹಾಕೊಂಡು ಪಿಚಕ್ ಪಿಚಕ್ ಎಂದು ಉಗುಳುತ್ತಾ ಒಂದೊಂದೇ ವಿಷಯವನ್ನು ಕೆದಕುತಿದ್ದಳು. ರಾಜವಾಡೆಯಲ್ಲಿ ನೀರು ಸರಿಯಾಗಿ ಬರುತ್ತಿರಲಿಲ್ಲ. ಹದಗೆಟ್ಟಿರುವ ರಸ್ತೆಗಳು, ದೀಪ ಕಾಣದ ಬೀದಿ ಲೈಟು ಕಂಬಗಳು, ಧೂಳು ತುಂಬಿದ ಕೆರೆಗಳು ಹೀಗೆ ಹತ್ತು ಹಲವಾರು ಸಮಸ್ಯೆಗಳು ಕಣ್ಣಿಗೆ ಕಾಣುವಂತಿದ್ದರೂ ಜನ ಮೂಕ ಪ್ರೇಕ್ಷಕರಾಗಿದ್ದರು. ಜನಪ್ರತಿನಿಧಿ ಬಸವರಾಜೇಗೌಡ ಅಂದರೆ ದೇವರ ಸಮಾನ ಅನ್ನುವ ಮನೋಭಾವ ಎಲ್ಲರಲ್ಲಿ ಇತ್ತು. ಹಾಡುಹಗಲೇ ನಡೆಯುವ ದಂಧೆಗಳಿಗೆ ಕಡಿವಾಣ ಇರಲಿಲ್ಲ. ಊರಲ್ಲಿ ಏನೇ ಆದರೂ ಯಾವುದು ಎಂ ಎಲ್ ಎ ಸಾಹೇಬರಿಗೆ ಸಂಬಂಧ ಇಲ್ಲ ಎನ್ನುವ ಮನೋಭಾವ ಅವರದು. ಅವನ ಮೇಲೆ ಅಷ್ಟೊಂದು ಭಕ್ತಿ ಭಾವ ಹೊಂದಿದ್ದರು. ಹೊಟೇಲಿನಲ್ಲಿ ಊರ ಉಸಾಬರಿ ಚರ್ಚೆ ಆದರೂ ಎಂ ಎಲ್ ಎ ನ ಬಗ್ಗೆ ಯಾರೂ ತುಟಿ ಪಿಟಕ್ ಅನ್ನುತಿರಲಿಲ್ಲ. ಆತ ಪ್ರತ್ಯಕ್ಷ ದೇವರಾಗಿದ್ದ. ಪಾರ್ವತಿ ತಾನೂ ಹೂಡಿರುವ ಈ ಆಟದಲ್ಲಿ ಯಶಸ್ಸು ಕಾಣುವ ದಾರಿಗಾಗಿ ಹವಣಿಸುತಿದ್ದಳು.
ಬಸವರಾಜೇಗೌಡನ ಸುತ್ತಮುತ್ತಲಿನ ಚಲನವಲನಗಳನ್ನು ಗಮನಿಸುತಿದ್ದಳು. ಆತನ ಖಾಸಾ ಸ್ನೇಹಿತರಲ್ಲಿ ಕೆಂಪಂಗಿ ಸುರೇಶ ಒಬ್ಬನಾಗಿದ್ದನು. ಯಾವಾಗಲೂ ಕೆಂಪಂಗಿ ಧರಿಸುತ್ತಿದ್ದುದರಿಂದ ಆತನಿಗೆ ಕೆಂಪಂಗಿ ಎನ್ನುವ ಹೆಸರೇ ಶಾಶ್ವತವಾಗಿ ಉಳಿದಿತ್ತು. ತನ್ನ ಹೊಟೇಲ್ ನ್ನು ದೊಡ್ಡದಾಗಿಸಲು ಪ್ಲಾನ್ ಮಾಡಿದ್ದಳು. ಬ್ಯಾಂಕ್ ಲೋನ್ ಸಲುವಾಗಿ ಎಂ ಎಲ್ ಎ ಸಿಫಾರಸ್ಸು ಬೇಕಿತ್ತು. ಆತನನ್ನು ನೇರವಾಗಿ ಯಾರೂ ಕಾಣುವಂತಿರಲಿಲ್ಲ. ಎಲ್ಲವೂ ಕೆಂಪಂಗಿ ಮೂಲಕ ನಡೆಯುತಿತ್ತು. ಒಮ್ಮೆ ಕೆಂಪಂಗಿಯನ್ನು ಕಾಣಲು ಆತನ ಕಚೇರಿಗೆ ಹೊರಟಳು. ಕಾಲೆಳೆಯುತ್ತಾ ಬಂದ ಇವಳನ್ನು ನೋಡಿ ಏನೋ ಆಕರ್ಷಿತನಾಗಿದ್ದ. ಕಪ್ಪಾಗಿದ್ದರೂ ಅವಳ ತೆಳ್ಳನೆಯ ದೇಹ ಸೌಂದರ್ಯ ಎದ್ದು ಕಾಣುತಿತ್ತು. ಜೊತೆಗೆ ಬಂದಿದ್ದ ಮುರಗಾಲೆಪ್ಪ ಪರಿಚಿತನಾಗಿದ್ದರಿಂದ ಅವನನ್ನು ನೋಡುತ್ತಲೇ ‘ಏನು ಮೂರಗಾಲಿ ಈ ಕಡೆ ಬಂದೈತಲ್ಲ ಸವಾರಿ, ಯಾರೀಕೆ ಎಂದು ಒಮ್ಮೆಲೇ ಎರಡು ಪ್ರಶ್ನೆ ಹಾಕಿದ.’ “ಬುದ್ಧಿ ಇವಳು ನನ್ನ ಹೆಂಡತಿ” ಅಂತಾ ಹೇಳುವಲ್ಲಿ ನಾಚಿಕೊಂಡ. ಅವಳನ್ನೇ ನೋಡುತ್ತಾ ‘ಏನ ಬಂದಿದ್ದು ಈ ಕಡೆ’ ಅಂದಾ. “ಅದೇ ಬುದ್ಧಿ ನಮ್ಮದು ಸಣ್ಣದೊಂದು ಹೊಟೇಲ್ ಐತೇ,ಅದೂ ಚಪ್ಪರಾ,ಮಳೆಗಾಲ್ಕ ಸೋರತೈತಿ,ಬ್ಯಾಸಗಿ ದಿವಸಕ್ಕ ಭಣ ಭಣ ಬಿಸಲ ಬಡಿತೈತಿ,ಚಳಿಗಾಲ್ಕಂತು ಬ್ಯಾಡಾ ಹೇಳೋದು ಹಂಗಾಗ್ತೈತಿ ಅಂದನು. ನೀವು ಸ್ವಲ್ಪಮನಸ್ಸು ಮಾಡಿದ್ರೆ, ಚುಲೋ ಒಂದ ಮನಿ ಕಟ್ಟಬೇಕು” ಅಂದ. ‘ಮಾಡೋಣ ಬಿಡು’ ಅನ್ನುತ್ತಾ, ಕೂಡ್ರಲು ಕುರ್ಚಿ ತೋರಿಸಿದ. ಪಾರ್ವತಿ ತನ್ನ ಕೆಂಪು ಬಾಯಿ ಅಗಲ ಮಾಡುತ್ತಾ ಕುಳಿತಳು. ಕುಡ್ರೂವಾಗ ಸೆರಗು ಜಾರೀತು, ಕೆಂಪಂಗಿ ಕೆಂಪನೆಯ ಉಂಡೆಗಳ ಮೇಲೆ ದೃಷ್ಟಿ ಹಾಯಿಸಿದ್ದ. ‘ಆಂ ಹಾಂ ನೀಂ ಕೆಲಸ ಆಯ್ತು ಬಿಡು’ ಅಂದಾ. ಪಾರ್ವತಿ ತುಪ್ಪಾ ಜಾರಿ ಬಿತ್ತು ಅಂದಳು ಮನಸ್ಸಿನಲ್ಲಿ. “ನೀವೇ ಆದಷ್ಟು ಬೇಗ ಮಾಡಿ ಅಂದಳು ನುಲಿಯುತ್ತ.” ಕೆಂಪಂಗಿಗೆ ಆಕೀ ಹೇಳಿದ್ದೇ ಕರೆಂಟ್ ಹೊಡೆದಂಗಾಗಿತ್ತು. ಬಟಾಬಯಲದಾಗ ಇಂತದ್ದು ಕಂಡೇ ಇಲ್ವಲ್ಲೋ ಅಂದುಕೊಂಡ.
ಕೆಂಪಂಗಿಗೆ ಮನೆಗೆ ಬರುವಂತೆ ಆಹ್ವಾನ ನೀಡಿದ್ದಳು. ಕೆಂಪಂಗಿ ತಡಮಾಡದೇ ಆಕೆಯ ಕೆಲಸ ಗಿಟ್ಟಿಸಿದ್ದ. ಕೆಲವೇ ದಿನದಲ್ಲಿ ಹಳ್ಯಾಗ ದೊಡ್ಡ ಹೊಟೇಲ್ ಎದ್ದು ನಿಂತಿತ್ತು. ಬಟಾಬಯಲು ಮಠಕ್ಕಿಂತ ನೈಸಾಗಿ ಟ್ರೀಟ್ ಮಾಡೋ ವೇದಿಕೆ ಸಿದ್ಧ ಮಾಡಿದ್ದಳು. ಸಣ್ಣಗ ಒಂದೊಂದು ಕೆಲಸ ಆರಂಭಿಸಿದ್ದಳು. ಜನರ ಗಮನ ತನ್ನ ಮಗನತ್ತ ಸೆಳೆಯಲು ಊರಿಗೆ ಉಪಕಾರದ ಕೆಲಸ ಆರಂಭಿಸಿದಳು. ಕೆಂಪಂಗಿ ಎಲ್ಲದಕ್ಕೂ ಗೋಣು ಅಲುಗಾಡಿಸುವ ಕೋಲೆ ಬಸವನಂತಾದ. ಎಲ್ಲದಕೂ ಸಹಕಾರ ನೀಡಲು ಶುರು ಮಾಡಿದನು. ವೈಯಕ್ತಿಕ ಕೆಲಸದ ಜೊತೆಗೆ ಹಳ್ಳಿಯ ಕೆಲಸಗಳಿಗೂ ಕೈ ಹಾಕಿದಳು. ಮಗನ ಉಸ್ತುವಾರಿಯಲ್ಲಿ ರಸ್ತೆಗಳ ದುರಸ್ತಿಗಾಗಿ ವ್ಯವಹಾರ ಕುದುರಿಸುತಿದ್ದಳು. ಪಂಚಾಯ್ತಿ ಚರ್ಚೆಗಳೆಲ್ಲ ಈಕೆಯ ಅಂಗಳದಲ್ಲೇ ತೀರ್ಮಾನವಾಗುತಿದ್ದವು. ನೀರು, ಒಳಚರಂಡಿ, ಸ್ವಚ್ಛತೆ, ಶಾಲೆಗಳು ಮತ್ತು ಅವುಗಳ ಅಭಿವೃದ್ಧಿ ಹೀಗೆ ಊರಲ್ಲಿ ಏನೇ ಆಗಬೇಕಿದ್ದರೂ ಇವಳ ಶಿಫಾರಸ್ಸು ಇರುತಿತ್ತು. ಇಡೀ ಅಧಿಕಾರಿ ವರ್ಗವೇ ಇವಳ ಆಧೀನದಲ್ಲಿರುವಂತೆ ನೋಡಿಕೊಂಡಳು. ಕೆಂಪಂಗಿ ಆಫೀಸನ್ನೇ ಹೊಟೇಲಿಗೆ ಸಿಪ್ಟ ಮಾಡಿದ್ದನು. ಜನಸಾಮಾನ್ಯರ ದಿನಸಿ ಸರಿಯಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಕಟಿಬಂಧ ಹಾಕಿದ್ದಳು. ಇದೆಲ್ಲವನ್ನೂ ಕೆಂಪಂಗಿಯಂತಹ ಎಂ ಎಲ್ ಎ ಗಳ ಚೇಲಾಗಳಿಂದಲೇ ಮಾಡಿಸುತ್ತಿದ್ದಳು.
ಎಲ್ಲಾ ಇಲಾಖೆಗಳ ಸೇತುವೆಯಾದಳು ಪಾರ್ವತಿ. ಬಸವರಾಜೇಗೌಡ ಕೆಣಕಿದ ಸೆರಗಿನ ಕೆಂಡ ಇಂದು ಆತನಿಗೆ ಕುಣಿಕೆಯಾಗಿ ನೇತಾಡುತ್ತಿದೆಯೆಂದು ಗಮನಕ್ಕೆ ಬರಲೇ ಇಲ್ಲ. ರಾಯಣ್ಣ ಪಾರ್ವತಿಗೆ ಮಗನಾಗಿದ್ದರೂ ಆಕೆಯ ಸೇವಕನಂತೆ ಇದ್ದು ರಕ್ಷಕನಾಗಿದ್ದನು. ಬಸವರಾಜೇಗೌಡನಿಂದ ವಂಚನೆಗೆ ಒಳಗಾದ ಎಲ್ಲಾ ಹೆಣ್ಣುಗಳು ಇಲ್ಲೇ ಸೇರುವಂತೆ ರಾಯ ಗಮನ ಹರಿಸಿದ್ದ. ಕೆಂಪಂಗಿ ಹತ್ತಿರ ಬರುವ ಎಲ್ಲ ಇಲಾಖೆಗಳು ಪಾರ್ವತಿಯೆಂಬ ಹೊಟೇಲ್ ಸೆರಗಿನ ಕೆಂಡದ ಮೇಲೆನೇ ಹಾಯುತಿದ್ದರು. ವ್ಯವಹಾರ ಕುದುರಿಸಲು ಪಾರ್ವತಿಯೇ ಕುಳಿತುಕೊಳ್ಳುತಿದ್ದಳು. ಬಾಯಲ್ಲಿ ಎಲೆ ಅಡಿಕೆ ಹಾಕಿದ್ದಾಳಂದರೆ ಮುಗೀತು ಯಾವುದೋ ವ್ಯವಹಾರ ಕುದುರುತ್ತಿದೆಯೆಂದು ಅರ್ಥವಾಗುತಿತ್ತು. ಹಳ್ಳಿ ರಾಜಕೀಯವಲ್ಲದೇ ರಾಜ್ಯ,ದೇಶದ ರಾಜಕೀಯಕ್ಕೂ ಕೈ ಹಾಕುವ ಮಟ್ಟಕ್ಕೆ ಬೆಳೆದು ನಿಂತಳು. ಮಂತ್ರಿಗಳ ಸಖ್ಯ ದೊರೆಯುವಂತೆ ಕೆಂಪಂಗಿಯಂತವರನ್ನು, ಅಧಿಕಾರಿಗಳನ್ನು ಮೇಲಾಗಿ ಎಂ ಎಲ್ ಎ ಬಸವರಾಜೇಗೌಡನನ್ನು ಮೆಟ್ಟಿಲನ್ನಾಗಿ ಮಾಡಿಕೊಂಡಳು. ಅದಕ್ಕಾಗಿ ಆಕೆ ಮಾಡಿದ್ದು ಒಂದೇ ಪಾತ್ರ. ಮಹಾಭಾರತದಲ್ಲಿ ಶಕುನಿ ತನಗಾದ ಅವಮಾನಕ್ಕೆ ಪ್ರತಿಕಾರ ತೆಗೆದುಕೋಳ್ಳುವ ತಂತ್ರ. ಮಂತ್ರಿಗಳಿಂದ ಮಂತ್ರಿಗಳಿಗೆ ಕೊಂಡಿ ಬೆಸೆದಳು, ತನ್ನ ಬೇಳೆ ಬೇಯಿಸಿಕೊಂಡಳು. ಆಗದಿದ್ದಾಗ ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟಿದಳು. ಹೆಜ್ಜೆ ಹೆಜ್ಜೆಗೂ ಸೆರಗಿನ ಕೆಂಡ ಧೂಳೆಬ್ಬಿಸುತಿತ್ತು. ತನ್ನನ್ನು ಅನಾಥಳನ್ನಾಗಿ ಮಾಡಿದ ವ್ಯವಸ್ಥೆ, ಅನಾಥೆಯ ಕನಸು ಅರಳುವ ಮುನ್ನ ಕಮರುವಂತೆ ಮಾಡಿದ ಕಟುಕರ ಕರಾಳ ದಿನಗಳು ಎಚ್ಚರಿಸಿ ದಾರಿ ತೋರಿಸುತಿದ್ದವು.
ಇಡೀ ವ್ಯವಸ್ಥೆ ಮಧ್ಯವರ್ತಿಗಳಿಂದ ತುಂಬಿ ತುಳುಕಿತ್ತು. ಅತಂತ್ರ ಟೇಬಲ್ ಕುರ್ಚಿಗಳು, ಲಂಚಗುಳಿತನ ವ್ಯವಸ್ಥೆಯ ಅಡಿಯಲ್ಲಿ ಸಿಲುಕಿತ್ತು. ಆರ್ಥಿಕ ಪರಿಸ್ಥಿತಿಯನ್ನು ಕುಗ್ಗಿಸಿ ಕೇವಲ ಶ್ರೀಮಂತರೇ ಶ್ರೀಮಂತರಾಗುತ್ತಿರುವುದು. ಶ್ರೀಮಂತನಾದವನೇ ಹಣ ಬಲದಿಂದ ವ್ಯವಸ್ಥೆಯನ್ನು ಆಳುತ್ತಿರುವುದು, ಓಟ್ ಬ್ಯಾಂಕ್ ನ್ನು ಅದೇ ಹಣದಿಂದ ಕೊಳ್ಳೆ ಹೊಡೆಯುತ್ತಿರುವುದನ್ನು ಗಮನಿಸಿದ್ದಳು. ಹಣ,ಅಧಿಕಾರ ಒಬ್ಬನ ಕೈಲಿ ಇದ್ದಾಗ ದುರ್ಬಲರು ಮತ್ತೇ ಮತ್ತೇ ಸಾಯುತ್ತಾರೆ. ಇದಕ್ಕಾಗಿ ನನ್ನಂತಹ ಅಮಾಯಕರು ಅದೆಷ್ಟು ಜನಾ ಇದ್ದಾರೋ ಗೊತ್ತಿಲ್ಲ. ಸಾಮಾನ್ಯ ವರ್ಗ ಮತ್ತು ವ್ಯವಸ್ಥೆಯ ಮಧ್ಯೆ ಅದೆಂತಂತ ಕುಂಟಲಗಿತ್ತಿಯರು ದೇಶ ಆಳ್ತಿದ್ದಾರೆ. ಅನ್ನ ಹಾಕುವ ರೈತನ ಅನ್ನದ ಉಸಿರು, ದೇಶ ಕಾಯುವ ನಿಷ್ಠಾವಂತ ಸೈನಿಕನ ಶ್ರದ್ಧೆ ಮಣ್ಣು ಪಾಲಾಗಿ ಮತ್ತೇ ಪರಕೀಯರು ನಮ್ಮನ್ನು ಆಳಿದರೂ ಅಚ್ಚರಿಯ ಸಂಗತಿಯೇನೂ ಇಲ್ಲ ಎಂಬುದನ್ನು ರಾಯಣ್ಣನಿಗೆ ಬೋಧಿಸಿದಳು.
ಬಸವರಾಜೇಗೌಡ ಪಾರ್ವತಿಗೆ ಮುಖಾ ಮುಖಿ ಆಗುವ ಕಾಲ ಸನ್ನಿಹಿತವಾಗಿತ್ತು. ಚುನಾವಣೆಯ ಕಾಲಕ್ಕೆ ಪ್ರಜೆಗಳು ಪ್ರಭುಗಳಾಗುತ್ತಾರೆ. ನಾಯಕರೆಲ್ಲ ಭಿಕ್ಷುಕರಾಗುತ್ತಾರೆ. ಹಳ್ಳಿನೇ ಸ್ವರ್ಗದ ಬಾಗಿಲು. ಕೆಂಪಂಗಿಯ ಮೂಲಕ ಪಾರ್ವತಿಯನ್ನು ಸಂಧಿಸಿದ. ತಾನು ಮತ್ತೇ ಎಂ ಎಲ್ ಎ ಆಗಲು ಪಾರ್ವತಿಯ ಕೈ ಚಾಚಿದನು. ತನ್ನ ಕಾಲು ಕೆಳಗೆ ನಿಂತು ಬೇಡುವಾಗ ಪಾರ್ವತಿಯ ಅಟ್ಟಹಾಸದ ನಗು ಕಟ್ಟೆಯೊಡೆದಿತ್ತು. ಸೆರಗಿನ ಕೆಂಡ ಧಗಧಗಿಸಿ ಉರಿಯುತಿತ್ತು. ಆ ಉರಿಯ ಕೆನ್ನಾಲಿಗೆಯಲಿ ನಂದಿನಿಯ ಸ್ವರೂಪ ಬಯಲಾಗಿತ್ತು. ತಪ್ಪುಗಳು ಅರಿವಾದಾಗ ಎಲ್ಲ ಮೂಲಗಳು ಕೈ ಚೆಲ್ಲಿ ಕುಳಿತಿದ್ದವು. ಕುಂಟಲಗಿತ್ತಿಯ ಸೆರಗು ಬಸವರಾಜೇಗೌಡನ ಟಿಕೇಟ್ ತಪ್ಪಿಸಿತ್ತು. ಪಾರ್ವತಿಯ ಮಗ ರಾಯಣ್ಣ ಮತ್ತೇ ಅವತರಿಸಿದ್ದ. ಹೊಸ ರೂಪದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿ ಯುವ ಪಡೆ ಕಟ್ಟಲು ಹಸಿರು ನಿಶಾನೆ ತೋರಿಸಲು ಜನರ ಆಶೀರ್ವಾದದ ಬಲ ಸಿಕ್ಕಾಗಿತ್ತು. ಅಧಿಕಾರ ಪಡೆದು ಭರತ ಮಾತೆಯ ಸೇವೆಗೈಯಲು ಹೆಜ್ಜೆ ಇಟ್ಟಿದ್ದ ರಾಯಣ್ಣ. ಸೆರಗಿನ ಕೆಂಡದ ಮೇಲೆ ನಡೆದು ಬಂದಿದ್ದ ಯುವ ಪಡೆಗೆ ಮತ್ತೊಂದು ಕಡೆ ಅಪಶಕುನದ ಛಾಯೆ ಮೂಡಿದಂತಾಗಿತ್ತು. ಸೆರಗಿನ ಕೆಂಡದಲ್ಲಿ ಸೋತು ಅರೆ ಬೆಂದ ವ್ಯಾಘ್ರ ಮುಖಗಳು ಸೋಲಿಗೆ ಪ್ರತಿಕಾರವಾಗಿ ಪಾರ್ವತಿಯ ಹೊಟ್ಟೆಯನ್ನು ಬಗೆದಿದ್ದವು.
ಶ್ರೀಧರ ಗಸ್ತಿ



