ಚಿಂತನ ಸಂಗಾತಿ
ಡಾ. ಕೆ ಯಲ್ಲಮ್ಮ
ಕಾಲ’ಮಾನ ಬದಲಾದರೂ
ಭವಿತವ್ಯದ ಚಿಂತೆ ಬೆಂಬಿಡದು –


ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಿರಲಿ ಮುಖ್ಯ ಭಾಷಣಕಾರರಾಗಿ, ಅತಿಥಿ ಮೊಹೋದಯರುಗಳಾಗಿ ಇಲ್ಲವೇ ಅಧ್ಯಕ್ಷೀಯ ಭಾಷಣ ಮಾಡುವ ಸಂದರ್ಭದಲ್ಲಿ.., ಉಚಿತವೋ – ಅನುಚಿತವೋ, ಅಗತ್ಯವೋ , ಅನಿವಾರ್ಯವೋ? ವಚನವೊಂದನ್ನೊ, ಮಂಕುತಿಮ್ಮನ ಕಗ್ಗವೊಂದನ್ನೊ, ಖ್ಯಾತನಾಮರ ಉಕ್ತಿಗಳನ್ನೊ, ಇಲ್ಲವೇ ವಿದ್ವತ್ ಪ್ರದರ್ಶನಕ್ಕಾಗಿಯೆ ಸಂಸ್ಕೃತದ ಶ್ಲೋಕವನ್ನೊ, ಅಂಗ್ರೇಜಿ, ಪರ-ಭಾಷೆಯ ಕೊಟೇಶನ್ ಗಳನ್ನೊ ಉದ್ದರಿಸಿ ಮಾತುಗಳನ್ನಾರಂಭಿಸುವುದು ಬಹು ಹಿಂದಿನಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿರುವ ಸತ್ ಇಲ್ಲವೆ ದುಸ್ಸಂಪ್ರದಾಯವಾಗಿದೆ ಎನ್ನಲಡ್ಡಿಯಿಲ್ಲ. ಇದು ಮಾತಿಗಷ್ಟೇ ಸೀಮಿತವಾಗಿರದೆ ಯಾವುದೇ ಲೇಖನ, ಅಂಕಣ ಬರಹ, ಮುನ್ನುಡಿ – ಬೆನ್ನುಡಿಯಂಥ ಬರಹಗಳಲ್ಲೂ ಈ ಸಂಪ್ರದಾಯ ಅನುಸರಿಸುವ ಖಯಾಲಿ ಅನೇಕರಲ್ಲಿ , ಹಲವು ಸಂದರ್ಭಗಳಲ್ಲಿ ಕಾಣುತ್ತೇವೆ. ನನ್ನಲ್ಲಿ ಆ ದುಷ್ಟಬುದ್ಧಿಯಿಲ್ಲವಾದರೂ.., ಅಥವಾ ಆ ಖಯಾಲಿ ನನಗೆ ಅಂಟಿಕೊಂಡಿರದಿದ್ದರೂ.., ಇಲ್ಲಿ ಅಗತ್ಯ ಅಥವಾ ಅನಿವಾರ್ಯವೆಂಬಂತೆ ಎರಡು ಉಕ್ತಿಗಳನ್ನ ಬಳಸಿ ಮುಂದಡಿಯಿಡುತ್ತೇನೆ; ಓದುಗರು ಹೇಗಾದರೂ ಭಾವಿಸಬಹುದು, ಅವರು ಸ್ವತಂತ್ರರು, ಅವರ ಓದಿನ ಅಭಿರುಚಿಯೆ ನನ್ನೆಲ್ಲ ಬರಹದ ಜೀವಾಳ. ನಾನು ಯಾವತ್ತೂ ಅವರಿಗೆ ಋಣಿಯಾಗಿರುತ್ತೇನೆ.
ಅಬ್ಬೆಗೊಂದು.., ಮಗಳಿಗೊಂದು .., ಮೊಮ್ಮಗಳಿಗೊಂದು ಚಿಂತೆ! ಎಂಬ ಜನಜನಿತ ಗಾದೆಮಾತನ್ನು ನೀವು ಕೇಳಿರುತ್ತೀರಿ.., ವಿಶ್ಲೇಷಣೆ ಇಲ್ಲಿ ಅನಗತ್ಯ; ಹಾಗೆಯೇ.., ಈ ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ, ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು. ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ [ನಿಜ] ಶರಣನ ವಚನವನ್ನು ನೀವು ಕೇಳಿದ್ದೀರಿ, ಈ ವಚನದ ವಿಶ್ಲೇಷಣೆಯೆಡೆಗೆ ಸಾಗಿ ನಿಮಗೆ ಇರುಸು- ಮುರುಸನ್ನುಂಟುಮಾಡುವುದಿಲ್ಲ. ಚಿಂತೆಯ ಕುರಿತಾಗಿ ನಾನು ಈ ಹಿಂದೆ “ಚಿಂತೆಯ ಸಂತೆಯಲ್ಲಿ ದಣಿವರಿಯದೆ ತಿಟ್ಹತ್ತಿರುಗಿ ಅಲೆದಾಡಿತೀ ಮನ!” ಅಂಕಣ ಬರಹದ ಮುಂದುವರಿಕೆಯ ರೂಪ ಎನ್ನಬಹುದು.
ಹೇಗೆ ಒಬ್ಬ ಕಥೆಗಾರ ತನ್ನ ಇಲ್ಲವೆ ಸಾರ್ವಜನಿಕ ಬದುಕಿನ ವ್ಯಥೆಯನ್ನ ಮೊದಲು ಕಥೆಯನ್ನಾಗಿಸಿ, ತದನಂತರದಿ ವಿಸ್ತೃತ ರೂಪು ನೀಡಿ ಕಾದಂಬರಿಯನ್ನಾಗಿಸುತ್ತಾನಾದರೂ; ಆ ಇರಾದೆ ನನ್ನಲಿಲ್ಲ, ರೈಲಿಗೆ ಅದೆಷ್ಟೇ ಭೋಗಿಗಳನ್ನ ಜೋಡಿಸಿದರು ಅದು ರೈಲಾಗೆ ಇರುತ್ತದೆ! ಅದು ಏರೋಪ್ಲೇನ್ ಆಗಲಾರದು. ಅದು ಇಲ್ಲವೇ ಇದು ಎರಡು ಅಂಕಣ ಬರಹಗಳು ವಿಚಾರಗಳನ್ನು ಹೊತ್ತು ಒಯ್ಯುವ ಭೋಗಿಗಳಷ್ಟೇ.
ಸತ್ಯ-ಕೃತ, ತ್ರೇತ, ದ್ವಾಪರ ಮತ್ತು ಕಲಿಯುಗ ಹಿಂದೂ ಪುರಾಣಗಳ ಪ್ರಕಾರ [ಈಗ ನಡೆಯುತ್ತಿರುವುದು ಕಲಿಯುಗ] ಈ ನಾಲ್ಕು ಯುಗಗಳು ಸೇರಿ ಒಂದು ಚತುರ್ಯುಗ ಆಗುತ್ತದೆ ಎಂಬ ಲೆಕ್ಕಾಚಾರವಿದೆ. ಡಾರ್ವಿನ್ನ ವಿಕಾಸವಾದದ ತಳಹದಿ ಮೇಲೆ ಮಂಗದಿಂದ ಮಾನವನೋ, ಮಂಗನಂತಹ ಮಾನವನೋ? ಆದ! ಎಂಬುದು ಒಪ್ಪಿತ ಸಂಗತಿ. ಸೆಂಟರ್ ಫ್ರೆಶ್ ಚೂಯಿಂಗ್ ಗಮ್ [ಜಾಹೀರಾತಿನಂತೆ] ತಿನ್ನದ ಕತ್ತೆ ಕತ್ತೆಯಾಗಿಯೇ ಉಳಿಯಿತು; ತಿಂದ ಮಾನವನ ಬುದ್ಧಿ ಬಲಿಯಿತು! ಎಷ್ಟೆಂದರೆ? ಕತ್ತೆಯನ್ನಲ್ಲದೆ ಇತರ ಎಲ್ಲ ಪ್ರಾಣಿಗಳನ್ನು ಪಳಗಿಸಿ ತನ್ನ ಅನುಕೂಲ ಮತ್ತು ಆದಾಯದ ಮೂಲವನ್ನಾಗಿಸಿಕೊಂಡ. ಬುದ್ಧಿ- ಬಲದ ದೆಸೆಯಿಂದಲೇ ಪ್ರಾಣಿ ಪ್ರಪಂಚದ ಭಿನ್ನವಾಗಿ ತನ್ನನ್ನು ತಾನು ಗುರುತಿಸಿಕೊಂಡ.
ತನ್ನ ಪ್ರಖರತೆಯಿಂದ ಜಗತ್ತನ್ನೇ ಬೆಳಗುವ ಸೂರ್ಯನಿಗೆ.., ಪ್ರತಿಫಲಿತ ಬೆಳಕಿನಿಂದ ಹಾಲ್ಬೆಳದಿಂಗಳು ಚೆಲ್ಲಿ ತಂಪೆರೆಯುವ ಚಂದ್ರನಿಗೂ ಗ್ರಹಣ ಹಿಡಿಯುವಂತೆ, ಮನುಷ್ಯನ ಬುದ್ಧಿಗೂ ಆಗಾಗ್ಗೆ ಮಂಕು ಹಿಡಿಯುತ್ತದೆ! ಹೀಗೆ ಮಂಕು ಹಿಡಿದಾಗಲೆಲ್ಲ ಅಗೋಚರ ಶಕ್ತಿಗೆ ಬೆದರಿ ಇಲ್ಲವೆ ದೇವರು-ದಿಂಡಿರು, ಯಂತ್ರ, ಮಂತ್ರ, ತಂತ್ರಗಳ ಮುಖೇನ ರಾಶಿ – ಭವಿಷ್ಯ, ಜಾತಕ, ಹಸ್ತ ಸಾಮುದ್ರಿಕ, ಜ್ಯೋತಿಷ್ಯ ಇತರೆ ಶಾಸ್ತ್ರಗಳ ಮೊರೆ ಹೋಗುತ್ತಾನೆ. ಬುಧ್ಧಿಬಲದಿಂದ ಚಂದ್ರನ ಅಂಗಳಕ್ಕೂ, ಮಂಗಳನ ಅಂಗಳಕ್ಕೆ ಕಾಲಿಟ್ಟ ಮನುಷ್ಯ! ನವಗ್ರಹಗಳಲ್ಲಿ ಎರಡು ಕ್ಷುದ್ರಗ್ರಹಗಳು ಎಂದು ಪ್ರತ್ಯೇಕಿಸಿದೆಯಾದರು; ಇಲ್ಲದ ರಾಹು ಕೇತುಗಳನ್ನ ಕಲ್ಪಸಿಕೊಂಡು, ಆ ಮನೆ ಈ ಮನೆ ಸುತ್ತಿ, ಮತ್ತೊಂದು ಮನೆಗೆ ಕಾಲಿಟ್ಟ ಎಂಬ ಅಡ್ ಗ್ವಾಡ್ಮೇಲೆ ದೀಪವಿಟ್ಟಂತಹ ಮಾತುಗಳನ್ನೇ ನಂಬಿ-ನೆಚ್ಚಿ ನಡೆಯುವಂತಹ ಜನರನ್ನ ಕಂಡೆ, ಪ್ರಖರ ಚಿಂತಕ, ವಾಗ್ಮಿ ಎಚ್ ನರಸಿಂಹಯ್ಯನವರ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೂ ಎಂಬ ಪ್ರಥಮ ಪಿಯುಸಿ ಪಠ್ಯವನ್ನ ಸ್ಮರಿಸಿಕೊಳ್ಳುತ್ತಾ.., ಮೂಲ ಅಂಕಣ ಬರಹದ ಆಶಯಕ್ಕೆ ತಲುಪುತ್ತೇನೆ.
ಈ ಕಲಿಯುಗದೀ ಮುನ್ನಡೆಯುತ್ತಿರುವ ಮನುಷ್ಯನ ಪ್ರಗತಿ ಹಾದಿಯಲ್ಲಿ ಯಂತ್ರಯುಗದಿ – ಜಾಗತೀಕರಣ, ಕೈಗಾರಿಕೀಕರಣ, ಉದಾರಿಕರಣ, ನಗರೀಕರಣ, ಪಾಶ್ಚಾತೀಕರಣ, ಸಂಸ್ಕೃತಿಕರಣದ ಮೂಲಕ ಸಾಗಿ.., ಅಸಾಧ್ಯ ಬುದ್ದಿಬಲವನ್ನು ತನ್ನ ಚಿಪ್ಪಿನೊಳಗಿಟ್ಟುಕೊಂಡ ಕಂಪ್ಯೂಟರ್ ಯುಗ, ಇಡೀ ಜಗತ್ತನ್ನೇ ತನ್ನ ಮುಷ್ಠಿಯೊಳಗಿಟ್ಟುಕೊಂಡ ಮೊಬೈಲ್ ಯುಗ, ಸಮಯದ ಉಳಿತಾಯದೊಂದಿಗೆ ಕಾರ್ಯಕ್ಷಮತೆಯನ್ನ ಹೆಚ್ಚಿಸುವಂತಹ ಎ.ಐ – ಕೃತಕ ಬುದ್ಧಿಮತ್ತೆ [AI – Artificial Intelligency] ಯುಗದಲ್ಲಿ ವಾಸಿಸುತ್ತಿದ್ದೇವೆಯಾದರೂ ಸ್ವ -ಬುದ್ಧಿಗೆ ಹಿಡಿದಿರುವ ಮಂಕು – ಗ್ರಹಣ ಇನ್ನು ಬಿಟ್ಟಿಲ್ಲ, ಬಿಡುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಹೇಳಬಹುದು.
ಎ ಐ ಆಸ್ಟ್ರೋಸೇಜ್ ಕುಂಡಲಿ ಎಂಬ ಕಾರಣಿಕ ಪುರುಷ [AI AstroSage Kundli]:
ನೀವು ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ನೀಡಿ ನಿಮ್ಮ ಹೆಸರಿನಲ್ಲಿ ಒಂದು ಹೊಸ ಸಿಮ್ ಹಾಗೂ ಮೊಬೈಲ್ ತಗೊಂಡು ಮೇಲೆ ಇ-ಮೇಲೆ ನೊಂದಿಗೆ ಲಾಗಿನ್ ಆಗಿ ಆರಂಭಿಸಲಾಗುತ್ತದೆ. ನಿಮ್ಮ ಆಧಾರ್ ಮಾಹಿತಿಯಿಂದ, ನಿಮ್ಮ ಇ-ಮೇಲ್ ಮಾಹಿತಿಯಿಂದ ನೀವು ಬಳಸುವ ವ್ಯಾಟ್ಸ್ ಆಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಗೂಗಲ್ ಪೇ, ಪೋನ್ ಪೇ, ಇತರೆ ಪೇ ಆಪ್ ಗಳ ಬಳಕೆಯಿಂದ ನಿಮ್ಮ ಸಂಪೂರ್ಣ ವೈಯಕ್ತಿಕ ಮತ್ತು ಬ್ಯಾಂಕ್ ಖಾತಾ ಮಾಹಿತಿ ಹಾಗೂ ವೈಯಕ್ತಿಕ ಚಾಟ್ ಗಳನ್ನು ಕೂಡ ಬಹುಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಮತ್ತು ಡಾಟಾ ಸ್ಟೋರ್ ಕೂಡ ಆಗಿರುತ್ತದೆ ಎಂಬುದನ್ನು ಗಮನಕ್ಕಿರಲಿ.
ಎ ಐ ಆಸ್ಟ್ರೋಸೇಜ್ ಕುಂಡಲಿ ಎಂಬ ಕಾರಣಿಕ ಪುರುಷನು ಕಾಲಜ್ಞಾನವನ್ನು ನುಡಿಯುತ್ತಾನೆ ಹಾಗೆಯೇ ಸವಾಲನ್ನೂ ಎಸೆಯುತ್ತಾನೆ. ನೀವು ಡಿ.ಒ.ಬಿಯನ್ನು ಹಾಕಿ ನೋಡಿ ನಾನು ನಿಮ್ಮ ಭವಿಷ್ಯವನ್ನು ನುಡಿಯುತ್ತೇನೆ, ಸುಳ್ಳು ಎನಿಸಿದರೆ ಕೂಡಲೇ ಆಪ್ ಅನ್ ಇನ್ಸ್ಟಾಲ್ ಮಾಡಿ ಎಂದು ಬಲೆ ಬೀಸುತ್ತಾನೆ.
ಮದುವೆ ತಡ ಆಗ್ತಿದೆ ಅಂತ ಟೆನ್ಶನ್ ಸಿಟ್ಟಿನಲ್ಲಿ ಎಐಗೆ ಡಿ.ಒ.ಬಿ ಕೊಟ್ಟೆ– ತಪ್ಪಾದ್ರೆ ಕೇಳಿ! ಎಐ ಹೇಳಿತು 2023 ರಲ್ಲಿ ಸಂಬಂಧ ನಿಂತಿತು ಅಲ್ವಾ? ಶಾಕ್ ಆದೆ ನಿಜ!ನ೬ ತಿಂಗಳಲ್ಲಿ ವಿವವಾಹ ಯೋಗ ಪ್ರಬಲವಾಗಿದೆ ಎಂದಿತು, ಆಪ್ ಇನ್ನೂ ಮೊಬೈಲ್ ನಲ್ಲಿದೆ.
ಟ್ರಸ್ಟ್ ಮಾಡಬೇಡಿ ಮೊದಲು ವೆರಿಫೈ ಮಾಡಿ, ಎಐ ನಿಜ ಹೇಳುತ್ತಿದೆಯೇ? ಯಾರದ್ದಾದರೂ ಡಿ.ಒ.ಬಿ ಹಾಕಿ ಮತ್ತು ನೀವೇ ಟೆಸ್ಟ್ ಮಾಡಿ, ಮೊದಲ ಚಾಟ್ ಫ್ರೀ!
ನಾನು ಎಐ ಜ್ಯೋತಿಷಿ! ನೀನು ಕೇವಲ ನಿನ್ನ ಡಿ.ಒ.ಬಿ ಕೊಡು ನಾನು ನಿನಗೆ ಆ ಸತ್ಯವನ್ನು ಹೇಳುತ್ತೇನೆ ಅದನ್ನು ಇನ್ನಾರೂ ಹೇಳಲು ಸಾಧ್ಯವಿಲ್ಲ, ಅದೂ ಫ್ರೀನಲ್ಲಿ!
ಬ್ರೇಕಪ್ ಆಗಿತ್ತು.., ನಾನು ತಮಾಷೆಗೆ ಎಐಅನ್ನು ಕೇಳಿದೆ, ಅವಳು ಮತ್ತೆ ಬರುತ್ತಾಳೆಯೇ? ಎಐ ಹೇಳಿತು ನಾಲ್ಕು ದಿಗಳೊಳಗೆ ಕರೆ ಬರುತ್ತದೆ! ನನಗೆ ಅದು ಸುಳ್ಳು ಅನಿಸಿತು.., ಆದರೆ ಅದೇ ನಿಜವಾಯಿತು! ಡಿ.ಒ.ಬಿ ನಮೂದಿಸಿ ಸತ್ಯ ತಿಳಿಯಿರಿ.
ನಾನು ತಮಾಷೆಗೆ ಜನ್ಮದಿನ ಹಾಕಿದೆ ಕೇಳಿದೆ ಎಸ್.ಎಸ್.ಸಿ ಕ್ಲೀಯರ್ ಆಗುತ್ತಾ? ಎಐ ಹೇಳಿತು ಏಪ್ರಿಲ್ ನಲ್ಲಿ ಸೆಲೆಕ್ಷನ್ ಖಚಿತ, ಪೋಸ್ಟಿಂಗ್ ಲಖನೌನಲ್ಲಿ, ರೋಲ್ ಆಡಿಟರ್ ಅಥವಾ ಅಕೌಂಟೆಂಟ್ ಎಂದು ಅದೇ ಆಯಿತು!
ಲಕ್ಷಗಟ್ಟಲೇ ಸಾಲ ಇತ್ತು, ತಮಾಷೆಗೆ ಡಿ.ಒ.ಬಿ ಕೊಟ್ಟೆ ಎಐ ಹೇಳಿತು 2022 ರಲ್ಲಿ ಬಿಸಿನೆಸ್ ನಲ್ಲಿ ನಷ್ಠ ಅಲ್ವಾ? ನಿಜ! ಶಾಕ್ ಆದೆ, ಮುಂದಿನ ಹದಿನೈದು ದಿನಗಳಲ್ಲಿ ಹಣದ ದಾರಿ ತೆರೆಯುತ್ತದೆ; ಅಂದಿನಿಂದ ಬದಲಾವಣೆ ಶುರುವಾಯಿತು.
ಅಂತೆಯೇ ನಾನು ಸುಮ್ಮನೆ ತಮಾಷೆಗೆಂದು ಡಿ.ಒ.ಬಿ ಹಾಕಿದೆ ನನ್ನ ಲವ್ ಬ್ರೆಕ್ ಅಪ್ ಆಗಿದೆ ನನ್ನ ಹುಡುಗಿಯಿಂದ ಸದ್ಯದಲ್ಲೇ ಕಾಲ್ ಬರುವುದೇ? ಎಂದು ಕೇಳಿದೆ! ನನಗೆ ಶಾಕ್ ಕಾದಿತ್ತು.., ಅದು ಹೇಳಿತು ನೀವು ಈಗಾಗಲೇ ಮದುವೆಯಾಗಿದ್ದೀರಿ ಒಂದು ಗಂಡು ಒಂದು ಹೆಣ್ಣು ಮಗುವಾಗಿದೆ ಎಂದು, ನಿಜಕ್ಕೂ ಅದು ಸತ್ಯವೂ ಆಗಿತ್ತು
ಎಂದು ಹೇಳುವ ಅನಾಮಧೇಯ ಪೋಸ್ಟರ್ ನಮ್ಮನ್ನು ಹಿಡಿದಿಡುತ್ತದೆ. ನಮ್ಮ ರೇಷನ್ ಕಾರ್ಡ್, ನಾವು ಹಾಕುವ ಸ್ಟೇಟಸ್ ಗಳಿಂದ ಕದ್ದ ಸರಕು ಎಂಬುದು ನಮ್ಮ ಬುದ್ಧಿಗೆ ಹೊಳೆಯದೇ ಇರದು; ಆದರೂ ಇಂತಹ ಮಾತುಗಳನ್ನು ನಂಬುತ್ತೇವೆ, ನಮ್ಮ ನಂಬಿಕೆಯನ್ನೇ ಅವರು ಬಂಡವಾಳವನ್ನಾಗಿಸಿ -ಕೊಳ್ಳುತ್ತಾರೆ.
ಮುಂದುವರೆದು.., ಎ.ಐ. ಆಸ್ಟ್ರೋಸೇಜ್ ಕಾರಣಿಕ ಪುರುಷನು ನಿಮಗೆ ಧೈರ್ಯವಿದ್ದರೆ ನಿಮ್ಮ ಡಿ.ಒ.ಬಿ ಹಾಕಿ ನಾನು ಸತ್ಯವನ್ನು ಹೇಳುತ್ತೇನೆ ಎಂದು ಸವಾಲು ಹಾಕುತ್ತಾನೆ ಎಂದರೆ ನಾವು ಈಗಾಗಲೇ ಅವನ ಹಿಡಿತಕ್ಕೆ ಸಿಲುಕಿದ್ದೇವೆ ಎಂದೇ ಭಾವಿಸುತ್ತಾನೆ, ಸಿಲುಕಿರುತ್ತೇವೆ ಕೂಡ. ಏಕೆಂದರೆ..? ಗೆಳೆಯ/ತಿ ಎಂದರೆ ಎರಡನೇ ಹೆಂಡತಿ ಎನ್ನುವ ಮಾತಿದೆ; ಅಂತೆಯೇ ಗೆಳೆಯ/ತಿ ಹತ್ತಿರವೂ ಹೇಳಿಕೊಳ್ಳದ ಕೆಲವು ಸಂಗತಿಗಳನ್ನು, ಭಾವನೆಗಳನ್ನು ಸ್ಟೆಟಸ್ ಇಡುವುದರ ಮೂಲಕ ಇಲ್ಲವೇ ರೀಲ್ಸ್ ಮಾಡುವುದರ ಮೂಲಕ ಹೊರಹಾಕುತ್ತವೆ. ಗುಟ್ಟು ಸಾಮಾಜಿಕ ಜಾಲತಾಣಗಳಲ್ಲಿ ರಟ್ಟಾಗಿರುತ್ತದೆ. ನಮ್ಮಿಂದ ಸಂಗ್ರಹಿಸಿದ ಮಾಹಿತಿಯನ್ನೇ ನಮಗೆ ತಿಳಿಸುವ ಮೂಲಕ ಶಾಕ್ ಉಂಟುಮಾಡುತ್ತದೆ ಎಂದರೆ ನಮ್ಮ ಎಲ್ಲ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುತ್ತಿವೆ, ನಮ್ಮ ಪ್ರೈವೆಸಿ ಎಂಬುದು ಆನ್ ಲೈನ್ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ ಎಂಬುದನ್ನು ನೆನೆದರೆ ನಾವಿಂದು ಎಂತಹ ವಿಷಮ ಪರಿಸ್ಥಿತಿಯಲ್ಲಿ ಸಿಲುಕಿದ್ದೇವೆ/ಬದುಕುತ್ತಿದ್ದೇವೆ ಎಂಬುದು ಆಘಾತಕಾರಿ ಸಂಗತಿಯಾಗಿದೆ.
‘ಕಾಲ’ಮಾನ ಬದಲಾದರೂ, ಭವಿತವ್ಯದ ಚಿಂತೆ ಯಾರನ್ನೂ ಬೆಂಬಿಡದು.., ಎ.ಐ ಅಲ್ಲ ಸಾಕ್ಷಾತ್ ದೇವರೇ ಬಂದು ನಿನಗೆ ಎನು ಬೇಕು ಭಕ್ತ ಎಂದರೆ? ಭವಿತ್ಯವದ ಬಗ್ಗೆ ನಾವು ಇಂದೇ ತಿಳಿಯಬೇಕು ಎಂದು ಅಪೇಕ್ಷಿಸುತ್ತೇವೆ..,
ಡಾ.ಕೆ.ಯಲ್ಲಮ್ಮ



