ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸ್ನೇಹವೆಂದರೆ ಜೊತೆಯಲ್ಲಿ ನಡೆಯುವುದಲ್ಲ,
ಜೊತೆಯಿಲ್ಲದಾಗಲೂ ಜೊತೆಗಿರುವ ಭಾವ;
ಮಾತು ಮೌನವಾದ ತುಟಿಯಂಚಲಿ,
ಮಾತಾಗುವ ಮನಸ್ಸನ್ನು ಅರಿಯುವ ಜೀವ.

ಸ್ನೇಹವೆಂದರೆ ಕೈ ಹಿಡಿದ ನೆರಳಲ್ಲ,
ಕತ್ತಲ ದಾರಿಯಲ್ಲಿ ಬೆಳಗುವ ದೀಪ;
ಬಿದ್ದಾಗ ಎತ್ತುವ ಕೈ ಮಾತ್ರವಲ್ಲ,
ಬೀಳುವ ಮುನ್ನವೇ ಹಿಡಿಯುವ ಹೃದಯದ ರೂಪ.

ಕಾಲವೆಂಬ ಹೊಳೆಯಲ್ಲಿ ದಡಗಳು ಬದಲಾಗಬಹುದು,
ಆದರೆ ಮನಸ್ಸೆಂಬ ನದಿ ಎಂದೂ ಬತ್ತಬಾರದು;
ದೂರದ ದಿಕ್ಕುಗಳು ಕೈಬೀಸಿ ಕರೆದರೂ,
ನೆನಪಿನ ದಾರಿ ಎಂದಿಗೂ ತಪ್ಪಬಾರದು.

ನಗುವಿನ ಹೊತ್ತಿಗೆ ನೂರು ಜನ ಜೊತೆಯಾಗುವರು,
ಅಳುವಿನ ಹೊತ್ತಿಗೆ ಉಳಿದವನೇ ನಿಜವಾದ ಗೆಳೆಯ;
ಜಗವೇ ಬೆನ್ನು ತಿರುಗಿಸಿದ ಕ್ಷಣದಲ್ಲಿ,
‘ನಾನಿದ್ದೇನೆ ಕಣೋ’ ಎನ್ನುವುದೇ ನಿಜವಾದ ಸ್ನೇಹ.

ಸ್ನೇಹಕ್ಕೆ ಬಂಧನವಿಲ್ಲ, ಬೆಸುಗೆ ಮಾತ್ರವಿದೆ,
ಸ್ವಾರ್ಥವಿಲ್ಲ, ಸಹೃದಯದ ಸಂಬಂಧವಿದೆ;
ಪಡೆದುಕೊಳ್ಳುವುದರಲ್ಲಿಲ್ಲ, ಕೊಡುವುದರಲ್ಲಿದೆ ಪಾವಿತ್ರ್ಯ,
ಅದುವೇ ಬದುಕಿನ ಅರ್ಥ.

ಮನುಷ್ಯನಿಂದ ಮನುಷ್ಯನಿಗೆ ಉಳಿಯಬೇಕಾದ
ಒಂದೇ ಒಂದು ಮಹಾಮೌಲ್ಯವಿದ್ದರೆ ಅದು ಸ್ನೇಹ,
ಉಸಿರು ನಿಂತರೂ ನೆನಪಾಗಿ ಉಳಿಯುವ,
ಜೀವದ ಎಂದೂ ಅಳಿಯದ ಮಧುರ ಅಕ್ಷರವೇ ಸ್ನೇಹ.
ವನಜಾಕ್ಷಿ ಬೆಟ್ಟದಾಲೂರು

About The Author

Leave a Reply

You cannot copy content of this page

Scroll to Top